ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕಲ್‌ಮಂತ್ರ: ಚೀನಾ-ಟಿಬೆಟ್‌ ಸಂಘರ್ಷದ ಸಾಂಸ್ಕೃತಿಕ ಕನ್ನಡಿ

By Staff
|
Google Oneindia Kannada News
  • ರಘುನಾಥ ಚ.ಹ.
‘ನಮ್ಮ ದೇವರೆಲ್ಲ ಪೂರ್ವಾಭಿಮುಖ. ನಾವು ಮಾತ್ರ ಪಶ್ಚಿಮಾಭಿಮುಖ’. ಹರಿಚರಿತೆಯ ಕವಿ ಪು.ತಿ.ನರಸಿಂಹಾಚಾರ್‌ ಅವರ ಈ ಹೇಳಿಕೆ ಮಾತಾದದ್ದು ಬೇಳೂರು ಸುದರ್ಶನ ಅವರ ‘ಸ್ಕಲ್‌ಮಂತ್ರ’ ಕೃತಿ ಅನಾವರಣ ಸಂದರ್ಭದಲ್ಲಿ . ಕಾರ್ಯಕ್ರಮ ನಡೆದದ್ದು ನವಂಬರ್‌ 26ರ ಗುರುವಾರ, ಬೆಂಗಳೂರಿನ ಕೆಂಗಲ್‌ ಹನುಮಂತಪ್ಪ ರಸ್ತೆಯ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಲದ ಸಭಾಂಗಣದಲ್ಲಿ .

ಜೋಸೆಫ್‌ ಎಲಿಯಟ್‌ ಪ್ಯಾಟಿಸನ್‌ರ ‘ಸ್ಕಲ್‌ಮಂತ್ರ’ ಕನ್ನಡ ಅನುವಾದಿತ ಕೃತಿ (ಪ್ರಕಟಣೆ : ಅಂಕಿತ ಪುಸ್ತಕ) ಅನಾವರಣ ಸಮಾರಂಭ ಕೇವಲ ಕೃತಿ/ಲೇಖಕರ ಪರಿಚಯಕ್ಕೆ ಮಾತ್ರ ಸೀಮಿತವಾಗದೆ- ಪೂರ್ವದ ಬೇರುಗಳನ್ನು ಕಳಕೊಳ್ಳಲೂ ಸಾಧ್ಯವಾಗದ, ಪಶ್ಚಿಮದ ಆಕರ್ಷಣೆಯಿಂದ ಪಾರಾಗಲೂ ಸಾಧ್ಯವಾಗದ ವರ್ತಮಾನದ ತವಕ ತಲ್ಲಣಗಳ ಸ್ಪಂದನವಾಗಿ ಬದಲಾದದ್ದು ಕಾರ್ಯಕ್ರಮದ ವೈಶಿಷ್ಟ್ಯ. ಹಾಗೆ ನೋಡಿದರೆ ‘ಸ್ಕಲ್‌ಮಂತ್ರ’ ಪುಸ್ತಕದ ಒಳದನಿಯೂ ಸಂಸ್ಕೃತಿಗಳ ಸಂಘರ್ಷದ ಕುರಿತಾದದ್ದೇ.

Cover page of Skullmantraಪುಸ್ತಕ ಅನಾವರಣಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಚೀನಾ, ಟಿಬೆಟ್‌ ಹಾಗೂ ಭಾರತೀಯರ ನಡುವಣ ಸಂಬಂಧಗಳ ಸೂಕ್ಷ್ಮ ವ್ಯಾಖ್ಯಾನಕ್ಕಿಳಿದರು. ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವಗಳೆನ್ನುವ ಭೌಗೋಳಿಕ ಪರಿಕಲ್ಪನೆಯ ಮಾದರಿಯಲ್ಲಿ , ಪಶ್ಚಿಮ ಧ್ರುವ ಹಾಗೂ ಪೂರ್ವ ಧ್ರುವ ಎನ್ನುವ ಸಾಂಸ್ಕೃತಿಕ ಪರಿಕಲ್ಪನೆಯನ್ನು ಮುಂದಿಟ್ಟ ನಾಗೇಶ ಹೆಗಡೆ- ಪಶ್ಚಿಮದ ನಶೆಯಲ್ಲಿರುವ ನಾವು ಪೂರ್ವವನ್ನು ಸಂಪೂರ್ಣವಾಗಿ ಮರೆಯುತ್ತಿದ್ದೇವೆ ಎಂದರು.

ಚೀನಾ ನಾವು ತಿಳಿದಷ್ಟು ಬಂಧಿಯಾದ ದೇಶವಲ್ಲ . ಸಾಮಾನ್ಯವಾಗಿ ವಿಜ್ಞಾನ ವಿಕಾಸವಾದೆಡೆ ವೈವಿಧ್ಯತೆ ನಾಶವಾಗುತ್ತದೆ. ಆದರೆ ಏಕರೂಪದ ಭಾಷೆ, ಲಿಪಿ, ಚಹರೆಗಳನ್ನು ಹೊಂದಿರುವ ಚೀನಾ ವೈಜ್ಞಾನಿಕವಾಗಿಯೂ ಅಪಾರ ಪ್ರಗತಿ ಸಾಧಿಸಿರುವ ದೇಶ. ವಿಶ್ವದ ಇತರೆಡೆಗಳಲ್ಲಿ ಮಾನವನ ನಾಗರಿಕತೆ ಶಿಲಾಯುಗದಲ್ಲಿರುವಾಗಲೇ, ಚೀನಾದಲ್ಲಿ ವಿಜ್ಞಾನದ ಪುಟಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದ್ದವು. ಪ್ರಸ್ತುತ ಕೂಡ ವಿಶ್ವದ ಬಲಾಢ್ಯ ಶಕ್ತಿಯಾಗಿ ಚೀನಾ ಹೊರಹೊಮ್ಮುತ್ತಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಚೀನಾ ಮುಂಚೂಣಿಯಲ್ಲಿದೆ. ವಾಸ್ತವ ಹೀಗಿದ್ದೂ ನಾವೆಲ್ಲಾ ನೆರೆಯ ಚೀನಾದ ಬಗ್ಗೆ ಅಜ್ಞಾನಿಗಳಾಗಿದ್ದೇವೆ ಎಂದು ನಾಗೇಶ ಹೆಗಡೆ ಅಭಿಪ್ರಾಯಪಟ್ಟರು.

Belur Sudarshanಕರ್ನಾಟಕದಲ್ಲಿ ಸುಮಾರು 40 ಸಾವಿರ ಮಂದಿ ಟಿಬೆಟ್ಟಿಯನ್ನರಿದ್ದಾರೆ. ಆದರೆ ಅವರ ಹಾಗೂ ನಮ್ಮ ನಡುವಿನ ಅಂತರ ಹಿಮಾಲಯದಷ್ಟು . ಜಾಗತೀಕರಣದ ಸಂದರ್ಭದಲ್ಲಿ ವಾಣಿಜ್ಯವಾಗಿ ಸ್ವಲ್ಪಮಟ್ಟಿನ ಸಂಬಂಧ ಇತ್ತೀಚಿನ ದಿನಗಳಲ್ಲಿ ಕುದುರಿದೆ. ಆದರೆ, ಚೀನಾ-ಟಿಬೆಟ್ಟಿನ ಸಾಂಸ್ಕೃತಿಕ ಎಳೆಗಳನ್ನು ಅರ್ಥ ಮಾಡಿಕೊಳ್ಳುವ ಯಾವುದೇ ಪ್ರಯತ್ನಗಳು ಗಣನೀಯ ಪ್ರಮಾಣದಲ್ಲಿ ನಡೆದಿಲ್ಲ . ಇಂಥದೊಂದು ಸಾಂಸ್ಕೃತಿಕ ವಿನಿಮಯದ ಹೆಚ್ಚುಗಾರಿಕೆ ‘ಸ್ಕಲ್‌ಮಂತ್ರ’ಕ್ಕಿದೆ. ಟಿಬೆಟಿಯನ್‌-ಚೈನಿ ಹಾಗೂ ಮಂಗೋಲಿಯನ್‌ ಜನಾಂಗದ ಈ ಕಾದಂಬರಿ, ಪತ್ತೇದಾರಿಕೆಯ ನೆಲೆಗೆ ಸೀಮಿತವಾಗದೆ ಸಾಂಸ್ಕೃತಿಕ ಒಳಸುಳಿಗಳ ದಾಖಲಾತಿಯೂ ಆಗಿದೆ ಎಂದು ನಾಗೇಶ ಹೆಗಡೆ ಬಣ್ಣಿಸಿದರು.

‘ಊರಿಗೊಂದು ದಾರಿಯಾದರೆ ಪೋರನಿಗೊಂದು ದಾರಿ’ ಎನ್ನುವ ಮಾತಿಗೆ ಅನ್ವರ್ಥವಾದ ಬೇಳೂರು ಸುದರ್ಶನ ಅನ್ವೇಷಕ ಪ್ರವೃತ್ತಿಯವರು. ಅವರ ಸಾಹಸ ಪ್ರವೃತ್ತಿಯ ಮುಂದುವರಿದ ಮಾದರಿಯಾಗಿ ‘ಸ್ಕಲ್‌ಮಂತ್ರ’ ಕನ್ನಡಕ್ಕೆ ಬಂದಿದೆ ಎಂದು ನಾಗೇಶ ಹೆಗಡೆ ಹೇಳಿದರು.

ಕನ್ನಡಕ್ಕೆ ಹಿಮಾಲಯದ ಸಾಂಸ್ಕೃತಿಕ ಪರಿಸರ

‘ಸ್ಕಲ್‌ಮಂತ್ರ’ ಕೃತಿ ಪರಿಚಯ ಮಾಡಿದ ಅಧ್ಯಾಪಕ ಡಾ.ಜಿ.ಬಿ.ಹರೀಶ್‌, ನಾಗೇಶ ಹೆಗಡೆಯವರ ಮಾತಿನ ಎಳೆಯನ್ನು ಮತ್ತಷ್ಟು ವಿಸ್ತರಿಸಿದರು. ಚೀನಾದ ಸಂಸ್ಕೃತಿಯ ಅನನ್ಯತೆ ಹಾಗೂ ವೈಜ್ಞಾನಿಕ ಪ್ರಗತಿಯನ್ನು ಮೆಚ್ಚುಗೆಯಿಂದ ನೋಡುವ ಕಾಲಕ್ಕೇ, ಟಿಬೆಟ್ಟಿನ ಮೇಲೆ ಚೀನಾ ನಡೆಸಿದ ದಬ್ಬಾಳಿಕೆ ಮಾನವ ಇತಿಹಾಸದಲ್ಲಿ ಖಂಡನೆಗೆ ಅರ್ಹವಾದುದು ಎಂದು ಹರೀಶ್‌ ಅಭಿಪ್ರಾಯಪಟ್ಟರು.

ಚೀನಾ-ಟಿಬೆಟಿಯನ್‌ ಸಂಘರ್ಷ ‘ಸ್ಕಲ್‌ಮಂತ್ರ’ದ ಬೀಜಮಂತ್ರ. ಸ್ಕಲ್‌ ಎಂದರೆ ನಿಗೂಢ, ಮಂತ್ರ ಎನ್ನುವುದು ಪ್ರತಿಭಟನೆಯ ಸಂಕೇತ ಹಾಗೂ ಅಸ್ತ್ರ . ಇಲ್ಲಿನ ಲಾಮಾಗಳ ಪ್ರತಿಭಟನೆ ವಿಶಿಷ್ಟವಾದದ್ದು . ಚೀನೀಯರ ದಬ್ಬಾಳಿಕೆಯನ್ನು ತಣ್ಣನೆ ದನಿಯಲ್ಲಿ ಚಿತ್ರಿಸುವ ಕೃತಿ, ಬ್ಲಾಕ್‌ ಅಂಡ್‌ ವೈಟ್‌ ಮಾದರಿಯದ್ದಲ್ಲ . ಒಳಿತು ಕೆಡಕುಗಳ ಕುರಿತು ಚೀನೀಯರ ಆತ್ಮ ವಿಶ್ಲೇಷಣೆಯೂ ಕೃತಿಯಲ್ಲಿದೆ ಎಂದು ಹರೀಶ್‌ ಹೇಳಿದರು.

‘ಸ್ಕಲ್‌ಮಂತ್ರ’ ಕೃತಿಯ ಮೂಲ ಲೇಖಕ ಜೋಸೆಫ್‌ ಎಲಿಯಟ್‌ ಪ್ಯಾಟಿಸನ್‌ ಓರ್ವ ಪಾಶ್ಚಾತ್ಯನಾದರೂ, ಮೂಲದ ಬೇರುಗಳಿಗೆ ನಿಷ್ಠನಾಗಿದ್ದಾನೆ. ಕಥೆಗಷ್ಟೇ ಪ್ರಾಧಾನ್ಯ ಕೊಡದ ಪ್ಯಾಟಿಸನ್‌ ಟಿಬೆಟಿಯನ್‌ ಪರಿಸರದ ನುಡಿಗಟ್ಟುಗಳನ್ನು ಇದ್ದಂತೆಯೇ ಬಳಸಿಕೊಂಡಿದ್ದಾನೆ. ಕಾದಂಬರಿಯಲ್ಲಿ ಬರುವ ದೆವ್ವದ ಪಾತ್ರ ದಕ್ಷಿಣಕನ್ನಡ ಯಕ್ಷಗಾನದ ಭೂತವನ್ನು ನೆನಪಿಸುತ್ತದೆ. ಮಾವೋ ಕೂಡ ಕೃತಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಹಿಮಾಲಯದ ಪರಿಸರದ ಸಂಘರ್ಷಗಳ ಚಿತ್ರಣದ ‘ಸ್ಕಲ್‌ಮಂತ್ರ’ ಒಂದು ಅಪರೂಪದ ಕೃತಿ. ಇಂಥದೊಂದು ಕೃತಿಯನ್ನು ಕನ್ನಡಕ್ಕೆ ತಂದಿರುವ ಬೇಳೂರು ಸುದರ್ಶನ ಅಭಿನಂದನಾರ್ಹ ಎಂದು ಹರೀಶ್‌ ಹೇಳಿದರು.

ಪ್ರಜಾವಾಣಿಯ ವ್ಯವಸ್ಥಾಪಕ ಸಂಪಾದಕರಾಗಿದ್ದ ಪುಟ್ಟಸ್ವಾಮಯ್ಯ ‘ಚಹಾ ಕಟ್ಟಿದ ಸಾಮ್ರಾಜ್ಯ’ ಎನ್ನುವ ಕೃತಿ ಬರೆದಿದ್ದರು. ಇದೊಂದು ನುಡಿಚಿತ್ರ. ಇದರ ನಂತರ ಹಿಮಾಲಯದ ಪರಿಸರ ದೊಡ್ಡಗಾತ್ರದಲ್ಲಿ ‘ಸ್ಕಲ್‌ಮಂತ್ರ’ದ ಮೂಲಕ ಕನ್ನಡಕ್ಕೆ ಬಂದಿದೆ. ಈಗಾಗಲೇ ಚಾಂಗ್‌ ಶಾನ್‌ ಲಿಯಾಂಗ್‌ರ ‘ಹುಲ್ಲಿನ ಸಾರು’ ಕೃತಿಯನ್ನು ಕನ್ನಡಕ್ಕೆ ತಂದಿರುವ ಬೇಳೂರು ಸುದರ್ಶನ ಅವರ ಬತ್ತಳಿಕೆಯಲ್ಲಿ ಇನ್ನಷ್ಟು ಹಿಮಾಲಯದ ಪರಿಸರದ ಕಾದಂಬರಿಗಳಿವೆ. ಈ ಮೂಲಕ ಹಿಮಾಲಯ ಪರಿಸರದ ಕುರಿತ ಸಾಹಿತ್ಯವನ್ನು ಕನ್ನಡಕ್ಕೆ ತಂದ ಮೊದಲಿಗರೆನ್ನುವ ಹೆಮ್ಮೆ ಸುದರ್ಶನ್‌ ಅವರದ್ದು ಎಂದು ಹರೀಶ್‌ ಬಣ್ಣಿಸಿದರು.

ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಲಾಯಿ ಲಾಮಾ ಅವರ ಮುಖ್ಯಪ್ರತಿನಿಧಿಯ ವಿಶೇಷ ಸಹಾಯಕ ಶುಫೆಲ್‌ ತುಪ್ತೆನ್‌ ತಮ್ಮ ಹಾಗೂ ಸುದರ್ಶನರ ನಡುವಿನ ಗೆಳೆತನವನ್ನು ನೆನಪಿಸಿಕೊಂಡು, ಸುದರ್ಶನ್‌ಗೆ ಯಶಸ್ಸು ಹಾರೈಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಗಮದ ಅಧ್ಯಕ್ಷ ಮನೋಹರ ಮಸ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಥೆಗಾರ ಜಯಂತ ಕಾಯ್ಕಿಣಿ, ಉಮಾರಾವ್‌, ಹಿರಿಯ ಪತ್ರಕರ್ತ ಜಯರಾಮ ಅಡಿಗ, ಅಂಕಿತ ಪುಸ್ತಕದ ಪ್ರಕಾಶ್‌ ಕಂಬತ್ತಳ್ಳಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಪ್ಪದೇ ಹಾಜರಿರುವ ಬರಹ ವಾಸು ಅವರ ತಂದೆ ಕೆ.ಟಿ.ಚಂದ್ರಶೇಖರ್‌ ‘ಸ್ಕಲ್‌ಮಂತ್ರ’ ಅನಾವರಣ ಸಂದರ್ಭಕ್ಕೂ ಸಾಕ್ಷಿಯಾಗಿದ್ದರು.


ಪೂರಕ ಓದಿಗೆ-
‘ಸ್ಕಲ್‌ಮಂತ್ರ’ ಕೃತಿಯ ಒಂದು ಅಧ್ಯಾಯ....


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X