ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಗೀರಥಿಯಲ್ಲಿ ಮಿಂದ ನಿತ್ಯೋತ್ಸವದ ಕವಿ ನಿಸಾರ್‌

By Staff
|
Google Oneindia Kannada News

*ಚೇತನ್‌

Prof. K.S. Nisar Ahmedಕನ್ನಡ ಸಾರಸ್ವತ ಲೋಕದಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಸೇವೆ ಸಲ್ಲಿಸಿರುವ ಕವಿ ಪ್ರೊ.ಕೆ.ಎಸ್‌.ನಿಸಾರ್‌ ಅಹಮದ್‌ರಿಗೆ ಇದುವರೆಗೂ ಎಷ್ಟು ಪ್ರಶಸ್ತಿಗಳು, ಪುರಸ್ಕಾರಗಳು ಸಂದಿರಬಹುದು?

ವಿಶ್ವಮಾನವ ಪ್ರಶಸ್ತಿ, ಸಹಕಾರ ರತ್ನ ಪ್ರಶಸ್ತಿ, ಕನ್ನಡ ಕಂಪು ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಜ್ಯೋತಿ ಪ್ರಶಸ್ತಿ, ಸದ್ಭಾವನಾ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಬಿ. ಎಂ. ಶ್ರೀ. ಪ್ರಶಸ್ತಿ, ಅನಕೃ ನಿರ್ಮಾಣ್‌ ಪ್ರಶಸ್ತಿ, ಸಂದೇಶ ಕನ್ನ ಡ ಸಾಹಿತ್ಯ ಪ್ರಶಸ್ತಿ -2003, ಮುಂತಾದ ಇನ್ನೂ ಅನೇಕ ಪ್ರಶಸ್ತಿಗಳನ್ನು ಲೆಕ್ಕ ಇಟ್ಟವರಾರು. ಅಂದಹಾಗೆ, ಇವೆಲ್ಲಾ ಖಾಸಗಿ ಸಂಘಸಂಸ್ಥೆಗಳು ನೀಡಿರುವ ಪ್ರಶಸ್ತಿಗಳು ಮಾತ್ರ. ಸರ್ಕಾರಿ ಹಾಗೂ ಸರ್ಕಾರಿ ಪೋಷಿತ ಪ್ರಶಸ್ತಿಗಳದು ಬೇರೆಯದೇ ಲೆಕ್ಕವಿದೆ. ತಮ್ಮ ಸಾಹಿತ್ಯ ಸೇವೆಗೆ ಈ ಪರಿಯ ಪ್ರಶಸ್ತಿ ಪಡೆದಿರುವ ನಿಸಾರರ ಮುಕುಟಕ್ಕೆ ಮೊನ್ನೆ ಸಂದ ಮತ್ತೊಂದು ಗರಿ ಭಾಗೀರಥಿ ಸಾಹಿತ್ಯ ಪುರಸ್ಕಾರ.

ಬೆಂಗಳೂರಿನ ಭಾಗೀರಥಿ ಬಾಯಿ ನಾರಾಯಣರಾವ್‌ ಮಾನೆ ವಿದ್ಯಾಸಂಸ್ಥೆ ತನ್ನ ಪ್ರಥಮ ವರ್ಷದ ಸಾಹಿತ್ಯ ಪುರಸ್ಕಾರವನ್ನು ಪ್ರೊ.ನಿಸಾರ್‌ ಅಹಮದ್‌ರಿಗೆ ನೀಡಿ ಗೌರವಿಸಿತು. ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳ ಪ್ರಶಸ್ತಿ ಪ್ರದಾನ ಮಾಡಿದರು. ನಿವೃತ್ತ ನ್ಯಾಯಮೂತಿ} ನಿಟ್ಟೂರು ಶ್ರೀನಿವಾಸರಾಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಹೆಚ್‌. ಎಸ್‌. ವೆಂಕಟೇಶ ಮೂರ್ತಿ, ಪಿ.ವಿ. ನಾರಾಯಣ, ಚಂಪಾ, ಬಿ. ಎನ್‌. ಎಮ್‌ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಾರಾಯಣರಾವ್‌ ಮಾನೆ ಉಪಸ್ಥಿತರಿದ್ದರು. ಕಾರ್ಯಕ್ರಮ ನಡೆದದ್ದು ಫೆ.23ರ ಭಾನುವಾರ.

ಪ್ರಶಸ್ತಿ ಸ್ವೀಕರಿಸಿ ಕೃತಜ್ಞತಾ ಪ್ರವರದಿಂದ ತಮ್ಮ ಭಾಷಣ ಶುರುಮಾಡಿದ ನಿಸಾರ್‌ ಅಹಮದ್‌- ಬೆಂಗಳೂರಿನಲ್ಲಿ ಅನೇಕ ವಿದ್ಯಾ ಸಂಸ್ಥೆಗಳಿವೆ. ಅದರೆ ಅವುಗಳಿಂದ ಒಳ್ಳೆಯ ಸಾಹಿತ್ಯಕ ಕೆಲಸಗಳು ಆಗ್ತಾ ಇಲ್ಲ. ಶಿಕ್ಷಣದ ಮೂಲೋದ್ದೇಶ ವ್ಯಕ್ತಿತ್ವ ವಿಕಸನ. ಆದರೆ ಈಗಾಗುತ್ತಿರುವುದು ಬರೀ ಉದರ ವಿಕಸನ. ವ್ಯಕ್ತಿತ್ವ ವಿಕಸನ ಆಗದಿದ್ದರೆ ಯುವ ಪೀಳಿಗೆ ಕೇವಲ ಮಾಹಿತಿ ಮೂಟೆಗಳಾಗಿ ಬೆಳೆಯುತ್ತಾರೆಯೇ ಹೊರತು ಮಾನಸಿಕ ವಿಕಸನ ಹಾಗೂ ಶೀಲ ವರ್ಧನೆ ಸಾಧ್ಯವಾಗುವುದಿಲ್ಲ . ಆತ್ಮ ಹಾಗೂ ಹೃದಯಕ್ಕೆ ಸಂಬಂಧಿಸಿದ ಶಿಕ್ಷಣ ನೀಡಬೇಕು ಮತ್ತು ಅಂತಹ ಅತ್ಯುತ್ತಮ ಕೆಲಸವನ್ನು ಬಿ. ಎನ್‌. ಎಂ. ವಿದ್ಯಾ ಸಂಸ್ಥೆ ಮಾಡುತ್ತಿದೆ ಎಂದರು.

ವಿಮರ್ಶಕರು ಮರಳ ದಿಬ್ಬಗಳಂತೆ !
ತಮ್ಮ ಹಿರೀಕರಂತೆ ವಿಮರ್ಶಕರ ಬಗೆಗೆ ತೀವ್ರ ಅಸಮಾಧಾನವನ್ನು ಹೊಂದಿರುವ ನಿಸಾರ್‌ ಅಹಮದ್‌, ವಿಮರ್ಶಕರನ್ನು ಸಾರಾಸಗಟಾಗಿ ತೀವ್ರ ತರಾಟೆಗೆ ತೆಗೆದುಕೊಂಡರು.

ವಿಮರ್ಶಕರು ಮರಳು ದಿಬ್ಬಗಳಂತೆ. ಗಾಳಿ ಬಂದ ಕಡೆ ತೂರುತ್ತಾರೆ. ಮರಳು ದಿಬ್ಬಗಳು ಇದ್ದಲ್ಲೇ ಇರಲಾರವು. ಇಂದು ಇಲ್ಲಿದ್ದರೆ ನಾಳೆ ಇನ್ನೆಲ್ಲೋ. ವಿಮರ್ಶಕರು ಕೂಡ ಹಾಗೆಯೇ. ಕನ್ನಡದಲ್ಲಿ ಆ ಪರಂಪರೆ ಬಹಳ ಹಿಂದಿನಿಂದ ಬಂದಿದೆ ಎಂದು ನಿತ್ಯೋತ್ಸವದ ಕವಿ ಹೇಳಿದರು.

ಹಾರ ಬಲು ಭಾರ : ಸಮಾರಂಭದ ವೈಭವವನ್ನು ಕಂಡ ಪ್ರೊಫೆಸರ್‌, ಇಂತಹ ಅದ್ದೂರಿ ಸಮಾರಂಭ ನನ್ನಂತಹ ಜನಪರ ಸಾಹಿತಿಗೆ ಸ್ವಲ್ಪ ಅತಿಯೆನಿಸುತ್ತದೆ ಎಂದರು. ತಮಗೆ ತೊಡಿಸಿದ ಗುಲಾಬಿ ಹೂವಿನ ಹಾರವನ್ನು ಈ ಹಾರ ಬಲು ಭಾರ ಎಂದು ಬಣ್ಣಿಸಿದರು.

ಭಾಷಣ ಮುಗಿಸಿದ ನಿಸಾರ್‌, ಮತ್ತೆ ಬಂದು ಮೈಕಿನ ಮುಂದೆ ನಿಂತು- ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವೆ, ಆದರೆ ಮುಖ್ಯವಾಗಿ ನನ್ನ ಹೆಂಡತಿಗೇ ಕೃತಜ್ಞತೆ ಹೇಳುವುದನ್ನು ಮರೆತುಬಿಟ್ಟೆ. ನನ್ನ ಇಂದಿನ ಸ್ಥಿತಿಗೆ ಕಾರಣ ನನ್ನ ಹೆಂಡತಿಯೇ. ಅವಳು ನನ್ನನ್ನು ಕೊತ್ತಂಬರಿ ಸೊಪ್ಪು ತರಲು ಕೂಡ ಕಳಿಸುತ್ತಿರಲ್ಲಿಲ್ಲ. ನನ್ನನ್ನು ಒಂದು ದಿನವೂ ಮನೆಯಲ್ಲಿ ಕೂಡಿ ಹಾಕಲಿಲ್ಲ. ನಾನು ಒಂಟಿ ಸಲಗದ ಹಾಗೆ ಓಡಾಡಿಕೊಂಡಿದ್ದೆ. ಹಾಗಾಗಿ ನನ್ನ ಹೆಚ್ಚಿನ ಸಮಯವನ್ನು ಸಾಹಿತ್ಯ ಸೇವೆಗೆ ಮುಡಿಪಾಗಿಟ್ಟೆ ಎಂದಾಗ ಸಭಾಂಗಣದಲ್ಲಿ ನಗೆಯಲೆ.

ಜನ ಕವಿ, ಜನಪ್ರಿಯ ಕವಿ, ಜನಪರ ಕವಿ
ಪ್ರೊಫೆಸರ್‌ ನಿಸಾರರ ಕವನಗಳ ಬಗ್ಗೆ ಮಾತನಾಡಿದ ಸಾಹಿತಿ ಹೆಚ್‌. ಎಸ್‌. ವೆಂಕಟೇಶ ಮೂರ್ತಿ, ಸಾಮಾನ್ಯವಾಗಿ ಕವಿಗಳಲ್ಲಿ ಎರಡು ತರಹ. ಜನ ಕವಿ ಮತ್ತು ನಿರ್ಜನ ಕವಿ. ನಿಸಾರರು ಜನ ಕವಿ, ಜನಪ್ರಿಯ ಕವಿ ಮತ್ತು ಜನಪರ ಕವಿ. ಜನ ಕವಿಯ ಹತ್ತಿರ ಬರೋದು ಅವರು ಸಂತೋಷ ಕೊಡ್ತಾರೆ ಅಂತ. ನವೋದಯ ಕಾವ್ಯ ಮುಗಿದು ನವ್ಯ ಕಾವ್ಯ ಶುರುವಾದಾಗ, ಅದರ ನಿರ್ಮಾತೃಗಳು ಬಹಳ ಶ್ರೇಷ್ಠ ಕವಿತೆ ಕೊಟ್ಟರು. ಅದರೆ ಅದು ಎಷ್ಟು ಜನಕ್ಕೆ ತಲುಪತ್ತೆ ಎಂದು ನೋಡಲಿಲ್ಲ. ಆದರೆ ನಿಸಾರರ ಕವಿತೆಗಳು ಹಾಗಲ್ಲ. ಅವರ ಎಲ್ಲಾ ಕವಿತೆಗಳು ಜನರನ್ನು ಮುಟುತ್ತದೆ. ಅವರ ಕವಿತೆಗಳು ನೇರವಾಗಿ ಸಹೃದಯರನ್ನು ತಲಪುತ್ತದೆ. ಅವರ ಮುಖೋದ್ಗತೆ ಜನರ ಹೃದ್ಗತವಾಗುತ್ತದೆ. ಜನರಿಗೆ ಬೇಕಾದದ್ದು ಅವರು ಬರೆಯಲಿಲ್ಲ. ಬದಲಾಗಿ ಅವರು ಬರೆದದ್ದು ಜನರಿಗೆ ಬೇಕಾಯ್ತು. ಮೂರು ತಲೆಮಾರು ಜನರ ಪ್ರೀತಿ ಪಡೆದ ಕವಿ ಅವರು. ಭಾಷೆಯ ಮೇಲೆ, ಲಯದ ಮೇಲೆ ಬಹಳ ಹಿಡಿತವಿರುವ ಕವಿ. ಕವಿಯ ಕವಿತೆ, ಕವಿಯ ಕವಿತೆಯಾಗೇ ಉಳಿದರೆ ಅದು ಸಾರ್ಥಕವಲ್ಲ. ಕವಿಯ ಕವಿತೆ ಜನರ ಕವಿತೆಯಾದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ನಿಸಾರರ ಕವನಗಳನ್ನು ವೆಂಕಟೇಶಮೂರ್ತಿ ಕೊಂಡಾಡಿದರು.

ಕನ್ನಡ ಕಾವ್ಯಕ್ಕೆ ಸೂಟು ತೊಡಿಸಿದ ಕವಿ
ಪ್ರೊಫೆಸರ್‌ ನಿಸಾರರ ಗದ್ಯ ಮತ್ತು ವಿಮರ್ಶೆಗಳ ಬಗ್ಗೆ ಹಿರಿಯ ವಿಮರ್ಶಕ ಪಿ.ವಿ. ನಾರಾಯಣ ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ ಸೂಟು ತೊಡಿಸಿದವರು ಪ್ರೊಫೆಸರ್‌ ನಿಸಾರ್‌. ಆದ್ದರಿಂದ ಅದು ಬಹಳ ಬೆಚ್ಚಗಿದೆ. ನಿಸಾರರ ವಿಮರ್ಶೆ ಎಂದರೆ, ಅವರು ಬಹಳ ಸಹೃದತೆಯಿಂದ ಕವನಗಳ ಅಂತರಾತ್ಮ ಹೊಕ್ಕು ನೋಡುತ್ತಿದ್ದರು. ಅವರು ಬರೆದ ಗದ್ಯ ಲೇಖನಗಳು ಸಾಮಾಜಿಕವಾದವುಗಳು ಎಂದು ಪಿವಿಎನ್‌ ಹೇಳಿದರು.

ಇದೇ ಸಂದರ್ಭದಲ್ಲಿ ಹೊಂಬಾಳೆ ತಂಡದವರು ನಿಸಾರರ- ಕನ್ನಡವೆಂದರೆ ಬರಿ ನುಡಿಯಲ್ಲ , ಬರುವನೇ ಸಖಿ ಚೆಲುವ, ಮತ್ತದೇ ಸಂಜೆ ಅದೇ ಬೇಸರ ಅದೇ ಏಕಾಂತ ಮುಂತಾದ ಹಾಡುಗಳನ್ನು ಹಾಡಿದರು. ಬಿ. ಎನ್‌. ಎಮ್‌. ಶಾಲೆಯ ಮಕ್ಕಳು ಬೆಣ್ಣೆ ಕದ್ದ ನಮ್ಮ ಕೃಷ್ಣ ಹಾಡಿಗೆ ನೃತ್ಯ ಮಾಡಿ ರಂಜಿಸಿದರು.

ಪೂರಕ ಓದಿಗೆ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X