• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೇಜಸ್ವಿ ಅವರೊಂದಿಗೆ ಸಂವಾದ

By Staff
|
  • ಉಕ್ತಲೇಖನ : ವಿಶಾಖ ಎನ್‌.

vishakha.n@greynium.com

ತೇಜಸ್ವಿ ತಮ್ಮ ಸುಂದರ ಹಕ್ಕಿ ಚಿತ್ರಗಳ ಸಮೇತ ಬೆಂಗಳೂರಿಗೆ ಬಂದಿದ್ದರು. ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಗಳನ್ನು ತೋರಲೊಂದು ಅನೌಪಚಾರಿಕ ಸಮಾರಂಭ. ಸಾಲುಮರದ ತಿಮ್ಮಕ್ಕ ಪರಿಷತ್ತಿನ ವಿದ್ಯಾರ್ಥಿನಿಗೆ ಒಂದು ಆಲದ ಗಿಡ ಕೊಡುವ ಮೂಲಕ ತೇಜಸ್ವಿ ‘ಹಾರಾಡುವ ಹಾಡುಗಳ’ ಅನಾವರಣ. ಜಾನಪದ ಸೊಗಡಿನ ಚಂದ್ರಶೇಖರ ಕಂಬಾರರು ‘ಒಂದು ಸಸಿಯನ್ನಾದರೂ ನೆಡುತ್ತೇನೆ’ ಅಂತ ಅಲ್ಲಿ ಸೇರಿದ್ದ ಅಸಂಖ್ಯ ಸಹೃದಯರಿಗೆ ವಚನ ಬೋಧಿಸಿದರು. ಇಪ್ಪತ್ತೆೈದು ವರ್ಷಗಳ ನಂತರ ತಾವು ಹಾಗೂ ತೇಜಸ್ವಿ ಭೇಟಿಯಾಗುತ್ತಿದ್ದೇವೆ ಎಂದ ಅವರು, ತೇಜಸ್ವಿ ಕಂಡರೆ ಹೊಟ್ಟೆಕಿಚ್ಚು ಅಂತ ಹೇಳಿದಾಗ ನಗೆಯ ಅಲೆ. ತಾವು ಪದ್ಯಗಳ ಬರೆಯುವುದನ್ನು ಮುಂದುವರೆಸಿದರೂ, ತೇಜಸ್ವಿ ಅದನ್ನು ಬಿಟ್ಟಿದ್ದು ಯಾಕೆ ಅಂತ ಈಗ ಗೊತ್ತಾಯಿತು ಎಂದ ಕಂಬಾರ, ತೇಜಸ್ವಿ ಫೋಟೋಗಳೇ ಸುಂದರ ಪದ್ಯಗಳೆಂದು ಬಣ್ಣಿಸಿದರು. ತೇಜಸ್ವಿಯವರ ವೈಜ್ಞಾನಿಕ ಬರಹವನ್ನು ಕೊಂಡು ಓದಿರುವ ಕಂಬಾರರು ಅವನ್ನು ಮೆಚ್ಚಿಕೊಂಡರು. ಕಂಬಾರರ ಚಿತ್ರಗಳು ನಗರಿಗರು ಮಿಸ್‌ ಮಾಡಿಕೊಳ್ಳುತ್ತಿರುವ ನಿಸರ್ಗ ಸೌಂದರ್ಯವನ್ನು ಗಮನಕ್ಕೆ ತರುತ್ತದೆ ಎಂದು ಹೇಳಿದ ವಿಮರ್ಶಕ ಎಂ.ಎಚ್‌.ಕೃಷ್ಣಯ್ಯ ಬೋರ್‌ ಹೊಡೆಸಿದರು.

ಮಿಕ್ಕಂತೆ ಅಲ್ಲಿ ತೇಜಸ್ವಿ ಜನಮುಖಿಯಾದರು. ಜನ ಹಾಗೂ ತೇಜಸ್ವಿ ನಡುವೆ ಜಯಂತ ಕಾಯ್ಕಿಣಿ ಸೇತುವೆಯಾದರು. ತೇಜಸ್ವಿಯೇ ಒಂದು ಹಕ್ಕಿ, ಅವರ ಕರ್ವಾಲೋ ಕಾದಂಬರಿಯಲ್ಲಿನ ಓತಿಕ್ಯಾತದಂತೆ ಯಾರ ಕೈಗೂ ಅವರು ಸಿಗುವುದಿಲ್ಲ ಅಂತ ಸಂವಾದಕ್ಕೆ ಲವಲವಿಕೆಯ ಆರಂಭ ದಕ್ಕಿಸಿಕೊಟ್ಟ ಕಾಯ್ಕಿಣಿ, ತೇಜಸ್ವಿ ಉತ್ತರಗಳಿಗೆ ಹತ್ತಿರದ ಕಿವಿಯಾದರು. ...

***

Saalumarada Thimmakka inaugurating Flying Songs Exhibitionಪರಿಸರದಲ್ಲಿ ಲೀನವಾಗೋದನ್ನು ಕಲಿತರೆ ಮಾತ್ರ ಪಕ್ಷಿಗಳ ಸೊಗಸಾದ ಚಿತ್ರ ತೆಗೆಯೋದು ಸಾಧ್ಯ ಅಂತ ಒಂದೊಮ್ಮೆ ಹೇಳಿದ್ದಿರಿ. ಈಗ ನೀವು ಆ ಹಾದಿಯಲ್ಲಿ ಸಾಕಷ್ಟು ದಾರಿ ಸವೆಸಿದ್ದೀರಿ. ಹಾಗೆ ಲೀನವಾಗುವುದರ ಬಗ್ಗೆ ಹೇಳಿ.

ನಾನು ಹಿಂದೆ ಹಾಗೆ ಹೇಳಿದ್ದು ನಿಜ. ಆದರೆ ಈಗ ನನ್ನ ಧೋರಣೆ ಬದಲಿಸಿಕೊಂಡಿದ್ದೇನೆ. ಲೀನವಾದರೂ ಅಂತಾ ಫೋಟೋ ತೆಗೆಯೋಕಾಗಲ್ಲ. ಅದಕ್ಕೆ ಮಾನವಾತೀತ ತಾಳ್ಮೆ ಬೇಕಾಗುತ್ತದೆ. ಫೋಟೋ ತೆಗೀತಾ ತೆಗೀತಾ ಒಂದು ಹಂತದಲ್ಲಿ ಪಕ್ಷಿಗಳ ಬಗ್ಗೆ ದ್ವೇಷ ಬರೋಕೆ ಶುರುವಾಗುತ್ತೆ. ಪ್ರತಿಭೆ, ಸ್ಫೂರ್ತಿ ಅಂತೆಲ್ಲ ಹೇಳ್ತಾರಲ್ಲ- ಅಂತಿಮವಾಗಿ ಮೂಡುವ ಕಲಾಕೃತಿಯಲ್ಲಿ ಇವುಗಳ ಪಾಲು ಕೇವಲ ಅರ್ಧ ಪರ್ಸೆಂಟ್‌ನಷ್ಟು. ಮಿಕ್ಕ ತೊಂಬತ್ತೊಬ್ಬತ್ತೂವರೆ ಪರ್ಸೆಂಟ್‌ ನಿಮ್ಮ ಕಠಿಣ ಕೆಲಸವೇ ಆಗಿರುತ್ತದೆ. ಇದ್ದಕ್ಕಿದ್ದಂತೆ ಸಾಧನೆ ಮಾಡಿದೆವು ಅನ್ನೋದು ಸುಳ್ಳು. ಈ ಮಾತು ಕಥೆ, ಕಾದಂಬರಿ ಮುಂತಾದ ಸೃಜನಶೀಲ ಸಾಹಿತ್ಯದ ರಚನೆಗೂ ಅನ್ವಯಿಸುತ್ತೆ.

ಯಾವಾಗಲೂ ಕೆಲಸ ಮಾಡುವಾಗ ಪಕ್ಕದಲ್ಲಿ ಕಸದ ಬುಟ್ಟಿ ಇಟ್ಟುಕೊಂಡಿರಬೇಕು. ಸರಿಯಿಲ್ಲದ್ದನ್ನು ನಿರ್ದಾಕ್ಷಿಣ್ಯವಾಗಿ ಬಿಸಾಡಬೇಕು. ಚೇಲಾಗಳಿಂದ ಹೊಗಳಿಸಿಕೊಂಡು ಹಾಳಾಗೋದು ಬೇಡ. ಜಾಗತಿಕ ಮಟ್ಟದಲ್ಲಿ ನಿಮ್ಮ ಕೃತಿ ಎರಡನೇ ದರ್ಜೆಯದ್ದಾದರೂ ಪರವಾಗಿಲ್ಲ, ಆದರೆ ನಿಜವಾದ ವಿಮರ್ಶೆಗೆ ಒಳಗಾದಾಗ, ನಮ್ಮದು ಪೊಳ್ಳು ಅನ್ನಿಸಿದರೆ ಹೊಗಳಿದವರನ್ನು ಒದೆಯಬೇಕನ್ನಿಸುತ್ತೆ.

Poornachandra Tejasviಕೆಲವರಿಗೆ ವಿಜ್ಞಾನ ಒಂದು ಧರ್ಮ. ಇನ್ನು ಕೆಲವರಿಗೆ ಧರ್ಮವೇ ವಿಜ್ಞಾನ. ಅಭಿವೃದ್ಧಿ ಹಾಗೂ ವಿಜ್ಞಾನ- ಇವುಗಳ ಬಗೆಗಿನ ಜಿಜ್ಞಾಸೆ ಬಗ್ಗೆ ಏನಂತೀರಿ?

ವಿಜ್ಞಾನ- ಧರ್ಮಗಳನ್ನು ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದೀವಿ ಅಷ್ಟೆ. ಬೇಲೂರಿನಿಂದ ಹಾಸನದವರೆಗೆ ರಸ್ತೆ ದೊಡ್ಡದು ಮಾಡೋಕೆ ಸಾವಿರಾರು ಆಲದ ಮರಗಳನ್ನು ಕಡಿದಿದ್ದಾರೆ. ಆ ಮರಗಳಲ್ಲಿ ಕುಟ್ರ, ಬಾರ್‌ಬೆಟ್ಟ, ಗ್ರೀನ್‌ ಪಿಜನ್‌ ಮೊದಲಾದ ಸುಂದರ ಹಕ್ಕಿಗಳಿದ್ದವು. ಅವೆಲ್ಲ ಈಗ ಎಲ್ಲಿಗೆ ಹೋದವೋ? ಈ ಮರಗಳನ್ನು ಕಡಿಯುವ ಮುಂಚೆಯೇ ಪ್ಲಾನ್‌ ಮಾಡಿ, ಅದೇ ಜಾತಿಯ ಗಿಡಗಳನ್ನು ನೆಟ್ಟಿದ್ದರೆ, ಆ ಹಕ್ಕಿಗಳು ಅಲ್ಲೇ ಇರುತ್ತಿದ್ದವು. ಹಳೆಯ ಮರಗಳನ್ನು ಕಡಿದು, ರಸ್ತೆಯನ್ನೂ ಅಗಲ ಮಾಡಬಹುದಾಗಿತ್ತು. ಪಾಪ, ಹಕ್ಕಿಗಳಿಗೆ ವಾಚಕರ ವಾಣಿಗೆ ಪತ್ರ ಬರೆಯೋಕೂ ಆಗಲ್ಲ !

ವಿಜ್ಞಾನಕ್ಕೆ ಪರಿಸರ ವ್ಯತಿರಿಕ್ತ ಅನ್ನೋದು ತಪ್ಪು. ಸಂರಕ್ಷಣೆ ಎಂಬ ಪರಿಕಲ್ಪನೆಯೇ ಪಕ್ಕಾ ವೈಜ್ಞಾನಿಕವಾದದ್ದು. ರಾಜಾಸ್ಥಾನದಲ್ಲಿ ಸ್ಕೂೃ ಕೊಂಬಿನ ಜಿಂಕೆಗಳು ಜಾಸ್ತಿಯಾಗಿವೆ. ನೈಸರ್ಗಿಕವಾಗಿ ಅವನ್ನು ತಿನ್ನುವ ಹುಲಿ, ಸಿಂಹದಂಥಾ ಪ್ರಾಣಿಗಳಿಲ್ಲದ್ದರಿಂದ ಹೀಗಾಯಿತು. ಅಲ್ಲಿನ ಜನ ವೈಷ್ಣವರು. ಜಿಂಕೆ ಮಾಂಸ ತಿನ್ನೋದಿಲ್ಲ. ಆದರೆ ವಿಪರೀತವಾದ ಜಿಂಕೆಗಳು ಬೆಳೆಗಳನ್ನು ಹಾಳು ಮಾಡೋಕೆ ಶುರುಮಾಡಿದವು. ಜನ ಅರಣ್ಯ ಇಲಾಖೆಗೆ ದೂರು ಕೊಟ್ಟರು. ಇಲಾಖೆಯವರು ಬೇರೆಡೆಗೆ ಸಾಗಿಸಲು ವ್ಯಾನಿನಲ್ಲಿ ಜಿಂಕೆಗಳನ್ನು ತುಂಬಿಕೊಂಡರು. ವ್ಯಾನಿನ ಬಾಗಿಲು ತೆಗೆದಾಗ ಎಲ್ಲಾ ಸತ್ತುಹೋಗಿದ್ದವು. ಆಗ ಪ್ರಾಣಿ ದಯಾ ಸಂಘದವರು ಬೊಬ್ಬಿಟ್ಟರು. ಇಂಥಾ ಸಮಸ್ಯೆಗಳಿಗೆ ಪರಿಹಾರ ಏನು ಅನ್ನೋದೇ ಪ್ರಶ್ನೆ. ಅಂಡಮಾನ್‌ನಲ್ಲೂ ಜಿಂಕೆಗಳು ಜಾಸ್ತಿ. ಆದರೆ, ಅಲ್ಲಿನ ಮಾರುಕಟ್ಟೆಯಲ್ಲೇ ಜಿಂಕೆ ಮಾಂಸ ಬಿಕರಿಯಾಗುತ್ತೆ. ಆ ಮೂಲಕವಾದರೂ ಜಿಂಕೆಗಳ ಸಂಖ್ಯೆ ಕಡಿಮೆಯಾಗಲಿ ಅನ್ನೋದು ಅಲ್ಲಿನವರ ಅಂಬೋಣ.

ಪರಿಸರದ ಬಗ್ಗೆ ಚಿಕ್ಕಂದಿನಿಂದಲೇ ಕಾಳಜಿ ಹುಟ್ಟಿಸಲು ಪಠ್ಯಗಳಲ್ಲಿ ಪರಿಸರ ಪಾಠಗಳನ್ನು ಅಳವಡಿಸಬೇಕೆ? ಆ ಪಾಠಗಳು ಹೇಗಿರಬೇಕು?

ನನ್ನ ಮಕ್ಕಳಿಗೆ ನಾನು ಜೀವನ ಸಂದರ್ಭದಲ್ಲಿ ಪರಿಸರದ ತಿಳಿವಳಿಕೆ ಹೇಳಿದೆ. ಪರಿಸರದ ಬಗ್ಗೆ ಪಾಠದ ಹೊರೆ ಹೇರಿದರೆ ಅದು ಮಕ್ಕಳಿಗೆ ತ್ರಾಸಾಗುತ್ತದೆ. ಪರೀಕ್ಷೆ ಇಟ್ಟರೆ, ಆ ಹಕ್ಕಿಗಳ ಮನೆ ಹಾಳಾಗ ಅಂತ ಬಯ್ದುಕೊಳ್ಳುತ್ತಾರೆ. ನಾನು ಕ್ವಾಂಟಮ್‌ ಫಿಸಿಕ್ಸ್‌ನಿಂದ ಸೈಕಾಲಜಿವರೆಗೆ ಏನನ್ನು ಬೇಕಾದ್ರೂ ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಪರೀಕ್ಷೆ ಅಂದರೆ ಯಾವ ಭಾಷೆಯಲ್ಲಿ ಓದಿದ್ದೆ ಅನ್ನೋದೇ ಮರೆತುಹೋಗುತ್ತೆ. ಮಕ್ಕಳಿಗೆ ಯಾವುದರ ಬಗ್ಗೆ ಆಸಕ್ತಿ ಇರುತ್ತದೋ ಅದರ ಮೂಲಕವೇ ಅವರನ್ನು ಬೆಳೆಸಬೇಕು. ಪರಿಸರದ ಪಾಠ ಮಾಡಿ ಫಸ್ಟ್‌ ಬರಿಸುವುದು ಹೇಗೆ ಅನ್ನೋದು ನನಗೆ ಗೊತ್ತಿಲ್ಲ.

ನೀವು ಬರಹಗಾರರೂ ಹೌದು, ಫೋಟೋಗ್ರಾಫರ್‌ ಕೂಡ ಹೌದು. ಬರವಣಿಗೆಯಲ್ಲಿ ಸಿಗದ ಅಂತದ್ದೇನು ಫೋಟೋಗ್ರಫಿಯಲ್ಲಿ ಸಿಕ್ಕಿದೆ?

ಬರವಣಿಗೆ ಜೀವನವನ್ನು continuity ಆಗಿ ನೋಡುತ್ತದೆ. ಅಲ್ಲಿ ಸರಣಿ ಘಟನಾವಳಿಗಳಿರುತ್ತವೆ. ಆದರೆ ಫೋಟೋಗ್ರಫಿ ಹಾಗಲ್ಲ. ಒಂದು ಸೆಕೆಂಡಿನ ಐನೂರನೇ ಒಂದು ಭಾಗವನ್ನು ಫ್ರೀಜ್‌ ಮಾಡಿ ತೋರಿಸುತ್ತೆ. ಆ ಕ್ಷಣವನ್ನು ಅನಂತತೆಯ ಪ್ರತಿನಿಧಿಯಾಗಿ ತೋರಿಸುವಾಗ ಬಹಳ ಸಂತೋಷ ಸಿಗುತ್ತೆ. ಬರವಣಿಗೆ ಮತ್ತು ಫೋಟೋಗ್ರಫಿಯನ್ನು ಸಾದೃಶ್ಯದಿಂದ ನೋಡೋಕೆ ಹೋಗೋದು ತಪ್ಪು.

ಇವತ್ತಿನ ಜಗತ್ತು ಚಲಿಸುವ ಚಿತ್ರಗಳದ್ದು. ಛಾಯಾಚಿತ್ರಗಳಲ್ಲಿ ಆಸಕ್ತಿಯಿರುವ ನೀವು ಇಲ್ಯಾಕೆ ಕೈ ಹಚ್ಚಲಿಲ್ಲ?

ಚಲನಚಿತ್ರ ಒಂದು ಟೀಂ ವರ್ಕ್‌. ನನಗೆ ಟೀಂನಲ್ಲಿ ಕೆಲಸ ಮಾಡೋಕೆ ಆಗಲ್ಲ. ಬೇರೆಯವರು ಎಷ್ಟೇ ಶ್ರದ್ಧೆಯಿಂದ ಕೆಲಸ ಮಾಡಿದರೂ ಅದು ನನಗೆ ಮೆಚ್ಚುಗೆಯಾಗದಿರುವುದೇ ಹೆಚ್ಚು. ಹಾಗಾಗಿ ನಾನು ಒಬ್ಬನೇ ಕೆಲಸ ಮಾಡುವುದಕ್ಕೆ ಇಷ್ಟ ಪಡುತ್ತೇನೆ.

ನಿಮ್ಮ ಫೋಟೋ ತೆಗೆಯುವ ಹವ್ಯಾಸದಲ್ಲಿ ಮಾನವ ಸಂಬಂಧಗಳ ಪಾತ್ರಗಳು ಹೇಗಿದ್ದವು ಅಂತ ಹೇಳ್ತೀರಾ?

ಫೋಟೋಗ್ರಫಿ ಹಿಂದಿನ ಮಾನವೀಯ ಸಂಬಂಧಗಳ ಬಗ್ಗೆ ‘ಮಾಯಾಲೋಕ’ ಅನ್ನುವ ಪುಸ್ತಕದಲ್ಲಿ ಬರೆಯುತ್ತೇನೆ. ಅಲ್ಲಿಯವರೆಗೆ ಕಾಯಿರಿ.

ಪರಿಸರ ಉಳಿಸಿ ಎಂಬ ಅಬ್ಬರ ಎಲ್ಲೆಲ್ಲೂ ಇದೆ. ಇದರ ಪ್ರಾಯೋಗಿಕ ಅನುಷ್ಠಾನದ ಬಗ್ಗೆ ನಿಮಗೆ ಏನನ್ನಿಸುತ್ತೆ ?

ಪರಿಸರ ಉಳಿಸೋಣ ಅಂತ ಬಾಯಿಗೆ ಬಂದಹಾಗೆ ಮಾತಾಡುತ್ತಾರೆ. ಸೆಮಿನಾರುಗಳು, ಕಮ್ಮಟಗಳನ್ನು ಎಲ್ಲೆಂದರಲ್ಲಿ ಮಾಡುತ್ತಾರೆ. ಕುದುರೆಮುಖದ ಅನಾಹುತ ತಿಳಿದುಕೊಳ್ಳೋಕೆ ಸರ್ಕಾರವೆಂಬ ಕತ್ತೆಗೆ 30 ವರ್ಷ ಬೇಕಾಯಿತು. ಸುಮ್ಮನೆ ಪರಿಸರದ ಬಗ್ಗೆ ಕಾಳಜಿ ಅಂತ ಬೊಂಬಡಾ ಹೊಡೆಯಬಾರದು. ಕಾರ್ಯರೂಪಕ್ಕೆ ತರುವಂಥ ಪರಿಹಾರಗಳನ್ನು ಹೇಳಬೇಕು.

ಈಗ ಎಲ್ಲರೂ ತಂತಮ್ಮ ಧರ್ಮಗಳನ್ನು ಶ್ರೇಷ್ಠ ಅಂತ ಪ್ರತಿಪಾದಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಈ ಧರ್ಮ ಪ್ರೀತಿಯ ಪರಮಾವಧಿಯ ಬಗ್ಗೆ ಏನಂತೀರಿ?

ಎಲ್ಲಾ ಧರ್ಮಗಳಿಗೂ ಆಧುನಿಕ ನಾಗರೀಕತೆಯೇ ಸವಾಲಾಗಿದೆ. ಒಂದು ಕಾಲದಲ್ಲಿ ಧರ್ಮಗಳು ಆಯಾ ಕಾಲದ ರಾಜಕೀಯ ಧರ್ಮವೂ ಆಗಿತ್ತು. ಇವತ್ತು ಹಾಗಲ್ಲ. ಧರ್ಮಗಳಲ್ಲಿನ ಆಚರಣೆಗಳು ಇವತ್ತು ಕಳೆಗುಂದುತ್ತಿವೆ. ಎಲ್ಲೆಲ್ಲೂ ತಲೆಯೆತ್ತಿರುವ ಮಠಗಳು, ಮುಲ್ಲಾಗಳು ಮೂಲಭೂತವಾದವನ್ನು ಬಿತ್ತುವ ಮೂಲಕ ತಮ್ಮ ಧರ್ಮವನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಕೈಹಾಕಿವೆ. ಧರ್ಮದ ಆಚಾರದ ಅಂಶಕ್ಕೂ, ನಾಗರೀಕತೆಗೂ ಯಾವ ಸಂಬಂಧ ಇಲ್ಲ ಅಂತ ಆಧುನಿಕತೆ ತೋರಿಸಿಕೊಡುತ್ತಿದೆ. ಹಿಂದುತ್ವ ವಾದಿಗಳು ಮತ್ತು ಮುಸ್ಲಿಂ ಮೂಲಭೂತವಾದಿಗಳು ಒಂದು ರಾಕ್ಷಸನ ಸಂತಾನ.

ಇವತ್ತು ಬೆನ್ನಿಗೆ ಬಾಂಬ್‌ ಕಟ್ಟಿಕೊಂಡು ಹದಿನಾರು ಪೀಳಿಗೆಗೆ ಮೋಕ್ಷ ಕೊಡುತ್ತೇವೆ ಅಂತ ಹೊರಡುವ ಮುಠ್ಠಾಳರಿಗೆ ಏನನ್ನೋದು. ಇವರನ್ನು ಪರಿವರ್ತಿಸುವ ಮಾತು ತಕ್ಷಣಕ್ಕೆ ಸಾಧ್ಯವಿಲ್ಲ. ಇಂಥವರನ್ನು ಬೆಳೆಸುತ್ತಿರುವವರನ್ನು ಹಿಡಿದು, ಒದ್ದು ಜೈಲಿಗೆ ಕಳಿಸುವ ಕೆಲಸವನ್ನು ತಕ್ಷಣ ಮಾಡಬಹುದು.

ಇವತ್ತು ದನದ ಮಾಂಸ ತಿನ್ನುವವರ ನಾಲಗೆ ಕತ್ತರಿಸಿ ಅಂತ ಮಾತನಾಡುವವರು ನಾಳೆ ಸತಿಪದ್ಧತಿ, ಅಸ್ಪೃಶ್ಯತೆಗಳನ್ನು ಜಾರಿಗೆ ತರಲು ಒತ್ತಾಯಿಸುವುದಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ?

ನಿಮ್ಮ ಕಾದಂಬರಿಯಲ್ಲಿ ಪ್ರೇಮ ಸನ್ನಿವೇಶ ಯಾಕೆ ಇರೋದಿಲ್ಲ?

ಕಾರಂತರ ಕಾದಂಬರಿಯಲ್ಲಿ ಹೆಂಗಸರು ವಿಸ್ಡಂ ಆಗಿ ಕಾಣುತ್ತಾರೆ. ಕುವೆಂಪು ಕಾದಂಬರಿಗಳಲ್ಲಿ ತಾಯಿಯಾಗಿ ಬರ್ತಾರೆ. ನನ್ನ ಕಾದಂಬರಿಯಲ್ಲಿ ರೆಬೆಲ್‌ ಆಗಿ ಬರ್ತಾರೆ. ಮನು ನ ಸ್ತ್ರೀ ಸ್ವಾತಂತ್ರ್ಯಮರ್ಹತೀ ಅಂತ ಹೇಳಿದ್ದ. ಒಂದು ಕುಕ್ಕರ್ರು, ಒಂದು ಲೂನಾ ಸಿಕ್ಕಿತು ನೋಡಿ, ಹೆಂಗಸು 10 ನಿಮಿಷದಲ್ಲಿ ಕುಕ್ಕರ್‌ನಲ್ಲಿ ಅನ್ನ ಮಾಡಿ, ಲೂನಾ ಹತ್ತಿಕೊಂಡು ಹೊರಟುಬಿಟ್ಟಳು. ಇದರಿಂದ ಇತರೆ ಪರಿಣಾಮಗಳೂ ಆದವು ಅನ್ನೋದು ಬೇರೆ ಮಾತು.

ನಿಮ್ಮ ದೇವರು ಮತ್ತು ಅದರ ವಾಹನ ಯಾವುದು?

ವಾಹನ ಇರುವ ದೇವರನ್ನ ನಾನು ದೇವರು ಅಂತಲೇ consider ಮಾಡಿಲ್ಲ. ಆರು ವರ್ಷಗಳ ನಂತರ ನಮ್ಮ ಊರಲ್ಲಿ ಒಂದು ನಾಲ್ಕೈದು ನವಿಲುಗಳು ಕಾಣಿಸಿಕೊಂಡವು. ಅವನ್ನ ಕೊಲ್ಲಬೇಡಿ ಅಂತ ಊರಿನವರಿಗೆ ಹೇಳಿದೆ. ಅದಕ್ಕೆ ಒಬ್ಬ ಹೇಳಿದ- ಇದನ್ನ ಧರ್ಮಸ್ಥಳದವರು ತಂದು ಬಿಟ್ಟಿದಾರೆ ಅಂತ ಹಬ್ಬಿಸಿಬಿಟ್ರೆ, ಯಾರೂ ಇವುಗಳ ತಂಟೆಗೆ ಬರೋಲ್ಲ. ಎಂಥಾ ಸ್ಥಿತಿ ನೋಡಿ, ಹಾಗೆ ಮಾಡುವ ಮೂಲಕ ಇನ್ನೊಂದು ಮೌಢ್ಯಕ್ಕೆ ದಾರಿ ಮಾಡಿಕೊಡಬೇಕಾಗುತ್ತದೆ. ನಾನು ದೇವರನ್ನು ನಂಬೊಲ್ಲ .

ಅರಣ್ಯಗಳನ್ನು ಸಂರಕ್ಷಿಸಲು ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವುದು ಎಷ್ಟು ಸರಿ?

ಸರಿಯಲ್ಲ ಅನ್ನುವ ಮಾತು ಏಳುತ್ತಿರಲು, ಆ ಜನರನ್ನು ಬಳಸಿಕೊಂಡು ಕಾಡಿನ ವಾಣಿಜ್ಯೀಕರಣ ಲಾಭ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂಬುದು ಕಾರಣ. ಅರಣ್ಯ ಸಂರಕ್ಷಿಸಿ, ಜನರನ್ನು ನೋಡಲು ಬಿಟ್ಟು, ಅಲ್ಲಿನ ಜನರನ್ನು ಹಾಗೇ ಉಳಿಸಿದರೆ, ಅವರೂ ಪ್ರಾಣಿಗಳಂತೆ ತೋರುವುದಿಲ್ಲವೇ? ವಾಸ್ತವವನ್ನು ಗಮನದಲ್ಲಿಟ್ಟುಕೊಂಡು, ಕಾಡಿನ ಜನರಿಗೆ ಮನದಟ್ಟು ಮಾಡಿಸಿ, ಅವರಿಗೆ ಪುನರ್ವಸತಿ ಕಲ್ಪಿಸಬೇಕು.

ರೈತರಿಗೆ ಕೃಷಿಯೇ ಹೊರೆಯಾಗುತ್ತಿರುವುದಕ್ಕೆ ಏನು ಕಾರಣ?

ಈ ಪುಟ್ಟ ಪ್ರಶ್ನೆಗೆ ಎಷ್ಟುದ್ದ ಉತ್ತರ ಕೊಟ್ಟರೂ ಸಾಕಾಗೋಲ್ಲ. ಇವತ್ತು ರೈತರು ಬೇಗ ದುಡ್ಡು ಮಾಡಿಕೊಳ್ಳುವ ದಾರಿ ಹಿಡಿಯುತ್ತಿದ್ದಾರೆ. ಕೃಷಿ ಪದ್ಧತಿ ಬದಲಿಸುತ್ತಿದ್ದಾರೆ. ಸುಲಭವಾಗಿ ದುಡ್ಡು ಸಂಪಾದಿಸಲು ಆನ್‌ಲೈನ್‌ ಲಾಟರಿ ಮುಂದೆ ನಿಲ್ಲುತ್ತಿದ್ದಾರೆ. ಸದ್ಯಕ್ಕೆ ವೆನಿಲ್ಲಾ ಬೆಳೆಯ ಭರಾಟೆ ಇದೆ. ಮುಂದೆ ವೆನಿಲ್ಲಾ ರೈತರ ಆತ್ಮಹತ್ಯೆ ಅಂತ ಓದುವ ಕಾಲ ಬರುತ್ತದೆ, ಅಷ್ಟೆ. ಎಲ್ಲಾ ರೈತರೇ ತಂದುಕೊಳ್ಳುತ್ತಿರುವ ತೊಂದರೆಗಳು.

ನೀವು ಇನ್ನೊಂದು ಕಾದಂಬರಿ ಬರೆಯಬೇಕು

ಇಲ್ಲ, ನಾನು ಕಾದಂಬರಿ ಬರೆಯೋದಿಲ್ಲ. ಬರೀ ರಿಯಲ್‌ ಸ್ಟೋರೀಸ್‌ ಇರುವ ‘ಮಾಯಾ ಲೋಕ’ ಬರೆಯುತ್ತೇನೆ. ಅದು ನನ್ನ ಆತ್ಮಕಥೆಯೂ ಆಗಿರುತ್ತದೆ.

ಹಕ್ಕಿಗಳ ಚಿತ್ರಸಂಚಯ

ತೇಜಸ್ವಿಯವರ ‘ಹಾರಾಡುವ ಹಾಡುಗಳು’

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more