ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮ ಸಂಗಾತಕ್ಕೆ ಅವನುಂಟೆ ?

By Staff
|
Google Oneindia Kannada News
  • ಸಂಘಮಿತ್ರ
ಹೆಣ್ಣು - ಗಂಡು
ಈವ್‌- ಆ್ಯಡಮ್‌

ಗಂಡು- ಹೆಣ್ಣಿನ ಅವಿನಾಭಾವ ಸಂಬಂಧ ಸಾಧ್ಯವೆ ? ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಾಣದೊಂದು ಕನಸ ಕಾಣಲುಂಟೆ ?

ಗಂಡು ಹೆಣ್ಣಿನ ಸಂಬಂಧದಲ್ಲಿ ಒಂದು ಅಂತರ್ಗತ ವಿಷಮತೆ ಇದೆ ಅಂತ ನಿಮಗೆ ಯಾವಾಗಲಾದರೂ ಅನ್ನಿಸಿದ್ದಿದೆಯೆ ?

ಪ್ರಜ್ಞಾವಂತ ಲೇಖಕಿಯರು, ಕತೆಗಾರ್ತಿಯರು, ವಿಮರ್ಶಕರು, ಕವಿಯತ್ರಿಯರು ಸೇರಿದ್ದ ಕಡೆ ಹೀಗೊಂದು ಕೈಬಾಂಬ್‌ ಒಗೆದಾಗ ಎದ್ದ ಹೊಗೆ- ನಗೆ ಇಲ್ಲಿದೆ.

*

ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಗಂಡು-ಹೆಣ್ಣಿನ ಜೋಡಿಯಿಂದ ಜೋಡಿಗೆ ಇದು ಬದಲಾಗುತ್ತೆ ಅನ್ನಿಸುತ್ತೆ. ಹೆಣ್ಣಿನ ಬೌದ್ಧಿಕ ಮೇಲ್ಮೆಯನ್ನು ಒಪ್ಪಿಕೊಳ್ಳಲಾರದ ಕೃಪಣತೆ, ಆಕೆಯ ಕಾರ್ಯಕ್ಷಮತೆ, ಸಾಮರ್ಥ್ಯಗಳ ವಿನ್ಯಾಸ ಅರ್ಥಮಾಡಿಕೊಳ್ಳದ ಹುಂಬತನ, ನಾನು ಉಪದೇಶಿಸುತ್ತೇನೆ- ನೀನು ಕೇಳಿಕೊ ಎಂಬ ಧಾಷ್ಟ್ಯ ಇನ್ನೂ ಗಂಡಸಿನಲ್ಲಿದೆ. ನಾನು ವಿವಾಹಿತೆಯಲ್ಲದ ಕಾರಣ ನನಗೆ ಇದರ ಬಿಸಿ ತಟ್ಟದೇ ಇರಬಹುದು. ಆದರೆ ನನ್ನ ಸ್ನೇಹಿತೆಯರು- ಬಂಧು ವರ್ಗದವರು ಕಂಡುಕೊಂಡಿರುವ ಪ್ರಕಾರ ವಿಷಮತೆಯ ಸೂಕ್ಷ್ಮರೇಖೆ ಇದೆ. ಇದ್ದೇ ಇದೆ. ಗಂಡಸರು ಅವರ ಬುದ್ಧಿ ಬಿಡೊಲ್ಲ ! ಎಂಬ ಅಭಿಪ್ರಾಯವೇ ಗಾಳಿಯಲ್ಲಿ ಅಲೆದಾಡುತ್ತದೆ.

- ಡಾ.ಬಿ.ಎನ್‌. ಸುಮಿತ್ರಾಬಾಯಿ
ಸಂಸ್ಕೃತ ಅಧ್ಯಾಪಕಿ, ವಿಮರ್ಶಕಿ

*

ವಿಷಮತೆ ಇಲ್ಲ . ಸಂಬಂಧದ ಯಶಸ್ಸು ವ್ಯಕ್ತಿಗಳನ್ನು ಆಧರಿಸಿರುವುದರಿಂದ ಪರಸ್ಪರ ಅಭಿರುಚಿ, ಆಸಕ್ತಿಗಳನ್ನು ಗೌರವಿಸುವ ಗಂಡು-ಹೆಣ್ಣಿನದು ಆದರ್ಶ ಸ್ನೇಹ- ಪ್ರೀತಿಯಾಗಿರಲು ಸಾಧ್ಯ.

- ಡಾ.ಎಲ್‌.ಸಿ. ಸುಮಿತ್ರಾ
ಕನ್ನಡ ಅಧ್ಯಾಪಕಿ, ವಿಮರ್ಶಕಿ

*

ಹೆಣ್ಣನ್ನು ಸಮಾನ ಧರ್ಮದಿಂದ ನಡೆಸಿಕೊಳ್ಳಲು ಬಲ್ಲ ಪುರುಷರು ಇಲ್ಲ ಅಂತೇನಲ್ಲ . ಅವರ ಸಂಖ್ಯೆ ಬಹಳ ಕಡಿಮೆ. ಪಾಶ್ಚಾತ್ಯ ದೇಶಗಳಲ್ಲಿ ಹೆಣ್ಣು ಲಿಬರೇಟೆಡ್‌ ಆಗಿದ್ದಾಳೆ ಅಂದುಕೊಳ್ತೀವಿ. ಆದರೆ ಅಲ್ಲೂ ಅವರಿಗೆ ಸಮಸ್ಯೆಗಳಿವೆ. ಅವರಿಗೇ ವಿಶಿಷ್ಟವಾದ ಸಮಸ್ಯೆಗಳು.

- ವೀಣಾ ಶಾಂತೇಶ್ವರ
ಸಾಹಿತಿ, ಪ್ರಾಂಶುಪಾಲರು

*

ಗಂಡು-ಹೆಣ್ಣಿನ ಸಂಬಂಧ ಅಂತಾನೇ ಅಲ್ಲ . ಒಂದೇ ಸೂರಿನಡಿ ದೀರ್ಘ ಕಾಲ ಜೀವಿಸುವ ಯಾವುದೇ ಆಪ್ತ ನಂಟಿನಲ್ಲೂ ಈ ವಿಷಮತೆಯ ಎಳೆ ಗೋಚರಿಸುತ್ತದೆ ಅಂತ ನನ್ನ ಭಾವನೆ. ಉದಾಹರಣೆಗೆ ಹದಿಹರೆಯದ ಮಗಳು ತಾಯಿಯನ್ನೇ ತನ್ನ ಪ್ರತಿಸ್ಪರ್ಧಿ ಎಂದು ಭಾವಿಸುವ ಸಂಗತಿ. ಅಧಿಕಾರ, ಆಸ್ತಿಯ ಕಾರಣ ಅಪ್ಪ- ಮಗನಲ್ಲಿ ಏರ್ಪಡುವ ಬಿರುಕು. ಬಲಿಷ್ಠವಾಗಿರುವ ದೊಡ್ಡ ಮಂಗ ವಿನಾಕಾರಣ ಸಣ್ಣದರ ಕಾಲು ಹಿಡಿದು ತಿರುಚುವುದು... ಹೀಗೆ.

- ಸ. ಉಷಾ
ಕನ್ನಡ ಅಧ್ಯಾಪಕಿ, ಕವಿ

*

ಇದೆಯಮ್ಮಾ ಇದೆ. ವಿದ್ಯೆ, ಬುದ್ಧಿ , ಸಂಸ್ಕಾರ ಎಲ್ಲ ಮೀರಿ ಗಂಡಸಿನಲ್ಲಿರುವ ‘ಅಹಂ’ ಕುಂಡಲಿನಿಯ ಹಾಗೆ ಇದ್ದಕ್ಕಿದ್ದ ಹಾಗೆ ಜಾಗೃತವಾಗಿಬಿಡುತ್ತೆ . ಎಷ್ಟೇ ಸಹಕಾರ ಕೊಡ್ತೀವಿ ಅಂತ ಮಾತಾಡಿದರೂ ಗಂಡಸಿಗೆ ಹೆಣ್ಣನ್ನು ಸಮಾನತೆಯಿಂದ ನಡೆಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ .

- ಡಾ. ಸುನೀತಿ ಶೆಟ್ಟಿ
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮಾಜಿ ಮುಖ್ಯಸ್ಥೆ

*

ಎಲ್ಲಿಯತನಕ ನಾವು ವಿಧೇಯರಾಗಿ ನಿನ್ನದೇ ನನ್ನದು ಅನ್ನುವ ಮನೋಭಾವನೆಯಿಂದ ಇರುತ್ತೇವೆಯೋ ಅಲ್ಲಿಯತನಕ ಎಲ್ಲ ಚೆನ್ನ. ಒಂದು ಸಾರಿ ನಾನು, ನನ್ನದು, ನನ್ನ ಸಾಧನೆ ಅಂತ ಆರಂಭವಾದ ಕೂಡಲೆ ಈ ವಿಷಮತೆ ಅಥವಾ ಒಡಕು ಕಾಣಿಸುತ್ತದೆ. ಈ ಒಡಕನ್ನು ಕೆಲವರು ಕಂಡುಕೋತಾರೆ, ಕೆಲವರು ಕಂಡೂ ಕಾಣದಂತಿರುತ್ತಾರೆ !

ಎಚ್‌.ಎಲ್‌.ಪುಷ್ಪ
ಕನ್ನಡ ಅದ್ಯಾಪಕಿ, ಕವಿ

(ಸ್ನೇಹಸೇತು : ವಿಜಯ ಕರ್ನಾಟಕ)

ವಾದ ವಿವಾದ ಕೇಳಿದ್ರಲ್ಲಾ , ನೀವೇನಂತೀರಿ ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X