ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಹರೇಶ್ವರರ ಮನೇಲಿ ದಿಢೀರ್‌ ಕೂಟ

By Staff
|
Google Oneindia Kannada News
  • ಡಾ। ಬಿ. ವಿ. ಸುಧಾಮಣಿ, ಪ್ರಾಧ್ಯಾಪಕರು, ಇತಿಹಾಸ ವಿಭಾಗ,
    ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು.

    [email protected]
ಆ ‘ದಿಢೀರ್‌ ಸಂತೋಷಕೊಟ’ಕ್ಕೆ ಆಹ್ವಾನ ಬಂದಿದ್ದೊಂದು ಕುತೂಹಲ. ಈ ಬಗೆಯ ಸಂತೋಷಕೂಟಗಳ ರೂವಾರಿಗಳಾದ ಹರಿಹರೇಶ್ವರ ಹಾಗೂ ಅವರ ಧರ್ಮಪತ್ನಿ ನಾಗಲಕ್ಷ್ಮಿ ಯವರ ಮೈಸೂರು ಮನೆಯಲ್ಲಿ ಆಗಾಗ್ಗೆ ಸಾಹಿತ್ಯಾಸಕ್ತ ಗೆಳೆಯರ ಬಳಗ ಸೇರುತ್ತಿರುವುದನ್ನ ಕರ್ಣಾಕರ್ಣಿಯಾಗಿ ನಾನು ಈಗಾಗಲೇ ಕೇಳಿದ್ದೆ. ಅಂದಿನ ಸಮಾರಂಭದ ಕೇಂದ್ರ ಬಿಂದು ಆಗಿದ್ದವರು ದಟ್ಸ್‌ ಕನ್ನಡ ಡಾಟ್‌ ಕಾಂನ ಸಂಪಾದಕರಾದ ಎಸ್‌. ಕೆ. ಶಾಮಸುಂದರ್‌ರವರು. ಕಸ್ತೂರಿ, ಕನ್ನಡಪ್ರಭ, ಸಂಜೆವಾಣಿ ಮುಂತಾದ ಪತ್ರಿಕೆಗಳಲ್ಲಿ ಕೆಲಸಮಾಡಿ ಹೆಸರು ಮಾಡಿ, ಈಗ ಅಂತರ್ಜಾಲಪತ್ರಿಕೆಯಾದರ ನೇತೃತ್ವ ವಹಿಸಿ, ಇತ್ತೀಚಿಗೆ ತಾನೆ ಅಮೆರಿಕಾ ಪ್ರವಾಸ ಮಾಡಿ ಬಂದಿದ್ದವರು.

ಆ ಭಾನುವಾರ ಬೆಳಿಗ್ಗೆ ಹರಿಹರೇಶ್ವರ ಅವರ, ಮೈಸೂರಿನ ಸರಸ್ವತಿಪುರಂ ಮನೆಯಲ್ಲಿ ಸುಮಾರು 35 ಮಂದಿ ಸಮಾನ ಮನಸ್ಕರು, ಸಾಹಿತ್ಯಾಕಾಂಕ್ಷಿಗಳು, ಬರಹಗಾರರು, ವೈದ್ಯರು, ಗೃಹಿಣಿಯರು, ಪ್ರಾಧ್ಯಾಪಕರು (ನಿವೃತ್ತ ಹಾಗೂ ಹಾಲಿ) ಇತ್ಯಾದಿ ವಿವಿಧ ವೃತ್ತಿಗೆ ಸೇರಿದವರು ಆಗಮಿಸಿದ್ದರು. ವಾಸ್ತವವಾಗಿ ಇದೊಂದು ಪೂರ್ವಯೋಜಿತವಲ್ಲದ ತತ್‌ ಕ್ಷಣದ ಕಾರ್ಯಕ್ರಮ.

ಯಾರೆಲ್ಲ ಬಂದಿದ್ದರು ಗೊತ್ತ..

ಆವತ್ತು ಭಾನುವಾರ ಬೆಳಿಗ್ಗೆ ಹರಿಹರೇಶ್ವರ ಅವರ ಮನೆಗೆ ಹೋದೆ. ಆ ವೇಳೆಗೆ ಶಾಮಸುಂದರ್‌ ಅದಾಗಲೇ ಬಂದಿದ್ದರು. ಪರಸ್ಪರರ ಕಾಫಿ ಜೊತೆಗೆ ಪರಿಚಯವಾಯಿತು. ಒಬ್ಬೊಬ್ಬರಾಗಿ ಆ ವೇಳೆಗೆ ಸಾಕಷ್ಟು ಜನ ಸೇರಿದರು. ಹರಿಹರೇಶ್ವರರವರು ಪರಸ್ಪರ ಎಲ್ಲರನ್ನೂ ಪರಿಚಯಿಸಿದರು. ಆಗ ತಿಳಿಯಿತು: ಹಿಂದಿನ ರಾತ್ರಿ 9.00 ರ ವೇಳೆಯಲ್ಲಿ ಶಾಮಸುಂದರ್‌ ಬೆಂಗಳೂರಿನಿಂದ ಮೈಸೂರಿಗೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಂತೆಯೇ, ಹರಿಹರೇಶ್ವರ ಅವರ ಮನೆಗೆ ಫೊನ್‌ ಮಾಡಿ ಅವರ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರಂತೆ. ಸುಮಾರು ಆರು ತಿಂಗಳಿಂದ, ಹರಿಹರೇಶ್ವರರು ಅಮೆರಿಕಾದಿಂದ ಮೈಸೂರಿಗೆ ತಮ್ಮ ವಾಸಸ್ಥಾನ ಬದಲಾಯಿಸಿದಾಗಿನಿಂದ ಶಾಮಸುಂದರ ಅವರು ಮನೆಗೆ ಭೇಟಿ ನೀಡುವುದಾಗಿ ಹೇಳಿ ಹೇಳಿ, ತಮ್ಮ ಕಾರ್ಯಕ್ರಮವನ್ನು ಮುಂದೂಡುತ್ತಾ ಬಂದು, ಅಂದು ಇದ್ದಕ್ಕಿದ್ದಂತೆ ಪೂರ್ವಯೋಜಿತವಾಗಿ ತಿಳಿಸದೆ, ಮೈಸೂರಿಗೆ ಹೊರಟುಬಿಟ್ಟಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆಯೇ ಹರಿಹರೇಶ್ವರ ದಂಪತಿಗಳ ಬುದ್ಧಿ ನಾಲ್ಕಾರು ಜನರನ್ನು ಸೇರಿಸುವತ್ತ ಚುರುಕಾಯಿತು. ತಕ್ಷಣವೇ ಸಮಾನ ಹಿತಾಸಕ್ತಿ / ಮನಸ್ಕರಾದವರಿಗೆಲ್ಲಾ ರಾತ್ರಿ 9.30 ರಿಂದ 10.30 ರ ವರೆಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಆಹ್ವಾನವಿತ್ತರು. ಎಲ್ಲರನ್ನೂ ‘‘ನಿಮ್ಮ ಮನೆಯಲ್ಲಿ ನೀವು ಉಪಾಹಾರ ಸೇವಿಸುವುದು ಬೇಡ; ಅದು ಇಲ್ಲೇ ಆಗಲಿ’’ -ಎಂದು ತಿಳಿಸಿ ಜನರನ್ನು ಕರೆಯಲಾರಂಭಿಸಿದರಂತೆ.

ಸಂಘಟನಾ ಚತುರ ಹರಿ ದಂಪತಿಗಳು

Shikipura Harihareshwara and Nagalakshmi Harihareshwaraನಾಗಲಕ್ಷ್ಮಿಯವರು ಮೆನು ಪಟ್ಟಿ ತಯಾರಿಸಿದರು. ಪತಿ-ಪತ್ನಿಯರಿಬ್ಬರೂ ಒಬ್ಬರಿಗಿಂತ ಒಬ್ಬರು ಚುರುಕು, ಸಂಘಟನಾ ಚತುರರು. ಸುಮಾರು 25 ವರ್ಷಗಳ ಕಾಲ ಅಮೆರಿಕಾದಲ್ಲಿದ್ದು ಅಲ್ಲಿಯ ಬದುಕಿಗೆ ಹೊಂದಿಕೊಂಡಿದ್ದು, ಈ ದಂಪತಿಗಳು ಇತ್ತೀಚೆಗಷ್ಟೇ ಮೈಸೂರಿಗೆ ಬಂದು ನೆಲೆಸಿ ಇಲ್ಲಿ ಸಾಕಷ್ಟು ಜನರನ್ನು ತಮ್ಮ ಸಾಹಿತ್ಯ / ಸಮಾಜ ಕಾರ್ಯದತ್ತ ಸೆಳೆದಿದ್ದಾರೆಂದರೆ ಅವರ ಸಂಘಟನಾ ಚಾತುರ್ಯವನ್ನು ಎಂತಹವರೂ ಮೆಚ್ಚಲೇಬೇಕು.

ಸುಮಾರು 11.00 ಘಂಟೆ ವೇಳೆಗೆ ಎಲ್ಲರೂ ಅವರ ಮನೆಯ ಮಹಡಿ ಮೇಲಿನ ವಿಶಾಲವಾದ ಸಭಾಂಗಣದಲ್ಲಿ ಸೇರಿದ್ದಾಯಿತು. ಆ ಕಾರ್ಯಕ್ರಮ ಬಹಳ ಅನೌಪಚಾರಿಕ (ಇನ್‌ಫಾರ್ಮಲ್‌) ಆಗಿದ್ದರೂ ಪುಷ್ಪಾರವರ ಪ್ರಾರ್ಥನೆಯಾಂದಿಗೆ ಸಂತೋಷಕೂಟದ ಶುಭಾರಂಭವಾಯಿತು. ಸುಮಧುರ ಕಂಠಸಿರಿಯಿಂದ ಪುಷ್ಪಾರವರು ದೇವರನಾಮ ಹಾಡಿದರು. ನಂತರ ಸ್ವಪರಿಚಯ ಅನಿವಾರ್ಯವಾಗಿತ್ತು, ಅದಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಸಂತೋಷಕೂಟದಲ್ಲಿ ಅತ್ಯಂತ ಹಿರಿಯ ದಂಪತಿಗಳಾದ ಕೆ. ಎಲ್‌. ಸುಬ್ಬರಾಯರು ಮತ್ತು ಅವರ ಶ್ರೀಮತಿ ಸುಬ್ಬಲಕ್ಷಮ್ಮನವರೂ ಆಗಮಿಸಿದ್ದುದು ಕಾರ್ಯಕ್ರಮಕ್ಕೆ ಶೋಭೆ ಉಂಟುಮಾಡಿತ್ತು.

ಸಮಾನ ಮನಸ್ಕರ ಮಂಥನ

ಡಾ। ಎ. ಎಸ್‌. ಚಂದ್ರಶೇಖರ್‌, ಮುಂಬಯಿಯಲ್ಲಿದ್ದ ಭಾರತ ಸರ್ಕಾರದ ಜವಳಿ ನಿರ್ಯಾತ ಪ್ರವರ್ಧನ ಮಂಡಳಿಯ ನಿವೃತ್ತ ಉಪನಿರ್ದೇಶಕ ಬಿ. ಎನ್‌. ವಿಶ್ವನಾಥ್‌, ಮುಂಬಯಿಯ ಬಾಭಾ ಆಟಾಮಿಕ್‌ ರಿಸರ್ಚ್‌ ಸೆಂಟರ್‌ನ ನಿವೃತ್ತ ವಿಜ್ಞಾನಿ ಬಿ. ಎನ್‌. ಸೋಮಸುಂದರ, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಭೌತಶಾಸ್ತ್ರ ಪ್ರಾಧ್ಯಾಪಕ ನರಸಿಂಹಪ್ರಸಾದ್‌, ಸಿವಿಲ್‌ ಇಂಜನಿಯರ್‌ ಬಿಂದುಮಾಧವ, ಕರ್ನಾಟಕ ಬ್ಯಾಂಕ್‌ ಮ್ಯಾನೇಜರ್‌ ರಾಮಚಂದ್ರ, ಅವರ ಪತ್ನಿ ಉಮಾರಾಮಚಂದ್ರ, ಸಂಗೀತ ವಿದ್ವಾನ್‌ ಎಂ. ಆರ್‌. ಕೃಷ್ಣ, ಶಾಶ್ವತಿ ಪ್ಲಾಸ್ಟಿಕ್ಸ್‌ ಕಾರ್ಖಾನೆಯ ಮಾಲಿಕರಾದ ವೇಣುಗೋಪಾಲ್‌ ಮತ್ತು ಶಕುಂತಲಾ ವೇಣುಗೋಪಾಲ್‌, ಪುಷ್ಪಾ ಸುಬ್ರಹ್ಮಣ್ಯ, ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗದ ಉಪ ನಿರ್ದೇಶಕ ಹಾಗು ಕನ್ನಡ ಕ್ರಿಯಾ ಸಮಿತಿಯ ಸ.ರಾ.ಸುದರ್ಶನ್‌, ಮೈಸೂರು ರೋಟರಿ ಉತ್ತರ ಸಂಸ್ಥೆಯ ಈಗಿನ ಅಧ್ಯಕ್ಷ ಅ.ಚ. ಅಶೋಕಕುಮಾರ್‌ ಮುಂತಾದವರು ಆಗಮಿಸಿದ್ದರು. ಕೆಲವು ಬಾಲ್ಯ ಸ್ನೇಹಿತರನ್ನು ಬಿಟ್ಟರೆ ಅಲ್ಲಿ ನೆರೆದಿದ್ದವರಲ್ಲಿ ಶೇ. 75 ರಷ್ಟು ಮಂದಿ ಹರಿಹರೇಶ್ವರರಿಗೆ ಇತ್ತೀಚೆಗಷ್ಟೇ ಪರಿಚಯವಾದವರಾಗಿದ್ದೆವು. ಆದರೆ ಅದರ ಪರಿವೆಯೇ ಇಲ್ಲದ ಎಲ್ಲರೂ ಸುಮಾರು ವರ್ಷಗಳಿಂದ ಪರಿಚಿತರೇನೋ ಎನ್ನುವಷ್ಟರ ಮಟ್ಟಿಗೆ ಹರಿಹರೇಶ್ವರ ದಂಪತಿಗಳು ಎಲ್ಲರನ್ನೂ ನಡೆಸಿಕೊಂಡುದುದು ಸೋಜಿಗವೆನಿಸಿತು.

ಸ್ವಪರಿಚಯದ ನಂತರ ಅದಷ್ಟೇ ಸಾಲದೆಂಬಂತೆ ಹರಿಹರೇಶ್ವರರವರು ಪುನಃ ಪ್ರತಿಯಾಬ್ಬರ ವೃತ್ತಿ, ಪ್ರವೃತ್ತಿಗಳ ಪರಿಚಯ ಮಾಡಿಕೊಟ್ಟರು. ಕಡಿಮೆ ಕಾಲಾವಕಾಶದಲ್ಲಿ ಎಲ್ಲರ ಬಗ್ಗೆಯೂ ಹೆಚ್ಚಾಗಿಯೇ ತಿಳಿದಿದ್ದರು ಎನ್ನಿಸಿತು. ಇದಾದ ನಂತರ ‘‘ಅಜೆಂಡಾ ಏನೂ ಇಲ್ಲ; ಯಾರಾದರೂ ಏನಾದರೂ ಮಾತನಾಡಬಹುದು’’-ಎಂದರು.

ಅಂತರ್‌ಜಾಲದಲ್ಲಿ ಕನ್ನಡ : ಕಿರು ಪರಿಚಯ

S.K.Shamasundaraಆಗ ಕಾರ್ಯಕ್ರಮದ ಕೇಂದ್ರಬಿಂದು ಎಸ್‌.ಕೆ.ಶಾಮಸುಂದರ್‌ ‘ನಾನು ಮಾತಾಡ್ತೀನಿ’ ಎಂದರು. ಆರಂಭದಲ್ಲಿ, ಶಾಮ್‌ ರವರು ‘‘ ತಾವು ಇದ್ದಕ್ಕಿದ್ದಂತೆ ಹೊರಟು ಬಂದಾಗ್ಯೂ ಹರಿಯವರು ಇಷ್ಟೊಂದು ಜನರನ್ನು ಸೇರಿಸಿರುವುದು ತಮಗೆ ಆಶ್ಚರ್ಯ ಹಾಗೂ ಸಂತೋಷಗಳೆರಡನ್ನೂ ಏಕಕಾಲದಲ್ಲಿ ಉಂಟುಮಾಡಿವೆ’’ -ಎಂದು ತಿಳಿಸಿದರು. ತಾವು ಸಂಪಾದಕರಾಗಿರುವ ದಟ್ಸ್‌ ಕನ್ನಡ ಡಾಟ್‌ ಕಾಂ ಬಗ್ಗೆ ಸರಳವಾಗಿ, ಸಂಕ್ಷಿಪ್ತವಾಗಿ ವಿವರಿಸಿದರು. ಆವರೆವಿಗೂ ನನ್ನನ್ನೂ ಸೇರಿದಂತೆ ಅಲ್ಲಿ ನೆರೆದಿದ್ದ ಹಲವರಿಗೆ ಡಾಟ್‌ ಕಾಂ ಬಗ್ಗೆ ಏನೂ ತಿಳಿದಿರಲಿಲ್ಲ. ದಟ್ಸ್‌ಕನ್ನಡ ಚಾಟ್‌ಕಾಂ ಆರಂಭವಾದ ರೀತಿ, ಅದಕ್ಕೆ ಶಾಮ್‌ ಮತ್ತು ಅವರ ತಂಡ ಪಟ್ಟ ಪರಿಶ್ರಮ, ಹೇಗೆ ಹೊರದೇಶದ ಕನ್ನಡಿಗರಿಗೆ ‘ದಿನಕ್ಕೆ ಅನೇಕ ಬಾರಿ ಸಿಗುವ ಆತ್ಮೀಯ ಕನ್ನಡ ಪತ್ರಿಕೆಯಾಗಿ ಇಂದು ಲಭ್ಯವಾಗುತ್ತಿದೆ’- ಎಂಬುದನ್ನು ಕೇಳಿ ಅಚ್ಚರಿಯಾಯಿತು. ಅದರ ಮೂಲಕ ನಿತ್ಯ ‘ ಆಮದು ರಫ್ತು ’ ಆಗುತ್ತಿರುವ ಕನ್ನಡಿಗರ ಕುರಿತ ಮಾಹಿತಿ ಮತ್ತು ಕನ್ನಡ ಸಂವೇದನೆ ಬಗೆಗೂ ಸೂಕ್ಷ್ಮವಾಗಿ ಅವರು ತಿಳಿಸಿದರು. ಈ ಇಂಟರ್‌ನೆಟ್‌ ಪತ್ರಿಕೆಗೆ ಲಕ್ಷಾಂತರ ಕನ್ನಡಿಗರ ಪ್ರತಿಕ್ರಿಯೆ ಏನೆಂಬುದನ್ನು ಶಾಮ್‌ ಅವರು ತಿಳಿಸಿದಾಗ ನಾನಂತೂ ಮೂಕಳಾದೆ.

ವಾಸ್ತವವಾಗಿ ಹೇಳಬೇಕೆಂದರೆ, ಹೊರದೇಶಗಳಲ್ಲಿರುವ ಕನ್ನಡಿಗರು ಎಲೆಮರೆ ಕಾಯಿಗಳಂತಿದ್ದು ತಮ್ಮ ದೇಶ ಹಾಗೂ ನಾಡಿನ ಸೇವೆಗೆ ತಮ್ಮ ಅಮೂಲ್ಯ ಸಮಯವನ್ನು ಮೀಸಲಾಗಿಟ್ಟಿದ್ದಾರೆಂಬುದನ್ನು ಶಾಮ್‌ ದೃಷ್ಟಾಂತಗಳ ಮೂಲಕ ಮನವರಿಕೆ ಮಾಡಿದರು. ಸುಮಾರು 25 - 30 ನಿಮಿಷಗಳ ಕಾಲ ಶಾಮ್‌ ಮಾತನಾಡಿದ ನಂತರ ಪ್ರಶ್ನೋತ್ತರ ಆರಂಭವಾಯಿತು. ಕನ್ನಡದ ಉಳಿವಿಗಾಗಿ ಹೋರಾಡುತ್ತಿದ್ದೇವೆಂದು ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿರುವವರಿಗೂ, ಪ್ರಚಾರದ ಗೊಡವೆಗೇ ಹೋಗದೆ, ಅದರ ಅಗತ್ಯ ಇಲ್ಲವೆಂದೇ ಭಾವಿಸಿ, ಅಕ್ಷರಶಃ ಕನ್ನಡ ಭಾಷೆ ಹಾಗೂ ಕನ್ನಡಮ್ಮನ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಹೊರದೇಶದಲ್ಲಿರುವ ಕನ್ನಡಿಗರ ಬಗ್ಗೆ ನಮಗೆ ಹೆಮ್ಮೆಯೆನಿಸಿತು.

ಹೊಂಬೆಳಕಿನ ಹೊನಲು ಹರಿದದ್ದು : ಇತ್ತೀಚೆಗೆ ಡೆಟ್ರಾಯಿಟ್‌, ಮಿಷಿಗನ್‌ ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ಅಮೆರಿಕಾಕ್ಕೆ ತಾವು ಹೋದಾಗಿನ ಅನುಭವವನ್ನೂ ಶಾಮ್‌ ನಮ್ಮೊಡನೆ ಹಂಚಿಕೊಡರು. ಆ ಸಂದರ್ಭದಲ್ಲಿ ನಾಗಲಕ್ಷ್ಮಿಯವರು ಅಮೆರಿಕಾದ ದೂರ-ದೂರದ ಪ್ರದೇಶಗಳಿಗೂ ಶಾಮ್‌ ಅವರನ್ನು ತಮ್ಮ ಕಾರಿನಲ್ಲಿ ತಾವೇ ಡ್ರೈವ್‌ ಮಾಡಿಕೊಂಡು ಕರೆದೊಯ್ದು ಅವರ ಕಾರ್ಯಗಳಿಗೆ ಸಹಕಾರಿಯಾದದ್ದನ್ನೂ ನೆನೆದು ಅವರಿಗೆ ಕೃತಜ್ಞತೆ ಸಲ್ಲಿಸಿದರು. ‘‘ಹರಿಯವರು ಶಾಮ್‌ ರವರಿಗೆ ಪರಿಚಯವಾದದ್ದೇ ಅವರ ಡಾಟ್‌ ಕಾಂ ಮೂಲಕ’’- ಎಂದರು. ಅವರ ಇಂಟರ್‌ನೆಟ್‌ ಪತ್ರಿಕೆಗೆ ಮೊದಲು ಪ್ರತಿಕ್ರಿಯೆ ನೀಡಿದವರೇ ಹರಿಯವರು. ಆ ಮೂಲಕ ಆದ ಪರಿಚಯ ಅವರಿಬ್ಬರ ನಡುವೆ ಗಾಢ ಸ್ನೇಹ ಉಂಟಾಗಲು ಕಾರಣವಾಯಿತು. ಇದಕ್ಕೆ ಕಾರಣ ಹರಿ ಹಾಗೂ ಶಾಮ್‌ರವರ ಸ್ನೇಹ ಸ್ವಭಾವ ಎನ್ನಲು ಅಡ್ಡಿಯಿಲ್ಲ. ಮುಂದೆ ಹರಿಯವರು ಶಾಮ್‌ ಸಂಪಾದಕತ್ವದ ಡಾಟ್‌ ಕಾಂಗೆ ‘ಹೊಂಬೆಳಕ ಹೊನಲು’ ಎಂಬ ಅಂಕಣ ಬರೆಯಲಾರಂಭಿಸಿದರು. ಆ ಅಂಕಣದಲ್ಲಿ ಪ್ರಕಟವಾದ ಪ್ರಬಂಧಗಳ ಸಂಕಲನವೇ ಬೆಂಗಳೂರಿನ ಸಪ್ನಾ ಬುಕ್‌ ಹೌಸ್‌ ಅವರು ಪ್ರಕಟಿಸಿರುವ ‘ಮಾತಿನ ಮಂಟಪ’ ಹೊತ್ತಿಗೆಯಾಗಿ ಹೊರಬಂದಿದೆ.

ಸಾಗರದಾಚೆ ಮನ್ವಂತರದ ಬಯಕೆ : ಶಾಮ್‌ ಮಾತನಾಡುತ್ತಾ, ಒಂದು ಸ್ವಾರಸ್ಯಕರವಾದ ಸಂಗತಿಯನ್ನು ತಿಳಿಸಿದರು: ಪೂರ್ವ ಆಫ್ರಿಕಾದ ಕಂಪಾಲದಲ್ಲಿ ಇಲ್ಲಿಂದ ವಲಸೆ ಹೋಗಿ ನೆಲೆಸಿರುವ 69 ಕುಟುಂಬಗಳಿವೆ.. ಅವರಲ್ಲಿ ಒಬ್ಬರು, ತಮ್ಮ 89ರ ಇಳಿವಯಸ್ಸಿನ ತಾಯಿಯವರನ್ನು ತಾವಿರುವ ಸ್ಥಳಕ್ಕೆ ಕರೆಸಿಕೊಂಡರು. ಆ ದೇಶದ ಪ್ರೇಕ್ಷಣೀಯ ಸ್ಥಳಗಳಿಗೆ ಕೊಂಡೊಯ್ದು ಸುತ್ತಿಸಿದರೂ, ಆ ವಯೋವೃದ್ಧೆಗೆ ಮಾನಸಿಕ ನೆಮ್ಮದಿ ಸಿಗಲಿಲ್ಲ. ಅವರಿಗೆ ಇಲ್ಲಿದ್ದಾಗ ದಿನವೂ ನೋಡುತ್ತಿದ್ದ, ಕನ್ನಡ ಧಾರಾವಾಹಿಗಳಾದ ‘ಮನ್ವಂತರ’ ಹಾಗೂ ‘ಪಾ.ಪ. ಪಾಂಡು’ಗಳನ್ನು ಅಲ್ಲೂ ನೋಡುವ ಬಯಕೆ! ಅವರಮ್ಮನ ಈ ಮಹದಾಸೆಯನ್ನು ಪೂರೈಸಲು, ಆತ ನಮ್ಮ ಶಾಮಸುಂದರ್‌ ಅವರನ್ನು ಸಂಪರ್ಕಿಸಿದರು. ಇದರ ಪರಿಣಾಮವಾಗಿ, ಅಲ್ಲಿರುವ ಸುಮಾರು ಅರವತ್ತು ಕನ್ನಡ ಕುಟುಂಬಗಳೊಂದಿಗೆ ಈ ಕನ್ನಡಭಿಮಾನಿ ಮಾತೆಯೂ, ಅಲ್ಲಿನ ದೂರದರ್ಶನದ ಒಂದು ಖಾಸಗಿ ಛಾನೆಲ್‌ನಲ್ಲಿ ‘ಮನ್ವಂತರ’ ಪ್ರಸಾರವಾಗುವಂತೆ ಪ್ರಯತ್ನಪಡುತ್ತಿದ್ದಾರಂತೆ. ಇದನ್ನು ಶಾಮ್‌ ಅವರು ತಿಳಿಸಿದಾಗ, ಕೇಳುತ್ತಿದ್ದಾಗ ನಮಗೆಲ್ಲಾ ಅಚ್ಚರಿಯಾಯಿತು. ಈ ಪ್ರಯತ್ನದಲ್ಲಿ ಸಫಲತೆ ಉಂಟಾದಲ್ಲಿ ಅದೊಂದು ಅದ್ಭುತ ಅಭೂತಪೂರ್ವ ಸಾಹಸವೇ ಸರಿ ಎಂಬುದಾಗಿ ಹರಿಯವರು ಉದ್ಗರಿಸಿದರು. (ಇತ್ತೀಚಿಗೆ ತಿಳಿದುಬಂದಂತೆ, ಆ ತಾಯಿಯ ಆಕಾಂಕ್ಷೆ ಈಡೇರಿತೆಂದು ನಿಮಗೆಲ್ಲ ತಿಳಿಸಲು ಹರ್ಷವಾಗುತ್ತಿದೆ!)

ಸಭಿಕರ ಪರಿಚಯ/ ವಿಚಾರ ವಿನಿಮಯ

ಸಭಿಕರು ಸಂವಾದದಲ್ಲಿ ತೊಡಗಿದಾಗ, ತಮ್ಮ ಇತಿವೃತ್ತಗಳನ್ನು ಹೇಳಿಕೊಳ್ಳಲಾರಂಭಿಸಿದರು. ಇದರ ಕೆಲವು ತುಣುಕುಗಳು: ರಾಮಚಂದ್ರ ಅವರು, ಉದ್ಯೋಗಿಯಾಗಿ ವಿಜ್ಞಾನಿ. ಆದರೆ ಅವರ ನಿವೃತ್ತ ಜೀವನ ಇತಿಹಾಸದೆಡೆಗೆ ಅವರನ್ನು ಸೆಳೆದಿದೆ. ಅವರು ತಾವು ವಿಜ್ಞಾನಿಯಾಗುವ ಬದಲು ಇತಿಹಾಸಕಾರರಾಗಬೇಕಿತ್ತೆಂದು ತಮ್ಮ ಮನದಾಳದ ಆಸೆಯನ್ನು ಹೊರಗೆಡವಿದರು. ಭಾರತೀಯರು ಅತ್ಯಂತ ಬುದ್ಧಿವಂತರು. ವಿಜ್ಞಾನ, ಗಣಿತ ಮುಂತಾದ ಹಲವು ವಿಷಯಗಳಲ್ಲಿ ಪರಿಣಿತರಾಗಿದ್ದರು. ಶೂನ್ಯ (‘0’) ವನ್ನು ಕಂಡುಹಿಡಿದವರು ಭಾರತೀಯರು. ಅದಿಲ್ಲದಿದ್ದರೆ ಕಾಲಾನುಕಾಲಕ್ಕೆ ಹೊರಗಿನವರ ಕಂಪ್ಯೂಟರ್‌ ಆವಿಷ್ಕಾರ ಹೇಗಾಗುತ್ತಿತ್ತು?- ಎಂದರು. ನಮ್ಮ ವೇದಗಳು, ಮಹಾಕಾವ್ಯಗಳಲ್ಲಿ ಬರುವ ಅನೇಕ ಅಂಶಗಳ ಬಗ್ಗೆ ಗಮನ ಸೆಳೆದು ಪುಷ್ಪಕ ವಿಮಾನ, ಸುದರ್ಶನ ಚಕ್ರ ಇವುಗಳ ಅಂದಿನ ಬಳಕೆ, ಅದಕ್ಕೆ ಇಂದಿನ ಅರ್ಥ ಇತ್ಯಾದಿ ಸೂಕ್ಷ್ಮವಾಗಿ ವಿವರಿಸಿದರು.

ಮೈಸೂರಿನ ಖ್ಯಾತ ವೈದ್ಯ ಮತ್ತು ಸಮಾಜ ಸೇವಕರಾದ ಡಾ. ಚಂದ್ರಶೇಖರ್‌ ಅವರು, ಈ ಗಂಭೀರ ವಾತಾವರಣವನ್ನು ತಿಳಿಯಾಗಿಸಲು ಒಂದು ಹಾಸ್ಯ ಚಟಾಕಿ ಹಾರಿಸಿದರು. ಅವರು ಹೇಳಿದರು: ಒಬ್ಬ ಶಾಲಾ ಮಾಸ್ತರರು ಪಾಠವೊಂದಕ್ಕೆ ಪೀಠಿಕೆ ಹಾಕಬೇಕಾಗಿತ್ತಂತೆ. ಅವರು ಪೀಠಿಕೆ ಹಾಕಿದ್ದು ಹೀಗಂತೆ: ತರಗತಿಯಲ್ಲಿ ಪಾಠಕ್ಕೆ ಮೊದಲು, ಕೆಲವು ಪ್ರಶ್ನೆ ಹಾಕುವುದರ ಮೂಲಕ ಮಕ್ಕಳಿಂದ ಉತ್ತರ ಪಡೆಯಲಾರಂಭಿಸಿದರಂತೆ.

ಮೇಷ್ಟರು: ನೀವು ಸೈಕಲ್ಲನ್ನು ನೋಡಿದ್ದಿರಾ?
ಮಕ್ಕಳು: ನೋಡಿದ್ದೀವಿ, ಸಾರ್‌
ಮೇಷ್ಟರು: ಅದರಲ್ಲಿ ಯಾವ ಯಾವ ಭಾಗಗಳು ಇವೆ?
ಮಕ್ಕಳು: ಹಿಡಿ, ಕಡ್ಡಿಗಳು, ಚಕ್ರ, ಟೈರು ಇತ್ಯಾದಿ.
ಮೇಷ್ಟರು: ಟೈರ್‌ನ ಒಳಗೆ ಏನು ಇರತ್ತೆ?
ಮಕ್ಕಳು: ಟ್ಯೂಬು ಸಾರ್‌.
ಮೇಷ್ಟರು: ಟ್ಯೂಬ್‌ ಒಳಗೆ ಏನಿರತ್ತೆ?
ಮಕ್ಕಳು: ಗಾಳಿ, ಸಾರ್‌.
ಮೇಷ್ಟರು: ಗಾಳಿಯನ್ನು ಟ್ಯೂಬ್‌ ಒಳಗೆ ಹೇಗೆ ಹಾಕುವುದು?
ಮಕ್ಕಳು: ‘ಪಂಪಿ’ನಿಂದ, ಸಾರ್‌.
ಮೇಷ್ಟರು: ಹ್ಞಾ! ಈಗ ನಾವು ಅಂತಹ ‘ಪಂಪ’ನ ಬಗ್ಗೆ ತಿಳಿದುಕೊಳ್ಳೋಣ! - ಎಂದರು.

ಸ್ವಾರಸ್ಯವೇನೆಂದರೆ, ಈ ಪ್ರಶ್ನೋತ್ತರ ಕ್ರಮದಲ್ಲಿ, ಮಾಸ್ತರರಿಗೆ, ‘ಪಂಪ’ನ ಹೆಸರು ಮಕ್ಕಳ ಬಾಯಲ್ಲಿ ಬರಿಸಬೇಕಾಗಿತ್ತು. ಅವರ ಪೀಠಿಕಾ ಭಾಗ ಸಮಂಜಸವಲ್ಲದಿದ್ದರೂ, ಮಕ್ಕಳಿಗೆ ಸೈಕಲ್‌ ಪಂಪ್‌ ಮೂಲಕ ‘ಪಂಪ’ನ ಹೆಸರು ಮನದಲ್ಲಿ ಉಳಿಯಿತು!

ಇದಾದ ನಂತರ ವಿದ್ವಾನ್‌ ಎಂ. ಆರ್‌. ಕೃಷ್ಣ ರವರು ಸೊಗಸಾಗಿ ಪುರಂದರ ದಾಸರ ಕೀರ್ತನೆ ಹಾಡಿ ಎಲ್ಲರ ಮನರಂಜಿಸಿದರೆ, ಸುಬ್ಬಲಕ್ಷಮ್ಮ ಸುಬ್ಬರಾವ್‌ರವರು ಸಂಪ್ರದಾಯದ ಹಾಡೊಂದನ್ನು ಹೇಳುವುದರ ಮೂಲಕ ಎಲ್ಲರ ಗಮನ ಸೆಳೆದರು.

ಅನ್ನದಾತೋ ಸುಖೀಭವ

ನಾಗಲಕ್ಷ್ಮಿಯವರು ಸಭೆಯಲ್ಲೂ ಇದ್ದು, ಅಡಿಗೆಮನೆಯಲ್ಲೂ ಇದ್ದು, ಇತರರ ಸಹಕಾರದೊಂದಿಗೆ ತಯಾರಿಸಿದ್ದ ಪುಷ್ಕಳವಾದ ಊಟವನ್ನು (ಅವರು ಅದನ್ನು ಉಪಾಹಾರ ಎಂದಿದ್ದರು!) ಕಾರ್ಯಕ್ರಮದ ಅಂತ್ಯದಲ್ಲಿ ನೀಡಿದರು. ಬಿಸಿಬೇಳೆಭಾತ್‌, ಹೆಸರುಕಾಳು ಉಸುಳಿ, ಕೋಸಂಬರಿ, ಮಾವಿನ ಹಣ್ಣಿನ ರಸಾಯನ, ದೊಡ್ಡ ಗಾತ್ರದ ಬೆಳ್ಳಗಿನ ಫೇಣಿ ವಾಹ್‌ ! ತುಂಬ, ತುಂಬಾ ಚೆನ್ನಾಗಿತ್ತು. ಅವರು ಓರಣವಾಗಿ ಬಡಿಸಿದ ರೀತಿ ಗೃಹಿಣಿಯೂ ಆದ ನನ್ನ ಗಮನ ಸೆಳೆಯಿತು.

ಅರಿಶಿನ ಕುಂಕುಮದ ಜೊತೆ ಪುಸ್ತಕ !

ಹರಿಹರೇಶ್ವರ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆಲ್ಲಾ ತಮ್ಮ ಕೃತಿ ‘ಮಾತಿನ ಮಂಟಪ’ವನ್ನು ನೀಡಿದರು. ನಾನು ಈ ದಂಪತಿಗಳಲ್ಲಿ ಕಂಡ ಮೆಚ್ಚುಗೆಯ ಅಂಶಗಳಲ್ಲಿ ಒಂದೆಂದರೆ, ಹೆಣ್ಣುಮಕ್ಕಳಿಗೆ/ಹೆಂಗಸರಿಗೆ ಅರಿಶಿನ ಕುಂಕುಮ ನೀಡುವಾಗ, ಪ್ರತಿ ಕುಟುಂಬಕ್ಕೂ ಯಾರಾದರೂ ಒಬ್ಬ ಕವಿ/ಸಾಹಿತಿಗಳ ಕೃತಿಯಾಂದನ್ನು ಉಡುಗೊರೆಯಾಗಿ ನೀಡಿ, ಕನ್ನಡ ಕೃತಿಗಳನ್ನು ಓದಲು ಅನುವು ಮಾಡಿಕೊಡುತ್ತಿದ್ದಾರೆ. ಹೀಗಾಗಿ, ಹರಿಹರೇಶ್ವರ ದಂಪತಿಗಳು ಎಲ್ಲಿದ್ದರೂ ಎಲೆಮರೆ ಕಾಯಿಗಳಂತಿದ್ದು, ಕನ್ನಡಮ್ಮನ ಸೇವೆಯನ್ನು ನಿರಂತರ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಶಾಮ್‌ ರವರ ಗೌರವಾರ್ಥವಾಗಿ ಹರಿಹರೇಶ್ವರ ದಂಪತಿಗಳು ಏರ್ಪಡಿಸಿದ್ದ ಈ ‘ದಿಢೀರ್‌ ಸಂತೋಷಕೂಟವು ಹಲವು ರೀತಿಗಳಲ್ಲಿ ‘ಪ್ರಯೋಜನ ಕೂಟವೂ’ ಆಯಿತೆಂದು ಬರೆಯಲು ಹರ್ಷಿಸುತ್ತೇನೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X