ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇತನ್‌ ನಾಡಿಗೇರ್‌, ಮುಕುಂದ ತೇಜಸ್ವಿ

By Staff
|
Google Oneindia Kannada News

Ramesh Bhat‘ಭಿಕ್ಷುಕರಿಗೆ ಬೇರೆ ಆಯ್ಕೆಯಿಲ್ಲ ಅನ್ನೋ ಹಾಗಾಗಿದೆ ನಮ್ಮ ಪಾಡು’
ನಾಯಕನಾಗಿ ಹೆಸರು ಮಾಡುವ ಕನಸು ಕಂಡ ರಮೇಶ್‌ ಭಟ್‌ ಆಮೇಲೆ ಹಾಗೆ ಬಂದು ಹೀಗೆ ಹೋಗುವ ಪಾತ್ರವನ್ನೂ ಒಪ್ಪಿಕೊಂಡವರು. ಇವತ್ತಿಗೂ ಅವರು ಹಾಗೇ ಇದ್ದಾರೆ. ಯಾಕೆ ಅಂತ ಕೇಳಿದರೆ, existence problem ಅಂತಾರೆ.

ನೋಡಿ ಸ್ವಾಮಿ ನಾವಿರೋದೇ ಹೀಗೆ ಎಂದು ರಮೇಶ್‌ ಭಟ್ಟರು ಹೇಳಿ ಸುಮಾರು 20 ವರ್ಷಗಳೇ ಕಳೆದಿವೆ. ಈಗಲೂ ಅವರು ಬದಲಾಗಿಲ್ಲ. ಸದಾ ಮುಖದಲ್ಲಿ ಮಂದಹಾಸ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಜಾಯಮಾನದ ಭಟ್ಟರು ಚಿತ್ರರಂಗದಲ್ಲಿ ಪ್ರಚಾರವಿಲ್ಲದೇ, ಯಾರ ತಂಟೆಗೂ ಹೋಗದೆ ಸಂತೋಷಪಟ್ಟವರು.

ಇಂತಿಪ್ಪ ಭಟ್ಟರು ಪೋಷಕ ಪಾತ್ರಗಳಲ್ಲೇ ತೃಪ್ತಿ ಕಂಡುಕೊಳ್ಳೋಕೆ ಶುರುಮಾಡಿ ವರ್ಷಗಳೇ ಆಗಿವೆ. ಆದರೂ ಭಟ್ಟರು ನಟನೆಯ ಬಾಣ ಬಿಟ್ಟರು ಅನ್ನೋದಂತೂ ಖರೆ. ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ಯ ಪ್ರೇಮಿ ಕಲ್ಲೇಶ್‌ ನುಗ್ಗೇಹಳ್ಳಿ, ‘ಗಣೇಶನ ಮದುವೆ’ಯ ಬೀರಿಗೊಂದು ಐಡಿಯಾ ತಲೆಯ ಶಾಸ್ತ್ರಿ , ‘ನಿಷ್ಕರ್ಷ’ದ ಸಾಹಸಿ ಗುಂಡಣ್ಣ, ‘ಸಿಪಾಯಿ’ಯ ಕಾಮುಕ ಜಮೀನ್ದಾರ, ‘ಮಿಂಚಿನ ಓಟ’, ‘ಆಕ್ಸಿಡೆಂಟ್‌’ನ ಅಸಾಯಕ ಪೋಲಿಸ್‌ ಅಧಿಕಾರಿ- ಹೀಗೆ ಭಟ್ಟರು ನೆನಪಾಗಲು ಸಾಕಷ್ಟು ನೆವಗಳಿವೆ. ನಾಯಕ, ಉಪ ನಾಯಕ, ಪೋಷಕ ನಟ, ಖಳನಟ- ಇಂಥಾ ಬಹುಮುಖಿ ಪಾತ್ರಗಳಲ್ಲಿ ಭಟ್ಟರು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ನಟಿಸಿ ಜನಮನ ಸೂರೆಗೊಂಡವರು.

ಭಟ್ಟರು ಸಿನಿಮಾಗೆ ಬಂದದ್ದು, ಅನುಭವಿಸಿದ್ದು, ಅನುಭವಿಸುತ್ತಿರುವುದು ಎಲ್ಲವನ್ನೂ ಅವರ ಮಾತುಗಳಲ್ಲೇ ಕೇಳಿ...

Like beggars, Supporting actors dont have other choice-Ramesh Bhatನಾನು ಚಿತ್ರರಂಗಕ್ಕೆ ಬಂದದ್ದು ಬಹಳ ಆಕಸ್ಮಿಕವಾಗಿ. ಎಂದೂ ನಟನಾಗಬೇಕು ಎಂದು ಕನಸು ಕಂಡವನಲ್ಲ. ಅದಕ್ಕಾಗಿ ತಪಸ್ಸು ಮಾಡಿದವನೂ ಅಲ್ಲ. ಬಹಳ ಹಿಂದಿನಿಂದ ನಾಟಕ ನೋಡುತ್ತಿದ್ದೆ ಅಷ್ಟೇ. ಪ್ರೆೃಮರಿ ಸ್ಕೂಲ್‌ನಲ್ಲಿ ನಾಟಕ ಮಾಡ್ತಿದ್ದೆ. 10ನೇ ಕ್ಲಾಸಿನವರೆಗೂ ಓದಿದೆ. ಆಮೇಲೆ ಮನೇಲಿ ತುಂಬಾ ತೊಂದರೆ ಇದ್ದ ಕಾರಣ ಸ್ವಲ್ಪ ದಿನ ಓದು ನಿಲ್ಲಿಸಬೇಕಾಯಿತು. ಬಹಳ ದಿನಗಳಾದ ಮೇಲೆ ಮೆಕಾನಿಕಲ್‌ ಡಿಪ್ಲೋಮಾ ಸೇರಿದೆ. ನಾಟಕದ ಹುಚ್ಚಲ್ಲಿ ಅದನ್ನೂ ಬಿಟ್ಟೆ.

1974ರಲ್ಲಿ ಪ್ರೇಮ ಕಾರಂತ್‌ ನಿರ್ದೇಶನದ ಹೆಡ್ಡಾಯಣ ಎಂಬ ಮಕ್ಕಳ ನಾಟಕದಲ್ಲಿ ನನ್ನ ನಟನೆಯನ್ನು ನೋಡಿದ ಖ್ಯಾತ ನಿರ್ದೇಶಕ ಎನ್‌.ಲಕ್ಷ್ಮೀನಾರಾಯಣ್‌ ‘ಅಬಚೂರಿನ ಪೋಸ್ಟ್‌ಆಫೀಸ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದರು. ಆಮೇಲೆ ತುಂಬಾ ದಿನ ಅವಕಾಶ ಸಿಕ್ಕಿರಲಿಲ್ಲ. ನಿಧಾನಕ್ಕೆ ವರ್ಷಕ್ಕೆ ಒಂದೋ ಎರಡೋ ಚಿತ್ರಗಳಲ್ಲಿ ನಟಿಸಿದೆ. ಆಗ ಕಡಿಮೆ ಚಿತ್ರಗಳು ಬರ್ತಿದ್ದವು. ಅವಕಾಶ ಕಡಿಮೆ ಇತ್ತು . ಅದರಲ್ಲೂ ಹೊಸಬರಿಗೆ ಸಿಗುತ್ತಿದ್ದದ್ದೇ ಕಷ್ಟ. ಆದರೆ ಈಗ ಕಾಲ ಬದಲಾಗಿದೆ. ಟ್ರೆಂಡ್‌ ಬದಲಾಗಿದೆ. ಬಹಳ ಜನ ಹೊಸಬರಿದ್ದಾರೆ.

ನಮ್ಮದು existence problem ಮಾರಾಯ್ರೇ

ಪೋಷಕ ಪಾತ್ರಗಳಿಗೆ ಅಂತಹ ಪ್ರಾಮುಖ್ಯತೆ ಇರುವುದಿಲ್ಲ. ಇತ್ತೀಚಿಗೆ ಬರುತ್ತಿರುವುದೆಲ್ಲಾ ನಾಯಕ ಪ್ರಧಾನ ಚಿತ್ರಗಳೇ. 60ರ ದಶಕದಲ್ಲಿ ಪೋಷಕ ಪಾತ್ರಗಳಿಗೆ ನೀಡುತ್ತಿದ್ದಂತಹ ಪ್ರಾಮುಖ್ಯತೆ ಈಗ ಇಲ್ಲ. ಈಗ ಏನಾದರೂ ಸಂದೇಶ ತಿಳಿಸುವಂತಿದ್ದರೆ ಅಂತ ಪಾತ್ರ ನೀಡಲಾಗುತ್ತದೆ. ನಮ್ಮದು existence problem. ಪಾತ್ರ ಚೆನ್ನಾಗಿಲ್ಲ ಎಂದು ಸಿಟ್ಟು ಮಾಡಿ ನಿರಾಕರಿಸುವ ಹಾಗಿಲ್ಲ. ಏನಾದರೂ ಮಾಡಬೇಕು. ಸಿಕ್ಕ ಪಾತ್ರ ಮಾಡುತ್ತಾ ಇದ್ದೀವಿ. ಸವಾಲೆಸೆಯುವ ಪಾತ್ರಗಳು ಸಿಕ್ಕುತ್ತಿಲ್ಲ ಎಂಬ ಬೇಜಾರೇನೋ ಇದೆ. ಆದರೆ ಇದೇ ರಂಗದಲ್ಲಂತೂ ಇದ್ದೀವಿ ಎಂಬ ಸಂತೋಷ. ಜನ ಮರೆತಿಲ್ಲ. ಸರಿಯಾದ ಪಾತ್ರ ಸಿಕ್ಕದ ಕಾರಣಕ್ಕೆ ಸರಿಯಾಗಿ ಕ್ಯಾಟರ್‌ ಮಾಡೋಕೆ ಆಗ್ತಿಲ್ಲ ....

ಶಂಕರ್‌ನಾಗ್‌, ಭಾರ್ಗವ, ಸುನೀಲ್‌ ಕುಮಾರ್‌ ದೇಸಾಯಿ, ಫಣಿ ರಾಮಚಂದ್ರರ ಚಿತ್ರಗಳಲ್ಲಿ ಅತ್ಯುತ್ತಮ ಪಾತ್ರಗಳಲ್ಲಿ ಮಿಂಚುತ್ತಿದ್ದ ಭಟ್ಟರಿಗೆ ಇತ್ತೀಚಿಗೆ ಅಂತಹ ಮಹತ್ವದ ಪಾತ್ರಗಳಾವೂ ಸಿಗುತ್ತಿಲ್ಲ. ಈ ಬಗ್ಗೆ ಅವರನ್ನು ಕೇಳಿದಾಗ, Beggars have no Choice ಅನ್ನುತ್ತಾರಲ್ಲ ಹಾಗಾಗಿದೆ ನಮ್ಮ ಪಾಡು. ಇತ್ತೀಚಿಗೆ ಒಳ್ಳೆಯ ಪಾತ್ರ, ಕಥೆ, ನಿರ್ದೇಶಕ ಸಿಗುತ್ತಿಲ್ಲ. ಇದು ನನ್ನೊಬ್ಬನ ಸಮಸ್ಯೆಯಲ್ಲ. ಅನೇಕ ಪೋಷಕ ನಟರಿಗೆ ಈ ಬಗ್ಗೆ ಕೊರಗಿದೆ. ಆದರೆ ಎಲ್ಲರೂ ಒಂದು ಒಳ್ಳೆಯ ಪಾತ್ರಕ್ಕೆ ಕಾಯುತ್ತಾ ಇದ್ದೀವಿ. ಕಷ್ಟ ಪಡೋಣ ಎನ್ನುವ ಮನಸ್ಸಿದೆ. ಆದರೆ ಅಂತಹ ಅವಕಾಶವಿಲ್ಲ. Every building is not Vidhana Soudha ಎಂದು ಇತ್ತೀಚಿಗೆ ತಮಗೆ ಒಳ್ಳೆಯ ಪಾತ್ರಗಳು ಸಿಗದಿರುವ ಬಗ್ಗೆ ಮಾರ್ಮಿಕವಾಗಿ ಹೇಳುತ್ತಾರೆ.

ಜನರ ಪ್ರೀತಿ ಮುಖ್ಯ

ಸುಮಾರು 240 ಚಿತ್ರಗಳಲ್ಲಿ ನಟಿಸಿರುವ ಭಟ್ಟರು ಆ್ಯಕ್ಸಿಡೆಂಟ್‌, ಮಿಂಚಿನ ಓಟ, ಜೀವನ ಚಕ್ರ, ಅಶ್ವಮೇಧ, ಅರಗಿಣಿ, ಒಂದು ಮುತ್ತಿನ ಕಥೆ, ಕರುಣಾಮಯಿ, ಗಣೇಶನ ಸೀರೀಸ್‌ ಚಿತ್ರಗಳಲ್ಲಿ ತಮ್ಮ ಪಾತ್ರಗಳು ಇಷ್ಟವಾಗಿವೆ ಎನ್ನುತ್ತಾರೆ. ಇಷ್ಟೊಂದು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ಭಟ್ಟರಿಗೆ ಇದುವರೆಗೆ ನಟನೆಗೆಂದು ದೊರೆತಿರುವುದು ಒಂದೇ ್ಫಒಂದು ಪ್ರಶಸ್ತಿ . ಅದೂ ಗಣೇಶ ಸುಬ್ರಮಣ್ಯ ಚಿತ್ರಕ್ಕೆ ಸಂದಿರುವ ಕನ್ನಡಪ್ರಭ ಶ್ರೇಷ್ಠ ಪೋಷಕ ನಟ ಪ್ರಶಸ್ತಿ. ಅದರೊಂದಿಗೆ ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರಕ್ಕೆ ಶ್ರೇಷ್ಠ ನಿರ್ಮಾಪಕ ಪ್ರಶಸ್ತಿ ಸಿಕ್ಕಿದೆ. ಎಷ್ಟೇ ಪಾತ್ರ, ದುಡ್ಡು, ಪ್ರಶಸ್ತಿ ಸಿಗಬಹುದು. ಉದ್ಯಮದಲ್ಲೂ ಸಹ ಹಿರಿಯ ಕಲಾವಿದ ಎಂಬ ಗೌರವ ನೀಡುತ್ತಾರೆ. ಆದರೆ ಜನರ ಅಭಿಮಾನ ಸಂಪಾದಿಸುವುದು ಬಹಳ ಕಷ್ಟ ಎಂದು ಜನ ತಮ್ಮ ಮೇಲಿಟ್ಟಿರುವ ಅಭಿಮಾನದ ಬಗ್ಗೆ ತುಂಬು ಹೃದಯದಿಂದ ನೆನೆಯುತ್ತಾರೆ.

ಕಿರುತೆರೆಯಲ್ಲೂ ಭಟ್ಟರದು ಅದೇ ಕಥೆ. ‘ಕ್ರೇರಿkು ಕರ್ನಲ್‌’ ನಂತರ ಅವರಿಗೆ ಸಿಕ್ಕ ಯಾವ ಪಾತ್ರವೂ ಯಶಸ್ವಿಯಾಗಲಿಲ್ಲ. ಈ ಬಗ್ಗೆ ಭಟ್ಟರು ಹೇಳುವುದಿಷ್ಟು,- ‘ಕ್ರೇರಿkು ಕರ್ನಲ್‌ ತುಂಬಾ ಒಳ್ಳೆಯ ಪಾತ್ರ. ಅದಲ್ಲದೆ ಅಕ್ಬರ್‌ ಬೀರ್ಬಲ್‌, ಕಂಡಕ್ಟರ್‌ ಕರಿಯಪ್ಪ , ಶಕ್ತಿ , ಕಪಿ ಚೇಷ್ಟೆ, ಡುಂಡುಂಡುಂ, ಪರಮೇಶಿ ಪರದಾಟ, ರಾಜನ ತರಲೆಗಳು ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದರೂ ಅದ್ಯಾವುದೂ ಭಟ್ಟರಿಗೆ ಕ್ರೇರಿkು ಕರ್ನಲ್‌ ಕೊಟ್ಟಂತಹ ಪ್ರಖ್ಯಾತಿ ಕೊಡಲಿಲ್ಲ. ಆದರೂ ಥ್ಯಾಂಕ್ಸ್‌ ಟು ಟಿ.ವಿ., ಜನ ನಮ್ಮನ್ನು ಗುರುತು ಹಿಡಿಯುತ್ತಾರೆ ಮತ್ತು ತುಂಬಾ ಗೌರವದಿಂದ ನೋಡಿಕೊಳ್ಳುತ್ತಾರೆ.’

ನಾಟಕಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಭಟ್ಟರು ಈಗ ನಾಟಕಗಳಲ್ಲಿ ಅಭಿನಯಿಸುತ್ತಿಲ್ಲ. ಈ ಬಗ್ಗೆ ಅವರನ್ನು ಕೇಳಿದಾಗ ಹೇಳಿದ್ದಿಷ್ಟು-

1970ರ ಸುಮಾರಿಗೆ ಕಾರಂತರು ಬಂದ ಮೇಲೆ ಹವ್ಯಾಸಿ ರಂಗಭೂಮೀಲಿ ದೊಡ್ಡ ಕ್ರಾಂತಿ ಆಯ್ತು. ಕಾರಂತರು ಹೊಸ ಪ್ರತಿಭೆಗಳನ್ನು ಸೇರಿಸಿ ಹೊಸ ಹೊಸ ನಾಟಕಗಳನ್ನು ಬಯಲು ರಂಗ ಮಂದಿರದಲ್ಲಿ ಆಡಿಸುತ್ತಿದ್ದರು. 1985ವರೆಗೂ ರಂಗಭೂಮಿ ಶ್ರೀಮಂತವಾಗಿತ್ತು. ಆದರೆ ಈಗ ಸದ್ಯಕ್ಕೆ ನಾಟಕ ನಿಂತಿದೆ. ನಾಟಕ ಜೀವಂತ ಕಲೆ. ಚಾನಲ್‌ ಬಹಳವಿರುವುದರಿಂದ ಹಂಚಿಹೋಗಿದೆ.

ಬಿ.ಜಯಶ್ರೀ, ಶಂಕರ್‌ನಾಗ್‌, ಗಿರೀಶ್‌ ಕಾರ್ನಾಡ್‌, ಬಿ.ವಿ.ಕಾರಂತ್‌, ಪರ್ವತವಾಣಿ ಮುಂತಾದ ಖ್ಯಾತ ನಿರ್ದೇಶಕರ ನಿರ್ದೇಶನದಲ್ಲಿ ಕಾಶೀಯಾತ್ರೆ, ದೇವರೇ ದಿಕ್ಕು, ಸಿಡಿಲ ಮರಿ, ಹಯವದನ, ಜೋಕುಮಾರಸ್ವಾಮಿ, ಸತ್ತವರ ನೆರಳು, ಬ್ಯಾರಿಸ್ಟರ್‌, ಕಣ್ಣಾಮುಚ್ಚಾಲೆ, ನೋಡಿಸ್ವಾಮಿ ನಾವಿರೋದೇ ಹೀಗೆ, ನಾಗಮಂಡಲ, ಅಂಜುಮಲ್ಲಿಗೆ ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಮೇಲೆ ಇತ್ತೀಚೆಗೆ ನಾಟಕ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಯಾವುದೋ ನಾಟಕದಲ್ಲಿ ನಟಿಸಲು ಇಷ್ಟವಿಲ್ಲ. ಅದೂ ಒಂದು ಕಾರಣವಾದರೆ ಇನ್ನೊಂದು ಕಾರಣ ಇತ್ತೀಚಿಗೆ ನಾಟಕಗಳಿಗೆ ಬಹಳ ಜನ ಬರುತ್ತಿಲ್ಲ .

ನನ್ನ ಮಿತ್ರ ಶಂಕರ

It was a life time experience with Shankar Nag- Ramesh Bhatಭಟ್ಟರು ಶಂಕರ್‌ ನಾಗ್‌ಬದುಕಿದ್ದಾಗ ಅವರ ನೆರಳಿನಂತಿದ್ದವರು. ಶಂಕರ್‌ ಬಗ್ಗೆ ಕೇಳಿದಾಗ ಭಟ್ಟರು ಭಾವುಕರಾದರು. ಶಂಕರ್‌ನಾಗ್‌ರನ್ನು ಮುಕ್ತ ಕಂಠದಿಂದ ಹೊಗಳಿದರು. ಆತ ಒಳ್ಳೆಯ ಸ್ನೇಹಿತ. ಆತನ ಜತೆ ಕಳೆದದ್ದು Life time experience. ಹೊಸಬರಿಗೆ ತುಂಬಾ ಉತ್ತೇಜನ ನೀಡುತ್ತಿದ್ದರು. ಎಲ್ಲರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಒಬ್ಬ ಮನುಷ್ಯನಲ್ಲಿ ಇರುವಂತಹ ವಿಶೇಷ ಗುಣವನ್ನು ಗೌರವಿಸುತ್ತಿದ್ದರು. ಮತ್ತು ಆ ಗುಣಕ್ಕೆ ಮೆರಗು ನೀಡುತ್ತಿದ್ದರು. ಅವರು ಮಾಡಿದ ಕೆಲಸವೆಲ್ಲಾ ಅತ್ಯುತ್ತಮ. ಯಾವ ಮನುಷ್ಯನಿಗೆ ಒಂದು ಕೆಲಸದ ಮೇಲೆ ಆಸೆ ಇರುತ್ತದೆಯೋ ಅವನು ಇನ್ನೂ 6-8 ಗಂಟೆ ಹೆಚ್ಚು ವಿನಿಯೋಗಿಸಬೇಕೆಂದು ಹೇಳುತ್ತಿದ್ದರು. ಹೆಂಡತಿಗಿಂತ ಹೆಚ್ಚಾಗಿ ಅವರ ಬಳಿ ಇದ್ದೆ. ಆತನ ನೆನಪಲ್ಲೇ ಬಹಳ ಕೆಲಸ ಮಾಡಬಹುದು ಎಂದು ಶಂಕರ್‌ರೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡರು.

ಶಂಕರ್‌ ಬದುಕಿದ್ದಾಗ ಅವರ ಅನೇಕ ಕನಸುಗಳಿಗೆ ಹೆಗಲುಕೊಟ್ಟಿದ್ದ ಭಟ್ಟರು, ಶಂಕರ್‌ ಸತ್ತ ಮೇಲೆ ಸಂಕೇತ್‌ನ ಸ್ಥಿತಿಗತಿಯ ಬಗ್ಗೆ ವಿಚಾರಿಸಿದಾಗ , ತಾವು ಸಂಕೇತ್‌ನಲ್ಲಿ ಅಷ್ಟು ಕ್ರಿಯಾತ್ಮಕವಾಗಿಲ್ಲದಿರುವುದನ್ನು ಹೇಳಿಕೊಂಡರು. ಶಂಕರ್‌ನಾಗ್‌ನಲ್ಲಿ ಸಂಘಟನೆ ಮಾಡುವ ಗುಣವಿತ್ತು. ನಮಗೆ ಸಂಘಟನೆ ಮಾಡುವ ಶಕ್ತಿ ಇಲ್ಲ. ನಾವೇನಿದ್ದರೂ ಕನ್ನಡಿಯ ಹಾಗೆ ಕೆಲಸ ಮಾಡುತ್ತಿದ್ದವರು. ಹೇಳಿದ ಕೆಲಸ ಮಾತ್ರ ಮಾಡಿ ಗೊತ್ತು. ಎಲ್ಲರಿಗೂ ಶಂಕರನ ಮೇಲೆ ಅಗಾಧವಾದ ನಂಬಿಕೆಯಿತ್ತು. ಶಂಕರ್‌ ಸತ್ತ ಮೇಲೆ ವಯಸ್ಸು , ಸಂಸಾರದ ತಾಪತ್ರಯ ಹೀಗೆ ಅನೇಕ ತೊಂದರೆಗಳಿಂದ ಸ್ನೇಹಿತರು ಚದುರಿಹೋದರು. ಶಂಕರ್‌ನಾಗ್‌ರ ಮತ್ತೊಂದು ಕೂಸಾದ ರಂಗ ಶಂಕರದಲ್ಲೂ ಭಟ್ಟರು ಕ್ರಿಯಾತ್ಮಕವಾಗಿಲ್ಲ.

I have a dream to act in a drama for Rangashankara- Ramesh Bhatಚಿತ್ರರಂಗಕ್ಕೆ ಬಂದ ಸ್ವಲ್ಪ ಸಮಯದಲ್ಲೇ ನಟನೆಯ ಜತೆಗೆ ಚಿತ್ರ ನಿರ್ದೇಶನ, ನಿರ್ಮಾಣಕ್ಕೂ ಇಳಿದ ಭಟ್ಟರು, ಆ ನಂತರ ಅದೆಲ್ಲದರಿಂದಲೂ ದೂರವೇ ಉಳಿದಿದ್ದಾರೆ. ಈ ಬಗ್ಗೆ ಕೇಳಿದಾಗ, 1982ರಿಂದ 85ರವರೆಗೆ ನಟನಾಗಿ ನಾನು ಬಹಳ ಬ್ಯುಸಿಯಾಗಿದ್ದೆ. ಒಂದು ಚಿತ್ರದ ನಿರ್ದೇಶನವೆಂದರೆ ಕನಿಷ್ಠ ನಾಲ್ಕು ತಿಂಗಳು ಬೇಕು. ನಿರ್ದೇಶನವೆಂದರೆ ಪ್ರತಿ ವಿಷಯ ಗೊತ್ತಿರಬೇಕು. ಕಥೆಯಿಂದ ಎಲ್ಲಾ ವಿಭಾಗಗಳ ಮೇಲೂ ನಿಗಾ ವಹಿಸಬೇಕು. 4 ತಿಂಗಳೆಂದರೂ 40 ಸಿನಿಮಾದಲ್ಲಿ ನಟನೆ ತಪ್ಪುತ್ತದೆ. 40 ಸಿನೆಮಾಗಳ ಸಂಭಾವನೆ ಹೋಯ್ತು. ಆದರೆ ಆಗ ವಯಸ್ಸಿದ್ದರೆ ನಿಧಾನಕ್ಕೆ ನಿರ್ದೇಶನಕ್ಕಿಳದರಾಯ್ತು ಅನ್ನಿಸಿತ್ತು. ಅದಕ್ಕೆ ನಿರ್ದೇಶನ ಮಾಡಲಿಲ್ಲ. ಅದೂ ಅಲ್ಲದೆ ಬೇರೆಯವರ ದುಡ್ಡಲ್ಲಿ ಚೆಲ್ಲಾಟ ಆಡೋಕೆ ಇಷ್ಟವಿಲ್ಲ. ಇತ್ತೀಚಿಗೆ ಕನ್ನಡ ಚಿತ್ರಗಳ ಯಶಸ್ಸಿನ ಸಂಖ್ಯೆ ಬಹಳ ಕಡಿಮೆಯಾಗಿದೆ. ಇಂತಹ Unpredictable Industryನಲ್ಲಿ ಯಾರೂ ಸಿನಿಮಾ ಮಾಡೋದು ಬಹಳ ಕಷ್ಟ. ನಮ್ಮ ದುಡ್ಡಾದರೆ ಪರವಾಗಿಲ್ಲ. ಬೇರೆಯವರ ದುಡ್ಡಲ್ಲಿ ಚೆಲ್ಲಾಟವಾಡಲು ಇಷ್ಟವಿಲ್ಲ. ಹೇಗೂ ಕೆಲಸ ಗೊತ್ತಿದೆ. ಯಾವಾಗ ಬೇಕಾದರೂ ಮಾಡಬಹುದು ಎಂದು ಇಷ್ಟು ದಿನ ನಿರ್ದೇಶನವನ್ನು ಕೈಗೆತ್ತಿಕೊಳ್ಳದಿರುವ ಕುರಿತು ಹೇಳಿದರು.

ಯಜಮಾನರ ಜತೆ ಭಟ್ಟರು

ವಿಷ್ಣುವರ್ಧನ್‌ ಚಿತ್ರಗಳು ಅಂದರೆ, ಅಲ್ಲಿ ಭಟ್ಟರಿಗೆ ಖಾಯಂ ಆಗಿ ಯಾವುದಾದರೊಂದು ಪಾತ್ರ ಇದ್ದೇ ಇರುತ್ತದೆ. ಈ ಬಗ್ಗೆ ಕೇಳಿದಾಗ, ‘ನಂದು ಮತ್ತು ವಿಷ್ಣುದು ಒಳ್ಳೆಯ ಕಾಂಬಿನೇಷನ್‌. ಅವರ ಜತೆ ಕೆಲಸ ಮಾಡುವುದು ತುಂಬಾ ಕಮ್‌ಫರ್ಟಬಲ್‌. ಅವರ ಚಿತ್ರಗಳಲ್ಲಿ ಅಶ್ಲೀಲ ಸಂಭಾಷಣೆಗಳಿರುವುದಿಲ್ಲ. ಆತ ಒಳ್ಳೆಯ ನಟ ಅಷ್ಟೇ ಅಲ್ಲ, ತುಂಬಾ ಒಳ್ಳೆಯ ಮನುಷ್ಯ ಕೂಡ ಹೌದು. ಸಹ ಕಲಾವಿದರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಮ್ಮವರು ಎಂಬ ಕಾಳಜಿ ಇದೆ. ಅಂಥವರಿಗೆ ಗೌರವ ಕೊಡಬೇಕು. ಅವರ ಜತೆ ನಟಿಸುವಾಗ ತುಂಬಾ ಖುಷಿಯಾಗುತ್ತದೆ ಎಂದು ಕೊಂಡಾಡಿದರು.

ಭಟ್ಟರು ಈಗ ಏನು ಮಾಡುತ್ತಿದ್ದಾರೆ?
ತಮ್ಮ ಮಗನಿಗಾಗಿ ‘ಕಸೂತಿ’ ಎಂಬ ಎಂಬ್ರಾಯ್ಡರಿ ಯೂನಿಟ್‌ ನಡೆಸುತ್ತಿದ್ದಾರೆ. ತಿಂಗಳಿಗೆ ಕನಿಷ್ಠ 20 ದಿನಗಳನ್ನು ನಟನೆಯೇ ತಿಂದು ಹಾಕುತ್ತಿದೆ. ಮ್ಯಾಜಿಕ್‌ ಅಜ್ಜಿ, ಬೈತಾರೆ ಬೈತಾರೆ, ಭಾಗರ್ವರವರ ಟೆಲಿ ಫಿಲಂ, ದುರ್ಗಿ, ಪಾಂಡುರಂಗ ವಿಠಲ ಮುಂತಾದ ಇನ್ನೂ ತೆರೆ ಕಾಣಬೇಕಿರುವ ಚಿತ್ರಗಳಲ್ಲಿ ಭಟ್ಟರು ಅಭಿನಯಿಸಿದ್ದಾರೆ. ನಾಟಕ ಮಾಡಬೇಕು ಎಂಬ ಆಸೆ ಈಗ ಜಾಸ್ತಿಯಾಗಿರುವುದರಿಂದ ಮುಂದಿನ ವರ್ಷ ರಂಗಶಂಕರಕ್ಕೆ ನಾಟಕ ನಿರ್ದೇಶನ ಮಾಡಬೇಕೆಂಬ ಕನಸು ಅವರದ್ದು.

ಇತ್ತೀಚಿನ ಸಂಪ್ರದಾಯದಂತೆ ಸಿನಿಮಾ ಉದ್ಯಮದವರು ತಮ್ಮ ಮಕ್ಕಳನ್ನು ಹೀರೋ ಮಾಡಲು ಹೊರಟಿರುವಾಗ ಭಟ್ಟರು ಮತ್ತು ಅವರ ಮಗನ ಬಗ್ಗೆ ವಿಚಾರಿಸಿದಾಗ, ತಮ್ಮ ಮಗನಿಗೆ ಚಿತ್ರಗಳಲ್ಲಿ ಇಂಟರೆಸ್ಟ್‌ ಇಲ್ಲದಿರುವ ಬಗ್ಗೆ ಹೇಳಿದರು. ಸಿನಿಮಾ ಉದ್ಯಮದಲ್ಲಿ ಯಶಸ್ಸಿಲ್ಲದಿದ್ದರೆ ಬಹಳ ಕಷ್ಟ. ಯಶಸ್ವಿಯಾಗದಿದ್ದರೆ ಹೆಜ್ಜೆ ಹೆಜ್ಜೆಗೂ ಅವಮಾನ ಮಾಡುತ್ತಾರೆ. ಪ್ರತಿಯಾಂದನ್ನೂ ಯಶಸ್ಸಿನ ದೃಷ್ಟಿಯಿಂದ ಅಳೆಯಲಾಗುತ್ತದೆ. ಒಂದು ಚಿತ್ರದಲ್ಲಿ ಒಳ್ಳೆಯ ಪಾತ್ರವಿದ್ದರೆ, ಕೆಲವು ಚಿತ್ರಗಳಲ್ಲಿ ಪಾತ್ರಗಳು ಚೆನ್ನಾಗಿರುವುದಿಲ್ಲ. ಎಲ್ಲರೂ ಯಶಸ್ವಿಯಾಗುವುದಕ್ಕೆ ಸಾಧ್ಯವೂ ಇಲ್ಲ ಎಂದು ಯುವ ಪ್ರತಿಭೆಗಳ ಭವಿಷ್ಯ ನಟನೆಗಿಂತ ಯಶಸ್ಸಿನ ಮೇಲೆ ನಿಂತಿರುವ ಬಗ್ಗೆ ಹೇಳಿದರು.

ಹದಗೆಟ್ಟ ಚಿತ್ರರಂಗವನ್ನು ಸುಧಾರಿಸಲು ಏನಾದರೂ ಪರಿಹಾರವಿದೆಯೇ ಎಂದು ಭಟ್ಟರನ್ನು ಕೇಳಬೇಕು ಅಂತ ಅನಿಸಿದರೂ, ಪರಿಹಾರ ಸೂಚಿಸಲು ಗಣೇಶನ ಮದುವೆ ಶಾಸ್ತ್ರಿ ತರಹ ಬೀರ್‌ ಬಾಟಲಿ ಕೇಳಿದರೆ ಕಷ್ಟವೆಂದು ಸಂದರ್ಶನ ಮುಗಿಸಿ ಎದ್ದೆವು.

ರಮೇಶ್‌ ಭಟ್‌ ಸಂದರ್ಶನ ಹೇಗಿದೆ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X