• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

77ರಲ್ಲೂ ಭುಜ ತಟ್ಟಿದ ಭಲೆ ಭೀಮಮ್ಮ !

By Staff
|
  • ಚೇತನ್‌ ನಾಡಿಗೇರ್‌

ಬಡ್ಡಿಮಗ ಭೀಮ ತನ್ನ 77ನೇ ವಯಸ್ಸಿನಲ್ಲೂ ಹೀಗೆ ಮೀಸೆ ತಿರುವಿದ್ದನೋ ಇಲ್ಲವೋ? ಅವನನ್ನು ಇಲ್ಲಿ ಕೂರಿಸಿ ಇವರ ನಟನೆ ತೋರಿಸಬೇಕು ಎಂದು ನಟರತ್ನಾಕರ ಮಾ.ಹಿರಣ್ಣಯ್ಯ ಚಟಾಕಿ ಹಾರಿಸಿದಾಗ ಪ್ರೇಕ್ಷಕರಿಂದ ಮುಗಿಲು ಮುಟ್ಟುವ ಚಪ್ಪಾಳೆ. ಖ್ಯಾತ ರಂಗಕಲಾವಿದೆ ಮತ್ತು ಸ್ತ್ರೀ ನಾಟಕ ಮಂಡಳಿಯ ಸ್ಥಾಪಕಿ ಆರ್‌.ನಾಗರತ್ನಮ್ಮ ತಮ್ಮ 77ನೇ ಜನ್ಮ ದಿನ ಆಚರಿಸಿದ್ದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ; ಅದೂ ಭೀಮನ ವೇಷ ಹಾಕಿ ‘ಶ್ರೀ ಕೃಷ್ಣ ಗಾರುಡಿ’ ನಾಟಕದಲ್ಲಿ ಅಭಿನಯಿಸುವ ಮೂಲಕ.

ಜೂನ್‌ 21ರ ಶನಿವಾರ ನಾಗರತ್ನಮ್ಮ ಭೀಮನ ವೇಷಧಾರಿಯಾಗಿ ವೇದಿಕೆ ಮೇಲೆ ಬಂದಾಗ ಜೋರು ಚಪ್ಪಾಳೆ. ಮುಖ್ಯ ಅತಿಥಿಯಾಗಿ ಮಾತನಾಡಿದ ಮಾ.ಹಿರಣ್ಣಯ್ಯ, ‘ರಂಗವೇದಿಕೆಯಲ್ಲೇ ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತಿರುವುದು ಬಹಳ ಶ್ರೇಷ್ಠ. ಆಕೆಯದು 60 ವರ್ಷ ರಂಗಭೂಮಿಯಲ್ಲಿ ಕಳೆದ ದೇಹ. ಜೀವನಕ್ಕೆ ಕಲೆ ಮುಖ್ಯ. 77ನೇ ವಯಸ್ಸಿನಲ್ಲಿ ಆಕೆಗೆ ನಟಿಸುವ ಚೈತನ್ಯ ಕೊಟ್ಟಿದ್ದು ಜನ. ಅಮ್ಮನಿಗೆ ಆಪರೇಷನ್‌ ಆಗಿದೆ. ಈಗೊಂದು ವಾರದಿಂದ ಸಕ್ಕರೆ ಕಾಯಿಲೆ ಬೇರೆ ಜಾಸ್ತಿಯಾಗಿದೆ. ಆದರೂ ಆಕೆ ನಟಿಸಿದ್ದಾರೆ’ ಎಂದು ಅವರ ಉತ್ಸಾಹವನ್ನು ಪ್ರಶಂಸಿಸಿದರು.

R.Nagarathnamma celebrating 77th birthday by performing Bheemas roleತಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವಂತೆ ನಾಗರತ್ನಮ್ಮನವರಿಗೆ ಮನವಿ ಮಾಡಿಕೊಂಡ ಮಾ.ಹಿರಣ್ಣಯ್ಯ, ಜನರಿಗಾಗಿ ಉಳಿಯಬೇಕು, ಅವರಿಗಾಗಿ ತ್ಯಾಗ ಮಾಡಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಆ ಕಾಲದಲ್ಲಿ ನಾವು ನಾಟಕವಾಡಬೇಕಾದರೆ ರಾತ್ರಿ ರಾಜರಂತೆ ಇರುತ್ತಿದ್ದೆವು, ಬೆಳಗ್ಗೆ ನಮ್ಮನ್ನು ಯಾರೂ ಕೇಳುವವರಿಲ್ಲ. ನಮಗೆ ಊರಿನ ಮಧ್ಯೆ ಮನೆ ಸಿಗುತ್ತಿರಲಿಲ್ಲ , ಯಾರೂ ಹೆಣ್ಣು ಕೊಡುತ್ತಿರಲ್ಲಿಲ್ಲ. ಈಗ ಕಾಲ ಬದಲಾಗಿದೆ. ನಾಟಕ ಕಲಾವಿದರಿಗೆ ಅನೇಕ ಸೌಲಭ್ಯಗಳಿವೆ. ಸಂಬಳ, ಮಾಸಾಶನ, ಮಂಡಳಿ, ಸಚಿವಾಲಯ ಎಲ್ಲ ಇದೆ. ನಾಟಕಕಾರರಿಗೆ ಒಳ್ಳೆಯ ಆಶ್ರಯ ಸಿಗುತ್ತದೆ. ರಂಗಭೂಮಿ ಜಂಗಮ, ಉಳಿದದ್ದೆಲ್ಲಾ ಸ್ಥಾವರ. ಕಲಾವಿದ ಇಲ್ಲಿ ಬೆಳೆಯುತ್ತಾನೆ. ಅಲ್ಲಿ ಉಳಿಯುತ್ತಾನೆ. ರಂಗಭೂಮಿ ಸತ್ತಿಲ್ಲ. ನಾವೆಲ್ಲ ರಂಗಭೂಮಿಯನ್ನು ಬದುಕಿಸಿಕೊಳ್ಳಬೇಕಾಗಿದೆ ಎಂದು ಮಾ.ಹಿರಣ್ಣಯ್ಯ ಕಿವಿಮಾತು ಹೇಳಿದರು.

Bheema veshadhari R.Nagarathnamma sitting with Vishnuvardhan, Rani Satish and othersಮಹಾಭಾರತ, ಕುರುಕ್ಷೇತ್ರ ನಡೆದು ಬಹಳ ಕಾಲವಾಯ್ತು. ಆದರೆ ಇವತ್ತು ನಾಗರತ್ನಮ್ಮ ನಟನೆಯಿಂದ ಆ ಯುಗಕ್ಕೆ ಕರೆದುಕೊಂಡು ಹೋಗಿದ್ದಾರೆ. ನಮ್ಮ ಸೌಭಾಗ್ಯ. ಕಲಾವಿದ ಪರಕಾಯ ಪ್ರವೇಶ ಮಾಡುವುದು ಕೇಳಿದ್ದೆ. ಈ ದಿನ ನೋಡಿದೆ. 77ನೇ ವಯಸ್ಸಿನಲ್ಲಿ ಅವರು ಪಾತ್ರ ಮಾಡುತ್ತಿಲ್ಲ. ಬದಲಾಗಿ ಪಾತ್ರವೇ ಮಾಡಿಸುತ್ತಿದೆ. ಇಂದಿನ ಚಿತ್ರರಂಗದ ಪರಿಸ್ಥಿತಿಯಲ್ಲಿ ಕಲಾವಿದರು ಹೆಚ್ಚಾಗಿ ಇಲ್ಲ. ಇಂಥವರ ನೋಡಿ ಕಲಿಯಬೇಕು. 77 ವರ್ಷ ಬದುಕಿದರೆ ಸಾಲದು. 700 ವರ್ಷ ಬದುಕಬೇಕು ಎಂದು ವಿಷ್ಣುವರ್ಧನ್‌ ಹೇಳಿದಾಗ ಕಣ್ಣಲ್ಲಿ ಮಿಂಚು ಹೊಳೆಯಿತು.

ನನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಮತ್ತೊಮ್ಮೆ ನಾಟಕ ಮಾಡಲು ಬಹಳ ಒತ್ತಾಯಿಸಿದರು. ನನ್ನ ನಾಟಕ ನೋಡದಿದ್ದ ಹಲವರು ಕೂಡ ತುಂಬಾ ಹೇಳಿದರು. ಆದ್ದರಿಂದ ಕೆಟ್ಟ ಧೈರ್ಯ ಮಾಡಿ ನಟಿಸಿದೆ. ಹಿಂದೆಲ್ಲಾ ನಾವು ಕಂಪೆನಿ ಕಟ್ಟುವಾಗ ಬಹಳ ಕಷ್ಟ ಪಟ್ಟೆವು. ಸರ್ಕಾರ ಈಗ ಬಹಳ ಸಹಾಯ ಮಾಡುತ್ತಿದೆ. ವಿಷ್ಣುವರ್ಧನ್‌ ನನ್ನನ್ನು ಬಹಳ ಹೊಗಳಿದರು. ಹಿಂದೆ ನಾನು ಮಾಡಿದ ಪಾತ್ರ ನೋಡಿದ್ದರೆ ಏನು ಹೇಳುತ್ತಿದ್ದರೋ. ವಿಷ್ಣುವರ್ಧನ್‌ ಅವರದ್ದು ವಿಶಾಲವಾದ ಹೃದಯ. ಕಲಾವಿದರು ಕಲಾವಿದರನ್ನ ಪ್ರೀತಿ ಮಾಡಬೇಕು. ಬಹಳ ಸಂತೋಷವಾಗುತ್ತಿದೆ. ಹೇಳಿಕೊಳ್ಳುವುದಕ್ಕಾಗುತ್ತಿಲ್ಲ. ಮುಂದಿನ ಜನ್ಮ ಅನ್ನೋದು ಇದ್ದರೆ, ಕಲಾಸೇವೆ ಮಾಡುವ ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಆರ್‌.ನಾಗರತ್ನಮ್ಮ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌, ನಾಟಕ ಅಕಾಡೆಮಿ ಅಧ್ಯಕ್ಷ ಆರ್‌ ನಾಗೇಶ್‌, ಬಿಜೆಪಿ. ಶಾಸಕ ರಾಮಚಂದ್ರೇಗೌಡ ಮತ್ತು ಉದ್ಯಮಿ ಹರಿ ಖೋಡೆ ಸಮಾರಂಭದಲ್ಲಿ ಹಾಜರಿದ್ದರು. ಸಚಿವೆ ರಾಣಿ ಸತೀಶ್‌, ನಾಗರತ್ನಮ್ಮನವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ನಾಗರತ್ನಮ್ಮ ಒಂದು ಪರಿಚಯ: 1958ರಲ್ಲಿ ಸ್ತ್ರೀ ನಾಟಕ ಮಂಡಳಿ ಎಂಬ ಹೊಸ ಪರಿಕಲ್ಪನೆಯಾಂದಿಗೆ ನಾಗರತ್ನಮ್ಮ ಅವರು ಸಂಪೂರ್ಣ ಮಹಿಳೆಯರೇ ನಿರ್ವಹಿಸುವ, ಅಭಿನಯಿಸುವ ನಾಟಕ ತಂಡವನ್ನು ಕಟ್ಟಿ ಆ ಮೂಲಕ ಕರ್ನಾಟಕ ರಂಗಭೂಮಿಯಲ್ಲಿ ಒಂದು ದಾಖಲೆಯನ್ನು ಸ್ಥಾಪಿಸಿದವರು. ಕೃಷ್ಣಗಾರುಡಿ ನಾಟಕದಲ್ಲಿ ಭೀಮ, ಶ್ರೀ ಕೃಷ್ಣಲೀಲೆಯಲ್ಲಿ ಕಂಸ, ರಾಮಾಯಣದಲ್ಲಿ ದಶರಥ ಮತ್ತು ರಾವಣ, ದಾನಶೂರ ಕರ್ಣದಲ್ಲಿ ದುರ್ಯೋಧನ ಮತ್ತು ಇನ್ನಿತರ ನಾಟಕದಲ್ಲಿ ನಟಿಸಿರುವ ನಾಗರತ್ನಮ್ಮನವರ ಅಭಿನಯ ಇಂದಿಗೂ ಜನಪ್ರಿಯವಾಗಿದೆ. ದೇಶದ ಇತರೆ ನಗರಗಳಲ್ಲೂ ನಾಟಕಗಳನ್ನು ಪ್ರದರ್ಶಿಸಿರುವ ಅವರಿಗೆ ಇದುವರೆಗೂ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more