ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಂಗಳದಲ್ಲಿ ಭೈರಪ್ಪ ‘ಪರ್ವ’

By Staff
|
Google Oneindia Kannada News
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ತಿಂಗಳು ನಡೆಸಿಕೊಡುವ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮಕ್ಕೆ ಸೆಪ್ಟಂಬರ್‌ ತಿಂಗಳ ಅತಿಥಿ, ಖ್ಯಾತ ಸಾಹಿತಿ ಎಸ್‌.ಎಲ್‌. ಭೈರಪ್ಪ . ಇಷ್ಟಪಾತ್ರ ಕಾದಂಬರಿಕಾರರನ್ನು ನೋಡಲು, ಅವರ ಮಾತು ಕೇಳಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಿದ್ದರು.

ಪ್ರೇಕ್ಷಕರ ಸಾಲಿನಲ್ಲಿ ಹಿರಿಯ ಕವಿ ಡಾ.ಜಿ.ಎಸ್‌.ಶಿವರುದ್ರಪ್ಪನವರಂಥ ಹದಿನಾರಾಣೆ ಸಾಹಿತಿಯಿಂದ ಹಿಡಿದು, ಅಪ್ಪಟ ರಾಜಕಾರಣಿ ಶಾಸಕ ಸುರೇಶ್‌ ಕುಮಾರ್‌ರಂತವರೂ ಇದ್ದುದು ವಿಶೇಷ. ಕೂಡ ಇದ್ದರು. ಕನ್ನಡ ಭವನದ ನಯನ ಸಭಾಂಗಣ ಭರ್ತಿ ಭರ್ತಿ. ಸಭಾಂಗಣದಲ್ಲಿ ಸ್ಥಳ ಸಾಲದೆ, ಅನೇಕರು ವೇದಿಕೆಯ ಮೇಲೂ ಕೂತರು. ಅದು ಅಭಿಮಾನ ಪರ್ವ !

Y.K.Muddukrishna felicitating Bhyrappaಹಾಗೆ ನೋಡಿದರೆ, ಭೈರಪ್ಪನವರು ಭಾಗವಹಿಸಿದ್ದ ಈ ಕಾರ್ಯಕ್ರಮ ಒಂದು ಉತ್ತಮ ಸಾಹಿತ್ಯ ಚರ್ಚೆಗೆ ವೇದಿಕೆಯಾಗಬೇಕಿತ್ತು . ಆದರೆ, ಪ್ರಶ್ನೆಗಳ ಪೂರ ಹಾಗೂ ಗೊಂದಲದ ನಡುವೆ ಸಂವಾದ ಕಾರ್ಯಕ್ರಮ ಅಲ್ಲಲ್ಲಿ ದಾರಿತಪ್ಪಿತು. ಸಾಹಿತ್ಯ ವಿಷಯಗಳು ಮಾತ್ರವಲ್ಲದೆ- ಗೋಹತ್ಯೆ, ಸಹಕಾರಿ ಸಂಘಟನೆ, ಮಹಿಳಾ ಮೀಸಲಾತಿ, ಚಿತ್ರರಂಗ, ರಾಮಜನ್ಮಭೂಮಿ ಮುಂತಾದ ವಿಷಯಗಳ ಬಗ್ಗೆಯೂ ಭೈರಪ್ಪನವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಭೈರಪ್ಪ- ಕಲಾವಿದರು ಕಲೆಯನ್ನು ಕುರಿತು ಮಾತಾಡಿದರೆ ಅದರ ಸೊಗಡು ಹಾಳಾಗುತ್ತದೆ. ನಮ್ಮಲ್ಲಿ ಒಬ್ಬ ಸಂಗೀತಗಾರ ಅಥವಾ ಒಬ್ಬ ನರ್ತಕ ಮಾತಾಡಿದರೆ ಅದು ಗಮನಕ್ಕೆ ಬರುವುದಿಲ್ಲ. ಆದರೆ ಒಬ್ಬ ಸಾಹಿತಿಗೆ ಮಾತು ಬರಲೇಬೇಕೆಂದು ಜನ ನಂಬಿರುತ್ತಾರೆ. ಭಾಷಣ ಮಾಡದಿದ್ದರೆ ಆತ ಸಾಹಿತಿಯೇ ಅಲ್ಲ ಎಂದು ತೀರ್ಮಾನಿಸುತ್ತಾರೆ. ಭಾಷಣದಿಂದ ಸಾಮಾಜಿಕ ಕ್ರಾಂತಿ, ಸಾಧನೆ ಆಗುವುದಿಲ್ಲ. ಒಬ್ಬ ಸಾಹಿತಿ ತನ್ನ ಸಾಹಿತ್ಯ ಕೃತಿಯ ಬಗ್ಗೆ ವ್ಯಾಖ್ಯಾನ ಮಾಡಬಾರದು ಎಂದರು.

S.L.Bhyrappa listening a questionನಾನು Ph.D ಮಾಡುವುದಕ್ಕೆ ಹೊರಟಿದ್ದು ನೌಕರಿಗಾಗಿ. ಸತ್ಯ ಮತ್ತು ಸೌಂದರ್ಯ ಎಂಬ ಪ್ರಬಂಧಕ್ಕೆ ಪದವಿ ಪಡೆದ ನಂತರ ಸತ್ಯ ಮತ್ತು ಶಿವ ಎಂಬ ವಿಷಯದ ಬಗ್ಗೆ ಪ್ರಬಂಧ ಬರೆಯಲು ಯೋಚಿಸಿದೆ. ಅದಕ್ಕೆ ಸಾಕಷ್ಟು ಸಂಶೋಧನೆಯನ್ನು ಕೂಡ ಮಾಡಿದೆ. ಈ ಮಧ್ಯೆ ವಂಶವೃಕ್ಷದ ಹಸ್ತಪ್ರತಿ ತಿದ್ದಿ ಅದನ್ನು ಅಚ್ಚಿಗೆ ಕಳಿಸಿದಾಗ, ಕಾದಂಬರಿ ಬರೆಯುವ ಸೃಜನಶೀಲ ಶಕ್ತಿ ನನ್ನಲ್ಲಿದೆ ಅನ್ನಿಸಿತು. ಪ್ರಬಂಧ ಬರೆದು ಸಮಯ ಹಾಳು ಎಂದುಕೊಂಡು ಆ ಪ್ರಬಂಧವನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟೆ ಎಂದು ಭೈರಪ್ಪ ತಮ್ಮ ಕಾದಂಬರಿ ಒಲವಿನ ನೆನಪುಗಳ ಮೆಲುಕು ಹಾಕಿದರು.

ತತ್ವಶಾಸ್ತ್ರ ಬಿಡಿಸಿಕೊಂಡ ಮೇಲೆಯೇ ನಾನು ನಿಜವಾದ ಲೇಖಕನಾಗಿದ್ದು. ಮೊದಲಿಗೆ ನಾನೂ ತತ್ವಶಾಸ್ತ್ರ ವನ್ನು ಗಂಭೀರವಾಗಿ ತೆಗೆದುಕೊಂಡಿದ್ದೆ. ಗೃಹಭಂಗ ಕಾದಂಬರಿ ಬರೆದ ನಂತರ ಸಂಪೂರ್ಣವಾಗಿ ಕೈಬಿಟ್ಟೆ. ತತ್ವಶಾಸ್ತ್ರ ವನ್ನು ಓದಬೇಕು. ಆದರೆ ಅದನ್ನು ಗಂಭೀರವಾಗಿ ಹಚ್ಚಿಕೊಳ್ಳಬಾರದು. ಆದರೆ ನನ್ನ ಮೇಲೆ ಅದರ ಪ್ರಭಾವವಿದೆ. ಅದು ನಮ್ಮ ಮೇಲೆ ಸಂಸ್ಕಾರ ಆಗಿರುತ್ತದೆ. ಅದು ನಾವು ಅಡ್ಡ ದಾರಿಗೆ ಹೋಗುವುದನ್ನು ತಪ್ಪಿಸುತ್ತದೆ ಮತ್ತು ನಮ್ಮನ್ನು ಸರಿದಾರಿಗೆ ಒಯ್ಯುತ್ತದೆ. ತತ್ವಶಾಸ್ತ್ರ , ಸಾಹಿತ್ಯ ಮತ್ತು ಸೌಂದರ್ಯ ನನ್ನಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು ಎಂದು ಹೇಳಲಾರೆ. ಈಗ ನನಗೆ ಯಾವ ತತ್ವವೂ ಇಲ್ಲ. ಎಲ್ಲವನ್ನು ಪ್ರಜ್ಞಾಪೂರ್ವಕವಾಗಿ ಕಳೆದುಕೊಂಡಿದ್ದೇನೆ ಎಂದು ಭೈರಪ್ಪ ಹೇಳಿದರು.

ಸಂವಾದದಲ್ಲಿ ಭೈರಪ್ಪನವರು ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳು :
GSS and friends

  • ನಾನು ಎಂದೂ ನನ್ನ ಕೃತಿಗಳಲ್ಲಿ ಕಾಮದ ವೈಭವೀಕರಣ ಮಾಡಿಲ್ಲ. ಆದರೆ ಅದರ ಸ್ಥಾನ ಏನು ಎಂದು ಬೇರೆ ಬೇರೆ ಸನ್ನಿವೇಶಗಳಲ್ಲಿ ಹೇಳಿದ್ದೇನೆ.
  • ನಮಗೆ ಹಿಂದಿನಿಂದಲಲೂ ಕಾಮದ ಬಗ್ಗೆ ಮಡಿ ಬಂದಿದೆ. ಕಾಳಿದಾಸ ತನ್ನ ಕಾವ್ಯಗಳಲ್ಲಿ ವರ್ಣಿಸಿರುವ ಸೌಂದರ್ಯ ನನ್ನ ಬರಹದಲ್ಲಿ ಶೇ.1ರಷ್ಟು ಇಲ್ಲ.
  • ಮುಂಚೆ ನಮ್ಮ ದೇಶ ಇದೆಲ್ಲದರಿಂದ ಮುಕ್ತವಾಗಿತ್ತು. ಈಗ 1000 ವರ್ಷಗಳ ಹಿಂದೆ ಮುಸಲ್ಮಾನರು ಭಾರತಕ್ಕೆ ದಾಳಿಯಿಟ್ಟ ನಂತರ ಇಲ್ಲಿ ಬುರ್ಖಾ ಪದ್ಧತಿ ಬಂದಿತು. ನಂತರ ಬ್ರಿಟಷರು ವಿಕ್ಟೋರಿಯನ್‌ ಮೌಲ್ಯಗಳನ್ನು ತಂದರು.
  • ಯಾವುದು ಜನರಿಗೆ ಹಿಡಿಸುತ್ತದೆ, ಅದು ಸೃಜನಶೀಲವಲ್ಲ ಎಂದು ನವೋದಯದವರು ಪ್ರತಿಪಾದಿಸಿದರು. ಗದುಗಿನ ಭಾರತವಾಗಲಿ, ಶೇಕ್ಸ್‌ಪಿಯರ್‌, ಟಾಲ್‌ಸ್ಟಾಯ್‌ರ ಕೃತಿಗಳಾಗಲಿ ಸೃಜನಶೀಲವಾಗಿರುವ ಜತೆಗೆ ಜನಪ್ರಿಯವೂ ಆಗಿದ್ದವು. ಯಾವ ಸಾಹಿತ್ಯ ಸೃಜನಶೀಲವಾಗಿರುತ್ತದೋ ಅದು ಜನಪ್ರಿಯವೂ ಆಗಿರುತ್ತದೆ.
  • ಗೃಹಭಂಗ ಧಾರಾವಾಹಿ ಸಂತೋಷಕೊಟ್ಟಿದೆ. ನಾನು ಅನುಮತಿ ಕೊಡುವ ಮುಂಚೆ ನಿರ್ದೇಶಕರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಿಯೇ ಕೃತಿಯನ್ನು ಕೊಡುತ್ತೇನೆ. ಜೊತೆಗೆ ಸ್ವಾತಂತ್ರ್ಯವನ್ನೂ ಕೊಡುತ್ತೇನೆ. ಗಿರೀಶ್‌ ಕಾಸರವಳ್ಳಿ ಸ್ವಾತಂತ್ರ್ಯ ಬಳಸಿಕೊಂಡು ಒಳ್ಳೆಯ ಧಾರಾವಾಹಿ ಮಾಡಿದ್ದಾರೆ.
  • ರೈತರ ಆತ್ಮಹತ್ಯೆ ಕುರಿತು ಕೂಲಂಕಷ ಅಧ್ಯಯನ ನಡೆಯಬೇಕು. ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ವಾಣಿಜ್ಯ ಕಂಪೆನಿಗಳು ಹಳ್ಳಿಗಳಿಗೂ ಲಗ್ಗೆಯಿಟ್ಟಿವೆ. ಒಬ್ಬ ಕಮ್ಮಾರ ಚಪ್ಪಲಿ ಮಾಡಿ ನೆಮ್ಮದಿಯಾಗಿ ಬದುಕುವಂತಿಲ್ಲ, ಅದರ ಬದಲಾಗಿ ಬಾಟಾ ಚಪ್ಪಲಿಗಳು ಬಂದಿವೆ. ಬೇವಿನ ಕಡ್ಡಿಯ ಬದಲಾಗಿ ಟೂಥ್‌ಪೇಸ್ಟ್‌ ಲಗ್ಗ್ಗೆಯಿಟ್ಟಿವೆ. ಹಳ್ಳಿಯ ಜನರ ಜೀವನ ಶೈಲಿಯೇ ಬದಲಾಗಿ ಬಿಟ್ಟಿದೆ.
  • ಹಳ್ಳಿ ಜನರು ಆರ್ಥಿಕ ಮತ್ತು ವಾಣಿಜ್ಯ ಹೊಡೆತಗಳಿಗೆ ಸಿಕ್ಕಿ ಹಾಳಾಗುತ್ತಿದ್ದಾರೆ. ಕೆಳವರ್ಗದ ಜನ ಕುಡಿತದಿಂದ ಮತ್ತು ಜೂಜಿನಿಂದಲೂ ಹಾಳಾಗುತ್ತಿದ್ದಾರೆ. ಮಂಡ್ಯ ಜಿಲ್ಲೆ ಅತ್ಯಂತ ಸಮೃದ್ಧವಾದ ಸ್ಥಳ. ಈಗೆರೆಡು ವರ್ಷದಿಂದ ಮಳೆಯ ತೊಂದರೆ ಬಿಟ್ಟರೆ ಯಾವಾಗಲೂ ಸಮೃದ್ಧವಾಗಿರುತ್ತದೆ. ಆದರೂ ಅದು ಅತ್ಯಂತ ಅಧಿಕ ಸಾಲ ಮಾಡಿರುವ ಜಿಲ್ಲೆ. ರೈತರಿಗೆ ಹೊಲ ಗದ್ದೆ ಗೆ ಹೋಗಬೇಕಾದರೂ ಸ್ಕೂಟರ್‌ ಮತ್ತು ಬೈಕ್‌ ಬೇಕು. ಈ ಬಗ್ಗೆ ಕೇಳಿದರೆ ಊರಿನ ಜನಕ್ಕಿಂತ ನಾವೇನು ಕಡಿಮೆ ಎನ್ನುತ್ತಾರೆ.
  • ಲಾಟರಿ ಮತ್ತು ಕುಡಿತ ಅನೈತಿಕವಾದುದು. ನಮ್ಮ ರೈತರು ಕಷ್ಟಪಡದೇ ಬೇರೆ ದಾರಿಗಳನ್ನು ಹುಡುಕುತ್ತಿದ್ದಾರೆ. ಒಂದು ಹಳ್ಳಿಗೆ 4 ಸಾರಾಯಿ ಅಂಗಡಿಯೇಕೆ ಬೇಕು. ಇದೆಲ್ಲ ಗಾಂಧಿ ತತ್ವಗಳಿಂದ ಸುಧಾರಣೆಯಾಗಬೇಕು. ಇದನ್ನು ಸರ್ಕಾರ ಏಕೆ ನಿಲ್ಲಿಸುವುದಿಲ್ಲ ?
  • ಆಸೆಯೇ ದುಖಃಕ್ಕೆ ಮೂಲ ಎಂದು ಬುದ್ಧ ಹೇಳಿದ. ಅನೇಕರಿಗೆ ಸಣ್ಣ ವಯಸ್ಸಿನಲ್ಲೇ ಸನ್ಯಾಸ ದೀಕ್ಷೆ ನೀಡಿ, ಬೌದ್ಧ ಧರ್ಮದ ಪ್ರಚಾರಕ್ಕೆ ಕಳುಹಿಸಿದ. ಹೀಗೆ ಸಣ್ಣ ವಯಸ್ಸಿಗೆ ವೈರಾಗ್ಯ ಬೆಳಸಿಕೊಳ್ಳುವದು ಸರಿಯೇ? ವೈರಾಗ್ಯವನ್ನು ಹೆಚ್ಚು ಪ್ರಚಾರ ಮಾಡಿದ ಬೌದ್ಧ ಧರ್ಮ ಜೀವ ವಿರೋಧಿಯಾದುದು.
  • ಸನ್ಯಾಸತ್ವದ ಕಲ್ಪನೆ ಹಿಂದೂ ಧರ್ಮದಲ್ಲಿ ಬಹಳ ಹಿಂದಿನಿಂದಲೂ ಇದ್ದರೂ, ಆಗಿನವರು ಹೆಚ್ಚಾಗಿ ಗೃಹಸ್ಥಾಶ್ರಮಕ್ಕೆ ಒತ್ತುನೀಡುತ್ತಿದ್ದರು. ಏಕೆಂದರೆ ಗೃಹಸ್ಥಾಶ್ರಮದಲ್ಲೇ ಬ್ರಹಚರ್ಯ ಮತ್ತು ಸನ್ಯಾಸ ಗುಣಗಳನ್ನು ಕಾಣಬಹುದು ಎಂದು ಆಗಿನವರು ನಂಬಿದ್ದರು. ಉಪನಿಷತ್ತಿನ ಋಷಿಗಳೆಲ್ಲರೂ ಸಂಸಾರಿಗಳೇ ಆಗಿದ್ದರು.
  • ಸಾರ್ಥ ಕಾದಂಬರಿಯಲ್ಲಿ ಬೌದ್ಧ ಧರ್ಮ ಮತ್ತು ಬುದ್ಧನನ್ನು ಎಲ್ಲೂ ಹೀಯಾಳಿಸಿಲ್ಲ. ನಳಂದ ವಿಶ್ವವಿದ್ಯಾಲಯವನ್ನು ಹಾಳು ಮಾಡಿದ್ದು ಬಖ್ತಿಯಾರ್‌ ಕಿಲ್ಜಿಯೇ ಹೊರತು ಹಿಂದುಗಳಲ್ಲ.
  • ಹಿಂದೂ ಧರ್ಮದ ಕಲ್ಪನೆ ಮತ್ತು ಅದರ ಸ್ವಾತಂತ್ರ್ಯವೇ ಅದನ್ನು ದೀರ್ಘ ಕಾಲದವರೆಗೂ ಕಾಪಾಡುತ್ತಿರುವುದು. ಒಂದು ವ್ಯಕ್ತಿಯನ್ನು ಅವಲಂಬಿಸುವ ಧರ್ಮ ಹೆಚ್ಚು ದಿನ ಬದುಕಲಾರದು. ಕಾರಣ ಅದು ಉಳಿಯಬೇಕಾಗಿದ್ದು ನಂಬಿಕೆಯ ಮೇಲೆ. ಮೊಹಮ್ಮದರು ಸತ್ತು 100 ವರ್ಷಗಳೊಳಗೆ ಇಸ್ಲಾಂ ಧರ್ಮ ಇರಾನ್‌, ಟರ್ಕಿ, ಮಧ್ಯ ಪಾುಚ್ಯ ಮತ್ತು ಇತರೆ ದೇಶಗಳಿಗೂ ಹರಡಿತ್ತು. ಆದರೆ ಭಾರತದಲ್ಲಿ ಮಾತ್ರ ಅದು ಸಂಪೂರ್ಣ ತಳವೂರಲು ಸಾಧ್ಯವಾಗಲೇ ಇಲ್ಲ.
  • ಭಾರತದ ಪುರಾತನ ನಂಬಿಕೆಯೆಂದರೆ ಪುನರ್ಜನ್ಮ. ಹಿಂದೆ ನಾವು ಯಾವುದೋ ಜನ್ಮದಲ್ಲಿ ಪ್ರಾಣಿಗಳಾಗಿದ್ದೆವು. ಈ ನಂಬಿಕೆ ಇಟ್ಟುಕೊಂಡಿರುವ ನಾವು ಕೊಲ್ಲಬಾರದು. ಅದೂ ಆಹಾರಕ್ಕಾಗಿ! ಬುದ್ಧ ಸಂತೋಷಕ್ಕಾಗಿ ಬೇಟೆ ಆಡಬಾರದೆಂದ. ಆದ್ರೆ ತರ್ಕಬದ್ಧವಾಗಿ ಈ ಬಗ್ಗೆ ಹೇಳಿದ್ದು ಜೈನರು. ಅದು ಬೇರೆ ಧರ್ಮಿಯರ ಮೇಲೆ ಪ್ರಭಾವ ಬೀರಿತು. ಮೂಲಭೂತವಾಗಿ ನೋಡುವುದಾದರೆ ಯಾವ ಪ್ರಾಣಿಯನ್ನ್ನೂ ಕೊಲ್ಲಬಾರದು ಎಂದು ಹೇಳಿದರು. ಇದು ಮೂಲಭೂತವಾದದ ಪ್ರಶ್ನೆಯಾಯಿತು. ಅರ್ಥಶಾಸ್ತ್ರದಲ್ಲಿ ಮೌಲ್ಯವಿಲ್ಲ. (ಗೋಹತ್ಯೆ ಕುರಿತ ಪ್ರಶ್ನೆಗೆ).
  • ಬರೆಯುವುದು ನನಗೆ ಚಟವಿದ್ದಂತೆ. ಯಾವ ಲೇಖಕನಿಗೂ ಬರವಣಿಗೆಯಿಂದ ಜೀವನ ಮಾಡಲು ಸಾಧ್ಯವಿಲ್ಲ. 60 ವರ್ಷಗಳ ಹಿಂದೆ ಅನಕೃ, ತರಾಸು ಸಾಹಿತ್ಯದಿಂದಲೇ ಜೀವನ ಮಾಡುತ್ತೀನಿ ಎಂದು ಹೊರಟರು. ಹಾಗೆ ಮಾಡಿದರು ಕೂಡ, ಆದರೆ ಸಾಹಿತ್ಯದ ಗುಣಮಟ್ಟ ಕುಸಿದಿತ್ತು.
  • ನಾನೆಂದೂ ಬರವಣಿಗೆಯಿಂದ ಬಂದ ಹಣವನ್ನು ಸಂಸಾರದ ನಿರ್ವಹಣೆಗೆ ಬಳಸಲಿಲ್ಲ. ಅದನ್ನು ಅನುಭವದ ವಿಸ್ತರಣೆಗೆ ವಿನಿಯೋಗಿಸುತ್ತೇನೆ. ಇತ್ತೀಚೆಗೆ ಬರೆದ ಮಂದ್ರ ಕಾದಂಬರಿಗೆ 4 ವರ್ಷ ಕಾಲ ಮತ್ತು ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ.
ಭೈರಪ್ಪನವರು ಭಾಗವಹಿಸಿದ್ದ ಈ ಕಾರ್ಯಕ್ರಮ ಬಹಳ ಕಾಲ ಅವರ ಅಭಿಮಾನಿಗಳ ಮನದಲ್ಲಿ ಹಸಿರಾಗಿರುತ್ತದೆ ; ಇದಕೆ ಸಂಶಯವಿಲ್ಲ .

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X