ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಸುಳ್ಳಿನ ಸುತ್ತ ಮುತ್ತ ...

|
Google Oneindia Kannada News

*ಜಾನಕಿ

Dr. U. R Ananthamurthy‘ಇಂಗ್ಲಿಷ್‌ ಸುಳ್ಳು ಹೇಳುವ ಭಾಷೆ ’ ಅಂದರು ಯು. ಆರ್‌. ಅನಂತ ಮೂರ್ತಿ.

ಅದಾದ ಎರಡು ದಿನಗಳ ನಂತರ ದಟ್ಸ್‌ ಕನ್ನಡದ ಅರಳಿಕಟ್ಟೆಯಲ್ಲಿ ಅಮೆರಿಕನ್ನಡಿಗನೊಬ್ಬ ಹೀಗಂತ ಬರೆದ :

‘ಇಂಗ್ಲಿಷ್‌ ಸುಳ್ಳು ಹೇಳುವ ಭಾಷೆ ಎಂದ್ರೆ ಏನರ್ಥ ? ಅನಂತ ಮೂರ್ತಿ ಅವರು ತೋಚಿದ್ದೆಲ್ಲ ಮಾತನಾಡುತ್ತಾರೆ. ಬಾಯಿಗೆ ಬಂದದ್ದೆಲ್ಲ ಹೇಳುತ್ತಾರೆ. ಒಂದು ಭಾಷೆ ಸುಳ್ಳು ಹೇಳೊಲ್ಲ. ಸುಳ್ಳು ಹೇಳುವವರು ಆ ಭಾಷೆಯಲ್ಲಿ ಮಾತಾಡುವವರು. ಇಂಗ್ಲಿಷ್‌ ಸುಳ್ಳಾಡುವ ಭಾಷೆ ಹೇಗಾಗುತ್ತೆ ’

ಹೀಗೆ ಅವನ ವಾದ ಸಾಗಿತ್ತು. ಅಮೆರಿಕನ್ನಡಿಗರೇ ಹಾಗೆ. ಅವರಿಗೆ ಅನಂತ ಮೂರ್ತಿಯವರೆಂದರೆ ಕೊಂಚ ಸಿಟ್ಟು. ಜಿ. ಎಸ್‌. ಶಿವರುದ್ರಪ್ಪರಷ್ಟು ಸರಳವಾಗಿ ಅರ್ಥವಾಗುವುದಿಲ್ಲ. ಲಕ್ಷ್ಮೀನಾರಾಯಣ ಭಟ್ಟರಷ್ಟು ಸುಲಭವಾಗಿ ಒದಗುವುದಿಲ್ಲ. ಸಿ. ಅಶ್ವತ್ಥರಷ್ಟು ಸಲೀಸಾಗಿ ಒಡ್ಡಿಕೊಳ್ಳುವುದಿಲ್ಲ. ನಿಸಾರ್‌ ಅಹಮದರಷ್ಟು ನಾಜೂಕಾಗಿ ಓದಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಎಷ್ಟು ಒದ್ದಾಡಿದರೂ ಅವರ ಮಾತಿನ ಕೃತಿಯ ಮತ್ತೊಂದು ಸ್ತರ ತಮಗೆ ದಕ್ಕುವುದಿಲ್ಲ. ಹೀಗೆಲ್ಲ ಅವರ ತಕರಾರುಗಳು.

ಅವರ ಈ ರಗಳೆಗಳಿಗೂ ಕಾರಣಗಳಿವೆ. ಅಮೆರಿಕೆಗೆ ಹೋಗಿ ನೆಲೆ ನಿಂತ ಕನ್ನಡಿಗರಿಗೆ ಐವತ್ತು ಕಳೆದಿದೆ. ಐವತ್ತು ಉಳಿದಿದೆ. ಕಣ್ಣ ಮುಂದೆ ಬದಲಾಗುತ್ತಿರುವ ಅಮೆರಿಕಾ ಇದೆ. ದುಡ್ಡು ಸಂಪಾದನೆ, ವಿದೇಶೀ ವ್ಯಾಮೋಹಕ್ಕೆ ಬಿದ್ದು ಅಮೆರಿಕಕ್ಕೆ ಹೋಗಿದ್ದಾರಾದರೂ ಅದನ್ನು ಒಪ್ಪಿಕೊಳ್ಳುವುದಕ್ಕೆ ಕನ್ನಡ ಅಹಂಕಾರ ಬಿಡುವುದಿಲ್ಲ. ಅಲ್ಲಿ ಹೋಗಿ ಗಳಿಸಿದ್ದು ಅಂಥದ್ದೇನಿಲ್ಲ ಅನ್ನುವುದು ಅರಿವಾಗುತ್ತಿದೆ.

ಅಲ್ಲದೇ ಇನ್ನೊಂದು ಭೀಕರ ಸಮಸ್ಯೆ ಅಮೆರಿಕನ್ನಡಿಗರ ಮುಂದೆ ಇದೆ. ಅಮೆರಿಕಾದಲ್ಲಿ ಹುಟ್ಟಿ ಬೆಳೆದ ಮಕ್ಕಳು ಹೆಚ್ಚು ಕಮ್ಮಿ ಅಮೆರಿಕನ್ನರೇ ಆಗಿದ್ದಾರೆ. ಗಂಡು ಮಕ್ಕಳನ್ನಾದರೂ ಹೇಗಾದರೂ ಸಂಭಾಳಿಸಬಹುದು. ಹೆಣ್ಣು ಮಕ್ಕಳ ಗತಿ. ಅವರಿಗೆ ಅಮೆರಿಕಾದ ಮೆಂಟಾಲಿಟಿಯೂ ಬಂದು ಬಿಟ್ಟಿದೆ. ಹೀಗಾಗಿ ಅಮೆರಿಕಾದಲ್ಲೇ ಹುಟ್ಟಿ ಬೆಳೆದ ಅನಿವಾಸಿ ಭಾರತೀಯರ ಗಂಡು ಮಕ್ಕಳಿಗೆ ಅಮೆರಿಕಾದಲ್ಲೇ ಹುಟ್ಟಿ ಬೆಳೆದ ಹೆಣ್ಣು ಮಕ್ಕಳನ್ನು ಮದುವೆಯಾಗುವ ಆಸಕ್ತಿ ಇಲ್ಲ. ಅವರು ಕರ್ನಾಟಕಕ್ಕೆ ಬಂದು ಇಲ್ಲೇ ಹುಟ್ಟಿ ಬೆಳೆದ ಹೆಣ್ಣನ್ನು ನೋಡಿ ಸಾಂಪ್ರದಾಯಿಕವಾಗಿ ಮದುವೆಯಾಗಿ ವಾಪಸ್ಸಾಗುತ್ತಾರೆ. ಕನ್ನಡ ನಾಡಿನ ಮೇಲಿನ ಅಪಾರವಾದ ಪ್ರೀತಿಯಿಂದಲ್ಲ. ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಕ್ಕಳು ಪತಿವ್ರತೆಯಾಗಿರುತ್ತಾರೆ, ಗುಲಾಮರಂತಿರುತ್ತಾರೆ. ಮನೆಯಾಳಗೆ ದುಡಿಯುತ್ತಾರೆ ಎಂಬ ಕಾರಣಕ್ಕೆ. ಅದೇ ಅಮೆರಿಕಾದಲ್ಲೇ ಹುಟ್ಟಿದ ಹುಡುಗಿಯರು ಗಂಡ ಕಾಫಿ ತಾ ಅಂದರೆ ಅವನಿಗಿಂತ ಜೋರಾಗಿ ರೇಗುತ್ತಾಳೆ. ಹೀಗಾಗಿ ಇಂಡಿಯನ್‌ ಹುಡುಗಿಯರೇ ಅವರಿಗೆ ಪ್ರೀತಿ.

ಇಂಥ ಪರಿಸ್ಥಿತಿಯಲ್ಲಿ ಅಮೆರಿಕನ್ನಡಿಗರನ್ನು ಕಾಡುವ ತೊಂದರೆಗಳು ಒಂದೆರಡಲ್ಲ. ಅಕ್ಕ ಎಂಬ ಕನ್ನಡ ಕೂಟದ ಚುನಾವಣಾ ರಾಜಕೀಯದಿಂದ ಹಿಡಿದು ಮಗಳ ಮದುವೆಯ ತನಕ ಅನೇಕ ರಗಳೆಗಳು ಅವರವು. ಅದರ ನಡುವೆ ಅನಂತ ಮೂರ್ತಿ ಏನಾದರೂ ಅಂದರೆ ಅವರಿಗೆ ಕೆಟ್ಟ ಕೋಪ ಬರುತ್ತದೆ. ಭಾರತದ ಸಮಸ್ಯೆಗಳು ಹಾಗೆ ನೋಡಿದರೆ ತೀರಾ ಸಣ್ಣವು. ಇಲ್ಲಿ ಕರೆಂಟಿರುವುದಿಲ್ಲ. ಅದರಿಂದೇನೂ ಕೊಳ್ಳೆ ಹೋಗುವುದಿಲ್ಲ. ಫೋನ್‌ ಪದೇ ಪದೇ ಕೆಡುತ್ತದೆ. ಕೆಟ್ಟರದೇ ಸ್ವರ್ಗ. ಬಸ್ಸು ಸಿಗುವುದಿಲ್ಲ. ಸಿಕ್ಕರೆ ಹತ್ತೋಕ್ಕಾಗಲ್ಲ. ರಸ್ತೆ ಕೆಟ್ಟದಾಗಿದೆ. ಮನೆಯಲ್ಲೇ ಇದ್ದರಾಯ್ತಲ್ಲ. ಆದರೆ ವಯಸ್ಸಿಗೆ ಬಂದ ಹೆಣ್ಣು ಮಗಳು ಎಂಬ ಸೆರಗಿನ ಕೆಂಡದ ಮುಂದೆ ಇದೆಲ್ಲ ಜುಜುಬಿ ಸಮಸ್ಯೆಗಳೇ.

ಹೀಗೆ ತಲೆ ತುಂಬ ತೊಂದರೆಗಳನ್ನು ಹೊತ್ತುಕೊಂಡು ಕೂತವರ ಮುಂದೆ ಸುಲಭಕ್ಕೆ ಅರ್ಥ ಬಿಟ್ಟು ಕೊಡದ ಅನಂತ ಮೂರ್ತಿಯವರ ಮಾತು ಹಾಜರಾದರೆ ? ಸಿಟ್ಟು ಬಾರದೇ ಇರುತ್ತದೆಯಾ ? ಅವರು ಭಾರತ ಬಿಟ್ಟು ಹೋಗುವ ಹೊತ್ತಿಗೆ ಚಾಲ್ತಿಯಲ್ಲಿದ್ದವರು ನವೋದಯದ ಕವಿಗಳು. ಅವರೇ ಅಮೆರಿಕನ್ನಡಿಗರಿಗೆ ಪರಮ ಪ್ರಿಯರು. ಅನಂತ ಮೂರ್ತಿ ಅಲ್ಲ. ಹೀಗಾಗಿ ಅನಂತ ಮೂರ್ತಿ ಏನೇ ಅಂದರೂ ಅವರು ಕೆಂಡ ಕಾರುತ್ತಾರೆ.

ಹಾಗೆ ನೋಡಿದರೆ ಅನಂತ ಮೂರ್ತಿ ಹೇಳಿದ್ದು ಸರಿಯಾಗೇ ಇತ್ತು. ಇಂಗ್ಲಿಷ್‌ ಸುಳ್ಳಾಡುವ ಭಾಷೆ ಅಂತ ಅವರಂದದ್ದು ಇರಾಕ್‌ ಬಗ್ಗೆ ಅಮೆರಿಕಾ ಆಡಿದ ಮಾತುಗಳನ್ನು ಕೇಳಿ. ಇರಾಕನ್ನು ಅಮೆರಿಕಾ ದ್ರೋಹಿ ಅಂದಿತು. ಅಣ್ವಸ್ತ್ರ ಬಚ್ಚಿಟ್ಟುಕೊಂಡಿದೆ ಅಂದಿತು. ಇರಾಕ್‌ ವಿರುದ್ಧ ಯುದ್ಧ ಹೂಡುವುದಕ್ಕೆ ವಿವಿಧ ಸುಳ್ಳುಗಳನ್ನು ಹೇಳಿ ಬೇರೆ ರಾಷ್ಟ್ರಗಳನ್ನೂ ವಿಶ್ವ ಸಂಸ್ಥೆಯನ್ನೂ ನಂಬಿಸಿತು. ಅದನ್ನು ಗಮನದಲ್ಲಿಟ್ಟುಕೊಂಡು ಅನಂತ ಮೂರ್ತಿ ಇಂಗ್ಲಿಷ್‌ ಸುಳ್ಳಾಡುವ ಭಾಷೆ ಅಂದರು.

ಅದು ಇನ್ನೊಂದು ಅರ್ಥದಲ್ಲೂ ನಿಜ. ಅರ್ಥವಾಗದ ಭಾಷೆ ಯಾವತ್ತೂ ಸುಳ್ಳಾಡುತ್ತಿರುತ್ತದೆ. ಹಿಂದೆ ಸಂಸ್ಕೃತ ಸುಳ್ಳು ಹೇಳುತ್ತಿತ್ತು. ಸಂಸ್ಕೃತ ಗೊತ್ತಿದ್ದವನು ಒಂದು ಶ್ಲೋಕವನ್ನು ಉದಾಹರಿಸಿ ಸಂಸ್ಕೃತ ಗೊತ್ತಿಲ್ಲದವನಿಗೆ ಸುಳ್ಳು ಹೇಳಬಹುದಾಗಿತ್ತು. ನಮ್ಮ ಅಸಮಾನತೆಯ ಮೂಲವೇ ಒಂದು ಭಾಷೆ ಹೇಳಿದ ಸುಳ್ಳು ಎನ್ನುವುದು ಈಗ ಎಲ್ಲರಿಗೂ ಗೊತ್ತಾಗಿದೆ.

ಹಾಗೇ ನಂತರ ಬಂದ ಇಂಗ್ಲಿಷ್‌ ಕೂಡ ಇಲ್ಲಿ ಸುಳ್ಳಾಡುವ ಭಾಷೆಯೇ ಆಗಿತ್ತು. ಬ್ರಿಟಿಷರು ಭಾರತವನ್ನು ಆಳುವುದಕ್ಕೆ ಸಾಧ್ಯವಾಗಿದ್ದು ಕೇವಲ ಆಯುಧ ಶಕ್ತಿಯಿಂದಷ್ಟೇ ಅಲ್ಲ. ಭಾಷೆಯಿಂದ ಕೂಡ. ಯಾವುದು ರಾಜಭಾಷೆಯಾಗಿರುತ್ತದೋ ಅದಕ್ಕೆ ಸುಳ್ಳಾಡುವ ಶಕ್ತಿ , ಸುಳ್ಳನ್ನು ಸತ್ಯವನ್ನಾಗಿಸುವ ಶಕ್ತಿ ಬೇಗ ಬಂದು ಬಿಡುತ್ತದೆ. ಅರ್ಥವಾಗದ ಭಾಷೆಗಿಂತ ಹೆಚ್ಚಿನ ಶಕ್ತಿ ಪ್ರಭುತ್ವದ ಭಾಷೆಗೂ ಇರುತ್ತದೆ. ಪ್ರಭುತ್ವ ಹೇಳಿದ್ದೇ ನಿಜವಾಗುತ್ತದೆ. ಅದು ಸುಳ್ಳಾಗಿದ್ದರೂ ಕೂಡ.

ನಮ್ಮ ವ್ಯಾಮೋಹದ ಭಾಷೆ ಕೂಡ ಸುಳ್ಳು ಹೇಳುವ ಭಾಷೆಯಾಗಿ ಬಿಡಬಲ್ಲುದು. ಇಂಗ್ಲಿಷನ್ನು ನಾವು ತುಂಬ ಪ್ರೀತಿಸುತ್ತಾ ಅದು ಹೇಳುವ ಸುಳ್ಳುಗಳನ್ನು ನಂಬತೊಡಗಿದೆವು. ಜಾಹೀರಾತಿನಲ್ಲಿ ಬಳಕೆಯಾಗುವ ಇಂಗ್ಲಿಷ್‌ ಭಾಷೆಯನ್ನೇ ನೋಡಿ. ಅದು ಎಷ್ಟೊಂದು ಪರಿಣಾಮಕಾರಿಯಾಗಿರುತ್ತದೆ. ದಿ ಕಂಪ್ಲೀಟ್‌ ಮ್ಯಾನ್‌ - ಹಾಗಂತ ಒಂದು ವಸ್ತ್ರ ಸಂಸ್ಥೆ ಜಾಹೀರಾತು ಕೊಟ್ಟರೆ ಆ ಸುಳ್ಳನ್ನು ನಾವು ನಂಬುತ್ತೇವೆ. ಅದೇ ಮಾತನ್ನು ದೇಸೀ ಭಾಷೆಯಲ್ಲಿ ಹೇಳಿದರೆ ನಕ್ಕು ಬಿಡುತ್ತೇವೆ.

ಈ ಅರ್ಥದಲ್ಲಿ ಇಂಗ್ಲಿಷ್‌ ಸುಳ್ಳಾಡುವ ಭಾಷೆ ಎಂದು ಅನಂತ ಮೂರ್ತಿ ಅವರು ಹೇಳಿರಬಹುದು. ಅದನ್ನು ವ್ಯಾಖ್ಯಾನಿಸಿ ನೋಡುವ ಶಕ್ತಿ ಕೇಳುಗನಿಗೆ ಇರಬೇಕಾಗುತ್ತದೆ.

*

ಮೇಲಿನದನ್ನು ಹೇಳುವುದಕ್ಕೆ ಕಾರಣವಾದದ್ದು ರಾಮ ಮನೋಹರ ಲೋಹಿಯಾ ಅವರ ಒಂದು ಪ್ರಬಂಧ. ಬೂಟಾಟಿಕೆ ಮತ್ತು ಎರಡು ನಾಲಗೆ ಎಂಬ ಪ್ರಬಂಧದಲ್ಲಿ ಲೋಹಿಯಾ ಬರೆಯುತ್ತಾರೆ -

ಈ ನಾಡಿನ ಎರಡು ನಾಲಿಗೆ ಮತ್ತು ಠಕ್ಕ ನಡವಳಿಕೆಗಳಲ್ಲಿ ಮುಖ್ಯವಾದದ್ದು ಈ ಸರ್ಕಾರಿ ಆಡಳಿತದ ಸಂಪೂರ್ಣ ವ್ಯವಹಾರ ಮತ್ತು ಜನರ ನಾಗರಿಕ ಅಸಹಕಾರ. ಇಡೀ ಪ್ರಪಂಚದ ಇತಿಹಾಸವನ್ನು ಗಮನಿಸಿದರೆ ಮಹಾತ್ಮಾ ಗಾಂಧಿಯವರ ಮುಕ್ತ ಮತ್ತು ಪ್ರಜಾ ಪ್ರಭುತ್ವವಾದಿ ಭಾರತದಲ್ಲಿ ಆಗಿರುವಷ್ಟು ಪೊಲೀಸ್‌ ಗೋಲಿಬಾರುಗಳು ಮತ್ತು ನಾಗರಿಕ ಆದರೆ ಹಿಂಸಾತ್ಮಕ ಸಾವುಗಳು ಬೇರಾವುದೇ ಮುಕ್ತ ಮತ್ತು ಪ್ರಜಾ ಪ್ರಭುತ್ವವಾದೀ ದೇಶದಲ್ಲಿ ನಡೆದಿಲ್ಲ.

ಈ ಎರಡು ನಾಲಗೆ ಪ್ರವೃತ್ತಿಗೊಂದು ಇತ್ತೀಚಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇಂಡಿಯಾ ಟುಡೇಯಂಥ ವಾರಪತ್ರಿಕೆಯಾಂದು ಮುಖಪುಟದಲ್ಲಿ ಐಶ್ವರ್ಯ ರೈಯ ಫೋಟೋ ಪ್ರಕಟಿಸಿ ಅದರ ಕೆಳಗೆ ಗ್ಲೋಬಲ್‌ ಗಾಡ್‌ಡೆಸ್‌ ಎಂದು ಬರೆಯುತ್ತದೆ. ಐಶ್ವರ್ಯಾ ರೈ ಬಾಂಡ್‌ ಚಿತ್ರದಲ್ಲಿ ನಟಿಸುತ್ತಿರುವುದು ನಿಜ. ಬಾಂಡ್‌ ಚಿತ್ರಗಳು ತಮ್ಮ ರೀಚ್‌ ಕಳೆದುಕೊಂಡಿರುವುದೂ ನಿಜ. ಐಶ್ವರ್ಯಾ ರೈ ಬಾಂಡ್‌ ಚಿತ್ರದಲ್ಲಿ ನಟಿಸುವುದು ಎಷ್ಟೇ ಆದರೂ ಸಿನಿಮಾ ಪುಟದ ಸುದ್ದಿ. ಅದು ಮುಖಪುಟಕ್ಕೆ ಬಂದಾಗ ಆಕೆಯನ್ನು ವಿಶ್ವ ದೇವತೆ ಎಂದು ಕರೆದಾಗ ಇಂಗ್ಲಿಷ್‌ ಸುಳ್ಳು ಹೇಳುವ ಭಾಷೆ ಅನ್ನಿಸಿಕೊಳ್ಳುತ್ತದೆ. ಕನ್ನಡದ ಯಾವ ಪತ್ರಿಕೆಯೂ ಆಕೆಯನ್ನು ಮುಖಪುಟಕ್ಕೆ ಹಾಕಿ ಅಂಥದ್ದೊಂದು ಹೆಡ್ಡಿಂಗು ಕೊಡುವುದಕ್ಕೆ ಹೋಗುವುದಿಲ್ಲ. ಅದಕ್ಕೇ ಕನ್ನಡ ಸತ್ಯ ಹೇಳುವ ಭಾಷೆ.

ಇಂಗ್ಲಿಷ್‌ ಹೇಗೆ ಸುಳ್ಳು ಹೇಳುತ್ತದೆ ಅನ್ನುವುದಕ್ಕೆ ಮತ್ತೊಂದಷ್ಟು ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಬಹುತೇಕ ಇಂಗ್ಲಿಷ್‌ ಪತ್ರಿಕೆಗಳು ಇಂಥ ಸುಳ್ಳುಗಳನ್ನು ಹೇಳುತ್ತಾ ಹೋಗುತ್ತವೆ ಅನ್ನುವುದಕ್ಕೆ ಅವುಗಳಲ್ಲಿ ಪ್ರಕಟವಾಗುವ ವರದಿಗಳೇ ಸಾಕ್ಷಿ. ಸುಳ್ಳು ಹೇಳುವುದರ ಜೊತೆಗೆ ಅವು ಲೋಲುಪವಾಗುತ್ತಾ ವಲ್ಗರ್‌ ಆಗುತ್ತಾ ಹೋಗುತ್ತಿವೆ.

ಹಾಗೆ ಸುಳ್ಳು ಹೇಳುವ ಭಾಷೆಗೆ ಅತ್ಯುತ್ತಮವಾದ ಸಾಹಿತ್ಯವನ್ನು ಸೃಷ್ಟಿಸುವುದೂ ಸಾಧ್ಯವಾಗುವುದಿಲ್ಲ. ಕಳೆದ ಕೆಲವು ದಶಕಗಳಿಂದ ಅಮೆರಿಕಾದಲ್ಲಿ ಅತ್ಯುತ್ತಮ ಸಾಹಿತ್ಯ ಸೃಷ್ಟಿಯಾದಂತಿಲ್ಲ. ಯುರೋಪಿಯನ್‌ ದೇಶಗಳ ಲೇಖಕರಲ್ಲಿರುವ ಸಂವೇದನೆಯಾಗಲೀ ತೀವ್ರತೆಯಾಗಲೀ, ಕನಿಷ್ಠ ಪ್ರಾಮಾಣಿಕತೆಯಾಗಲೀ ಅಮೆರಿಕನ್ನರಲ್ಲಿ ಇಲ್ಲ. ಸಾಹಿತ್ಯದ ಮಾತು ಹಾಗಿರಲಿ, ಅಮೆರಿಕಾದಿಂದ ಒಂದು ಒಳ್ಳೆಯ ಸಿನಿಮಾ ಕೂಡ ತಯಾರಾದದ್ದು ಕಾಣೆ. ಹಾಲಿವುಡ್‌ ಅಷ್ಟೊಂದು ಸುಳ್ಳು ಬುರುಕ ಪ್ರಪಂಚ ಆಗಿಬಿಟ್ಟಿದೆ.


ಪೂರಕ ಓದಿಗೆ-
ವಿಶ್ವದ ದೊಡ್ಡ ಸುಳ್ಳಾಡುವ ಭಾಷೆ ಇಂಗ್ಲಿಷ್‌-ಅನಂತಮೂರ್ತಿ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X