ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಊರಿನ ಹಂಗು

By Staff
|
Google Oneindia Kannada News
  • ಕೋಡಿಬೆಟ್ಟು ರಾಜಲಕ್ಷ್ಮಿ
‘ಈ ಬಾರಿ ಎರಡು ದಿನ ಜಾಸ್ತಿ ರಜೆ ತೆಗೆದುಕೊಂಡು ಊರಿಗೆ ಹೋಗಬೇಕು. ಜ್ವಾಳದ ರೊಟ್ಟಿ ರವಷ್ಟು ಜಾಸ್ತೀನೇ ತರಬೇಕು. ಶೇಂಗಾ ಚಟ್ನಿ ಪುಡಿ ಖಾಲಿಯಾಗಿ ತಿಂಗಳಾಯಿತು. ಅಮ್ಮನಿಗೆ ಫೋನ್‌ ಮಾಡಿ ಚಟ್ನಿ ಪುಡಿ ರೆಡಿ ಮಾಡಿ ಇಡಾಕೆ ಹೇಳಬೇಕು’ ಅಂತ ಬೆಂಗಳೂರಿನ ಶಹರದ ಹಲ್ಲಾಗುಲ್ಲಾಗಳ ನಡುವೆ ಪುಟಾಣಿ ಮನೆ ಮಾಡಿಕೊಂಡ ಗೃಹಿಣಿಯಾಬ್ಬಳು ಅಡುಗೆ ಮನೆಯಲ್ಲಿ ಒಗ್ಗರಣೆ ಹಾಕುತ್ತಲೇ ಯೋಚನೆ ಮಾಡುತ್ತಾಳೆ.

ಹೌದು. ಬೆಂಗಳೂರಿನಲ್ಲಿನ ಮನೆಗಳಿಗೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ಬಿಟ್ಟು ಬಂದ ಊರಿನ ಲಿಂಕುಗಳು. ಊರಿನ ಪ್ರೀತಿಯ ಹಂಗುಗಳು. ಊರಿನಿಂದ ತರುವ ಜೋಳಾ ಹಿಟ್ಟು, ಚಟ್ನಿ ಪುಡಿಗಳಿಗೆ ಇರುವ ಕಿಮ್ಮತ್ತು ಬೆಂಗಳೂರಿನ ಅಡುಗೆ ಮನೆಯಲ್ಲೇ ತಯಾರಾದ ತಿನಿಸುಗಳಿಗೆ ಇರುವುದಿಲ್ಲ. ಯಾವುದೋ ಕಾರಣಕ್ಕೆ ಊರಿನ ಕೆಎಸ್ಸಾರ್ಟಿಸಿ ಬಸ್ಸು ಹತ್ತಿ ಅಥವಾ ರೈಲಿನ ಬೋಗಿಗಳಲ್ಲಿ ಅನ್‌ರಿಸರ್‌ವ್ಡ್‌ ಸೀಟು ಹಿಡಿದುಕೊಂಡು ಬೆಂಗಳೂರಿಗೆ ಬಂದವರನ್ನು ಬೆಂಗಳೂರಿನ ಅಂಟು ಅಂಟಿಸಿಕೊಂಡು ಬಿಡುತ್ತದೆ.

cement forestಬೆಂಗಳೂರಿನಲ್ಲಿ ಬರೀ ಪೊಲ್ಯೂಷನ್ನು. ಈ ಊರಲ್ಲಿ ಕೈಕಾಲು ಬೀಸಿ ನಡೆದಾಡಬೇಕಿದ್ದರೂ ಟಿಕೀಟು ತಗೊಂಡು ಲಾಲ್‌ಬಾಗ್‌ಗೆ ಹೋಗಬೇಕು. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಬಚಾವ್‌ ಆಗಿ ದಿನವನ್ನು ದೂಡುವಾಗ ಆಗುವ ತ್ರಾಸ ನೆನೆಸಿಕೊಂಡರೆ ಊರಿನಲ್ಲಿ ಮೈಲುಗಟ್ಟಲೆ ನಡೆದು ಮನೆ ಸೇರಿ ಅಮ್ಮ ಕೊಟ್ಟ ಮಜ್ಜಿಗೆ ಕುಡಿಯುವುದೇ ಹಿತ ಎನಿಸುತ್ತದೆ... ಹೀಗೆಲ್ಲಾ ಯೋಚನೆ ಮಾಡುತ್ತಲೇ ‘ಮಂದಿ’ ಬೆಂಗಳೂರಿನ ಬದುಕಿಗೆ ಗೊತ್ತಿಲ್ಲದೆಯೇ ಅಂಟಿಕೊಂಡು ಬಿಟ್ಟಿರುತ್ತಾರೆ.

ಜೊತೆಗೆ ಊರಿನ ಹಂಗನ್ನು ಹಾಗೆಯೇ ಇಟ್ಟುಕೊಂಡು ಸುಳ್ಳು ಸುಳ್ಳೇ ಸೆಕ್ಯೂರ್ಡ್‌ ಫೀಲಿಂಗ್‌ ತಂದುಕೊಂಡು ನಿದ್ದೆ ಹೋಗುತ್ತಾರೆ. ಬೆಳಗ್ಗೆ ಟಿಣ್‌ ಟಿಣ್‌ ಗಂಟೆ ಬಾರಿಸುವ ಕಸದ ಗಾಡಿಗೆ ಕಸ ಸುರಿಯುತ್ತಾರೆ. ಪಲಾವ್‌ ಬಾತ್‌ಗಳನ್ನು ಅವಸರವಸರವಾಗಿ ತಿಂದುಕೊಂಡು ಆಫೀಸಿಗೆ ಹೊರಡುತ್ತಾರೆ. ಜೊತೆಗೆ ಯಾರಾದರೂ ಲೋಕಾಭಿರಾಮದ ಮಾತಿಗೆ ಸಿಕ್ಕರೆ ತಮ್ಮ ಊರಿನ ವಿಶೇಷ- ಊರಿನ ಪತ್ರೊಡೆಯನ್ನೋ, ನೀರುದೋಸೆಯನ್ನೋ, ಶ್ಯಾವಿಗೆ, ರೊಟ್ಟಿಯನ್ನೋ ಜ್ಞಾಪಿಸಿಕೊಂಡು ಬೆಂಗಳೂರಿನಲ್ಲಿ ಅದೆಲ್ಲ ಎಲ್ಲಿ ಸಿಗಬೇಕು ಹೇಳಿ.. ಎಂದು ಇಲ್ಲಾಜಿಕ್‌ಕಲ್‌ ಆಗಿ ಬೇಜಾರು ಮಾಡಿಕೊಳ್ಳುತ್ತಾರೆ.

ಮುಂಚೆ ಊರಲ್ಲಿದ್ದಾಗ ಎಷ್ಟು ಚೆನ್ನಾಗಿತ್ತು...? ನೀರಿಗೆ ಹೀಗೆ ಪ್ರಾಬ್ಲೆಮ್‌ ಇರಲೇ ಇರಲಿಲ್ಲ. ಬಾವಿಯಿಂದ ಸೇದಿ ತೆಗೀತಾ ಇದ್ವಿ. ಒಳ್ಳೇ ವ್ಯಾಯಾಮ ಆಗುತ್ತಿತ್ತು. ಇಲ್ಲಿ ನೋಡಿ ನೀರೇ ಬರಲ್ಲ. ಆರೋಗ್ಯ ಬೇರೆ ಸರಿ ಇಲ್ಲ. ಈ ಸೈನಸ್‌ಗೆ ವಾಕಿಂಗ್‌ ಒಂದೇ ಮದ್ದು ಅಂತ ಡಾಕ್ಟರು ಹೇಳ್ತಾರೆ. ಬೆವರು ಬರುವ ಹಾಗೆ ವಾಕಿಂಗ್‌ ಮಾಡಬೇಕಂತೆ.

‘ಮುಂಚೆ ಎಲ್ಲಾ , ಊರಲ್ಲಿ ಮಳೆ ಬಂತು ಅಂದ್ರೆ ಎಷ್ಟು ಖುಷಿ ಆಗ್ತಿತ್ತು ಗೊತ್ತಾ. ಕೊಡೆ ಹಿಡಿದುಕೊಂಡು ಕಾಡ ನೀರು ಹರಿಯುವುದನ್ನು ನೋಡಲಿಕ್ಕೆ ಅಂತಲೇ ಮನೆ ಹಿಂದಿನ ಹಿತ್ತಿಲು ದಾಟಿ ಹೋಗುತ್ತಿದ್ದೆ. ಆದರೆ ಈ ಬೆಂಗಳೂರು ಸರಿ ಇಲ್ಲ ನೋಡಿ. ನೀರು ಹರಿದು ಹೋಗುವುದೇ ಇಲ್ಲ. ಮಳೆ ಬಂದರು ಕಪ್ಪು ನೀರು ಕಾಲಿಗಂಟುತ್ತದೆ, ಟ್ರಾಫಿಕ್‌ ಬೇರೆ, ಅವತ್ತಿನ ಕೆಲಸ ಎಲ್ಲಾ ಲೇಟು, ಹಾಳು.’

ಈ ಬಾರಿ ಊರಿಗೆ ಹೋದರೆ ತೆಂಗಿನ ಕಾಯಿ ಜಾಸ್ತಿ ತರಬೇಕು. ಇಲ್ಲಿ ಕುಂದ್ರಿ ಕಾಯಿಗೇ ಎಂಟು ರೂಪಾಯಿ ಹೇಳ್ತಾರೆ. ಮುಂದಿನ ತಿಂಗಳಲ್ಲಿ ಸತ್ಯನಾರಾಯಣ ಪೂಜೆ ಬೇರೆ ಇದೆ. ಕಾಯಿ ಜಾಸ್ತಿ ಬೇಕಾಗುತ್ತದೆ. ಹಾಗೆ ಗಾಣ ಹಾಕಿದ ತೆಂಗಿನೆಣ್ಣೆ ಇದ್ದರೂ ಎರಡು ಕ್ಯಾನ್‌ಗಳಲ್ಲಿ ತಂದು ಬಿಟ್ಟರಾಯ್ತು. ಮನೆಯ ಮುಂದಿನ ಹಲಸಿನ ಮರದಲ್ಲಿ ಈ ವರ್ಷ ಜಾಸ್ತಿ ಹಲಸಿನ ಕಾಯಿ ಆಗಿದೆಯಂತೆ. ಅಮ್ಮನಿಗೆ ಹಪ್ಪಳ ಹಾಕಲಿಕ್ಕೆ ಹೇಳಬೇಕು. ಊರಿನ ಹಪ್ಪಳದ ಮುಂದೆ ಈ ಎಂಟಿಆರ್‌ ಹಪ್ಪಳಕ್ಕೂ ಕಿಮ್ಮತ್ತಿಲ್ಲ. ಜಾಸ್ತಿ ಪಾಲಿಷ್‌ ಮಾಡಿದ ಅಕ್ಕಿ ಇದ್ದರೂ ತರಿಸಿಕೊಂಡು ಬಿಡಬೇಕು. ದಿನೇ ದಿನೇ ಮನೆ ಖರ್ಚು ಮುಗಿಲು ಮುಟ್ಟುತ್ತಿದೆ.

ಹೀಗೆ ಊರಿನಿಂದ ಅದು ತರಬೇಕು, ಇದು ತರಬೇಕು, ಊರಿಗೆ ಹೋದಾಗ ಒಂದು ಯಕ್ಷಗಾನ ನೋಡಬೇಕು. ಟೆಂಟಿನ ನಾಟಕ ನೋಡಬೇಕು. ಜಾತ್ರೆಯಲ್ಲಿ ಐಸ್‌ಕ್ಯಾಂಡಿ ತಿನ್ನಬೇಕು. ಬೆಂಗಳೂರಲ್ಲಿ ಇಷ್ಟು ದೊಡ್ಡವರಾದ ಮೇಲೆ ಐಸ್‌ ಕ್ಯಾಂಡಿ ತಿನ್ನಲಿಕ್ಕೂ ಮುಜುಗರ....ಊರಿನ ಯೋಚನೆಗಳು ಸಾಲು ಸಾಲು.

ಇದರ ಜೊತೆಗೇ ನೆನಪುಗಳು. ಊರಲ್ಲಿದ್ದಾಗ ಹಸು ಕರೆದದ್ದು, ಕರೆದ ಕೂಡಲೇ ಬಿಸಿ ಹಾಲನ್ನು ಕುಡಿದದ್ದು, ಮಜ್ಜಿಗೆ ಕಡೆಯುತ್ತಲೇ ಬೆಣ್ಣೆಯ ತುಣುಕುಗಳಿರುವ ಮಜ್ಜಿಗೆ ಕುಡಿದದ್ದು, ಮಳೆಗಳಲ್ಲಿ ಆಟವಾಡಿದ್ದು, ಬಸ್ಸುಗಳಲ್ಲಿ ನೇತಾಡಿಕೊಂಡು ಪೇಟೆಗೆ ಹೋಗಿದ್ದು... ಈ ಬಿಟಿಎಸ್‌ ಬಸ್‌ಗಳಿಗಿಂತ ಸಿಕ್ಕಾಪಟ್ಟೆ ರಶ್ಶಾಗಿರುವ ಊರಿನ ಒಂದೆರಡೇ ಬಸ್ಸುಗಳು ಯಾಕೆ ಇಷ್ಟವಾಗುತ್ತವೋ....!

ಊರಿನಲ್ಲಿ ಖರ್ಚು ಕಮ್ಮಿ. ತಿಮಾರೆಯೋ, ಎಲೆಮುರಿ ಸೊಪ್ಪೋ ತಂದು ತಂಬುಳಿ, ಪಲ್ಯ ಮಾಡಿದರೆ ಆಯ್ತು. ಇಲ್ಲಿ ತರಕಾರಿ ರೇಟು ಕೇಳಿದ್ರೇನೇ ತಲೆ ತಿರುಗುತ್ತೆ .

ಹಾಗಾದರೆ ಯಾಕೆ ಬೆಂಗಳೂರಿನಲ್ಲೇ ಇದ್ದೀರಿ... ಆ ಕಡಿಮೆ ಖರ್ಚಿನ, ಸುಂದರ ನೆನಪುಗಳ ಕಟ್ಟಿಕೊಡುವ, ಚೆಂದದ ಮಳೆಯಲ್ಲಿ ನೆನೆಯಬಹುದಾದ, ದಿನವೂ ಹಪ್ಪಳ ಸಂಡಿಗೆ ಸಿಗುವ ಆ ಊರಿಗೇ ಹೋಗಬಹುದಲ್ಲಾ... !!

‘ಅಯ್ಯೋ, ಬಿಡಿ... ನಮ್ಮೆಜಮಾನ್ರಿಗೆ ಊರಿಗೆ ಹೋಗಲು ಇಷ್ಟವಿಲ್ಲ. ಅವರಿಗೆ ಐಡೆಂಟಿಟಿ ಹುಚ್ಚು. ಬೆಂಗಳೂರಿನಲ್ಲಿದ್ರೆ ಹೆಚ್ಚು ಅವಕಾಶಗಳು ಸಿಕ್ತಾವಂತೆ. ಅದೂ ಹೌದು ಬಿಡಿ. ಇಲ್ಲಿ ನೆಮ್ಮದಿ ಮತ್ತು ಅಪ್ಪ ಅಮ್ಮ ಎರಡು ಬಿಟ್ಟು ಉಳಿದ ಎಲ್ಲವೂ ಸಿಗುತ್ತೆ. ಅಲ್ಲಿನ ಜಮೀನು ಕೆಲಸ ಮಾಡುವುದನ್ನು ಬಿಟ್ಟು ತುಂಬಾ ವರ್ಷ ಆಯ್ತು. ಈಗ ಮತ್ತೆ ಮೈ ಕೈಗೆ ಕೆಸರು ಮೆತ್ತಿಕೊಳ್ಳುವುದಕ್ಕಾಗುತ್ಯೇ...?’

‘ಊರಿಗೆಲ್ಲ ಹೋಗಲಿಕ್ಕೆ ಆಗಲ್ರೀ. ... ನಮ್ಮ ಕಂಪೆನಿಯ ಬ್ರಾಂಚ್‌ ಊರಿನಲ್ಲಿ ಇಲ್ಲ. ಇಲ್ಲಾಂದ್ರೆ ಟ್ರಾನ್ಸ್‌ಫರ್‌ ಆದ್ರೂ ತಗೊಬಹುದಿತ್ತು.’

‘ನನ್ನ ಹೆಂಡ್ತಿ ಊರಿನಲ್ಲಿ ಅಪ್ಪ ಅಮ್ಮ ಜೊತೆ ಹೊಂದಿಕೊಳ್ಳಲ್ಲ. ಅಲ್ಲೇ ಇದ್ರೆ ಬೇರೆ ಮನೆ ಮಾಡಲಿಕ್ಕೆ ಆಗುತ್ಯೇ ? ಅದಕ್ಕೇ ದೂರದ ಬೆಟ್ಟ ನುಣ್ಣಗೆ ಅಂತ ಇದೇ ಬೆಂಗಳೂರಿನಲ್ಲಿದ್ದೇವೆ.’

ಊರು ಒಂದು ಚೆಂದದ ಕನಸು

ಅದು ಕೈಗೆಟುಕಿ ಬಿಟ್ಟರೆ ಎಲ್ಲವೂ ಮುಗಿದ ಹಾಗೆ. ಪ್ರೀತಿಸಿ, ಪ್ರೇಮಿಸಿ, ಕಾದು ಕಾದು ಮದುವೆಯಾದ ನಂತರ ಪ್ರೇಮಿಸುವಾಗ ಇದ್ದ ಬಿಸುಪು ಎಲ್ಲೋ ಕಳೆದು ಹೋದ ಹಾಗೆ. ಆ ಕನಸನ್ನು ಎದೆಯ ಮೂಲೆಯಲ್ಲಿ ಬಚ್ಚಿಟ್ಟುಕೊಂಡು, ಅದಕ್ಕೊಂದು ಸುಂದರವಾದ ಜಾಗ ಮಾಡಿಕೊಟ್ಟು, ಈ ಬೆಂಗಳೂರೆಂಬ ಮಹಾ ನಗರಿಯನ್ನು ಮಾಯಾವಿಯೆಂದೋ, ಬಜಾರಿಯೆಂದೋ ಬೈಯ್ದುಕೊಂಡು ಊರನ್ನು ಹೊಗಳುತ್ತಾ, ಊರಿನಲ್ಲಿ ಅಮ್ಮನ ಕೈಯ ಅಡುಗೆಯನ್ನು ಹೊಗಳುತ್ತಾ ಇಲ್ಲೇ ವಾಕಿಂಗ್‌ ಹೋಗುತ್ತಾ, ಇಲ್ಲೇ ನಾಲ್ಕು ಗೋಡೆಗಳ ಮಧ್ಯೆ ಟೀವಿಯಲ್ಲಿ ಕಳೆದು ಹೋಗಿ, ಆಫೀಸು ಮತ್ತು ಟ್ರಾಫಿಕ್ಕಿನಲ್ಲಿ ಸಿಕ್ಕಿ ಹಾಕಿಕೊಂಡು ರೇಗುತ್ತಾ ಬಾಳುವುದನ್ನು ಒಪ್ಪಿಕೊಂಡ ನಂತರ ತಾನೇ ಬೆಂಗಳೂರ ಸೂರಿಗೆ ಶರಣಾಗಿದ್ದು !

ಇಲ್ಲೇ ಹುಡುಕಿ, ಹೊಸ ರುಚಿಯ ಹೋಟೆಲ್‌ಗಳನ್ನು, ಇಲ್ಲೇ ಆವಿಷ್ಕರಿಸಿ ಮನೆಯಲ್ಲೇ ನಾರ್ತ್‌ ಇಂಡಿಯನ್‌ ಡಿಶ್‌ ಹೇಗೆ ಮಾಡುವುದು ಅಂತ , ಇಲ್ಲೇ ಲಾಲ್‌ಬಾಗ್‌, ಹನುಮಂತ ನಗರದ ಪಾರ್ಕ್‌ಗಳಲ್ಲಿ ಹಸಿರು, ತಂಗಾಳಿಯನ್ನು ಹುಡುಕಿ, ಊರನ್ನು, ಊರಿನ ಅಮ್ಮನನ್ನು ನೆನೆಸಿಕೊಂಡು ಬದುಕುವುದು.

ಬೆಂಗಳೂರೂ ಚೆನ್ನಾಗಿದೆ. ಗಾಡಿ ತಳ್ಳಿಕೊಂಡು ಬೆಳಗ್ಗೇ ಮನೆ ಮುಂದೆ ತರಕಾರಿ ಕೂಗುತ್ತಾ ಹೋಗುವಾತ, ಮಲ್ಲಿಗೆ ಮಾರುವವಳು, ಕಾಲೋನಿಗಳಲ್ಲಿ ಹರಡುವ ಸುದ್ದಿಗಳು, ಮನೆ ಓನರ್‌ನ ಚಿರಿಪಿರಿಗಳು, ಬಿಟಿಎಸ್‌ ಬಸ್ಸಿನ ಗಲಾಟೆಗಳು ತಮ್ಮದೇ ಐಟೆಂಟಿಟಿ ಹೊತ್ತುಕೊಂಡು ಮಿಂಚುವುದಿಲ್ಲವೇ... ಅವುಗಳ ನಡುವೆ ಊರಿನ ಕನಸಿನ ಮೂಟೆಯಾಂದಿಗೇ ದಿನಗಳು ತೆವಳುತ್ತವಲ್ಲಾ...!!

ಅಷ್ಟು ಸಾಕು ಬಿಡಿ.

ಈ ಲೇಖನದ ಕುರಿತು ಪ್ರತಿಕ್ರಿಯೆಗಳಿಗೆ ಸ್ವಾಗತ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X