• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳ್ಳಿ ಬದುಕಿನ ದಿಲ್ಲಿ ಹಾದಿ

By Staff
|

ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮ ರಾಜ್ಯದ ಗ್ರಾಮೀಣ ಬದುಕು ಬಹಳವಾಗಿ ಬದಲಾಯಿಸಿದೆ.

ಇದಕ್ಕೆ ಕಾರಣ ವಿದ್ಯುದೀಕರಣ, ರಸ್ತೆ ಮತ್ತು ಸಾರಿಗೆ, ದೂರವಾಣಿ, ದೂರ ದರ್ಶನ, ಉಪಗ್ರಹ ದೂರದರ್ಶನ, ವಿಸ್ತರಿಸುತ್ತಿರುವ ‘ಕೊಳ್ಳುವವನ ಮಾರುಕಟ್ಟೆ’ ಮತ್ತು ಸಾಧಾರಣವಾಗಿ ಪ್ರತೀ ಹೋಬಳಿಯಲ್ಲಿ ಶುರುವಾಗಿರುವ ಖಾಸಗಿ ಇಂಗ್ಲಿಷ್‌ ಮಾಧ್ಯಮದ ಶಾಲೆಗಳು ಮತ್ತು ವಿಸ್ತೃತವಾಗಿ ದೊರೆಯುತ್ತಿರುವ ಕಾಲೇಜ್‌ ವಿದ್ಯಾಭ್ಯಾಸ.

ಹಳ್ಳಿಯ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಿದೆ. ಹಳ್ಳಿಯ ಮಧ್ಯಮ ವರ್ಗದವರ ಮನೆಗಳಲ್ಲಿ ದ್ವಿಚಕ್ರ ವಾಹನಗಳು ನಿತ್ಯ ಬಳಕೆಯಲ್ಲಿವೆ. ಅನುಕೂಲವಂತರ ಮನೆಗಳಲ್ಲಿ ಕಾರು ಜೀಪುಗಳ ಬಳಕೆ ಇದೆ. ಜನಸಾಮಾನ್ಯರ ಓಡಾಟಕ್ಕೆ ಕೂಡ ಹಳ್ಳಿ ಊರುಗಳಿಗೆ ಬಸ್ಸುಗಳ ಸಂಚಾರ ಹೆಚ್ಚಿದೆ. ಅದಲ್ಲದೆ ಖಾಸಗಿ ವ್ಯಾನುಗಳು ಜನಸಾಮಾನ್ಯರ ಒಡಾಟಕ್ಕೆ ಮತ್ತು ಸರಕು ಸಾಗಣೆಗೆ ದೊರೆಯುತ್ತಿವೆ. ಪೇಟೆಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ತ್ರಿಚಕ್ರಿ ‘ಆಟೋರಿಕ್ಷಾ’ ಈಗ ಸರ್ವ ವ್ಯಾಪಿ ವಾಹನವಾಗಿದೆ. ಹಳ್ಳಿಯ ಪ್ರತ್ಯೊಬ್ಬ ಸಂಸಾರಿಯೂ ‘ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕು’ ಎಂಬ ನಿರ್ಧಾರ ಮಾಡಿರುವುದು ಸರ್ವ ವ್ಯಾಪಿಯಾಗಿ ಗೋಚರವಾಗುತ್ತಿದೆ. ಬೆಳಗ್ಯೆ ಎದ್ದರೆ ಗಂಡು ಹೆಣ್ಣೆಂಬ ಭೇದವಿಲ್ಲದೆ ಮಕ್ಕಳು ಠೀಕಾಗಿ ಯೂನಿಫಾರಂ ಧರಿಸಿ ತರಹೇವಾರಿ ವಾಹನಗಳಲ್ಲಿ ಮತ್ತು ಸಾರ್ವಜನಿಕ ಬಸ್ಸುಗಳಲ್ಲಿ ಶಾಲೆಗೆ ಹೊರಡುತ್ತಿರುವುದು ದೈನಂದಿನ ದೃಶ್ಯ. ವಿದ್ಯಾರ್ಜನೆಯ ಬಗ್ಯೆ ಜನರು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ವಾಹನ ಸೌಕರ್ಯವಿರುವುದರಿಂದ ಹಳ್ಳಿಯ ಯುವಜನರು ತಮ್ಮ ತಮ್ಮ ಮನೆಗಳಲ್ಲೇ ವಾಸಿಸಿಸುತ್ತಾ ಹತ್ತಿರದ ಶಾಲೆ ಕಾಲೇಜುಗಳಿಗೆ ಹೋಗಿಬರುವುದು ಸಾಮಾನ್ಯ ದೃಶ್ಯವಾಗಿಬಿಟ್ಟಿದೆ.

The memories of traditional farmerಸಾಮಾನ್ಯವಾಗಿ ಗ್ರಾಮೀಣ ಜನರು ಬೇಗನೆ ಮಲಗಿ ಬೇಗನೆ ಎದ್ದು ತಮ್ಮ ಕೆಲಸಗಳಲ್ಲಿ ಮಗ್ನರಾಗುತ್ತಿದ್ದರು. ಹಳ್ಳಿಗಳು ಸಾಯಂ ಎಂಟು ಎಂಟೂವರೆ ಗಂಟೆಗೆ ನಿದ್ರೆಯಲ್ಲಿ ಮುಳುಗಿರುತ್ತಿದ್ದ ಕಾಲವೊಂದಿತ್ತು. ತದನಂತರ ಹಳ್ಳಿ ಹಳ್ಳಿಗೂ ವಿದ್ಯುತ್‌ ಹರಿದು ಬಂತು. ವಿದ್ಯುತ್‌ ಬೆಳಕಿನಲ್ಲಿ ಜನರು ಆರಾಮಾಗಿ ಓದುತ್ತಾ, ಹರಟೆ ಹೊಡೆಯುತ್ತಾ, ರೇಡಿಯಾ ಟೇಪ್‌ ರೆಕಾರ್ಡರ್‌ ಮೊದಲಾದುವನ್ನು ಕೇಳುತ್ತಾ ಸ್ವಲ್ಪ ತಡವಾಗಿ ಮಲಗಿ ನಿದ್ರಿಸಲು ಶುರು ಮಾಡಿದರು. ಆಮೇಲೆ ಬಂತು ಟೀವಿ, ಟೀವಿಯ ಬೆನ್ನಿಗೆ ವೀಸೀಆರ್‌, ತದನಂತರ ಧಾಳಿಯಿಟ್ಟವು ‘ಡಿಶ್‌ ಅಂಟೆನಾ’ ಮತ್ತು ಉಪಗ್ರಹ ಟೀವಿ ‘ಚಾನಲ್‌’ಗಳು! ಮನೆಯ ಪ್ರತಿಯಾಬ್ಬರಿಗೂ ಒಂದೊಂದು ಚಾನಲ್‌ ಇಷ್ಟ ! ಶುರುವಾಯಿತು ಅಹೋ ರಾತ್ರಿ ಟೀವಿ ವೀಕ್ಷಣೆ ! ಮಧ್ಯೆ ವಿದ್ಯುತ್‌ ವ್ಯತ್ಯಯವಾಗಲು ಶುರುವಾದರೆ ಹೆಚ್ಚಿನ ಗ್ರಾಮೀಣ ಮನೆಗಳಲ್ಲಿ ‘ಜೆನ್‌ ಸೆಟ್‌’ ಕೂಡಾ ಸ್ಥಾಪಿಸಲ್ಪಟ್ಟುವು. ಡಿಶ್‌ ಆಂಟೆನಾ, ಉಪಗ್ರಹ ಟೀವಿ ಶ್ರೀಮಂತ ಹಾಗೂ ಮಧ್ಯಮ ವರ್ಗದ ಮನೆಗಳಲ್ಲಿ ರಾರಾಜಿಸಿತು. ‘ವೀ ಸಿ ಆರ್‌’ಗಳು ಗ್ರಾಮೀಣ ಜನರಿಗೆ ಮನೆಯಲ್ಲಿ ಕುಳಿತೇ ಸಿನೆಮಾಗಳನ್ನು ನೋಡಿ ಆನಂದಿಸುವ ಅವಕಾಶ ಮಾಡಿಕೊಟ್ಟವು. ಹಳ್ಳಿಗಳಲ್ಲಿ ಕೂಡಾ ಕೇಬಲ್‌ ಟೀವಿ ಮತ್ತು ವೀಡಿಯೋ ಲೈಬ್ರರಿಗಳು ಹುಟ್ಟಿಕೊಂಡುವು. ಈ ತೆರನಾದ ಟೀವಿಯ ಭರಾಟೆಯ ನಡುವೆ ಹಳ್ಳಿಯ ದೈನಂದಿನ ಕಾರ್ಯಕ್ರಮಗಳಾದ ದೇವರ ಭಜನೆ, ಮಕ್ಕಳ ಬಾಯಿಪಾಠ ಕಾರ್ಯಕ್ರಮ ಮತ್ತು ಸಂಜೆ ಎಲ್ಲರೂ ಒಟ್ಟಿಗೆ ಕುಳಿತು ಉಣ್ಣುವ ಸೌಹಾರ್ದ ಪೂರ್ಣ ಪರಿಪಾಠ ಹೆಚ್ಚಿನ ಮನೆಗಳಲ್ಲಿ ನಿಂತೇ ಹೋಯಿತು. ಸಾಯಂಕಾಲದ ಊಟವನ್ನು ಹೆಚ್ಚಿನ ಮನೆಮಂದಿ ಕೈತಟ್ಟೆ ಹಿಡಿದು ಟೀವಿಯ ಮುಂದೆ ಮಾಡತೊಡಗಿದರು. ಪೇಟೆಯ ಮನೆಗಳಂತೆಯೇ ಹಳ್ಳಿಮನೆಗಳ ಕ್ರಮ ಕೂಡಾ ಬದಲಾದವು. ಪೇಟೆಯಾಗಲೀ, ಹಳ್ಳಿಯಾಗಲೀ, ಶಾಲೆಗೆ ಹೋಗದ ಚಿಕ್ಕ ಮಗು ಕೂಡಾ ರಾತ್ರಿ ಹನ್ನೊಂದರ ತನಕ ಜಾಗರಣೆ ಮಾಡುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯ.

ಇದರ ಅರ್ಥ ಈಗಿನ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದಿರುವರೆಂದಲ್ಲ. ಅವರು ಈ ವಾತಾವರಣಕ್ಕೆ ಹೊಂದಿಕೊಂಡೇ ಓದು ಮುಂದುವರೆಸಿದ್ದಾರೆ. ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಹಲವಾರು ವಿದ್ಯಾರ್ಥಿಗಳು ಇತ್ತೀಚೆಗೆ ಕೇಬಲ್‌ ಟೀವಿ ಹಾಕಿಕೊಂಡೇ ಓದುತ್ತಿರುವುದನ್ನು ನೋಡಿದ್ದೇನೆ. ಅವರ ಪೋಷಕರನ್ನು ಕೇಳಿದರೆ ಅವರು ‘ಈ ವಿದ್ಯಾರ್ಥಿಗಳು ಯಾವಾಗಲೂ ಮೊದಲ ದರ್ಜೆಯಲ್ಲೇ ಪಾಸಾಗುತ್ತಾರೆ, ಆದ್ದರಿಂದ ತಾವೇನೂ ಅವರ ಈ ಚರ್ಯೆಯನ್ನು ವಿರೋಧಿಸುತ್ತಿಲ್ಲ’ ಎನ್ನುತ್ತಾರೆ. ಈಗಿನ ಎಳೆಯರು ಬುದ್ಧಿವಂತರು ಮತ್ತು ಜ್ಞಾನದಾಹಿಗಳು. ಅವರಿಗೆ ಓದಿ ತಿಳಿಯಲು ಗ್ರಂಥಾಲಯಗಳು ಇವೆ. ಹಲವಾರು ಪುಸ್ತಕಗಳು ಲಭ್ಯವಿವೆ. ಪ್ರಾಥಮಿಕ ಶಾಲಾ ಮಕ್ಕಳು ಕೂಡಾ ಈ ದಿನಗಳಲ್ಲಿ ಅಂತರ್ಜಾಲದ ಬಳಕೆಮಾಡಿ ಜ್ಞಾನ ಸಂಗ್ರಹಣೆ ಮಾಡುತ್ತಾರೆ. ಈಗಿನ ವಿದ್ಯಾರ್ಥಿಗಳಿಗೆ ಓದುವ ಹಠ ಇದೆ. ಸ್ಪರ್ಧಾತ್ಮಕವಾದ ಈ ದಿನಗಳಲ್ಲಿ ತಾವು ಚೆನ್ನಾಗಿ ಓದಿ ಪೈಪೊಟಿಯಿಂದ ತಮಗೆ ಇಷ್ಟವಾದ ವಿಷಯಗಳಲ್ಲಿ ಪರಿಣತಿ ತೋರಿಸಿ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂಬ ಛಲದ ಮನೋಭಾವ ಗ್ರಾಮೀಣ ಪ್ರದೇಶದ ಮಕ್ಕಳಲ್ಲೂ ಕಂಡು ಬರುತ್ತಿದೆ. ಇದು ಬಹಳ ಉತ್ತಮವಾದ ಮನೋಭಾವ.

ಗ್ರಾಮೀಣ ಜನತೆ ಕೂಡಾ ರಾತ್ರಿ ತಡವಾಗಿ ಮಲಗುವುದರಿಂದ ಬೆಳಗ್ಯೆ ಬೇಗನೇ ಏಳುವ ಹವ್ಯಾಸ ಕೂಡಾ ಹಳ್ಳಿಗಳಲ್ಲಿ ದೂರವಾಗುತ್ತಿದೆ. ಬೆಳಗಿನ ಜಾವಕ್ಕೇ ಎದ್ದೇಳುತ್ತಿದ್ದ ರೈತಾಪಿ ಜನರು ಸೂರ್ಯ ದರ್ಶನವಾದ ಮೇಲೆಯೇ ಏಳುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿದೆ.

ಹಿಂದಿನ ಕಾಲದಲ್ಲಿ ಗದ್ದೆಗಳಿಗೆ ನೀರು ಹಾಯಿಸಲು, ಜಾನುವಾರುಗಳ ರಖೋಲೆ ಮಾಡಲು ಜನ ಬೇಗನೇ ಏಳಬೇಕಾಗುತ್ತಿತ್ತು. ಈಗ ಗ್ರಾಮೀಣ ಪ್ರದೇಶದ ಹೆಚ್ಚಿನ ಮನೆಗಳಲ್ಲಿ ದನ ಕರುಗಳೇ ಇಲ್ಲ. ಇದ್ದರೂ ಅನಿವಾರ್ಯವಾಗಿ ಸಾಕಿಕೊಂಡ ಒಂದೆರಡು ದನಕರುಗಳು ಮಾತ್ರ. ಹಳ್ಳಿಗಳಲ್ಲೂ ಅಡುಗೆಗೆ ಮತ್ತು ಇತರೇ ಮನೆಕೆಲಸಗಳಿಗೆ ಜಾಸ್ತಿ ಸಮಯ ಬೇಕಾಗುತ್ತಿಲ್ಲ. ಗ್ರಾಮೀಣ ಹೆಂಗಸರಿಗೂ ಈಗ ಸ್ವಲ್ಪ ಬಿಡುವು ಸಿಗುತ್ತಿದೆ. ವಿದ್ಯುತ್‌ ಉಪಕರಣಗಳು, ವಿದ್ಯುತ್‌ ಒಲೆ, ಅಡುಗೆಗೆ ಸೌದೆಯ ಬದಲಿಗೆ ಗೋಬರ್‌ ಗ್ಯಾಸ್‌, ಪೆರ್ಟೋಲಿಯಮ್‌ ಗ್ಯಾಸ್‌ ಇವುಗಳ ಬಳಕೆ ಈಗ ಹೆಚ್ಚುತ್ತಿದೆ. ಹಳ್ಳಿಗಳಿಗೂ ಈಗ ಬೆಳಗಿನ ಹೊತ್ತೇ ದಿನದ ವಾರ್ತಾಪತ್ರಿಕೆ ಮತ್ತು ಪ್ಯಾಕೆಟ್‌ ಹಾಲು ಬೆಳಗ್ಯೆಯೇ ಸರಬರಾಜಾಗುತ್ತಿವೆ. ಕೆಲವು ವರ್ಷಗಳ ಹಿಂದೆ ಈ ಸೌಲಭ್ಯಗಳನ್ನು ಗ್ರಾಮೀಣ ಜನತೆಗೆ ಯೋಚಿಸಲೂ ಸಾಧ್ಯವಿರಲಿಲ್ಲ.

ಗದ್ದೆ ಹೂಡಲು ಟ್ರ್ಯಾಕ್ಟರ್‌ ಅನುಕೂಲವೆನಿಸಿದೆ. ಕೊಟ್ಟಿಗೆ ಗೊಬ್ಬರಕ್ಕೆ ಸ್ವಲ್ಪ ತತ್ವಾರವಾದರೆ ಏನಂತೆ? ‘ರಾಸಾಯನಿಕ ಗೊಬ್ಬರ ಗದ್ದೆಗೆ ಚೆಲ್ಲಿದರಾಯಿತು’ ಎಂಬ ಮನೋಭಾವ ಹಳ್ಳಿಗಳಲ್ಲಿ ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಕೊರತೆ, ಹಸಿರು ಮೇವಿನ ಕೊರತೆ ವ್ಯಾಪಕವಾಗಿದೆ. ರೈತರಿಗೆ ಹಿಂದಿನಂತೆ ತಮ್ಮ ಮನೆಗಳಲ್ಲೇ ದನಕರು ಕಟ್ಟಿ ಹಾಲು ಕರೆದು ಉಣ್ಣಬೇಕಿಲ್ಲ. ಮದರ್‌ ಡೈರಿಯ ಹಾಲು ಬೆಳಗಾದರೆ ಮನೆ ಬಾಗಿಲಿಗೇ ಬರುತ್ತಿದೆ. ಈ ‘ನಿರ್ಧರಿತ ಗುಣಮಟ್ಟದ ಹಾಲು’ ಹಳ್ಳಿಗಳ ಜನರಿಗೆ ಕೂಡಾ ಮೆಚ್ಚಿಗೆ ಆಗುತ್ತಿದೆ.

ರಸ್ತೆ ಸಂಪರ್ಕ ಉತ್ತಮಗೊಂಡಿದ್ದು ವಾಹನಗಳ ಸಂಖ್ಯೆ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳ ಅಂಗಡಿಗಳಲ್ಲಿ ಈಗ ಉತ್ತಮ ಗುಣ ಮಟ್ಟದ ದಿನಸಿ, ಬಟ್ಟೆಬರೆ, ನಿತ್ಯೋಪಯೋಗಿ ವಸ್ತುಗಳು ಮತ್ತು ಉತ್ತಮ ತರಕಾರಿ ದೊರೆಯುತ್ತಿವೆ. ಇದರಿಂದಾಗಿ ಹಳ್ಳಿಗಳಲ್ಲಿ ಹಿಂದಿನಂತೆ ಮನೆಗೆ ಬೇಕಾದ ತರಕಾರಿ ಬೆಳೆಯುವ ಹವ್ಯಾಸ ಕಡಿಮೆಯಾಗುತ್ತಿದೆ. ಹಿಂದಿನ ಕಾಲದ ಬೀಸುವ ಕಲ್ಲು, ರುಬ್ಬುವ ಕಲ್ಲು, ಒರಳು ಒನಕೆಗಳೆಲ್ಲಾ ಹೆಚ್ಚಿನ ಗ್ರಾಮೀಣ ಮನೆಗಳಲ್ಲಿ ಮೂಲೆ ಸೇರಿವೆ. ಹಳ್ಳಿ ಪ್ರದೇಶಗಳಲ್ಲಿಯೂ ಅಕ್ಕಿ ಗಿರಣಿಗಳು, ಹಿಟ್ಟಿನ ಮಿಲ್ಲುಗಳು ಇವೆ. ಹೆಚ್ಚಿನ ಮನೆಗಳಲ್ಲಿ ಮಿಕ್ಸಿಗಳು ‘ಗ್ರೈಂಡರ್‌’ ಗಳು ನಿತ್ಯ ಬಳಕೆಯಲ್ಲಿವೆ. ಹೆಚ್ಚಿನ ಹಳ್ಳಿಗಳಲ್ಲಿ ಪೈಪ್‌ ಮೂಲಕ ಹರಿಯುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಕಾರ ಮಾಡಿಸಿಕೊಟ್ಟಿದೆ. ಹೊಲಗಳಿಗೆ ನೀರುಣಿಸಲು ಮತ್ತು ಮನೆಯ ಅಗತ್ಯಗಳಿಗೆ ಬೇಕಾದ ನೀರು ಒದಗಿಸಲು ಪಂಪುಗಳಿವೆ. ಹಳ್ಳಿಗಳಲ್ಲೂ ಪೇಟೆಯ ಮನೆಗಳಂತೆ ‘ಕರೆಂಟ್‌’ ಇಲ್ಲದ ಪಕ್ಷದಲ್ಲಿ ಮನೆಯಾಳಗೆ ಕೋಲಾಹಲ ಉಂಟಾಗುವುದು ಈಗ ಸಾಮಾನ್ಯ.

ಹಳ್ಳಿಯ ಯುವಜನರ ವಿದ್ಯಾಭ್ಯಾಸ ಮಟ್ಟ ಹೆಚ್ಚುತ್ತಿದಂತೆ ಗ್ರಾಮೀಣರ ನಡೆ ನುಡಿಗಳಲ್ಲೂ ಬದಲಾವಣೆ ಕಾಣುತ್ತಿದೆ. ಆಧುನಿಕ ವೇಷ ಭೂಷಣಗಳು ಹಳ್ಳಿಗಳಲ್ಲೂ ಸಾಮಾನ್ಯವಾಗಿ ಕಾಣುತ್ತಿವೆ. ವೃತ್ತಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಪ್ರಭಾವದಿಂದ ಜನಸಾಮಾನ್ಯರ ತಿಳುವಳಿಕೆ ಹೆಚ್ಚಿದೆ. ಹಳ್ಳಿಗರಲ್ಲಿ ಕೂಡಾ ‘ಪೇಟೆಯವರಿಗೆ ಸರಿಸಮವಾಗಿ ಬಾಳು ನಡೆಸಿಯೇವು’ ಎಂಬ ಭಾವನೆ ಅಂಕುರಿಸುತ್ತಿದೆ. ಪೇಟೆಯವರಿಗೆ ಮೊದಲು ಲಭ್ಯವಾಗುತ್ತಿದ್ದ ದೃಶ್ಯ ಮಾಧ್ಯಮಗಳು ಈಗ ಹಳ್ಳಿಯವರಿಗೂ ಲಭ್ಯ. ಹಳ್ಳಿಗನು ತನಗೆ ‘ಸಾಮಾನ್ಯ ಜ್ಞಾನ ಕಡಿಮೆ ಇದೆ’ ಎಂದು ಕೀಳರಿಮೆ ಹೊಂದಿರಬೇಕಾಗಿಲ್ಲ. ಹಳ್ಳಿಗಳಲ್ಲೂ ಸುಖಜೀವನ ಸಾಧ್ಯವಾಗುತ್ತಿದೆ. ಇದು ತುಂಬಾ ಸಂತೋಷಕರ ಬೆಳವಣಿಗೆ.

ಸ್ನಾತಕ ಜನರಿಗೆ, ವಿದ್ಯಾವಂತರಿಗೆ ಪೇಟೆಗಳಲ್ಲಿ ಉದ್ಯೋಗಾವಕಾಶ ಹೆಚ್ಚು ಇವೆ. ಈ ಉದ್ಯೋಗ ಅವಕಾಶಗಳ ಹಿಂದೆ ಬಿದ್ದು ಜನರು ಪೇಟೆಯ ಜೀವನ ಬಯಸಿ ಪೇಟೆ ಸೇರುತ್ತಿದ್ದಾರೆ. ಕಾರಣ ಹಳ್ಳಿಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳಿಲ್ಲ. ಅದೇ ವ್ಯವಸಾಯ ಇಲ್ಲವೆ ಅದೇ ಚಿಕ್ಕಪುಟ್ಟ ವ್ಯಾಪಾರ. ಇವು ಇಂದಿನ ವಿದ್ಯಾವಂತ ಯುವಜನರನ್ನು ಆಕರ್ಷಿಸುತ್ತಿಲ್ಲ.

ಆದಲ್ಲದೆ ಪಟ್ಟಣಗಳಲ್ಲಿನ ಜೀವನ ವೈವಿಧ್ಯ, ಮನರಂಜನಾ ವೈವಿಧ್ಯ ಮತ್ತು ಅಲ್ಲಿ ಸಿಗುವ ಆಹಾರ ವೈವಿಧ್ಯ ಹಳ್ಳಿಗಳಲ್ಲಿಲ್ಲ. ಪಟ್ಟಣದ ಥಳುಕಿನ ಜೀವನ ಹಳ್ಳಿಗಳಲ್ಲಿ ಇಲ್ಲ.

ತದ್ರೀತಿಯಾಗಿ ಹಳ್ಳಿಗಳಲ್ಲಿ ಉಸಿರುಕಟ್ಟಿಸುವ ವಾಹನ ದಟ್ಟಣೆ ಇಲ್ಲ. ವಾಯು ಮಾಲಿನ್ಯವಿಲ್ಲ. ಜನದಟ್ಟನೆಯ ಸಂತೆಯಾಳಗಣ ಜೀವನ ಶೈಲಿ ಇಲ್ಲ.

ಈ ಎಲ್ಲಾ ಬದಲಾವಣೆಗಳು ಕಾಲಕ್ರಮೇಣ ಬಂದವುಗಳೇ. ಇವಕ್ಕೆ ನಮ್ಮೆಲ್ಲರ ಸ್ವಾಗತ ಇದೆ. ಗ್ರಾಮೀಣರು ಜೀವನ ಶೈಲಿಯನ್ನು ಬದಲಿಸಿ ಹಿಂದಿನ ಹಿಟ್ಟು ಬೀಸೋಕಾಲಕ್ಕೆ ಹೋಗಬೇಕಾಗಿಲ್ಲ. ಆದರೆ ಈಗಿನ ಗ್ರಾಮೀಣ ಜೀವನದ ಬಗ್ಯೆ ಸ್ವಲ್ಪ ಚಿಂತಿಸಲೇ ಬೇಕಾಗಿದೆ.

ಈಗಿನ ಗ್ರಾಮೀಣ ಯುವಜನರಿಗೆ ಪಟ್ಟಣವಾಸದ ಆಕರ್ಷಣೆ ಸ್ವಲ್ಪ ಕಡಿಮೆಯಾಗಬೇಕು. ತಮ್ಮೂರ ನೆಲ ಜಲಗಳಲ್ಲಿ ಸ್ವಲ್ಪ ಪ್ರೀತಿ ಹುಟ್ಟಬೇಕು. ರಾಸಾಯನಿಕ ಬೇಸಾಯ ಕಡಿಮೆ ಮಾಡಿ ಸಮನ್ವಯ ರೀತಿಯಿಂದ ಬೇಸಾಯ ಮಾಡಬೇಕು. ಜಾನುವಾರು ದನಕರು ಸಾಕಣೆ ಜಾಸ್ತಿ ಮಾಡಿ ಹೆಚ್ಚಿನ ಗಿಡ ಮರಗಳನ್ನು ನೆಡಬೇಕು. ಪ್ರತೀ ರೈತನು ತನ್ನ ಮನೆಗೆ ಬೇಕಾದ ಹಾಲು ಹೈನು ತರಕಾರಿ ಉತ್ಪಾದಿಸಬೇಕು. ತನ್ನ ಹೊಲಕ್ಕೆ ಬೇಕಾದಷ್ಟು ತಿಪ್ಪೇ ಗೊಬ್ಬರವನ್ನು ತಾನೇ ಉತ್ಪಾದಿಸಲೇಬೇಕು. ಹೈನುಗಾರಿಕೆ, ಕುರಿ ಸಾಕಣೆ, ಕೋಳಿ ಸಾಕಣೆಗಳನ್ನು ಉಪವೃತ್ತಿಯಾಗಿಸಿ ಕೊಂಡು ಈಗ ಸಿಗುತ್ತಿರುವ ಈ ಬಿಡುವಿನ ಸಮಯವನ್ನು ಸದುಪಯೋಗ ಮಾಡಬೇಕು.

ಊರವರೊಡನೆ ಸೇರಿಕೊಂಡು ಸೌಹಾರ್ದ ಬಾಳುವೆ ಮಾಡಬೇಕು. ಹಿಂದಿನ ಕಾಲದಲ್ಲಿದ್ದಂತೆ ‘ಊರವವರೆಲ್ಲರೂ ಒಂದೇ’ ಎಂಬ ಭಾವ ಬೆಳೆಸಿಕೊಳ್ಳಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಹರ್ಷಚಿತ್ತರಾಗಿ ಬಾಳಲು ಪ್ರಯತ್ನಿಸಬೇಕು. ನಾವು ಮತ್ತು ನಮ್ಮ ಊರು ಎಂಬ ಭಾವ ಬೆಳೆಯಬೇಕು. ಕಾರಣ ಏನೆಂದರೆ ಈ ದಿನಗಳಲ್ಲಿ ‘ನಾನು, ನನ್ನ ಹೊಲ ಮತ್ತು ನನ್ನ ಸಂಸಾರ’ ಎಂಬ ಭಾವ ಗ್ರಾಮೀಣ ಜನರಲ್ಲಿ ಜಾಸ್ತಿಯಾಗುತ್ತಿದೆ. ಪರಸ್ಪರ ಸಂಭಾಷಣೆ ಕೂಡಾ ಕಡಿಮೆಯಾಗುತ್ತಿದೆ. ಪಕ್ಕದ ಹೊಲದ ರೈತನ ದನ ಪರಾಮೋಷದಿಂದ ತನ್ನ ಹೊಲ ಮೇಯಲು ನುಗ್ಗಿದರೆ, ರೈತ ಅದನ್ನು ನೆರೆಮನೆಯವನ ಹಟ್ಟಿಗೆ ಅಟ್ಟಿಕೊಂಡು ಹೋಗಿ ಆತನ ಮನೆ ಮುಟ್ಟಿಸುವ ಸೌಜನ್ಯ ತೋರುತ್ತಿದ್ದ. ಈಗ ಈ ಕ್ರಮ ಮಾಯವಾಗುತ್ತಾ ಬರುತ್ತಿದೆ. ಬದಲಾಗಿ ಪಕ್ಕದ ಮನೆಯ ರೈತನ ಮನೆಗೆ ದೂರವಾಣಿ ಕರೆ ಮಾಡಿ ಸುಖಾ ಸುಮ್ಮನೆ ಜಗಳವಾಡುವ ಪ್ರವೃತ್ತಿ ಹೆಚ್ಚುತ್ತಿದೆ.

ಹಿಂದೆ ಹಳ್ಳಿಗಳಲ್ಲಿ ಕುಡಿಯುವಾತನಿಗೆ ಊರಲ್ಲೇ ಮರ್ಯಾದೆ ಇರಲಿಲ್ಲ. ಗುಟ್ಕಾ ಚಟದ ಹೆಸರೇ ಕೇಳಿಗೊತ್ತಿರಲಿಲ್ಲ. ಯುವಜನರು ಹಿರಿಯರ ಎದುರು ಎಲೆಅಡಿಕೆ ಹಾಕಿಕೊಳ್ಳಲು ಅಂಜುತ್ತಿದ್ದ ಕಾಲವೊಂದಿತ್ತು. ಸರಾಯಿ ಮಾರುವ ಪಡಖಾನೆಗಳು ಊರ ಹೊರಗಿರುತ್ತಿದ್ದುವು. ಈಗ ಆ ಸಂಸ್ಕೃತಿ ಹಳ್ಳಿಗಳಿಂದ ಮಾಯವಾಗಿವೆ. ಎಲ್ಲಾ ಹಳ್ಳಿಗಳಲ್ಲಿ ಊರೋಳಗೇ ಸರಾಯಿ ಲಭ್ಯ. ಹೊತ್ತು ಗೊತ್ತಿಲ್ಲದ ಕುಡಿತಕ್ಕೆ ಕೂಡಾ ಯಾರೂ ಅಭ್ಯಂತರ ಮಾಡುವಂತಿಲ್ಲ. ಬೀಡಿ ಸಿಗರೇಟು ಗುಟ್ಕಾ ಸೇವನೆಗೆ ಯಾರೂ ಏನೂ ಹೇಳುವಂತಿಲ್ಲ. ಖಾಲಿ ಸರಾಯಿ ಪ್ಯಾಕೇಟ್‌, ಖಾಲಿ ಗುಟ್ಕಾ ಪ್ಯಾಕೇಟ್‌ ಗಳು ಸರ್ವಂತರ್ಯಾಮಿ ಕಸಗಳಾಗಿ ಹೊಲ ಗದ್ದೆಗಳನ್ನು ಮಲಿನ ಗೊಳಿಸುತ್ತಿವೆ. ಈ ಕೃತಕ ಕಸ ವಸ್ತುಗಳು ಜೀರ್ಣವಾಗಿ ಹೊಲಗದ್ದೆಗಳ ಮಣ್ಣಿಗೆ ಮಿಳಿತವಾಗಲು ನೂರಾರು ವರ್ಷಗಳೇ ಬೇಕಂತೆ.

ಈಗ ಎಲ್ಲೆಲ್ಲೂ ಸಮಾನತೆಯ ಕಾಲ. ಹಿರಿಯ ಕಿರಿಯ ಬಡವ ಬಲ್ಲಿದರೆಂಬ ಭೇದವಿಲ್ಲ. ಸರಿ, ಇದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ ಈ ಸಮಾನತೆಯ ಭಾವ ಇಂದಿನ ಯುವಜನರಲ್ಲಿ ಮತ್ತು ಜನ ಸಾಮಾನ್ಯರಲ್ಲಿ ಸ್ವೇಚ್ಛಾಚಾರಗಳಿಗೆ ಪ್ರಚೋದಕವಾಗಬಾರದು. ಧೂಮಪಾನ, ಗುಟ್ಕಾ ಚಟ ಹಾಗೂ ಕುಡಿತದ ಅಭ್ಯಾಸಗಳು ಗ್ರಾಮಂತರ ಪ್ರದೇಶಗಳಲ್ಲಿ ಕಡಿಮೆಯಾಗಬೇಕು.

ಈಗಿನ ಯಾಂತ್ರೀಕರಣ ಹಾಗೂ ಸುಧಾರಣೆಗಳಿಂದ ಪ್ರತೀ ರೈತನಿಗೂ ಮೊದಲಿಗಿಂತ ಬಿಡುವು ಹೆಚ್ಚಿದೆ. ಇದರ ಸದುಪಯೋಗವನ್ನು ಇಂದಿನ ಯುವಜನತೆ ಮತ್ತು ಜನಸಾಮಾನ್ಯರು ಮಾಡಬೇಕು. ಜನರು ಇತ್ತೀಚೆಗೆ ಬಲಿಯಾಗುತ್ತಿರುವ ಕುಡಿತ, ಧೂಮಪಾನ ಮತ್ತು ಸರ್ವವ್ಯಾಪಿ ‘ಗುಟ್ಕಾ ಚಟ’ಗಳನ್ನು ಕಡಿಮೆ ಮಾಡುವರೇ ಪ್ರಯತ್ನಿಸಬೇಕು.

ಸಂತೋಷದ ವಿಚಾರವೆಂದರೆ ಇಂದಿನ ಗ್ರಾಮೀಣ ಜನತೆ ಯಾವುದರಲ್ಲೂ ಹಿಂದಿಲ್ಲ. ಆದರೆ ಯುವಜನರು ತಮ್ಮ ಉತ್ತಮ ವಿದ್ಯಾಭ್ಯಾಸದ ಗುಣಮಟ್ಟಗಳಿಂದಾಗಿ ಪಟ್ಟಣದ ಕೆಲಸಗಳ ಕಡೆಗೆ ಆಕರ್ಷಿತರಾಗಿ ಪಟ್ಟಣ ಸೇರುತ್ತಿದ್ದಾರೆ. ಸಾಮಾನ್ಯವಾಗಿ ಹೈಸ್ಕೂಲ್‌ ಕಲಿತ ಬಾಲಕ ಕೂಡಾ ಪಟ್ಟಣವಾಸಕ್ಕೆ ಒಲವು ತೋರುತ್ತಿದ್ದಾನೆ. ತನ್ನ ಹೊಲದ ಮೈಮುರಿತದ ದುಡಿಮೆ ಅವನಿಗೆ ಬೇಕಿಲ್ಲ. ಅವನಿಗೆ ತೀರ ಅಲ್ಪ ಸಂಬಳದ ಪಟ್ಟಣದ ಉದ್ಯೋಗವಾದರೂ ಸರಿ, ಅದರದೇ ಆಕರ್ಷಣೆ. ಅದೇ ‘ಬಿಳೇ ಕಾಲರ್‌’ ಉದ್ಯೋಗದ ಆಸೆ! ಹಳ್ಳಿಯ ಕಿಶೋರಿಯರು ಕೂಡಾ ಪಟ್ಟಣ ವಾಸದ ಕನಸನ್ನೇ ಹೊತ್ತಿರುತ್ತಾರೆ. ಈಗೀಗ ನಾವು ಕಾಣುತ್ತಿರುವಂತೆ ಹಳ್ಳಿಗಳಲ್ಲಿ ಯುವಕರಾರೂ ನೆಲೆಸುತ್ತಿಲ್ಲ. ಎಲ್ಲೆಡೆಗೂ ಪಸರಿಸಿರುವ ವ್ಯಾಪಕ ವಿದ್ಯಾಭ್ಯಾಸ ಹಳ್ಳಿಗರಿಗೆ ಒಂದು ಶಾಪವಾಗಬಾರದಷ್ಟೇ?

ಇದಕ್ಕೆ ಕಾರಣ ಹಳ್ಳಿಯ ಜೀವನದ ಅನಿಶ್ಚಿತತೆ ಮತ್ತು ಅಭದ್ರತೆ. ಮಳೆಯಿದ್ದು ಸಮರ್ಪಕವಾದ ಬೆಳೆ ಬಂದರೆ, ಬೆಳೆದ ಬೆಳೆಗಳಿಗೆ ಸಮರ್ಪಕವಾದ ಬೆಲೆ ಇಲ್ಲ. ಬರ ಬಂದರೆ ಬೆಳೆಯೇ ಇಲ್ಲ. ನೀರಾವರಿ ಮಾಡೋಣ ಎಂದರೆ ವಿದ್ಯುತ್‌ ಇಲ್ಲ. ಇವುಗಳಿಗೆ ಪೂರಕವಾಗಿ ಜಾನುವಾರುಗಳಿಗೆ ಹಣತೆತ್ತರೂ ಮೇವು ಲಭ್ಯವಿಲ್ಲ. ಇದಕ್ಕೆ ಪೂರಕವಾಗಿ ಹಳ್ಳಿಯ ಯುವಜನರೆಲ್ಲಾ ಪೇಟೆ ಸೇರುತ್ತಿರುವುದರಿಂದ ಹೊಲದಲ್ಲಿ ದುಡಿಯುವ ಯುವಜನರಿಲ್ಲ. ಹಳ್ಳಿಗಳು ಕ್ರಮೇಣ ದುರ್ಬಲರು ಹಾಗೂ ವೃದ್ಧರು ನೆಲಸಿರುವ ತಾಣಗಳಾಗುತ್ತಿವೆ. ಯುವಜನರನ್ನು ನಿಲ್ಲಿಸಿಕೊಳ್ಳುವ ತ್ರಾಣ ಹಿರಿಯರಿಗಿಲ್ಲವಾಗಿದೆ. ಸ್ವಾತಂತ್ರ ಬಂದಮೇಲೆ ನಮ್ಮ ರೈತ ನೋಡಿರುವುದು ಕಷ್ಟಪರಂಪರೆ ಮತ್ತು ತೀರಿಸಲಾಗದ ಸಾಲಗಳನ್ನು ಮಾತ್ರ. ಬೆಳೆ ಬಂದಾಗ ಬೆಲೆ ಇಲ್ಲ - ಬೆಲೆ ಬಂದಾಗ ಕೈಯಲ್ಲಿ ಬೆಳೆ ಇಲ್ಲ. ಕರ್ನಾಟಕದ ರೈತ ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಸಾಯುತ್ತಿದ್ದಾನೆ. ತಾನೊಂದು ದಿನ ಸುಖ ಕಂಡೇನೆಂಬ ಆಸೆ ಆತನಿಗೆ ಒಂದು ‘ಮರೀಚಿಕೆ’ಯಾಗಿದೆ. ಭೂಮಿ ತಾಯನ್ನು ನಂಬಿ ಕೆಟ್ಟೆನೆಂಬ ತಿಳುವಳಿಕೆ ಆತನಿಗೆ ಮನವರಿಕೆಯಾಗುತ್ತಾ ಬಂದಿದೆ. ಈಗ ಆತನು ತನ್ನ ಮಕ್ಕಳಿಗೆ ‘ಪಟ್ಟಣ ಸೇರಬೇಡಿರಿ’ ಎಂದು ಉಪದೇಶ ಕೊಡುವ ನೈತಿಕ ಧೈರ್ಯವನ್ನು ಕಳೆದುಕೊಂಡಿದ್ದಾನೆ.

ನಮ್ಮ ರೈತನ ಬಗ್ಯೆ ಸ್ವಲ್ಪ ಯೋಚಿಸುವಿರಾ?

ಇದನ್ನೂ ಓದಿ-

ಐವತ್ತು ವರುಷಗಳ ಹಿಂದಿನ ಗ್ರಾಮೀಣ ಕೌಟುಂಬಿಕ ಜೀವನ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more