• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನದ ಮಾತು - ಜೀವನಾನುಭವದ ತುತ್ತು !

By Staff
|

Madhusudhana Pejathaya

ಇದು ಒಂದು ಖಾಸಗಿ ಪತ್ರ, ಅಮೆರಿಕದಲ್ಲಿರುವ ನನ್ನ ಸ್ನೇಹಿತನಿಗೆ ಬರೆದದ್ದು. ಓದಿ ಮುಗಿಸಿದ ಬಳಿಕ ಅವರು ಹೇಳಿದ್ದು - ‘ಎಲ್ಲರಿಗೂ ಒಪ್ಪುವ ಹೃದಯಸ್ಪರ್ಶಿ ವಿಚಾರಗಳು ಅದರಲ್ಲಿರುವುದರಿಂದ, ದಟ್ಸ್‌ಕನ್ನಡದಲ್ಲೂ ಪ್ರಕಟಿಸಿ..’ ಎಂದು. ಇದು ವೈಯಕ್ತಿಕ ಬರವಣಿಗೆಯಾದರೂ ಒಂದು ನಮೂನೆಯಲ್ಲಿ ‘ಪತ್ರಸಾಹಿತ್ಯ’- ಹೆಚ್ಚು ಜನ ಓದಬೇಕು ಎಂಬುದು ಅವರ ಅಭಿಪ್ರಾಯ. ಒಪ್ಪಿಕೊಂಡೆ. ಮೊದಲೇ ಹೇಳಿಬಿಡುತ್ತೇನೆ - ಸಂದರ್ಭ, ಸನ್ನಿವೇಶಗಳ ಅಗತ್ಯಕ್ಕಾಗಿ ಮಾತ್ರ ವ್ಯಕ್ತಿಗಳ ಉಲ್ಲೇಖವನ್ನು ಇದ್ದಕ್ಕಿದ್ದ ಹಾಗೆ ಬಿಟ್ಟಿದ್ದೇನೆ. ಆದರೆ ಇಲ್ಲಿ ವ್ಯಕ್ತಿಗಳ ವೈಭವೀಕರಣದ ಉದ್ದೇಶ ಖಂಡಿತವಾಗಿಯೂ ಇಲ್ಲ. ಈ ಪತ್ರದಲ್ಲಿರುವ ‘ವಸ್ತು’ ನಿಮ್ಮ ಮನಮುಟ್ಟಿದ್ದರೆ ಅದೇ ಸಾರ್ಥಕತೆ ಎಂದುಕೊಳ್ಳುತ್ತೇನೆ. ಈ ‘ಡಿಸ್‌ಕ್ಲೈಮರ್‌’ ಅನ್ನು ಮನದಲ್ಲಿಟ್ಟುಕೊಂಡೇ ಓದುವುದನ್ನು ಮುಂದುವರಿಸಬೇಕಾಗಿ ಅಪೇಕ್ಷೆ.

- ಮಧುಸೂದನ ಪೆಜತ್ತಾಯ, ಬೆಂಗಳೂರು.

pejathayas@hotmail.com

ನನ್ನ ಒಲವಿನ ಪತ್ರಮಿತ್ರರೇ, ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ನಮಸ್ಕಾರಗಳು ಮತ್ತು ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ನಿನ್ನೆ (ಆ.15) ಸ್ವಾತಂತ್ರ್ಯೋತ್ಸವದ ಜತೆಗೆ ಶ್ರೀ ರಾಘವೆಂದ್ರ ಸ್ವಾಮಿಗಳ ಉತ್ತರ ಆರಾಧನೆ. ಮನೆಯಲ್ಲಿ ಹಯಗ್ರೀವ ಮಡ್ಡಿ. ರಾಯರಮಠಕ್ಕೆ ಸಾಯಂಕಾಲ ನಾಲ್ಕಕ್ಕೆ ಹೋದರೆ, ನಾವು ಸಂತರ್ಪಣೆಗೆ ಅಕ್ಕಿ ಕಾಣಿಕೆ ಕೊಟ್ಟಿದ್ದೇವೆಂದು ಒತ್ತಾಯಿಸಿ ನಮಗೆ ಊಟ ಬಡಿಸಿಯೇಬಿಟ್ಟರು. ಒಟ್ಟಾರೆ ನಿನ್ನೆ ನಮಗೆ ನಾಲ್ಕು ಊಟ. ಅದಲ್ಲದೇ ನಿನ್ನೆ ನನ್ನ ಪ್ರೀತಿಯ ಅಜ್ಜನ ಪುಣ್ಯ ತಿಥಿ. ಅಜ್ಜ 1955, ಆಗಸ್ಟ್‌ ಹದಿನೈದರಂದು ತೀರಿಕೊಂಡರು. ಆಮೇಲೆ ‘ಕಾಡ ಸೊಪ್ಪು ತೋಡ ನೀರು’ ಎಂಬಂತೆ ಬೆಳೆದೆ. ಈ ವಿಚಾರ ನನ್ನ ‘ನೆನಪಿನದೋಣಿ’ ಪುಸ್ತಕದಲ್ಲಿದೆ. ಪುರುಸೊತ್ತಾದಾಗ ಓದಿರಿ.

ನೀವು ಈ ಮೈಲ್‌ ಮೂಲಕವೇ ಪರಿಚಯಿಸಿದ ಡಾ। ಮೈ.ಶ್ರೀ.ನಟರಾಜ್‌ (ಅಮೆರಿಕೆಯಿಂದ ಮೊನ್ನೆ ಭಾರತ ಪ್ರವಾಸಕ್ಕೆ ಬಂದಿದ್ದವರು), ದಟ್ಸ್‌ಕನ್ನಡದ ಶಾಮ್‌ ಮತ್ತು ಬೆಂಗಳೂರು ನಿವಾಸಿ ಎಚ್ಕೆ.ಚಂದ್ರಶೇಖರ್‌ ಭಟ್‌ - ಈ ಎಲ್ಲ ಹೊಸಮಿತ್ರರನ್ನೂ ಸೇರಿಸಿ ಆಗಸ್ಟ್‌ 14ರಂದು ಸಂಜೆ ಇಲ್ಲಿ ಬೆಂಗಳೂರಲ್ಲಿ ನಾವು ಒಂದು ಸಣ್ಣ ಗೆಟ್‌-ಟುಗೆದರ್‌ ಇಟ್ಟುಕೊಂಡಿದ್ದೆವು. ಸೌತ್‌ಎಂಡ್‌ನ ಶಾಂತಿಸಾಗರದಲ್ಲಿ ಊಟೋಪಚಾರ. ಪುಸ್ತಕ ವಿನಿಮಯ, ಎಲ್ಲಕ್ಕೂ ಮಿಗಿಲಾಗಿ ಸ್ನೇಹ-ಜೀವನಾನುಭವ ವಿನಿಮಯ. ಬಹಳ ಸಂತೋಷವಾಯಿತು ಮನಸ್ಸಿಗೆ. ನೀವು ಅಲ್ಲಿ ದೂರದ ಅಮೆರಿಕದಲ್ಲೇ ಕುಳಿತು ಇನ್ನೂ ನನಗೆ ಮುಖತಃ ಭೇಟಿ ಕೂಡ ಆಗದೇ ಬರೇ ಪತ್ರಮಿತ್ರರಾಗೇ ಉಳಿದೂ, ಈ ಮೂವರು ಹೊಸ ಸ್ನೇಹಿತರನ್ನು ಪರಿಚಯಿಸಿದ್ದು ಅಂತರ್ಜಾಲದ ಕಬಂಧಬಾಹುಗಳ ಪವರ್‌ ಎಂದೇ ನಾನು ತಿಳಿಯುತ್ತೇನೆ.

15ರ ಬೆಳಿಗ್ಗೆ ಹನ್ನೊಂದಕ್ಕೆ ಚಂದ್ರಶೇಖರ್‌ ಭಟ್‌ ದೂರವಾಣಿ ಮಾಡಿದ್ದರು - ‘ಚೆನ್ನಾಗಿ ಊಟಹಾಕಿದ್ದಕ್ಕೆ ಆಭಾರಿ’ ಎಂದು ಹೇಳಲು! ಏನೊಂದು ಶಿಷ್ಟಾಚಾರ!

ಅವತ್ತು ಅವರ ಪದ್ಮನಾಭನಗರ ಮನೆಗೊಮ್ಮೆ ಭೇಟಿ ಕೊಟ್ಟಿದ್ದಾಗಲೂ ಗಮನಿಸಿದ್ದೆ. ಸಂಸ್ಕೃತದ ಮೇಷ್ಟ್ರು ಭಟ್‌(ನಿವೃತ್ತ) ದಂಪತಿಗಳಿಂದ ‘ಶಿಸ್ತಿನ ಹಾಗೂ ಕ್ರಮಬದ್ಧ ಜೀವನ’ ಕಲಿಯಬೇಕು. ಸದಾ ಹಸನ್ಮುಖಿಗಳು. ಅತಿಥಿ ಅಭ್ಯಾಗತರಿಗೆ ಸದಾ ಅವರಲ್ಲಿ ಸ್ವಾಗತ. ಯಾವಾಗಲೂ ‘ಸೀದಾ ಸಾದಾ’ ಉಪಚಾರ. ಮನೆಗೆ ಬಂದವರ ಹೊಟ್ಟೆ ತುಂಬಿಸಿಯೇ ಕಳುಹಿಸುವ ಸದಾಚಾರ. ಮನೆ, ಮನಸ್ಸು, ನಡೆ ನುಡಿ, ಜೀವನ ಕ್ರಮ ಎಲ್ಲವೂ ಅಚ್ಚುಕಟ್ಟು. ಈ ಹಿರಿತನದ ಅಚ್ಚುಕಟ್ಟಿನ ಜೀವನ ನಮಗೆಲ್ಲಾ ಆದರ್ಶಪ್ರಾಯ.

ಈ ತೆರದಲ್ಲಿ ಜೀವನ ಸಾಗಿಸುತ್ತಿರುವವರು ಈ ದಿನಗಳಲ್ಲಿ ಅಪರೂಪವಾಗುತ್ತಾ ಇದ್ದಾರೆ. ಅವರ ಮನೆ ಹೊಕ್ಕು ಹೊರಬರುವವರಿಗೆ ಅಪರೂಪದ ತೃಪ್ತಿ ಮತ್ತು ಸಂತೋಷ. ಈ ಬಗೆಯ ಮನೆಗಳನ್ನು ಮತ್ತು ತುಂಬಿದ ಮನಗಳನ್ನು ಈ ದಿನಗಳಲ್ಲಿ ಎಲ್ಲಿ ಕಾಣುತ್ತೇವೆ ? ನಾನು ಬರೆಯುತ್ತಿರುವುದು ಹೊಗಳಿಕೆಯ ಮಾತಲ್ಲ . ಈ ದಿವಸಗಳಲ್ಲಿ ಅತಿಥಿ ಎಂದರೆ ಒಂದು ‘ಭೂತ’ ಅಥವಾ ಮನೆಗೆ ನುಗ್ಗಿದ ‘ಕಾಡುಕರಡಿ’. ಊಟಕ್ಕೆ ನಿಲ್ಲುವವನಾದರೆ ಅವನೊಬ್ಬ ಬ್ರಹ್ಮ ರಾಕ್ಷಸ ಸಮಾನ! ಜೀವನದ ಜಂಜಾಟ, ಬೆಲೆ ಏರಿಕೆಯ ಕಾಟ, ದೂರದರ್ಶನದ ಧಾರಾವಾಹಿಗಳ ಭರಾಟ, ಇವುಗಳ ಮಧ್ಯೆ ಕಾಲ ನೂಕುವ ಪರಿಪಾಠ - ಇವುಗಳ ನಡುವೆ ಅತಿಥಿಗೆಲ್ಲಿಯ ಸ್ವಾಗತ ?

ಹೆಚ್ಚಿನ ಮನೆಗಳ ವಾತಾವರಣ ಈ ದಿನಗಳಲ್ಲಿ ತುಂಬಾ ಬದಲಾಯಿಸಿವೆ. ನಿಮಗೆ ದೂರ ಇದ್ದು ವಿಚಾರ ತಿಳಿಯದಿರಬಹುದೆಂದು ಬರೆದು ಬಿಟ್ಟೆ. ಪೇಟೆಯ ಹೆಚ್ಚಿನ ಮನೆಗಳು ಈಗೀಗ ಇದೇ ರೀತಿ. ಮನೆಯೆಂಬುದು ಕೂಡಾ ಒಂದು ವ್ಯವಹಾರ ಕೇಂದ್ರ. ಪ್ರತಿಯಾಬ್ಬರೂ ಅವರವರ ವ್ಯವಹಾರದ ಹಿಂದೆ ಓಡುವ ವ್ಯಕ್ತಿಗಳು. ಮಕ್ಕಳೂ ಇದಕ್ಕೆ ಹೊರತಲ್ಲ. ಅವರು ‘ಕತ್ತೆ ಹೊರೆ’ ಪುಸ್ತಕ ಹೊತ್ತು ಶಾಲೆಗೆ ಹೋಗಿ ‘ಮೊದಲ ರ್ಯಾಂಕಿನಲ್ಲೇ ಪಾಸ್‌’ ಆಗಬೇಕೆಂಬ ಮಹದಾಸೆ - ಅವರ ಮಾತಾ ಪಿತೃಗಳಿಗೆ! ಮನೆಗೆ ಬಂದರೆ ಒಂದು ಲೋಟ ಬಾಯಾರಿಕೆ ಕುಡಿಸಿ ‘ಟ್ಯೂಶನ್‌’ಗೆ ಓಡಿಸುವ ಅವಸರ! ಆಟಕ್ಕೆ ಅವಕಾಶವೇ ಇಲ್ಲ. ರಾತ್ರಿ ‘ರಾಶಿ’ ಹೋಂ ವರ್ಕ್‌. ಸೇರದ ಊಟ - ಅಳತೆಯ ನಿದ್ರೆ.

ಥ್ಯಾಂಕ್‌ ಗಾಡ್‌! ದೇವರು ನನ್ನನ್ನು ಈ ದಿನದಲ್ಲಿ ಹುಟ್ಟಲು ಬಿಡಲಿಲ್ಲವಲ್ಲಾ !

ಈಗಿನ ಮಕ್ಕಳಿಗೆ ಆಟ, ಪಾಠ, ಮೋಜು, ನಲಿವು ಎಂದರೆ ಏನೆಂದೇ ಗೊತ್ತಿಲ್ಲ . ‘ನಗು’ವೆಂಬುದು ಅಪರೂಪದ ವಸ್ತು! ಭಜನೆ, ಹರಿಕಥೆ, ಪುರಾಣಗಳ ಗಂಧವಿಲ್ಲ.

ಹುಟ್ಟಿಸಿದ ತಂದೆ ತಾಯಿಗಳಿಗೆ ‘ಮಗು ಮುಂದೆ ಓದಿ ಕಂಪ್ಯೂಟರ್‌ ಕಲಿತು, ಅಮೇರಿಕಾದಲ್ಲಿ ನೆಲಸಿದರೆ ಸಾಕು’- ಇದೇ ಅವರ ಜೀವನದ ‘ಮಹತ್‌’ ಉದ್ದೇಶ. ಮನೆಯಲ್ಲಿ ಎಲ್ಲರಿಗೂ ದಿನಾ (ಭಾನುವಾರ ಬಿಟ್ಟು ?) ತಂಗಳು ಪೆಟ್ಟಿಗೆಯ ಅನ್ನ, ಕುಡಿಯಲು ಕೋಲಾ (ಕೋಲಾಹಲ) ಇದ್ದರೆ ಸಾಕು. ವಾರಕ್ಕೂಮ್ಮೆ ಹೋಟೆಲಿನ ಮಂಚೂರಿ ಊಟ, ದಿನೇದಿನೇ ಭೇಲ್‌ಪುರಿ, ಚಾಟ್‌, ಪೀಡ್ಜಾ ಅಥವಾ ‘ಬರ್ಗರ್‌’ ಇದ್ದರೆ ಸಾಕು - ‘ಸಂತೃಪ್ತ ಜೀವನ’. ಹೀಗೆ ಬದಲಾಯಿಸಿದೆ ‘ನಮ್ಮ ಜೀವನ’.

ಈ ದಿನಗಳಲ್ಲಿ ನಾವು ಅರುವತ್ತರ ದಶಕದ ಅಮೆರಿಕನ್ನರನ್ನು ಅನುಸರಿಸುತ್ತಿದ್ದೇವೆ - ಕೊಳ್ಳುಬಾಕ ಸಂಸ್ಕೃತಿ. ಎಲ್ಲಾ ‘ಗ್ಯಾಜ್ಯೆಟ್ಸ್‌ ನಮಗೆ ಬೇಕು’ - ‘ಅವು ಏನು ಸುಖ ತರುತ್ತವೆ’ ಎಂಬುದನ್ನು ನಾವು ಕಾದು ನೋಡಬೇಕು. ಈಗ ನಮ್ಮ ಜೀವನ ಸಾರಾಂಶವೆಂದರೆ - ಸಮಯದ ಹಾಗೂ ಹಣದ ಹಿಂದಿನ ಓಟ!

ನನ್ನ ದೋಸ್ತಿಯ ಮೊಮ್ಮಗ (ಅಪ್ಪರ್‌ ಕೇಜಿ = ನಾಲ್ಕು ವರ್ಷದ ಮಗು ) ದಿನಾ ಕೇಳುತ್ತಿರುತ್ತಾನೆ - ‘ಅಜ್ಜಾ, ನಾನು ಯಾವಾಗ ರಿಟೈರ್‌ ಆಗುವುದು?’

‘ಏಕೆ ಮಗು ಆ ಆಲೋಚನೆ?’ ಎಂದು ಕೇಳಿದರೆ - ‘ರಿಟೈರ್‌ ಆದರೆ ಆರಾಮವಾಗಿ, ಮಜವಾಗಿ ಮನೆಯಲ್ಲಿರಬಹುದು, ಬೀದಿನಾಯಿಗಳನ್ನು ಓಡಿಸುತ್ತಾ ಆನಂದವಾಗಿ ಕಾಲಕಳೆಯಬಹುದು - ಶಾಲೆ ಎಂಬ ಶನಿ ಕಾಟವಿಲ್ಲ’ ಎನ್ನುತ್ತಾನೆ. ಈ ವ್ಯಾಖ್ಯೆ ಅದೆಷ್ಟು ಸತ್ಯ!

ಮೈ ಡಿಯರ್‌ ಪೆನ್‌-ಫ್ರೆಂಡ್‌, ಇದನ್ನೆಲ್ಲ ಏಕೋ ಬರೆಯಬೇಕೆನ್ನಿಸಿತು, ಬರೆದೇಬಿಟ್ಟೆ. ‘ತಲೆ ಹರಟೆ’ ಎಂದು ಕಂಡರೆ ಕ್ಷಮೆ ಇರಲಿ.

ಹರಕೆಗಳು,

- ಪೆಜತ್ತಾಯ

ಬೆಂಗಳೂರು

16 ಆಗಸ್ಟ್‌, 2003

(ಸೂಚನೆ : ಅಪರೂಪದ ಪತ್ರಗಳು ನಿಮ್ಮ ಬಳಿ ಜೋಪಾನವಾಗಿವೆಯೆ ? ತೀರಾ ಅಪರೂಪ ಅನ್ನಿಸಿದಲ್ಲಿ , ಇತರರೊಂದಿಗೆ ಆ ಪತ್ರವನ್ನು ಹಂಚಿಕೊಳ್ಳಬಹುದು ಅನ್ನಿಸಿದಲ್ಲಿ , ಕಳುಹಿಸಿ. ಕಾಗದದ ದೋಣಿ ಅಂತರಜಾಲದ ಕಡಲಲ್ಲೂ ತೇಲಲಿ !- ಸಂ.)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more