ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಲಾಸಂ ನಗೆಚಾಟಿ ಸ್ಯಾಂಪಲ್‌

By Staff
|
Google Oneindia Kannada News
ಕೆಲವು ಮಹನೀಯರನ್ನು ಕುರಿತು ಮಂದಿ ಹೇಳುವುದುಂಟು- ಅವರು ಹಾಗಿದ್ದರು, ಹೀಗೆ ಬದುಕಿದ್ದರು, ಏನೆಲ್ಲಾ ಬರೆದಿದ್ದರು... ಇತ್ಯಾದಿ ಇತ್ಯಾದಿ. ಇವತ್ತು ಕನ್ನಡ ಸಾಹಿತ್ಯದಲ್ಲಿ ‘ಪ್ರಹಸನ ಪಿತಾಮಹ’ ಎಂದೆಲ್ಲ ಹೆಸರಾಗಿರುವ ಕೈಲಾಸಂ ಹೇಗಿದ್ದರು, ಹೇಗೆ ಬದುಕಿದರು ಎಂಬ ಬಗೆಗೆ ವಿಸ್ತುತ ಮಾಹಿತಿ ಬಹುಶಃ ಇರಲಾರದೇನೋ. ಆದರೆ ಮಾತು ಮಾತಿಗೂ ನಗೆಯುಕ್ಕಿಸುವ ಕೈಲಾಸಂ ಬರಹವಿದೆಯಲ್ಲ, ಅದು ಯಾವತ್ತಿಗೂ ಅಗ್ದೀ ಒರೀಜಿನಲ್‌ ! ಅಂಥ ನಗೆ ಚಟಾಕಿಗಳ ಸ್ಯಾಂಪಲ್‌ ಇಲ್ಲಿದೆ.

ಅವರು: ಅಲ್ರೀ ಕೈಲಾಸಂ, ನೀವು ತುಂಬ ವರ್ಷ ಇಂಗ್ಲೆಂಡಿನಲ್ಲಿ ಇದ್ದಿರಲ್ಲ. ನಿಮ್ಗೆ ಆಗೆಲ್ಲ ಈ ಬೆಂಗಳೂರು ನೆನಪಿಗೆ ಬರಲಿಲ್ವೇ ?
ಕೈಲಾಸಂ : ಬರದೇ ಉಂಟೇ ಸ್ವಾಮೀ ? ಖಂಡಿತ ಬರ್ತಿತ್ತು. ಪ್ರತಿ ತಿಂಗಳೂ ನಮ್ಮಪ್ಪನಿಂದ ಮನಿಯಾರ್ಡರ್‌ ಬಂದ ದಿನ ಬೆಂಗಳೂರಿನ ನೆನಪು ಬರ್ತಿತ್ತು. ಹಿಂದೇನೇ ಮರೆತೂ ಹೋಗ್ತಿತ್ತು.

Kailasamಹೋಟೆಲೊಂದರಲ್ಲಿ ಕೈಲಾಸಂ ತಿಂಡಿ ತಿನ್ನುತ್ತಿದ್ದರು. ಅದು ಬಿಸಿಬಿಸೀ ಉಪ್ಪಿಟ್ಟು. ತಿಂಡಿಯಲ್ಲಿ ಕೂದಲು ಕಂಡಿದ್ದೇ ತಡ ಮಾಣಿಯನ್ನು ಕರೆದ ಕೈಲಾಸಂ.. ಇದೇನ್‌ ರಾಜಾ ಎಂದರು.

‘ಅಯ್ಯೋ, ಕೂದ್ಲು ಸ್ವಾಮೀ, ಕೂದ್ಲೂ’ ಅಂದ ಮಾಣಿ. ಅದು ನಂಗೂ ಗೊತ್ತು ರಾಜಾ. ಒಳಗಡೆ ಹೋಗಿ ಭಟ್ರನ್ನ ಕೇಳು. ಇದು ಯಾರ್ದೂಂತ. ಅಂದ ಕೈಲಾಸಂ ಒಳಹೋಗುತ್ತಿದ್ದ ಮಾಣಿಯನ್ನು ತಡೆದು ಮೆಲ್ಲನೆ ಉಸುರಿದರಂತೆ - ಹಾಗೇ ಅದು ಎಲ್ಲೀಂದು ಅಂತ್ಲೂ ಕೇಳ್ಕೊಂಡು ಬಂದ್ಬಿಡು ಬೇಗ...

ಅದೊಮ್ಮೆ ಕೈಲಾಸಂ ಹೀಗೆ ಬರೆದಿದ್ದರು. ಒಬ್ಬ ಹುಡುಗ ಅಳುತ್ತ ಪ್ರಿನ್ಸಿಪಾಲರ ರೂಮಿಗೆ ಬಂದ. ಅವನನ್ನು ಕಂಡ ಪ್ರಿನ್ಸಿಪಾಲರು , ಯಾಕೋ ಅಳ್ತಾ ಇದ್ದೀ ? ಇಲ್ಲಿಗ್ಯಾಕೆ ಬಂದೆಯೋ ಎಂದರು. ಹುಡುಗ ಬಿಕ್ಕುತ್ತಲೇ ಹೇಳಿದ - ನಮ್ಮ ಇಂಗ್ಲಿಷ್‌ ಲೆಕ್ಚರ್ರು ತುಂಬ ಪ್ರಶ್ನೆಗಳನ್ನು ಕೇಳಿದ್ರು. ಉತ್ತರ ಹೇಳದೇ ಇದ್ದದ್ದಕ್ಕೆ ‘you fool... go to a devil and get lost’ ಅಂದ್ರು ಸಾರ್‌. ಅದಕ್ಕೇ ನೇರವಾಗಿ ನಿಮ್ಹತ್ರ ಬಂದೆ ಸಾರ್‌...

ಕೈಲಾಸಂ ಅವರನ್ನು ಸನ್ಮಾನಿಸಿದ ಅಭಿಮಾನಿಗಳು ಅವರಿಗೆ ಒಂದು ಸಾವಿರ ಬೆಳ್ಳಿ ನಾಣ್ಯಗಳನ್ನು ಗೌರವ ಧನವಾಗಿ ನೀಡಿದರು. ಸನ್ಮಾನಕ್ಕೆ ಉತ್ತರಿಸಲು ಎದ್ದು ನಿಂತ ಕೈಲಾಸಂ, ಹಣದ ಚೀಲ ಹಿಡಿದುಕೊಂಡು, ಅದನ್ನು ಆ ಕೈಯಿಂದ ಈ ಕೈಗೆ ವರ್ಗಾಯಿಸಿ ಅದರ ತೂಕ ನೋಡಿ ಇಷ್ಟೊಂದು ಹಣ ಕೊಟ್ಟಿದೀರಿ ಇದನ್ನು ಖರ್ಚು ಮಾಡೋವರೆಗೂ ನಂಗೆ ಮಾತಾಡಲು ಮೂಡ್‌ ಬರಲ್ಲ ಎಂದು ಹೇಳಿ ಕೂತೇ ಬಿಟ್ಟರು.

1927ರಲ್ಲಿ ಮಾಹಾತ್ಮಾ ಗಾಂಧೀಜಿಯವರು ನಂದಿ ಬೆಟ್ಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅವರಿಗೆ ಮನರಂಜನೆ ನೀಡಲೆಂದುಒಂದು ದಿನ ಟಿ. ಚೌಡಯ್ಯನವರು ಪಿಟೀಲು ನುಡಿಸುತ್ತಿದ್ದರು. ಚೌಡಯ್ಯರ ಬಗ್ಗೆ ತಿಳಿಯುವ ಆಸೆಯಿಂದ ಗಾಂಧೀಜಿ ಕೇಳಿದರಂತೆ - ‘Who is this young artist Mr. Kalisam?

ಕೈಲಾಸಂ ಉತ್ತರ: Bapooji, you are a great non-violinist, but this chowdaiah is a pakka violinist !’

ಬೇಕರಿಯಾಂದರ ಮುಂದಿದ್ದ ಬೋರ್ಡು ಗಮನಿಸಿ ಕೈಲಾಸಂ ಉದ್ಗರಿಸಿದ್ದು : ಇದೇನಿದು ನಗಬೇಕೋ ಅಳಬೇಕೋ ತಿಳೀತಿಲ್ವೇ ? ಈ ಕಾಲದಲ್ಲಿ ಎಲ್ರೂ ಬ್ರಾಹ್ಮಿನ್ಸ್‌ ಬೇಡ್ರೀ, ಬ್ರಾಹ್ಮಿನ್ಸ್‌ ಬೇಡ್ರಿ ಅಂತ ಬಡ್ಕೋತಿದಾರೆ. ಆದ್ರೆ ಈ ಬ್ರೆಡ್‌ ಅಂಗಡಿಯೋರು ಆನೆಗಾತ್ರದ ಅಕ್ಷರಗಳಲ್ಲಿ ‘ಬ್ರಾಹ್ಮಿನ್ಸ್‌ ಬೇಕ್ರಿ’ ಅಂತ ಬರೆಸಿ ಹಾಕಿದ್ದಾರೆ ! ಏನ್‌ ಧೈರ್ಯ , ಎಂಥ ಎದೆಗಾರಿಕೆ ಅವರದ್ದು...

*

ಕೈಲಾಸಂ ಅವರ ವ್ಯಕ್ತಿ ಚಿತ್ರ ಪರಿಚಯಿಸುವ ಯಾವುದೇ ಪುಸ್ತಕ ತಿರುವಿ ಹಾಕಿದರೂ ಸರಿ, ಇಂಥ ಪ್ರಸಂಗಗಳು ಒಂದರ ಹಿಂದೊಂದು ಸಿಗುತ್ತಲೇ ಇರುತ್ತವೆ, ಹೇಳಿ, ಇಂಥ ಪ್ರಸಂಗಗಳನ್ನು ಮರೆಯೋಕೆ ಸಾಧ್ಯವಾ ?

(ಸ್ನೇಹ ಸೇತು: ವಿಜಯ ಕರ್ನಾಟಕ)


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X