• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲಾವಿದ ದತ್ತಣ್ಣನವರ ಸಂದರ್ಶನ

By Staff
|
  • ನಾಡಿಗೇರ್‌ ಚೇತನ್‌, ಮುಕುಂದ ತೇಜಸ್ವಿ

‘ಓ ಶಾಸ್ತ್ರಿಗಳು... ಏನು ತೇಜಸ್ಸು, ಎಂಥಾ ಮನಸ್ಸು ಸ್ವಾಮಿ ನಿಮ್ಮದು’ ಅಂತ ದತ್ತಣ್ಣನ ಮುಂದೆ ಆ ಅಭಿಮಾನಿ ಕೈ ಮುಗಿದು ನಿಂತಾಗ, ಕ್ಷಣ ಕಾಲ ಬೆಚ್ಚಿದ್ದು ದಿಟ. ಯಾಕೆಂದರೆ, ಅಭಿಮಾನಿ ನಮಸ್ಕಾರ ಮಾಡಿದ್ದು ವಾಸ್ತವದಲ್ಲಿ ದತ್ತಣ್ಣ ಅವರಿಗಲ್ಲ, ‘ಮಾಯಾಮೃಗ’ ಧಾರಾವಾಹಿಯಲ್ಲಿ ಅವರು ಅಭಿನಯಿಸಿದ ಶಾಸ್ತ್ರಿಗಳ ಪಾತ್ರಕ್ಕೆ !

ರಂಗ, ಚಿತ್ರರಂಗ, ಕಿರುತೆರೆ- ಮೂರೂ ಕಡೆ ದತ್ತಣ್ಣ ಅಂತಲೇ ಹೆಸರಾಗಿರುವ ಎಚ್‌.ಜಿ. ದತ್ತಾತ್ರೇಯ ಪಾತ್ರದ ಪರಕಾಯ ಪ್ರವೇಶ ಮಾಡುವ ಅಪ್ಪಟ ಕಲಾವಿದ. ‘ಆಸ್ಫೋಟ’ದ ಖಳ, ‘ಅತಿಥಿ’ಯ ಅಸಹಾಯಕ ವೈದ್ಯ, ‘ಮುನ್ನುಡಿ’ಯ ಹುಡುಗಿ ಹುಡುಕ, ‘ಉಲ್ಟಾ ಪಲ್ಟಾ’ದ ತಲೆ ಚಚ್ಚಿಕೊಳ್ಳುವ ಇನ್ಸ್‌ಪೆಕ್ಟರು... ಹೀಗೆ ತರಾವರಿ ಪಾತ್ರಗಳಿಗೆ ಜೀವ ತುಂಬಿರುವ ದತ್ತಣ್ಣ , ರಾಷ್ಟ್ರ ಪ್ರಶಸ್ತಿ ಪಡೆದ ಅದ್ಭುತ ಪ್ರತಿಭೆ. ಕಿರುತೆರೆಯಲ್ಲಿ ತೀರಾ ಗಂಭೀರ ಪಾತ್ರಗಳಿಂದ ಹಿಡಿದು ಕಚಗುಳಿಯಿಡುವ ಸಿಲ್ಲಿ ಧಾರಾವಾಹಿ (ಡಂಡಂ ಡಿಗಡಿಗ) ಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡ ಇವರು ‘ಹೂಮಳೆ’ ಚಿತ್ರದಲ್ಲಿ ತಾನೇ ನಿರ್ವಹಿಸಿದ ಪಾತ್ರದಂತೆ ಅವಿವಾಹಿತ. ಒಂದು ಕಾಲದಲ್ಲಿ ಏರ್‌ಫೋರ್ಸ್‌ನಲ್ಲಿದ್ದ ದತ್ತಣ್ಣ ಈಗ ಸಿನಿಮಾ, ಟೀವಿ ಹಾಗೂ ನಾಟಕಕ್ಕೆ ಪೂರ್ತಿ ಸಮಯವನ್ನು ಮುಡಿಪಾಗಿಟ್ಟಿದ್ದಾರೆ. ಬಣ್ಣ ಹಚ್ಚುವುದರಿಂದ ಸಿಗುವ ಅಲ್ಪ ಸ್ವಲ್ಪ ಬಿಡುವಿನಲ್ಲಿ ದತ್ತಣ್ಣ ಕೂತು ಮಾತಾಡಿದರು. ಮಾತು ಫ್ಯಾಷ್‌ಬ್ಯಾಕ್‌ನಿಂದ ಫಾಸ್ಟ್‌ ಫಾರ್ವರ್ಡ್‌ವರೆಗೆ ಹರಿಯಿತು...

ನೀವು ರಂಗಭೂಮಿ ಮತ್ತು ಸಿನಿಮಾ ಪ್ರವೇಶಿಸಿದ್ದು ಹೇಗೆ?

H.G. Dattathreyaನನ್ನ ಮೊದಲ ರಂಗಪ್ರವೇಶವಾದದ್ದು ನಾಟಕಗಳ ಮೂಲಕ. ಶಾಲೆಯಿಂದ ನನಗೆ ನಾಟಕದ ಅಭ್ಯಾಸ. ನಾನು ಸಿನಿಮಾ ರಂಗಕ್ಕೆ ಬಂದದ್ದು ಬಹಳ ತಡವಾಗಿ. ನನಗೆ 45 ವರ್ಷ ತುಂಬಿದ ಮೇಲೆ. ನಾನು ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್‌ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಹೆಚ್ಚಾಗಿ ಬೆಂಗಳೂರಿನಲ್ಲಿರಲ್ಲಿಲ್ಲ. ಭಾರತದ ಇತರೆ ನಗರಗಳಾದ ಚಂಡೀಗಢ, ದೆಹಲಿ, ಅಂಡಮಾನ್‌ ಮುಂತಾದೆಡೆ ಇದ್ದೆ. ನನಗೆ ಸಿನಿಮಾ ಬಗ್ಗೆ ಕಲ್ಪನೆಯೇ ಇರಲಿಲ್ಲ. ಬರೀ ನಾಟಕ ಮಾಡುತ್ತಿದ್ದೆ. 1987ರಲ್ಲಿ ಬೆಂಗಳೂರಿನ ಹೆಚ್‌.ಎ.ಎಲ್‌ಗೆ ವರ್ಗವಾಗಿ ಬಂದೆ. ನಾನೂ ನಾಟಕದವನಾದ್ದರಿಂದ ನನಗೆ ಇಲ್ಲಿಯ ಕೆಲವು ನಾಟಕದವರು ಪರಿಚಯವಿದ್ದರು. ನನ್ನ ಕೆಲವು ನಾಟಕಗಳನ್ನು ನಾಗಾಭರಣ, ಟಿ. ಎಸ್‌.ರಂಗ ಮುಂತಾದವರು ನೋಡಿದ್ದರು. ಟಿ.ಎಸ್‌. ರಂಗ ಮೊದಲ ಬಾರಿಗೆ 1 ಘಂಟೆ ಅವಧಿಯ ‘ಉದ್ಭವ್‌’ ಎಂಬ ಸಿನಿಮಾದಲ್ಲಿ ನನ್ನನ್ನು ಪರಿಚಯಿಸಿದರು. ಅದಾದ ನಂತರ ನಾಗಾಭರಣರ ‘ಆಸ್ಫೋಟ’ ಚಿತ್ರ ಬಂತು. ಆ ಚಿತ್ರದಲ್ಲಿನ ಖಳನಟನ ಪಾತ್ರಕ್ಕೆ ಶ್ರೇಷ್ಠ ಪೋಷಕನಟ ಪ್ರಶಸ್ತಿ ದೊರೆಯಿತು. ನಂತರ ‘ಶರವೇಗದ ಸರದಾರ’, ‘ಮಾಧುರಿ’ ಮುಂತಾದ ಚಲನಚಿತ್ರಗಳಲ್ಲಿ ನಟಿಸಿದೆ. ಆಮೇಲೆ ‘ವೈದ್ಯೋ ನಾರಾಯಣೋ ಹರಿ’ ಎಂಬ ಧಾರವಾಹಿ ಮೂಲಕ ದೂರದರ್ಶನಕ್ಕೂ ಕಾಲಿಟ್ಟೆ. ನಾನಿನ್ನು ಆಗ ಕೆಲಸದಲ್ಲಿದ್ದುದರಿಂದ ಹೆಚ್ಚಾಗಿ ನಟಿಸಲಾಗುತ್ತಿರಲ್ಲಿಲ್ಲ. ಅಲ್ಲಲ್ಲಿ ಒಂದೊಂದರಲ್ಲಿ ಅಭಿನಯಿಸುತ್ತಿದ್ದೆ. 1994ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿದೆ. ಅಲ್ಲಿಂದ ನಿರಂತರವಾಗಿ ಸಿನಿಮಾ, ನಾಟಕ, ಟಿವಿ ಮತ್ತು ರೇಡಿಯೋದಲ್ಲಿ ನಟಿಸಿದೆ.

ಇತ್ತೀಚಿನ ವರ್ಷಗಳಲ್ಲಿ ನಾಟಕಗಳು ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿಲ್ಲ , ಏಕೆ?

ನಾಟಕ ಆಡುತ್ತಿರುವವರಿಗೇನು ಕಡಿಮೆ ಇಲ್ಲ. ಆದರೆ ನಾಟಕ ನೋಡುತ್ತಿರುವವರು ಕಡಿಮೆಯಾಗಿದ್ದಾರೆ. ಜನರಿಗೆ ಸಮಯ ಇಲ್ಲ. ಬದುಕಿನ ಜಂಜಾಟ ಬಹಳವಾಗಿದೆ. ನಾಟಕಕ್ಕೆ ಹೋಗಿ ಬರುವ ವೆಚ್ಚ, ಸಾರಿಗೆ ದುಬಾರಿಯಾಗಿದೆ. ಅದೊಂದು ಕಾರಣಗಳ ಸರಮಾಲೆಯಷ್ಟೇ. ಅದಕ್ಕಿಂತ ಮನೆಯಲ್ಲೇ ಸಮಾನಾಂತರ ಆಕರ್ಷಣೆಯಾದ ಟಿ.ವಿಯಿರುವಾಗ, ಜನ ನಾಟಕ ನೋಡಲು ಏಕೆ ಹೋಗುತ್ತಾರೆ? ಆದರೆ ಯಾವುದಾದರೂ ಅತ್ಯುತ್ತಮ ನಾಟಕವಿದ್ದರೆ ಜನ ಬಂದೇ ಬರುತ್ತಾರೆ. ಒಂದಂತೂ ಸತ್ಯ, ನಾಟಕ ನೋಡುವವರು ಕಡಿಮೆ ಆಗಿದ್ದಾರೆ.

ಜನರನ್ನು ರಂಗಭೂಮಿಯೆಡೆ ಎಳೆದು ತರಲು ಆಗಬೇಕಾದ ಕೆಲಸಗಳೇನು?

H.G. Dattathreya with Ananthnag in Mouniನಾಟಕಗಳಲ್ಲಿ ನಾ ಕಂಡಂತೆ ಹವ್ಯಾಸಿ ರಂಗಭೂಮಿಯಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ನಡೆಯುತ್ತಿತ್ತು. ಈಗ ಅಂಥ ಶ್ರದ್ಧೆ ಕಾಣಿಸುತ್ತಿಲ್ಲ. ಬೇರೆ ಬೇರೆ ರಂಗದಲ್ಲಿ ದುಡಿಯುತ್ತಿರುವವರಿಗೆ ಆಷ್ಟಾಗಿ ನಾಟಕಗಳ ಬಗ್ಗೆ ಆಸಕ್ತಿ ವಹಿಸಲು ಆಗುತ್ತಿಲ್ಲ. 1970ರ ಚಿತ್ರಣವೇ ಬೇರೆ. ಆಗ ಬಹಳ ಒಳ್ಳೆಯ ನಾಟಕಗಳನ್ನಾಡುತ್ತಿದ್ದರು. ಈಗ ನಾಟಕಗಳ ಕೊರತೆ ಇದೆ. ವರ್ಷಕ್ಕೊಂದು ಅಥವಾ ಎರಡು ನಾಟಕಗಳು ಬರುತ್ತವೆ. ಅರ್ಥಪೂರ್ಣ, ಗಾಢವಾಗಿ ಪರಿಣಾಮ ಬೀರುವ, ಇವತ್ತಿನ ಪರಿಸರಕ್ಕೆ ಸ್ಪಂದಿಸುವ ನಾಟಕಗಳ ತೀವ್ರ ಕೊರತೆ ಎದ್ದು ಕಾಣುತ್ತಿದೆ. ಹೊಸ ನಾಟಕಗಳು ಬರಬೇಕು, ಸಾಹಿತಿಗಳು ಉತ್ಸುಕರಾಗಬೇಕು. ಅವರು ಮುಂದೆ ಬರುತ್ತಿಲ್ಲ. ನಾಟಕ ನಿರ್ಮಾಣಗಳಲ್ಲಿ ವೈವಿಧ್ಯತೆ ಕಡಿಮೆಯಾಗುತ್ತಿದೆ. 1970ರಲ್ಲಿ ನಾಟಕಗಳಲ್ಲಿ ಹಲವಾರು ಬಗೆಯ ನಾಟಕಗಳು ಪ್ರಾರಂಭವಾದವು. ಜಾನಪದ, ಸಾಮಾಜಿಕ, ಡ್ರಾಯಿಂಗ್‌ ರೂಂ ಮುಂತಾದ ಬಗೆಗಳು ಪ್ರಾರಂಭವಾದವು. ಚಲನವಲನ, ರಮ್ಯತೆ, ಹಾಡು, ಕುಣಿತ ಇರಬೇಕೆಂಬುದು ಕಡ್ಡಾಯವಾಯಿತು. ಹಾಗಾಗಿ ಈ ಜಾಡಿನಲ್ಲಿ ನಾಟಕ ಪ್ರಾರಂಭವಾಯಿತು. ಬಿ.ವಿ. ಕಾರಂತರಷ್ಟೇ ಚೆನ್ನಾಗಿ ಎಲ್ಲರಿಗೂ ಮಾಡಲಾಗಲಿಲ್ಲ. ನಟರಿಗೆ, ಮಾತಿಗೆ ಮಹತ್ವ ಕಡಿಮೆಯಾಯಿತು. ಹಾಗಾಗಿ ಎಲ್ಲ ನಾಟಕಗಳು ಒಂದೇ ರೀತಿ ಕಾಣಲು ಪ್ರಾರಂಭವಾಯಿತು. ಜನರಿಗೆ ನೋಡಿದ್ದೇ ನೋಡಿ ಬೇಸರವಾಯಿತು. ಇತ್ತೀಚಿಗೆ ಪರ್ಯಾಯವಾಗಿ ಸಿ.ಆರ್‌. ಸಿಂಹರ ‘ವೇದಿಕೆ’ ಮತ್ತು ‘ರಂಗಾಯಣ’ದಲ್ಲಿ ಬೇರೆ ಬೇರೆ ನಾಟಕಗಳು ಪ್ರಾರಂಭವಾಯಿತು. ಬೆಂಗಳೂರಿನಲ್ಲಿ ಮಾತ್ರ ನಾಟಕಕ್ಕೆ ಸ್ವಲ್ಪ ತೊಂದರೆ ಇದೆ. ಬೇರೆ ಸ್ಥಳಗಳಲ್ಲಿ ಅಂತಹ ತೊಂದರೆಯಿಲ್ಲ. ನಾಟಕಗಳಿಗೆ ಇನ್ನೂ ಪ್ರಾಶಸ್ತ್ಯ ಇದೆ.

ನೀವು ಕಂಡಂತೆ ಇತ್ತೀಚಿನ ಸಿನಿಮಾ ಮಾಧ್ಯಮ ಹೇಗಿದೆ?

ಸಿನಿಮಾ ಮಾಧ್ಯಮದಲ್ಲಿ ಕೋಟ್ಯಂತರ ರೂಪಾಯಿ ಪೋಲಾಗುತ್ತಿದೆ. ಸಿನಿಮಾ ಸಾಂಸ್ಕೃತಿಕ ಮಾಧ್ಯಮ. ಸಿನಿಮಾಗೊಂದು ಉದ್ಯಮದ ಸ್ಥಾನ ದೊರೆತಾಗ ಅದಕ್ಕೊಂದು ಭ್ರಮಾಲೋಕದ ಬೆರಗು ಸಿಕ್ಕಿ ಗಿಮಿಕ್‌ಗಳು ಹೆಚ್ಚಾದವು. ರಿಯಲಿಸ್ಟಿಕ್‌ ಸಿನಿಮಾಗಳು ಕಡಿಮೆಯಾದವು. ಭ್ರಮಾಲೋಕಕ್ಕೆ ಕರೆದೊಯ್ಯೋ ಸಿನಿಮಾಗಳು ಜಾಸ್ತಿಯಾದವು. ಏಕತಾನತೆ ಹೆಚ್ಚಾಯಿತು. ಹೊಸ ವಿಷಯ ಹೇಳಬೇಕೆನ್ನುವ ತವಕಕ್ಕಿಂತ ಜನರನ್ನು ಸೆರೆಹಿಡಿಯುವುದೇ ಮೂಲಮಂತ್ರವಾಯಿತು. ಅಧಿಕ ಹೀರೋಗಳು, ಕಡಿಮೆ ವಸ್ತ್ರಗಳು... ಇಂಥಾ ಗಿಮಿಕ್‌ಗಳು ಜಾಸ್ತಿಯಾಯ್ತು. ನಮ್ಮ ಕ್ರಿಯಾಶೀಲತೆ ಕಡಿಮೆಯಾಯಿತು. ವರ್ಷಕ್ಕೆ 100 ಸಿನಿಮಾ ಬಂದರೆ ಅದರಲ್ಲಿ 15 ಚೆನ್ನಾಗಿರಬಹುದು. ಸರ್ಕಾರ ಒಳ್ಳೆಯ ಸಿನಿಮಾಗೆ ರಿಯಾಯಿತಿ ಕೊಡುತ್ತಿದೆ. ಆದರೆ ಅವರು ಕೊಡುವ ದುಡ್ಡಿನಲ್ಲಿ ಸಿನಿಮಾ ಮಾಡುವುದಕ್ಕಾಗುವುದಿಲ್ಲ. ಸಿನಿಮಾ ಖರ್ಚು ಮತ್ತು ಕೊಡುವ ರಿಯಾಯಿತಿಯಲ್ಲಿ ಬಹಳ ಗ್ಯಾಪಾಯ್ತು. ಖರ್ಚು ವಸ್ತುಗಾಗಿ ಅಥವಾ ಕಥೆಗಾಗಿ ಹೋಗುತ್ತಿಲ್ಲ. ಬದಲಿಗೆ ಬಾಹ್ಯ ವಸ್ತುವಿಗೆ ಖರ್ಚಾಗುತ್ತಿದೆ. ಪ್ರೇಕ್ಷಕರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ. ಟಿ.ವಿ. ಎಂಬ ಸಮಾನಾಂತರ ಮಾಧ್ಯಮದ ತೊಂದರೆಯೂ ಜಾಸ್ತಿಯಾಗಿದೆ. ಸಿನಿಮಾದ ಗಾಢ ಅನುಭವ ಪಡೆಯಲು ಚಿತ್ರಮಂದಿರಕ್ಕೇ ಹೋಗಬೇಕು.

ಜನ ಕನ್ನಡ ಚಿತ್ರ ಎಂದರೆ ಬೆಚ್ಚಿಬೀಳುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಜನರನ್ನು ಮತ್ತೆ ಚಿತ್ರಮಂದಿರಕ್ಕೆ ಎಳೆದು ತರಲು ಆಗಬೇಕಾದ ಕೆಲಸಗಳೇನು?

ಚಿತ್ರಗಳಲ್ಲಿ ವಸ್ತು ಮತ್ತು ಅದರ ಪ್ರತಿಪಾದನೆ ಮುಖ್ಯ. ಸಿನಿಮಾಗಳಲ್ಲಿ ಎರಡು ವಿಧ- ಆರ್ಟ್‌ ಮತ್ತು ಕಮರ್ಷಿಯಲ್‌ ಸಿನಿಮಾ. ಯಾವುದೇ ತರಹದ ಸಿನಿಮಾ ಮಾಡಲೀ ಅದರಲ್ಲಿ ರಸಪ್ರಜ್ಞೆಗೆ ಅವಕಾಶ ಇರಬೇಕು. ಒಂದು ಸಿನಿಮಾ ಮಾಡುವುದು ಬಹಳ ಕಷ್ಟ. ಹಾಡುಗಳಿಗೆ ಮತ್ತು ಚಿತ್ರಗಳಿಗೆ ಸಂಬಂಧ ಇರುವುದಿಲ್ಲ. ಅನೇಕ ಅಸಂಬದ್ಧ ಪ್ರಲಾಪಗಳಾಗುತ್ತದೆ. ಭ್ರಮಾ ಲೋಕದಿಂದ ರಿಯಲಿಸ್ಟಿಕ್‌ ಪ್ರಪಂಚಕ್ಕೆ ಹೋಗುವಂತಾಗಬೇಕು. ಸಿನಿಮಾಗಾಗಿ ಬಹಳಷ್ಟು ದುಡ್ಡು ಪೋಲಾಗುತ್ತಿದೆ. ಕಂಟೆಂಟ್‌ಗೆ ದುಡ್ಡು ಖರ್ಚಾದರೆ ಒಳ್ಳೆಯ ಚಿತ್ರ ತಯಾರಾಗುತ್ತದೆ. ಇದರಿಂದ ತಾರಾ ಮೌಲ್ಯ ಕೂಡ ಹೋಗುತ್ತದೆ. ಜೀವನಕ್ಕೆ ಹತ್ತಿರವಿರುವ, ಪರಿಸ್ಥಿತಿಗೆ ಕನ್ನಡಿ ಹಿಡಿವ, ಜೀವನ ಮೌಲ್ಯವಿರುವ ಸಿನಿಮಾ ತಯಾರಾಗುವಂತಾಗಬೇಕು. ಹಾಗಾದಾಗ ಮಾತ್ರ ಪ್ರೇಕ್ಷಕ ತಾನೇ ಚಿತ್ರಮಂದಿರಕ್ಕೆ ಬರುತ್ತಾನೆ.

ಈವರೆಗೂ ಎಷ್ಟು ಚಿತ್ರಗಳಲ್ಲಿ ನಟಿಸಿದ್ದೀರಿ? ನಿಮಗೆ ಸಂದ ಪ್ರಶಸ್ತಿ ,ಪುರಸ್ಕಾರಗಳ ಬಗ್ಗೆ ಹೇಳಿ?

1987ರಲ್ಲಿ ‘ಆಸ್ಫೋಟ’ ಚಿತ್ರದಲ್ಲಿನ ಖಳನಟನ ಪಾತ್ರಕ್ಕೆ ಶ್ರೇಷ್ಠ ಪೋಷಕನಟ ರಾಜ್ಯ ಪ್ರಶಸ್ತಿ ದೊರೆಯಿತು. 2001ರಲ್ಲಿ ‘ಮುನ್ನುಡಿ’ ಚಿತ್ರಕ್ಕೆ ಶ್ರೇಷ್ಠ ಪೋಷಕನಟನಾಗಿ ರಾಷ್ಟ್ರ ಪ್ರಶಸ್ತಿ ದೊರೆಯಿತು. ಅದೇ ಚಿತ್ರಕ್ಕೆ ಶ್ರೇಷ್ಠ ನಟ ರಾಜ್ಯಪ್ರಶಸ್ತಿ ಸಿಕ್ಕಿತು. ಇದಲ್ಲದೆ ದಕ್ಷಿಣ ಭಾರತ ಚಲನಚಿತ್ರ ಅಭಿಮಾನಿಗಳ ಸಂಘದಿಂದ ಆಸ್ಪೋಟ, ಚೈತ್ರದ ಚಿಗುರು, ಮುನ್ನುಡಿ ಚಿತ್ರಗಳಿಗೆ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಲಭ್ಯವಾಗಿವೆ. ಇದುವರೆಗೂ ಸುಮಾರು 75 ಸಿನಿಮಾ, 40 ನಾಟಕಗಳು ಹಾಗೂ ಅಸಂಖ್ಯಾತ ಧಾರವಾಹಿಗಳಲ್ಲಿ ನಟಿಸಿದ್ದೇನೆ.

ಯಾವ ನಿರ್ದೇಶಕ ನಿಮಗೆ ಅಚ್ಚುಮೆಚ್ಚು? ನೀವು ನಟಿಸಿರುವ ಚಿತ್ರಗಳಲ್ಲಿ ನಿಮಗೆ ಖುಷಿ ಕೊಟ್ಟ ಚಿತ್ರಗಳಾವುವು?

ಗಿರೀಶ್‌ ಕಾಸರವಳ್ಳಿ, ಜಿ.ವಿ. ಐಯ್ಯರ್‌, ಬಿ.ವಿ.ಕಾರಂತ್‌, ಶೇಷಾದ್ರಿ, ಸೀತಾರಾಂ ಮುಂತಾದವರ ನಿರ್ದೇಶನದಲ್ಲಿ ಅಭಿನಯಿಸಿದ್ದೇನೆ. ಅವರ ನಿರ್ದೇಶನ ನನಗೆ ಅಚ್ಚು ಮೆಚ್ಚು. ಆಸ್ಫೋಟ, ಕ್ರೌರ್ಯ, ಕೊಟ್ರೇಶಿ ಕನಸು, ಚೈತ್ರದ ಚಿಗುರು, ಚಿನ್ನಾರಿ ಮುತ್ತ, ಉಲ್ಟಾ ಪಲ್ಟಾ, ಮುನ್ನುಡಿ, ಮುಸ್ಸಂಜೆ ಖುಷಿ ಕೊಟ್ಟ ಚಿತ್ರಗಳು.

ನಿಮಗೆ ರಂಗಭೂಮಿ, ಸಿನಿಮಾ ಮತ್ತು ಟಿ.ವಿ ಮೂರರಲ್ಲಿ ಬಹಳ ಖುಷಿ ಕೊಟ್ಟ ಕ್ಷೇತ್ರ?

ಮೂರು ವಿಭಿನ್ನ ಸಾಂಸ್ಕೃತಿಕ ಕ್ಷೇತ್ರಗಳು. ಮೂರೂ ಖುಷಿ ಕೊಟ್ಟಿರುವ ಕ್ಷೇತ್ರಗಳು.

ನಿರ್ದೇಶನದ ಕಡೆ ಹೊರಳುವ ಆಸೆಯೇನಾದರೂ ಇದೆಯೇ?

ನಿರ್ದೇಶನ ಮಾಡ್ಬೇಕು ಅಂತ ಯೋಚನೆ ನನಗೆ ಬಂದಿಲ್ಲ. ನಟನೆಯಲ್ಲೇ ಬಹಳ ಸಾಧಿಸುವುದಿದೆ. ನಿರ್ದೇಶನ ತಂತ್ರ ನನಗೆ ಗೊತ್ತಿಲ್ಲ.

ನಿಮ್ಮ ನಟನೆಯ ಬಿಡುಗಡೆಯಾಗಬೇಕಾದ ಹೊಸ ಚಿತ್ರಗಳು?

ದೇವಾಸುರ, ಮೌನಿ, ಮರೀಚಿಕೆ.

ಮುಖಪುಟ / ಸಾಹಿತ್ಯ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more