• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಧುನಿಕತೆಯ ಅಲೋಪತಿ ಮತ್ತು ಗ್ರಾಮಸ್ವರಾಜ್ಯದ ಆಯುರ್ವೇದ

By Staff
|
  • ಕೆ.ಜಿ.ಶ್ರೀಧರ್‌,

ayama@satyam.net.in

ಮಲೆನಾಡಿನ ಒಬ್ಬ ಹೆಣ್ಣುಮಗಳು ಸಶಸ್ತ್ರ ಹೋರಾಟದ ಪಣವನ್ನು ತೊಟ್ಟು ಕುದುರೇಮುಖದ ಅರಣ್ಯದ ನಡುವೆ ಪೋಲೀಸರ ಗುಂಡಿಗೆ ಬಲಿಯಾದ ಘಟನೆ ಒಂದುಕಡೆ. ಬೆಂಗಳೂರಿನ ಒಬ್ಬ ಪೋಲೀಸ್‌ ಇನ್ಸ್‌ ಪೆಕ್ಟರ್‌ ತಾನು ಈ ರಾಜಕಾರಣಿಗಳನ್ನು ಅವರ ಭ್ರಷ್ಟತೆಯಲ್ಲಿ ನೋಡಲು ಅಸಾಧ್ಯವಾಗಿ ಶಾಸಕರ ಭವನವನ್ನೇ ಸ್ಫೋಟಿಸುವ ನಿರ್ಧಾರಕ್ಕೆ ಕಾರ್ಯಪ್ರವೃತ್ತನಾಗುವ ಘಟನೆ ಇನ್ನೊಂದು ಕಡೆ. ಇಂಥ ವಿದ್ಯಮಾನಗಳನ್ನು ನೋಡಿದಾಗ ಅರ್ಥವಾಗುತ್ತದೆ- ಬಹುಶಃ ನಮ್ಮಲ್ಲಿನ ಅನೇಕರಿಗೆ ಈ ವ್ಯವಸ್ಥೆಯನ್ನು ಸರಿಪಡಿಸಬೇಕೆಂದರೆ ನಾವು ವ್ಯಾಘ್ರರಾಗಲೇಬೇಕೆಂದು ಅನ್ನಿಸಿರಬೇಕು!

ವ್ಯವಸ್ಥೆಯ ಒಳಗಿನ ಮಾರ್ಗೋಪಾಯಗಳು ತುಂಬಾ ನಿಧಾನಗತಿಯ, ಕೆಲವೊಮ್ಮೆ ಅನೇಕ ಸೋಲುಗಳ ನಂತರವೇ ಕಾಣುವ ಪ್ರಕ್ರಿಯೆ ಹಾಗೂ ಕಾಲದ ಅಂಕೆಯಿಲ್ಲದ ದಾರಿ. ಆ ಕಾರಣದಿಂದಲೇ ಅನೇಕರು ಕಂಡುಕೊಳ್ಳುವ ತತ್‌ಕ್ಷಣದ ಮಾರ್ಗವೆಂದರೆ ವ್ಯವಸ್ಥೆಯನ್ನು ಸ್ಫೋಟಿಸುವುದು. ವ್ಯವಸ್ಥೆಯ ನಿರ್ಣಾಯಕರನ್ನು ಮತ್ತು ಜನತಂತ್ರವನ್ನು ತತ್‌ಕ್ಷಣಕ್ಕಾದರೂ ಸ್ಥಂಭೀಭೂತಗೊಳಿಸುವುದು....

Allopathy and Ayurvedaಇದೆಲ್ಲ ಯೋಚಿಸುವಾಗ ನನಗೆ ಕೆಲವೊಮ್ಮೆ ಅನ್ನಿಸುತ್ತದೆ; ನಾವೀಗ ಅಲೋಪತಿ ಚಿಕಿತ್ಸಾ ವಿಧಾನವನ್ನು ನೆಚ್ಚುವವರು. ಮನೆಮದ್ದುಗಳು, ಗಿಡಮೂಲಿಕೆಗಳು ನಮ್ಮ ನೆರವಿಗೆ ಬರಲಾರವೆಂದು ಈಗ ನೆಗಡಿಗೂ ಆಂಟೀಬಯಾಟಿಕ್ಸ್‌ ಮಾತ್ರೆಗಳನ್ನು ತೆಗೆದುಕೊಳ್ಳುತ್ತೇವೆ. ದೇಹದ ಅಂಗಾಂಗಗಳು ತೊಂದರೆ ಕೊಡುತ್ತಿದ್ದರೆ ಅವನ್ನು ನೋವೇ ಗೊತ್ತಾಗದಂತೆ ಕತ್ತರಿಸುವ ಕೆಲಸಗಳ ಕುರಿತಾಗಿ ಬಹಳ ಮುಂದುವರೆದಿದ್ದೇವೆ. ಆಯುಷ್ಯವನ್ನು ಪ್ರಕೃತಿ ನೀಡಿದ್ದಕ್ಕಿಂತ ಬಹಳ ಉದ್ದ ಮಾಡಿಕೊಳ್ಳುತ್ತಿದ್ದೇವೆ.

ನಾವು ಬದುಕಬೇಕೆಂದರೆ ದೇಹದ ಜೊತೆ ಸೆಣೆಸಾಡಿ ಅದರ ಸ್ವಯಂ ನಿರ್ವಹಣಾ ವ್ಯವಸ್ಥೆಗೆ ತಡೆಒಡ್ಡಿ ಮನುಷ್ಯ ನಿರ್ಮಿತ ಕೃತಕ ಸಾಧನಗಳ ಸಹಾಯದಿಂದ ದೇಹವನ್ನೇ ಗೆದ್ದು ಕೊನೆಗೆ ಅದನ್ನು ಹೇಳಿದಂತೆ ಕೇಳುವ ನಾಯಿಯಂತೆ ಬಗ್ಗಿಸಿಕೊಂಡು ಜೀವಿಸಲು ಅನುವುಮಾಡಿಕೊಡುವ ಈ ವಿಧಾನ ನಮ್ಮ ಆಯುರ್ವೇದ ಅಥವ ಪ್ರಕೃತಿ ಚಿಕಿತ್ಸಾ ವಿಧಾನಕ್ಕೆ ತುಂಬಾ ಹೊರತಾದದ್ದು. ಅಲೋಪತಿಯೆಂದರೆ ಇರಾಕಿನ ವಿರುದ್ಧ ಬುಶ್‌ ಕೈಗೊಳ್ಳುವ ಚಿಕಿತ್ಸೆ. ಗಿರೀಶ್‌ ಮಟ್ಟಣ್ಣನವರ್‌ ಮನಸ್ಸಿನಲ್ಲಿ ಹಾದುಹೋದ ಕಲ್ಪನೆ.... ಹಾಗಾದರೆ, ಆಯುರ್ವೇದ ಯಾವುದು ?

ಒಂದು ರೀತಿಯಲ್ಲಿ ನಮ್ಮ ಗ್ರಾಮೀಣ ಭಾರತದ ಗ್ರಾಮಸ್ವರಾಜ್ಯ ಕಲ್ಪನೆಯು ಆಯುರ್ವೇದ ಅಥವ ಪ್ರಕೃತಿಚಿಕಿತ್ಸಾ ಕ್ರಮದ್ದು. ಆಯುರ್ವೇದವೆಂದರೆ ಅದು ಕೇವಲ ಚಿಕಿತ್ಸೆ ಮಾತ್ರವಲ್ಲ. ಬದಲಾಗಿ ಅದೊಂದು ಜೀವನ ಕ್ರಮ. ದೇಹ - ಮನಸ್ಸುಗಳ ಈ ಆಕಾರಕ್ಕೂ ಪಂಚಭೂತಗಳಿಗೂ ಇರುವ ಸಂಬಂಧವನ್ನು ಅರಿಯಲು ಪ್ರಯತ್ನಿಸುವ ಒಂದು ವಿಧಾನ. ಇಲ್ಲಿ ಸಮಗ್ರ ಪರಿಸರ ನಮ್ಮ ಬದುಕನ್ನು ರೂಪಿಸುತ್ತದೆ. ಅತ್ಯಂತ ಕೃತಜ್ಞತಾ ಭಾವದಿಂದ ವ್ಯಕ್ತಿ ಪರಿಸರದೊಂದಿಗೆ ಸಹಬಾಳ್ವೆ ನಡೆಸಬೇಕಾಗುತ್ತದೆ. ಇಲ್ಲಿ ಯಾವುದೂ ಅತಿಯಾಗಿ ದೊರೆಯಲಾರದು. ಆಯುಷ್ಯ ಕೂಡ ವಿವೇಕದಿಂದಲೇ ಪಡೆಯಬಹುದಾದ್ದೇ ಹೊರತು ಅಹಂಕಾರದಿಂದ ಅಲ್ಲ. ಅಲೋಪತಿಯಲ್ಲಿ ನಾವು ಅಹಂಕಾರದಿಂದ ಜೀವಿಸಬಹುದು. ನಮ್ಮಲ್ಲಿ ಎರಡು ಲಕ್ಷ ಹಣವಿದ್ದರೆ ಬೈಪಾಸ್‌ ಸರ್ಜರಿ ಮಾಡಿಸಿಕೊಂಡು ಹತ್ತಿಪತ್ತು ವರ್ಷಗಳ ಆಯುಷ್ಯವನ್ನು ಗಿಟ್ಟಿಸಿಕೊಳ್ಳಬಹುದು......

ಆಯುರ್ವೇದದಲ್ಲಿ ಚಿಕಿತ್ಸೆ ನೀಡುವುದು ರೋಗಿಯ ದೇಹಕ್ಕೆ ಮತ್ತು ಮನಸ್ಸಿಗೆ. ಆ ದೇಹವೇ ತನಗೆ ಬಂದಿರುವ ರೋಗದ ವಿರುದ್ಧ ಹೋರಾಡುವಂತೆ ಅನುವು ಮಾಡಿಕೊಡುತ್ತದೆ. ಅದಕ್ಕಾಗಿ ಕಫ, ಪಿತ್ತ, ವಾತ ಗಳೆಂಬ ದೇಹ ಪ್ರಕೃತಿಗಳನ್ನು ಅಭ್ಯಾಸ ಮಾಡುತ್ತದೆ.

ಅಲೋಪತಿಯಲ್ಲಿ ಪ್ರತಿಯಾಬ್ಬನ ದೇಹಪ್ರಕೃತಿಯನ್ನು ಅಭ್ಯಾಸಮಾಡುವುದಿಲ್ಲ. ಬದಲಾಗಿ ರೋಗದ ವಿರುದ್ಧ ಹೋರಾಡುವ ಒಂದು ಪ್ರತಿ ಆಕ್ರಮಣ ನಡೆಸುತ್ತದೆ. ಈ ಹೋರಾಟಗಳ ನಡುವೆ ದೇಹ ಏನೂ ಆಗಬಹುದು. ಈಗೀಗ ದೇಹ ಉಳಿದುಕೊಳ್ಳಲು ಬಹಳ ಎಚ್ಚರಿಕೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಅನಿ ್ನ!!

ಅದೇನೇ ಇರಲಿ, ಪ್ರಸ್ತುತ ಪ್ರಪಂಚದ ಜನರು ನೆಚ್ಚಿರುವುದು ಅಲೋಪತಿಯನ್ನೇ. ಎಂದರೆ ಅತ್ಯಂತ ವೈಯುಕ್ತಿಕ ಮಟ್ಟದಲ್ಲಿ ಮನುಷ್ಯ ತನ್ನ ದೇಹವ್ಯವಸ್ಥೆಯನ್ನು ಯಾವ ರೀತಿಯಲ್ಲಿ ನಿರ್ವಹಿಸುತ್ತಿದ್ದಾನೆಂಬುದು ಆತ ಬದುಕುತ್ತಿರುವ ಸಮಾಜ- ದೇಶಗಳ ವ್ಯವಸ್ಥೆಯ ಕುರಿತಾಗಿನ ಆತನ ನಿರ್ವಹಣಾ ವಿಧಾನಕ್ಕೂ ಅನೇಕ ಹೋಲಿಕೆಗಳನ್ನು ಕಟ್ಟಬಹುದಾಗಿದೆ.

ದೇಹವೇ ಮನುಷ್ಯನ ಅತ್ಯಂತ ಸಮೀಪದ ಒಂದು ಸಂಕೀರ್ಣ ವ್ಯವಸ್ಥೆ. ಇದನ್ನು ವಿವೇಕದಲ್ಲಿ ಅರ್ಥಮಾಡಿಕೊಳ್ಳುವ, ಸೋಜಿಗ ಪಡುವ, ಅಂತರ್‌ದೃಷ್ಟಿಯ ಅಭ್ಯಾಸದಿಂದ ದೂರವಾಗಿರುವ ನಾವು ಹೊರಗಿನ ವ್ಯವಸ್ಥೆಯನ್ನು ಹೇಗೆ ತಿಳಿಯುವುದು? ನಮಗೆ ರೋಗ ಬಂದಾಗಲೇ ಗೊತ್ತಾಗುವುದು ದೇಹವಿದೆಯೆಂದು..... ಆಗಲೂ ನಾವು ಅರಸುವ ಮಾರ್ಗ ರೋಗದ ವಿರುದ್ಧದ ಯುದ್ಧ ; ನಮ್ಮ ಸಾಮಾಜಿಕ ವ್ಯವಸ್ಥೆಯು ಮನುಷ್ಯನ ನೀಚತನದಿಂದ ಕುಸಿದುಬೀಳುವಾಗ ನಮಗೆ ನಾವೆಲ್ಲಿ ಬದುಕುತ್ತಿದ್ದೇವೆಂದು ಎಚ್ಚರವಾಗಿ ಕಣ್ಣುತೆರೆಯುತ್ತೇವೆ; ಮತ್ತು ಕೂಡಲೆ ಬೀಳದಂತೆ ತತ್‌ ಕ್ಷಣದ ಏರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ; ಪುನಃ ಮರೆತು ವ್ಯವಸ್ಥೆಯ ವಿನಾಶದ ಕ್ರಿಯೆಯಲ್ಲಿಯೇ ತಲ್ಲೀನರಾಗುತ್ತೇವೆ...... ಇತ್ತೀಚೆಗೆ ಮನುಷ್ಯನ ದೇಹ ಸೌಂದರ್ಯದ ಕುರಿತಾಗಿ ಜನರಲ್ಲಿ ಭಾರೀ ಆಸಕ್ತಿ ಮೂಡಿದ್ದರೂ ಅದು ಕೇವಲ ಬಾಹ್ಯದ ಆರಾಧನೆ ಮಾತ್ರ. ಯೌವನದ ವ್ಯಸನ ಮಾತ್ರ!

ಇದು ಮಾನವನ ಅಜನ್ಮ ಕರ್ಮವೇ ಇರಬೇಕು. ನಾವು ಏನೇ ಸಮಗ್ರ ಜೀವನದ ವಿಧಾನಗಳನ್ನು ಕಂಡುಕೊಂಡರೂ ಮನುಷ್ಯ ಅವನ್ನೆಲ್ಲ ಮರೆತು ಅವನ ಕಲ್ಪಿತ ಸುಖದ ವ್ಯಸನಗಳಲ್ಲಿಯೇ ಮೈಮರೆಯುವುದು ಬಹುಶಃ ಬಿಡಲಾಗದ ಸಂಗತಿಯೇ ಇರಬಹುದು? ಅದಕ್ಕೇ ಇರಬೇಕು ಅಲೋಪತಿ ಚಿಕಿತ್ಸೆಯೇ ವಿಶ್ವಾದ್ಯಂತ ಬಳಕೆಯಲ್ಲಿರುವುದು..... ನಾವು ಏನನ್ನು ಬೇಕಾದರೂ ತಿನ್ನಬಹುದು. ಮನಸ್ಸನ್ನು ಸ್ಪರ್ಧೆಯ ಕ್ಷೋಭೆಗೆ ಒಳಗಾಗಿಸಬಹುದು. ಅದರಿಂದ ದೇಹಕ್ಕೆ ತೊಂದರೆ ಬಂದರೆ ಅದಕ್ಕೆ ‘ಮಾತ್ರೆ’ ಇದೆ!! ಆದರೆ ನಾಮಾಜಿಕ ವ್ಯವಸ್ಥೆಯಲ್ಲಿನ ನಮ್ಮ ಇಂಥ ಪರಿಸ್ಥಿತಿಗೆ ಯಾವ ರೂಪದ ಔಷಧವಿದ್ದೀತು?

ಇಂಥ ಬಾಯಿರುಚಿಯ, ಸ್ವಾರ್ಥದ, ಅಹಂಕಾರದ, ಮೈಮರೆಯುವ, ಹೊಣೆಗೇಡಿ ಮನುಷ್ಯನನ್ನು ಮತ್ತೂ ಕಾಪಾಡುವ, ಪ್ರೋತ್ಸಾಹಿಸುವ, ಇಂದಿನ ನಮ್ಮ ಆಧುನಿಕ ಸೌಕರ್ಯಗಳು ಮತ್ತು ಇದರಿಂದ ರೂಪುಪಡೆಯುವ ಬದುಕಿನ ಕ್ರಮ, ಆಲೋಚನಾ ಕ್ರಮ, ಕುಟುಂಬ ಕ್ರಮ, ಸಮಾಜದ ಕ್ರಮ, ದೇಶದ ಕ್ರಮ...... ಇವೆಲ್ಲವೂ ಹೇಗೆ ಪರ್ಯಾಯ ಅಹಿಂಸಾ ವ್ಯವಸ್ಥೆಯನ್ನು ಕಟ್ಟೀತು?

ಸುಖ ಸೌಕರ್ಯದ ತುತ್ತತುದಿಯ ದೇಶವಾದ ಅಮೇರಿಕಾವೇ ನಮ್ಮೆಲ್ಲರಿಗೆ ಇಂದಿನ ಆದರ್ಶವಾಗಿರುವಾಗ ಅದರಂತೆಯೇ ಮನುಷ್ಯ ಇಡೀ ಪ್ರಪಂಚದ ಸಕಲ ಜೀವರಾಶಿಯನ್ನೂ ಸ್ವಾಹಮಾಡಿಯೇ ಕೊನೆಗೆ ತೇಗುತ್ತಾನೋ ಏನೋ? ನಮ್ಮ ಅನೇಕ ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ, ಒಟ್ಟಾರೆ ಸಮಾಜ ಭ್ರಷ್ಟರಾಗಿರುವುದು ಇದೇ ಸುಖದ ಕಲ್ಪನೆಯಿಂದ ತಾನೆ?

ಇದನ್ನು ಸರಿಪಡಿಸಬೇಕೆಂದರೆ ನಮಗೆ ಎಲ್ಲಿಂದ ಪ್ರಾರಂಭಿಸಬೇಕೆಂಬುದೇ ಗೊಂದಲ. ಈ ಗೊಂದಲದಲ್ಲಿ ತಳಮಳ ಅನುಭವಿಸುವ ನಾವು ಕೊನೆಗೆ ಆರಿಸಿಕೊಳ್ಳುವುದು ಒಂದು ಧಿಡೀರ್‌ ಕ್ರಮವನ್ನು. ಒಂದು ಆಪರೇಶನ್ನನ್ನು !! ಒಂದೆಡೆ ಸಮಾಜವೇ ಆಪರೇಶನ್‌ಗೆ ರಡಿಯಾಗುತ್ತಿದ್ದರೆ ಇನ್ನೊಂದೆಡೆ ಸರ್ಕಾರ ಪ್ರತಿರೂಪದ ಉತ್ತರಕ್ಕೆ ತಯಾರಿರುತ್ತದೆ. ಸಮಾಜದ ಒಳಗೇ ಹಿಂದೂ ಸಮಾಜವನ್ನು ಕಟ್ಟಲು ಒಂದು ಆಪರೇಶನ್‌( ಬಾಬ್ರಿ ಮಸೀದಿಯನ್ನು ಕೆಡಗುವುದು) ಇನ್ನೊಂದೆಡೆ ಮುಸಲ್ಮಾನರು ನರಮೇಧಮಾಡಿ ಪ್ರತಿಭಟಿಸುವುದು. ಗಿರಿಜನರ ಸಂಸ್ಕೃತಿ-ಬದುಕಿನ ರಕ್ಷಣೆಗಾಗಿ ಕೋವಿಯನ್ನು ಧರಿಸಿ ಕಾಡಿನಲ್ಲಿ ಸಂಘಟಿಸುತ್ತಾ ಸರ್ಕಾರಕ್ಕೂ ಜನತಂತ್ರಕ್ಕೂ ಭಯಮೂಡಿಸುವುದು; ಕಾನೂನು ಪಾಲನೆಯ ವಿಚಾರದ ಮೂಲಕ ಸರ್ಕಾರ ಇಂಥವರನ್ನು ಸುಡುವುದು, ವಿಶ್ವವ್ಯವಸ್ಥೆಗಾಗಿ ಎಂದು ಹೇಳುತ್ತಾ ಅರಬರ ತೈಲಕ್ಕಾಗಿ ಅಮೇರಿಕಾದ ಬುಷ್‌ ಯುದ್ಧ ಸಾರುವುದು; ಇದಕ್ಕೆ ಉತ್ತರವಾಗಿ ಆಲ್‌ ಖೈದಾ ಕೆರಳಿ ಕೆಂಡವಾಗುವುದು........ಇವರೆಲ್ಲರ ನಡುವೆ ಪ್ರಾಣಿಗಳಂತೆ ಪಾಪದವರಾಗಿ ಜೀವಿಸುತ್ತಿರುವ ಮನುಷ್ಯರು ಯಾವ ಮಾರ್ಗವನ್ನು ಅನುಸರಿಯಾರು?

ಈ ಕಸಾಯಿಖಾನೆಯಂಥ ದೇಶವ್ಯವಸ್ಥೆಯಲ್ಲಿಯೂ ಜೀವನವನ್ನು ಅರಳಿಸಿಕೊಳ್ಳಬೇಕು; ಕೆಸರಿನಲ್ಲಿರುವ ಕಮಲದಂತೆಯೇ. ಈ ವ್ಯವಸ್ಥೆಯ ಸೃಷ್ಟಿ- ಲಯಗಳಲ್ಲಿ ಹಿಂಸೆ ಅಗತ್ಯವೆಂದೇ ಒಪ್ಪಬೇಕೆಂದರೆ ಇಂದು ನಡೆಯುತ್ತಿರುವ ಎಲ್ಲಾ ಘಟನಾವಳಿಗಳ ಕುರಿತಾಗಿ ಚಿಂತಿತರಾಗಬೇಕಿಲ್ಲ. ಪುನಃ ಪ್ರಕೃತಿಯ ಹತ್ತಿರ ಹೆಜ್ಜೆ ಹಾಕಿದರೆ ಸಾಕು......ಪುನಃ ಪ್ರಕೃತಿಚಿಕಿತ್ಸೆಯ ಕುರಿತಾಗಿ ಜನರಲ್ಲಿ ಆಸಕ್ತಿ ಮೂಡುತ್ತಿರುವಂತೆ.......... ಗ್ರಾಮ ಸ್ವರಾಜ್ಯದ ಹತ್ತಿರ ವ್ಯವಸ್ಥೆಯೂ ಹೆಜ್ಜೆಹಾಕಿದಂತೆ........

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more