• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲ್ಲಿಗೆಕವಿಯ ಹದಿನಾರನೇ ಕಾವ್ಯದೀಪಿಕೆ !

By Staff
|
  • ನಾಡಿಗೇರ್‌ ಚೇತನ್‌

ಮಲ್ಲಿಗೆ ಕವಿ ಕೆ.ಎಸ್‌.ನರಸಿಂಹ ಸ್ವಾಮಿ ಈಗ ದೀಪಗಳ ಸಾಲನ್ನು ತಂದು ನಮ್ಮ ಮುಂದಿಟ್ಟಿದ್ದಾರೆ. ‘ದೀಪ ಸಾಲಿನ ನಡುವೆ’ ಒಲವಿನ ಕವಿ ನರಸಿಂಹಸ್ವಾಮಿಯವರ 16ನೇ ಕವನ ಸಂಕಲನ. ಇದು ಪ್ರಕಾಶಕ ಸಂಸ್ಥೆ ‘ಅಂಕಿತ ಪುಸ್ತಕ’ದ 120ನೇ ಪುಸ್ತಕವೂ ಹೌದು. ದೀಪ ಸಾಲಿನ ನಡುವೆ ಪುಸ್ತಕವನ್ನು, ಸೆಪ್ಟಂಬರ್‌ 14 ಭಾನುವಾರ ಬೆಂಗಳೂರಿನ ‘ವರ್ಲ್ಡ್‌ ಕಲ್ಚರ್‌ ಲೈಬ್ರರಿ’ಯಲ್ಲಿ ಅನಾವರಣಗೊಳಿಸಲಾಯಿತು.

ಅನಾರೋಗ್ಯದಿಂದ ಬಳಲುತ್ತಿರುವ ಕೆ.ಎಸ್‌. ನರಸಿಂಹಸ್ವಾಮಿಯವರ ಅನುಪಸ್ಥಿತಿಯಲ್ಲಿ ಖ್ಯಾತ ಕವಿ ಡಾ ಜಿ.ಎಸ್‌. ಶಿವರುದ್ರಪ್ಪ ಕವನ ಸಂಕಲನ ಬಿಡುಗಡೆ ಮಾಡಿದರು. ಪ್ರೊ ಜಿ. ವೆಂಕಟ ಸುಬ್ಬಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ ನರಹಳ್ಳಿ ಬಾಲಸುಬ್ರಮಣ್ಯ ಹೊಸ ಕವನ ಸಂಕಲನದ ಬಗ್ಗೆ ಮಾತನಾಡಿದರು. ಇವರ ಜತೆ ಪ್ರೊ ಬಿ.ಸಿ. ರಾಮಚಂದ್ರ ಶರ್ಮ, ಡಾ ವಿಜಯ ಮತ್ತು ಸುಮತೀಂದ್ರ ನಾಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Cover page of Deepa Salina Naduveವಿಜಯಲಕ್ಷ್ಮಿ ಮತ್ತು ಸತ್ಯಲಕ್ಷ್ಮಿ ಪ್ರಾರ್ಥನೆಯಿಂದ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕೆ.ಎಸ್‌. ನರಸಿಂಹ ಸ್ವಾಮಿ ರಚನೆಯ ‘ದೀಪವು ನಿನ್ನದೆ’, ಎಲ್ಲವರೆಲ್ಲವರೆಲ್ಲವರು, ‘ಯಾರು ಒಪ್ಪಲಿ ಬಿಡಲಿ’, ‘ಮಾವಿನ ಮಿಡಿ ಚಂದ’ ಭಾವಗೀತೆಗಳನ್ನೂ ಚಂದವಾಗಿ ಹಾಡಿದರು. ಸ್ವಾಗತ ಭಾಷಣ ಮಾಡಿದ ಅಂಕಿತ ಪುಸ್ತಕದ ಪ್ರಕಾಶ್‌ ಕಂಬತ್ತಳ್ಳಿ ಸಭೆಗೆ ಆಗಮಿಸಿದ್ದ ಎಲ್ಲರನ್ನು ವಂದಿಸಿ, ಪುಸ್ತಕ ಬಿಡುಗಡೆ ಮಾಡಿದ ಡಾ ಜಿ.ಎಸ್‌.ಎಸ್‌ರವರನ್ನು ಅಭಿನಂದಿಸಿದರು. ಡಾ ಜಿ.ಎಸ್‌.ಎಸ್‌ ಮತ್ತು ಅಂಕಿತಾ ಪುಸ್ತಕದ ಸ್ನೇಹವನ್ನು ವಿವರಿಸಿದ ಪ್ರಕಾಶ್‌, ಡಾ ಜಿ.ಎಸ್‌.ಎಸ್‌ರವರು ತಮ್ಮ ಸಂಸ್ಥೆಯ 1, 50, 75, 100 ಹಾಗೂ 120ನೇ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಪ್ರಕಾಶನದ 200ನೇ ಪುಸ್ತಕವನ್ನು ಅವರೇ ಬಿಡುಗಡೆ ಮಾಡುವಂತಾಗಲಿ ಎಂದು ಆಶಿಸಿದರು.

ನಂತರ ಮಾತನಾಡಿದ ಜಿ.ಎಸ್‌.ಎಸ್‌, ಈ ವರ್ಷದಲ್ಲಿ ಪ್ರಕಟವಾಗುತ್ತಿರುವ ನರಸಿಂಹ ಸ್ವಾಮಿಯವರ ಎರಡನೇ ಪುಸ್ತಕ ಇದು. 5ನೇ ವರ್ಷದಲ್ಲಿ 6ನೇ ಪುಸ್ತಕ. ನಾನು ಬಿಡುಗಡೆ ಮಾಡುತ್ತಿರುವ 3ನೇ ಪುಸ್ತಕ. 90ರ ಕೆ.ಎಸ್‌.ನ ಅವರಿಗೆ ಈಗ 16ರ ಹರೆಯ. ಕವಿಯಾಬ್ಬನ ಕಾವ್ಯ ಜೀವನದಲ್ಲಿ ಇದು ಅಪರೂಪದ ಘಟನೆ. ಅವರ ಜತೆಯವರಾರು ಈ ವಯಸ್ಸಿನಲ್ಲಿ ಸೃಜನಶೀಲತೆ ಮೆರೆದ ಉದಾಹರಣೆಗಳಿಲ್ಲ ಎಂದು ಹೇಳಿದರು.

ಹಿಂದೊಮ್ಮೆ ನರಸಿಂಹ ಸ್ವಾಮಿಯವರು ನಾನು ಬಂದಿದ್ದು ಜ್ವಲಿಸುವ ವಸಂತದಲ್ಲಿ ಎಂದು ಅವರು ಕಾವ್ಯ ಪ್ರಪಂಚಕ್ಕೆ ಕಾಲಿಟ್ಟ ನವೋದಯ ಕಾಲದ ಬಗ್ಗೆ ಹೇಳಿದ್ದರು. ಆದರೆ ಅವರು ಶಿಶಿರವಿಲ್ಲದ ವಸಂತರಾದರು ಎಂದು ಬಣ್ಣಿಸಿದರು. ಜಿಎಸ್ಸೆಸ್‌ ಮಾತು ಕವಿಯ ಮಲ್ಲಿಗೆಯ ಮಾಲೆಯ ಸುತ್ತ ಹರಿದಾಡಿತು..

ಹದಿನಾರು ವರ್ಷಗಳ ಸುದೀರ್ಘ ಮೌನ

ಅವರ ಕಾವ್ಯ ಜೀವನದಲ್ಲಿ ಅಪವಾದವೆಂದರೆ 1960 ರಿಂದ 1976ರವರೆಗಿನ 16 ವರ್ಷದ ಸುದೀರ್ಘ ಮೌನ. ಆ ಹದಿನಾರು ವರ್ಷಗಳವರೆಗೆ ಅವರ ಯಾವ ಸಂಕಲನವೂ ಹೊರಬರಲಿಲ್ಲ. 1976ರಲ್ಲಿ ತೆರೆದ ಬಾಗಿಲು ಕವನ ಸಂಕಲನದಿಂದ ಪುನಃ ಮನೆಮಾತಾದ ಅವರಿಗೆ ಈ ಹದಿನಾರು ವರ್ಷಗಳ ಸುದೀರ್ಘ ಮೌನದಲ್ಲಿ ಮರೆತು ಹೋಗುವ ಭಯವಿರಲಿಲ್ಲ. ಆ ಮೌನದಲ್ಲಿ ಸಹ ಅವರ ಮನಸ್ಸು ಇನ್ನೇನೋ ಹೊಸತನ್ನು ಹುಡುಕುತ್ತಿತ್ತು. ಅವರ ಕವನ ಸಂಕಲನಗಳು ಕನ್ನಡಿಗರಿಗೆ ಯಾವ ಪರಿ ಸಂತಸ ತಂದಿತೆಂದರೆ ಈ ಸಮಯದಲ್ಲಿ ಅವರು ಕೆ.ಎಸ್‌.ನ ಅವರನ್ನು ಮರೆಯಲಿಲ್ಲ. ತಮ್ಮ ಕವನ ಸಂಕಲನಗಳಿಂದ ಓದುಗನಿಗೆ ಇಷ್ಟೊಂದು ಸಂತೋಷ ಕೊಟ್ಟ ಮತ್ತೊಬ್ಬ ಕವಿ ನಮ್ಮಲ್ಲಿಲ್ಲ. ಅವರು ಅಷ್ಟು ಜನಪ್ರಿಯರಾಗುವುದಕ್ಕೆ ಅವರ ಕಾವ್ಯಗಳಲ್ಲಿನ ವಸ್ತು ಪ್ರಪಂಚ, ದಾಂಪತ್ಯ ಜೀವನ ದೃಶ್ಯರೂಪಕಗಳು ಕಾರಣ. ಪರಿಚಿತವಾದ ಪ್ರಪಂಚ ನಮಗೆ ಇನ್ನೂ ಪ್ರಿಯವಾಗಿ ಮಾಡಿದ್ದೇ ಅವರ ಸಾಧನೆ ಎನ್ನಬಹುದು.

ಮೈಸೂರು ಮಲ್ಲಿಗೆಯ ಪರಿಮಳ ಇನ್ನೂ ಹಾಗೇ ಇದೆ

ಅವರ ಮೊದಲ ಕವನ ಸಂಕಲನ ಮೈಸೂರು ಮಲ್ಲಿಗೆ ಯಾವ ಪರಿ ಜನಪ್ರಿಯವಾಯಿತೆಂದರೆ, ಬೇರೆ ಯಾವುದೇ ಕವಿಯ ಮೊದಲ ಸಂಕಲನ ಹೀಗೆ ಜನರ ಮನಸ್ಸಿನ ಮೇಲೆ ಅಚ್ಚೊತ್ತಿರಲ್ಲಿಲ್ಲ. ಅದರ ಜನಪ್ರಿಯತೆಗೆ ಸಾಕ್ಷಿಯೆಂದರೆ ಮೈಸೂರು ಮಲ್ಲಿಗೆ ಇದುವರೆವಿಗೂ 27 ಬಾರಿ ಮುದ್ರಣಗೊಂಡಿದೆ. ಕೆ.ಎಸ್‌.ನ ಅವರ ಕವಿತೆಗಳಿಗೆ ಕುವೆಂಪು ಕವಿತೆಯ ಓಜಸ್ಸು ಇರಲ್ಲಿಲ್ಲ. ಬೇಂದ್ರೆಕಾವ್ಯಗಳಲ್ಲಿನ ನಾದಮಯತೆ, ಗಾರುಡಿಗತನವಿರಲ್ಲಿಲ್ಲ. ಅಡಿಗರ ಕವನಗಳಲ್ಲಿನ ಗುಡುಗು, ಕ್ಲಿಷ್ಟತೆ ಇರಲ್ಲಿಲ್ಲ. ಆದರೆ ಕೆ.ಎಸ್‌.ನ ಜನತೆಗೆ ಪರಿಚಿತ ಪ್ರಪಂಚ ಕೊಟ್ಟರು. ಅಬ್ಬರವಿಲ್ಲದೆ ಪ್ರತಿಭಟನೆ ನಡೆಸಿದರು.

ಹೂವು, ದೀಪ ಮತ್ತು ಮನೆ

ಅವರ ಕಾವ್ಯಗಳಲ್ಲಿನ ಮೂರು ಮುಖ್ಯ ಪ್ರತೀಕಗಳು ಹೂವು, ದೀಪ ಮತ್ತು ಮನೆ. ಹೂವು, ದೀಪ ಬೆಳಕು, ನೆಮ್ಮದಿ ಮತ್ತು ಸೌಂದರ್ಯ ಸಂಕೇತವಾದರೆ ಮನೆ ಕೌಟುಂಬಿಕ ಕ್ಷೇಮ ಮತ್ತು ಜೀವನದ ಸಂಕೇತವಾಗಬಹುದು. ಅದರಲ್ಲೂ ಮನೆಯನ್ನು ಪೂರ್ವಾರ್ಧ ಮತ್ತು ಉತ್ತರಾರ್ಧ ಎಂದು ಪರಿಗಣಿಸಿದರೆ ಪೂವಾರ್ಧದಲ್ಲಿ ಗಂಡ, ಹೆಂಡತಿ, ಮಗ ಸಂಕೇತವಾದರೆ ಉತ್ತರಾರ್ಧದಲ್ಲಿ ಜಗತ್ತನ್ನೇ ಕಾಣಬಹುದು ಎಂದು ಕೆ.ಎಸ್‌.ನ ಅವರ ಕಾವ್ಯಗಳ ಒಳಮರ್ಮವನ್ನು ಜಿಎಸ್ಸೆಸ್‌ ವಿವರಿಸಿದರು.

ಕೆ.ಎಸ್‌.ನ ಅವರ ಕಾವ್ಯ ಈ 5 ವರ್ಷದಲ್ಲಿ ಇನ್ನೂ ಹೆಚ್ಚು ಸಮೃದ್ಧವಾಗಿದೆ. ಈಗ ಅವರಿಗೆ ಕಣ್ಣು ಕಾಣಿಸುತ್ತಿಲ್ಲ. ಕಣ್ಣು ಕಾಣಿಸುವ ಅವರ ಒಳಮನೆಯಲ್ಲಿ ನಡೆಸುವ ಅನುಸಂಧಾನ ನಮ್ಮ ಮುಂದಿದೆ. ಅವರಿಗೆ ಬರೆಯಲಾಗುತ್ತಿಲ್ಲ.

ತಮ್ಮ ಕಾವ್ಯಗಳನ್ನು ಮೊದಲೇ ಮನಸ್ಸಿನಲ್ಲಿ ರಚಿಸಿ, ಸಿದ್ಧಮಾಡಿಕೊಂಡು ಮಿತ್ರ ವೆಂಕಟೇಶ ಮೂರ್ತಿಯವರಿಂದ ಬರೆಸುತ್ತಾರೆ. ಒಂದು ತರಹ ಇಡೀ ಕವನ Finished Product ಆಗಿರುತ್ತದೆ.

ಹಿಂದಿನ ಪದ್ಯಗಳಿಗೆ ಹೋಲಿಸಿದರೆ ಈ ಕವಿತೆಗಳಲ್ಲಿ ಮನೆಯ ಚಿತ್ರಣ ಸಿಗುವುದಿಲ್ಲ. ಮತ್ತೆ ಹಳೆಯದೆಲ್ಲಾ ಮುಂದುವರಿದಿದೆ. ಆದರೂ ಹೊಸತನ ಇದೆ. ಅವರು ಆರೋಗ್ಯವಾಗಿಲ್ಲ. ಅವರು ಗುಣಮುಖರಾಗಿ ಹಾಸಿಗೆ ಬಿಟ್ಟು ನಮ್ಮೊಡನೆ ಬೇಗ ಇರುವಂತಾಗಲಿ ಎಂದು ಆಶಿಸಿದರು.

ಪೂರಕ ಓದಿಗೆ-

ಕಾವ್ಯಕೃಷಿಯ ಈ ಸುಗ್ಗಿಯ ಫಸಲು .. !

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more