ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಹಿತಾಶ್ವರ ಪಕ್ಕಾ ಉತ್ತರಾಧಿಕಾರಿ

By Staff
|
Google Oneindia Kannada News
ತಂದೆಗೆ ತಕ್ಕ ಮಗ ಎಂಬ ಲೋಕಾರೂಢಿ ಮಾತನ್ನು ಯಾರು ಯಾರನ್ನು ಕುರಿತು ರಚಿಸಿದರೋ ಏನೋ? ಆದರೆ ಈ ಮಾತು ಚಿತ್ರರಂಗದ ಪ್ರತಿಭಾನ್ವಿತ ನಟರಾದ ಲೋಹಿತಾಶ್ವ ಮತ್ತು ಅವರ ಮಗ ಶರತ್‌ ಲೋಹಿತಾಶ್ವರಿಗೆ ಚೆನ್ನಾಗಿ ಒಪ್ಪುತ್ತದೆ. ತಂದೆಯಂತೆಯೇ ಶರತ್‌ ಕೂಡ ತಮ್ಮ ಕಂಚಿನ ಧ್ವನಿ ಮತ್ತು ವಿಶಿಷ್ಟ್ಯ ವ್ಯಕ್ತಿತ್ವದಿಂದ ಯಶಸ್ಸಿನ ಮೆಟ್ಟಿಲನ್ನು ಏರುತ್ತಿರುವವರು.

ತಂದೆಯಂತೆ ವೃತ್ತಿಯಲ್ಲಿ ಮೊದಲು ಮೇಷ್ಟ್ರಾಗಿದ್ದ ಶರತ್‌ ಗೀಳೂ ನಟನೆಯೇ ಆಗಿತ್ತು. ನಟನೆಯ ದೊಡ್ಡ ತೆಕ್ಕೆಯ ಬಿಸಿ ಅನುಭವ ಗಾಢವಾಗಿದ್ದೇ ತಡ, ವೃತ್ತಿಗೆ ರಾಜಿನಾಮೆ ವಗಾಯಿಸಿ ನಟನೆಯನ್ನೇ ಉಸಿರಾಡತೊಡಗಿದರು. ಮೇಷ್ಟ್ರಾಗಿದ್ದಾಗಿನಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಹೆದರಿಸಿ ಅನುಭವವಿತ್ತೇನೋ, ನಂತರ ಖಳನಟನಾಗಿ ಚಿತ್ರಗಳಲ್ಲಿ ಇತರರನ್ನು ಹೆದರಿಸಿ ಜನಪ್ರಿಯರಾದರು. ಇದುವರೆವಿಗೂ ನಟಿಸಿರುವ ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಹೆಚ್ಚಾಗಿ ಅವರು ಖಳನಟನಾಗಿಯೇ ನಟಿಸಿದ್ದಾರೆ.

Sharath Lohithashwaಶಾಲೆ ಮತ್ತು ಕಾಲೇಜಿನಲ್ಲಿದ್ದಾಗಲೇ ನಾಟಕದಲ್ಲಿ ಅಭಿನಯಿಸುವ ಮೂಲಕ ನಟನೆಯ ಗೀಳನ್ನು ಅಂಟಿಸಿಕೊಂಡ ಶರತ್‌, 1991ರಲ್ಲಿ ಟಿ.ಪಿ.ಕೈಲಾಸಂರ ‘ಪೋಲಿ ಕಿಟ್ಟಿ’ ನಾಟಕ ಧಾರಾವಾಹಿಯಾದಾಗ ಅದರಲ್ಲಿ ಕಿಟ್ಟಿಯಾಗಿ ಅಭಿನಯಿಸಿ ಮನೆಮಾತಾದರು. ಎಂ.ಎಸ್‌.ಸತ್ಯುರವರ ‘ಮೋಟೆರಾಮನ ಸತ್ಯಾಗ್ರಹ’ ನಾಟಕದಲ್ಲಿ ನಟಿಸಿದ ಅನುಭವವನ್ನು ವಿದ್ಯಾರ್ಥಿ ದಿಸೆಯಲ್ಲೇ ಪಡೆದುಕೊಂಡ ಶರತ್‌, ಶಾಲೆಯ ದಿನಗಳಲ್ಲಿ ರೇಡಿಯೋ ಕಾರ್ಯಕ್ರಮಗಳಿಗೆ ಕಂಠದಾನ ಕೂಡ ಮಾಡಿದ್ದಾರೆ.

ಶರತ್‌ ನಟಿಸಿದ ಮೊದಲ ಚಿತ್ರ ಕೆ.ವಿ. ರಾಜು ನಿರ್ದೇಶನದ ‘ಹುಲಿಯಾ’. ಮೊದಲ ಚಿತ್ರದಲ್ಲೇ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಂಪಾದಿಸಿದ ಮೇಲೆ ಹಿಂದಿರುಗಿ ನೋಡಿದ್ದೇ ಇಲ್ಲ. ಹುಲಿಯಾ ನಂತರ ಪೋಲೀಸ್‌ ಸ್ಟೋರಿ, ಸೆಂಟ್ರಲ್‌ ಜೈಲ್‌, ನಿರ್ಣಯ, ದುರ್ಗಾಶಕ್ತಿ ಮುಂತಾದ ಅನೇಕ ಚಿತ್ರಗಳಲ್ಲಿ ಶರತ್‌ ನಟಿಸಿದರು. ಈ ಚಿತ್ರಗಳಿಂದ ಉದ್ಯಮದ ಮತ್ತು ಪ್ರೇಕ್ಷಕರ ಗಮನವೇನೋ ಸೆಳೆದರು. ಆದರೆ ಅವರ ಚಿತ್ರಜೀವನ ನಿಜವಾಗಲೂ ತಿರುವು ಪಡೆದದ್ದು ಇತ್ತೀಚಿನ ‘ಪ್ಯಾರಿಸ್‌ ಪ್ರಣಯ’ ಮತ್ತು ‘ಸಿಂಗಾರೆವ್ವ’ ಚಿತ್ರಗಳಿಂದ.

ಶರತ್‌ಗೆ ಸಿಗುತ್ತಿರುವ ಪಾತ್ರಗಳೆಲ್ಲವೂ ಖಳನಟನದ್ದೇ. ಖಳನಟನ ಪಾತ್ರ ತಮಗೆ ತೃಪ್ತಿ ಕಟ್ಟಿದೆಯೇ ಎಂಬ ಪ್ರಶ್ನೆಗೆ- ಏರು ಪೇರು ಇದ್ದೇ ಇರುತ್ತದೆ. ಒಳ್ಳೆಯ ಪಾತ್ರಕ್ಕೆ ಕಾಯುತ್ತಾ ಕೂರುವುದಕ್ಕಾಗುವುದಿಲ್ಲ. ಗೋಧೂಳಿ ಧಾರಾವಾಹಿಯದ್ದು ಒಳ್ಳೆಯ ಪಾತ್ರ. ಅದು ಬಿಟ್ಟರೆ ಎಲ್ಲವೂ ಒಂದೇ ರೀತಿಯ ಪಾತ್ರ. ನನ್ನ ಪರ್ಸನಾಲಟಿ ಮತ್ತು ನನ್ನ ಧ್ವನಿ ಖಳನಟನ ಪಾತ್ರಕ್ಕೆ ಹೆಚ್ಚಾಗಿ ಹೊಂದುತ್ತದೆ. ಆದ್ದರಿಂದಲೋ ಏನೋ ಹೆಚ್ಚಾಗಿ ಖಳನಾಯಕನ ಪಾತ್ರ ಸಿಕ್ಕುತ್ತದೆ. ಆದರೆ ನನಗೆ ನನ್ನ ಮೇಲೆ ವಿಶ್ವಾಸವಿದೆ. ಯಾವುದೇ ರೀತಿಯ ಪಾತ್ರ ಬೇಕಾದರೂ ಮಾಡಬಲ್ಲೆನೆಂಬ ನಂಬಿಕೆಯಿದೆ. ಕಾಮಿಡಿಗೆ ಕೂಡ ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ.

ಶರತ್‌ ಅಭಿನಯಕ್ಕೆ ಜನರ ಮತ್ತು ಉದ್ಯಮದ ಪ್ರತಿಕ್ರಿಯೆಯೇನೋ ಚೆನ್ನಾಗಿತ್ತು. ಆದರೆ ಒಂದೇ ತರಹದ ಪಾತ್ರ ಮಾಡಿ ಬೇಜಾರಾಗಿ ಸ್ವಲ್ಪ ದಿನ ಚಿತ್ರರಂಗದಿಂದ ದೂರವಾಗಿ ಆ ಸಮಯದಲ್ಲಿ ಬರೀ ಧಾರಾವಾಹಿಗಳಲ್ಲಿ ನಟಿಸಿದರು. ಮನೆತನ, ಖೆಡ್ಡಾ, ಅಪರಾಜಿತ, ರೇಖೆಗಳು, ಪರ್ವ, ಶ್ರೀ ಕೃಷ್ಣ ಕಲ್ಯಾಣಲೀಲೆ, ಬಾಂಧವ್ಯ, ಸೂರ್ಯ ಶಿಕಾರಿ ಮುಂತಾದ ಧಾರಾವಾಹಿಗಳ ಸುಮಾರು 1000 ಕಂತುಗಳಲ್ಲಿ ನಟಸಿ ಕಿರುತೆರೆ ಪ್ರೇಕ್ಷಕರಿಗೂ ಹತ್ತಿರವಾದವರು. ಆದರೆ ಗೋಧೂಳಿ ಧಾರಾವಾಹಿ ತಂದು ಕೊಟ್ಟ ಹೆಸರು ಇನ್ಯಾವ ಧಾರವಾಹಿಯಿಂದ ಸಂಪಾದಿಸಲಿಕ್ಕಾಗಲಿಲ್ಲ. ಗೋಧೂಳಿ ಧಾರಾವಾಹಿಯಲ್ಲಿನ ಶರತ್‌ ಅಭಿನಯಕ್ಕೆ 2002 ಆರ್ಯಭಟ ಶ್ರೇಷ್ಠ ನಟ ಪ್ರಶಸ್ತಿ ಕೂಡ ಸಿಕ್ಕಿದೆ.

ಖಳನಾಯಕನ ಪಾತ್ರ ಬೇಜಾರಿಗಿದೆಯಂದು ಚಿತ್ರರಂಗದಿಂದ ದೂರವಿದ್ದ ಶರತ್‌, ಮುಂದೊಂದು ದಿನ ಬಂದೇ ಬರುತಾವ ಕಾಲ ಎಂದು ನಂಬಿದ್ದು ಸುಳ್ಳಾಗಲಿಲ್ಲ. ಒಳ್ಳೆಯ ಪಾತ್ರ, ಒಳ್ಳೆಯ ಬ್ಯಾನರ್‌ನ ನಿರೀಕ್ಷಣೆಯಲ್ಲಿದ್ದ ಶರತ್‌ಗೆ ಸಿಕ್ಕಿದ್ದು ಪ್ಯಾರೀಸ್‌ ಪ್ರಣಯ ಮತ್ತು ಸಿಂಗಾರೆವ್ವ. ಆ ಚಿತ್ರಗಳಲ್ಲಿ ಅವರ ಪಾತ್ರವೇನೋ ಜನಪ್ರಿಯವಾಯ್ತು. ಆದರೆ ಚಿತ್ರ ಯಶಸ್ಸಾಗಲಿಲ್ಲವೆಂಬ ಬೇಜಾರಿದೆ. ತಮ್ಮಂತಹ ಒಬ್ಬ ಪೋಷಕ ನಟನನ್ನು ನಂಬಿ ಚಿತ್ರೀಕರಣಕ್ಕೆ ವಿದೇಶಕ್ಕೆ ಕರೆದೊಯ್ದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ರನ್ನು ಶರತ್‌ ಮನತುಂಬಿ ಸ್ಮರಿಸುತ್ತಾರೆ. ಜತೆಜತೆಗೆ ತಮಗೆ ಸಿಂಗಾರೆವ್ವ ಚಿತ್ರದಲ್ಲಿ ಸವಾಲಿನ ಪಾತ್ರ ನೀಡಿದ ನಿರ್ದೇಶಕ ನಾಗಾಭರಣರನ್ನು ನಿರ್ದೇಶಕರಾಗಿ ಬಹಳ ಇಷ್ಟಪಡುತ್ತಾರೆ.

ಶರತ್‌ ತಂದೆಯಂತೆ ನ್ಯಾಷನಲ್‌ ಕಾಲೇಜ್‌ನಲ್ಲಿ ಇಂಗ್ಲೀಷ್‌ ಅಧ್ಯಾಪಕರಾಗಿದ್ದವರು. ಬಣ್ಣದ ಲೋಕ ನೆಚ್ಚಿಕೊಂಡು ಅಧ್ಯಾಪಕ ವೃತ್ತಿಗೆ ಸಲಾಮು ಹೊಡೆದದ್ದು ಸರಿಯಾದ ನಿರ್ಣಯ ಅನ್ನಿಸುತ್ತಾ ಎಂದು ಕಿಚಾಯಿಸಿದರೆ- ಪಾಠ ಮಾಡುವುದಕ್ಕೆ ನನಗೇನೋ ಖುಷಿ. ಆದರೆ ನನಗೆ ಸಂಯಮ ಬಹಳ ಕಡಿಮೆ ಮತ್ತು ಮುಜುಗರ ಬಹಳ ಜಾಸ್ತಿ ಎಂದು ಶರತ್‌ ತಣ್ಣನೆಯ ಸಬೂಬು ಕೊಟ್ಟರು.

ತಂದೆಯೇ ತನಗೆ ದೊಡ್ಡ ಪ್ರೇರಣೆ ಎನ್ನುವ ಶರತ್‌ಗೆ ಅಪ್ಪನಾಗಿ, ಮೇಷ್ಟ್ರಾಗಿ ಮತ್ತು ನಟನಾಗಿ ಲೋಹಿತಾಶ್ವ ತುಂಬ ಇಷ್ಟ. ಸಾಹಿತ್ಯ, ಮೌಲ್ಯ, ಅನುಭವ ಮತ್ತು ನೀತಿಯಲ್ಲಿ ತಂದೆಯೇ ನನ್ನ ಗುರು. ಅವರ ಜತೆ ಬಹಳ ಗಹನವಾದ ವಿಚಾರಗಳ ಚರ್ಚೆ ನಡೆಸುತ್ತೇನೆ. ನಾವಿಬ್ಬರೂ ಪರಸ್ಪರ ವಿಮರ್ಶೆ ಮಾಡಿಕೊಳ್ಳುತ್ತೇವೆ. ನನ್ನನ್ನು ಅವರು ಬೆಳೆಸಿದ ರೀತಿ ನನಗೆ ಬಹಳ ಖುಷಿ ಉಂಟು ಮಾಡುತ್ತದೆ. ನಾನು ಅವರ ಚಿತ್ರಗಳನ್ನು ನೋಡಲು ಹೋಗುತ್ತಿದ್ದೆ. ಇದುವರೆವಿಗೂ ಏನೇನು ಆಗಿದೆಯೋ, ಬಹುಶಃ ಅದೆಲ್ಲ ಮುಂದೆ ಒಳ್ಳೆಯದಕ್ಕೆ ಇರಬಹುದು ಅನ್ನುತ್ತಾರೆ ಶರತ್‌.

ನಾಗತಿಹಳ್ಳಿ ಚಂದ್ರಶೇಖರ್‌ರ ಹೊಸ ಧಾರವಾಹಿ ಅಪಾರ್ಟ್‌ಮೆಂಟ್‌, ಶಿವಮಣಿಯ ಖಾಕಿ ಮತ್ತು ಜಗ್ಗೇಶ್‌ರ ಹೊಸ ಚಿತ್ರದಲ್ಲಿ ಸದ್ಯಕ್ಕೆ ಶರತ್‌ ನಟಿಸುತ್ತಿದ್ದಾರೆ. ನಿರ್ದೇಶಕ ಆಗುವ ಆಸೆಯೇನಾದರೂ ಇದೆಯೇ ಎಂದು ಕೇಳಿದಾಗ- ಸದ್ಯಕ್ಕಿಲ್ಲ . ಸಾಕಷ್ಟು ನಾಟಕ ನಿರ್ದೇಶನ ಮಾಡಿದ ಅನುಭವವಿದೆ. ಸದ್ಯಕ್ಕೆ ನಿರ್ದೇಶನದ ಕಡೆ ಗಮನಹರಿಸಲು ಇಷ್ಟಪಡುವುದಿಲ್ಲ . ಆದರೆ ಮುಂದೆ ನಿರ್ದೇಶನ ಮಾಡಿದರೂ ಆಶ್ಚರ್ಯವಿಲ್ಲ ಎಂದರು.


ಇದನ್ನೂ ಓದಿ-
ಲೋಹಿತಾಶ್ವ ಸಂದರ್ಶನ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X