• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೊರೂರು ಪ್ರಶಸ್ತಿ : ಪ್ರಶಸ್ತಿಗಳ ಮಳೆಯಾ ಪುಳಕದ ಹೊಳೆಯಾ...

By Staff
|

*ರಘುನಾಥ ಚ.ಹ.

Goruru Ramaswamy Iyengarಹೊರಗೆ ಬಿಸಿಲ ಮಳೆ ! ಒಳಗೆ ಬೆವರಿನ ಹೊಳೆ !!

ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿನ ಫ್ಯಾನುಗಳು ಒಂದೇ ಸಮ ತಿರುಗುತ್ತ ಬಿಸಿಗಾಳಿಯ ಚೆಲ್ಲುತ್ತಿದ್ದವು. ಕಾವಲಿಯ ಮೇಲೆ ಕೂತವರಂತೆ ಕುರ್ಚಿಗಂಟಿಕೊಂಡಿದ್ದ ಮಂದಿ ಬೆವರು ಒರೆಸಿಕೊಳ್ಳುತ್ತ , ಕೈಯ್ಯಲ್ಲಿದ್ದ ಪತ್ರಿಕೆ ಕರಪತ್ರಗಳಿಂದ ಗಾಳಿ ಬೀಸಿಕೊಳ್ಳುತ್ತ ಚಡಪಡಿಸುತ್ತಿದ್ದರು. ವೇದಿಕೆಯ ಮೇಲೆ ವಾತಾವರಣ ತುಸು ತಣ್ಣಗಿತ್ತೋ ಏನೋ- ಸಾರಾ ಅಬೂಬಕರ್‌, ಚಂದ್ರಶೇಖರ ಕಂಬಾರ, ಎರಡೇ ಮಾತಾಡುತ್ತೇನೆ ಎಂದು ಪೀಠಿಕೆಯಾಂದಿಗೆ ಮಾತು ಪ್ರಾರಂಭಿಸಿದ ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌, ಎಲ್ಲರೂ ಮಾತು ಬೆಳೆಸಿದರು. ಕಾಲ ಅಕ್ಷರಶಃ ಸ್ತಬ್ಧವಾಗಿತ್ತು !!

ಅದು 2003 ನೇ ಇಸವಿಯ ಗೊರೂರು ಪ್ರಶಸ್ತಿ ಪ್ರದಾನ ಸಮಾರಂಭ. ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಏಪ್ರಿಲ್‌ 13ರ ಭಾನುವಾರ ಕಾರ್ಯಕ್ರಮ ನಡೆಯಿತು. 1983 ರಲ್ಲಿ ಪ್ರಾರಂಭವಾದ ಪ್ರತಿಷ್ಠಾನದ ದಶಮಾನೋತ್ಸವ ವರ್ಷವಿದು. ಆದರೆ, ಈ ಸಮಾರಂಭಕ್ಕೂ ದಶಮಾನೋತ್ಸವಕ್ಕೂ ಯಾವುದೇ ಸಂಬಂಧವಿರಲಿಲ್ಲ - ಸಾಹಿತ್ಯ ಸಾಧಕರಿಗೆ ಪ್ರಶಸ್ತಿ ಸಮ್ಮಾನ ಕಾರ್ಯಕ್ರಮ ಏರ್ಪಡಿಸುವುದು ಗೊರೂರು ಪ್ರತಿಷ್ಠಾನದ ವಾರ್ಷಿಕ ಸಂಪ್ರದಾಯ.

ಅದನ್ನು ಪ್ರಶಸ್ತಿ ಪ್ರದಾನ ಸಮಾರಂಭ ಅನ್ನುವುದಕ್ಕಿಂಥ, ಪ್ರಶಸ್ತಿಗಳ ಪ್ರದಾನ ಸಮಾರಂಭ ಅನ್ನುವುದೇ ಹೆಚ್ಚು ಸಮಂಜಸ. ಅಮೆರಿಕನ್ನಡಿಗ ಡಾ.ಮೈ.ಶ್ರೀ.ನಟರಾಜ್‌ ಸೇರಿದಂತೆ 28 ಮಂದಿ ಪುಸ್ತಕ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿದ್ದರು. ವರ್ಷದ ಲೇಖಕ ಕಂಬಾರ ಹಾಗೂ ಅಂಬೇಡ್ಕರ್‌ ಪ್ರಶಸ್ತಿಯ ಸಾರಾ ಅಬೂಬಕರ್‌ ಸೇರಿದಂತೆ ಪ್ರಶಸ್ತಿ ವಿಜೇತರ ಸಂಖ್ಯೆ ಮೂವತ್ತು . ಮೂವತ್ತಕ್ಕೆ ಮುಕ್ತಾಯ ಎಂದು ಸಂತೋಷಿಸುವಂತಿಲ್ಲ - ಪ್ರಶಸ್ತಿ ಕೊಟ್ಟು ಸಂತೋಷಿಸಿದ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ಸು.ರಂಗಸ್ವಾಮಿ ಹಾಗೂ ಅವರ ಶ್ರೀಮತಿ ಲಲಿತಾ ರಂಗಸ್ವಾಮಿ ಅವರಿಗೂ ಕೊನೆಯಲ್ಲಿ ಸನ್ಮಾನ ನಡೆಯಿತು. ಇದೊಂಥರಾ ಸನ್ಮಾನ ಸುಖದ ಸಮಾರಂಭ! ಸನ್ಮಾನದ ನಂತರ ಊಟ.

ಕಾರ್ಯಕ್ರಮದ ವಿಶೇಷಗಳನ್ನು ಮೂರು ಮತ್ತೊಂದು ಎಂದು ಪಟ್ಟಿ ಮಾಡುವುದಾದರೆ :
  • ಕಬೀರ್‌ ಸಮ್ಮಾನ್‌ ಪುರಸ್ಕೃತ ಕವಿ ಚಂದ್ರಶೇಖರ ಕಂಬಾರ, ಸಂಸ್ಕೃತ ಚಿತ್ರಗಳ ನಿರ್ದೇಶಕ ಜಿ.ವಿ.ಅಯ್ಯರ್‌, ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ.ನಾರಾಯಣ ಹಾಗೂ ಕನ್ನಡದ ಅನನ್ಯ ಲೇಖಕಿ ಸಾರಾ ಅಬೂಬಕರ್‌ ವೇದಿಕೆಗೆ ಭೂಷಣವಾಗಿದ್ದರು.
  • ನಿವೃತ್ತ ನ್ಯಾಯಮೂರ್ತಿ, ಶತಾಯುಷಿ ನಿಟ್ಟೂರು ಶ್ರೀನಿವಾಸರಾಯರು ಮೂರು ಗಂಟೆಗಳ ಕಾರ್ಯಕ್ರಮವನ್ನು ಸಹಿಸಿಕೊಂಡು ವೇದಿಕೆಯ ಮೇಲೆ ಕುಳಿತಿದ್ದರು. ನಿಟ್ಟೂರು ಈಗ ಸುಸ್ತಾಗಿದ್ದಾರೆ. ಅವರನ್ನು ಎತ್ತಿಕೊಂಡು ವೇದಿಕೆಗೆ ಕರೆತರಲಾಯಿತು. ಭಾಷಣಗಳಿಗೆಲ್ಲ ಮೂಕ ಸಾಕ್ಷಿಯಾದ ನಿಟ್ಟೂರು- ಭಾಷಣ ಮಾಡಲಿಲ್ಲ .
  • ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚಿಸಿದ ಕಿರಿಯ ಕವಯತ್ರಿ ಕುಮಾರಿ ಆರ್‌.ಮಾನಸ ಪ್ರಶಸ್ತಿ ವಿಜೇತರ ಪೈಕಿ ಕಿರಿಯಳು. ಈ ಬಾಲಕಿಯ ‘ಮನದ ಮಾತುಗಳು’ ಕವನ ಸಂಕಲನಕ್ಕೆ ಪ್ರಶಸ್ತಿ ನೀಡಲಾಯಿತು.
  • ಎಲ್ಲ ಪ್ರಶಸ್ತಿ ವಿಜೇತರಿಗೂ ಕೆಂಪು ಕೆಂಪು ಗುಲಾಬಿ ಹಾರ ಹಾಗೂ ಫಲಕ. ಕೆಲವು ವಿಜೇತರು ಸಚಿವ ಎಚ್‌.ಎಂ.ರೇವಣ್ಣ ಅವರ ಜೊತೆ ಫೋಟೊ ತೆಗೆಸಿಕೊಳ್ಳಲು ಹಾತೊರೆವ ಪ್ರಹಸನ ಚೆನ್ನಾಗಿತ್ತು . ಸಚಿವರು ವಿಳಂಬ ಸಂಪ್ರದಾಯವನ್ನು ಪರಿಪಾಲಿಸಿದರು. ಟೀವಿ ಕೆಮರಾಗಳಿಗಾಗಿ ಕಂಬಾರ, ಲೀಲಾದೇವಿ ಹಾಗೂ ಅಬೂಬಕರ್‌ ಇನ್ನೊಮ್ಮೆ ಹಾರದ ಹೊರೆ ಹೊತ್ತು , ಫಲಕ ಹಿಡಿದು ಸಚಿವರೊಂದಿಗೆ ಕೆಮರಾಗಳಿಗೆ ಮುಖಾಮುಖಿಯಾದರು.

The award moment : Leeladevi R Prasad, Chandrashekhara Kambara and Sara Abubakarಸಮಾರಂಭದ ಪ್ರಮುಖ ಉದ್ದೇಶ ಪ್ರಶಸ್ತಿ ಪ್ರದಾನವೇ ಆದರೂ, ಮಾತುಗಳಿಗೆ ಬರವೇನೂ ಇರಲಿಲ್ಲ . ಅಯ್ಯರ್‌ ಚುರುಕಾಗಿ ಚುಟುಕಾಗಿ ಮಾತಾಡಿದರು. ಕಂಬಾರ ಎಂದಿನಂತೆ ತೆಳುಹಾಸ್ಯದ ಶೈಲಿಯಲ್ಲಿ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿದರು. ಸಾರಾ ಅಬೂಬಕರ್‌ ಮಾನವೀಯತೆ, ಅಂಬೇಡ್ಕರ್‌, ಮಹಿಳೆ ಇತ್ಯಾದಿಗಳ ಕುರಿತು ಗೊಣಗಿಕೊಂಡರು. ಇವರುಗಳ ಮಾತನ್ನು ವಿವರಿಸುವುದಾದರೆ-

ಜಿ.ವಿ.ಅಯ್ಯರ್‌ : ಬಹುಮಾನಿತರು ಈ ಬಹುಮಾನಗಳ ಮೂಲಕ ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಕ್ರಿಯಾಶೀಲರಾಗಬೇಕು. ನಾನು ಹಾಗೂ ಗೊರೂರು ಹತ್ತಿರದವರಾದರೂ, ವೈಚಾರಿಕವಾಗಿ ದೂರ ದೂರ. ‘ನೀನು ನಿಗೂಢ, ಸಂಕೇತಗಳ ಜಾಡಿನವನು’ ಎಂದು ಗೊರೂರು ನನ್ನ ಕುರಿತು ಹೇಳುತ್ತಿದ್ದರು. ಜನರಿಗೆ ನಿಕಟವಾಗಿ ಬದುಕಬೇಕು ಎಂದು ಗೊರೂರು ನನಗೆ ಹೇಳುತ್ತಿದ್ದರು.

ಚಂದ್ರಶೇಖರ ಕಂಬಾರ ಬಹುದೊಡ್ಡ ಕವಿ. ಅವರೇನಾದರೂ ಬೇರೆ ದೇಶದಲ್ಲಿ ಇದ್ದಿದ್ದರೆ ಅವರಿಗೆ ನೊಬೆಲ್‌ ಪ್ರಶಸ್ತಿ ಬರುತ್ತಿತ್ತು .

ಚಂದ್ರಶೇಖರ ಕಂಬಾರ : ಭಾರತೀಯ ಲೇಖಕರು ಸಂದಿಗ್ಧತೆಯಲ್ಲಿದ್ದಾರೆ. ಜಾಗತೀಕರಣ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳು ಸಡಿಲವಾಗುತ್ತಿವೆ. ಸಾಹಿತ್ಯದ ಸಂದರ್ಭದಲ್ಲೂ ಮನುಷ್ಯ ಸಂಬಂಧಗಳು ಸೊರಗುತ್ತಿರುವುದನ್ನು ಗಮನಿಸಬೇಕು. ಇಂಥ ಸಂದರ್ಭದಲ್ಲಿ ಲೇಖಕನ ಜವಾಬ್ದಾರಿ ಹಿಂದಿಗಿಂತಲೂ ಹೆಚ್ಚಾಗಿದೆ.

ಉತ್ಪಾದಕ-ಗ್ರಾಹಕ-ಏಜೆಂಟ್‌ ಎನ್ನುವ ಮೂರು ನೆಲೆಯಲ್ಲಿ ಇವತ್ತಿನ ಸಂಬಂಧಗಳು ನಿಂತಿವೆ. ಇದು ಆತಂಕಕಾರಿ ಬೆಳವಣಿಗೆ.

ಸಾರಾ ಅಬೂಬಕರ್‌ : ಅಂಬೇಡ್ಕರ್‌ ಕಂಡ ಕನಸು 50 ವರ್ಷವಾದರೂ ನನಸಾಗಲಿಲ್ಲ. ದಲಿತರ ಮೇಲೆ ಮತ್ತಷ್ಟು ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ದಲಿತರು, ಶೋಷಿತರನ್ನು ಮುಗಿಸಲು ಕೆಲವು ರಾಜ್ಯಗಳಲ್ಲಿ ಪ್ರತ್ಯೇಕ ಖಾಸಗಿ ಸೇನೆಗಳು ನಿರ್ಮಾಣಗೊಂಡಿವೆ. ಈ ನಿಟ್ಟಿನಲ್ಲಿ ದಲಿತರನ್ನು ವಿದ್ಯಾವಂತರನ್ನಾಗಿಸುವ ಅಗತ್ಯವಿದೆ. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಯನ್ನು ತಪ್ಪಿಸುವ ಸಾಹಿತ್ಯ ಕೃತಿಗಳು ಹೆಚ್ಚಾಗಬೇಕು.

ಗೊರೂರು ಶೈಲಿಯ ಪ್ರಬಂಧಕಾರ ಸಿ.ಎನ್‌.ಕೃಷ್ಣಮಾಚಾರ್‌, ಬೆಳ್ಳಿತೆರೆ-ಕಿರುತೆರೆ ಕಲಾವಿದ ಎಚ್‌.ಜಿ.ಸೋಮಶೇಖರ ರಾವ್‌, ಕವಿ ಡಾ.ಪಂಚಾಕ್ಷರಿ ಹಿರೇಮಠ, ಡಾ.ಮೈ.ಶ್ರೀ.ನಟರಾಜ, ಎಚ್‌.ಆರ್‌.ಚಂದ್ರವದನರಾವ್‌ ಪ್ರಶಸ್ತಿ ವಿಜೇತರ ಸಾಲಿನಲ್ಲಿ ಎದ್ದು ಕಾಣುತ್ತಿದ್ದ ಮುಖಗಳು. ವಿಜೇತರ ಪಟ್ಟಿಯಲ್ಲಿ ದ್ದ ಮೊದಲ ಹೆಸರು ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರದು. ಗೈರುಹಾಜರಾಗುವ ಮೂಲಕ ಗುಲಾಬಿ ಹಾರ ಶೋಭಿತರಾಗುವ ಅವಕಾಶದಿಂದ ಕುರ್ತಕೋಟಿ ವಂಚಿತರಾದರು.

ಗೊರೂರು ಪ್ರಶಸ್ತಿ ಪಡೆವ ಹಿಂದಿನ ದಿನವಷ್ಟೇ ಮೈಸೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮೈ.ಶ್ರೀ.ನಟರಾಜ್‌ ಭಾಗವಹಿಸಿದ್ದರು. ಹಿರಿಯ ಸಾಹಿತಿ ಶಿಕಾರಿಪುರ ಹರಿಹರೇಶ್ವರ ಮಾರ್ಗದರ್ಶನದಲ್ಲಿ ನಡೆದ ಸಂಜೆಯ ತಂಪು ತಂಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಳಕಿತರಾಗಿದ್ದ ನಟರಾಜ್‌- ಬೆಂಗಳೂರಿನ ಬೇಸಗೆಯ ಬೆಳಗಿನ ಕಾರ್ಯಕ್ರಮದಲ್ಲಿ ಸುಸ್ತಾದರು. ಅದೇನೇ ಇರಲಿ- ಬೆಂಗಳೂರಿನ ಬೇಸಗೆ ಧಗೆಯ ವಾತಾವರಣ ಹಾಗೂ ತವರಿನಲ್ಲಿ ನಡೆವ ಸಾರಸ್ವತ ಕಾರ್ಯಕ್ರಮಗಳ ಪರಿ ಮೈ.ಶ್ರೀ. ಅವರಿಗೆ ಅರ್ಥವಾಗಿರಬೇಕು. ಈ ಕುರಿತು ಅಮೆರಿಕಾಗೆ ತೆರಳಿದ ನಂತರ ನಟರಾಜ್‌ ಕವಿತೆ ಬರೆಯುತ್ತಾರಾ ? ಕಾದು ನೋಡಬೇಕು.

ಕಾರ್ಪೊರೇಟ್‌ ಕ್ರಿಟಿಕ್‌ ಎಸ್‌.ಆರ್‌.ವಿಜಯಶಂಕರ, ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ, ಕಲಾವಿದ ಶ್ರೀನಿವಾಸ ಪ್ರಭು ಪ್ರೇಕ್ಷಕರ ಸಾಲಿನಲ್ಲಿ ಬೆವರುತ್ತಿದ್ದುದು ಕಾಣಿಸಿತು. ಮನ್ವಂತರ ಟೆಲಿ ಸೀರಿಯಲ್‌ಗೆ ಕಥೆ ಒದಗಿಸಿದ ಸರ್ಟಿಫಿಕೇಟ್‌ನ ಗೀತಾ ಬಿ.ಯು. ಕಾರ್ಯಕ್ರಮವನ್ನು ನಿರೂಪಿಸಿದರು.

ಮತ್ತೆ 2004 ನೇ ಇಸವಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಮೂಲಕ ಗೊರೂರು ರಾಮಸ್ವಾಮಿ ಅಯ್ಯಂಗಾರರನ್ನು ಭೇಟಿಯಾಗೋಣ.

ಮರೆತ ಮಾತು : ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿಕಾರ ಕೆ.ಶಿವರಾಮ ಕಾರಂತರ ಹೆಸರು ಕೂಡ ಪುಸ್ತಕ ಪ್ರಶಸ್ತಿ ವಿಜೇತರ ಲಿಸ್ಟಿನಲ್ಲಿತ್ತು . ‘ಪಕ್ಷಿಗಳ ಅದ್ಭುತ ಲೋಕ’ ಕೃತಿಗಾಗಿ ಕಾರಂತರಿಗೆ ಮರಣೋತ್ತರವಾಗಿ ನೀಡಲಾದ ಪ್ರಶಸ್ತಿಯನ್ನು ಮಾಲಿನಿ ಮಲ್ಯ ಸ್ವೀಕರಿಸಿದರು.

ಪೂರಕ ಓದಿಗೆ-

ಸಾರಾ ಅಬೂಕರ್‌ ಸಂದರ್ಶನ

‘ಗೊರೂರು ಪ್ರಶಸ್ತಿ’ : ಏ.13 ರಂದು ಸಾಧಕರ ಸಮ್ಮಿಲನ !

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more