ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎ.ಎಸ್‌.ಮೂರ್ತಿಯೆಂಬ ಮಲ್ಟಿಮೀಡಿಯಾ

By Staff
|
Google Oneindia Kannada News
  • ಜೋಗಿ
    ಪುರವಣಿ ವಿಭಾಗ, ಕನ್ನಡಪ್ರಭ

    [email protected]
Jogi, Kannada Prabha, Dailyಈ ಬದುಕೊಂದು ಸುಸ್ತಾಗುತ್ತಾ ಹೋಗುವ ಸುದೀರ್ಘ ಪ್ರಕ್ರಿಯೆ !

ಹಾಗಂದವನು ಬಹುಶಃ ಸ್ಯಾಮ್ಯುಯೆಲ್‌ ಬಟ್ಲರ್‌ ಅಥವಾ ಸ್ಯಾಮ್ಯುಯೆಲ್‌ ಜಾನ್ಸನ್‌. ಅದು ನಿಜವೆಂದು ನಾವೆಲ್ಲಾ ನಂಬಿದ್ದೆವು. ನಮ್ಮ ಪಾಲಿಗೆ ಅದು ನಿಜವೂ ಹೌದು. ಹಾಗೆ ಸುಸ್ತಾಗದೇ ಹೋಗಿದ್ದರೆ ಹಳೆಯ ಪುಸ್ತಕಗಳನ್ನು ತೆರೆದು ಹಾಗೆ ಹೇಳಿದ್ದು ಬಟ್ಲರ್ರೋ ಜಾನ್ಸನ್ನೋ ಎಂದು ನೋಡಬಹುದಿತ್ತು. ಫೋನೆತ್ತಿಕೊಂಡು ನಾಡಿಗರನ್ನೋ ವೆಂಕಟಸುಬ್ಬಯ್ಯನವರನ್ನೋ ಕೇಳಬಹುದಿತ್ತು. ಇಂಟರ್‌ನೆಟ್‌ ಆವಾಹಿಸಿಕೊಂಡು ಸರ್ಚಿಂಜಿನ್ನಿನಲ್ಲಿ ಹುಡುಕಾಟ ನಡೆಸಬಹುದಿತ್ತು.

ಆದರೆ ದಣಿವಾಗುತ್ತದೆ. ದೇಹಕ್ಕಲ್ಲ. ದೈನಿಕಕ್ಕೆ. ಬರೆದು, ಮಾತನಾಡಿ, ಮಾತನಾಡಿಸಿ, ಓದಿ ಓದುವಂತೆ ಬರೆಯುವುದಕ್ಕೆ ಸಿದ್ಧತೆ ಮಾಡಿಕೊಂಡು ಚೈತನ್ಯವೇ ನಿಶ್ಚೇಷ್ಟಿತವಾಗುತ್ತದೆ. ಯಾರು ಏನಾದರೇನಂತೆ ಎಂಬ ‘ಒಣಬೇಸರ’ ನಮ್ಮನ್ನು ಆಳತೊಡಗುತ್ತದೆ. ಇಂಥದ್ದೊಂದು ವಿಚ್ಛಿನ್ನ ಘಳಿಗೆಯನ್ನು ದಾಟುವುದು ಎಂಥವರಿಗೂ ಕಷ್ಟವೇ.

ಅವರನ್ನು ಅಪೂರ್ವ ಪ್ರತಿಭಾವಂತರು ದಾಟುತ್ತಾರೆ. ಅತೀ ದಡ್ಡರು ದಾಟುತ್ತಾರೆ. ಪ್ರತಿಭಾವಂತರು ತಮ್ಮ ನಿರ್ಮೋಹದಿಂದ ದಾಟಿದರೆ ದಡ್ಡರು ನಿರ್ಯೋಚನೆಯಿಂದ ದಾಟುತ್ತಾರೆ. ಪ್ರತಿಭೆಯುಳ್ಳವ ನವ ನವೋನ್ಮೇಷ ಶಾಲಿಯಾಗಿರುತ್ತಾನೆ. ಅ-ಪ್ರತಿಭನಿಗೆ ಎಲ್ಲವೂ ನವನವೀನವೇ !

ಆದರೆ ಬೇಸರವನ್ನು ಕ್ರಿಯಾಶೀಲತೆಯ ಮೂಲಕ ಕೂಡ ಮತ್ತು ಕ್ರಿಯಾಶೀಲತೆಯ ಮೂಲಕ ಮಾತ್ರ ದಾಟಬಹುದು ಎಂದು ತೋರಿಸಿಕೊಟ್ಟವರು ಎ.ಎಸ್‌. ಮೂರ್ತಿ. ಅವರು ನಿಷ್ಕಿೃಯರಾಗಿ ಕುಳಿತದ್ದನ್ನು ಕಂಡವರೇ ಇಲ್ಲ. ಅವರ ಪಾಲಿಗೆ ಸುಮ್ಮನೇ ಓದುವುದು ಕೂಡ ನಿಷ್ಕಿೃಯತೆಯೇ. ಹಾಗಾಗಿಯೇ ಓದುತ್ತಿರುವಾಗಲೇ ಒಂದು ‘ಪ್ರತಿ-ಓದು’ ಅವರ ಮನಸ್ಸಿನೊಳಗೆ ರೂಪುಗೊಳ್ಳುತ್ತಾ ಹೋಗುತ್ತದೇನೋ ಎಂಬಂತೆ ಅವರು ಓದುತ್ತಾರೆ. ಓದಿದ್ದು ಬರಹವಾಗಿ ಮೂಡುತ್ತದೆ. ಪ್ರಸಂಗವಾಗುತ್ತದೆ, ಪ್ರಹಸನವಾಗುತ್ತದೆ, ನಾಟಕವಾಗುತ್ತದೆ. ಟೀಕೆಯಾಗುತ್ತದೆ. ಟೀಕಾಸ್ತ್ರವಾಗುತ್ತದೆ.

-2-

ಒಂದು ವಿಶಿಷ್ಟವಾದ ವ್ಯಂಗ್ಯ ಮೂರ್ತಿಯವರಿಗೆ ಸಿದ್ಧಿಸಿದೆ. ಅದು Irony ಅಲ್ಲ , ಹಾಸ್ಯವೂ ಅಲ್ಲ. ಗೇಲಿ ಮಾಡುವ ಕ್ಷಣಿಕ ಆಸಕ್ತಿಯೂ ಅಲ್ಲ. ಬೇಕಿದ್ದರೆ ಗಮನಿಸಿ ನೋಡಿ. ಎ. ಎಸ್‌. ಮೂರ್ತಿಯವರ ಓರಗೆಯ ನಾಟಕಕಾರರಿಗೆ, ಬರಹಗಾರರಿಗೆ ಒಂದು ಸಾಮಾಜಿಕ ಕಳಕಳಿಯಿತ್ತು. ಬರಹದ ಮೂಲಕ ಸಮಾಜವನ್ನು ತಿದ್ದಬಲ್ಲೆ ಅನ್ನುವ ನಂಬಿಕೆ ಇತ್ತು.

ಆ ನಂಬಿಕೆಯನ್ನು ಇವತ್ತಿನ ವಿದ್ಯಮಾನಗಳು ಸುಳ್ಳು ಮಾಡಿರಬಹುದು. ಆದರೆ ಪ್ರಗತಿಶೀಲ ಮನಸ್ಸಿನೊಳಗೊಂದು ರೀತಿಯ ಚಿಕಿತ್ಸಕ ಮನಸ್ಸೂ ಕೆಲಸ ಮಾಡುತ್ತಿತ್ತು. ಅದಕ್ಕೆ ಸಾಕ್ಷಿ ಮೂರ್ತಿಯವರ ನಾಟಕಗಳು. ಅಲ್ಲಿ ಕಾಣುವ ತಮಾಷೆ. ಅದಕ್ಕೆ ಈಡಾದವನನ್ನೂ ನಗಿಸುತ್ತದೆ. ಗುರಿಯಾದವನನ್ನೂ ರಂಜಿಸುತ್ತದೆ. ಮೂರ್ತಿಯವರು ಮೆಚ್ಚಿಕೊಳ್ಳುತ್ತಲೇ ಚುಚ್ಚುಮದ್ದು ನೀಡಬಲ್ಲರು.

ನೋಡಿ- ನೀವು ಯಾರ ಮೇಲಾದರೂ ರೇಗಾಡಿದರೆ ಅವರು ಮತ್ತಷ್ಟು ಹಠಮಾರಿಯಾಗುತ್ತಾರೆ. ಗೇಲಿ ಮಾಡಿದರೆ ಕೀಳರಿಮೆ ಬೆಳೆಸಿಕೊಳ್ಳುತ್ತಾರೆ. ವ್ಯಕ್ತಿಗೆ ಹೊಂದಿಕೆಯಾಗುವ ಈ ಸತ್ಯ ಸಮಾಜಕ್ಕೂ ಹೊಂದಿಕೆಯಾಗುತ್ತದೆ. ಒತ್ತಾಯದಿಂದಾಗಲೀ, ಗೇಲಿ ಮಾಡಿ ನೋಯಿಸುವುದರಿಂದಾಗಲೀ ನಾವು ಯಾವುದರಿಂದಲೂ ಪಾರಾಗಲಾರೆವು. ಹೀಗಾಗಿಯೇ ಮೂರ್ತಿಯವರು ನಗಿಸಿ ಕಣ್ತೆರೆಸುವ ವಿಧಾನವನ್ನು ಕಂಡುಕೊಂಡಿರಬೇಕು. ನಗೆಯ ಕಡಲೊಳು ತೇಲಿ ಬರುತಲಿದೆ ಮತ್ತೊಂದು ಬಗೆಯ ಹಾಯಿ ದೋಣಿ ! ಸಾಕ್ಷಿ - ಅವರ ನಾಟಕಗಳೇ.

ಮೂರ್ತಿಯವರ ಬಹುತೇಕ ನಾಟಕಗಳನ್ನು ನಾನು ಓದಿದ್ದೇನೆ. ಪ್ರತಿಯಾಂದು ನಾಟಕದಲ್ಲೂ ಒಂದು ಸಂದೇಶ ಇರುತ್ತದೆ. ನವ್ಯದಿಂದ ಪ್ರೇರಣೆ ಪಡೆದ ನಮ್ಮಂಥವರಿಗೆ ನಾಟಕ ಸಂದೇಶವಾಹಕವಾಗಕೂಡದು ಎಂದು ಅನೇಕ ಸಲ ಅನ್ನಿಸಿದ್ದುಂಟು. ಆದರೆ ಮೂರ್ತಿಯವರ ನಾಟಕ ನೀಡುವ ಸಂದೇಶದಿಂದ ಪ್ರಭಾವಿತರಾದವರನ್ನೂ ನೋಡಿದ್ದೇನೆ. ನಾಟಕಗಳ ಮೂಲಕ ಅವರು ಘಟನೆಗಳಿಗೆ ಪ್ರತಿಕ್ರಿಯಿಸುವುದನ್ನು ನೋಡಿದ್ದೇನೆ. ‘ಓ ನನ್ನ ಜನರೇ’ ನಾಟಕವನ್ನು ಅವರು ಬರೆದದ್ದು ಎಪ್ಪತ್ತರ ಸುಮಾರಿಗೆ. ಅದನ್ನು ಮೊನ್ನೆ ಮೊನ್ನೆ ಪ್ರದರ್ಶಿಸಿದಾಗ ಸಿಕ್ಕ ಪ್ರತಿಕ್ರಿಯೆ ಬೆರಗಾಗಿಸುವಂತಿತ್ತು. ನಾಟಕದ ಮೂಲಕ ಎ. ಎಸ್‌. ಮೂರ್ತಿ ಜಗತ್ತನ್ನು ನೋಡುತ್ತಾರೆ. ಜಗತ್ತು ಅವರನ್ನೂ ನಾಟಕದ ಮೂಲಕವೇ ನೋಡುತ್ತದೆ. ಹೀಗಾಗಿ ಎ. ಎಸ್‌. ಮೂರ್ತಿ ಮತ್ತು ಸಮಾಜದ ನಡುವಿನ ಸೇತುವೆಯಾಗಿ ಅವರ ನಾಟಕಗಳೂ ಬರಹಗಳೂ ಮುಖ್ಯವಾಗುತ್ತವೆ.

-3-

ಪ್ರತಿಯಾಬ್ಬರೂ ಒಂದೊಂದು ವಿಧಾನದ ಮೂಲಕ ಪ್ರತಿಭಟಿಸುತ್ತಾರೆ. ಪ್ರತಿಕ್ರಿಯಿಸುತ್ತಾರೆ. ಎ. ಎಸ್‌. ಮೂರ್ತಿ ಟೀಕಾಸ್ತ್ರದ ಮೂಲಕ ಆ ಕೆಲಸ ಮಾಡುತ್ತಿದ್ದಾರೆ. ಹಾಗಂತ ಟೀಕಾಸ್ತ್ರವನ್ನು ಅಸ್ತ್ರ ಎಂದು ಕರೆಯುವುದು ಅಷ್ಟು ಸರಿಯಲ್ಲ. ಅಸ್ತ್ರದ ಉದ್ದೇಶ ಒಂದೋ ಆತ್ಮರಕ್ಷಣೆ ಅಥವಾ ಹಲ್ಲೆ. ಟೀಕೆಗೂ ಇವತ್ತು ಹೆಚ್ಚು ಕಡಿಮೆ ಅದೇ ಅರ್ಥ. ಆದರೆ ಟೀಕಾಸ್ತ್ರದ ಉದ್ದೇಶ ಅದಲ್ಲ. ಅದು ತುಂಬ ನವಿರಾಗಿ, ನಾಜೂಕಾಗಿ, ಉದಾಹರಣೆಗಳ ಮೂಲಕ ಒಂದು ಪ್ರಸಂಗದ ಔಚಿತ್ಯವನ್ನು ನೋಡುವ ಕ್ರಮ. ಟೀಕಾಸ್ತ್ರ ಯಾವತ್ತೂ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವಾದದ್ದನ್ನು ನಾನಂತೂ ಕಂಡಿಲ್ಲ. ಆದರೆ ಸಿಂಹ ಸ್ವಪ್ನರಾಗಿ ಓಡಾಡಿಕೊಂಡಿದ್ದವರು ಟೀಕಾಸ್ತ್ರದಿಂದ ತಬ್ಬಿಬ್ಬಾದದ್ದನ್ನು ಕಂಡಿದ್ದೇನೆ.

ಎ.ಎಸ್‌.ಮೂರ್ತಿಯವರ ಶಕ್ತಿಯೇ ಅದು. ಅವರು ಏಕಕಾಲಕ್ಕೆ ವೈಯಕ್ತಿಕ ಮತ್ತು ಸಾರ್ವತ್ರಿಕವಾಗುವಂತೆ ಬರೆಯಬಲ್ಲರು. ಅವರ ಟೀಕಾಸ್ತ್ರವನ್ನು ಓದುತ್ತಿದ್ದಾಗ ಕೆಲವು ಕುಂಬಳಕಾಯಿ ಕಳ್ಳರಿಗೆ ಇದು ತನ್ನನ್ನೇ ಕುರಿತದ್ದು ಅನ್ನಿಸುತ್ತದೆ. ಉಳಿದವರಿಗೆ ಲೋಕದ ಮಾತು ಅನ್ನಿಸುತ್ತದೆ. ಉದಾಹರಣೆಗೆ ರಿಮೇಕ್‌ ಬಗ್ಗೆ ಬರೆದಾಗ ಆ ವಾರ ರಿಮೇಕ್‌ ಚಿತ್ರ ಮಾಡಿದವರ ಮೂರ್ತಿ ಭಂಜನೆ. ಉಳಿದವರಿಗೆ ಮನರಂಜನೆ.

ಎ.ಎಸ್‌.ಮೂರ್ತಿಯವರ ಬರಹಕ್ಕಿರುವ ಶಕ್ತಿಯೆಂದರೆ ಅದರ ಸರಳತೆ. ಅಮೂರ್ತ ಸಂಗತಿಗಳನ್ನು ಅವರು ಮೂರ್ತವಾಗಿಸುತ್ತಾರೆ ಅನ್ನುವ ಕಾರಣಕ್ಕೂ ಅವರು ಮೂರ್ತಿ. ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಹತ್ತಿರದಿಂದ ಬಲ್ಲ, ಎಲ್ಲ ಪ್ರಕಾರಗಳನ್ನೂ ಸ್ಪರ್ಶಿಸಿದ, ಎಲ್ಲ ಪ್ರಕಾರದಲ್ಲೂ ಸರಿ ಸಮಾನವಾಗಿ ಮಿತ್ರರನ್ನು ಪಡೆದಿರುವ ಮೂರ್ತಿಯವರು ಆ ಕಾರಣದಿಂದಾಗಿಯೇ ಒಂದು ರೀತಿಯಲ್ಲಿ ಮಲ್ಟಿಮೀಡಿಯಾ. ಏಕ ಕಾಲಕ್ಕೆ ಅಂತರಂಗ ಮತ್ತು ಬಹಿರಂಗಕ್ಕೆ ದಕ್ಕುತ್ತಾರೆ ಅವರು. ಅದು ಅಪರೂಪದ ಗುಣ.

ಆದರೆ ಅವರೆಂದೂ ಲೇಖಕನಾಗಿ ನಾಟಕಕಾರನಾಗಿ ಅಮರತ್ವಕ್ಕೆ ಆಶೆಪಟ್ಟವರಲ್ಲ. ಸಾಹಿತ್ಯ ಜಗತ್ತಿನಲ್ಲೋ ರಂಗಭೂಮಿಯಲ್ಲೋ ಅಮರರಾಗುವ ವ್ಯಾಮೋಹವುಳ್ಳವರು ತಕ್ಷಣಕ್ಕೆ ಸ್ಪಂದಿಸುವುದಿಲ್ಲ. ತಮ್ಮ ಅನಿಸಿಕೆಗಳೆಲ್ಲ ಕೆನೆಗಟ್ಟಬೇಕು ಅಂದುಕೊಳ್ಳುತ್ತಾರೆ. ಅದಕ್ಕಾಗಿ ಕಾಯುತ್ತಾರೆ. ವರ್ಷಕ್ಕೊಂದು, ಐದು ವರ್ಷಕ್ಕೊಂದು, ಹತ್ತು ವರ್ಷಕ್ಕೊಂದು ನಾಟಕ ಬರೆಯುತ್ತಾರೆ. ಉಳಿದ ಕಾಲವನ್ನು ಲಂಡನ್ನಿನಲ್ಲೋ ಅಮೆರಿಕಾದಲ್ಲೋ ಕಳೆಯುತ್ತಾರೆ. ಗಿರೀಶ್‌ ಕಾರ್ನಾಡರಂಥವರು ನಾಟಕ ಬರೆಯುತ್ತಾರೆ ನಿಜ. ಆದರೆ ಹೊಸ ಹುಡುಗನೊಬ್ಬ ತಂದುಕೊಟ್ಟ ನಾಟಕವನ್ನು ಓದುವ ವ್ಯವಧಾನವನ್ನೂ ತೋರುವುದಿಲ್ಲ. ರಂಗಭೂಮಿ ಒಂದು ಚಳವಳಿ ಅನ್ನುವುದಾದರೆ ಅದರ ಭಾಗವಾಗುವುದಿಲ್ಲ.

ಇವೆಲ್ಲ ಎ.ಎಸ್‌.ಮೂರ್ತಿಯವರ ಬಗ್ಗೆ ಯೋಚಿಸಿದಾಗ ಹೊಳೆಯುತ್ತಾ ಹೋಯಿತು. ವರುಷಕ್ಕೆ ಹತ್ತು ಪ್ರತಿಭೆಗಳನ್ನು ತಿದ್ದಿ ತೀಡುವುದು ಅವರ ಅಭಿನಯ ಶಾಲೆಯಿಂದ ಆಗುತ್ತಿದೆ. ಸಾಕಷ್ಟು ನಾಟಕಗಳನ್ನು ಅವರೇ ಆಡುತ್ತಿದ್ದಾರೆ. ಅವರ ಮನೆಯೇ ಒಂದು ಪ್ರತಿಭಾಲಯ. ಇಡೀ ಕುಟುಂಬವೇ ಕಲೆಯನ್ನು ಒಪ್ಪಿಕೊಂಡು ನೆಚ್ಚಿಕೊಂಡು ನಡೆದಿದೆ.

ಇದಕ್ಕೆ ಸ್ಫೂರ್ತಿಯಾಗಿರುವವರು ಎ.ಎಸ್‌. ಮೂರ್ತಿ. ಹೀಗೆ ವಿಸ್ತಾರವಾಗಿರುವ ಅವರನ್ನು ಒಂದು ಪ್ರಕಾರದ ಬಗ್ಗೆ ಬರೆಯುವ ಮೂಲಕ ಕಟ್ಟಿಕೊಡುತ್ತೇನೆ ಅನ್ನುವುದು ಕಷ್ಟ ಮತ್ತು ಮೂಢನಂಬಿಕೆ. ಹೀಗಾಗಿ ಅವರ ಒಟ್ಟು ಕ್ರಿಯಾಶೀಲತೆಯನ್ನು ಧ್ಯಾನಿಸುವುದಕ್ಕೆ, ಕಂಡುಕೊಳ್ಳುವುದಕ್ಕೆ ಮತ್ತು ಅವರನ್ನು ಮತ್ತಷ್ಟು ಪ್ರೀತಿಸುವುದಕ್ಕೆ ಇದೊಂದು ಅವಕಾಶ ಮಾತ್ರ.

ಗಾಢವಾದದ್ದನ್ನಷ್ಟೇ ಬರೆಯಿರಿ ಅಂತ ನಮಗೆ, ಪತ್ರಕರ್ತರಿಗೆ ಸಲಹೆ ಕೊಡುವವರಿದ್ದಾರೆ. ಯಶವಂತ ಚಿತ್ತಾಲರಂಥವರು ಪತ್ರಿಕೆಗೆ ಅಂಕಣ ಬರೆಯಿರಿ ಅಂತ ಕೇಳಿಕೊಂಡರೆ ಪತ್ರಿಕೆಯ ಪ್ರಸಾರ ಏನೇನೂ ಸಾಲದು ಎಂದು ಜಾರಿ ಕೊಳ್ಳುತ್ತಾರೆ. ಪತ್ರಿಕೆಯಲ್ಲಿ ಒಂದು ಕತೆಯೋ ಕಾದಂಬರಿಯೋ ಅಂಕಣವೋ ಪ್ರಕಟವಾದರೆ ಅದು ಕನಿಷ್ಠ ಐವತ್ತು ಸಾವಿರ ಜನರನ್ನಾದರೂ ನಿಯಮಿತವಾಗಿ ತಲುಪುತ್ತದೆ ಅನ್ನುವ ಸರಳ ಸತ್ಯ ಅವರಿಗೆ ಹೊಳೆಯುವುದಿಲ್ಲ. ಹಾಗೇ ಚಿತ್ತಾಲರ ಪುರುಷೋತ್ತಮ ಕಾದಂಬರಿಯ ಸಾವಿರ ಪ್ರತಿಗಳು ಖರ್ಚಾಗುವುದಕ್ಕೆ ಐದು ವರ್ಷ ಬೇಕಾಗುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ. ಅವರಿಗೆ ಪುಸ್ತಕಗಳಲ್ಲಿ ಅಮರರಾಗುವ ಆಸೆ.

ಹೀಗೆ ಶಾಶ್ವತವಾಗುವ ಭ್ರಮೆಯಲ್ಲಿ ನೀಗಿಕೊಳ್ಳುವ ವ್ಯಾಮೋಹ ಪತ್ರಕರ್ತರಿಗೆ ಇರುವುದಿಲ್ಲ. ಮೂರ್ತಿಯವರು ಪತ್ರಕರ್ತ ಕೂಡ. ಹೀಗಾಗಿ ಅವರು ‘ಸದ್ಯ’ ದ ಲಹರಿಗಳಲ್ಲಿ ಬದುಕುತ್ತಾರೆ. ಯಾವುದೇ ಆಗಲೀ ಕ್ರಮೇಣ ಸ್ಟೇಲ್‌ ಆಗುತ್ತದೆ ಅನ್ನುವುದು ಅವರಿಗೆ ಗೊತ್ತು.

ಆದ್ದರಿಂದಲೇ ಅವರು ಸದಾ ‘ಕಂಟೆಂಪರರಿ’. ನಮ್ಮ ಅನೇಕ ಸಾಹಿತಿಗಳಂತೆ ‘ಟೆಂಪರರಿ’ ಅಲ್ಲ.

(‘ಮೂರ್ತಾಮೂರ್ತ’ ಗೌರವ ಗ್ರಂಥದಲ್ಲಿ ಪ್ರಕಟಿತ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X