• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರು ಏನು ಬರೆಯುತ್ತಿದ್ದಾರೆ ?

By Super
|

ಇದು ಪುಸ್ತಕ ಪ್ರಸವದ ಪುಲಕ- ನಿರೀಕ್ಷೆ- ಸಿದ್ಧತೆಗಳ ಸುದ್ದಿಗುಚ್ಛ. ಅಕ್ಷರಕೋಣೆಯ- ಅಚ್ಚಿನ ಮನೆಯ ಇಣುಕು ನೋಟ. ಕನ್ನಡ ಸಾರಸ್ವತ ಲೋಕದ ಚಟುವಟಿಕೆಗಳ ಒಂದು ಟಿಪ್ಪಣಿಯೂ ಹೌದೇನೋ...

ಅನಂತಮೂರ್ತಿ ಏನು ಮಾಡುತ್ತಿದ್ದಾರೆ ? ಭೈರಪ್ಪನವರು ಬರೆಯುತ್ತಿರುವ ಹೊಸ ಕಾದಂಬರಿ ಹೆಸರೇನು ? ತೇಜಸ್ವಿಗೆ ಕಾಡಿನ ನಡುವೆ ಮತ್ತೆ ಕಥೆ ಸಿಕ್ಕಿತಾ ? ಅಕ್ಷರಪ್ರೇಮಿಗಳ ಇಂಥ ಪ್ರಶ್ನೆಗಳು ಕುತೂಹಲಕರವಾದರೂ, ಉತ್ತರ ದೊರಕುವುದು ಕಷ್ಟ .

ಪುಸ್ತಕ ಬಿಡುಗಡೆಯಾದ ವಿಷಯ, ಮಾರುಕಟ್ಟೆಗೆ ಬಂದ ವಿಷಯ ತಿಳಿಯುವುದು ಕಷ್ಟವಾಗಿರುವ ಸಂದರ್ಭದಲ್ಲಿ ಸಾಹಿತ್ಯ ಲೋಕದ ಅಪ್ರಕಟಿತ ಸಾಹಿತ್ಯದ ಬಗೆಗಿನ ಮಾಹಿತಿ ದೊರಕುವುದು ಅಷ್ಟು ಸುಲಭವಲ್ಲ . ಹಿಂದೊಂದು ಕಾಲವಿತ್ತು . ತಾವು ಬರೆಯುತ್ತಿರುವ, ಬರೆಯಬೇಕೆಂದುಕೊಂಡಿರುವ ಬರಹದ ಬಗ್ಗೆ ಲೇಖಕರು ಓರಗೆಯ ಲೇಖಕರೊಂದಿಗೆ ವಿಷಯ-ವಿಚಾರ ವಿನಿಮಯ ನಡೆಸುತ್ತಿದ್ದರು. ಚರ್ಚಿಸುತ್ತಿದ್ದರು. ಅದೆಲ್ಲಾ ಒಂದಾನೊಂದು ಕಾಲದ ಕಥೆ. ಬರಹಗಾರರೆಲ್ಲ ದ್ವೀಪಗಳಾಗುತ್ತಿರುವ ಈ ಹೊತ್ತು - ಯಾರು ಏನು ಬರೆಯುತ್ತಿದ್ದಾರೊ ಯಾರಿಗೆ ಗೊತ್ತು ? ಗೊತ್ತು ಮಾಡಿಕೊಳ್ಳುವ ಪುರುಸೊತ್ತು , ಪುರುಸೊತ್ತು ಮಾಡಿಕೊಂಡು ಹೇಳುವ ಕೇಳುವ ಸಾವಧಾನ ಯಾರಿಗಿದೆ ? ಆ ವ್ಯವಧಾನ ನಿಮಗಿರುವುದಾದರೆ, ಇದೋ ಇಲ್ಲಿದೆ- ಅಕ್ಷರಕೋಣೆಯ, ಅಚ್ಚಿನ ಮನೆಯ ಚೂರುಪಾರು ಸುದ್ದಿ .

ಇಗೋ ಕನ್ನಡ'ದ ಪ್ರೊ.ಜಿ. ವೆಂಕಟಸುಬ್ಬಯ್ಯನವರಿಗೆ ತಮ್ಮ ಅಪ್ರಕಟಿತ ಲೇಖನಗಳನ್ನೆಲ್ಲಾ ಕಲೆಹಾಕಿ ಪುಸ್ತಕ ರೂಪದಿ ಪ್ರಕಟಿಸುವ ಆಸೆ. ಯಾವುದ್ಯಾವುದೊ ಸಂದರ್ಭದಲ್ಲಿ ಪತ್ರಿಕೆಗಳಿಗೆ, ವಿಶೇಷ ಸಂಚಿಕೆ- ನಿಯತಕಾಲಿಕೆಗಳಿಗೆ ಬರೆದ ಬಿಡಿ ಬಿಡಿ ಲೇಖನಗಳನ್ನು ವೆಂಕಟಸುಬ್ಬಯ್ಯ ಒಟ್ಟು ಮಾಡುತ್ತಿದ್ದಾರೆ. ಯಾವ ಯಾವ ಮೂಲೆಯಲ್ಲಿಯೋ ಹುದುಗಿಹೋದ ಲೇಖನಗಳ ಧೂಳು ಕೊಡವುತ್ತಿರುವ ವೆಂಕಟಸುಬ್ಬಯ್ಯನವರಿಗೀಗ ಕೈತುಂಬಾ ಕೆಲಸ; ಅವರಿಗೆ ಪುರುಸೊತ್ತೆಂಬುದಿಲ್ಲ . ಪುಸ್ತಕ ಯಾವಾಗ ಪ್ರಕಟವಾಗುತ್ತದೆನ್ನುವುದು ಗೊತ್ತಿಲ್ಲ . ಆದರೆ, ಪ್ರಕಟವಾಗುವ ಪುಸ್ತಕ ಮಾತ್ರ ಅಕ್ಷರಪ್ರಿಯರಿಗೆ ಆಸ್ತಿಯಾಗುವುದರಲ್ಲಿ ಸಂದೇಹವಿಲ್ಲ . ವೆಂಕಟಸುಬ್ಬಯ್ಯನವರೆಂದರೆ ತಮಾಷೆಯಾ- ಪದಸಂಪತ್ತು , ವಿದ್ವತ್ತು , ಅನುಭವದಲ್ಲಿ ಅವರಿಗೆ ಸಾಟಿಯಾಗುವ ಹಿರೀಕರು ಎಷ್ಟು ಮಂದಿಯಿದ್ದಾರು ? ನೆನಪಿಸಿಕೊಳ್ಳೋಣವೆಂದರೆ... ಒಂದು.. ಎರಡು.. ಮುಂದೆ ಹೆಸರುಗಳೇ ಹೊಳೆಯುತ್ತಿಲ್ಲವಲ್ಲ !

ಅಧ್ಯಯನಗಳನ್ನು ನಡೆಸಿಯೇ ಬೃಹತ್‌ ಕಾದಂಬರಿಗಳನ್ನು ಬರೆಯುವ ಡಾ. ಎಸ್‌. ಎಲ್‌. ಭೈರಪ್ಪನವರ ಇತ್ತೀಚಿನ ಹೊಸ ಕಾದಂಬರಿ ‘ಮಂದ್ರ' ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಮಂದ್ರದ ನಂತರ ಮೌನವಾಗಿರುವ ಭೈರಪ್ಪನವರ ಲಹರಿಯಲ್ಲಿ ಮತ್ತೊಂದು ಹೊಸ ಕಾದಂಬರಿಯ ಬೀಜ ಇದೆ. ಭೈರಪ್ಪ ಹಿಂದೂಸ್ಥಾನಿ ಸಂಗೀತ ಕಲಿಯುತ್ತಿರುವಾಗಲೇ ‘ಮಂದ್ರ' ಕಾದಂಬರಿಯ ಸುಳಿವು ಓದುಗರಿಗೆ ದೊರಕಿತ್ತು. ಆದರೆ ಈ ಬಾರಿ ಭೈರಪ್ಪ ಗಪ್‌ಚುಪ್‌. ಅವರು ಹೊಸ ಕಾದಂಬರಿ ಬರೆಯುತ್ತಿರುವ ವಿಷಯ ತೀರಾ ಆಪ್ತ ವಲಯಗಳಿಗಷ್ಟೇ ಗೊತ್ತು.

ದೆಹಲಿ ಮುಂತಾದ ಕಡೆ ಭೈರಪ್ಪ ಈಗಾಗಲೇ ನಾಲ್ಕು ತಿಂಗಳ ಕಾಲದ ದೀರ್ಘ ಪ್ರವಾಸ ಮಾಡಿದ್ದಾರೆ. ಸುಮಾರು ಡಜನ್ನುಗಟ್ಟಲೆ ಪುಸ್ತಕಗಳನ್ನು ಕೊಂಡು ಮನೆಯಲ್ಲಿ ಗುಡ್ಡೆ ಹಾಕಿಕೊಂಡು ರಿಸರ್ಚ್‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಭೈರಪ್ಪನವರ ಅಭಿಮಾನಿಗಳೆಲ್ಲಾ ಹೊಸ ಕಾದಂಬರಿಯನ್ನ ನಿರೀಕ್ಷಿಸಬಹುದು.

ವಿವೇಕ್‌ ಶಾನುಭಾಗ್‌ ಗೊತ್ತಲ್ಲ . ‘ಹುಲಿ ಸವಾರಿ'ಯೆಂಬ ಒಳ್ಳೆಯ ಕಥೆಯನ್ನು ಬರೆದ ವಿವೇಕ್‌- ‘ಇನ್ನೂ ಒಂದು' ಕಾದಂಬರಿಯ ಮೂಲಕ ಕಾದಂಬರಿಕಾರರಾಗಿಯೂ ಹೆಸರು ಮಾಡಿದವರು. ವಿವೇಕ್‌ ಸದ್ಯಕ್ಕೆ ಏನು ಬರೆಯುತ್ತಿದ್ದಾರೆ?

ವಿವೇಕ್‌ ಹೊಸ ಕಾದಂಬರಿ ಬರೆದಿದ್ದಾರೆ. ಸದ್ಯಕ್ಕೆ ತಿದ್ದುವ ಪುಳಕ ಅನುಭವಿಸುತ್ತಿದ್ದಾರೆ. ಕಾದಂಬರಿ ಹೆಸರು ಅಂತಿಮವಾಗಿಲ್ಲ . ಗಾತ್ರದಲ್ಲಿ ‘ಇನ್ನೂ ಒಂದು' ಕಾದಂಬರಿಗಿಂತ ಹೊಸ ಕಾದಂಬರಿ ತುಸು ದೊಡ್ಡದು. ಪ್ರಕಟಣೆಯ ಕಷ್ಟಗಳನ್ನು ಬಲ್ಲ ವಿವೇಕ್‌ ಹೊಸ ಕಾದಂಬರಿಯ ಎರಡನೇ ಸುತ್ತಿನ ಸಂಕಲನ ಕಾರ್ಯದಲ್ಲಿ ವ್ಯಸ್ತರು. ದೀಪಾವಳಿ ಹತ್ತಿರ ಬರುತ್ತಿದೆ. ಪತ್ರಿಕೆಗಳು ದೀಪಾವಳಿ ವಿಶೇಷ ಸಂಚಿಕೆಗಾಗಿ ಕಥೆಗಳಿಗೆ ಎಡತಾಕುವುದು ಮಾಮೂಲು. ವಿವೇಕ್‌ ಕೂಡ ಕಥೆ ಬರೆಯುತ್ತಿದ್ದಾರೆ- ಪತ್ರಿಕೆಯಾಂದರ ದೀಪಾವಳಿ ವಿಶೇಷ ಸಂಚಿಕೆಗಾಗಿ. ಯಾವ ಪತ್ರಿಕೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್‌ !

ಅಂದಹಾಗೆ, ವಿದೇಶ ವಾಸ ಮುಗಿಸಿ ತವರಿಗೆ ಮರಳಿರುವ ವಿವೇಕ್‌ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ರಿಚ್‌ಮಂಡ್‌ ಟೌನ್‌ನಲ್ಲಿ ಮನೆ. ಪತ್ರಿಕೆ- ನಿಯತಕಾಲಿಕೆಗಳಲ್ಲಿ ಬರುವ ಕಥೆಗಳನ್ನು ಗಮನಿಸುವಿರಾದರೆ ಕಥೆಗಾರ್ತಿ ಸುಮಂಗಲಾ ಗೊತ್ತೇ ಇರಬೇಕು. ವಿಜಯಕರ್ನಾಟಕ ಯುಗಾದಿ ಕಥಾಸ್ಪರ್ಧೆ-2002ರಲ್ಲಿ ಮೊದಲನೇ ಬಹುಮಾನ ಪಡೆದಿದ್ದ ಸುಮಂಗಲಾ ಈಗಾಗಲೇ ಒಂದು ಸಂಕಲನ ಪ್ರಕಟಿಸಿದ್ದಾರೆ. (ಆ ಸಂಕಲನದ ಹೆಸರು ‘ಸೀತಾಳೆ ಹೂ ಮತ್ತು ಇತರ ಕಥೆಗಳು' ಎಂದಿರಬೇಕು?) ಎರಡನೇ ಸಂಕಲನಕ್ಕಾಗಿ ಮಿಕ್ಕುವಷ್ಟು ಕಥೆಗಳೂ ಅವರ ಬಳಿ ಸಿದ್ಧವಾಗಿವೆ.

ಕಥಾ ಸಂಕಲನ ಪ್ರಕಟಿಸುವ ಯೋಚನೆ ಸುಮಂಗಲಾ ಅವರ ಮನಸ್ಸಿನಲ್ಲಿ ಸುಳಿಯುತ್ತಿದೆ. ಆದರೆ ಆ ಯೋಚನೆಯ ಎಳೆ ಇನ್ನೂ ಗಟ್ಟಿಯಾಗಿಲ್ಲ . ಅಂದಹಾಗೆ, ಮುಂಬಯಿಯ ‘ಗುರುತು' ನಿಯತಕಾಲಿಕದ ಕಥಾಸ್ಪರ್ಧೆ-2003ರಲ್ಲಿ ಸುಮಂಗಲಾ ಅವರ ‘ಬೆಳದಿಂಗಳಿನಲಿ ಹುಡುಕಿದ ಹಾಡು' ಕಥೆ ಮೊದಲ ಬಹುಮಾನ ಪಡೆದಿದೆ. ಅವರಿಗೆ ದಟ್ಸ್‌ ಕನ್ನಡದ ಅಭಿನಂದನೆಗಳು. ಕಥೆಗಾರ ವಸುಧೇಂದ್ರ ಕೂಡ ಕಥಾ ಸಂಕಲನ ತರುವ ಯೋಚನೆಯಲ್ಲಿದ್ದಾರೆ. ಅವರ ‘ಮನೀಷೆ' ಕಥಾ ಸಂಕಲನ ಓದುಗರ- ವಿಮರ್ಶಕರ ಮೆಚ್ಚುಗೆ ಪಡೆದಿತ್ತು . ಆನಂತರ ವಸುಧೇಂದ್ರ ಸಾಕಷ್ಟು ಕಥೆ ಬರೆದಿದ್ದಾರೆ, ಬಹುಮಾನ ಪಡೆದಿದ್ದಾರೆ. ಇನ್ನೇಕೆ ತಡ- ವಸುಧೇಂದ್ರ ಅವರ ಪುಸ್ತಕ ಪ್ರಕಟಣೆಯ ಯೋಚನೆ ಬೇಗ ಕಾರ್ಯರೂಪಕ್ಕೆ ಬರಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada literature : What Kannada literary figures are writing at present ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more