ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ‘ಗಾಂಧಿ’ಗೆ, ‘ಕಾರು’ವ ಹೊಗೆಯಾಂದಿಗೇ ಹಗೆ!

By Staff
|
Google Oneindia Kannada News

ಹೆಚ್ಚೂ-ಕಮ್ಮಿ ನಮ್ಮೂರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗುವ ವೇಳೆಗೆ ಪ್ರತಿ ವರ್ಷ ಅಮೆರಿಕದಲ್ಲಿ ‘ರಾಷ್ಟ್ರೀಯ ತಂತ್ರಜ್ಞಾನ ಪದಕ’ಗಳಿಗೆ ಕೊರಳೊಡ್ಡುವ ಮಹನೀಯರ ಪಟ್ಟಿಯೂ ಹೊರಬರುತ್ತದೆ. ಕಳೆದ ಹದಿನೆಂಟು ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷರಿಂದ ಈ ಸಮ್ಮಾನಕ್ಕೆ ಪಾತ್ರರಾದವರ ಸಂಖ್ಯೆ ಬಹುಶಃ ನೂರೈವತ್ತನ್ನು ದಾಟಿರಲಾರದು. ಈ ಪಟ್ಟಿಯಲ್ಲಿ ‘ಮೈಕ್ರೋಸಾಫ್ಟ್‌’ನ ಬಿಲ್‌ ಗೇಟ್ಸ್‌, ‘ಆ್ಯಪಲ್‌ ಕಂಪ್ಯೂಟರ್‌’ ಸ್ಥಾಪಕ ಜೋಡಿ ಸ್ಟೀವನ್‌ ಜೋಬ್ಸ್‌-ಸ್ಟೀಫನ್‌ ವೊರಿkು್ನಯಾಕ್‌, ‘ಛಾಯಾಗ್ರಹಣ ನಡೆಸಿದಂತೆ ಚಿತ್ರ ಮುದ್ರಣವಾಗುವ ದಿಢೀರ್‌ ತಂತ್ರಜ್ಞಾನ’ದ ಸಂಶೋಧಕ ಎಡ್ವಿನ್‌ ಲ್ಯಾಂಡ್‌, ಹೃದಯ ಕಾಯಿಲೆಗಳಿಂದ ನರಳುವವರನ್ನು ಉಳಿಸುವ ‘ಕಾರ್ಡಿಯಾಕ್‌ ಪೇಸ್‌ಮೇಕರ್‌’ ಆವಿಷ್ಕರಿಸಿದ ವಿಲ್ಸನ್‌ ಗ್ರೇಟ್‌ಬ್ಯಾಚ್‌ ...... ಮತ್ತಿತರರು ಸೇರಿದ್ದಾರೆ. ಮೊನ್ನೆ ಗುರುವಾರ (6ನೇ ನವೆಂಬರ್‌ 2003) ಸಂಜೆ ಅಮೆರಿಕದ ಅಧ್ಯಕ್ಷರು ಕಳೆದ ವರ್ಷದ ‘ರಾಷ್ಟ್ರೀಯ ತಂತ್ರಜ್ಞಾನ ಪದಕ’ ಪ್ರದಾನ ಮಾಡಿದ ಸಂದರ್ಭದಲ್ಲಿ ಜಗತ್ತಿನ ಆಟೋಮೊಬೈಲ್‌ ಎಂಜಿನಿಯರುಗಳೆಲ್ಲ ಸಂಭ್ರಮ ಪಟ್ಟರು. ಕಾರಣ, ಆಟೊಮೊಬೈಲ್‌ ಎಂಜಿನಿಯರೊಬ್ಬರಿಗೆ ಇದೇ ಮೊದಲ ಬಾರಿಗೆ ಈ ಪುರಸ್ಕಾರ ಸಂದಿದೆ. ಇಂಥದೊಂದು ಹೆಗ್ಗಳಿಕೆಗೆ ಪಾತ್ರರಾದವರು, ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಫೋರ್ಡ್‌ ಕಾರ್‌ ಕಂಪನಿಯ ವರಿಷ್ಠ ತಂತ್ರಜ್ಞ ಹರೇನ್‌ ಗಾಂಧಿ.

ಯಾರೀ ಹರೇನ್‌ ಗಾಂಧಿ?

Haren Gandhi1941 ರ ಮೇ 2ರಂದು ಕೋಲ್ಕತ್ತಾದಲ್ಲಿ ಜನಿಸಿದ ಹರೇನ್‌ ಶಾಲೆ ಕಲಿತದ್ದು ಮುಂಬೈನಲ್ಲಿ. ಮುಂಬೈ ವಿವಿಯಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದು (1963) ಉನ್ನತ ವ್ಯಾಸಂಗಕ್ಕಾಗಿ ಅವರು ಸೇರಿಕೊಂಡಿದ್ದು ಅಮೆರಿಕದ ಡೆಟ್ರಾಯಿಟ್‌ ವಿವಿಗೆ. ಆಟೋಮೊಬೈಲ್‌ ಉದ್ದಿಮೆಗಳ ತವರಿನಲ್ಲಿ ಮಾಸ್ಟರ್ಸ್‌ ಮತ್ತು ಡಾಕ್ಟರೇಟ್‌ ಪದವಿಗಳನ್ನು ಪಡೆದು, ಜಗತ್ಪ್ರಸಿದ್ಧ ಫೋರ್ಡ್‌ ಕಾರು ಕಂಪನಿಯ ಆಹ್ವಾನದ ಮೇರೆಗೆ ಸಂಶೋಧಕರಾಗಿ ಸೇರಿಕೊಂಡರು. ಆಟೋಮೊಬೈಲ್‌ ಕ್ಷೇತ್ರದ ತಂತ್ರಜ್ಞಾನಗಳನ್ನು ಕುತೂಹಲದಿಂದ ಗಮನಿಸುತ್ತಿರುವವರಿಗೆ ಹರೇನ್‌ ಅಪರಿಚಿತರಲ್ಲ. ಅದರಲ್ಲೂ ಪರಿಸರ ಮಾಲಿನ್ಯದ ಬಗ್ಗೆ ‘ನೆಟ್‌’ ಅರಸುವವರಿಗೆ ಈ ‘ಗಾಂಧಿ’ ಧುತ್ತೆಂದು ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಕಾರುಗಳು ಬುಸ್ಸೆಂದು ಹೊರದೂಡುವ ಹೊಗೆಯಲ್ಲಿ ಮಾಲಿನ್ಯದ ಅಂಶಗಳನ್ನು ಸಾಧ್ಯವಾದಷ್ಟೂ ಕಮ್ಮಿ ಮಾಡುವ ನೂರೆಂಟು ಯೋಜನೆಗಳಿಗೆ ಹರೇನರೇ ಹರಿಕಾರರು. ಈ ಬಗ್ಗೆ ಸುಮಾರು ನಲವತ್ತು ‘ಪೇಟೆಂಟ್‌’ಗಳು ಇವರ ಹೆಸರಿನಲ್ಲಿವೆ ಜೊತೆಗೆ ಎಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯ ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದಾರೆ.

ತನ್ನ ಒಡಲೊಳಗೆ ಇಂಧನವನ್ನು ದಹಿಸಿ, ಆ ಮೂಲಕ ಬಿಡುಗಡೆಯಾಗುವ ಶಕ್ತಿಯಿಂದ ವಾಹನಗಳನ್ನು ಚಲಿಸುವಂತೆ ಮಾಡುವ ಸಾಧನವೇ ‘ಅಂತರ್ದಹನ ಎಂಜಿನ್‌’. ಇಂಧನದೊಳಗಿರುವ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಕೆಲವೊಂದು ತಾಂತ್ರಿಕ ಮಿತಿಗಳಿವೆ. ಹೀಗಾಗಿ ಈ ಎಂಜಿನ್‌ಗಳ ಕಾರ್ಯ ದಕ್ಷತೆಯು, ವಿದ್ಯುತ್‌ ಎಂಜಿನ್‌ಗಳಷ್ಟಿರುವುದಿಲ್ಲ. ವಾಹನಗಳು ಚಲಿಸುವೆಡೆಯಲ್ಲೆಲ್ಲ ವಿದ್ಯುತ್ತನ್ನು ತಂತಿಯ ಮೂಲಕ ಪೂರೈಸುವುದು ಅಸಾಧ್ಯದ ಮಾತು. ಅಥವಾ ಇಡೀ ಪಯಣಕ್ಕೆ ಅಗತ್ಯವಿರುವಷ್ಟು ವಿದ್ಯುತ್ತನ್ನು ಕೋಶವೊಂದರೊಳಗೆ (ಬ್ಯಾಟರಿ) ಶೇಖರಿಸಿ ಕೊಂಡೊಯ್ಯುವುದು ತುಟ್ಟಿಯ ಬಾಬ್ತು. ಹೀಗಾಗಿ ರಸ್ತೆಗಳಲ್ಲಿ ಪೆಟ್ರೋಲ್‌ ಮತ್ತು ಡೀಸಲ್‌ ಬಳಸುವ ವಾಹನಗಳದೇ ಕಾರುಬಾರು. ‘ಬುಸ್ಸೆಂದು’ ಹೊಗೆ ಕಾರುವ ಡೀಸಲ್‌ ಬಸ್ಸು ಮತ್ತು ಕಾರುಗಳನ್ನು ನೀವು ಕಂಡಿರಬಹುದು. ಇಂಧನವು ಸಂಪೂರ್ಣವಾಗಿ ದಹನವಾಗದೆ ಹೊರಬರುವ ಈ ಹೊಗೆಯಲ್ಲಿ ಇಂಗಾಲ ಮತ್ತು ಸಾರಜನಕದ ‘ಆಕ್ಸೈಡ್‌’ಗಳಂತಹ ಅಪಾಯಕಾರಿ ಅನಿಲಗಳಿರುತ್ತವೆ. ಈ ಕಾರು, ಬಸ್ಸುಗಳು ಶಬ್ದ ಮಾಲಿನ್ಯಕ್ಕೂ ಕಾರಣವಾಗಿವೆ. ಕೆಲವೇ ರಾಷ್ಟ್ರಗಳ ಸೊತ್ತಾಗಿರುವ ಪೆಟ್ರೋಲಿಯಂ ಇಂಧನಗಳ ಬೆಲೆ ಹೆಚ್ಚುತ್ತಲೇ ಹೋಗುತ್ತಿದೆ.

ಮೂರು ದಶಕಗಳ ಹಿಂದೆಯೇ ಕಾರುಗಳು ಹೊರಗುಗುಳುವ ಹೊಗೆಯಲ್ಲಿ ಸೀಸದ ಅಂಶವನ್ನು ಪತ್ತೆ ಮಾಡಿ, ಅದರ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದರು. ಆದರೆ ಕಾರಿನ ಎಂಜಿನ್‌ಗಳ ಸುಗಮ ಚಾಲನೆಗೆ ಸೀಸ ಅವಶ್ಯಕತೆಯಾಗಿದ್ದ ಕಾರಣ ಇಂಧನದಲ್ಲೇ ಅದನ್ನು ಬೆರೆಸುವ ಪರಿಪಾಠ ಅಂದು ಚಾಲ್ತಿಯಲ್ಲಿತ್ತು. ಸೀಸ-ರಹಿತ ಇಂಧನ ಬಳಕೆಗೆ ಎಂಜಿನ್‌ ವಿನ್ಯಾಸವನ್ನೇ ಬದಲಿಸಬೇಕಿತ್ತು. ಹರೇನ್‌ ನೇತೃತ್ವದ ತಂಡವು ಈ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ, ಸೀಸ-ರಹಿತ ಇಂಧನವನ್ನು ಬಳಸಿಕೊಳ್ಳಲು ಅನುವಾಗುವಂತೆ ಎಂಜಿನ್‌ಗಳನ್ನು ರೂಪಿಸಿತು. ಎಂಜಿನ್‌ಗಳ ಇಡೀ ವಿನ್ಯಾಸವನ್ನು ಬದಲಿಸುವುದರ ಬದಲು ‘ಕೆಟಲಿಟಿಕ್‌ ಕನ್ವರ್ಟರ್‌’ ಎಂಬ ಪುಟ್ಟ ಸಾಧನವನ್ನು ಅಳವಡಿಸಿತು. ಇದರಿಂದ ಇಂಧನ ದಹನ ಕ್ರಿಯೆಯ ವೇಗ ವರ್ಧನೆಯಾಗುವುದರ ಜೊತೆಗೆ ಕಾರ್ಯಕ್ಷಮತೆಯೂ ಹೆಚ್ಚಿತು. ಜೊತೆಗೆ ಹೊಗೆಯಲ್ಲಿ ಅನಿವಾರ್ಯವಾಗಿ ಸೇರಿಕೊಳ್ಳುತ್ತಿದ್ದ ವಿಷವಸ್ತು ‘ಸೀಸ’ವನ್ನು ನಿರ್ಮೂಲ ಮಾಡಲು ಈ ಸಾಧನ ನೆರವಾಯಿತು.

ಹೀಗೆ ಆವಿಷ್ಕಾರಗೊಂಡ ‘ಕೆಟಲಿಟಿಕ್‌ ಕನ್ವರ್ಟರ್‌’ಗಳು ಬಹುಬೇಗನೆ ಜನಪ್ರಿಯತೆ ಗಳಿಸಿಕೊಂಡರೂ, ಕಾರುಗಳ ಬೆಲೆ ಹೆಚ್ಚಾಗುವಂತೆ ಮಾಡಿದವು. ಅರೆಬರೆ ದಹನವಾದ ಇಂಧನವು ಪೂರ್ತಿಯಾಗಿ ದಹನವಾಗಲು ಈ ಕನ್ವರ್ಟರ್‌ಗಳಲ್ಲಿ ‘ಪ್ಲಾಟಿನಮ್‌’ ಅಥವಾ ‘ರೋಡಿಯಮ್‌’ ಲೋಹಗಳನ್ನು ಬಳಸಲಾಗುತ್ತಿತ್ತು. ಈ ದುಬಾರಿ ಲೋಹಗಳ ಬದಲು ಮತ್ಯಾವುದಾದರೂ ಅಗ್ಗದ ಲೋಹಗಳನ್ನು ಬಳಸಿಕೊಳ್ಳಲು ಸಾಧ್ಯವೆ? ಎಂದು ಹರೇನ್‌ ಚಿಂತಿಸತೊಡಗಿದರು. ಪಲ್ಲೇಡಿಯಮ್‌ ಎಂಬ ಲೋಹದ ಜೊತೆಗೆ ರೋಡಿಯಮ್‌ ಬಳಸಿ ಕೆಟಲಿಟಿಕ್‌ ಕನ್ವರ್ಟರ್‌ ಒಂದನ್ನು ನಿರ್ಮಿಸಿದರು. ಈ ಸಾಧನದ ಕಾರ್ಯಕ್ಷಮತೆಯು ಪ್ಲಾಟಿನಮ್‌/ರೋಡಿಯಮ್‌ ಸಾಧನದಷ್ಟೇ ಇತ್ತು. ಆದರೆ ಈ ಬಗ್ಗೆ ಪ್ರಯೋಗಗಳು ಮುನ್ನಡೆ ಸಾಧಿಸಿದಂತೆ, ಪಲ್ಲೇಡಿಯಮ್‌ ಲೋಹದ ಬೆಲೆ ಯದ್ವಾ-ತದ್ವಾ ಏರತೊಡಗಿತು. ಇದು ತಾತ್ಕಾಲಿಕವೆಂದು ಮನಗಂಡ ಹರೇನ್‌ ತನ್ನ ಶೋಧವನ್ನು ಮುಂದುವರಿಸಿದರು. ಮುಂದೆ ನಡೆದದ್ದು ಇತಿಹಾಸ. ಜಗತ್ತಿನ ಅತ್ಯುನ್ನತ ಕಾರ್ಯಕ್ಷಮತೆಯ ಕೆಟಲಿಟಿಕ್‌ ಕನ್ವರ್ಟರ್‌ ಒಂದು ಅಗ್ಗದ ಬೆಲೆಯಲ್ಲಿ ನಿರ್ಮಿತವಾಯಿತು. ಕಾರಿನ ಹೊಗೆಯಲ್ಲಿ ಅಳಿದುಳಿದಿರುತ್ತಿದ್ದ ಹೈಡ್ರೋಕಾರ್ಬನ್‌, ಸಾರಜನಕದ ಆಕ್ಸೈಡ್‌, ಇಂಗಾಲದ ಮಾನಾಕ್ಸೈಡ್‌ ಮತ್ತಿತರ ವಿಷಾನಿಲಗಳು ಹೊರ ಚಿಮ್ಮುವ ಮುನ್ನ ಇದರ ಮೂಲಕ ಸಂಸ್ಕರಣೆಗೊಂಡು ಇಂಗಾಲದ ಡೈಆಕ್ಸೈಡ್‌, ಸಾರಜನಕ ಮತ್ತು ತೇವಾಂಶವಾಗಿ ಬದಲಾಗುತ್ತಿದ್ದವು.

ಇಷ್ಟೆಲ್ಲಾ ಹೆಗ್ಗಳಿಕೆಯ ಹರೇನ್‌ರಿಗೆ, ಆಟೊಮೊಬೈಲ್‌ ಎಂಜಿನಿಯರಿಂಗ್‌ ಕ್ಷೇತ್ರದ ಮೇರು ಪುರಸ್ಕಾರವಾದ ‘ಹೆನ್ರಿ ಫೋರ್ಡ್‌ ತಂತ್ರಜ್ಞಾನ ಪದಕ’ ಐದು ಬಾರಿ ಲಭಿಸಿದೆ. ಎಂಜಿನಿಯರಿಂಗ್‌ ಕ್ಷೇತ್ರದ ಪ್ರತಿಷ್ಠಿತ ಪದಕಗಳಲ್ಲಿ ಬಹುತೇಕವು ಅವರ ಕೊರಳನ್ನಲಂಕರಿಸಿವೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ ‘ಅಮೆರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕೆಮಿಕಲ್‌ ಎಂಜಿನಿಯರ್ಸ್‌ನ ವಾರ್ಷಿಕ ಪದಕ’ (1984), ಬ್ರಿಟನ್ನಿನ ‘ಇನ್‌ಸ್ಟಿಟ್ಯೂಟ್‌ ಆಫ್‌ ಮೆಕ್ಯಾನಿಕಲ್‌ ಎಂಜಿನಿಯರ್ಸ್‌ ಪದಕ’ (1987), ‘ಸೊಸೈಟಿ ಆಫ್‌ ಆಟೊಮೊಟಿವ್‌ ಎಂಜಿನಿಯರ್ಸ್‌ - ಎಸ್‌.ಎ.ಇ ಪುರಸ್ಕಾರ’ (1988-89), ‘ಡಿಸ್ಕವರ್‌’ ವಿಜ್ಞಾನ ಪತ್ರಿಕೆ ನವೀನ ಆವಿಷ್ಕಾರಗಳಿಗೆ ನೀಡುವ ಪುರಸ್ಕಾರ (1990), ವೇಗವರ್ಧಕಗಳ ಸಂಶೋಧನೆಗೆಂದು ಎಕ್ಸಾನ್‌ ಕಂಪನಿ ನೀಡುವ ಪ್ರಶಸ್ತಿ (1992), ಅಮೆರಿಕದ ‘ನ್ಯಾಷನಲ್‌ ಅಸೋಸಿಯೇಶನ್‌ ಫಾರ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಪದಕ’ (1994), ಭವಿಷ್ಯತ್ತಿನ ವಾಹನಗಳಿಗೆ ಸಂಬಂಧಿಸಿದ ಆವಿಷ್ಕಾರಗಳಿಗೆ ನೀಡುವ ಅಂತರ್ರಾಷ್ಟ್ರೀಯ ಪುರಸ್ಕಾರ (1997) ಮತ್ತು ವಾಹನ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ರಜತ ಮಹೋತ್ಸವ ಪ್ರಶಸ್ತಿ (2000). ಪರಿಸರ ಮಾಲಿನ್ಯ ನಿಯಂತ್ರಣಕ್ಕೆಂದೇ ನಿಯೋಜಿತವಾದ ವಿಶ್ವಸಂಸ್ಥೆಯ ವೇದಿಕೆಗೆ ಇವರು ಕಾಯಂ ಆಹ್ವಾನಿತರು. ಅವರ ‘ಹಸಿರು ಕಾರು’ ಯೋಜನೆಗೆ ಕಳೆದ ವರ್ಷ ಅಮೆರಿಕ ಉಪಾಧ್ಯಕ್ಷರ ಪುರಸ್ಕಾರ ಲಭಿಸಿತ್ತು.

ಇತ್ತೀಚೆಗಷ್ಟೇ ಅಮೆರಿಕದ ಪ್ರತಿಷ್ಠಿತ ಎಂಜಿನಿಯರಿಂಗ್‌ ಪರಿಷತ್ತಿಗೆ ಚುನಾಯಿತರಾಗಿರುವ ಹರೇನ್‌ ಅವರನ್ನು ಭಾರತ ಸರ್ಕಾರವು ಪರಿಸರ ಮಾಲಿನ್ಯ ನಿಯಂತ್ರಣ ಸಲಹಾ ಸಮಿತಿಗೆ ನಿಯೋಜಿಸಿದೆ. ಡೀಸೆಲ್‌ ಎಂದರೆ ಕಳಪೆ ಇಂಧನ ಎನ್ನುವ ನಂಬಿಕೆ ಸಾಮಾನ್ಯ. ಇದನ್ನು ಹೋಗಲಾಡಿಸುವತ್ತ ಹರೇನ್‌ ಇದೀಗ ಕಾರ್ಯಮಗ್ನರಾಗಿದ್ದಾರೆ. ಪರಿಸರ ಮಾಲಿನ್ಯದ ದೃಷ್ಟಿಯಿಂದ ಪೆಟ್ರೋಲ್‌ಗಿಂತಲೂ ಡೀಸಲ್‌ ಉತ್ತಮ. ಎಂಜಿನ್‌ಗಳನ್ನು ಸೂಕ್ತವಾಗಿ ಮಾರ್ಪಡಿಸಿದರೆ ಮಾಲಿನ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದೆನ್ನುವ ಅಭಿಪ್ರಾಯ ಅವರದು.

ಸದ್ಯಕ್ಕೆ ಫೋರ್ಡ್‌ ಕಂಪನಿಯ ತಂತ್ರಜ್ಞರೆಲ್ಲರಿಗೂ ಹರೇನ್‌ ಅವರೇ ಮುಖ್ಯಸ್ಥರು. ಇಂಥದೊಂದು ಅತ್ಯುಚ್ಛ ಸ್ಥಾನ ಪಡೆದಿರುವ ಹರೇನ್‌ ಅವರಿಗೆ ಆಟೊಮೊಬೈಲ್‌ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ‘ಮಾಲಿನ್ಯ ನಿಯಂತ್ರಣ ಪಿತಾಮಹ’ರೆಂದೇ ಬಿರುದು. ಮಾಲಿನ್ಯ ಹತೋಟಿಯಲ್ಲಿ ಎಂಜಿನ್‌ ನಿಯಂತ್ರಣ ವ್ಯವಸ್ಥೆ, ಇಂಧನ ಗುಣಮಟ್ಟ ಮತ್ತು ಕೀಲೆಣ್ಣೆಯ ಪಾತ್ರಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಮಹನೀಯರಲ್ಲಿ ಹರೇನ್‌ ಅವರ ಹೆಸರು ಪ್ರಮುಖವಾದದ್ದು. ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಸಾರ್ವಜನಿಕ ಸಾಗಣೆ ವಾಹನಗಳು ನೈಸರ್ಗಿಕ ಅನಿಲವನ್ನು ಬಳಸಿಕೊಳ್ಳಬೇಕೆನ್ನುತ್ತಾರೆ. ಈಗಾಗಲೇ ಬಳಕೆಯಾಗಿ ಗುಜರಿಗೆಸೆಯಲ್ಪಟ್ಟ ‘ಕೆಟಲಿಟಿಕ್‌ ಕನ್ವರ್ಟರ್‌’ಗಳಲ್ಲಿ ಹುದುಗಿರುವ ಪ್ಲಾಟಿನಮ್‌ ಮತ್ತು ರೋಡಿಯಮ್‌ಗಳಂಥ ಅಮೂಲ್ಯ ಲೋಹಗಳನ್ನು ಸುರಕ್ಷವಾಗಿ ಹೊರತೆಗೆಯುವ ತಂತ್ರಜ್ಞಾನದ ಬಗ್ಗೆ ಹರೇನ್‌ ಯೋಚಿಸುತ್ತಿದ್ದಾರೆ. ಇಂಥ ನೂರೆಂಟು ಮರುಬಳಕೆ ಯೋಜನೆಗಳ ಮೂಲಕ ಪರಿಸರ ಸಂರಕ್ಷಣೆ ಮಾಡುವ ಇರಾದೆ ಅವರದು.

‘ನಾವೆಲ್ಲ ಇಂದು ನೆಮ್ಮದಿಯಿಂದ ಉಸಿರಾಡಲು ಒಂದಷ್ಟು ಒಳ್ಳೆಯ ಗಾಳಿ ಸಿಗುತ್ತಿರುವುದೇ ಹರೇನ್‌ ಅವರಂಥ ತಂತ್ರಜ್ಞರ ಪರಿಶ್ರಮದಿಂದ’ ಎಂಬ ಮಾತುಗಳು ಮೊನ್ನೆ ಅವರಿಗೆ ಪದಕ ವಿತರಿಸುತ್ತಿದ್ದಾಗ ಕೇಳಿ ಬಂದವು. ಮಾಲಿನ್ಯದ ಹೊಗೆಯ ವಿರುದ್ಧ ಸದಾ ಹಗೆತನ ಬೆಳೆಸಿಕೊಂಡಿರುವ ಈ ಗಾಂಧಿಗೆ, ಇದಕ್ಕಿಂತಲೂ ಉತ್ತಮ ಪ್ರಶಂಸೆ ಮತ್ತೊಂದುಂಟೆ ?

(ಸ್ನೇಹಸೇತು- ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X