ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ತಣ್ಣನೆಯ ಬಿಯರ್‌ ಮತ್ತು ಇಬ್ಸೆನ್ನನ ನಾಟಕದ ಒಂದು ಸಾಲು !

By Staff
|
Google Oneindia Kannada News
  • ಜಾನಕಿ
ತೀರಾ ಮುಖ್ಯವಾದ ವಿಚಾರಗಳು ಮೊದಲಾಗಲಿ. ಮ್ಯೂನಿಚ್‌ನಲ್ಲಿರುವ ಅತ್ಯುತ್ತಮ ಸ್ಪಾಟೆನ್‌ಬ್ರೊ. ಅದನ್ನು ಕುಡಿಯೋದಕ್ಕೆ ಅತ್ಯುತ್ತಮ ಜಾಗ ರೆಸಿಡೆನ್ಸ್‌ ಸ್ಟ್ರಾಸ್‌ನಲ್ಲಿರುವ ಹಾಫ್‌ಥಿಯೇಟರ್‌ ಕೆಫೆ. ಕುಡಿಯೋದಕ್ಕೆ ಒಳ್ಳೆಯ ಸಮಯ ರಾತ್ರಿ ಹತ್ತರ ನಂತರ. ಅದನ್ನು ಸರ್ವ್‌ ಮಾಡುವವರ ಪೈಕಿ ಎಲ್ಲರಿಗಿಂತ ಒಳ್ಳೆಯವರು ಫ್ರಾಲಿನ್‌ ಸೋಫಿಯಾ ಎಂಬ ಎತ್ತರದ ತೆಳ್ಳಗಿನ ಹುಡುಗಿ. ಅವಳ ನಗುವೇ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಅವಳು ಬಂಗಾರದ ಬಿಯರನ್ನು ಮೆತ್ತಗೆ ತಂದು ತನ್ನ ದುಂಡಗಿನ ಸುಂದರ ಉಗುರುಗಳ ಬೆರಳುಗಳಲ್ಲಿ ಮುಂದಿಟ್ಟಾಗ ಖುಷಿಯಾಗುತ್ತದೆ. ಸೌಜನ್ಯ ಮತ್ತು ಆತ್ಮಾಭಿಮಾನ ಸಮನಾಗಿ ಬೆರೆತಂಥ ನಿಲುವು ಆಕೆಯದು. ಆಕೆ ಇಷ್ಟವಾಗುವುದು ಅವಳು ತಂದಿಡುವ ಬಂಗಾರ ಬಣ್ಣದ ತಣ್ಣನೆಯ ಬಿಯರ್‌ನ ಜೊತೆಜೊತೆಗೇ. ಬಿಯರ್‌ ಇಲ್ಲದೆ ಅವಳನ್ನು ನೆನೆದರೆ ಸಪ್ಪೆಯಾಗಿ ಕಾಣುತ್ತಾಳೆ. ಅವಳು ತಂದಿಡದ ಬಿಯರ್‌ ಕೂಡ ಅಷ್ಟು ರುಚಿಯಾಗಿರುವುದಿಲ್ಲ.

ಆ ಬರಹ ಹೀಗೆ ಶುರುವಾಗುತ್ತದೆ. ಬಿಯರನ್ನೂ ಸೋಫಿಯಾಳನ್ನೂ ಮೆಚ್ಚಿಕೊಂಡ ನಂತರ ಲೇಖನ ಹೆನ್ರಿಕ್‌ ಇಬ್ಸೆನ್ನನ ನಾಟಕಗಳತ್ತ ಹೊರಳುತ್ತದೆ. ಆತ ಮ್ಯೂನಿಚ್‌ನ ಬಿಯರ್‌ ಕುಡಿದು ಬರೆದ ನಾಟಕಗಳನ್ನು ಲೇಖಕ ನೆನಪಿಸಿಕೊಳ್ಳುತ್ತಾನೆ. ಆ ನಾಟಕಗಳ ಪ್ರದರ್ಶನ ಹೇಗಿತ್ತು ಅನ್ನುವುದನ್ನು ಹೇಳುತ್ತಾನೆ. ನಡುವೆಯೇ ಮತ್ತೊಮ್ಮೆ ಸೋಫಿಯಾಳ ಪ್ರಸ್ತಾಪ ಬರುತ್ತದೆ. ಮ್ಯೂನಿಚ್‌ನ ರಸ್ತೆಗಳ ಹೆಸರುಗಳೂ ಕೂಡ ಹೇಗೆ ಇಂಗ್ಲೆಂಡಿನ ರಸ್ತೆಗಳಂತೆ ನಾಲ್ಕೈದು ಬೀದಿಗಳಿಗೊಮ್ಮೆ ಹೆಸರು ಬದಲಾಯಿಸಿಕೊಳ್ಳುತ್ತದೆ ಅನ್ನುವುದನ್ನು ನೆನೆದು ಆತ ಬೆರಗಾಗುತ್ತಾನೆ. ಜೋಸೆಫ್‌ ಕಾನ್ರಾಡ್‌ನ ನಂತರ ಬಂದ ಅತ್ಯುತ್ತಮ ಕಾದಂಬರಿಕಾರ ಥಾಮಸ್‌ ಹಾರ್ಡಿಯೇ ಯಾಕಾಗಿರಬಾರದು ಅಂತ ಪ್ರಶ್ನಿಸುತ್ತಾನೆ. ಕಳೆದ ಹತ್ತು ಹನ್ನೆರಡು ವರುಷಗಳಿಂದ ಆತ ಹೇಗೆ ಬೆಳೆಯುತ್ತಾ ಬಂದ ಅನ್ನುವುದರ ಬಗ್ಗೆ ಪುಟ್ಟ ಟಿಪ್ಪಣಿ ಕೊಡುತ್ತಾನೆ. ಆ್ಯಂಬ್ರೋಸ್‌ ಬಿಯರ್ಸ್‌ ಬ್ಲೇಕ್‌ ಮತ್ತು ರಿಚರ್ಡ್‌ ಬರ್ಟನ್‌ರ ಥರ ಥಾಮಸ್‌ ಹಾರ್ಡಿ ಕೂಡ ಹೇಗೆ ತನ್ನದೇ ಆದ ಸ್ಥಾನ ಸಂಪಾದಿಸಿಕೊಂಡ ಅನ್ನುವುದನ್ನು ವಿವರಿಸುತ್ತಾನೆ. ಸಾಹಿತ್ಯದ ಅಧ್ಯಾಪಕರೆಂಬ ಭಯೋತ್ಪಾದಕರಿಂದ ಅವನು ಭಯವಿಹ್ವಲನಾಗಿ ದೂರ ಉಳಿದದ್ದು, ಇಂಗ್ಲಿಷ್‌ ಕಾದಂಬರಿಯನ್ನು ಮತ್ತೆ ಜನಪ್ರಿಯಗೊಳಿಸಿದ್ದು , ಅವನ ರಚನಾ ಕೌಶಲ್ಯದಿಂದ ಎಲ್ಲರಿಗೂ ಇಷ್ಟವಾದದ್ದು seeking ಮತ್ತು finding ಗೆ ಇರುವ ವ್ಯತ್ಯಾಸವನ್ನು ಅವನು ಕಂಡುಕೊಂಡದ್ದು, ಅವನು ಹೇಗೆ ವಿಧಿಯನ್ನೋ ಜಗತ್ತನ್ನೋ ಗೆದ್ದವರ ಬಗ್ಗೆ ಬರೆಯದೇ ಅಂತಿಮವಾಗಿ ತಮ್ಮನ್ನು ತಾವೇ ಗೆದ್ದವರ ಬಗ್ಗೆ ಬರೆದ ಅನ್ನುವುದನ್ನು ಚಿತ್ರಿಸಿದ್ದು....

ಹೀಗೆ ಆತ ಬಿಯರ್‌ನಿಂದ ಆರಂಭಿಸಿ ಆ್ಯಂಬ್ರೋಸ್‌ ಬಿಯಸ್‌ಂನ ತನಕ ಎಲ್ಲವನ್ನೂ ಹೇಳುತ್ತಾ ಬರುತ್ತಾನೆ. ಒಬ್ಬ ಗೆಳೆಯನನ್ನು ಕೂರಿಸಿಕೊಂಡು ಇತ್ತೀಚೆಗೆ ನೋಡಿದ ಸಿನಿಮಾವನ್ನು ವಿವರಿಸುವಂತೆ, ಇತ್ತೀಚೆಗೆ ಓದಿದ ಪುಸ್ತಕದ ಬಗ್ಗೆ ಹೇಳುವಂತೆ ಹೇಳುತ್ತಾನೆ. ಹೆಣ ಸುಡುವವನ ದೃಷ್ಟಿಯಲ್ಲಿ ಒಳ್ಳೆಯ ಮನುಷ್ಯ ಎಂಬ ಪ್ರಬೇಧವೇ ಇಲ್ಲ. ಅವನೇನಿದ್ದರೂ ಬದುಕಿರುವ ಮನುಷ್ಯ ಸತ್ತ ಮನುಷ್ಯ ಎಂಬ ಎರಡೇ ವಿಂಗಡಣೆಗಳಲ್ಲಿ ಆಸಕ್ತನಾದವನು ಅಂತ ಒಂದು ತತ್ವಜ್ಞಾನದ ಮೂಲಕ ಅವನ ಕಾಲದ ವಿಮರ್ಶಕರ ಕಾಲೆಳೆಯುತ್ತಾನೆ.

ಹೀಗೆ ಬರೆದವನು ಒಬ್ಬ ಅಂಕಣಕಾರ. ಅವನ ಹೆಸರನ್ನಿಲ್ಲಿ ಹೇಳುವುದು ಬೇಡ. ಆದರೆ ಅವನ ಅಂಕಣಗಳಿಂದಾಗಿಯೇ ಪತ್ರಿಕೆಯ ಪ್ರಸಾರ ಹೆಚ್ಚಿತ್ತು. ಭಾನುವಾರ ಸಂಜೆಯ ಮಾತಿಗೆ ಅವನ ಅಂಕಣಗಳು ಆಹಾರವಾಗುತ್ತಿದ್ದವು. ಅವನು ಬರೆಯುತ್ತಿದ್ದ ಪತ್ರಿಕೆ ಪ್ರಕಟವಾದ ತಕ್ಷಣ ಒಬ್ಬರಿಗೊಬ್ಬರು ಫೋನಾಯಿಸಿ ಓದಿದ್ರಾ... ಅಂತ ಕೇಳಿಕೊಳ್ಳುತ್ತಿದ್ದರು. ಓದದೇ ಇದ್ದವನ ದುರ್ದೈವದ ಬಗ್ಗೆ ಜನ ಅನುಕಂಪದಿಂದ ಮಾತನಾಡುತ್ತಿದ್ದರು.

ಒಬ್ಬ ಅಂಕಣಕಾರ ಜನಪ್ರಿಯನಾಗುವುದು ತುಂಬ ಸುಲಭ. ಆದರೆ ಹಾಗಾಗುವುದಿಲ್ಲ. ಕಾರಣ ತುಂಬ ಸರಳವಾಗಿದೆ. ಬಹಳಷ್ಟು ಅಂಕಣಕಾರರಿಗೆ ಅಂಕಣದ ಅರ್ಥವೇ ಗೊತ್ತಿಲ್ಲ. ಪ್ರತಿಯಾಂದು ಅಂಕಣಕ್ಕೂ ಒಂದು ಸ್ವರೂಪ ಇರುತ್ತದೆ. ಅಂಕಣಕಾರ ವಾರಕ್ಕೊಂದು ಸಂಗತಿ ಬರೆಯುತ್ತಾನಾದರೂ ಅದಕ್ಕೊಂದು continuity ಇರಬೇಕಾಗುತ್ತದೆ. ಅದನ್ನು ಕತೆ ಕಾದಂಬರಿ, ಪ್ರಬಂಧ ಮುಂತಾದ ಯಾವ ಪ್ರಬೇಧಕ್ಕೂ ಸೇರಿಸಲಾಗುವುದಿಲ್ಲ ನಿಜ. ಆದರೆ ಅದು ಅವೆಲ್ಲವನ್ನೂ ಒಳಗೊಂಡಿರುತ್ತದೆ. ಅಂಕಣ ಬರಹಕ್ಕಿರುವ ಸಾಧ್ಯತೆ ಮತ್ತು ಅನುಕೂಲವೇ ಅದು. ಅದು ಒಬ್ಬ ಬರಹಗಾರನ ಎಲ್ಲ ಸಾಧ್ಯತೆಗಳನ್ನೂ ದುಡಿಸಿಕೊಳ್ಳುತ್ತದೆ. ಮತ್ತು ಒಬ್ಬ ಓದುಗನ ಎಲ್ಲ ಅಗತ್ಯಗಳನ್ನೂ ಪೂರೈಸುತ್ತದೆ. ಒಂದು ಒಳ್ಳೆಯ ಅಂಕಣ ಎಲ್ಲ ಮಿತಿಗಳಿಂದ ಹೊರತಾಗಿದ್ದು. ಅದರ ಚಂಚಲತೆ ಅದರ ಶತ್ರುವಲ್ಲ. ಚಂಚಲವಾಗಿರುವ ಹೊತ್ತಿಗೇ ಆಳವೂ ಆಗಿರುವ ನದಿಯ ಗುಣ ಅಂಕಣಕ್ಕಿರುತ್ತದೆ. ಬೇರೆ ಬರಹಗಳು ಆಳವಾಗಿದ್ದ ತಕ್ಷಣ ಚಲನಶೀಲತೆಯನ್ನು ಕಳಕೊಂಡು ಬೋರು ಹೊಡೆಸುತ್ತವೆ. ಚಲನಶೀಲವಾಗಿರುವವು ಆಳವಾಗಿರುವುದಿಲ್ಲ. ಅವೆರಡೂ ಮೇಳೈಸುವುದು ಅಂಕಣದಲ್ಲಿ.

ಅಂಕಣಕಾರನ ಅನುಕೂಲಗಳನ್ನೇ ನೋಡಿ. ಆತ ಇಡೀ ಜಗತ್ತನ್ನೇ ತನ್ನ ಅಂಕಣದ ಮೂಲಕ ಪ್ರತಿಬಿಂಬಿಸಬಹುದು. ರಾಜಕೀಯ, ಸಿನಿಮಾ, ಸಾಹಿತ್ಯ, ಜನಜೀವನ, ಪ್ರವಾಸ, ಯಾರದೋ ಸಾವು, ಇನ್ಯಾರದೋ ಹುಟ್ಟುಹಬ್ಬ, ರಸ್ತೆಯಲ್ಲಿ ಸಿಕ್ಕ ಹಳೆಯ ಪೆನ್ನು, ಹೆಸರು ಗೊತ್ತಿಲ್ಲದ ಕವಿಯ ಒಂದು ಸಾಲು, ತನ್ನ ಮಗುವಿನ ಹುಟ್ಟುಹಬ್ಬ, ಇವೆಲ್ಲವನ್ನೂ ಆತ ಅಂಕಣದಲ್ಲಿ ತರಬಹುದು. ಆದರೆ ಹಾಗೆ ತರುವ ಹೊತ್ತಿಗೆ ಆತ ಅಂಕಣಕಾರನೇ ಆಗಿರಬೇಕು. ತನ್ನ ವ್ಯಕ್ತಿತ್ವ ಅಂಕಣದ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸಬೇಕು.

ಹೇಗೆ ನೋಡಿದರೂ ಪ್ರತಿಯಾಬ್ಬ ಅಂಕಣಕಾರನಿಗೂ ತನ್ನದೇ ಆದ ಒಂದು ವ್ಯಕ್ತಿತ್ವ ಬೇಗವೋ ತಡವಾಗಿಯೋ ಸಿಕ್ಕಿಯೇ ಸಿಗುತ್ತದೆ. ಅದನ್ನು ಆತ ಹೇಗೆ ಪೊರೆಯುತ್ತಾನೆ ಅನ್ನುವುದಷ್ಟೇ ಮುಖ್ಯವಾಗುತ್ತದೆ. ಅಂಕಣಕಾರನ ವಿಚಾರದಲ್ಲಿ ಪ್ರತಿಭೆಗಿಂತ ಪ್ರಾಮಾಣಿಕತೆ ಮುಖ್ಯ. ಬೌದ್ಧಿಕತೆಗಿಂತ ಸರಳತೆ ಮುಖ್ಯ. ಆತ ತೀರ ಅಕಡೆಮಿಕ್‌ ಆಗಿ ವಿವರಗಳನ್ನು ಕೊಡುವುದಕ್ಕೆ ಹೋದರೆ, ಇನ್ಯಾರನ್ನೋ ಟೀಕಿಸುವುದಕ್ಕೆ ತನ್ನ ಅಂಕಣವನ್ನು ಬಳಸಿಕೊಂಡರೆ ಬಹುಬೇಗ ಸವಕಲಾಗುತ್ತಾನೆ.

ಕನ್ನಡದಲ್ಲಿ ಬರೆಯುವ ಬಹಳಷ್ಟು ಅಂಕಣಕಾರರು ಸಾಮಾನ್ಯವಾಗಿ ಒಂದೇ ವಿಚಾರದ ಬಗ್ಗೆ ಬರೆಯುವವರು. ರಾಜಕೀಯ ಅಂಕಣಕಾರರು ಸಾಹಿತ್ಯಿಕ ಅಂಕಣಕಾರರು ಕ್ರೀಡಾ ಅಂಕಣಕಾರರು ಸಿನಿಮಾ ಅಂಕಣಕಾರರು ಎಂಬಿತ್ಯಾದಿಯಾಗಿ ವಿಂಗಡಿಸಬಹುದಾದರೂ ಸಮಗ್ರವಾಗಿ ಬರೆಯುವ ಅಂಕಣಕಾರರು ಕಡಿಮೆಯೇ. ಹಾಗೆ ಸಮಗ್ರವಾಗಿ ಮತ್ತು ಸಮಸ್ತವನ್ನು ಒಳಗೊಳ್ಳುವುದನ್ನು ಆರಂಭಿಸಿದವರು ಲಂಕೇಶ್‌. ಅವರ ಟೀಕೆ ಟಿಪ್ಪಣಿ ತೆರೆದುನೋಡಿದರೆ ಸಂಜಯ್‌ಗಾಂಧಿಯಿಂದ ಸೈಕಲ್‌ ಕಲಿಸುವ ತನಕದ ಬರಹಗಳು ಸಿಗುತ್ತವೆ.

ಇವತ್ತಿನ ಬಹಳಷ್ಟು ಅಂಕಣಕಾರರ ಸಮಸ್ಯೆ ಅವರ ಶೈಲಿಯದ್ದಲ್ಲ. ಇಂಟೆಗ್ರಿಟಿಯದ್ದು. ಒಬ್ಬ ಅಂಕಣಕಾರರ ಪ್ರಾಮಾಣಿಕತೆ ಪತ್ರಿಕೆಯಿಂದ ಪತ್ರಿಕೆಗೆ ಬದಲಾಗಕೂಡದು. ಕನಿಷ್ಟ ಬರೆಯಲು ಕುಳಿತಾಗಲಾದರೂ ಆತ ತನ್ನನ್ನು ತಾನೇ ಮರೆಯುವುದಕ್ಕೆ ಸಾಧ್ಯವಾಗಬೇಕು. ತನ್ನ ಪತ್ರಿಕೆಯ ಸಂಪಾದಕನ ಧೋರಣೆಗಳೂ ನಿಷ್ಠುರಗಳೂ ಸ್ನೇಹಗಳೂ ಅವನನ್ನು ಕಾಡಕೂಡದು. ಹಾಗೊಂದು ವೇಳೆ ಆತ ಮತ್ತೊಬ್ಬರ ಮರ್ಜಿಗೆ ಬರೆಯಲು ಆರಂಭಿಸಿದೊಡನೆ ಓದುಗನಿಗೆ ಅಲರ್ಜಿ ಶುರುವಾಗುತ್ತದೆ. ಇವತ್ತಿನ ಬಹುತೇಕ ಅಂಕಣಕಾರರಿಗೆ ಆಗಿರುವುದು ಅದೇ.

ಒಬ್ಬ ಸಾಹಿತಿ ಒಳ್ಳೆಯ ಅಂಕಣಕಾರನೂ ಆಗಿರುತ್ತಾನೆ ಅನ್ನುವ ಮೂಢನಂಬಿಕೆ ನಮ್ಮಲ್ಲಿದೆ. ಆದರೆ ನಮ್ಮ ಯಾವ ದೊಡ್ಡ ಲೇಖಕರೂ ಒಳ್ಳೆಯ ಅಂಕಣಕಾರರಾಗಲಿಲ್ಲ. ಅಂಕಣಕಾರನೆಂಬ ಪ್ರಬೇಧವೇ ಬೇರೆ. ಸಾಹಿತಿಗೆ ಅಂಕಣ ಬರೆಯಲು ಶುರುಮಾಡುವುದಕ್ಕೆ ಸಾಕಷ್ಟು ಪೂರ್ವ ಸಿದ್ಧತೆ ಬೇಕಾಗುತ್ತದೆ. ಅವನು ಅಂಕಣ ಬರೆಯುತ್ತಿದ್ದಾಗ ಹೊಳೆದ ಸಂಗತಿಗಳನ್ನು ಆತ ಸ್ವಾರ್ಥದಿಂದ ನೋಡುವುದಕ್ಕೆ ಶುರು ಮಾಡುತ್ತಾನೆ. ಒಂದು ಸಣ್ಣ ಅನುಭವ ಒಳ್ಳೆಯ ಸಣ್ಣ ಕತೆಯಾಗಬಹುದಿತ್ತು. ಕವಿತೆಯಾಗಬಹುದಿತ್ತು ಅನಿಸುತ್ತದೆ.

ಆದರೆ ಅಂಕಣಕಾರನಿಗೆ ಯಾವ ಸ್ವಾರ್ಥವೂ ಇರುವುದಿಲ್ಲ. ಒಂದು ಅದ್ಭುತ ಕಾದಂಬರಿಗಾಗುವ ವಸ್ತುವನ್ನೂ ಆತ ತನ್ನ ಅಂಕಣದಲ್ಲಿ ಪ್ರಸ್ತಾಪ ಮಾಡುತ್ತಾನೆ. ಒಂದು ಒಳ್ಳೆಯ ಇನ್‌ವೆಸ್ಟಿಗೇಟಿವ್‌ ರಿಪೋರ್ಟಿಗೆ ಬೇಕಾಗುವ ಸರಕನ್ನೂ ಆತ ತನ್ನ ಅನುಭವದ ಒಂದು ಭಾಗವಾಗಿ ಬರೆದುಬಿಡುತ್ತಾನೆ. ಅದನ್ನು ಇನ್ನೇನೋ ಮಾಡುವುದಕ್ಕೆ ತಿಣುಕುವುದಿಲ್ಲ. ಆದರೆ ಓದುಗನ ಮನಸ್ಸಿನಲ್ಲಿ ಆ ಅನುಭವ ಕವಿತೆಯಾಗಿಯೋ ನಾಟಕವಾಗಿಯೋ ಕತೆಯಾಗಿಯೋ ಅನುಭವವಾಗಿಯೋ ಅಚ್ಚೊತ್ತುತ್ತದೆ.

ಇವತ್ತಿನ ಅಂಕಣಕಾರರ ಕಷ್ಟಗಳೂ ಸಾಕಷ್ಟಿವೆ. ಅಂಕಣಗಳನ್ನು ಪ್ರೀತಿಯಿಂದ ಓದುವವರ ಸಂಖ್ಯೆ ಕಡಿಮೆ ಇದೆ. ಅಂಕಣಗಳಿಗೆ ವಸ್ತುಗಳೇ ಸಿಗದಂಥ ಪರಿಸ್ಥಿತಿಯಿದೆ. ಪತ್ರಿಕೆಗಳಲ್ಲಿ ಆರಂಭವದ ವಿವಿಧ ಸಪ್ಲಿಮೆಂಟುಗಳು ಲೇಖಕರನ್ನೇ ಸಾಯಿಸುತ್ತಿವೆ. ಒಂದು ದಿನ ಪತ್ರಿಕೆಯೇ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಾರಕ್ಕೆ ಆರೋ ಏಳೋ ಸಪ್ಲಿಮೆಂಟುಗಳನ್ನು ಹೊರತರುತ್ತದೆ. ಅದರಲ್ಲಿ ಬೇಕೋ ಬೇಡವೋ ಸಾಹಿತ್ಯದಿಂದ ಹಿಡಿದು ಹೋಟೆಲ್‌ ತಿಂಡಿಯ ತನಕ ಎಲ್ಲ ವಿಷಯಗಳೂ ಬಂದು ಹೋಗುತ್ತವೆ. ಯಾರ್ಯಾರೋ ಅನಗತ್ಯವಾಗಿ ಫೋಕಸ್‌ ಆಗುತ್ತಾರೆ. ಅಂತಿಮವಾಗಿ ಇದರಿಂದ ಆ ಪತ್ರಿಕೆಯಲ್ಲಿ ಪ್ರಕಟವಾಗುವ ಅಂಕಣಕ್ಕೂ ಹೊಡೆತ ಬೀಳುತ್ತದೆ. ಯಾವುದು ಸುದ್ದಿ, ಯಾವುದು ಫೀಚರ್‌, ಯಾವುದು ಅಂಕಣ ಅನ್ನುವುದೇ ಗೊತ್ತಾಗದ ಪರಿಸ್ಥಿತಿಯಲ್ಲಿ ಓದುಗ ಇದ್ದಾನೆ.

ಅಂಕಣ ಬರಹ ಹೇಗೆ ಎಲ್ಲವನ್ನೂ ಸಂಗ್ರಾಹ್ಯವಾಗಿ ಹೇಳಬಲ್ಲುದು ಅನ್ನುವುದಕ್ಕೆ ಮತ್ತೊಂದು ಪುಟ್ಟ ಉದಾಹರಣೆ ನೋಡಿ. ಇದು ಜೆಫ್ರೆ ಬರ್ನಾರ್ಡನ ಫ್ಯೂಚರ್‌ ಶಾಕ್‌ ಎಂಬ ಅಂಕಣದ ಆಯ್ದ ಭಾಗ. ಸ್ಪೆಕ್ಟೇಟರ್‌ನಲ್ಲಿ ಪ್ರಕಟವಾಗುತ್ತಿದ್ದ ಈ ಅಂಕಣವನ್ನು suicide note in weekly instalments ಎಂದವರಿದ್ದಾರೆ. ನನ್ನ ಖಾಸಗಿ ಭಯಗಳ ಪಟ್ಟಿಯಲ್ಲಿ ಸಾವು ಈಗ ಮೊದಲನೆ ಸ್ಥಾನದಲ್ಲಿಲ್ಲ. ಆ ಜಾಗಕ್ಕೆ ಮತ್ತೊಂದು ಅಪರಿಚಿತ ಭಯ ಬಂದಿದೆ. ಅದು ಬಹಳ ಕಾಲ ಬದುಕುತ್ತೇನೊ ಎಂಬ ಭಯ. ಲಂಡನ್ನೂ ಸೇರಿದಂತೆ ಇಡೀ ಜಗತ್ತೇ ಅಸಹ್ಯ ಹುಟ್ಟಿಸುವಷ್ಟು ಕೆಟ್ಟದಾಗಿದೆ ಅನ್ನುವುದಕ್ಕಿಂತ ಹೆಚ್ಚಾಗಿ ನಾನು ಈ ಜಗತ್ತಿನಲ್ಲಿ ಇರುವುದಕ್ಕೆ ಅನರ್ಹನೇನೋ ಎಂಬ ಭಯ ಕಾಡುತ್ತಿದೆ. ಕಳೆದ ವಾರ ನಾನು ಒಂದು ಹೋಟೆಲ್‌ಗೆ ಹೋದಾಗ ಅಲ್ಲಿ ಸಿಗರೇಟು ಸೇದುತ್ತಾ, ವಿಚಿತ್ರವಾಗಿ ಕಿರುಚುತ್ತಾ ನನಗೆ ಅರ್ಥವೇ ಆಗದ ಇಂಗ್ಲಿಷಿನಲ್ಲಿ ಮಾತನಾಡುತ್ತಾ ಸಣ್ಣ ಸಣ್ಣ ಕಾರಣಗಳಿಗೂ ಎಕ್ಸೈಟ್‌ ಆಗುತ್ತಾ ಬಿಯರ್‌ ಹೀರುವಾಗ ವಿಚಿತ್ರ ಸದ್ದು ಮಾಡುತ್ತಾ ಅವರ ದೇಹಕ್ಕೂ ಮನಸ್ಸಿಗೂ ಒಪ್ಪದ ಬಟ್ಟೆಗಳೊಳಗೆ ತೂರಿಕೊಂಡಿದ್ದ ಯುವಕ ಯುವತಿಯರನ್ನು ಕಂಡೆ. ನಾವೂ ಅವರಿಗಿಂತ ಕೊಂಚ ಜಾಸ್ತಿಯೇ ಕುಡಿಯುತ್ತಿದ್ದೆವು. ಆದರೆ ಹೀಗಿರಲಿಲ್ಲವಲ್ಲ ಅನ್ನಿಸಿತು. ನನಗೆ ಯಾವ ಹಕ್ಕಿಲ್ಲದೆ ಇದ್ದರೂ ಸುಮ್ನೇ ಎದ್ದು ಹೋಗಿ ಅಂತ ಕಿರುಚಿದೆ. ಒಂದೋ ನನಗೆ ವಯಸ್ಸಾಗುತ್ತಿದೆ ಅಥವಾ ಸಂಪ್ರದಾಯದ ನೀರನ್ನು ನಾನು ಸ್ವಲ್ಪ ಜಾಸ್ತಿಯೇ ಕುಡಿದಿದ್ದೇನೆ. ಅವರನ್ನು ಕರೆದು ನೆಟ್ಟಗೆ ಡ್ರೆಸ್‌ ಹಾಕಿಕೊಂಡು ಎಲ್ಲರ ಹಾಗೆ ಟೇಬಲ್ಲಿನ ಮುಂದೆ ಕುರ್ಚಿಯಲ್ಲಿ ಕುಳಿತುಕೊಂಡು ಗ್ಲಾಸಿಗೆ ನಿಧಾನವಾಗಿ ವಿಸ್ಕಿಯನ್ನೋ ಬಿಯರನ್ನೋ ಸುರಿದುಕೊಂಡು ಕುಡಿಯಬಾರದು ಅಂತ ಕೇಳಿದೆ. ನಾನು ಹತಾಶನಾಗಿದ್ದೆ. ಅವರದನ್ನೆಲ್ಲ ಪ್ರತಿಭಟಿಸಬೇಕು ಅನ್ನಿಸುತ್ತಿತ್ತು. ಆ ಶಕ್ತಿ ನನಗೆ ಬರದಿರಲಿ ಅಂತಲೂ ಪ್ರಾರ್ಥಿಸುತ್ತಿದ್ದೆ.

ಅವರ್ಯಾರೂ ನನಗೆ ಹೊಡೆಯುವುದಕ್ಕೆ ಬರಲಿಲ್ಲ. ಅವರ ಪಾಡಿಗೆ ಅವರಿದ್ದರು. ನನ್ನ ಯೌವನದ ದಿನಗಳಲ್ಲಿ ಯಾರಾದರೂ ಹಾಗೆ ಉಪದೇಶ ಮಾಡಿದ್ದರೆ ನಾನು ಹೊಡೆದೇ ಬಿಡುತ್ತಿದ್ದೆ. ಆದರೆ ಈಗಿನ ಹುಡುಗರು ಹೊಡೆಯುವುದಿಲ್ಲ, ದಂಗೆಯೇಳುವುದಿಲ್ಲ. ಅವರಿಗೆ ಹೊಸದೊಂದು ಉಪನಿಷತ್ತಿಲ್ಲ. ಹಳೆಯ ಸಂಪ್ರದಾಯ ಗೊತ್ತಿಲ್ಲ. ಹಳೆಬೇರೂ ಹೊಸ ಚಿಗುರೂ ಇಲ್ಲದ ಇವರು ಹೇಗೆ ಹೂ ಬಿಡುತ್ತಾರೆ. ಹೇಗೆ ಹಣ್ಣಾಗುತ್ತಾರೆ, ಹೇಗೆ ಮಾಗುತ್ತಾರೆ.

ನನಗೆ ಗೊತ್ತಿಲ್ಲ.

ಇದು ಲಂಡನ್‌ನಲ್ಲಿ ಎಂಬತ್ತೊಂಬತ್ತರಲ್ಲಿ ಬರೆದದ್ದು. ಇವತ್ತೂ ಬೆಂಗಳೂರಿಗೂ ಹೊಂದಿಕೆಯಾಗುತ್ತದೆ. ಅದು ಅಂಕಣಕಾರನ ಶಕ್ತಿ ಮತ್ತು ದೂರದೃಷ್ಟಿ.

(ಸ್ನೇಹಸೇತು : ಹಾಯ್‌ ಬೆಂಗಳೂರ್‌)

ಮುಖಪುಟ / ಸಾಹಿತ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X