ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಗೀತೆ : ವಿವಾದಿತ ಚರಣಕ್ಕೆ ಕತ್ತರಿ

By Staff
|
Google Oneindia Kannada News

ಬೆಂಗಳೂರು : ಕುವೆಂಪು ವಿರಚಿತ ನಾಡಗೀತೆಯಲ್ಲಿ ಮಧ್ವಾಚಾರ್ಯರ ಹೆಸರಿನ ಸೇರ್ಪಡೆ ಕುರಿತಂತೆ ಎದ್ದಿದ್ದ ವಿವಾದಕ್ಕೆ ರಾಜ್ಯ ಸರಕಾರ ತೆರೆ ಎಳೆದಿದೆ. ' ಶಂಕರ, ರಾಮಾನುಜ, ಬಸವೇಶ್ವರ " ರು ಇರುವ ಚರಣ ಹೊರತುಪಡಿಸಿ ಒಂದು ಪಲ್ಲವಿ ಹಾಗೂ ಎರಡು ಚರಣಗಳನ್ನು ನಾಡಗೀತೆಯಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.

ಜ.7ರಂದು (ಸಂಕಇ 207 ಕಸಧ 2003) ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ. ಪರಿಷ್ಕೃತ ನಾಡಗೀತೆಯಲ್ಲಿ 'ಶಂಕರ ರಾಮಾನುಜ ವಿದ್ಯಾರಣ್ಯ, ಬಸವೇಶ್ವರರಿಹ ದಿವ್ಯಾರಣ್ಯ..." ಮತ್ತು ' ತೈಲಪ ಹೊಯ್ಸಳರಾಳಿದ ನಾಡೆ... " ಎಂಬ ಸಾಲುಗಳಿರುವ ಚರಣಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಹಾಡಲು ಹಿಡಿಯುವ ಸಮಯದ ದೃಷ್ಟಿಯಿಂದ ಕೆಲ ಚರಣಗಳನ್ನು ಕೈಬಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ. ಪರಿಷ್ಕೃತ ನಾಡಗೀತೆ ಎರಡು ನಿಮಿಷ ಹತ್ತು ಸೆಕೆಂಡು ತೆಗೆದುಕೊಳ್ಳುತ್ತದೆ.

ಆಯ್ದ ಚರಣಗಳನ್ನು ನಾಡಗೀತೆಯಾಗಿ ಪರಿಗಣಿಸಬೇಕು ಮತ್ತು ಹಾಡುವಾಗ ಎದ್ದು ನಿಂತು ಗೌರವ ಸಲ್ಲಿಸಬೇಕೆಂದು ಸರಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ. ನಾಡಗೀತೆಯನ್ನು ಎಲ್ಲ ಶಾಲೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಎಲ್ಲ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಇತರೆ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಬೇಕು ಎಂದು ತಿಳಿಸಿದೆ.

ಈಗಿನ ನಾಡಗೀತೆ

ಜಯ್‌ ಭಾರತ ಜನನಿಯ ತನುಜಾತೆ,
ಜಯಹೇ ಕರ್ನಾಟಕ ಮಾತೆ!
ಜಯ್‌ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ!

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೆ
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ!

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡಿ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ!
ಜಯ್‌ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಜಯ್‌ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ.

ಕೈಬಿಟ್ಟ ಸಾಲುಗಳು

ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂದನರವತರಿಸಿದ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರರಿಹ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳಧಾಮ,
ಕವಿಕೋಗಿಲೆಗಳ ಪುಣ್ಯಾರಾಮ!
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯಹೇ ಕರ್ನಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ,
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ!
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X