ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವಿಸಮಯ : ಲೌಕಿಕ ಮತ್ತು ಅಲೌಕಿಕದ ಅಪೂರ್ವ ಸಂಗಮದಲ್ಲಿ....

By Super
|
Google Oneindia Kannada News

ಅವ್ಯಕ್ತಾದೀನಿ ಭೂತಾನಿ
ವ್ಯಕ್ತಮಧ್ಯಾನಿ ಭಾರತ।
ಅವ್ಯಕ್ತನಿಧನಾನ್ಯೇವ
ತತ್ರ ಕಾ ಪರಿದೇವನಾ।।

ತುಂಬ ಬಳಕೆಯಾದ, ನಮ್ಮ ಜೀವನದ ನಶ್ವರತೆಯನ್ನು ಅತ್ಯಂತ ಗಾಢವಾಗಿ ಹೇಳುವ ಶ್ಲೋಕ ಇದು. ಇದು ಅನೇಕ ಲೇಖಕರ ಕೃತಿಗಳಲ್ಲಿ ಬಂದು ಹೋಗಿವೆ. ಅಡಿಗರ ‘ಶ್ರೀರಾಮ ನವಮಿಯ ದಿವಸ' ಕವಿತೆಯಲ್ಲಿ ಇದೊಂದು ದಟ್ಟ ರೂಪಕವಾಗಿ ಬರುತ್ತದೆ;

ಶ್ರೀರಾಮನವಮಿಯ ದಿವಸ ರಾಮನಾಮಾಮೃತವೆ
ಪಾನಕ, ಪನಿವಾರ, ಕೋಸಂಬರಿ;
ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ :
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ.

ಇಲ್ಲಿ ಬರುವ ವ್ಯಕ್ತಮಧ್ಯವನ್ನು ಅಡಿಗರು ಭಗವದ್ಗೀತೆಯಿಂದಲೇ ಎತ್ತಿಕೊಂಡದ್ದು. ಆದರೆ, ಭಗವದ್ಗೀತೆಯನ್ನು ಓದಿದ್ದಾನೆ ಅನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ. 1048ರಲ್ಲಿ ಆತ ಪರ್ಶಿಯಾದಲ್ಲಿ ಹುಟ್ಟಿದವನು. ಅವನು ತನ್ನ ರುಬಾಯಿಯಾಂದರಲ್ಲಿ ಹೀಗೆ ಬರೆದಿದ್ದಾನೆ;

There was the door to which I found no key;
There was a veil through which I might not see:
Some little talk awhile of me and Thee
There was and then no more of Thee and Me.

ಇದನ್ನು ಡಿವಿಜಿ ಅನುವಾದಿಸಿರುವುದು ಹೀಗೆ;

ಹಿಂದೊಂದು ಬಾಗಿಲ್‌, ಆ ಬೀಗಕ್ಕೆ ಕೈಯಿಲ್ಲ;
ಮುಂದೊಂದು ತೆರೆ. ಅದನೆತ್ತಿ ನೋಡಲಳವಲ್ಲ:
ಈ ಎಡೆಯಾಳೊಂದೆರೆಡು ದಿನ ನೀನು ನಾನೆಂದು
ಹರಟುವೆವು; ಬಳಿಕಿಲ್ಲ ನೀನು ನಾನುಗಳು.

ಅವ್ಯಕ್ತ ಆದ್ಯಂತದ ಮತ್ತು ವ್ಯಕ್ತಮಧ್ಯದ ಕಲ್ಪನೆ ಹಾಗಿದ್ದರೆ ಭರತಖಂಡಕ್ಕಷ್ಟೇ ಸೀಮಿತವಲ್ಲ ಎಂದಂತಾಯಿತಲ್ಲ. ಮತ್ತೀಗ ಕೃಷ್ಣ ಏನನ್ನುತ್ತಾನೆ ಕೇಳೋಣ.

ಆತ್ಮನು ಅವಿನಾಶಿ. ಆದ್ದರಿಂದ ಯಾವ ಪ್ರಾಣಿಗಳ ವಿಚಾರದಲ್ಲೂ ಶೋಕಿಸುವುದು ಸರಿಯಲ್ಲ ಎಂದು ಉಪದೇಶಿಸುತ್ತಲೇ ಕೃಷ್ಣ ಮತ್ತೊಂದು ಮಾತನ್ನೂ ಆಡುತ್ತಾನೆ;

ಕ್ಷತ್ರಿಯನಿಗೆ ಧರ್ಮಯುದ್ಧಕ್ಕಿಂತ ಉತ್ತಮವಾದದ್ದು ಬೇರೊಂದಿಲ್ಲ. ಈ ಯುದ್ಧ ತಾನಾಗಿಯೇ ಬಂದಿದೆ. ಇಚ್ಛಿಸದೇ ಬಂದಿದೆ. ನಿನಗಾಗಿ ಸ್ವರ್ಗ ಬಾಗಿಲನ್ನು ತೆರೆಯುವ ಈ ಯುದ್ಧ ಕೇವಲ ಭಾಗ್ಯಶಾಲಿಗಳಿಗಷ್ಟೇ ಒದಗಿಬರುತ್ತದೆ. ಈ ಧರ್ಮಯುದ್ಧವನ್ನು ನೀನು ಮಾಡದಿದ್ದರೆ ನಿನ್ನ ಸ್ವಧರ್ಮ ಮತ್ತು ಕೀರ್ತಿ ಹಾಳಾಗುತ್ತದೆ. ನೀನು ಪಾಪವನ್ನು ಗಳಿಸುತ್ತೀಯ. ಜನರು ನಿನ್ನನ್ನು ಹೇಡಿ ಎಂದು ಕರೆಯುತ್ತಾರೆ. ಆಗ, ಸಂಭಾವಿತಸ್ಯ ಚಾಕೀರ್ತಿಃ ಮರಣಾದತಿರಿಚ್ಯತೇ।।- ಸಂಭಾವಿತರಿಗೆ ಅವಮಾನಕ್ಕಿಂತ ಸಾವೇ ಮೇಲು. ನೀನು ಹೆದರಿ ಯುದ್ಧಸ್ಥಾನದಿಂದ ಓಡಿಹೋದೆ ಎಂದು ಶೂರರು ಎಣಿಸುತ್ತಾರೆ ಮತ್ತು ನಿನ್ನ ಶೌರ್ಯವನ್ನು ಮೆಚ್ಚಿದವರೇ ನಿನ್ನನ್ನು ಲಘುವಾಗಿ ಕಾಣುತ್ತಾರೆ.

ಭಗವದ್ಗೀತೆ ಹತ್ತಿರವಾಗುವುದು ಇಲ್ಲೇ. ಅದು ಎರಡು ನೆಲೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಏಕಕಾಲಕ್ಕೆ ಐಹಿಕವನ್ನೂ ಪಾರಮಾರ್ಥಿಕವನ್ನೂ ಬೋಧಿಸುತ್ತದೆ. ಹಾಗಲ್ಲದಿದ್ದರೆ ಹೀಗೆ ನಿಮ್ಮನ್ನು ಒಲಿಸಿಕೊಳ್ಳುತ್ತೇನೆ ಎಂದು ಹೊರಡುತ್ತದೆ. ಆತ್ಮದ ಅವಿನಾಶಿತ್ವದಿಂದ ಅರ್ಜುನನಿಗೆ ಕನ್‌ವಿನ್ಸ್‌ ಆಗಲಿಲ್ಲ ಎಂದು ಗೊತ್ತಾದವನಂತೆ ಕೃಷ್ಣ ಅಲ್ಲಿಂದ ಥಟ್ಟನೆ ಜನಸಾಮಾನ್ಯರಂತೆ ಮಾತಿಗೆ ತೊಡಗುತ್ತಾನೆ.

ನಿನ್ನ ಸಾಮರ್ಥ್ಯವನ್ನು ಹಳಿಯುತ್ತಾ ಜನ ಆಡಬಾರದ ಮಾತಾಡುತ್ತಾರೆ. ಇದಕ್ಕಿಂದ ಹೆಚ್ಚಿಗೆ ವೇದನೆಯುಂಟು ಮಾಡುವಂಥದ್ದು ಮತ್ತೇನಿದೆ? ಯುದ್ಧದಲ್ಲಿ ಸತ್ತರೆ ವೀರಸ್ವರ್ಗ ಸೇರುತ್ತಿ, ಗೆದ್ದರೆ ರಾಜ್ಯಭೋಗ ನಿನ್ನದಾಗುತ್ತದೆ. ಆದ್ದರಿಂದ ; ಯುದ್ಧಾಯ ಕೃತನಿಶ್ಚಯಃ.

‘ಏನಾಗುತ್ತೋ ಆಗ್ಲಿ. ಮುಂದೆ ನುಗ್ಗು ಗುರೂ' ಎನ್ನುವ ಗೆಳೆಯನಂತೆ ಕೃಷ್ಣ ಪುಸಲಾಯಿಸುವುದನ್ನು ಕಂಡಾಗ ನಗು ಬರುತ್ತದೆ. ಹೇಗಾದರೂ ಮಾಡಿ ಯುದ್ಧಕ್ಕೆ ಅರ್ಜುನನನ್ನು ಎಳೆದು ತರಬೇಕು ಎಂಬ ಏಕೈಕ ಉದ್ದೇಶದಿಂದ ಅರ್ಥವಿಲ್ಲದ ಸಾಮಾನ್ಯ ವಾದಗಳನ್ನೂ ಕೃಷ್ಣ ಮುಂದಿಡುತ್ತಾನೆ.

ಸುಖದುಃಖೇ ಸಮೇ ಕೃತ್ವಾ
ಲಾಭಾಲಾಭೌ ಜಯಾಜಯೌ।
ತತೋ ಯುದ್ಧಾಯ ಯುಜ್ಯಸ್ವ
ನೈವಂ ಪಾಪಮವಾಪ್ಸಸಿ।।

ಸುಖದುಃಖ, ಲಾಭನಷ್ಟ ಮತ್ತು ಸೋಲುಗೆಲುವುಗಳನ್ನು ಸಮನಾಗಿ ಕಂಡು ಯುದ್ಧಕ್ಕೆ ಸಿದ್ಧನಾಗು. ಆಗ ನಿನ್ನನ್ನು ಪಾಪ ಮೆತ್ತಿಕೊಳ್ಳುವುದಿಲ್ಲ ಅನ್ನುತ್ತಾನೆ ಕೃಷ್ಣ. ಸೋಲುಗೆಲುವು ಮುಖ್ಯವಲ್ಲ, ಭಾಗವಹಿಸುವುದಷ್ಟೇ ಮುಖ್ಯ ಎಂಬ ತೀರಾ ಸವಕಲಾದ ಹೇಳಿಕೆಯಂತೆ ಇದು ಇವತ್ತು ಕಾಣಿಸುತ್ತದೆ. ಆದರೆ ಒಮ್ಮೆ ಯುದ್ಧಕ್ಕೆ ಒಪ್ಪಿಕೊಂಡರೆ ಅರ್ಜುನನನ್ನು ಹೇಗೆ ಗೆಲ್ಲುವಂತೆ ಮಾಡಬೇಕು ಅನ್ನುವುದು ತನಗೆ ಗೊತ್ತಿದೆ ಎಂಬ ಆತ್ಮವಿಶ್ವಾಸದಿಂದಲೇ ಈ ಮಾತುಗಳನ್ನು ಕೃಷ್ಣ ಆಡುತ್ತಾನೆ.

ಇವಿಷ್ಟೂ ಮಾತು ಸಾಂಖ್ಯಯೋಗದಲ್ಲಿ ಬರುತ್ತವೆ. ಇಲ್ಲಿಂದಾಚೆಗೆ ಕೃಷ್ಣ ಅರ್ಜುನ ಕಂಡು ಕೇಳರಿಯದ ಮಾತುಗಳ ಮೂಲಕ ಅವನನ್ನು ಬದಲಾಯಿಸುವುದಕ್ಕೆ ಯತ್ನಿಸುತ್ತಾನೆ. ಆತ ಹೇಳುತ್ತಾನೆ- ಇದುವರೆಗೆ ನಾನು ಬೋಧಿಸಿರುವುದು ಸಾಂಖ್ಯವನ್ನು ಕುರಿತ ವಿವೇಕ. ಈಗ ಯೋಗದ ಕುರಿತು ಹೇಳುತ್ತೇನೆ. ಈ ರಹಸ್ಯವನ್ನು ತಿಳಿಯುವ ಮೂಲಕ ನೀನು ಕರ್ಮದ ಕಟ್ಟನ್ನು ಕಳಚಿಕೊಳ್ಳುತ್ತಿ. ಈ ಯೋಗಭ್ಯಾಸದಿಂದ ನಷ್ಟವೇನೂ ಆಗುವುದಿಲ್ಲ. ಅದರಲ್ಲಿ ಏನೊಂದು ಹಾನಿಯೂ ಇಲ್ಲ. ಸ್ವಲ್ಪ ಅಭ್ಯಾಸ ಮಾಡಿದರೂ ಅದು ದೊಡ್ಡ ಭಯದಿಂದ ನಿನ್ನನ್ನು ಪಾರು ಮಾಡುತ್ತದೆ ಎಂದು ಕೃಷ್ಣ ಕಸ್ತೂರಿ ಮಾತ್ರೆ ಮಾರುವವನ ಧಾಟಿಯಲ್ಲಿ ಹೇಳುತ್ತಾನೆ. ಭಗವದ್ಗೀತೆಗೆ ಈ ಓಲೈಸುವ ಧಾಟಿ ಬೇಕಿತ್ತೇ ಎಂದು ಅನೇಕ ಸಾರಿ ಅನುಮಾನ ಮೂಡುತ್ತದೆ.

ಇದ್ದಕ್ಕಿದ್ದಂತೆ ವೇದಾಚರಣೆಗಳ ಕುರಿತ ಟೀಕೆಯೂ ಇಲ್ಲಿ ಕಾಣಿಸಿಕೊಳ್ಳುತ್ತದೆ. ಅವಿವೇಕಿಗಳು ವೇದಗಳಲ್ಲಿನ ಕರ್ಮಭಾಗವನ್ನೇ ಶ್ರೇಷ್ಠ ಎಂದು ಪ್ರಶಂಸಿಸುತ್ತಾರೆ. ಸ್ವರ್ಗವನ್ನು ಗುರಿಯಾಗಿಟ್ಟುಕೊಂಡು ಆಶೆಗಳಿಂದ ತುಂಬಿದವರಾಗಿ ಕರ್ಮಗಳಿಗೆ ಪ್ರತಿಫಲ ಅಪೇಕ್ಷಿಸುತ್ತಾ ವಿವಿಧ ಕಾರ್ಯಗಳನ್ನು ಮಾಡುತ್ತಾರೆ. ಅವರ ಆಸಕ್ತಿಯೇನಿದ್ದರೂ ಭೋಗ ಮತ್ತು ಸಂಪತ್ತಿನಲ್ಲಿ. ಆದ್ದರಿಂದ ಅವರ ಮನಸ್ಸು ಸ್ಥಿರವಾಗಿರುವುದಿಲ್ಲ. ಹೀಗಾಗಿ ಅವರಿಗೆ ತೃಪ್ತಿಯೂ ಇಲ್ಲ.

ಇಲ್ಲಿ ಸ್ವರ್ಗದ ಆಶೆಯಿಂದ ಕರ್ಮಾಸಕ್ತರಾಗುತ್ತಾರೆ ಎಂದು ಜರೆಯುವ ಕೃಷ್ಣ, ಇದಕ್ಕೂ ಮೊದಲು ಅರ್ಜುನನಿಗೇ ಸ್ವರ್ಗದ ಆಮಿಷ ಒಡ್ಡಿರುತ್ತಾನೆ ಅನ್ನುವುದನ್ನು ಗಮನಿಸಿ;

ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಮ್‌... ಸತ್ತರೆ ಸ್ವರ್ಗ ಸೇರುತ್ತೀಯೆ ಎಂದವನ ಬಾಯಲ್ಲೇ ಕಾಮಾತ್ಮಾನಃ ಸ್ವರ್ಗಪರಾ ಜನ್ಮಕರ್ಮಫಲಪ್ರದಾಮ್‌... ಎಂಬ ಮಾತೂ ಬರುತ್ತದೆ ಅಂದ ಮೇಲೆ ಯಾವುದು ಸತ್ಯ? ಯಾವುದು ಮಿಥ್ಯ?

ಅಥವಾ ಎರಡೂ ಮಾತುಗಳನ್ನೂ ಬೇರೆ ಬೇರೆ contextನಲ್ಲಿಟ್ಟುಕೊಂಡು ನೋಡಬೇಕೇ?

(ಸ್ನೇಹ ಸೇತು: ಓ ಮನಸೇ)

English summary
Janaki questiones the tone and tenor of Bhagavadgitha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X