ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ.ಎಸ್‌.ಆಮೂರ: ಕಟ್ಟುವ ಪ್ರತಿಭೆಯ ಕಲೆಗಾರ

By Staff
|
Google Oneindia Kannada News
  • ಜಾನಕಿ
ವಿಮರ್ಶಕರಲ್ಲಿ ಎರಡು ಥರ : ಲಂಕೇಶ್‌, ಅನಂತಮೂರ್ತಿ, ಡಿ.ಆರ್‌.ನಾಗರಾಜ್‌ ಮುಂತಾದ ನವ್ಯ ವಿಮರ್ಶಕರದ್ದು ಕೆಡಹುವ ಹುಚ್ಚು . ಅವರು ಕೆಡವಿದಾಗಲೇ ಒಳಗಿನ ಅರ್ಥ ಮತ್ತು ಅರ್ಥಹೀನತೆ ಬಯಲಾಗುತ್ತದೆ.

ಮತ್ತೊಂದು ತೆರನ ವಿಮರ್ಶಕರದು ಕಟ್ಟುವ ಹುಚ್ಚು . ಒಂದು ಸಾಮಾನ್ಯ ಕೃತಿಯನ್ನೂ ಬಗೆದು ಅದರಲ್ಲಿರುವ, ಇಲ್ಲದ ಮತ್ತು ಇರಬಹುದಾದ ಅರ್ಥಗಳನ್ನು ವಿಶ್ಲೇಷಿಸುವುದು ಅವರಿಗೆ ಪ್ರಿಯವಾದ ಕೆಲಸ. ಹೊಸ ತಲೆಮಾರಿನ ವಿಮರ್ಶಕರ ಪೈಕಿ ಹೆಚ್ಚಿನವರು ಅಂಥವರೇ. ಅವರ ಏಕೈಕ ಮಾನದಂಡ ಕೃತಿಯಲ್ಲ , ಕೃತಿಕಾರ.

ಆದರೆ ವಿಮರ್ಶಕ ಕೆಡಹುವವನೂ ಅಲ್ಲ , ಕಟ್ಟುವವನೂ ಅಲ್ಲ . ಇವೆರಡರ ನಡುವಿನ ಕಟ್ಟೆಚ್ಚರದಲ್ಲಿ ನಡೆಯುವವನು. ಅಂಥ ಕೆಲವೇ ವಿಮರ್ಶಕರ ಪೈಕಿ ಥಟ್ಟನೆ ನೆನಪಾಗುವ ಹೆಸರು ಕುರ್ತಕೋಟಿ ಮತ್ತು ಆಮೂರ.

ಗುಬ್ಬಚ್ಚಿ ಹುಬ್ಬಿನ, ತೀಕ್ಷ್ಣ ಕಣ್ಣುಗಳ ಸದಾ ಸಿಟ್ಟುಗೊಂಡಂತೆ ಕಾಣುವ ಆಮೂರರದ್ದು ತೆರೆದ ಮನಸ್ಸು . ಅವರು ಕೃತಿಕಾರನ ಹಂಗಿಲ್ಲದೆ ಒಂದು ಕೃತಿಯಾಳಗೆ ಪ್ರವೇಶಿಸಬಲ್ಲರು. ತನ್ನ ಅಪಾರ ಓದು ಮತ್ತು ಪಾಂಡಿತ್ಯದಿಂದ ಕೃತಿಯನ್ನು ಎದುರುಗೊಳ್ಳುವ ಬದಲು, ವಿನಯ ಮತ್ತು ಮುಕ್ತತೆಯಿಂದ ಒಂದು ಕೃತಿಯ ಮುಂದೆ ನಿಲ್ಲುವುದು ಸರಿಯಾದ ಕ್ರಮ ಎಂದು ಬಲ್ಲ ಕೆಲವೇ ಕೆಲವರ ಪೈಕಿ ಆಮೂರರೂ ಒಬ್ಬರು.

ಕೀರ್ತಿನಾಥ ಕುರ್ತಕೋಟಿಯವರಿಗೂ ಆಮೂರರಿಗೂ ಇರುವ ಒಂದು ಮುಖ್ಯ ವ್ಯತ್ಯಾಸ ಇದು. ಕುರ್ತಕೋಟಿಯವರದ್ದು ವಿಮರ್ಶಾ ಕ್ರಮದಲ್ಲಿ ಸಾತತ್ಯವಿದೆ. ಆಮೂರರ ಕ್ರಮದಲ್ಲಿ ಒಂದು ವಿಸ್ತಾರವಿದೆ. ಕುರ್ತಕೋಟಿಯವರು ತಮ್ಮ ವಿಮರ್ಶೆಯ ಮಾನದಂಡವನ್ನಾಗಿ ಬೇಂದ್ರೆಯನ್ನು ಬಳಸಿಕೊಂಡವರು. ಅವರ ಎಲ್ಲ ಸಿದ್ಧಾಂತಗಳೂ ಬೇಂದ್ರೆಯವರಿಂದಲೇ ಶುರುವಾಗುತ್ತವೆ. ಅದು ಕುಮಾರವ್ಯಾಸನಿಂದ ಶುರುವಾದರೂ ಸೈತ ಆಳದಲ್ಲಿ ಅದು ಬೇಂದ್ರೆಯ ನೆಲೆಯಿಂದಲೇ ಹೊರಟದ್ದಾಗಿರುತ್ತದೆ.

ಆಮೂರರ ಮಾರ್ಗ ಅದಲ್ಲ . ಆ ಮಟ್ಟಿಗೆ ಅವರಿಗೆ ನಿಲುವುಗಳಿಲ್ಲ . ಪಾಟೀಲರ ನಾಟಕಗಳನ್ನೂ , ಮಹಿಳೆಯರ ಕತೆಗಳನ್ನೂ, ನವೋದಯ ಕಾವ್ಯವನ್ನೂ ಅವರು ಆಯಾ ನೆಲೆಯಲ್ಲೇ ವಿಮರ್ಶಿಸಬಲ್ಲರು.

ಇತ್ತೀಚೆಗಷ್ಟೇ ಆಮೂರರು ಅನಕೃ ನಿರ್ಮಾಣ್‌ ಪ್ರಶಸ್ತಿಯಿಂದ ಸಮ್ಮಾನಿತರಾಗಿದ್ದಾರೆ. ಆಮೂರರಿಗೆ ಅದು ಸಿಕ್ಕಿದ್ದು ವಿಮರ್ಶಕರಿಗೆ ಸಂದ ಗೌರವ ಎಂದು ಭಾವಿಸುವುದು ಅಷ್ಟು ಸರಿಯಲ್ಲ . ಆಮೂರ ವಿಮರ್ಶೆಯೆಂಬ ಪರಿಭಾಷೆಯಿಂದ ಹೊರಗೆ ಉಳಿದವರು ಎನ್ನಬಹುದು. ಯಾಕೆಂದರೆ ಅವರು ಪ್ರಥಮತಃ ಒಳ್ಳೆಯ ಓದುಗರು. ಸಾಹಿತ್ಯದ ಧ್ವನಿಶಕ್ತಿಯನ್ನು ಬಲ್ಲವರು.

ಅದು ನಿಜವಾಗಿಯೂ ಅವರೊಳಗಿನ ಅಖಂಡ ಓದುಗನಿಗೆ ಮತ್ತು ಅವರ ಪ್ರತಿಕ್ರಿಯೆಯ ಖುಷಿಗೆ ಸಿಕ್ಕ ಮನ್ನಣೆ.


ಮುಖಪುಟ / ಸಾಹಿತ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X