• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಳೆ ಗೆಳತಿ, ಕನಸೊಂದ ಕಂಡೆ

By Staff
|
  • ವಸುಧೇಂದ್ರ, ಬೆಂಗಳೂರು.

vas123u@rocketmail.com

ನಮ್ಮ ಬಯಲುಸೀಮೆ ಹೆಂಗಸರ ಬದುಕು ಕಷ್ಟದ್ದು. ಕಾಡುವ ಬಡತನ, ದಬ್ಬಾಳಿಕೆಯ ಪುರುಷ ಸಮುದಾಯ, ನೀರಿನ ಬವಣೆ ಮತ್ತು ಹುರಿದು ಹಾಕುವ ಬೆಂಕಿ ಬಿಸಿಲು. ಆದರೆ ಇಂತಹ ಕಳ್ಳೆ ಪಿಳ್ಳೆ ನೆವಗಳನ್ನು ಹೇಳಿದರೆ ಬದುಕು ಕೇಳುತ್ತದೆಯೆ? ಅದು ಜೀವವಾಹಿನಿ. ಇದ್ದ ಸಮಸ್ಯೆಗಳನ್ನೆಲ್ಲಾ ಅತ್ತ ಸರಿಸಿ, ಹಸನಾಗುವ ಮಾರ್ಗಗಳನ್ನು ನಾವು ಹುಡುಕಿಕೊಳ್ಳಬೇಕು. ಅಂತಹ ಸಮಸ್ಯೆಗಳ ನಡುವೆಯೂ ಆಶಾಕಿರಣಗಳನ್ನಿಟ್ಟುಕೊಂಡು ನಗುನಗುತ್ತಾ ಬಾಳಬೇಕು. ಅದಕ್ಕಾಗಿ ಹತ್ತಾರು ಉಪಾಯಗಳು ಜನಪದದಲ್ಲಿ ಬೆರೆತು ಹೋಗಿವೆ. ಅಂತಹ ಒಂದು ಸುಂದರ ಉಪಾಯ ಕನಸು ಕಾಣುವುದು ಮತ್ತು ಕನಸಿಗೆ ಅರ್ಥವನ್ನು ಹುಡುಕುವುದಾಗಿದೆ.

ರಾತ್ರಿ ಬಿದ್ದ ಕನಸನ್ನು ಜೋಪಾನವಾಗಿ ಬಚ್ಚಿಟ್ಟುಕೊಂಡು, ಬೆಳಗಿನ ಕತ್ತೆ ದುಡಿತವನ್ನೆಲ್ಲಾ ಮುಗಿಸಿಕೊಂಡು ಗೆಳತಿಯರ ಬಳಿ ಓಡುತ್ತಾರೆ. ತಮ್ಮ ಕನಸಿನ ಜಮಖಾನೆಯನ್ನು ಹಾಸಿ, ಅದರ ಮೇಲೆ ಹರಟೆಗೆ ಕೂಡುತ್ತಾರೆ. ಕನಸಿನಲ್ಲಿ ಬಂದ ವ್ಯಕ್ತಿ, ನಡೆದ ಘಟನೆ, ಬಳಕೆಗೊಂಡ ವಸ್ತುಗಳು, ಆಡಿದ ಮಾತುಗಳು - ಆಡದ ಮಾತುಗಳು, ಪಶು-ಪಕ್ಷಿಗಳು... ಪ್ರತಿಯಾಂದಕ್ಕೂ ಒಂದೊಂದು ಅರ್ಥವನ್ನು ಹುಡುಕುತ್ತಾರೆ. ಈ ಅರ್ಥಗಳು ವಾಸ್ತವ ಜೀವನದ ಅರ್ಥಗಳಿಗಿಂತ ತುಂಬಾ ಬೇರೆಯಾಗಿರುತ್ತವೆ. ತಲೆ ಮೇಲೆ ಸ್ನಾನ ಮಾಡಿದರೆ ತಿಕ್ಕಡಿ (ಶನಿಕಾಟ) ಜಾಸ್ತಿ, ಉಂಡ Vasudhendraಎಲೆಯ ಮುಂದೆ ಕುಳಿತಿದ್ದರೆ ಅರೋಗ್ಯ, ಊಟ ಮಾಡಿದರೆ ಅನಾರೋಗ್ಯ, ಗೊಜ್ಜಲಿನಂತಹ ಅಸಹ್ಯ ವಸ್ತುಗಳು ಕಂಡರೆ ಐಶ್ವರ್ಯ, ಹಣವೇ ಕಂಡು ಬಂದರೆ ಏನೋ ಕೇಡು, ಹೆಣ ಕಂಡು ಬಂದರೆ ಶುಭಕಾರ್ಯ ನಡೆಯುತ್ತದೆ... ಹೀಗೆ ಯಾವುದೇ ತರ್ಕಕ್ಕೆ ಸಿಕ್ಕದೆ ಅವುಗಳ ಅರ್ಥಗಳು ಜನರಲ್ಲಿ ಬೆರತುಕೊಂಡಿವೆ. ಸ್ವಪ್ನಸಂಹಿತೆ, ಸ್ವಪ್ನಚಿಂತಾಮಣಿಯಂತಹ ಪುಸ್ತಕಗಳು ಇವೆಯಾದರೂ ಅವುಗಳನ್ನೇನೂ ಇವರು ಓದಿದವರಲ್ಲ. ತಲೆಮಾರುಗಳಿಂದ ಬಂದ ಕನಸಿನ ವಿವರಣೆಯ ಜೊತೆಗೆ ತಮ್ಮ ಬುದ್ಧಿವಂತಿಕೆಯನ್ನು ಸೇರಿಸಿ ತಮ್ಮದೇ ಆದ ಅರ್ಥಗಳನ್ನು ಕಟ್ಟಿಕೊಳ್ಳುತ್ತಾರೆ. ಆದಷ್ಟು ಬಿದ್ದ ಕನಸಿಗೆ ಒಳ್ಳೆಯ ಅರ್ಥವನ್ನು ಹುಡುಕುತ್ತಾರೆ.

ನನ್ನಮ್ಮನಿಗೆ ಕನಸುಗಳಲ್ಲಿ ನಂಬಿಕೆ ಹೆಚ್ಚು. ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವಾಗಲೋ, ತರಕಾರಿ ಹೆಚ್ಚುವಾಗಲೋ ತನ್ನೆಲ್ಲಾ ಕನಸುಗಳನ್ನು ನನ್ನಪ್ಪನ ಮುಂದೆ, ನಾವು ಹುಡುಗರಾದರೂ ನಮ್ಮ ಮುಂದೆ ಹೇಳಿಕೊಳ್ಳುತ್ತಿದ್ದಳು :

‘ಕರು ಅಂಬಾ ಅಂತು. ಯಾರೋ ಬರ್ತಾರೆ...’,

‘ಛಲೋ ಬಣ್ಣದ ರಂಗೋಲಿ ಹಾಕ್ತಾ ಕೂತಿದ್ದೆ. ಲಕ್ಷ್ಮಿ ಮನೆಗೆ ಬರ್ತಾಳೆ...’,

‘ಪಕ್ಕದ ಮನಿ ಪುಟ್ಟಿ ಗಿಡದಾಗಿನ ಮಲ್ಲಿಗಿ ಹೂ ಹರೀತಾ ಇದ್ದಳು. ಬಡಾನ ಮದುವಿ ಆಗ್ತದೆ...’,

‘ಜಾತ್ರಿ ಗಲಾಟೆ, ತೇರು ಎಳೆದಂಗೆ ಆಯ್ತು... ಯಾರನ್ನಾ ಸಾಯ್ತಾರೋ ಏನೋ?’

- ಎಂದೆಲ್ಲಾ ಹೇಳುತ್ತಿದ್ದಳು. ಕೆಲವೊಮ್ಮೆಯಂತೂ ‘ನಿನ್ನೆ ರಾತ್ರಿ ಕನಸಿನಾಗೆ ಭಿಕ್ಷೆಗೆ ಬಂದ ಬ್ರಾಹ್ಮಣ ಸಂಸ್ಕೃತ ಶ್ಲೋಕ ಹೇಳಿ ಹೋಗಾನೆ’ ಅಂತ ಯಾವುದೋ ಶ್ಲೋಕವನ್ನು ಹೇಳುತ್ತಿದ್ದಳು. ನಮಗದು ತಮಾಷೆಯ ವಿಷಯ. ಅಮ್ಮನಿಗೆ ಮೊದಲೇ ಸಂಸ್ಕೃತ ಬಾರದು. ಅದರ ಮೇಲೆ ಕನಸಿನಲ್ಲಿ ಹೇಳಿಹೋದ ಶ್ಲೋಕ! ಆದರೆ ನಮ್ಮಮ್ಮ ನಮ್ಮ ಕುಹಕಗಳನ್ನೆಲ್ಲಾ ಜಾಡಿಸಿ ಒಗೆದು, ಸಂಜೆಗೆ ಎಲೆ-ಅಡಿಕೆ-ದಕ್ಷಿಣೆಯಾಂದಿಗೆ ಅನಂತಭಟ್ಟರ ಬಳಿಗೆ ಹೋಗುತ್ತಿದ್ದಳು. ಅವರು ಶ್ಲೋಕವನ್ನು ಕೇಳಿ, ಯಾವು ಯಾವುದೋ ಗ್ರಂಥಗಳನ್ನು ಹುಡುಕಿ, ‘ಇದು ದುರ್ಗಾಪುರಾಣದ ಹತ್ತನೆಯ ಅಧ್ಯಾಯದಲ್ಲಿ ಬರ್ತದಮ್ಮ. ದುರ್ಗಿ ದುಷ್ಟ ಸಂಹಾರ ಮಾಡುವ ಅಧ್ಯಾಯ. ನಿಮ್ಮ ಕಂಟಕಗಳೆಲ್ಲಾ ಪರಿಹಾರ ಆಗ್ತವೆ’ ಅಂತ ಹೇಳಿ ಅಮ್ಮಗೆ ಆ ಶ್ಲೋಕವನ್ನು ತೋರಿಸುತ್ತಿದ್ದರು.

ಪಿಂಜಾರ ಓಣಿಯ ಗೌರಕ್ಕನ ಮಗಳು ಶಾಂಭವಿ ಹುಟ್ಟಾ ಕುರುಡಿ. ವಯಸ್ಸಾಗುತ್ತಾ ಬಂದಿದ್ದರೂ ಮದುವೆಯಾಗಿರಲಿಲ್ಲ . ಆಗೊಮ್ಮೆ ಈಗೊಮ್ಮೆ ಅಮ್ಮನ ಬಳಿ ಬಂದು ತನ್ನ ಕನಸನ್ನು ಹೇಳಿಕೊಂಡು ಅರ್ಥ ಕೇಳುತ್ತಿದ್ದಳು. ತನ್ನೆಲ್ಲಾ ಕನಸಿನಿಂದಲೂ ಅವಳು ಹುಡುಕುತ್ತಿದ್ದ ಅರ್ಥ ಒಂದೇ ಒಂದು - ತನಗೆ ಮದುವೆಯಾಗುತ್ತದೆಯೆ? ಎಂದು. ಅಮ್ಮ ಅವಳ ಕನಸನ್ನು ಅತ್ಯಂತ ಆಸಕ್ತಿಯಿಂದ ಕೇಳುತ್ತಿದ್ದಳು. ‘ಆಗ್ತದೆ ಶಾಂಭವಿ... ತಪ್ಪದಂಗೆ ಮದುವಿ ಆಗ್ತದೆ. ಆದರೆ ಸ್ವಲ್ಪ ತಡ... ಅವಸರ ಮಾಡಬೇಡ...’ ಎಂದು ಹೇಳಿದರೆ ಅತ್ಯಂತ ಖುಷಿಯಾಗುತ್ತಿದ್ದಳು. ನಾನು ಅವಳನ್ನು ಗೋಳುಹೊಯ್ದುಕೊಳ್ಳಲು ‘ಮೊದಲೇ ನಿಂಗೆ ಕಣ್ಣು ಕಾಣಿಸಂಗಿಲ್ಲ. ಕನಸು ಹೆಂಗವ್ವಾ ಬೀಳ್ತದೆ?’ ಅಂತ ಸವಾಲೆಸೆಯುತ್ತಿದ್ದೆ. ನನ್ನ ಮುಖವನ್ನೆಲ್ಲಾ ತನ್ನ ಕೈಯಿಂದ ತಡಕಾಡುತ್ತಾ ‘ನಿನ್ನ ಹೆಜ್ಜಿ ಸಪ್ಪಳದಿಂದಲೇ ನೀನು ಅಂತ ಗೊತ್ತಾಗ್ತದಪ್ಪ. ಇನ್ನ ಕನಸಿನಾಗೆ ಬಂದು ಗಲಗಲ ಮಾತಾಡಿದರೆ ಗೊತ್ತಾಗಂಗಿಲ್ಲೇನು?’ ಎಂದು ಹೇಳಿ ನಗುತ್ತಿದ್ದಳು. ಕಡೆಗೂ ಶಾಂಭವಿಗೆ ಮದುವಿಯಾಯ್ತು. ಅತ್ತೆ ಮನೆಗೆ ಹೋಗುವಾಗ ತನ್ನ ಗಂಡನ ಜೊತೆಗೆ ಬಂದು ನನ್ನಮ್ಮನಿಗೆ ನಮಸ್ಕಾರ ಮಾಡಿ ‘ಕಡೀಗೂ ಕನಸು ಖರೆ ಆಯ್ತು ನೋಡಕ್ಕಾ...’ ಎಂದು ಕಣ್ಣಲ್ಲಿ ಆನಂದಭಾಷ್ಪಗಳನ್ನು ಸುರಿಸಿದ್ದಳು.

ಅಮ್ಮನಿಂದಾಗಿ ನಮಗೂ ಕನಸಿನ ಬಗ್ಗೆ ಕುತೂಹಲ. ಬೆಳಿಗ್ಗೆ ಎದ್ದಾಗ ನೆನಪಿದ್ದರೆ ಕನಸಿನ ವರದಿಯಾಪ್ಪಿಸುತ್ತಿದ್ದೆವು. ಹೀಗೊಮ್ಮೆ ನನ್ನಕ್ಕ ತನ್ನ ಕನಸನ್ನು ಹೇಳಿದಾಗ ‘ನನ್ನ ಕೂಸಿಗೆ ಛಲೋ ಕನಸು ಬಿದ್ದದೆ. ಹೊಸಬಟ್ಟೆ ಬರ್ತದೆ...’ ಎಂದು ಅರ್ಥ ಹೇಳಿದ್ದಳು. ನನ್ನಕ್ಕ ಅದೇ ನೆಪಮಾಡಿಕೊಂಡು ಅಪ್ಪನ ಬಳಿ ಹೊಸಬಟ್ಟೆ ಕೊಡಿಸೆಂದು ಹಠ ಹಿಡಿದುಬಿಟ್ಟಳು. ಏನೇ ಸಮಾಧಾನ ಮಾಡಿದರೂ ಬಗ್ಗಲಿಲ್ಲ. ನನ್ನಪ್ಪನಿಗೆ ಸಿಟ್ಟು ನೆತ್ತಿಗೇರಿತ್ತು. ‘ನೀನು ಇಂಥಾ ಹುಚ್ಚುಚ್ಚು ಅರ್ಥನ್ನೆಲ್ಲಾ ಹುಡುಗರಿಗೆ ಹೇಳಿ ನನ್ನ ಜೋಬಿಗೆ ಕತ್ತರಿ ಹಾಕ್ತೀ ನೋಡು...’ ಎಂದು ಅಮ್ಮನ ಮೇಲೆ ಹಾರಾಡಿದ್ದರು. ಕೊನೆಗೂ ಸಾಯಂಕಾಲ ಬಟ್ಟೆಯಂಗಡಿಗೆ ಹೋಗಿ ಅಕ್ಕನಿಗೆ ಬಟ್ಟೆ ಕೊಡಿಸಿದರು. ಆದರೆ ನಾನು ಸುಮ್ಮನಿರುತ್ತೇನೆಯೆ? ನನಗೂ ಹೊಸಬಟ್ಟೆ ಬೇಕೆಂದು ಹಠ ಹಿಡಿದೆ. ನಮ್ಮಮ್ಮ ‘ನಿಂಗೇನು ಅಂಥಾ ಕನಸು ಬಿದ್ದದೇನೋ?’ ಎಂದು ದಬಾಯಿಸಲು ಪ್ರಯತ್ನಿಸಿದ್ದಕ್ಕೆ ನಾನು ‘ನಿನ್ನೆ ರಾತ್ರಿ ಬಿದ್ದಿಲ್ಲ ಅಂದ್ರೆ ಏನಾಯ್ತು. ಈವತ್ತು ರಾತ್ರಿ ನಂಗೆ ಅಂಥದೇ ಕನಸು ಬೀಳ್ತದೆ’ ಅಂತ ವಾದ ಮಾಡಿ ಹೊಸಬಟ್ಟೆ ಕೊಡಿಸಿಕೊಂಡಿದ್ದೆ. ಆದರೆ ಹೊಸಬಟ್ಟೆಗಳನ್ನು ಹಾಕಿಕೊಂಡಿದ್ದು ಮತ್ತೆ ಹಬ್ಬ ಬಂದಾಗಲೇ! ಹಬ್ಬದ ದಿನದ ಹೊರತಾಗಿ ಬಿಡಿ ದಿನಗಳಲ್ಲಿ ಹೊಸಬಟ್ಟೆ ಯಾರೂ ಹಾಕುತ್ತಿರಲಿಲ್ಲ.

ದೇವರಿಗೆ ಹರಕೆ ಹೊತ್ತು ವಿಶೇಷವಾಗಿ ದೇಹವನ್ನು ಶ್ರಮಕ್ಕೊಡ್ಡಿ ಸೇವೆ ಮಾಡುವಾಗ ಕನಸನ್ನು ಅತ್ಯಂತ ಮಹತ್ವದ್ದಾಗಿ ಕಾಣುತ್ತಾರೆ. ತಮ್ಮ ಸೇವೆಗೆ ಪ್ರತಿಫಲವಾಗಿ ದೇವರು ಕನಸಿನ ಮೂಲಕವೇ ಉತ್ತರ ಕೊಡುತ್ತಾನೆಂಬ ನಂಬಿಕೆ. ಕನಸು ಬೀಳುವವರೆಗೆ ತಮ್ಮ ಸೇವೆಯನ್ನು ನಿಲ್ಲಿಸುವುದಿಲ್ಲ. ನನ್ನ ತಂದೆಯ ಅಕ್ಕನೊಬ್ಬರು ಇಂತಹ ಸೇವೆಯಾಂದನ್ನು ಸಂಕಲ್ಪಿಸಿಕೊಂಡು ನಮ್ಮೂರಿಗೆ ಬಂದರು. ಅವರು ಜೀವನದಲ್ಲಿ ತುಂಬಾ ನೊಂದಿದ್ದರು. ಚಿಕ್ಕಂದಿನಲ್ಲೇ ಗಂಡನನ್ನು ಕಳೆದುಕೊಂಡಿದ್ದರು. ಹೆಣ್ಣು ಹುಡುಗರಿಗೆ ಮದುವೆಯಾಗಿರಲಿಲ್ಲ. ಜೊತೆಗೆ ಇದ್ದೊಬ್ಬ ಗಂಡು ಹುಡುಗನಿಗೆ ವಿದ್ಯೆ ಹತ್ತಿರಲಿಲ್ಲ. ಚಿಕ್ಕಪುಟ್ಟ ಸೇವೆಗಳನ್ನು ಆಗಾಗ ಮಾಡುತ್ತಿದ್ದರಾದರೂ ಬದುಕಿನಲ್ಲಿ ಯಾವುದೇ ಏಳ್ಗೆಯಾಗದ್ದರಿಂದ ರೋಸಿ ದೊಡ್ಡ ಸೇವೆಯಾಂದನ್ನೇ ಸಂಕಲ್ಪಿಸಿಕೊಂಡು ಬಂದಿದ್ದರು. ನನ್ನ ಮನೆಯಿಂದ ರಾಯರಮಠ ಸುಮಾರು ಅರ್ಧ ಕಿಲೋಮೀಟರ್‌ ದೂರದಲ್ಲಿದೆ. ಮನೆಯಿಂದ ಅಲ್ಲಿಯವರೆಗೆ ಹೆಜ್ಜೆ ನಮಸ್ಕಾರ ಹಾಕುವುದಾಗಿ ಬೇಡಿಕೊಂಡಿದ್ದರು. ಬೆಳಿಗ್ಗೆ ಜನರೆಲ್ಲಾ ಎದ್ದ ಮೇಲೆ ಹಾಗೆ ರಸ್ತೆಯಲ್ಲಿ ನಮಸ್ಕಾರ ಹಾಕುತ್ತಾ ಹೋಗುವುದಕ್ಕೆ ಸಂಕೋಚ. ಆದ್ದರಿಂದ ಸೂರ್ಯೋದಯಕ್ಕೆ ಮುಂಚೆಯೇ ಬಾವಿಯಲ್ಲಿ ಸ್ನಾನ ಮಾಡಿ ಸೇವೆ ಪ್ರಾರಂಭಿಸುತ್ತಿದ್ದರು. ರಸ್ತೆ ದೀಪಗಳೂ ಇರುತ್ತಿರಲಿಲ್ಲವಾದ್ದರಿಂದ ನನ್ನಮ್ಮ ಕೈಯಲ್ಲಿ ಲಾಂದ್ರವನ್ನು ಹಿಡಿದುಕೊಂಡು ಅವರ ಜೊತೆಯಲ್ಲಿ ಹೋಗುತ್ತಿದ್ದಳು. ಅವರು ವಾಪಾಸಾಗುವ ಹೊತ್ತಿಗೆ ಬೆಳಕು ಹರಿದು ನಲ್ಲಿ ನೀರು ಬರುವ ಸಮಯವಾಗುತ್ತಿತ್ತು. ಆದರೆ ಅದೇಕೋ ಅವರಿಗೆ ಸ್ವಪ್ನವೇ ಆಗಲಿಲ್ಲ. ವಾರವಾದರೂ ಯಾವುದೇ ಫಲದ ಸೂಚನೆಗಳು ಕನಸಿನಲ್ಲಿ ಕಾಣಲಿಲ್ಲ. ‘ಯಾಕೋ ರಾಯರು ನನ್ನ ಕಡೆ ಕಣ್ಣು ಬಿಟ್ಟು ನೋಡವಲ್ಲರು...’ ಎಂದು ಪೇಚಾಡುತ್ತಲೇ ಸೇವೆ ಮುಂದುವರೆಸುತ್ತಿದ್ದರು. ಅವರಿಗೆ ಕಾಲು ನೋವು ಶುರುವಾಗಿ, ಅವರ ಸ್ಥಿತಿಯನ್ನು ನೋಡಲು ನಮಗೂ ಸಾಧ್ಯವಾಗದಂತಾಗಿತ್ತು. ಕಡೆಗೂ ಒಂದು ದಿನ ಅವರಿಗೆ ಕನಸು ಬಿತ್ತು. ಒಳ್ಳೆಯ ಸೂಚನೆಗಳು ಆ ಕನಸಿನಲ್ಲಿ ಕಂಡಿದ್ದವು. ಆ ದಿನ ನಮ್ಮ ಮನೆಯಲ್ಲಿ ಹಬ್ಬದ ಸಂಭ್ರಮವಿತ್ತು. ‘ಒಳ್ಳೆ ಕನಸು ಬಿದ್ದದೆ...’ ಅಂತ ನಾವೆಲ್ಲಾ ಮಾತನಾಡಿಕೊಳ್ಳುತ್ತಾ ಖುಷಿಖುಷಿಯಿಂದಿದ್ದೆವು. ಅಮ್ಮ ಹಬ್ಬದಡಿಗೆಯನ್ನು ಮಾಡಿದ್ದಳು. ಮತ್ತೆ ಅವರು ಊರಿಗೆ ವಾಪಾಸು ಹೊರಡುವಾಗ ನನ್ನಮ್ಮ ‘ವೈನಿ, ಕಷ್ಟ-ಸುಖ ದೇವರು ಕೊಟ್ಟಂಗೆ ಬರಲಿ. ಬಂದಿದ್ದು ಅನುಭವಿಸೋದು ಇದ್ದಿದ್ದೇ ಅದೆ. ಆದರೆ ಇನ್ನು ಮುಂದೆ ಇಂಥಾ ದೇಹ ದಂಡನೆ ಮಾಡೋ ಸೇವಾನ್ನ ಸಂಕಲ್ಪಿಸ್ಕೊಳ್ಳ ಬೇಡರಿ. ನನ್ನ ಆಣಿ ಅದೆ’ ಅಂತ ಅವರಿಂದ ಪ್ರಮಾಣ ಮಾಡಿಸಿಕೊಂಡಿದ್ದಳು.

ಪರೀಕ್ಷೆ ಮುಗಿಸಿ ರಜೆಯ ದಿನಗಳಲ್ಲಿ ನಮ್ಮ ತಂದೆ-ತಾಯಿ ನಮ್ಮನ್ನು ತೀರ್ಥಕ್ಷೇತ್ರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ವಾರಗಟ್ಟಲೆ ಅಲ್ಲಿದ್ದು, ದೇವರ ಸೇವೆ ಮಾಡಿ ಬರುತ್ತಿದ್ದೆವು. ತೀರ್ಥಕ್ಷೇತ್ರಗಳಲ್ಲಿ ಬಿದ್ದ ಕನಸಿಗೆ ಅತ್ಯಂತ ಮಹತ್ವವಿರುತ್ತಿತ್ತು. ನಾವು ಹುಡುಗರೂ ದೇವರಿಗೆ ಸೇವೆ ಮಾಡುತ್ತಿದ್ದೆವಾದರೂ ಅದಕ್ಕೆ ಬಯಸುತ್ತಿದ್ದ ಪ್ರತಿಫಲ ಒಂದೇ ಒಂದು - ಪರೀಕ್ಷೆಯಲ್ಲಿ ಪಾಸಾಗುವುದು! ಹೀಗೊಮ್ಮೆ ಸೇವೆ ಮಾಡುವಾಗ ನನಗೆ ವಿಚಿತ್ರ ಕನಸೊಂದು ಬಿದ್ದಿತ್ತು. ನನ್ನ ಕನಸಿನಲ್ಲಿ ನಟಸಾರ್ವಭೌಮ ಡಾ. ರಾಜ್‌ಕುಮಾರ್‌ರವರು ನನ್ನ ಬಳಿಗೆ ಬಂದಿದ್ದರು. ‘ನನ್ನ ಮಗ ಗಣಿತದಾಗೆ ಭಾಳ ದಡ್ಡ. ಪಾಸಾಗೋದೇ ಕಷ್ಟ ಆಗ್ಯದೆ. ಸ್ವಲ್ಪ ನಿನ್ನ ನೋಟ್ಸ್‌ ಕೊಟ್ಟಿರು. ಅವನು ಓದಿಕೊಂಡು ವಾಪಾಸು ಕೊಡ್ತಾನೆ’ ಅಂತ ಬೇಡಿಕೊಂಡರು. ಅಣ್ಣಾವ್ರೇ ಕೇಳಿದ ಮೇಲೆ ಇನ್ನೇನಿದೆ? ಆದರೂ ನನ್ನ ಜಾಗ್ರತೆಯಲ್ಲಿ ನಾನಿರಬೇಕೆಂದು ನಿಶ್ಚಯಿಸಿ ‘ನೋಟ್ಸ್‌ ಬುಕ್ಕದಾಗಿನ ಖಾಲಿ ಹಾಳಿ ಹರಕೊಳ್ಳಂಗಿಲ್ಲ’ ಎಂದು ಹೇಳಿ ಕೊಟ್ಟಿದ್ದೆ. ಎಚ್ಚರವಾಗಿತ್ತು ! ನನ್ನಮ್ಮನ ಬಳಿ ಈ ಕನಸಿಗೂ ಅರ್ಥ ಇತ್ತು. ‘ರಾಜ್‌ಕುಮಾರ್‌ ಅಂದ್ರೆ ಒಳ್ಳೆ ಮನುಷ್ಯ. ಕುಡಿತ, ಸಿಗರೇಟು, ಸೂಳೇರು... ಒಂದೂ ಇಲ್ಲ. ಅಪ್ಪ-ಅಮ್ಮನ್ನ ಕಂಡರೆ ಗೌರವದಿಂದ ಮಾತಾಡ್ತಾನೆ. ಅಂಥಾತ ಕನಸಿನಾಗೆ ಬಂದರೆ ಒಳ್ಳೇದೇ ಆಗ್ತದೆ. ಆದರೆ ನೋಟ್‌ ಪುಸ್ತಕ ನೀನು ಕೊಡಬಾರದಿತ್ತು. ನಮ್ಮನಿ ಸರಸ್ವತಿನ್ನ ಇನ್ನೊಬ್ಬರಿಗೆ ಕೊಟ್ಟಂಗಾಯ್ತು’ ಎಂದು ಪೇಚಾಡಿದ್ದರು. ಈಗಾಗಲೇ ಕನಸಿನ ಅರ್ಥ ಕಂಡುಹಿಡಿಯಲು ಪಳಗಿದ್ದ ನಾನು ‘ವಾಪಾಸು ಕೊಡ್ತೀನಿ ಅಂತ ಹೇಳಿ ತೊಗೊಂಡಾರಮ್ಮ. ನಾಳೆ-ನಾಡದ್ದು ಕನಸಿನಾಗೆ ವಾಪಾಸು ಕೊಡ್ತಾರೇನೋ ನೋಡೋಣ’ ಎಂದು ಹೊಸ ಅರ್ಥವನ್ನು ಕೊಟ್ಟಿದ್ದೆ.

ಬೆಳಗಿನ ಜಾವ ಬಿದ್ದ ಕನಸು ಸತ್ಯವಾಗುತ್ತದೆಂಬುದೊಂದು ನಂಬಿಕೆ. ಆದರೆ ಒಳ್ಳೆಯ ಕನಸು ಬಿದ್ದ ನಂತರ ಮತ್ತೆ ಮಲಗಿಕೊಳ್ಳಬಾರದು ಎಂಬುದು ಮತ್ತೊಂದು ನಂಬಿಕೆ. ಒಮ್ಮೆ ನಮ್ಮಕ್ಕನಿಗೆ ಮೈಯಲ್ಲಿ ಚೆನ್ನಾಗಿರಲಿಲ್ಲ. ಎಷ್ಟು ದಿನವಾದರೂ ಜ್ವರ ಇಳಿದಿರಲಿಲ್ಲ. ಅಂತಹ ದಿನದಲ್ಲೊಮ್ಮೆ ಅಮ್ಮಗೆ ಅಕ್ಕನ ಜ್ವರ ವಾಸಿಯಾಗುತ್ತದೆಂಬ ಕನಸು ಬೆಳಗಿನ ಜಾವ ಬಿದ್ದಿತ್ತು. ಎಚ್ಚರಗೊಂಡ ಅಮ್ಮ ಮತ್ತೆ ನಿದ್ದಿ ಮಾಡಿರಲಿಲ್ಲ. ಸುಮಾರು ಎರಡು ಮೂರು ಗಂಟೆಗಳ ಕಾಲ ಹೂಬತ್ತಿ ಹೊಸೆಯುತ್ತಾ ಕುಳಿತಿದ್ದರು. ಮಧ್ಯೆದಲ್ಲಿ ಎಚ್ಚರಗೊಂಡ ಅಪ್ಪ ‘ಇನ್ನೂ ಬೆಳಕಾಗಲಿಕ್ಕೆ ತುಂಬಾ ಹೊತ್ತು ಅದೆ. ಮಲ್ಕೋ ಬಾರೆ...’ ಎಂದರೆ ‘ಕೂಸಿಗೆ ಜ್ವರ ಬಿಡ್ತದಂತೆ ಸ್ವಪ್ನ ಆಗ್ಯದೆ ರೀ... ಮತ್ತೆ ಮಲಗಿಕೊಂಡು ಅದರ ಫಲ ಕಳಕೊಂಡ್ರೆ ಹೆಂಗೆ? ವಾರದಿಂದ ಜ್ವರ ಬಿಡದಂಗೆ ಸತಾಯಿಸ್ತಾ ಅದೆ’ ಎಂದು ಹೇಳಿ ಮತ್ತೆ ಮಲಗಿರಲಿಲ್ಲ.

ಮೂಲೆ ಮನೆಯ ಸಾವಿತ್ರಿಗೆ ಬಳ್ಳಾರಿ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಒಂದೆರಡು ತಿಂಗಳು ಮುಂಚೆ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಗಂಡಿನ ಕಡೆಯವರಿಗೆ ಅವಳು ಬೇಡವಾದಳು. ಅತ್ಯಂತ ಕುತಂತ್ರದಿಂದ ‘ನಮಗೆ ಆ ಹುಡುಗಿನ್ನ ಮದುವಿ ಆಗಬೇಡ ಅಂತ ಸ್ವಪ್ನದಾಗೆ ನಮ್ಮನಿ ದೇವರು ಬಂದು ಹೇಳಾರೆ’ ಎಂದು ಕನಸಿನ ನೆಪವೊಡ್ಡಿ ಮದುವೆಯನ್ನು ಮುರಿದು ಬಿಟ್ಟರು. ಸಾವಿತ್ರಿಯ ಮನೆಯವರೆಲ್ಲಾ ಗಂಡಿನ ಅಪ್ಪ-ಅಮ್ಮನ ಮುಂದೆ ಹೋಗಿ ಕಣ್ಣೀರು ಹಾಕಿದರೂ ಯಾರೂ ಕದಲಲಿಲ್ಲ. ‘ನಮಗೇನೋ ನಿಮ್ಮ ಹುಡುಗೀನ್ನ ಮಾಡಿಕೊಳ್ಳಲಿಕ್ಕೆ ಭಾಳ ಇಷ್ಟ ಅದೆ. ಆದರೆ ಕನಸು ಬಿದ್ದ ಮೇಲೆ ಏನು ಮಾಡಲಿಕ್ಕೆ ಬರ್ತದೆ ಹೇಳ್ರಿ?’ ಎಂದು ತಾರಮ್ಮಯ್ಯ ಮಾಡಿ ಕಳುಹಿಸಿಬಿಟ್ಟರು. ಒಂದು ದಿನ ಸಾವಿತ್ರಿಯ ಅಮ್ಮ ನಮ್ಮ ಮನೆಗೆ ಬಂದು ತಮ್ಮ ಕಷ್ಟವನ್ನು ತೋಡಿಕೊಂಡರು. ‘ಈ ಕನಸಿನ ಮನಿ ಹಾಳಾಗ... ಊಟ ಉಂಡು ಅರಗಿಸಿಕೊಳ್ಳೋದು ಆಗದ್ದಕ್ಕೆ ಬಿದ್ದ ಕನಸಿಗೆ ಇಲ್ಲದ ಅರ್ಥ ಕಟ್ಟಿ ನಮ್ಮ ಹುಡುಗಿ ಕುತ್ತಗಿ ಕೊಯ್ದು ಬಿಟ್ರು ನೋಡ್ರಿ. ಆ ದೇವರು ಮನುಷ್ಯರಿಗೆ ಕನಸು ಕಾಣೋ ಶಾಪ ಯಾಕೆ ಕೊಟ್ಟಾನೋ ಅಂತ ಅನಿಸ್ತದೆ...’ ಎಂದು ವ್ಯಗ್ರರಾಗಿ ಮಾತನಾಡಿದ್ದರು.

ಅಮ್ಮ ಸಾಯುವ ದಿನಗಳಲ್ಲಿ ಕನಸಿಗೆ ತುಂಬಾ ಹೆದರಿಕೊಳ್ಳುತ್ತಿದ್ದಳು. ‘ಕರಕೊಂಡು ಹೋಗಲಿಕ್ಕೆ ಬರ್ತಾರವ್ವಾ...’ ಎಂದು ಬಿದ್ದ ಕನಸನ್ನು ಭಯದಿಂದ ವಿವರಿಸಿ ಅಳುತ್ತಿದ್ದಳು. ಕೆಟ್ಟ ಕನಸು ಬಿದ್ದು ಎಚ್ಚರವಾದಾಗ ಮತ್ತೆ ಮಲಗಿ ಬಿಟ್ಟರೆ ಅದರ ಫಲ ಇರುವದಿಲ್ಲ ಎಂಬ ನಂಬಿಕೆಯಲ್ಲಿ ಮತ್ತೆ ಮಲಗಲು ಪ್ರಯತ್ನಿಸುತ್ತಿದ್ದಳಾದರೂ ನಿದ್ದೆ ಬರದೆ ಒದ್ದಾಡುತ್ತಿದ್ದಳು. ರಾತ್ರಿ ಮಲಗುವದಕ್ಕೆ ಮುನ್ನ ಕನಸು ಬೀಳದಂತಿರಲು ಯಾವುಯಾವುದೋ ಮಂತ್ರಗಳನ್ನು ಪಠಿಸುತ್ತಿದ್ದಳು. ತನ್ನ ನಿದ್ರೆಯ ಸಾಮ್ರಾಜ್ಯಕ್ಕೆ ಕನಸುಗಳಿಗೆ ಪ್ರವೇಶವಿಲ್ಲದಂತೆ ಕಾವಲು ಕಾಯುವುದಕ್ಕಾಗಿ ಭೂತರಾಜರ ಫೋಟೋ ಒಂದನ್ನು ತಲೆಯ ದೆಸೆಯಲ್ಲಿ ಇಟ್ಟುಕೊಳ್ಳುತ್ತಿದ್ದಳು. ಆದರೂ ಅಮ್ಮನಿಗೆ ಕನಸುಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ - ಹಾಗೆಯೇ ಸಾವಿಂದಲೂ! ಹಾಸಿಗೆಯ ಮೇಲೆ ಮಲಗಿದಂತೆಯೇ ಸತ್ತು ಹೋದ ಅಮ್ಮನ ಸಾವಿನ ಸುದ್ದಿ ಬಂದಾಗ ನನ್ನ ಮನಸ್ಸಿಗೆ ಮೂಡಿದ್ದು ಒಂದೇ ಪ್ರಶ್ನೆ - ‘ಸಾಯುವದಕ್ಕೆ ಮುಂಚೆ ಅಮ್ಮ ಕಂಡ ಕನಸಾದರೂ ಯಾವುದು?’

ಹೇಳಿ, ಕನಸುಗಳ ಲೇಖನ ಹೇಗನ್ನಿಸಿತು ?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more