• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರಸ್ವತಿ ಪುತ್ರರ ಸಹವಾಸದಲ್ಲೊಂದು ಸಂಜೆ

By ವಿಶಾಖ ಎನ್‌.
|

‘ಹನ್ನೆರಡನೇ ಕ್ಲಾಸಿನವರೆಗೆ ಎಲ್ಲಾ ಪಠ್ಯಗಳನ್ನು ಅಪ್ಪಟ ಕನ್ನಡದಲ್ಲಿ ಕಲಿಸುವಂಥಾ ಶಾಲೆ ಬೇಕು. ವಿಜ್ಞಾನ, ಸಮಾಜ ಶಾಸ್ತ್ರ, ಇಂಗ್ಲಿಷು- ಎಲ್ಲವನ್ನೂ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಅಚ್ಚುಕಟ್ಟಾಗಿ ಕಲಿಸುವಂಥ ಶಾಲೆ. ಯಾರಾದರೂ ಅಂಥ ಶಾಲೆ ತೆಗೆದರೆ ನಾನು ಹೋಗಿ, ಇಂಗ್ಲಿಷ್‌ ಪಾಠ ಮಾಡಲು ಸಿದ್ಧ. ನನಗೆ ಯಾರು ಜೊತೆಯಾಗುವಿರಿ?'

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಇಟ್ಟ ಈ ಕಳಕಳಿಯ ಪ್ರಸ್ತಾವನೆಗೆ ಎದೆ ತುಂಬಿ ಬರೆದ ಕವಿ ಜಿ.ಎಸ್‌.ಶಿವರುದ್ರಪ್ಪ , ಪ್ರೊ.ರಾಮಚಂದ್ರ ಶರ್ಮ, ಡಾ. ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟ, ಸುಮತೀಂದ್ರ ನಾಡಿಗ, ಡಾ. ಎಚ್‌.ಎಸ್‌.ವೆಂಕಟೇಶ ಮೂರ್ತಿ , ಸಿ.ಆರ್‌. ಸಿಂಹ ಎಲ್ಲರೂ ತಲೆದೂಗಿದರು. ದಟ್ಸ್‌ಕನ್ನಡ ಸಂಪಾದಕ ಎಸ್‌.ಕೆ.ಶಾಮಸುಂದರ ಆ ಶಾಲೆಯ ಸೂಪರ್‌ವೈಸರ್‌ ಆಗುವುದಾಗಿ ಚಟಾಕಿಯನ್ನೂ ಹಾರಿಸಿದರು. ಅಲ್ಲೇ ಕೂತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ ಮುಂದಿನ ಶೈಕ್ಷಣಿಕ ವರ್ಷದಲ್ಲೇ ಅಂಥ ಶಾಲೆಯನ್ನು ತೆರೆಯುವ ಕಳಕಳಿ ತೋರಿದರು. ಅನಂತಮೂರ್ತಿ ಪ್ರಸ್ತಾವನೆ ಜೀವ ಪಡಕೊಂಡದ್ದು ಹೀಗೆ.

ನ್ಯೂಯಾರ್ಕ್‌ನ ಸೆಂಟ್ರಲ್‌ ಪಾರ್ಕ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಪ್ರತಿಷ್ಠಾಪಿತವಾಗಲು ಕಾರಣೀಭೂತರಾದ, ‘ಭಾರತ ಬೃಹತ್‌ ಬೇಲಿ' ಕೃತಿಯ ಲೇಖಕ ಡಾ.ಎಚ್‌.ಕೆ.ಚಂದ್ರಶೇಖರ್‌ ಏರ್ಪಡಿಸಿದ್ದ ಸ್ನೇಹಕೂಟದಲ್ಲಿ ಬೆಂಗಳೂರಿನ ಆಯ್ದ ಸರಸ್ವತಿ ಪುತ್ರರ ಕಲರವ ನಡೆಯಿತು. ಶುಕ್ರವಾರ (ಆ. 08) ಸಂಜೆ ಜಯನಗರದ ಮಾಧವನ್‌ ಪಾರ್ಕಿನ ಪಕ್ಕದಲ್ಲಿರುವ ಚಂದ್ರಶೇಖರ್‌ ಅವರ ಮನೆಯಲ್ಲಿ ಸಾಹಿತ್ಯದ ಹನಿಹನಿಗಳ ಚುಕುಟು ಗುಟುಕು. ಮಹಾಬಲಮೂರ್ತಿ ಕೊಡ್ಲೆಕೆರೆ, ಸಿ.ಎನ್‌.ಕೃಷ್ಣಮಾಚಾರ್‌, ಬಿ.ಎಸ್‌.ಕೇಶವ ರಾವ್‌, ಎಂ.ಎನ್‌.ವ್ಯಾಸರಾವ್‌, ಚಂದ್ರಶೇಖರ್‌ ಹಾಗೂ ಅವರ ಪತ್ನಿ ಶ್ರೀದೇವಿ , ಅನಂತಮೂರ್ತಿ ಪತ್ನಿ ಎಸ್ತರ್‌ ಅಘೋಷಿತ ಸಾರಸ್ವತ ಸಭೆಯ ಮಾತು ಮಂಥನಕ್ಕೆ ಕಿವಿಗಳಾಗಿದ್ದರು. ಕೆಲವೇ ಕೆಲವು ಆಹ್ವಾನಿತರ ಪೈಕಿ ದಟ್ಸ್‌ಕನ್ನಡ ಕೂಡ ಒಂದಾಗಿತ್ತು.

ಇಂಗ್ಲಿಷ್‌ ಸುಳ್ಳಾಡುವ ಭಾಷೆ ಎಂಬುದನ್ನು ಅನಂತಮೂರ್ತಿ ಮತ್ತೆ ಮತ್ತೆ ಪ್ರತಿಪಾದಿಸಿದರು. ಎಂಥಾ ಕ್ರೌರ್ಯದ ಸಂಗತಿಯನ್ನೂ ಹೂವಾಗಿಸುವ ಇಂಗ್ಲಿಷ್‌ನ ಭೋಳೇತನವನ್ನು ಖಂಡಿಸಿದ ಅವರು, ಕನ್ನಡ ಭಾಷೆ ಅದಕ್ಕಿಂತ ಎಷ್ಟು ಮೇಲಿದೆ ಅನ್ನುವುದನ್ನು ಪಂಪ- ಬಸವರ ಉದಾಹರಣೆಗಳನ್ನು ಕೊಟ್ಟು ಹೇಳಿದರು.

ಕಿಟೆಲ್‌ ಹಾಗೂ ಶರೀಫರ ಸುತ್ತ...

ಲಕ್ಷ್ಮೀನಾರಾಯಣ ಭಟ್ಟರ ಮಾತು ಆಧುನಿಕ ಕನ್ನಡದ ಮೊದಲ ಕವಿ ಕಿಟೆಲ್‌ ಅಲ್ಲ ಎಂಬ ತಕರಾರಿನ ಸುತ್ತಲೇ ಗಿರಕಿ ಹೊಡೆಯಿತು. ಇತ್ತೀಚೆಗೆ ಸಂಶೋಧಕ ಶ್ರೀನಿವಾಸ ಹಾವನೂರ್‌ ಜರ್ಮನಿಗೆ ಹೋಗಿ, ಕಿಟೆಲ್‌ರ ಕೆಲವು ಕವನಗಳನ್ನು ಪತ್ತೆ ಮಾಡಿದ್ದು, ಅವೇ ಆಧುನಿಕ ಕನ್ನಡದ ಮೊದಲ ಕವನಗಳು ಎಂದು ಪ್ರತಿಪಾದಿಸಿದರು. ಕಿಟೆಲ್‌ ಕವನಗಳ ಬರೆದಿದ್ದು 1862ರಲ್ಲಿ. ಅದಕ್ಕೂ ಮುಂಚೆಯೇ ಶಿಶುನಾಳ ಷರೀಫರು ಅಪ್ಪಟ ಕನ್ನಡದಲ್ಲಿ ಕವನಗಳನ್ನು ಬರೆದಿದ್ದರು. ಅವರೇ ಆಧುನಿಕ ಕನ್ನಡದ ಮೊದಲ ಕವಿ ಅನ್ನುವುದು ಲಕ್ಷ್ಮೀನಾರಾಯಣ ಭಟ್ಟರ ವಾದ.

ಸೆಕ್ಯುಲರ್‌ ಎಂಬ ಕಾರಣಕ್ಕೆ ಕಿಟೆಲ್‌ ಕವನಗಳು ಆಧುನಿಕ ಕನ್ನಡದ ಮೊದಲ ಕವನಗಳು ಅನಿಸಿರಬಹುದು ಎಂದು ಅನಂತಮೂರ್ತಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಶರ್ಮ ಕೂಡ ಸಮರ್ಥಿಸಿದರು. ಕೇವಲ ಧರ್ಮನಿಷ್ಠೆ ಬಿಟ್ಟು ಬರೆದವೆಲ್ಲ ನವ್ಯ ಎನ್ನುವುದಾದರೆ ಡಿ.ವಿ.ಜಿ.ಯವರ ಮುಕ್ತಕಗಳು ಹಾಗೂ ಮಾಸ್ತಿಯವರ ಬಿನ್ನಹವನ್ನು ಏನನ್ನುತ್ತೀರಿ ಅನ್ನೋದು ಎಚ್‌ಎಸ್‌ವಿ ಪ್ರಶ್ನೆ. ಅತ್ತಿತ್ತ ಹರಿದಾಡಿದ ಮಾತಿನಲ್ಲಿ ಚರ್ಚೆಗೆ ಒಂದು ಅಂತಿಮ ಸಲ್ಯುಷನ್‌ ಅಂತೂ ಸಿಗಲೇ ಇಲ್ಲ. ಲಕ್ಷ್ಮೀನಾರಾಯಣ ಭಟ್ಟರ ಹಠದ ಪಟ್ಟು ಕೂಡ ಸಡಿಲವಾಗಲಿಲ್ಲ.

ಮರೆಯಲಾಗದ ಮಹನೀಯರು

ಉಭಯ ಕುಶಲೋಪರಿಯ ವೇಳೆಯಲ್ಲಿ ವೈ.ಕೆ.ಮುದ್ದುಕೃಷ್ಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುರುಮಾಡಲಿರುವ ಮಹತ್ವದ ಕಾರ್ಯಕ್ರಮವೊಂದರ ಬಗ್ಗೆ ಹೇಳಿದರು. ‘ಮನೆಯಂಗಳದಲ್ಲಿ ಮಾತುಕತೆ' ಎಂಬ ಮಾಹೆಗೊಂದು ಕಾರ್ಯಕ್ರಮದಲ್ಲಿ ಒಬ್ಬ ಸಾಧಕರನ್ನು ಅತಿಥಿಯಾಗಿ ಕರೆದು ಮಾತಾಡಿಸಿ, ಕೆಣಕಿ, ಸನ್ಮಾನ ಮಾಡುವ ಪರಿಪಾಟ ಯಶಸ್ವಿಯಾಗಿರುವುದರಿಂದ ಇಲಾಖೆಯ ಉತ್ಸಾಹ ಹೆಚ್ಚಾಗಿದೆ. ಕೆಲಸ- ಕೃತಿ- ಸಾಧನೆಯನ್ನು ಉಳಿಸಿರುವ ಅಗಲಿದ ಮಹನೀಯರನ್ನು ಸ್ಮರಿಸುವ ಸಲುವಾಗಿ ‘ಮರೆಯಲಾಗದ ಮಹನೀಯರು' ಎಂಬ ವಿಚಾರ ಸಂಕಿರಣ ಸ್ವರೂಪದ ಕಾರ್ಯಕ್ರಮ ಸದ್ಯದಲ್ಲೇ ಶುರುವಾಗಲಿದೆ ಎಂದು ಮುದ್ದುಕೃಷ್ಣ ಹೇಳಿದರು. ಇದೂ ಕೂಡ ‘ಮನೆಯಂಗಳದಲ್ಲಿ ಮಾತುಕತೆ' ನಡೆಯುತ್ತಿರುವ ಬೆಂಗಳೂರಿನ ಕನ್ನಡ ಭವನದ ನಯನಾ ಸಭಾಂಗಣದಲ್ಲೇ ನಡೆಯಲಿದೆ.

ಸೈಡ್‌ಲೈಟ್‌- ಪ್ರೇಮಾ ಕಾರಂತರು ಸಿದ್ಧಪಡಿಸುತ್ತಿರುವ ಮಕ್ಕಳ ಟೆಲಿಚಿತ್ರಕ್ಕಾಗಿ ಡಾ. ಎಚ್‌.ಎಸ್‌.ವೆಂಕಟೇಶಮೂರ್ತಿ ಕೆಲಸ ಮಾಡುತ್ತಿದ್ದಾರೆ. ಮೂರು ಹಾಡುಗಳನ್ನು ಬರೆದು ಕೊಟ್ಟಿರುವ ಅವರು, ಸಂಭಾಷಣೆಯ ಸಾಲುಗಳನ್ನು ತಿದ್ದಿ ತೀಡುವುದರಲ್ಲಿ ಈಗ ಬ್ಯುಸಿ.

ಅಮೆರಿಕದಲ್ಲಿ ಲೆಕ್ಕಕ್ಕೆ ಸಿಗದ ಕನ್ನಡಿಗರ ಸಂಖ್ಯೆ, ಅಲ್ಲಿನ ಬದುಕು, ಅಲ್ಲಿನ ಮಕ್ಕಳ ಸಾಮಾಜಿಕ ಬದಲಾವಣೆ ಮೊದಲಾದ ಸಂಗತಿಗಳ ಸುತ್ತ ಹರಟೆ ಹೊಳೆಯಾಯಿತು. ನಡುವೆ ಸಿ.ಎನ್‌.ಕೃಷ್ಣಮಾಚಾರ್‌ ಸಿಡಿಸುತ್ತಿದ್ದ ಚಟಾಕಿ ಊಟದ ನೆಂಚಿಕೆಯ ಉಪ್ಪಿನಕಾಯಿಯಂತಿತ್ತು !

English summary
Dr.H.K.Chandrashekhar organises a get together in his Bangalore house. Dr.URA, GSS, Ramachandra Sharma, HSV, NSL and thatskannada are among the few invities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X