• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಭಿವೃದ್ಧಿ ಕಾರ್ಯಗಳಿಗಾಗಿ ಸ್ವರ್ಣವಲ್ಲೀ ಮಠದಿಂದ ಯಕ್ಷೋತ್ಸವ

By Staff
|
  • ಕೋಡಿಬೆಟ್ಟು ರಾಜಲಕ್ಷ್ಮಿ

ರವೀಂದ್ರ ಕಲಾಕ್ಷೇತ್ರದಲ್ಲಿ ಈಗ ಯಕ್ಷಗಾನದ ಸಂಭ್ರಮ. ಈ ಯಕ್ಷೋತ್ಸವದ ಹೆಸರು ‘ಶಂಭು ಉತ್ಸವ’. ಕೆರೆ ಮನೆ ಶಂಭು ಹೆಗಡೆ ಶೈಲಿಯ ಯಕ್ಷಗಾನಕ್ಕೊಂದು ಗೌರವ. ನ. 6ರ ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷೋತ್ಸವದ ಉದ್ಘಾಟನೆಯಾಯಿತು.

ಯಕ್ಷೋತ್ಸವದ ಹಿಂದೆ ಒಂದು ಧ್ಯೇಯವಿದೆ. ಹಳ್ಳಿ ಮೂಲಗಳಿಂದ ಬೆಂಗಳೂರಿಗೆ ಉನ್ನತ ಅಧ್ಯಯನ, ಪರೀಕ್ಷೆಗಳಿಗಾಗಿ ಬೆಂಗಳೂರಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಈ ವಿಶಾಲ ನಗರದಲ್ಲಿ ವಸತಿ ವ್ಯವಸ್ಥೆಯ ತೊಡಕು ಎದುರಾಗುತ್ತದೆ. ಮೆಜೆಸ್ಟಿಕ್‌ನನಲ್ಲಿ ಬಸ್‌ಇಳಿದ ನಂತರ ಎತ್ತ ಹೋಗಲಿ, ಯಾವ ಹೊಟೆಲ್‌ಗೆ ಹೋದರೆ ಪರವಾಗಿಲ್ಲ ಎಂಬುದೊಂದು ಆತಂಕ. ಈ ಅನಾಥ ಪ್ರಜ್ಞೆಯನ್ನು ಗುರುತಿಸಿದ ಹವ್ಯಕರ ಸ್ವರ್ಣವಲ್ಲೀ ಮಠದ ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನ (ಸಂಪರ್ಕ: honnalli@vsnl.net) ನಗರದಲ್ಲಿ 35 ಲಕ್ಷ ರೂಪಾಯಿ ಅಂದಾಜು ವೆಚ್ಚದ ‘ಅಭ್ಯುದಯ’ ಎಂಬೊಂದು ಹಾಸ್ಟೆಲ್‌ ಕಟ್ಟಡ (Dormetry) ನಿರ್ಮಿಸಲು ಉದ್ದೇಶಿಸಿದೆ. ಈ ಯೋಜನೆಯ ಹಿಂದಿನ ಸ್ಫೂರ್ತಿ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ.

A Perspective view of Abhyudaya hostelಅಭ್ಯುದಯದಲ್ಲಿ ನೀರು, ವಿದ್ಯುತ್‌ಚ್ಛಕ್ತಿ ಇತ್ಯಾದಿಗಳಿಗೆ ತಗಲುವ ವೆಚ್ಚವನ್ನು ಮಾತ್ರ ಪಡೆಯಲಾಗುವುದು. ಈ ಕಟ್ಟಡದ ಸಹಾಯರ್ಥವಾಗಿ ಶಂಭು ಉತ್ಸವವನ್ನು ಆಯೋಜಿಸಲಾಗಿದೆ. ಉತ್ಸವವನ್ನು ದೀಪ ಬೆಳಗಿ ಉದ್ಘಾಟಿಸಿದವರು ಅಮೆರಿಕನ್ನಡಿಗ, ವಿದ್ವಾನ್‌ ಗಜಾನನ ಜೋಶಿ.

ನಮಃ ಸಭಾಭ್ಯಃ, ಸಭಾ ಪತಿಭ್ಯಶ್ಚ... ಎಂದು ಮಾತು ಶುರು ಮಾಡಿದ ಜೋಶಿಯವರು ಯಕ್ಷಗಾನದ ಆಧ್ಯಾತ್ಮ ಆಯಾಮದ ಬಗ್ಗೆ ನಾಲ್ಕು ಮಾತನಾಡಿದರು. ದಕ್ಷಿಣ ಭಾರತವನ್ನೇ ಪ್ರತಿನಿಧಿಸುವ ನಮ್ಮ ಪರಂಪರೆಯ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸಿದ್ಧವಾದುದು. ಗಾನ ಪ್ರಧಾನವಾದ ಈ ಯಕ್ಷಗಾನದ ಪ್ರಸಿದ್ಧಿ ದೊಡ್ಡದು. ಹಿಂದಿನ ಕಾಲದಲ್ಲಿ ವ್ಯಾಜ್ಯಗಳು ಪರಿಹಾರವಾಗಲಿ ಎಂದು ಹರಕೆ ಹೊತ್ತು ಅಂಗದ ಸಂಧಾನ ಪ್ರಸಂಗವನ್ನೋ, ಸಂತಾನಕ್ಕೆ ದಶರಥ ಪುತ್ರ ಕಾಮೇಷ್ಟಿ ಯಾಗವನ್ನೋ, ರೋಗ ಬಂದರೆ ಭೀಷ್ಮ ವಿಜಯ ಪ್ರಸಂಗವನ್ನೋ ಆಡಿಸುತ್ತಿದ್ದರು. ಸ್ವರ್ಣ ವಲ್ಲೀ ಮಠದವರು ದೇಣಿಗೆಗಾಗಿ ಯಾವುದೋ ಪಾಪ್‌ ಹಾಡುಗಾರರನ್ನೋ, ನೃತ್ಯಗಾರರನ್ನೋ ಕರೆಸದೆ ನಮ್ಮ ಪರಂಪರೆಯ ಯಕ್ಷಗಾನ ಉತ್ಸವವನ್ನು ಆಯೋಜಿಸಿರುವುದು ಮೆಚ್ಚತಕ್ಕ ವಿಷಯ ಎಂದು ಜೋಶಿ ಶ್ಲಾಘಿಸಿದರು.

ಉದ್ಘಾಟನೆಯ ಸಾಂಕೇತಿಕ ಕಾರ್ಯಕ್ರಮದ ನಂತರ ಇಡಗುಂಜಿ ಮೇಳದ ಯಕ್ಷಗಾನ ವಾಲಿಮೋಕ್ಷ ನಡೆಯಿತು. ಕಾನನದಲ್ಲಿ ಕಳೆದು ಹೋದ ಸೀತೆಯನ್ನು ಹುಡುಕುವ ರಾಮ ಲಕ್ಷ್ಮಣರ ಒಡ್ಡೋಲಗದೊಂದಿಗೆ ಪ್ರಸಂಗ ಆರಂಭವಾಯಿತು. ನಂತರ ಹನುಮನ ಭೇಟಿ, ಸುಗ್ರೀವನ ಜೊತೆ ಅಗ್ನಿ ಸಾಕ್ಷಿಯಾಗಿ ಸಖ್ಯ ಬೆಳೆಸಿಕೊಳ್ಳುವ ಹಾಗೂ ವಾಲಿ ವಧೆಯ ದೃಶ್ಯಗಳು ಮೂರು ಗಂಟೆಯ ಅವಧಿಯಲ್ಲಿ ಸುಂದರವಾಗಿ ಮೂಡಿ ಬಂದವು.

ವಾಲಿಮೋಕ್ಷ

ಯಕ್ಷಗಾನದುದ್ದಕ್ಕೂ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡವರು ವಾಲಿ- ಸುಗ್ರೀವರು ಮತ್ತು ಹೊಸ್ತೋಟ ಮಂಜುನಾಥ ಭಾಗವತರು. ಹೆಂಡತಿ ಉಮೆಯನ್ನು ಕಳೆದುಕೊಂಡು ಋಷ್ಯಮೂಕದಲ್ಲಿ ಅಡಗಿಕೊಂಡು ಅಪರಿಚಿತ ರಾಮ ಲಕ್ಷ್ಮಣರನ್ನು ಕಂಡು ಭಯಪಡುವ ಸುಗ್ರೀವ, ರಾಮನ ಬೆಂಬಲವಿದ್ದರೂ ವಾಲಿಯನ್ನು ಯುದ್ಧಕ್ಕೆ ಕರೆಯಲು ಅಂಜುವ ಸುಗ್ರೀವನ ಭಾವಾಭಿನಯ ಹಾಗೂ ಕುಣಿತ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿತು.

‘ಅಮಮ ರಾಮ ವಾಲಿಯ ಕೊಲುವನೇ... ’ ಎಂಬ ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕುವ ಸುಗ್ರೀವನ ಮುಖದ ತುಂಬ ರಾಮನ ಕುರಿತು ಸಂಶಯ ಸಂಶಯ ಮತ್ತು ಸಂಶಯ. ತನ್ನ ಮುಂದೆ ನಿಂತು ಯುದ್ಧ ಮಾಡುವವರ ಬಳಿ ಸೋಲೇ ಕಾಣದ ವಾಲಿಯನ್ನು ಯಾರಾದರೂ ಕೊಲ್ಲುತ್ತಾರೆ ಎಂಬುದನ್ನು ಸುಗ್ರೀವ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಕೊನೆಗೆ ಅಗ್ನಿ ಸಾಕ್ಷಿಯ ಸಖ್ಯದಿಂದ ಸುಗ್ರೀವನೆದೆಯಲ್ಲಿ ಒಂದಿಷ್ಟು ಧೈರ್ಯ ಮೂಡುತ್ತದೆ.

ವಾಲಿಯ ಪ್ರವೇಶವಾಗುತ್ತಲೇ ಹೊಸ್ತೋಟ ಮಂಜುನಾಥ ಭಾಗವತರ ಭಾಗವತಿಕೆಯೂ ಕಳೆಯೇರಿತು. ಯುದ್ಧಕ್ಕೆ ಹೊರಡುವ ವಾಲಿಯ ಮುಖದಲ್ಲಿ ತುಂಬು ಗಾಂಭೀರ್ಯ. ಕುಣಿತದಲ್ಲಿ ಕಪಿ ಸಹಜ ಉತ್ಸಾಹ. ಆದರೆ ಮಾತಿನಲ್ಲಿ ಪರಾಕ್ರಮದ, ಅನುಭವದ ಭಾರ. ಆಗ ಬರುತ್ತಾಳೆ ತಾರೆ; ಹೋಗಬೇಡಿ ಎಂದು ಯುದ್ಧಕ್ಕೆ ಎಂದು ಗಂಡನ ತಡೆಯುವುದಕ್ಕೆ. ಯಕ್ಷಗಾನದಲ್ಲಿ ಇದೊಂದು ಮಾಮೂಲಿ ಸೀನ್‌. ಸುಧನ್ವ ಕಾಳಗಕ್ಕೆ ಹೋಗುವಾಗಲೂ ಆತನ ಹೆಂಡತಿ ಬಂದು ತಡೆಯುತ್ತಾಳೆ. ಆಕೆಯನ್ನು ಧಿಕ್ಕರಿಸಿ ಹೋಗುವ ಸುಧನ್ವ ಮಡಿಯುತ್ತಾನೆ. ರಾಕ್ಷಸರು ಯುದ್ಧಕ್ಕೆ ಹೋಗುವಾಗಲೂ ಅವರ ಮಡದಿಯರು ಹೀಗೆ ತಡೆಯುವುದುಂಟು.

ಸಾವು ವಾಲಿಗೂ ಹೊರತಲ್ಲ ಅಲ್ಲವೇ ? ಮಗ ಅಂಗದನ ಮೂಲಕ ತಾರೆ- ರಾಮನ ಬಗ್ಗೆ ಕೇಳಿದ ವಾರ್ತೆಗಳನ್ನು ವಾಲಿ ನಿರ್ಲಕ್ಷಿಸುತ್ತಾನೆ. ತ್ರಿಮೂರ್ತಿಗಳನ್ನು ಗೆಲ್ಲಬಲ್ಲ ಗಂಡನ ಬಗ್ಗೆ ನಿಂಗ್ಯಾಕೆ ಇವತ್ತು ಸಂಶಯ ಬಂತು ಎಂದು ತಾರೆಯನ್ನು ಸಮಾಧಾನ ಪಡಿಸುವ ವಾಲಿ ಯುದ್ಧ ರಂಗಕ್ಕೆ ತೆರಳುತ್ತಾನೆ.

ವಾಲಿ-ಸುಗ್ರೀವರ ಕಾಳಗದಲ್ಲಿ ಮರೆಯಲ್ಲಿ ನಿಂತು ವಾಲಿಗೆ ರಾಮ ಬಾಣ ಬಿಡುವವುದನ್ನೇ ಪ್ರೇಕ್ಷಕರು ಕಾಯುತ್ತಿದ್ದರು. ಯಾಕೆಂದರೆ ಮಾತಿನ, ವಾದದ, ಚರ್ಚೆಯ ರಸಘಟ್ಟ ಶುರುವಾಗುವುದೇ ವಾಲಿ ರಾಮ ಸಂಭಾಷಣೆಯ ಈ ಸಂದರ್ಭದಲ್ಲಿ.

ಆದರೆ ರಾಮನ ಪಾತ್ರಧಾರಿಗೆ ವಾದದಲ್ಲಿ ಆಸಕ್ತಿ ಇದ್ದಂತೆ ಕಾಣಿಸಲಿಲ್ಲ. ಇರಿಯುತ್ತಿರುವ ರಾಮಬಾಣವನ್ನು ತಡೆ ಹಿಡಿದುಕೊಂಡು ವಾಲಿ ರಾಮನ ಮೂದಲಿಸುತ್ತಾನೆ. ಈ ಸಂದರ್ಭದಲ್ಲಿ ಇಡೀ ಪ್ರೇಕ್ಷಕ ವರ್ಗದ ಗಮನ ಭಾಗವತರ ಹಾಗೂ ವಾಲಿಯ ಮಾತುಗಳ ನಡುವೆ ಕಳೆದುಹೋಗಿತ್ತು. ಅತ್ತ ಮಂಜುನಾಥರ ಭಾಗವತಿಕೆಗೆ ಸಾಲು ಸಾಲಾಗಿ ಬೀಳುವ ಚಪ್ಪಾಳೆ ಒಂದು ಕಡೆಯಾದರೆ, ಅಸಹಾಯಕ ವಾಲಿಯ ಅಭಿನಯ ಹಾಗೂ ಧರ್ಮದ ಮಾತುಗಳು ಇಡೀ ಯಕ್ಷಗಾನಕ್ಕೆ ಮೆರುಗು ನೀಡಿತ್ತು.

‘ನೀನೇ...ದಶರಥ ನೃಪತಿಯ ಸೂನು... ಸಾಮ್ರಾಜ್ಯಕ್ಕೆ ಸಲ್ಲದವನು... ’ ಎಂದು ವಾಲಿ ರಾಮನೊಡನೆ ಮಾತಿಗಿಳಿಯುತ್ತಾನೆ. ರಾಜ್ಯಲಕ್ಷ್ಮಿ ಹಾಗೂ ಮನೆಯ ಭಾಗ್ಯ ಲಕ್ಷ್ಮಿಯನ್ನು ಕಳೆದುಕೊಂಡು ಭಾಗ್ಯಲಕ್ಷ್ಮಿಯ ಹುಡುಕಾಟಕ್ಕೆ ಪುಕ್ಕಲು ತಮ್ಮ ಸುಗ್ರೀವನ ಸಖ್ಯ ಬೆಳೆಸಿದ್ದೀಯಾ, ರಘುಕುಲ ತಿಲಕ ಮರೆಯಲ್ಲಿ ಬಾಣ ಬಿಟ್ಟು , ರಘುಕುಲೋತ್ತಮರಿಗಿದ್ದ ಮಾನನಿಧಿ ಎಂಬ ಕೀರ್ತಿಯನ್ನು ಅವಮಾನ ನಿಧಿ ಎಂದು ಬದಲಿಸಿದೆಯಲ್ಲಾ ಎಂದು ವಾಲಿ ಕೊರಗುತ್ತಾನೆ. ಮರೆಯಲ್ಲಿ ನಿಂತು ನನ್ನ ಕೊಲ್ಲುವುದಕ್ಕೆ ನಾ ಮಾಡಿದ ಅಪರಾಧವೇನು ಎಂದೆಲ್ಲಾ ಪ್ರಶ್ನಿಸುವ ವಾಲಿಗೆ ರಾಮ ಒಂದೇ ಪದ್ಯದಲ್ಲಿ ಉತ್ತರ ಕೊಟ್ಟು ಮುಗಿಸುತ್ತಾನೆ-

ತರವೇ ತಮ್ಮನ ಹೆಂಡತಿಯನ್ನಾಳುವುದು ? ಎಂಬ ಧರ್ಮ ಮರ್ಮವನ್ನು ಮುಂದಿಟ್ಟ ರಾಮ, ಮೂರು ಲೋಕವನ್ನು ಗೆಲ್ಲುವ ನಿನ್ನ ಪರಾಕ್ರಮ ಸತ್ಕಾರ್ಯಕ್ಕೆ ಬಳಕೆಯಾಗುತ್ತಿಲ್ಲ ಎಂದು ಆರೋಪಿಸಿ ಮುಂದೆ ಬದುಕುವ ಇಚ್ಛೆಯಿದ್ದರೆ ಹಿಂದಕೆ ಕರೆವೆ ಬಾಣವಾ... ಎನ್ನುತ್ತಾನೆ.

ಸ್ವಾಭಿಮಾನಿ ವಾಲಿ ಸಾವಿನ ಮೊರೆ ಹೋಗುವುದರೊಂದಿಗೆ ಮೂರು ಗಂಟೆ ಅವಧಿಯ ಯಕ್ಷಗಾನ ಮುಗಿದು ಹೋಗುತ್ತದೆ. ಬಯಲಾಟದಲ್ಲಿ ನೋಡುವ ವಾಲಿ-ರಾಮರ ಚರ್ಚೆ, ಕಾದಾಟ ಎಳೆದಾಟ, ಧರ್ಮ ಸೂಕ್ಷ್ಮದ ಮಾತುಗಳನ್ನು ಕೇಳಿಸಿಕೊಂಡವರಿಗೆ ಕಲಾಕ್ಷೇತ್ರದಲ್ಲಿ ನಡೆಯುವ ಯಕ್ಷಗಾನ ರಸಭಂಗ ಮಾಡಿದರೂ, ಬೆಂಗಳೂರಲ್ಲಿ ಚೆಂಡೆ ಪೆಟ್ಟಿನ ಸದ್ದು ಕೇಳುವ, ಭಾಗವತಿಕೆಯ ಸೊಗಸನ್ನು ಅನುಭವಿಸುವ, ವೇಷ ಕುಣಿತವನ್ನು ಆಸ್ವಾಧಿಸುವ ಅಪೂರ್ವ ಅವಕಾಶಕ್ಕೆ ಖುಷಿಯೆನಿಸುತ್ತದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more