• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಕಟಪೂರ್ವ ಅಧ್ಯಕ್ಷರ ನುಡಿ

By Staff
|

* ಯು.ಆರ್‌.ಅನಂತಮೂರ್ತಿ

ಬೆಳಗಾವಿ 07-03-03

Dr.U.R.Ananthamurthyನಮ್ಮ ನಾಡಿನ ಹಿರಿಯರಲ್ಲಿ ಒಬ್ಬರಾದ ಡಾಕ್ಟರ್‌ ಪಾಟೀಲ ಪುಟ್ಟಪ್ಪನವರಿಗೆ ಕನ್ನಡಬಾವುಟವನ್ನು ಒಪ್ಪಿಸುವುದು ನನಗೆ ಸಂತೋಷದ ವಿಷಯವಾಗಿದೆ. ಹೀಗೆ ಒಪ್ಪಿಸುವುದು ಕೇವಲ ಸಾಂಕೇತಿಕ; ಯಾವತ್ತೂ ಈ ಬಾವುಟ ಅವರ ಕೈಯಲ್ಲಿ ಹಾರಾಡುತ್ತಲೇ ಇದೆ.

ಜನಸಂಪರ್ಕದ ಭಾಷೆಯಾಗಿ ಮಾತ್ರವಲ್ಲದೆ, ಆಡಳಿತದ ಭಾಷೆಯಾಗಿ ಮಾತ್ರವಲ್ಲದೆ, ಆಧುನಿಕ ಕಾಲದ ಹೊಸಜ್ಞಾನವನ್ನು ಎಲ್ಲೆಡೆಯಿಂದ ಸ್ವೀಕರಿಸುವ ಭಾಷೆಯಾಗಿ ಮಾತ್ರವಲ್ಲದೆ ತನ್ನೊಳಗಿನಿಂದಲೇ ಹೊಸಜ್ಞಾನವನ್ನು ಸೃಷ್ಟಿಸುವ ಭಾಷೆಯೂ ಕನ್ನಡವಾಗಬೇಕೆಂಬುದು ನಮ್ಮೆಲ್ಲರ ಆಸೆ. ಅಂತಹ ಹೊಸ ಸೃಷ್ಟಿ ಸಾಹಿತ್ಯದಲ್ಲಿ ಆಗಿದೆ; ವಚನಕಾರರಲ್ಲಿ ತಾತ್ವಿಕವೆನ್ನಬಹುದಾದ ಚಿಂತನೆ ನಡೆದಿದೆ. ಆದರೆ ಉಳಿದ ಜ್ಞಾನವಲಯಗಳಲ್ಲಿ ಸ್ವೀಕಾರಕ್ಕೆ ಮಾತ್ರ ಕನ್ನಡ ಸೀಮಿತವಾಗಿದೆ.

ಎಷ್ಟು ಗಹನವಾದ ವಿಚಾರವನ್ನಾಗಲೀ, ಹಿಂದೆ ಸಂಸ್ಕೃತದಿಂದಲೂ ಈಗ ಪ್ರಪಂಚದ ಎಲ್ಲೆಡೆಯಿಂದಲೂ ಪಡೆದುಕೊಳ್ಳಬಲ್ಲ ಸಾಮರ್ಥ್ಯವನ್ನು ಪಡೆದಿರುವ ಕನ್ನಡದಲ್ಲಿ ಎಲ್ಲ ಜ್ಞಾನಶಾಖೆಗಳಲ್ಲೂ ಸ್ವತಂತ್ರವಾದ ವೈಚಾರಿಕತೆ ಕೂಡ ಬೆಳೆಯಬೇಕು. ಅದು ಸಾಧ್ಯವಾಗಬೇಕೆಂದರೆ ನಮ್ಮ ಜನರ ಮನಸ್ಸು ವಿಸ್ತಾರವಾಗಬೇಕು. ಈ ನಮ್ಮ ನೆಲದಲ್ಲಿ ಕಾಲೂರಿದ ಆದರೆ ಹೊರಜಗತ್ತಿನ ವಿಚಾರಗಳಿಗೆ ಮುಕ್ತವಾಗಿ ಸ್ಪಂದಿಸುವ ಜನ ನಾವಾಗಬೇಕು. ಕಾಲ ಒಡ್ಡುವ ತಲ್ಲಣಗಳಿಗೆ, ಸಂಕಟಗಳಿಗೆ ಎದುರಾಗಿ ಹೊಸವಿಚಾರಗಳನ್ನು ಹುಟ್ಟಿಸಿಕೊಳ್ಳಬಲ್ಲ ಎದೆಗಾರಿಕೆಯ ಜನ ನಾವಾಗಬೇಕು.

ವ್ಯಕ್ತಿ ಪ್ರಜ್ಞೆಯಲ್ಲಿ ಅಭಿವ್ಯಕ್ತಗೊಳ್ಳುವಂತೆ ಕಾಣುವ ವಿಚಾರಗಳಿಗೂ ಮೂಲವಿರುವುದು ಸಮಷ್ಟಿಯಲ್ಲಿ ನಡೆಯುವ ಮಂಥನದಲ್ಲಿ . ಹೀಗೆ ಇಡೀ ಜನಸಮುದಾಯದ ಮಂಥನದಲ್ಲಿ ಬಿಡುಗಡೆಯ ಬೆಳಕಾಗಿ ವಿಚಾರಗಳು ಹುಟ್ಟಿಕೊಳ್ಳುತ್ತವೆ. ಅಲ್ಲಿಯ ತನಕ ನಾವು ಹುಸಿ ವಾಗ್ವಾದಗಳಲ್ಲಿ ಠೊಳ್ಳು ಮಾನವರಾಗಿ ಬದುಕುತ್ತಿರುತ್ತೇವೆ. ಈಗಿರುವಂತೆಯೇ ಭ್ರಮೆಯಲ್ಲಿ ಇದ್ದುಬಿಡುತ್ತೇವೆ. ಚುನಾವಣೆಗಳಲ್ಲಿ ಗೆಲ್ಲಲ್ಲಿಕ್ಕೆಂದು ಮಾತ್ರ ಹುಟ್ಟಿಸಿಕೊಳ್ಳುವ ಜಾತೀಯತೆ/ಮತೀಯತೆಯ ಅಲ್ಪತೆಯಿಂದ ಪಾರಾಗುವ ದಾರಿ ಕಾಣಲಾರೆವು; ಮಹಾತ್ಮರ ಕನಸುಗಳಿಂದ ದೂರವಾಗುತ್ತಿರುವ ಇಂದಿನ ದುಸ್ವಪ್ನದಂತಿರುವ ಕ್ಷುದ್ರ ಮತೀಯ ರಾಜಕೀಯದಿಂದ ಮುಕ್ತರಾಗಲಾರೆವು.

ಕವಿರಾಜಮಾರ್ಗಕಾರನ ಕಾಲದಿಂದಲೂ ಮನಸ್ಸಿನ ವಿಸ್ತಾರಕ್ಕೆ ಅವಕಾಶಗಳನ್ನು ಶೋಧಿಸುತ್ತ ಹೋಗಿರುವ ಉದಾರವಾದ ಅಂತಃಕರಣದ ಕನ್ನಡಸಾಹಿತ್ಯ ಲೋಕದ ಪರಂಪರೆಯಲ್ಲಿ ಗಾಂಧೀಜಿಯ ಸರ್ವೋದಯದ ಕನಸುಗಳನ್ನು ನಾವು ನಿಜಮಾಡಿಕೊಳ್ಳಬೇಕಾಗಿದೆ. ದೈನಿಕ ವ್ಯವಹಾರದ ಲೋಕದಲ್ಲೇ, ಅಂದರೆ ಇಲ್ಲೇ, ಸದ್ಯದಲ್ಲೇ, ನಮ್ಮ ಕನಸಿಗೊಂದು ಭೂಮಿಕೆಯನ್ನು ಸೃಷ್ಟಿಸಬಹುದಾದ ಸಾಧ್ಯತೆ ಬಗ್ಗೆ ಒಂದೆರಡು ಮಾತು ಆಡಲು ನಿಮ್ಮ ಅನುಮತಿ ಕೇಳುತ್ತಿದ್ದೇನೆ.

ಸ್ವತಂತ್ರವಾಗಿ ಚಿಂತಿಸಬಲ್ಲ ಮನಸ್ಸುಗಳು ಎಲ್ಲೆಲ್ಲಿ ಅವಕಾಶಕ್ಕಾಗಿ ಕಾದು ಇದ್ದಾವೋ ನಮಗೆ ತಿಳಿಯದು. ಯಾವುದೋ ಹಿಂದುಳಿದ ಪ್ರದೇಶದಲ್ಲೋ, ಯಾವುದೋ ಹಿಂದುಳಿದ ಜಾತಿಯಲ್ಲೋ ಈಗಲೇ ಎಷ್ಟೋ ಮಕ್ಕಳು ಅರಳಲು ಕಾದಿರಬಹುದು. ಎಲ್ಲ ಮಕ್ಕಳಿಗೂ ಸಮಾನವಾದ ಶಿಕ್ಷಣ ಸಿಗದ ಹೊರತು ಈ ಎಳೆಯರಲ್ಲಿ ಅಡಗಿರುವ ಸಂಪತ್ತು ದೇಶಕ್ಕೆ ಲಭ್ಯವಾಗದೇ ಹೋದೀತು. ಯಾರ ವಿಕಾಸವನ್ನು ಭರವಸೆಯಲ್ಲಿ ನಾವು ನಿರೀಕ್ಷಿಸಬೇಕೋ, ಅಂಥ ಗುಪ್ತವೂ ಗಹನವೂ ಆದ ಶಕ್ತಿಯುಳ್ಳ ಮಕ್ಕಳ ನಡುವೆಯೇ ಕೃತಕವಾದ ಅಸಮಾನತೆ ಸೃಷ್ಟಿಸುವ ಪ್ರೈಮರಿ ಶಿಕ್ಷಣ ಪದ್ಧತಿ ಹೋಗಬೇಕು. ಎಲ್ಲ ಮಕ್ಕಳೂ ಒಂದೇ ಮಟ್ಟದ, ಅಂದರೆ ಶ್ರೇಷ್ಠ ಗುಣಮಟ್ಟದ, ಶಾಲೆಗಳಿಗೆ ಹೋಗುವಂತಾಗಬೇಕು. ಎಲ್ಲ ಜಾತಿಯ ಎಲ್ಲ ಕೋಮಿನ ಎಲ್ಲ ವರ್ಗದ ಮಕ್ಕಳು ಒಟ್ಟಾಗಿ ಬೆರೆತು ಅತ್ಯುತ್ತಮವಾದ ಪ್ರೈಮರಿ ಶಿಕ್ಷಣ ಪಡೆಯಬೇಕು. ಹೀಗೆ ವಿಕಾಸಗೊಳ್ಳುವ ಮುಂದಿನ ಪ್ರಜೆಗಳಿಂದ ಮಾತ್ರ ಜನಸಮುದಾಯದ ಒಟ್ಟು ಅನುಭವದ ಮಂಥನ ಸಾಧ್ಯವಾಗುತ್ತದೆ. ಈ ಮಂಥನದಲ್ಲಿ ಬಿಡುಗಡೆಯ ಬೆಳಕು ಮಿಂಚಬಹುದಾದ ಸಾಧ್ಯತೆಯ ಕನಸನ್ನಾದರೂ ನಾವು ಕಾಣಬಹುದೆಂದು ತಿಳಿದಿದ್ದೇನೆ.

ಈಗ ನಾವು ಸಮಷ್ಟಿ ಪ್ರಜ್ಞೆಯುಳ್ಳ ಒಂದು ಜೀವಂತ ಸಮುದಾಯವಲ್ಲ : ಜಾತಿಮತಕೋಮುಗಳಾಗಿ, ಅಣಕು ಆಂಗ್ಲರಾಗಿ, ಬಡ ಕನ್ನಡಿಗರಾಗಿ ಛಿದ್ರಗೊಂಡಿರುವ, ನಮ್ಮ ನಮ್ಮ ಆಸೆಗಳನ್ನು ಮಾತ್ರ ಅಂತೂ ಹೇಗೋ ಪೂರೈಸಿಕೊಳ್ಳಬೇಕೆಂದು ಚಡಪಡಿಸುವ ಸ್ವಾರ್ಥಿಗಳಾದ ಗುಂಪುಗಳಾಗಿ ಬಿಟ್ಟಿದ್ದೇವೆ. ರಮಣ ರಾಮಕೃಷ್ಣ ಅರವಿಂದರ ಆಧ್ಯಾತ್ಮಿಕತೆ ಮತೀಯ ಗರ್ವದ ಅಮಲಿನಲ್ಲಿ ಕಾಣೆಯಾಗಿದೆ; ರಾಜಾರಾಮ ಮೋಹನ ರಾಯರನ್ನು ಆಕರ್ಷಿಸಿದ್ದ ಆಧುನಿಕತೆ ಜಾಗತೀಕರಣದ ಸೋಗಿನ ಅಮೆರೀಕರಣವಾಗಿದೆ.

ಅಮೆರಿಕಾದ ಅಧ್ಯಕ್ಷರಾದ ಬುಷ್‌ ಇಡೀ ಜಗತ್ತಿನ ಮೇಲೆ ಹೇರಬಹುದಾದ ಭೀಕರ ನರಹತ್ಯೆಯ ಯುದ್ಧದ ನೆರಳಿನಲ್ಲಿದ್ದೂ ನಮ್ಮ ಕನಸುಗಳನ್ನು ನಾವು ಕಾಣಬೇಕಾಗಿದೆ. ಕೆಲವು ಸರಳವಾದ ಸಹಜವಾದ ಸತ್ಯಗಳನ್ನು ಮತ್ತೆ ಮತ್ತೆ ನಮಗೇ ಹೇಳಿಕೊಳ್ಳಬೇಕಾಗಿದೆ.

ಮೊದಲನೆಯ ಸತ್ಯ ಇದು. ಸಮಷ್ಟಿ ಪ್ರಜ್ಞೆ ಬೇಕೆಂದು ಹಂಬಲಿಸುವ ಎಲ್ಲರಿಗೂ ಕಾಣುವ ಸತ್ಯ ಇದು. ಎಲ್ಲ ಮಕ್ಕಳಿಗೂ ಸಮಾನಾವಕಾಶ ಕಲ್ಪಿಸುವುದು ಕನ್ನಡನಾಡಿನಲ್ಲಿ ಕನ್ನಡ ಮಾಧ್ಯಮದಿಂದ ಮಾತ್ರ ಸಾಧ್ಯ. ಪರಿಸರದಿಂದಲೂ ಪುಸ್ತಕಗಳಿಂದಲೂ ಒಟ್ಟಾಗಿ ಪ್ರಚೋದಿತವಾದಾಗ ಮಾತ್ರ ಮನಸ್ಸು ಅರಳುತ್ತದೆ; ಸ್ವತಂತ್ರವಾಗಿ ಚಿಂತಿಸಲು ಕಲಿಯುತ್ತದೆ; ಕಲಿತದ್ದನ್ನು ಅನುಭವದ ಮೂಸೆಯಲ್ಲಿ ಪರೀಕ್ಷಿಸುತ್ತದೆ. ಕನ್ನಡದಲ್ಲಿ ಹೀಗೆ ಕಲಿಯುವ ಮನಸ್ಸಿಗೆ ಇಂಗ್ಲಿಷನ್ನೂ ಒಂದು ಭಾಷೆಯಾಗಿ ಕಲಿಸಲೇಬೇಕು. ಅಂದರೆ ಎಲ್ಲ ಮಕ್ಕಳಿಗೂ ಸಮಾನವಾಗಿ ಇಂಗ್ಲಿಷನ್ನು ಕಲಿಸಿರಬೇಕು. ನಾವು ಬದುಕುತ್ತಿರುವುದು ಆಧುನಿಕ ಕಾಲವಾದ್ದರಿಂದ ಇದು ಅನಿವಾರ್ಯ. ಕನ್ನಡನಾಡಿನಲ್ಲಿ ಇಂಗ್ಲಿಷ್‌ ಬಾರದಿರುವುದು ಎಷ್ಟು ನಮ್ಮ ಲೌಕಿಕ ಪ್ರಗತಿಗೆ ತೊಡಕಾಗಬಹುದೋ ಅಷ್ಟೇ ಕನ್ನಡನಾಡಿನಲ್ಲಿ ಕನ್ನಡಬಾರದಿರುವುದೂ ಲೌಕಿಕ ಪ್ರಗತಿಗೂ ಆತ್ಮೋದ್ಧಾರಕ್ಕೂ ತೊಡಕಾಗುತ್ತದೆಂದು ತಿಳಿಯುವಂತೆ ನಮ್ಮ ಸಮಷ್ಟಿ ಜೀವನ ವ್ಯವಸ್ಥಿತವಾಗಿರಬೇಕು.

ಕೆಲವು ಶ್ರೀಮಂತ ಮನೆತನದ ಮಕ್ಕಳಿಗೆ ಮಾತ್ರ ಇಂಗ್ಲಿಷಿನಲ್ಲಿ ಮೊದಲಿಂದಲೂ ಸುಸಜ್ಜಿತವಾದ ಅತ್ಯುತ್ತಮ ಶಾಲೆಗಳಲ್ಲಿ ಶಿಕ್ಷಣಕೊಟ್ಟು , ಅವರ ಜೊತೆ ಬಡವರ ಮಕ್ಕಳು ಸ್ಪರ್ಧಿಸಬೇಕೆಂದು ಬಯಸುವುದು ನ್ಯಾಯವಲ್ಲ . ತಾವು ಹುಟ್ಟಿ ಬೆಳೆಯುವ ನೆಲದಲ್ಲಿ ಬೇರೇ ಇಲ್ಲದ, ಅಮೇರಿಕ ಮಾತ್ರ ಕಾಣಿಸುವ ಅಲ್ಪ ದೃಷ್ಟಿಯ ಯಶಸ್ವೀ ‘ಜಾಣ’ರನ್ನೂ, ಎಳೆತನದಲ್ಲೇ ಸೊರಗಿಹೋದ ಮನಸ್ಸಿನ ಉದ್ಯೋಗಾಂಕ್ಷಿಗಳನ್ನೂ ಎಲ್ಲ ಕಡೆ ಕಾಣುತ್ತಿದ್ದೇವೆ. ಇದು ನಮ್ಮ ಸಮುದಾಯದ ಶ್ರೇಯಸ್ಸಿನ ದಾರಿಯಲ್ಲ.

ಸಮಾನಾವಕಾಶದ ಪ್ರೈಮರಿ ಶಿಕ್ಷಣದ ಜೊತೆಜೊತೆಯಲ್ಲೇ ಕಂಡುಕೊಳ್ಳಲೇಬೇಕಾದ ಇನ್ನೊಂದು ಸತ್ಯವಿದೆ. ಇಡೀ ನಾಡು ಚೈತನ್ಯಶೀಲವಾಗಬೇಕಾದರೆ ಆಧುನಿಕ ಕಾಲದ ಅಗತ್ಯಗಳಿಗೂ ಸವಾಲುಗಳಿಗೂ ಎಲ್ಲರೂ ಸ್ಪಂದಿಸುವುದು ಸಾಧ್ಯವಾಗಬೇಕು. ಅದು ಸಾಧ್ಯವಾಗಲು ಎಲ್ಲರಿಗೂ ಅಕ್ಷರಜ್ಞಾನವಿರಬೇಕು. ಉಳ್ಳವರ ಕೈಯಲ್ಲಿ ಅಕ್ಷರಜ್ಞಾನ ತಂತ್ರಜ್ಞಾನವೂ ಆಗಿ ತುಳಿದು ಆಳುವ ಅಸ್ತ್ರವಾಗಿರುವುದರಿಂದ ಅಕ್ಷರ ಜ್ಞಾನದ ಅಗತ್ಯವೇ ಇಲ್ಲದ ದಟ್ಟವಾದ ಜಾನಪದ ಸಂಸ್ಕೃತಿ ಆರೋಗ್ಯವಾಗಿ ತನ್ನ ಪಾಡಿಗೆ ಉಳಿದುಕೊಂಡಿರುವುದು ಸಾಧ್ಯವಿಲ್ಲ . ಹಿಂದೆ ಸಾಧ್ಯವಿದ್ದಿರಬಹುದು; ಆದರೆ ಈಗ ಸಾಧ್ಯವಿಲ್ಲ . ಸಾಧುವೂ ಅಲ್ಲ .

ನನ್ನದೊಂದು ಆಸೆಯಿದೆ. ತುಮಕೂರಿನ ಸಮ್ಮೇಳನದಲ್ಲಿ ಅದನ್ನು ವ್ಯಕ್ತಪಡಿಸಿದ್ದೆ . ಈಗ ಮತ್ತೆ ಅದನ್ನು ಎತ್ತುತ್ತೇನೆ. ಕನ್ನಡಸಾಹಿತ್ಯ ಪರಿಷತ್ತು ನಾಡಿನ ಹಳ್ಳಿ ಹಳ್ಳಿಗಳಲ್ಲೂ ಬೇರೂರಿರುವ ಸಂಸ್ಥೆ. ಇಷ್ಟು ವ್ಯಾಪಕವಾದ ಶಕ್ತಿ ಪಡೆದ ಪರಿಷತ್ತು ಉದಯೋನ್ಮುಖ ಸಾಹಿತಿಗಳಿಗೆ ವೇದಿಕೆ ಸೃಷ್ಟಿಸಿಕೊಟ್ಟರೆ ಸಾಲದು. ಸೃಜನಶೀಲರು ತಮ್ಮದೇ ಸಂಕಟದಲ್ಲಿ , ಸಂಕಟತರುವ ಶೋಧದಲ್ಲಿ , ತಮ್ಮದೇ ಉಲ್ಲಾಸದಲ್ಲಿ , ಉಲ್ಲಾಸ ತರುವ ವಿಸ್ತಾರದಲ್ಲಿ ತಮ್ಮ ದಾರಿಕಂಡುಕೊಳ್ಳುತ್ತಾರೆ. ಇಡೀ ಪರಿಷತ್ತು ಒಂದು ಅಕ್ಷರಪಡೆಯಾಗಿ ಕೆಲಸಮಾಡಿದಲ್ಲಿ ಇಡೀ ಕನ್ನಡನಾಡು ಓದಲು ಬರೆಯಲು ಕಲಿತ ನಾಡಾಗಬಹುದು. ಕೇರಳದ ಶಾಸ್ತ್ರಸಾಹಿತ್ಯ ಪರಿಷತ್ತು ಈ ಬಗೆಯ ಕೆಲಸಮಾಡಿದೆ.

ಆಗ ಇಡೀ ನಾಡು ಜ್ಞಾನದ ಮಂಥನದಲ್ಲಿ ಪಾಲಾಗುವುದು ಸಾಧ್ಯ. ಹೀಗೆ ಪಾಲಾದವರು ಜಾತಿಮತಮೀರಿದ ಸಮಷ್ಟಿಯಾಗಬಲ್ಲರು; ಕನ್ನಡದಲ್ಲಿ ಬದುಕುವ ಜನ ಆಗಬಲ್ಲರು; ಕನ್ನಡಿಗರೆಂದು ಎಲ್ಲಿದ್ದರೂ ತಮ್ಮನ್ನು ಮುಖ್ಯವಾಗಿ ಗುರುತಿಸಿಕೊಳ್ಳುವ ಜನ ಆಗಬಲ್ಲರು. ಇಂದಿಗೂ ಬಂಗಾಳಿಗಳು ಎಲ್ಲೇ ಇದ್ದರೂ ಹಾಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಬಾಂಗ್ಲ ಭಾರತದ ಒಂದು ಭಾಷೆಯಾಗಿ, ರವೀಂದ್ರನಾಥ ಠಾಕೂರರು ತಮ್ಮವರೆಂಬ ಹೆಮ್ಮೆಯಲ್ಲಿ ಪಾಕೀಸ್ತಾನದ ಮತೀಯತೆಯನ್ನು ಮೀರಿತು ಎಂಬುದನ್ನು ನಾವು ಸ್ಮರಿಸಿಕೊಳ್ಳುವುದು ಇಂದಂತೂ ತುಂಬ ಅಗತ್ಯ.

ಇದನ್ನು ಸಾಧ್ಯ ಮಾಡಬಲ್ಲ ಮೂವರು ಮುಖ್ಯರು ಇಲ್ಲಿದ್ದಾರೆ. ಕ್ರಿಯಾಶೀಲರಾದ ಪರಿಷತ್ತಿನ ಅಧ್ಯಕ್ಷರು, ಕನ್ನಡನಾಡಿಗಾಗಿ ಹೋರಾಡುತ್ತಲೇ ಬದುಕಿದ ನಮ್ಮ ಸಮ್ಮೇಳನದ ಅಧ್ಯಕ್ಷರು, ರಾಜಕಾರಣದ ಜಂಜಡದಲ್ಲಿ ಕನಸುಗಳನ್ನು ಕಾಣಬಲ್ಲ ಶಕ್ತಿಯನ್ನು ಇನ್ನೂ ಕಳೆದುಕೊಳ್ಳದ ನಮ್ಮ ಮುಖ್ಯಮಂತ್ರಿಗಳು ಒಟ್ಟಾಗಿ ಕೂತು ಇಂಥ ಒಂದು (ಎಲ್ಲರನ್ನೂ ಅಕ್ಷರಸ್ಥರೂ ವಿದ್ಯಾವಂತರೂ ಆಗುವಂತೆ ಮಾಡುವ) ಆಂದೋಳನವನ್ನು ಕೈಗೆತ್ತಿಕೊಳ್ಳಬೇಕು. ಮಾತಿನಲ್ಲಿ ಜೀವಂತವಾಗಿ ಶತಮಾನಗಳಿಂದ ಬೆಳೆದಿರುವ ನಮ್ಮ ನುಡಿ ಎಲ್ಲರ ಕಣ್ಣಿಗೂ ಉಜ್ವಲವಾಗಿ ದೊರಕುವಂತೆ, ಈ ನುಡಿಯಮೂಲಕ ಜಗತ್ತಿನ ಅತ್ಯುತ್ತಮ ಗ್ರಂಥಗಳ ಅರಿವು ದೊರಕುವಂತೆ ಮಾಡುವ ಜ್ಞಾನಯಜ್ಞದ ದೀಕ್ಷೆ ತೊಡಬೇಕು.

ಅಕ್ಷರ ಪ್ರಸಾರ ಉಳುಮೆಯಿದ್ದಂತೆ; ಪ್ರೈಮರಿ ಶಿಕ್ಷಣ ಬಿತ್ತನೆಯಿದ್ದಂತೆ. ಇಷ್ಟರಿಂದಲೇ ಬಯಸಿದ ಫಲ ದೊರಕಲಾರದೆಂದು ರೈತನಿಗೆ ಗೊತ್ತಿರುತ್ತದೆ. ವರುಣನ ಕೃಪೆ ಬೇಕೇಬೇಕಲ್ಲವೆ ? ಸಮಷ್ಟಿ ಪ್ರಜ್ಞೆಯ ಮಂಥನದಿಂದ ಒದಗುವ ಫಲ ಭರವಸೆಯಿಂದ ಕೂಡಿದ ನಿರೀಕ್ಷೆಗೆ ಸೇರಿದ್ದು ; ಇನ್ನೂ ಏನೇನೊ ಕೂಡಿ ಹುಟ್ಟಿಕೊಳ್ಳುವ ನವೋದಯ ಅದು; ಒದಗಿ ಬಂದ ಪುಣ್ಯದಂತೆ ಬಂದಾಗ ಅದು ಭಾಸವಾಗುತ್ತದೆ. ಆದರೆ ಉಳದೆ ಬಿತ್ತದೆ ಏನೇನೂ ಆಗದು. ಅನ್ಯಾಕ್ರಮಣದ ಇಂದಿನ ಆಧುನಿಕ ಕಾಲದಲ್ಲಂತೂ ನಮ್ಮ ಸಂಕಲ್ಪದ ಮೊದಲೆರಡು ಹೆಜ್ಜೆಗಳೇನೆಂದು ಮಾತ್ರ ನಾನು ಹೇಳಿರುವುದು..

ವರ್ಷಕ್ಕೊಮ್ಮೆ ನಡೆಯುವ ಉತ್ಸವದ ಬದಲಾಗಿ ಕನ್ನಡದ ಕೆಲಸ ನಿತ್ಯೋತ್ಸವವಾಗಲಿ ಎಂದು ಹಾರೈಸಿ ಕನ್ನಡದ ಬಾವುಟವನ್ನು ಡಾಕ್ಟರ್‌ ಪಾಟೀಲ ಪುಟ್ಟಪ್ಪನವರಿಗೆ ಒಪ್ಪಿಸುತ್ತೇನೆ.

ಜೈ ಹಿಂದ್‌

ಜೈ ಕರ್ನಾಟಕ.

ಪೂರಕ ಓದಿಗೆ-

ತುಮಕೂರು ಸಮ್ಮೇಳನದಲ್ಲಿ ಅನಂತಮೂರ್ತಿ ಅಧ್ಯಕ್ಷ ಭಾಷಣ

Click here to go to topಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more