ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡದೇವಿ ಪೂಜೆ, ಅಧ್ಯಕ್ಷರ ವೈಭವದ ಮೆರವಣಿಗೆ

By Staff
|
Google Oneindia Kannada News

Patila Puttappaಬಸವರಾಜ ಕಟ್ಟೀಮನಿ ವೇದಿಕೆ, ಬೆಳಗಾವಿ: 70ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರ ಬೆಳಗ್ಗೆ ಕನ್ನಡ ಧ್ವಜ ಮತ್ತು ರಾಷ್ಟ್ರಧ್ವಜಾರೋಹಣ ಹಾಗೂ ಭುವನೇಶ್ವರಿ ರಥಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಸಾಂಪ್ರದಾಯಿಕವಾಗಿ ಆರಂಭಗೊಂಡಿದೆ.

ತಾಯಿ ಭುವನೇಶ್ವರೀ ದೇವಿಯ ರಥಕ್ಕೆ ಪರಿಷತ್ತಿನ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು , ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ವಿ. ಎಸ್‌. ಕೌಜಲಗಿ ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪಾಟೀಲ ಪುಟ್ಟಪ್ಪನವರು ವಿಧ್ಯುಕ್ತವಾಗಿ ಪೂಜೆ ಸಲ್ಲಿಸುವುದರೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಆರಂಭವಾಯಿತು.

ಪಾಟೀಲ ಪುಟ್ಟಪ್ಪ ಹಾಗೂ ಪುನರೂರು ಅವರು ಸಾಂಕೇತಿಕವಾಗಿ ತಾಯಿ ಭುವನೇಶ್ವರಿಯ ರಥವನ್ನು ಎಳೆಯುವದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು.

ತಾಯಿ ಭುವನೇಶ್ವರೀ ದೇವಿಯನ್ನು ಹೊತ್ತೊಯ್ಯುವ ಎತ್ತಿನ ಗಾಡಿಯನ್ನು ವಿಶೇಷವಾಗಿ ಸಿಂಗರಿಸಲಾಗಿದ್ದು, ಮೆರವಣಿಗೆಯಲ್ಲಿ ಪೂರ್ಣ ಕುಂಭ ಕಲಶ ಹೊತ್ತಿರುವ ಮಾನಿನಿಯರು, ಮಕ್ಕಳು, ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದಾರೆ. ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಡೊಳ್ಳು ಕುಣಿತ, ಕನ್ನಡದ ಹಾಡುಗಳು, ಘೋಷಣೆಗಳು ಹಾಗೂ ಕನ್ನಡದ ಬಾವುಟಗಳು ಮೆರವಣಿಗೆಗೆ ಹಬ್ಬದ ಕಳೆಯನ್ನು ತಂದುಕೊಟ್ಟಿವೆ. ಕನ್ನಡದ ಹಿರಿಯ ನಾಯಕರು, ಸಾಹಿತಿಗಳೂ ಕೂಡ ಮುಂಡಾಸು, ಕಚ್ಚೆ ಪಂಚೆ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.

ಉತ್ತರ ಕರ್ನಾಟಕದ ಸಾಂಪ್ರದಾಯಿಕ ಟೋಪಿಗಳು , ಕನ್ನಡದ ಘೋಷಣೆಗಳನ್ನು ಹೊತ್ತ ಕ್ಯಾಪ್‌ಗಳು ಹಾಗೂ ಕನ್ನಡ ಬ್ಯಾಡ್ಜ್‌ಗಳನ್ನು ಕೊಳ್ಳುವುದಕ್ಕಾಗಿ ಪ್ರತಿನಿಧಿಗಳು ಸ್ಟಾಲ್‌ಗಳ ಮುಂದೆ ಮುಗಿ ಬೀಳುವ ದೃಶ್ಯ ಮೆರವಣಿಗೆ ಆರಂಭಕ್ಕೆ ಮುನ್ನ ಕಂಡು ಬರುತ್ತಿತ್ತು.

ಮೆರವಣಿಗೆಯು ಬೆಳಗಾವಿ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಲಿದ್ದು, ಪ್ರವಾಸಿ ಮಂದಿರ-ಖಡೇ ಬಜಾರ್‌- ರಾಮದೇವಗಲ್ಲಿ-ಕಿರ್ಲೋಸ್ಕರ್‌ ರಸ್ತೆ - ಕಾಲೇಜು ರಸ್ತೆ- ಚೆನ್ನಮ್ಮ ವೃತ್ತದ ಮೂಲದ ಜಿಲ್ಲಾ ಕ್ರೀಡಾಂಗಣ ತಲುಪುವುದು.

ಸಮ್ಮೇಳನದ ಹುಮ್ಮಸ್ಸಿನಲ್ಲಿ ಬೆಳಗಾವಿ ನಗರ ವಿಶೇಷವಾಗಿ ಸಿಂಗಾರಗೊಂಡಿದೆ. ಮೆರವಣಿಗೆ ಸಾಗುವ ಮಾರ್ಗಗಳು ಕನ್ನಡ ಪತಾಕೆ, ಕನ್ನಡ ಘೋಷಣೆ, ಹಿರಿಯ ಕವಿ, ಸಾಹಿತಿಗಳ ಭಾವ ಚಿತ್ರಗಳು, ಹೂವಿನ ಚಿತ್ತಾರ, ರಂಗವಲ್ಲಿಗಳೊಂದಿಗೆ ಶೃಂಗಾರಗೊಂಡಿದ್ದು , ಬೆಳಗಾವಿಯ ತುಂಬ ಕನ್ನಡದ ಕಳೆಯೇರಿದೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X