ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಜನ್ಯ ಬಲಹೀನತೆಯಲ್ಲ - ಬೆಳಗಾವಿಯಲ್ಲಿ ಕೃಷ್ಣ

By Staff
|
Google Oneindia Kannada News

(ವಿಶೇಷ ಪ್ರತಿನಿಧಿಯಿಂದ)

Patila Puttappa in Processionಬೆಳಗಾವಿ : ಕನ್ನಡಿಗರ ಸ್ನೇಹಪರ ಮನೋಭಾವವನ್ನು ದುರುಪಯೋಗಪಡಿಸಿಕೊಳ್ಳಲು ಯಾರಾದರೂ ಪ್ರಯತ್ನಿಸಿದರೆ ಅಂಥ ಪ್ರಯತ್ನಗಳನ್ನು ಹತ್ತಿಕ್ಕಲಾಗುವುದು ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಶುಕ್ರವಾರ ಮಹಾರಾಷ್ಟ್ರ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.

ಫೆ.07 ರ ಶುಕ್ರವಾರ ಬೆಳಗಾವಿಯಲ್ಲಿ ಆರಂಭವಾದ ಎಪ್ಪತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಕೃಷ್ಣ ಮಾತನಾಡಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು , ಬೆಳಗಾವಿಯನ್ನು ಕಸಿದುಕೊಳ್ಳಲು ಯತ್ನಿಸುವವರಿಗೆ ಯಾವುದೇ ವೇದಿಕೆಯಲ್ಲಾದರೂ ಉತ್ತರ ಕೊಡಲು ನಾವು ಸಿದ್ಧರಿದ್ದೇವೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ದೃಢ ನಿಲುವು ತಾಳಿದ್ದು - ಮಹಾಜನ್‌ ವರದಿಗೆ ಬದ್ಧವಾಗಿದೆ. ಗಡಿ ಸಮಸ್ಯೆ ಸಂಬಂಧವಾಗಿ ಮಹಾರಾಷ್ಟ್ರ ಸುಪ್ರಿಂಕೋರ್ಟ್‌ ಕಟ್ಟೆಯೇರಿದರೆ ಪ್ರಕರಣವನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ ಎಂದು ಕೃಷ್ಣ ಸ್ಪಷ್ಟವಾದ ದನಿಯಲ್ಲಿ ಹೇಳಿದರು.

ನೆಲ- ಜಲ ರಕ್ಷಣೆ :
ರಾಜ್ಯದ ಜಲ-ನೆಲ ರಕ್ಷಿಸಲು ರಾಜ್ಯ ಸರ್ಕಾರ ಕಂಕಣಬದ್ಧವಾಗಿದ್ದು , ಈ ಕುರಿತು ಯಾವುದೇ ಆತಂಕಕ್ಕೆ ಆಸ್ಪದವಿಲ್ಲ ಎಂದು ಕೃಷ್ಣ ಜನತೆಗೆ ಭರವಸೆ ನೀಡಿದರು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದ್ದು , ಈ ಸಂಬಂಧ ನ್ಯಾಯಾಲಯದ ಅಡೆತಡೆ ನಿವಾರಣೆಯಾದ ತಕ್ಷಣ ಕನ್ನಡ ಮಾಧ್ಯಮ ಜಾರಿಗೊಳಿಸಲಾಗುವುದು ಎಂದರು.

ಕನ್ನಡ ಸಾಂಸ್ಕೃತಿಕ ಪರಿಸರವನ್ನು ಸಮೃದ್ಧಗೊಳಿಸುತ್ತಿರುವ ಕನ್ನಡ ಕಟ್ಟಾಳುಗಳಿಗೆ ವಂದನೆಗಳನ್ನು ತಿಳಿಸಿದ ಮುಖ್ಯಮಂತ್ರಿ ಕೃಷ್ಣ - ಪಾಟೀಲ ಪುಟ್ಟಪ್ಪ ಅವರ ನೇತೃತ್ವದಲ್ಲಿ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಪಾಪು ಅಂಚೆಚೀಟಿ : ಎಪ್ಪತ್ತನೇ ಕನ್ನಡ ಸಾಹಿತ್ಯದ ಸಮ್ಮೇಳನದ ಸ್ಮರಣಾರ್ಥ ಸಮ್ಮೇಳನಾಧ್ಯಕ್ಷ ಪಾಟೀಲ ಪುಟ್ಟಪ್ಪ ಅವರ ಅಂಚೆಚೀಟಿ ಬಿಡುಗಡೆಯಾದದ್ದು ಸಮ್ಮೇಳನದ ಮೊದಲನೆಯ ದಿನದ ವಿಶೇಷಗಳಲ್ಲೊಂದು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಭಾಕರ ಕೋರೆ ಪಾಪು ಅವರ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು.

ಅಭಿಮಾನದಲ್ಲಿ ಮಿಂದ ಕನ್ನಡದ ಕಟ್ಟಾಳು:
ಸಹಸ್ರಾರು ಅಭಿಮಾನಿಗಳ ಜಯಘೋಷದ ನಡುವೆ ಬೆಳಗಾವಿ ನಗರದ ಪ್ರಮುಖ ಬೀದಿಗಳಲ್ಲಿ ಎಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರ ವೈಭವದ ಮೆರವಣಿಗೆ ನಡೆಯಿತು.

ಕೊಂಬು ಕಹಳೆ, ಡೊಳ್ಳು ಕುಣಿತ, ನಗಾರಿ, ಬ್ಯಾಂಡು, ಸ್ತಬ್ಧಚಿತ್ರಗಳ ಸಾಲು, ಪೂರ್ಣಕುಂಭ ಹೊತ್ತ ಅಂಗನೆಯರು, ಕನ್ನಡ ಬಾವುಟಗಳು-ಟೊಪ್ಪಿಗಳ ಧರಿಸಿದ ಉತ್ಸಾಹಿಗಳು, ಸುಣ್ಣಬಣ್ಣ ತೋರಣದಿಂದ ಅಲಂಕರಿಸಿಕೊಂಡ ರಸ್ತೆ ಇಕ್ಕೆಲದ ಮನೆ, ಅಂಗಡಿ ಮುಂಗಟ್ಟುಗಳು - ಇದೆಲ್ಲ ಪಾಪು ಅವರ ಮೆರವಣಿಗೆಯಲ್ಲಿ ಕಂಡುಬಂದ ಆಕರ್ಷಕ ದೃಶ್ಯಗಳು.

ಅಚ್ಚ ಬಿಳಿಯ ಜುಬ್ಬ ಪೈಜಾಮ ಧರಿಸಿದ್ದ ಪಾಪು ಅವರನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರೆಸಿ, ಸಾಹಿತ್ಯ ಸಮ್ಮೇಳನದ ವೇದಿಕೆಗೆ ಕರೆ ತರುವುದರೊಂದಿಗೆ ಮೂರು ದಿನಗಳ ನಾಡಹಬ್ಬದ ಆರಂಭ ರಂಗೇರಿತು. ಇದಕ್ಕೆ ಮುನ್ನ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್‌.ಕೌಜಲಗಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಪ್ರಭಾಕರ ಕೋರೆ ಅವರು ಎತ್ತಿನಗಾಡಿಯಲ್ಲಿ ವಿರಾಜಮಾನಳಾಗಿದ್ದ ಕನ್ನಡ ದೇವಿ ಭುವನೇಶ್ವರಿಗೆ ಪೂಜೆ ಸಲ್ಲಿಸುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದ್ದರು.

ಚಿತರನಟಿ ಜಯಂತಿ, ದಾಮಿನಿ ಸೇರಿದಂತೆ ಅನೇಕ ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X