ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯದ ಮರೆಯಲಾಗದ ‘ಆಸ್ತಿ’ಯ ನೆನಪಲ್ಲಿ ...

By Staff
|
Google Oneindia Kannada News
ಪ್ರಿಯ ಓದುಗರೇ,

ಜೂನ್‌ ಆರು ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರ ಜನ್ಮದಿನ. ಹಾಗೆಯೇ ಅವರ ಪುಣ್ಯ ದಿನವೂ ಸಹ. ಅಪರೂಪ ಅಲ್ಲವೇ ?

ಭಗವಾನ್‌ ಬುದ್ಧನಂತೆ, ವಿಶ್ವಕವಿ ಶೇಕ್ಸ್‌ಪಿಯರ್‌ ಅವರದೂ ಕೂಡ ಹೀಗೆಯೇ. ಮಾಸ್ತಿ ಅವರ ಮನೆಯವರು ಇದನ್ನು ಜನ್ಮದಿನವೆಂದು ಸಡಗರದಿಂದ ಆಚರಿಸಬೇಕೆ ಅಥವಾ ಶ್ರಾದ್ಧದ ದಿನವಾಗಿ solemn ಭಾವದಿಂದ ನೆನೆಯಬೇಕೆ ? ಮೊದಲ ವರ್ಷಗಳಲ್ಲಿ ಎರಡೂ ಭಾವನೆಗೂ ಒಂದು ಬಗೆಯ ತಾಕಲಾಟದಲ್ಲಿ ಮುಳುಗಿಸಿರಬಹುದು. ಆದರೆ ಮಾಸ್ತಿ ಅವರಂಥ ದೊಡ್ಡ ಜೀವವನ್ನು ಹೇಗೇ ನೆನೆದರೂ ಅದು ನಮ್ಮ ಭಾಗ್ಯವೆಂಬ ಭಾವ ಮೇಲಾಗುತ್ತ ಬಂದು ಈ ದಿನ ಅವರ ದಿವ್ಯ ಸ್ಮರಣೆಗೆ ಮೀಸಲಾಗುತ್ತದೆ. ಸ್ಮರಣೆಯೇ ಆರಾಧನೆ ಆಗುತ್ತದೆ. ನಾವು ಪುರಂದರದಾಸರ, ಗುರುರಾಯರ ತ್ಯಾಗರಾಜರಂಥ ಮಹಾಮಹಿಮರ ಆರಾಧನೆಯನ್ನು ಆಚರಿಸುವುದು ಹಾಗೆಯೇ ಅಲ್ಲವೆ. ಅವರ ಜೀವನವನ್ನೂ, ಅವರ ಕೃತಿರತ್ನಗಳನ್ನೂ ಸ್ಮರಿಸಿಕೊಳ್ಳುತ್ತ ಆ ಮೂಲಕವೇ ಅವರಿಗೆ ವೈಯಕ್ತಿಕವಾಗಿ ಸಾರ್ವತ್ರಿಕವಾಗಿ ನಮ್ಮ ಗೌರವಾದರಗಳನ್ನು ಅರ್ಪಿಸುವುದು. ಈ ಲೇಖನ ಮಾಸ್ತಿ ಅವರ ಮಧುರ ಸ್ಮರಣೆಗೆ ಮುಡಿಪು.

ನಮ್ಮ ತಾತ ಸಿ.ಎನ್‌.ಶಾಸ್ತ್ರಿಗಳು ವೃತ್ತಿಯಲ್ಲಿ ವಕೀಲರು. ಪ್ರವೃತ್ತಿಯಲ್ಲಿ ಚಿತ್ರಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ನಾಟಕಗಳು, ಕಾದಂಬರಿಗಳನ್ನು ಬರೆದರು. ಆಗಿನ ‘ಕತೆಗಾರ’ ಎಂಬ ಮಾಸಪತ್ರಿಕೆಯಲ್ಲಿ ಕತೆಗಳನ್ನೂ ಬರೆದರು. ಕಾಳಿದಾಸನ ಶಾಕುಂತಲಮ್‌, ಕುಮಾರ ಸಂಭವಮ್‌ ಆಧರಿಸಿ ಚಿತ್ರಮಾಲಿಕೆಗಳನ್ನು ಜಲವರ್ಣದಲ್ಲಿ ರಚಿಸಿದ್ದರು. ಆದರೆ ಇವೆಲ್ಲವೂ ಎಲ್ಲೋ ಹಿನ್ನೆಲೆಯಲ್ಲೇ ಉಳಿದಿದ್ದವು. ತಾತನ ಜೀವನದ ಕೊನೆಯ ವರ್ಷದಲ್ಲಿ ಅವರಿಗೆ ಮಾಸ್ತಿ ಅವರ ಹಾಗೂ ಬೇಂದ್ರೆ ಅವರ ಸ್ನೇಹಲಾಭ ಆಯಿತು.

ಐವತ್ತೇಳನೆ ಇಸವಿಯಲ್ಲಿ ಒಂದು ದಿನ, ಮಾಸ್ತಿ ಮತ್ತು ಬೇಂದ್ರೆ ಅವರು ನಮ್ಮ ಮನೆಗೆ ಭೋಜನಕ್ಕೆ ದಯಮಾಡಿಸಿದ್ದರು. ತಾತನಿಗೆ ಭಾರಿ ಸಡಗರ. ನಂತರ ಮಾಸ್ತಿ ಹೇಳಿದರು. ಇಷ್ಟು ವರ್ಷ ಅಜ್ಞಾತವಾಸದಲ್ಲೇ ಇದ್ದು ಬಿಟ್ಟಿರಲ್ಲ ಶಾಸ್ತ್ರಿಗಳೇ. ಬಹಳ ಹಿಂದೆಯೇ ನಿಮ್ಮ ಪರಿಚಯವಾಗಿದ್ದಿದ್ದರೆ ‘ಜೀವನ’ ಪತ್ರಿಕೆಯಲ್ಲಿ ಅದೆಷ್ಟು ನಿಮ್ಮ ಕತೆಗಳೂ ಲೇಖನಗಳೂ ಬರಬಹುದಾಗಿತ್ತು . ಮಾಸ್ತಿ ಅವರ ಉತ್ತೇಜನದಿಂದ ಜೀವನ ಪತ್ರಿಕೆಯಿಂದ ಅದೆಷ್ಟು ಕವಿಗಳು ಪ್ರಸಿದ್ಧರಾದರು. ಆ ಭಾಗ್ಯ ನಮ್ಮ ತಾತನಿಗೆ ಲಭಿಸಲಿಲ್ಲ. ಆದರೆ ಆ ರಾತ್ರಿ ತಾತ ಹೇಳಿದರು - ಮಾಸ್ತಿ ಅಂಥವರ ಬಾಯಲ್ಲಿ ಆ ಮಾತು ಬಂತಲ್ಲ , ಸಾಕು, ಅದೇ ನನ್ನ ಭಾಗ್ಯ.

ಮಾಸ್ತಿ ಅವರು ಒಂದು ಮಹಾವೃಕ್ಷದಂತೆ. ಅದರ ಅಡಿಯಲ್ಲಿ ಜೀವಕ್ಕೆ ತಂಪು ತಂದುಕೊಂಡವರೆಷ್ಟು, ಅದರ ಹಣ್ಣುಗಳನ್ನು ಉಂಡು ಬೆಳೆದವರೆಷ್ಟು. ಮಾಸ್ತಿ ಅವರು ತಮ್ಮದೇ ಸಾಹಿತ್ಯದಿಂದ ಎಷ್ಟು ಪ್ರಖ್ಯಾತರೋ, ಸಾಹಿತಿಗಳ ಪ್ರೋತ್ಸಾಹಕರಾಗಿಯೂ ಅಷ್ಟೇ ಸಾರ್ಥಕ ಜೀವನ ನಡೆಸಿದವರು. ಸಾಹಿತಿಗಳಿಗೆ ಸಾಹಿತ್ಯದಲ್ಲಿ ಮಾತ್ರ ಸಹಾಯ ನೀಡುವುದಲ್ಲ, ಸಂಕಷ್ಟದಲ್ಲಿ ಧನಸಹಾಯ, ಕುಟುಂಬದ ಕಷ್ಟಕಾಲದಲ್ಲಿ ಆಶ್ರಯ ಸಾಂತ್ವನ- ಹೀಗೆ. ಅನೇಕ ಜನ ಅವರನ್ನು ಅಣ್ಣ ಮಾಸ್ತಿ ಅಂತಲೇ ಕರೆಯೋರು. ನಿಜಕ್ಕೂ ಅವರು ಕನ್ನಡ ಸಾಹಿತ್ಯ ಕುಟುಂಬಕ್ಕೆ ಹಿರಿಯ ಅಣ್ಣನಂತೆ ಬಾಳಿದರು.

A first person account by C. R. Simhaಐವತ್ತೇಳನೇ ಇಸವಿಯಲ್ಲಿ ಅವರನ್ನು ತಾತನ ಮನೆಯಲ್ಲಿ ಮೊದಲು ಕಂಡದ್ದು. ನಂತರ ಹತ್ತಿರದ ಗಾಂಧಿ ಬಜಾರಿನಲ್ಲಿ ಅವರು ಹಾದುಹೋಗುವುದನ್ನು ಆಗಾಗ್ಗೆ ಕಾಣುತ್ತಲೇ ಇದ್ದೆ. ಆಗ ನಾನು ಕಾಲೇಜು ಹುಡುಗ. ಒಂದೇ ಮಾರು ಆಚೆ ಮಾಸ್ತಿ ನಡೆದುಹೋಗುತ್ತಿದ್ದರೂ ಮಾತನಾಡಿಸಲು ದಿಗಿಲು. ಕಣ್ಣರಳಿಸಿ ನೋಡುತ್ತಲೇ ಇರುತ್ತಿದ್ದೆ. ಪ್ರತಿ ಸಂಜೆ ಗವಿಪುರದ ಅವರ ಮನೆಯಿಂದ ಗಾಂಧಿ ಬಜಾರಿಗೆ ಬಂದು ಚೌಕ ಬಳಸಿ, ಮಾರುಕಟ್ಟೆ ಹಾದು, ಕೆ. ಆರ್‌. ರಸ್ತೆ ಮೂಲೆಯ ಸರ್ವಿಸ್‌ ಕ್ಲಬ್‌ ಸೇರುತ್ತಿದ್ದರು ಮಾಸ್ತಿ. ಷರಾಯಿ, ಲಾಂಗ್‌ ಕೋಟು, ತಲೆಗೆ ಟೋಪಿ, ಹೆಗಲ ಮೇಲೆ ಮಡಿಚಿ ಹಿಡಿದ ಕೊಡೆ. ಕ್ಲಬ್ಬಿನಿಂದ ರಾತ್ರಿ ಏಳಕ್ಕೆ ಮರಳುವಾಗಲೂ ಅದೇ ರಸ್ತೆ , ನಡಿಗೆ. ಒಂದೇ ವ್ಯತ್ಯಾಸ ಎಂದರೆ ತಲೆಯ ಮೇಲೆ ಬಿಚ್ಚಿ ಹಿಡಿದ ಕೊಡೆ. ಆಗ ಮಳೆ ಇಲ್ಲ. ಬಿಸಿಲಿಲ್ಲ, ಕೊಡೆ ಏಕೆ ? ಅಂತ ನಮ್ಮಂಥ ಅಜ್ಞಾನಿ ಪಡ್ಡೆ ಹುಡುಗರಿಗೆ ಮುಸಿ ಮುಸಿ ನಗು. ಒಮ್ಮೆ ಯಾರೋ ಕೇಳಿ ಉತ್ತರ ಪಡೆದಾಗಲೇ ಮಾಸ್ತಿ ಅವರ ಕಾಮನ್‌ಸೆನ್ಸ್‌ ತಿಳಿದು ನಾವೇ ಪೆಚ್ಚಾದದ್ದು. ಗಾಂಧಿ ಬಜಾರಿನ ಮಹಾ ವೃಕ್ಷಗಳ ಕೊಂಬೆಗಳಲ್ಲಿ ತಮ್ಮ ತಮ್ಮ ನಿವಾಸಕ್ಕೆ ಹಿಂದಿರುಗಿದ್ದ ಸಹಸ್ರಾರು ಹಕ್ಕಿಗಳ ಹಿಕ್ಕೆಯ ಧಾರೆಗೆ ಅಡ್ಡವಾಗಿ ಮಾಸ್ತಿ ಅವರ ಕೈಯಲ್ಲಿ ಅರಳಿದ ಕೊಡೆ. ಸಿಂಪಲ್‌ ಅಷ್ಟೇ ಸೆನ್ಸಿಬಲ್‌ !

ಮಾಸ್ತಿ ಅವರ ಸಂಜೆ ವಾಕಿಂಗ್‌ ಹಾಗೂ ಕ್ಲಬ್ಬಿನಲ್ಲಿ ಇಸ್ಪೀಟು ಆಟದ ನಿತ್ಯ ನೇಮವನ್ನು ಕವಿ ನಿಸಾರ್‌ ಅಹಮದ್‌ ತಮ್ಮ ಪ್ರಸಿದ್ಧ ಕವನದಲ್ಲಿ ಕಂಡರಿಸಿದ್ದಾರೆ. ಇಡೀ ಕವನ ಮಜಬೂತಾಗಿದೆ. ಸ್ಯಾಂಪಲ್ಲಿಗೆ ಇಗೋ ಒಂದೆರಡು ಸಾಲು.

‘ಹೊತ್ತಾಯಿತೆ? ಆವರಿಸಿತೆ ಮಬ್ಬು?,
ಕೊಡೆ ತೆರೆದು ಏಕಾಕಿ ಮನೆಯತ್ತ ನಡೆಯುವರು ಮರೆತು ಕ್ಲಬ್ಬು...
ನೋಡುತ್ತಲಿದ್ದಂತೆ, ಹೋಟಲಿನ ಬದಿಯಲ್ಲಿ ಬೀದಿ ತಿರುಗನು ಹೊಕ್ಕು,
ಮರೆಯಾಗುವರು ಮಾಸ್ತಿ- ಸಂದ ಜೀವನದೊಂದು ರೀತಿಯಂತೆ,
ಸರಳ ಸದಭಿರುಚಿಯ ಖ್ಯಾತಿಯಂತೆ’.

ನಿಜ. ಮಾಸ್ತಿಯವರನ್ನು ಬಲ್ಲವರಿಗೆ ಗೊತ್ತು. ಅವರ ಪ್ರಧಾನ ಗುಣಗಳೆಂದರೆ ಸರಳತೆ, ಸದಭಿರುಚಿ. ಇವು ಅವರ ವ್ಯಕ್ತಿತ್ವದಲ್ಲೂ ಉಂಟು, ಸಾಹಿತ್ಯದಲ್ಲೂ ಉಂಟು. ಎಂಥ ಸಂಕೀರ್ಣ ಮಾನವ ಸ್ವಭಾವಗಳನ್ನೂ, ಸನ್ನಿವೇಶಗಳನ್ನೂ ಮಾಸ್ತಿ ಎಷ್ಟು ಸರಳವಾಗಿ, ನಿರ್ದುಷ್ಟವಾಗಿ ಹೇಳಬಲ್ಲರು, ಚಿತ್ರಿಸಬಲ್ಲರು ಎಂಬುದನ್ನು ಅರಿಯಲು ಅವರ ಪ್ರಸಿದ್ಧ ಕತೆಗಳನ್ನು ಓದಿ ನೋಡಬೇಕು. ಆರೇಳು ದಶಕಗಳೇ ಕಳೆದ ಮೇಲೂ ಆ ಕತೆಗಳ ಕಳೆ ಮಾತ್ರ ಕೊಂಚವೂ ಮಾಸಿಲ್ಲ. ಆ ಕಾರಣಕ್ಕೇ ಅವು ‘ಕ್ಲಾಸಿಕ್ಸ್‌’.

ಇನ್ನು ಕೆಲವು ಪರ್ಸನಲ್‌ ನೆನಪುಗಳು. ಮಾಸ್ತಿ ಬರೆದ ಒಂದು ಸುಂದರ ನಾಟಕ ‘ಕಾಕನ ಕೋಟೆ’ ಐವತ್ತರ ದಶಕದಲ್ಲಿ ರವಿ ಕಲಾವಿದರು ಆಡಿದ್ದರು. ಮತ್ತೆ ಬೆಂಗಳೂರಲ್ಲಿ ಆಗಿರಲೇ ಇಲ್ಲ. ಎಪ್ಪತ್ತೆರಡರಲ್ಲಿ ನಾನು, ಲೋಕೇಶ್‌ ಮತ್ತು ಕಪ್ಪಣ್ಣ ಕೂಡಿ ನಿರ್ಧರಿಸಿ ‘ನಟರಂಗ’ ತಂಡವನ್ನು ಸ್ಥಾಪಿಸಿದೆವು. ನಟರಂಗ ಎಂಬ ನಾಮಕರಣ ಮಾಡಿದ್ದು ನಾನೇ. ಮತ್ತೊಂದಷ್ಟು ಕಲಾವಂತರನ್ನೂ ಕೂಡಿಸಿಕೊಂಡೆವು. ಮೊದಲ ಪ್ರಯೋಗವೇ ನನ್ನ ನಿರ್ದೇಶನದಲ್ಲಿ ಕಾಕನ ಕೋಟೆ. ಅದರಲ್ಲಿಯೇ ಹಾಡುಗಳುಂಟು. ಜತೆಗೆ ನಾಟಕ Musical (ಸಂಗೀತಕ) ಗುಣ ಪಡೆಯಲಿ ಅಂತ ಕೆಲವಾರು ಸನ್ನಿವೇಶಗಳ ಸಂಭಾಷಣೆಗಳನ್ನೇ ಗಾನರೂಪಕ್ಕೆ ಹೊಂದಿಸಿ ಪ್ರಯೋಗಿಸಿದ್ದೆ, ಎರಡು ಹೊಸ ಹಾಡೂ ಸೇರಿಸಿದ್ದೆ. ಮಾಸ್ತಿ ಪ್ರಯೋಗವನ್ನು ಕೊಂಡಾಡಿದರು, ಹೊಸ ಗೀತರೂಪಕಗಳನ್ನು ‘ಕಟ್‌’ ಮಾಡು ಎಂದರು. ಅವುಗಳಲ್ಲಿರುವುದೂ ನಿಮ್ಮ ಮಾತುಗಳೇ ಸಾರ್‌, ಇರಲಿ ಎಂದು ಪರಿಪರಿಯಾಗಿ ಬೇಡಿಕೊಂಡೆ. ‘ಹಾಡಿನ ರೂಪದಲ್ಲಿ ನಾನು ಬರೆಯಲಿಲ್ಲವಲ್ಲ , ಆದ್ದರಿಂದ ಬೇಡ’ ಅಂದರು ಮಾಸ್ತಿ. ತಾತನ ಸಮಾನ ನನಗೆ, ದುಃಖದಿಂಲೇ ಒಪ್ಪಿಕೊಂಡೆ ಅನ್ನಿ. ಆದರೆ ಅವರ ಧಾರಾಳತೆ ಎಂದರೆ ‘ಪ್ರಯೋಗಕ್ಕೆ ತುಂಬ ಖರ್ಚು ಮಾಡಿದ್ದೀರಿ, ಪಾಪ ಹುಡುಗರು ನೀವು, ನಷ್ಟ ಆಗಬಾರದು, ನಾನು ಸ್ವಲ್ಪ ದುಡ್ಡು ಕೊಡಲೇ’ ಅಂದರು. ಬೇಡಿ ಸಾರ್‌, ನಿಮ್ಮ ಆಶೀರ್ವಾದ ಸಾಕು, ಅಂದೆವು.

‘ಕಾಕನ ಕೋಟೆ’ ನಾಟಕ ಸೂಪರ್‌ ಪ್ರಸಿದ್ಧಿ ಗಳಿಸಿತು. ಆಗಾಗ್ಗೆ ಹೋಗಿ ರಾಯಲ್ಟಿ ಸಲ್ಲಿಸಿ ಮಾಸ್ತಿ ಆಶೀರ್ವಾದ ಪಡೆಯುತ್ತಿದ್ದೆವು. ಮುಂದೆ ಅದು ಚಲನಚಿತ್ರ ಆಗುವ ಅವಕಾಶ ಒದಗಿಬಂತು. ಅಪ್ಪಣೆ ಪಡೆಯಲು ಅವರ ಮನೆಗೆ ಹೋದೆ. ಸಂತೋಷದಿಂದ ಒಪ್ಪಿದರು. ‘ಏನು, ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರ ತೆಗೀತೀಯೋ’ ಅಂತ ಕೇಳಿದರು. ಇಲ್ಲ ಸಾರ್‌, ಕಾಕನ ಕೋಟೆ ಎಂಬ ಆ ಕಾಡಿನಲ್ಲೇ ಚಿತ್ರಣ ಮಾಡ್ತೀನಿ ಅಂದೆ, ಕೊಂಚ ವಿವರಿಸಿದೆ. ಅವರ ಕಣ್ಣು ಅರಳಿತು. ‘ನರಸಿಂಹಾ, ಹಾಗಿದ್ದರೆ ಒಂದು ಕೆಲಸಾ ಮಾಡು. ನಾಟಕದ ಮೊದಲ ಹಾಡು ‘ಬೆಟ್ಟದಾ ತುದಿಯಲ್ಲಿ’ ಅಂತ. ಸ್ಟೇಜಿನ ಮೇಲೆ ಬೆಟ್ಟ , ಕಾಡು, ಕಬಿನಿ ನದಿ, ಜಿಂಕೆ, ಜೇನು, ಆನೆ ತೋರಿಸೋಕೆ ಸಾಧ್ಯವಿಲ್ಲ. ಅದಕ್ಕೇ ನೀನು ಮೂರೇ ಚರಣ ಹಾಡಿಸಿದ್ದೆ. ಈಗ ಕ್ಯಾಮೆರಾ ತಗೊಂಡು ಕಾಡಿಗೇ ಹೋಗ್ತೀನಿ ಅಂದೆಯಲ್ಲಾ . ಹಾಡಿನ ಹನ್ನೆರಡೂ ಚರಣ ಹಾಡಿಸಿ ಬೆಟ್ಟ ನದಿ ಎಲ್ಲವನ್ನೂ ವಿವರವಾಗಿ ತೋರಿಸು. ಅರ್ಧ ಗಂಟೆ ಹಾಡಾದರೂ ಸರಿ. ಪಾಪ, ಜನಕ್ಕೆ ಅದೆಲ್ಲಾ ನೋಡೋ ಆಸೆ ಇರುತ್ತೆ ’.

ಕಾಕನ ಕೋಟೆ ಚಲನಚಿತ್ರ ನೋಡಿದರು. ಒಂದಷ್ಟು ಇಷ್ಟವಾಯಿತು. ಚಿತ್ರ ಮಾಧ್ಯಮಕ್ಕೇ ಅಂತ ಒಂದಷ್ಟು ಬದಲಾವಣೆ ಮಾಡಿಕೊಳ್ಳಲೇಬೇಕಿತ್ತು. ಅದು ಸ್ವಲ್ಪ ಅವರಿಗೆ ಅಷ್ಟಾಗಿ ಒಪ್ಪಿತವಾಗಿರಲಿಲ್ಲ. ನಾನಂತೂ ವಿವರಣೆ ಕೊಟ್ಟಿದ್ದೆ. ಆ ವರ್ಷದ ಚಲನಚಿತ್ರ ರಾಜ್ಯ ಪ್ರಶಸ್ತಿಗಳಲ್ಲಿ, ಮಾಸ್ತಿ ಅವರಿಗೆ ಅತ್ಯುತ್ತಮ ಕತೆ ಪ್ರಶಸ್ತಿ ಬಂತು. ಚಿತ್ರಕ್ಕೆ ನನ್ನ ನಿರ್ದೇಶನಕ್ಕೆ ಮತ್ತು ಸಂಕಲನಕ್ಕೂ ಪ್ರಶಸ್ತಿ ಬಂತು. ಲಾಲ್‌ಬಾಗ್‌ ಗಾಜಿನ ಮನೆ ಸಮಾರಂಭ. ವೇದಿಕೆಯ ಮೇಲೆ ಫಿಲ್ಮ್‌ ಜನಗಳ, ತಾರೆಯರ ಮಧ್ಯೆ ಕನ್ನಡ ಸಾಹಿತ್ಯದ ಧ್ರುವತಾರೆ ಮಾಸ್ತಿ. ಅವರ ಕಣ್ಣಲ್ಲಿ ಬೆರಗು, ಮುಖದಲ್ಲಿ ಮಂದಹಾಸ. ಪ್ರಶಸ್ತಿ ವಿಜೇತರೆಲ್ಲ ನಾಲ್ಕು ಮೆಟ್ಟಿಲು ಏರಿ ಮುಖ್ಯಮಂತ್ರಿಯಿಂದ ಪ್ರಶಸ್ತಿ ಸ್ವೀಕರಿಸಿದರೆ, ದೇವರಾಜ ಅರಸು ತಾನೇ ಇಳಿದು ಬಂದು, ಮಾಸ್ತಿಗೆ ಸನ್ಮಾನಿಸಿ, ಕುರ್ಚಿಯತ್ತ ಕರೆದೊಯ್ದರು. ಕನ್ನಡ ನಾಡಿಗೆ ನಾಡೇ, ವಂದಿಸುವುದೆಂದರೆ ಹಾಗಲ್ಲವೇ. ಪ್ರಚಂಡ ಕರತಾಡನ.

ಜಗದ್ವಂದ್ಯರಲ್ಲವೇ ಮಾಸ್ತಿ. ಅವರ ದಿವ್ಯಸ್ಮರಣೆಗೆ ಇದೋ ಶರಣು ಶರಣಾರ್ತಿ.

ಇತಿ
ನಿಮ್ಮ ಸಿಮ್ಮ


ಮುಖಪುಟ / ಸಾಹಿತ್ಯ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X