• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕ.ಸಾ.ಪ.’ ಎಂಬ ಕನ್ನಡ ನಾವೆ

By Staff
|

*ನಾಡಿಗೇರ್‌ ಚೇತನ್‌

Kannada Sahitya Parishathಕರ್ನಾಟಕ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ ಗಳ ರಕ್ಷಣೆ ಮತ್ತು ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ ಕರ್ಣಾಟಕ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಯಾಯಿತು.

1947ಕ್ಕೆ ಮುಂಚೆ ಕರ್ನಾಟಕ ಹಲವಾರು ಆಡಳಿತಗಳಡಿ ಹಂಚಿ ಹೋಗಿತ್ತು. ಮದರಾಸು, ಬೊಂಬಾಯಿ ಪ್ರಾಂತ್ಯಗಳಿಗೆ ಹಾಗೂ ಹೈದರಾಬಾದ್‌ ಸಂಸ್ಥಾನಗಳಿಗೆ ಕನ್ನಡ ನಾಡಿನ ಕೆಲವು ಭಾಗಗಳು ಹಂಚಿಹೋಗಿದ್ದವು. ಕೊಡಗಿಗೆ ಪ್ರತ್ಯೇಕವಾದ ಆಡಳಿತವಿತ್ತು . ಕನ್ನಡದ ಜನ ಭಿನ್ನ-ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರು. ಅವರ ಭಾಷೆಯ ಉಚ್ಚಾರಣೆಯಲ್ಲಿ ಅನ್ಯ ಭಾಷೆಗಳ ಪ್ರಭಾವ ಹೆಚ್ಚಾಗಿ ಉಚ್ಚಾರಣೆಯ ವ್ಯತ್ಯಾಸವಿತ್ತು. ಕನ್ನಡ ನೆಲದಲ್ಲೇ ಕನ್ನಡಿಗರು ಅಪರಿಚಿತರೆಂಬ ಭಾವನೆ ಉಂಟಾಗಿತ್ತು. ನಾಡಿನ ಬೇರೆ ಬೇರೆ ಭಾಗಗಳಲ್ಲಿದ್ದ ಕನ್ನಡದ ಅಭಿಮಾನಿಗಳು ಕನ್ನಡ ಭಾಷೆ, ಸಂಸ್ಕೃತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಅವಶ್ಯಕತೆ ಮನಗಂಡರು. ಈ ದಿಸೆಯಲ್ಲಿ ಮೊದಲ ಪ್ರಯತ್ನ ಮಾಡಿದವರು ಮೈಸೂರು ಸಂಸ್ಥಾನದ ಅಂದಿನ ದಿವಾನರಾಗಿದ್ದ ಸರ್‌. ಎಂ. ವಿಶ್ವೇಶ್ವರಯ್ಯನವರು. ಅವರು ಮೊದಲು ಮೈಸೂರು ಸಂಪದಭ್ಯುದಯ ಸಮಾಜ (ಮೈಸೂರು ಎಕನಾಮಿಕ್ಸ್‌ ಕಾನ್ಫರೆನ್ಸ್‌) ರಚಿಸಿದ್ದರು.

ಸಂಪದಭ್ಯುದಯ ಸಮಾಜವು 1914ರ ವಾರ್ಷಿಕ ಅಧಿವೇಶನದಲ್ಲಿ ಅಂಗೀಕರಿಸಿದ ಮಹತ್ವದ ನಿರ್ಣಯ ಹೀಗಿದೆ : ‘ಕರ್ಣಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ, ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಎಂದು ಸಮಾಜವು ಸರಕಾರಕ್ಕೆ ಶಿಫಾರಸ್ಸು ಮಾಡಬೇಕು’.

ಈ ನಿರ್ಣಯದ ಫಲವಾಗಿ ಸಂಪದಭ್ಯುದಯ ಸಮಾಜದ ವಿದ್ಯಾ ವಿಷಯಕ ಮಂಡಳಿ 31-10-1914ರಲ್ಲಿ ರಾವ್‌ ಬಹದ್ದೂರ್‌, ಎಂ. ಶಾಮರಾವ್‌, ಕರ್ಪೂರ ಶ್ರೀನಿವಾಸರಾವ್‌ ಮತ್ತು ಪಿ.ಎಸ್‌. ಅಚ್ಚ್ಯುತ ರಾವ್‌ ಅವರನ್ನೊಳಗೊಂಡ ಒಂದು ಚಾಲಕ ಸಮಿತಿಯನ್ನೂ ರಚಿಸಿ ಆ ಸಮಿತಿಗೆ ನಾಡಿನ ಪ್ರತಿಷ್ಠಿತರನ್ನು ಆಹ್ವಾನಿಸಿ, ಎಲ್ಲರ ಸಹಕಾರದೊಂದಿಗೆ ಪರಿಷತ್ತನ್ನು ಸ್ಥಾಪಿಸುವಂತೆ ಆದೇಶ ನೀಡಿತು.

ಅದರನ್ವಯ ಚಾಲಕ ಸಮಿತಿ, ನಾಡಿನ ಪ್ರಮುಖರ ಸಲಹೆಗಳನ್ನು ಕೋರಿ, ಬಂದ ಸಲಹೆಗಳನ್ನೆಲ್ಲ ಸಭೆಯಲ್ಲಿ ಪರಿಶೀಲಿಸಿ, ಎಚ್‌.ವಿ. ನಂಜುಂಡಯ್ಯನವರ ಅಧ್ಯಕ್ಷತೆಯಲ್ಲಿ ನಾಲ್ಕು ದಿನಗಳ ಕಾಲ ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಪ್ರಮುಖರ ಸಮ್ಮೇಳನವನ್ನು ರೂಪಿಸುವ ನಿರ್ಧಾರವನ್ನು ಕೈಗೊಂಡಿತು. ಬೆಂಗಳೂರಿನಲ್ಲಿ ಮೇ 3 ರಿಂದ 6 ರವರೆಗೆ 4 ದಿನಗಳ ಕಾಲ ನಡೆದ ಮೊದಲನೇ ಸಾಹಿತ್ಯ ಸಮ್ಮೇಳನದ 3ನೇ ದಿನದಂದು ಕರ್ಣಾಟಕ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಿತ್ತು.

ಶ್ರೀ ಕೃಷ್ಣರಾಜ ಪರಿಷನ್ಮಂದಿರ

ಕರ್ಣಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ನಂತರ, ಮೊದಲು ಒಂದು ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಆಮೇಲೆ 1923ರಲ್ಲಿ ಶಂಕರಪುರದ ಒಂದು ಬಾಡಿಗೆ ಮನೆಗೆ ಸ್ಥಳಾಂತರವಾಯಿತು. ಆಗ ಮೈಸೂರಿನ ದಿವಾನರಾಗಿದ್ದ ಸರ್‌.ಮಿರ್ಜಾ ಇಸ್ಮಾಯಿಲ್‌ರವರು ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಈಗಿರುವ ಪಂಪ ಮಹಾಕವಿ ರಸ್ತೆಯಲ್ಲಿ ಒಂದು ಪ್ರತ್ಯೇಕವಾದ ನಿವೇಶನ ದಾನವಾಗಿ ನೀಡಿದರು. 1931ನೇ ಏಪ್ರಿಲ್‌ 12ರಂದು ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಕರ್ಪೂರ ಶ್ರೀನಿವಾಸರಾಯರು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ವೃತ್ತಿಯಲ್ಲಿ ಇಂಜಿನಿಯರ್‌ ಆಗಿದ್ದ ರಾಯರು , 14 ವರ್ಷಗಳ ಕಾಲ ಪರಿಷತ್ತಿನ ಉಪಾಧ್ಯಕ್ಷರೂ ಆಗಿದ್ದವರು. ಅವರು ಈ ಕಟ್ಟಡದ ನಿರ್ಮಾಣಕ್ಕಾಗಿ ಬಹಳ ಶ್ರಮಪಟ್ಟರು. ಕಟ್ಟಡದ ನಿರ್ಮಾಣಕ್ಕಾಗಿ ಮೈಸೂರಿನ ಮಹಾರಾಜರೂ ಸೇರಿದಂತೆ ಸರ್ಕಾರ ಸಾರ್ವಜನಿಕರಿಂದ ಸುಮಾರು 30,000ರೂ. ಹಣ ದಾನವಾಗಿ ಪಡೆಯಿತು. ಈ ಕಟ್ಟಡ ಅಷ್ಟದೇಹಿ ಈಶ್ವರನ ಸ್ವರೂಪದ ವಿನ್ಯಾಸದಲ್ಲಿದೆ. ಕಟ್ಟಡ ನಿರ್ಮಾಣ ಕಾರ್ಯಕ್ಕೆ 2 ವರ್ಷ ಬೇಕಾಯಿತು. 1933 ಮೇ 23ರಂದು ಈ ಕಟ್ಟಡದ ಉದ್ಘಾಟನೆಯಾಯಿತು.

ಪ್ರಕಟಣೆಗಳು

ಕನ್ನಡಕ್ಕಾಗೇ ಸ್ಥಾಪನೆಯಾದ ಪರಿಷತ್‌ ಪ್ರಾರಂಭದಲ್ಲೇ ಬಹಳ ಹುರುಪಿನಿಂದ ಕೆಲಸ ಮಾಡಿತು. 1915 ರಿಂದ 1933ರವರೆಗೆ ಬಹಳ ಅತ್ಯುತ್ತಮವಾದ ಕೆಲಸಗಳು ಪ್ರಾರಂಭವಾದವು. ಆ ಕಾಲದಲ್ಲಿ ಕೆಲವು ಉತ್ತಮ ಗ್ರಂಥಗಳನ್ನು ಪ್ರಕಟಿಸುವ ಕೆಲಸ ಪ್ರಾರಂಭವಾಯ್ತು. ಪಂಪ ಭಾರತ, ಪಂಪ ರಾಮಾಯಣ ಮತ್ತು ಅದರ ನಿಘಂಟು, ಚಾವುಂಡರಾಯ ಪುರಾಣ, ಸೋಮೇಶ್ವರ ಶತಕ, ಶಬ್ದಮಣಿ ದರ್ಪಣ ಮುಂತಾದ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿ, ಪ್ರಕಟಿಸಿತು. ‘ವಿಕ್ರಮಾರ್ಜುನ ವಿಜಯ’ದ ಹಸ್ತಪ್ರತಿಯನ್ನು ಪರಿಶೋಧಿಸಿ ಪ್ರಕಟಿಸಿತು. ಪಂಪ ಭಾರತದ ಗದ್ಯಾನುವಾದ, ಷಟ್ಪದಿ ಕಾವ್ಯಗಳ ನಿಘಂಟು, ಕುಸುಮಾವಳಿ ಕಾವ್ಯ, ಜ್ಯೋತಿರ್ವಿನೋದಿನಿ, ವೊಡ್ಡಾರಾಧಣಂ ಮುಂತಾದ ಪ್ರಾಚೀನ ಕೃತಿಗಳ ಪ್ರಕಟಣೆಗಳಾದವು.

ಪರಿಷತ್ತಿನ ಚಟುವಟಿಕೆಗಳು

ಸ್ವಂತ ಕಟ್ಟಡವಾದ ಮೇಲೆ ಪರಿಷತ್ತಿನ ಕಾರ್ಯ ಚಟುವಟಿಕೆಗಳು ವಿಸ್ತಾರಗೊಂಡವು. ಪರಿಷತ್ತು ಕೇವಲ ಪಂಡಿತರ ಚಾವಡಿಯಾಗಬಾರದು, ಭಾಷೆಯ ಹಾಗೆ ಪರಿಷತ್ತು ಕೂಡ ಜನಸಾಮಾನ್ಯರ ಹತ್ತಿರಕ್ಕೆ ಬರಬೇಕೆಂದು ನಿರ್ಧಾರವಾಗಿ, ಕಾವ್ಯವನ್ನು ಓದುವ ಕಲೆ ಗಮನಕ್ಕೆ ಪ್ರಾಶಸ್ತ್ಯ ದೊರೆಯಿತು. ರಾಜ್ಯಾದ್ಯಂತ ಗಮಕ ತರಗತಿಗಳು ಆರಂಭವಾದವು.

Bhuvaneshwariಪರಿಷತ್ತಿಗೆ ಹಲವಾರು ಸಾಹಿತಿ, ವಿದ್ವಾಂಸರು ತಮ್ಮ ಸೇವೆ ಸಲ್ಲಿಸಿದ್ದಾರೆ. ಈ ಪೈಕಿ ಡಿ.ವಿ. ಗುಂಡಪ್ಪ , ಬಿ.ಎಂ. ಶ್ರೀಕಂಠಯ್ಯ ಮುಂತಾದವರ ಸೇವೆ ಸ್ಮರಣೀಯ. 1933ರಲ್ಲಿ ಡಿ.ವಿ. ಗುಂಡಪ್ಪ ರವರು ಪರಿಷತ್ತಿನ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಪರಿಷತ್ತಿನ ದಿಸೆಯೇ ಬದಲಾಯಿತು. ಇವರ ಅಧಿಕಾರದ ಅವಧಿಯಲ್ಲಿ ಅನೇಕ ಕನ್ನಡ ಸಂಘಗಳ ಜತೆಗೂಡಿಸಿ ಅಖಿಲ ಕರ್ನಾಟಕ ಸಂಘಗಳ ಸಮ್ಮೇಳನವನ್ನು ಏರ್ಪಡಿಸಲಾಯಿತು. ಗಮಕ ಕಲಾ ಅಭ್ಯಾಸದ ತರಗತಿ, ವಸಂತ ಸಾಹಿತ್ಯೋತ್ಸವ, ಸಂಚಾರೋಪನ್ಯಾಸ, ಕನ್ನಡ ಗ್ರಂಥಗಳ ಪ್ರದರ್ಶನ ಮುಂತಾದ ಯೋಜನೆಗಳು ಪ್ರಾರಂಭವಾದವು.

ಬಿ.ಎಂ. ಶ್ರೀಕಂಠಯ್ಯ ಪರಿಷತ್ತಿನ ಉಪಾಧ್ಯಕ್ಷರಾದ ಮೇಲೆ ಮಹಿಳೆಯರಿಗೆ ಪರಿಷತ್ತಿನಲ್ಲಿ ಪ್ರಾತಿನಿಧ್ಯ ನೀಡಲು 1938ರಲ್ಲಿ ಮಹಿಳಾ ಶಾಖೆ ಆರಂಭವಾಯಿತು. ಕನ್ನಡ ನಾಡಿನ ನಕ್ಷೆಯುಳ್ಳ ಪರಿಷತ್ತಿನ ಲಾಂಛನ ಬಿಡುಗಡೆ ಮಾಡಲಾಯಿತು. ಪರಿಷತ್ತಿನ ಪ್ರಕಟಣೆಗಾಗಿ ಸ್ವಂತ ಮುದ್ರಣಾಲಯ ಕೂಡ ಸ್ಥಾಪಿತವಾಯ್ತು.

ಕನ್ನಡ ನುಡಿ

ಪರಿಷತ್‌ ಪ್ರಾರಂಭವಾದಾಗಿನಿಂದ ಪರಿಷತ್ಪತ್ರಿಕೆ ತ್ರೆೃಮಾಸಿಕವಾಗಿ ಪ್ರಕಟವಾಗುತ್ತಿತ್ತು. ಸಾಮಾನ್ಯ ಸದಸ್ಯರು ಮತ್ತು ಸಾರ್ವಜನಿಕ ಸಂಪರ್ಕ ಬೆಳೆಸಿಕೊಳ್ಳಲು ಅ.ನ.ಕೃ ಸಂಪಾದಕತ್ವದಲ್ಲಿ 1938 ಅಕ್ಟೋಬರ್‌ 4ರಂದು ‘ಕನ್ನಡ ನುಡಿ’ ವಾರ ಪತ್ರಿಕೆ ಆರಂಭವಾಯಿತು. ‘ಕನ್ನಡ ನುಡಿ’ ಈಗ ಮಾಸಪತ್ರಿಕೆಯಾಗಿ ಪ್ರಕಟವಾಗುತ್ತಿದೆ.

ಕರ್ಣಾಟಕ ಸಾಹಿತ್ಯ ಪರಿಷತ್‌ ಕರ್ನಾಟಕ ಸಾಹಿತ್ಯ ಪರಿಷತ್‌ ಆದದ್ದು

1915 ರಲ್ಲಿ ಸ್ಥಾಪನೆಯಾದ ಪರಿಷತ್ತನ್ನು ಮೊದಲು ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಎಂದು ಕರೆಯಲಾಗುತ್ತಿತ್ತು. ಆದರೆ ಮೈಸೂರು ಪ್ರದೇಶದಲ್ಲಿ ‘ಕರ್ಣಾಟಕ’ ಮತ್ತು ಮುಂಬಯಿ ಪ್ರದೇಶದಲ್ಲಿ ‘ಕರ್ನಾಟಕ’ ಎಂಬ ಎರಡು ಶಬ್ದಗಳು ಪ್ರಯೋಗದಲ್ಲಿದ್ದವು. ನಂತರ 1938ನೇ ಡಿಸೆಂಬರ್‌ನಲ್ಲಿ ನಡೆದ ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ವಿಷಯದ ಬಗ್ಗೆ ಬಿರುಸಿನ ಚರ್ಚೆ ನಡೆಯಿತು. ಅದರ ಫಲಶೃತಿಯಾಗಿ, ‘ಕನ್ನಡ ಸಾಹಿತ್ಯ ಪರಿಷತ್ತು’ ಮತ್ತು ‘ಕನ್ನಡ ಸಾಹಿತ್ಯ ಪರಿಷ್ಪತ್ರಿಕೆ’ ಎಂದು ಮರು ನಾಮಕರಣ ಮಾಡಲಾಯಿತು.

ನಿಘಂಟು

ಕನ್ನಡ ಭಾಷೆಯ ನಿಘಂಟನ್ನು ರೆವರಂಡ್‌ ಫರ್ಡಿನೆಂಡ್‌ ಕಿಟೆಲ್‌ ಬಹಳ ಹಿಂದೆಯೇ ರಚಿಸಿದ್ದರು. ಇದಾಗಿ ಕೆಲವು ವರ್ಷಗಳ ನಂತರ ಅನೇಕ ಹೊಸ ಪದಗಳು ಚಾಲ್ತಿಗೆ ಬಂದವು. ಹಾಗಾಗಿ ಪರಿಷತ್ತು ನಿಘಂಟೊಂದನ್ನು ರಚಿಸಿ ಪ್ರಕಟಿಸಬೇಕೆಂದು ಉದ್ದೇಶಿಸಿತು. ಈ ಬಗ್ಗೆ ಪರಿಷತ್ತಿನ ಸಭೆಯಲ್ಲಿ ಚರ್ಚಿಸಿ ಕಾರ್ಯರೂಪಕ್ಕೆ ತರುವ ಪ್ರಯತ್ನ ಪ್ರಾರಂಭವಾಯಿತು. ಹಲ್ಮಿಡಿ ಶಾಸನದಿಂದ ಪ್ರಾರಂಭವಾಗಿ ಅನೇಕ ಸಹಸ್ರ ಶಾಸನಗಳನ್ನು, ಅಪೂರ್ವ ಶಬ್ದ ಸಂಗ್ರಹಗಳನ್ನು ಪರಿಶೀಲಿಸಿ ಸಿದ್ಧಪಡಿಸಿದ ನಿಘಂಟು ಇದು. 1944ರಲ್ಲಿ ಕೆಲಸ ಪ್ರಾರಂಭವಾಗಿ 1995ರಲ್ಲಿ 8ನೇ ಸಂಪುಟದ ಮುದ್ರಣದೊಂದಿಗೆ ಈ ಅಪೂರ್ವ ನಿಘಂಟಿನ ಕೆಲಸ ಮುಕ್ತಾಯವಾಯಿತು. ಈ ಕೆಲಸಕ್ಕಾಗಿ ಅನೇಕ ಕನ್ನಡ ಪಂಡಿತರು ಹಗಲಿರುಳು ದುಡಿದರು.

ಅಧ್ಯಕ್ಷ ಮತ್ತು ಸಮ್ಮೇಳನಾಧ್ಯಕ್ಷರು

ಪರಿಷತ್ತು ಆರಂಭವಾದಾಗಿನಿಂದ ಅದಕ್ಕೆ ಒಬ್ಬರು ಅಧ್ಯಕ್ಷರು ಮತ್ತು ಒಬ್ಬರು ಉಪಾಧ್ಯಕ್ಷರನ್ನು ಆರಿಸುವ ಪದ್ಧತಿ ಇತ್ತು. ಅದೂ ಬೆಂಗಳೂರಿನಲ್ಲೇ ವಾಸಿಸುವರು ಅಧ್ಯಕ್ಷರಾಗಬೇಕೆಂಬ ನಿಯಮವಿತ್ತು. ಅನಂತರ ಅಧ್ಯಕ್ಷ ಸ್ಥಾನ ಗೌರವಸ್ಥಾನವಾಗಿ ರಾಜಮನೆತನದಲ್ಲೇ ಉಳಿಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಉಪಾಧ್ಯಕ್ಷರ ಸ್ಥಾನ ರದ್ದಾಯಿತು. ನಂತರ 1947ರ ಕಾಸರಗೋಡಿನ 29ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೇ ಪರಿಷತ್ತಿನ ಅಧ್ಯಕ್ಷರಾಗಬೇಕೆಂದೂ ಮತ್ತು ಒಂದು ವರ್ಷ ಕಾಲ ಪರಿಷತ್ತಿನ ಕಾರ್ಯಕಾರಿಣಿಯಲ್ಲಿ ಇರಬೇಕೆಂದಾಯಿತು. ಇದರಿಂದ ಕೆಲಸದಲ್ಲಿ ತೊಡಕುಂಟಾಗಿ ಸಮ್ಮೇಳನಾಧ್ಯಕ್ಷರು ಮತ್ತು ಪರಿಷತ್‌ ಅಧ್ಯಕ್ಷರು ಇಬ್ಬರೂ ಬೇರೆಯವರಾಗಿರಬೇಕೆಂದು ನಿರ್ಣಯವಾಯಿತು. 1950ರಲ್ಲಿ ಸೊಲ್ಲಾಪುರದಲ್ಲಿ ನಡೆದ 33ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರು ಬರೀ ಉತ್ಸವ ಮೂರ್ತಿಗಳಾದರೆ ಸಾಲದು, ಪರಿಷತ್ತಿನ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಅಧ್ಯಕ್ಷ ಸ್ಥಾನದ ಅವಧಿ ಮೂರು ವರ್ಷ ಎಂದು ನಿಗದಿಯಾಯಿತು.

1976ರಲ್ಲಿ ಶಿವಮೊಗ್ಗದಲ್ಲಿ ನಡೆದ 49ನೇ ಸಾಹಿತ್ಯ ಸಮ್ಮೇಳನದಿಂದ ‘ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ವೆಂದು ಮರುನಾಮಕರಣ ಮಾಡಲಾಯಿತು.

ಪರಿಷತ್ತಿನ ಧ್ವಜ ಹಾರಾಡಿತು

ಪರಿಷತ್ತಿಗೇ ಪ್ರತ್ಯೇಕವಾದ ಧ್ವಜವಿರಲಿಲ್ಲ. ಕಲಾವಿದ ಕಮಲೇಶ್‌ ವಿನ್ಯಾಸ ಪಡಿಸಿದ ಧ್ವಜವನ್ನು ಪರಿಷತ್ತಿನ ಕಾರ್ಯ ಸಮಿತಿ 1990ರಲ್ಲಿ ಅಂಗೀಕರಿಸಿತು. ಅಖಿಲ ಭಾರತ, ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಪರಿಷತ್ತಿನ ಪ್ರಮುಖ ಸಮಾರಂಭಗಳಲ್ಲಿ ಪರಿಷತ್ತಿನ ಧ್ವಜವನ್ನು ರಾಷ್ಟ್ರ ಧ್ವಜದೊಡನೆ ಹಾರಿಸಲು ಪ್ರಾರಂಭವಾಯಿತು.

ಅಂದಿನಿಂದ ಇಂದಿನವರೆಗೆ ಪರಿಷತ್ತಿನ ಧ್ವಜ ಹಾರಾಡುತ್ತಿದೆ. ಕನ್ನಡ ಧ್ವಜದ ಹಾರಾಟ ನಿರಂತರ.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more