• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಅವನ್ಯಾರೋ ವಿಶ್ವಜ್ಞ ಅನ್ನೋನು ವೆಬ್‌ಪೇಜಲ್ಲಿ ಟೀಕೆ ಮಾಡಿದಾನೆ. ಅಲ್ಲಾ ಮಾರಾಯ. ಎಂಥಾ ನಾನ್‌ಸೆನ್ಸು ! ನೀನು ಬುದ್ಧನ ಬಗ್ಗೆ ಸಿನಿಮಾ ಮಾಡೋದಾದ್ರೆ ಅವನತ್ರ ಸ್ಕಿೃಪ್ಟ್‌ ತೋರ್ಸಿ ಸಲಹೆ ಪಡೀಬೇಕಂತೆ. ಓದಿದ್ಯಾ ಮಾರಾಯ’ ಅಂತ ಕೇಳಿದ...’

By Staff
|
  • ನಾಗತಿಹಳ್ಳಿ ಚಂದ್ರಶೇಖರ

Nagathihalli Chandrashekharನೀಲಿ ನಭದ ಒಂಟಿ ಮೇಘವೇ,

ನಾಗಾಲೋಟದಲ್ಲಿ ಓಡುತ್ತ ಬದುಕಿದವನಿಗೆ ಇಪ್ಪತ್ತೊಂದು ಗಂಟೆ ಅಲುಗಾಡದೆ ಒಂದೇ ಕಡೆ ಕುಳಿತುಕೋ ಅಂದರೆ ಏನಾಗುತ್ತದೆ? ಮರಣ ದಂಡನೆಯನ್ನು ಬೇಕಾದರೂ ಪ್ರೀತಿಯಿಂದ ಒಪ್ಪಿಕೊಳ್ಳಬಹುದು- ಆದರೆ ಶವದಂತೆ ವಿಮಾನದಲ್ಲಿ ಕುಳಿತು ಅಮೆರಿಕೆಗೆ ಯಾನಿಸುವುದಿದೆಯಲ್ಲ ಅದು ವೈರಿಗೂ ಬೇಡ. ಕುಂತಲ್ಲೇ ಕೂರುವುದು ಯಮಹಿಂಸೆ. ಹದಿನೆಂಟನೆ ದಂಡಯಾತ್ರೆಗೆ ಹೊರಟಿದ್ದ ನಾನು ಸೀಟ್‌ ಬೆಲ್ಟು ಕಳಚಿ ವಿಮಾನದೊಳಗೆ ಕಾಲಾಡಿಸುತ್ತಾ ವಾಕಿಂಗ್‌ ಮಾಡತೊಡಗಿದೆ. ತರಾವರಿ ಜನರನ್ನು ನೋಡುವುದೇ ಸೊಬಗು. ಕುಸಿದ ಕುತ್ತಿಗೆ, ಕಟವಾಯಿಯ ಜೊಲ್ಲು, ಬಿಚ್ಚಿಕೊಂಡ ಲ್ಯಾಪ್‌ಟಾಪು, ಹಚ್ಚಿಕೊಂಡ ಇಯರ್‌ಫೋನು ಎಲ್ಲಾ ನೋಡುತ್ತಾ ನಡೆವಾಗ ಅಮೆರಿಕನ್‌ ತರುಣಿಯಾಬ್ಬಳಿ ಬಿಕ್ಕಳಿಸಿ ಅಳುತ್ತಿದ್ದಳು. ಏನವ್ವಾ ನಿನ್ನ ಸಂಕಟ ಅಂತ ಕೇಳಿಬಿಡಬಹುದಿತ್ತು. ಆದರೆ ಅಮೆರಿಕನ್‌ ತಿಕ್ಕಲುಗಳು ನನ್ನ ಅಳುವಿಗೆ ಭಂಗ ತಂದು ಸಂಕಟಪಡದಂತೆ ಅಡ್ಡಿಪಡಿಸಿದ ಎಂದು ‘ ಸೂ’ ಮಾಡಲು ಹೇಸುವವರಲ್ಲ ಎನಿಸಿ ಸುಮ್ಮನಾಗಿ ಸೀದಾ ಹಿಂಬದಿಗೆ ಹೋದವನು ಎಮರ್ಜೆನ್ಸಿ ಬಾಗಿಲ ಬಳಿ ನಿಂತು ಫಿಸಿಯೋತೆರಪಿಯಲ್ಲಿ ಮಗ್ನನಾಗಿರುವಾಗ ಆ ಅಳುಮುಂಜಿ ತಟ್ಟನೆ ಓಡಿಬಂದು ಎಮರ್ಜೆನ್ಸಿ ಬಾಗಿಲ ಹಿಡಿಯನ್ನು ಎತ್ತಿ ತೆರೆಯಲು ಯತ್ನಿಸುವುದೆ? ಅಟ್ಲಾಂಟಿಕ್‌ ಸಮುದ್ರದ ಮೇಲೆ ಹಾರುವಾಗ ಅವಳಿಗೆ ಆತ್ಮಹತ್ಯೆಯ ಯೋಚನೆಯಂತೆ. ನಾನು ಅಚ್ಚ ಕನ್ನಡದಲ್ಲಿ ಅಯ್ಯಯ್ಯೋ ಓಡ್‌ ಬನ್ನಿ ಅಂತ ಕೂಗಿ ಅವಳನ್ನು ಬಲವಾಗಿ ಹಿಡಿಯುತ್ತಿದ್ದಂತೆ ಗಗನ ಸಖ- ಸಖಿಯರು ಧಾವಿಸಿ ಬಂದು ಅಳುಮುಂಜಿಯ ಕೈಗಳನ್ನು ಹಿಂದಕ್ಕೆ ಕಟ್ಟಿ ಅವಳನ್ನು ಕೌನ್ಸಲಿಂಗ್‌ಗೆ ಕರೆದುಕೊಂಡು ಹೋದರು. ತಾನು ಸಾಯುವುದಿರಲಿ ಆರು ನೂರು ಜನರನ್ನು ಸಮುದ್ರಕ್ಕೆ ಕೆಡವಿ ಸಾಯುತ್ತಿದ್ದಳಲ್ಲ ಈ ಅಳುಮುಂಜಿ ಎಂದು ನಿಡುಸುಯ್ದೆ. ಸಿಎನ್‌ಎನ್ನು, ಬಿಬಿಸಿ ಅವರೆಲ್ಲಾ ಬಂದು ‘ವಿಮಾನ ವೀರ’ ಪ್ರಶಸ್ತಿ ಕೊಟ್ಟಾರೆಂದು ಕಾದಿದ್ದವನಿಗೆ ಗಗನಸಖಿ ಬಂದು ಪೈಲಟ್ಟು ಮನಸ್ಸು ಮಾಡದೆ ಹಂಗೆಲ್ಲಾ ಎಮರ್ಜೆನ್ಸಿಯ ಡೋರು ಓಪನ್ನಾಗುವುದಿಲ್ಲ. ನೀನು ಒಳ್ಳೆಯ ಕೆಲಸ ಮಾಡಿರಬಹುದು. ಆದರೆ ಅದು ಪ್ರಶಸ್ತಿಗೆ ಯೋಗ್ಯವೇನೂ ಅಲ್ಲ ಎಂದು ನಿರಾಸೆಗೊಳಿಸಿದ. ಅದಕ್ಕಿಂತ ನಿರಾಸೆಯಾಗಿದ್ದು ಆ ಅಳುಮುಂಜಿಯ ಆತ್ಮಹತ್ಯೆಯ ಕಾರಣ ಕೇಳಿದಾಗ. ಇವಳಮ್ಮ ಇವಳ ಮುದ್ದಿನ ನಾಯನ್ನು ಮನೆಯಿಂದ ಹೊರಹಾಕಿದ್ದಾಳಂತೆ. ವಿಮಾನದಲ್ಲಿರುವಾಗ ಅವಳಿಗೆ ‘ಘೋರ ಸುದ್ದಿ’ ತಲುಪಿತಂತೆ. ನೊಂದು ಆತ್ಮಗತ್ಯೆಗೆ ಯತ್ನಿಸಿದಳಂತೆ. ಅವಳು ಕೊಂಚ ಬಿಡುವು ಮಾಡಿಕೊಂಡು ನಾಗತಿಹಳ್ಳಿಗೆ ಬಂದಿದ್ದರೆ ಒಳ್ಳೆಯ ನಾಯಿಗಳನ್ನು- ಕನಿಷ್ಠ ನೂರನ್ನಾದರೂ ಕೊಡುತ್ತಿದ್ದೆ- ಉಚಿತವಾಗಿ !

ಎದುರು ಸಿಕ್ಕ ಅಮೆರಿಕನ್ನರನ್ನು ಕೇಳುತ್ತಲೇ ಹೋದೆ. ಸರೀನ್ರಪ್ಪಾ ಈಗ ಆಗಿದ್ದಾಯ್ತು. ನಿಮ್‌ ಪ್ರೆಸಿಡೆಂಟು ಇರಾಕ್‌ ಮೇಲೆ ಯುದ್ಧ ಮಾಡಿದ್ದು ಸರೀನಾ? ಸದ್ದಾಂ ಹತ್ರ ಪಾಶುಪತಾಸ್ತ್ರ , ಬ್ರಹ್ಮಾಸ್ತ್ರ ಒಂದೂ ಸಿಗಲಿಲ್ಲ. ಕ್ಯಾತೆ ತೆಗೆದು ಕಾಳಗ ಮಾಡಿದ್ದು ನಿಮಗೆ ಹೇಗನ್ಸುತ್ತೆ? ಅಂದರೆ ಅರ್ಧಕ್ಕಿಂತ ಹೆಚ್ಚು ಮಂದಿ ಬುಶ್‌ ಮಾಡಿದ್ದು ಸಿರ ಅಂತಾರೆ. ಅಮೆರಿಕಾ ಜಗತ್ತಿಗೆ ಹಿರಿ ಅಣ್ಣ ಅಂತೆ. ಲೋಕದಲ್ಲಿ ಏನೇ ತಪ್ಪುಗಳಿದ್ರೂ ಇವರೇ ತಿದ್ದಬೇಕಂತೆ. ಯಥಾ ರಾಜ ತಥಾ ಪ್ರಜಾ !

ವಿಯಟ್ನಾಂನಲ್ಲಿ ಆದ ಮುಖಭಂಗ ನೆನಪೇ ಇಲ್ಲ. ಬಂದೂಕು ಸಂಸ್ಕೃತಿ ಅಂದ್ರೆ ಬರೀ ಇಷ್ಟು, ಯಾವಾಗ ಯಾರ ಮೇಲೆ ಹಾರಿಸ್ಲಿ ಅಂತ ಕಾಯ್ತಿರ್ತಾರೆ. ಜಗತ್ತೂ ತಣ್ಣಗಿದ್ರೆ ಏನೂ ಥ್ರಿಲ್‌ ಸಿಗಲ್ಲ ಅಂತ ಶಾನೇ ಬೇಜಾರು ಮಾಡಿಕೊಳ್ತಾರೆ.

ಈಗ ಏರ್‌ಪೋರ್ಟ್‌ಗಳಲ್ಲಂತೂ ಸಖತ್‌ ತಮಾಷೆ. ಅಂಡರ್‌ವೇರ್‌ ಒಂದನ್ನು ಬಿಟ್ಟು ಎಲ್ಲಾ ಬಿಚ್ಚಿಸ್ತಾರೆ. ಟೈಟ್‌ ಸೆಕ್ಯುರಿಟಿ ! ಇಷ್ಟೆಲ್ಲಾ ಹಾರಾಡಿದರೂ ಇವರ ಕೈಯಿಂದ ನಮ್‌ ಬೆಳ್ಳೂರ ಸಾಬಿ ತರಾ ಇರೋ ಬಿನ್‌ ಲಾಡೆನ್‌ ಹಿಡಿಯೋಕಾಗಲಿಲ್ಲ. ಸದ್ದಾಂ ಸುಳಿವೇ ಇಲ್ಲ. ಜಗತ್ತಿನಲ್ಲಿ ಭಯೋತ್ಪಾದನೆ ಅಳಿಸಿ ಪ್ರಜಾಪ್ರಭುತ್ವವನ್ನು ಸ್ಥಾಪಿಸ್ತೀವಿ ಅಂತಾರೆ. ಆದರೆ ಸರ್ವಾಧಿಕಾರ ಇರೋ ಪಾಕಿಸ್ತಾನವನ್ನು ಸಪೋರ್ಟ್‌ ಮಾಡ್ತಾರೆ. ಇದನ್ನೆಲ್ಲಾ ನೋಡುತ್ತಿದ್ರೆ ಅಮೆರಿಕಾನೇ ಒಂದು ದೊಡ್ಡ ಟೆರರಿಸ್ಟ್‌ ಅನ್ಸುತ್ತೆ. ಜರ್ಮನಿಯ ನಾಜಿಗಳು ಗುಪ್ತವಾಗಿ ಹಿಟ್ಲರನ್ನ ಮೆಚ್ಚೋ ಹಾಗೆ ಅಮೆರಿಕನ್ನರು ಬುಶ್‌ನನ್ನು ಆರಾಧಿಸ್ತಾರೆ. ಈ ಬುಶ್‌ ಪಿತೃವಾಕ್ಯ ಪರಿಪಾಲಕ. ಶ್ರೀರಾಮ ಇದ್ದಹಾಗೆ. ತನ್ನಪ್ಪನ ವೈರಿಗಳನ್ನು ಸಂಹಾರ ಮಾಡಬೇಕು ಅನ್ನೋ ಹಠ. ಇಂಗ್ಲಂಡಿನಲ್ಲಿ ಉಗಿಸಿಕೊಂಡು ಬಂದಿದ್ದಾನೆ. ಜರ್ಮನಿಯಲ್ಲೂ ಪೂಜೆ ಆಗಿದೆ. ಆದರೆ ಹಠ ಬಿಡಲೊಲ್ಲ. ಅವನ ಭಾಷಣ ಕೇಳಬೇಕು. ಅಂತ ಖಡಕ್ಕು. ರಣ ಕಹಳೆ. ಲೋಕೋದ್ಧಾರಕನ ಗತ್ತು. ಸೂಕ್ಷ್ಮವಾಗಿ ಅವನ ಮುಖದ ಗೆರೆಗಳನ್ನು ನೋಡಿ- ಯುದ್ಧ, ರಕ್ತ ಪಿಪಾಸೆ, ಕ್ರೌರ್ಯ ಎದ್ದು ಕಾಣುತ್ತೆ. ಯುದ್ಧ ಮಾಡೋದಿಕ್ಕೇಂತ ಜನಿಸಿದ ಹಾಗೆ ಕಾಣ್ತಾನೆ. ಅವನಿಗೊಂದಿಷ್ಟು ವಿವೇಕ ಹೇಳೋಣಾಂತ ನಾನು ಅಮೆರಿಕಾಗೆ ಹೋದರೆ ಬುಶ್‌ ಲಂಡನ್ನಿಗೆ ಹೋಗಿದ್ದ, ಪಾಪಿ !

ಈ ರಾಜ್ಯೋತ್ಸವ ಸೀಸನ್‌ನಲ್ಲಿ ಕನ್ನಡದ ಕಂದಮ್ಮಗಳನ್ನಾದರೂ ಕಾಣೋಣ ಅಂತ ಆ ಭಾನುವಾರ ಡೆಟ್ರಾಯಿಟ್‌ನ ಇಮ್ಯಾಜಿನ್‌ ನ್ನೋ ತಿಯೇಟರ್‌ಗೆ ಹೋದೆ. ಅಲ್ಲಿ ಒಂದು ಡಬ್ಬಾ ಸಿನಿಮಾ ಷೋ ಇತ್ತು. ಅದರ ಹೆಸರು ‘ಪ್ಯಾರಿಸ್‌ ಪ್ರಣಯ’ . ಎಲ್ಲ ಸಿನಿಮಗಳನ್ನು ಡಬ್ಬಾ ಅಂತ ಕರೀಬಹುದೇನೋ. ಯಾಕೆಂದರೆ ಅದನ್ನು ಡಬ್ಬದಲ್ಲೇ ಇರಿಸೋದು ! ನಮ್ಮ ತುಮಕೂರು ದಯಾನಂದು ಟುಪುಟುಪು ಅಂತ ಅತ್ತಿಂದಿತ್ತ ಇತ್ತಿಂದತ್ತ ಓಡಾಡ್ತಿತ್ತು. ಹೊರಗೆ ಮಳೆ- ಛಳಿ. ನೂರೆಪ್ಪತ್ತೆೈದು ಜನ ಬಂದಿದ್ರು. ಮಳೆ ಇಲ್ಲದಿದ್ರೆ ಇನ್ನೂ ಜಾಸ್ತಿ ಬರತಿದ್ರು- ಅಂತ ಥೇಟು ಗಾಂಧಿನಗರದ ಡಿಸ್ಟ್ರಿಬ್ಯೂಟರ್‌ ತರಾ ದಯಾನಂದು ಚಡಪಡಿಸ್ತಿದ್ರು. ‘ನನ್ನ ಪ್ರೀತಿಯ ಹುಡುಗಿ’ಲಿ ಮಾಡಿದ ದುಡ್ಡನ್ನು ಪ್ಯಾರಿಸ್‌ ಪ್ರಣಯದಲ್ಲಿ ಕಳಕೊಂಡ ಮೇಲೂ ಬುದ್ಧಿ ಬರದೆ ತೆಲುಗು ಸಿನಿಮಾ ತಗೀತಾ ಇದ್ದಾರೆ. ಅದಕ್ಕೆ ಮಾಯೆ ಅನ್ನೋದು ! ಅದರ ಕೈಗಳು ಬಲೆ ಉದ್ದ... ಎಷ್ಟು ಉದ್ದ ಅಂದರೆ ಗಾಂಧಿನಗರದಿಂದ ಡೆಟ್ರಾಯಿಟ್‌ವರೆಗೆ. ದಯಾನಂದ ಗಾರುಗೆ ಎರಡು ಸಾರ್‌ ಗುಡ್‌ಲಕ್‌ ಅಂದೆ.

ಮಾತುಮಾತಿಗೂ ಮಾರಾಯ ಮಾರಾಯ ಅನ್ನೋ ಹನುಮಂತ ರೆಡ್ಡಿ ಟೆಕ್ಸಾಸ್‌ನಿಂದ ಫೋನ್‌ ಮಾಡಿ ‘ಗೊತ್ತಾ ಮಾರಾಯ? ಅವನ್ಯಾರೋ ವಿಶ್ವಜ್ಞ ಅನ್ನೋನು ವೆಬ್‌ಪೇಜಲ್ಲಿ ಟೀಕೆ ಮಾಡಿದಾನೆ. ಅಲ್ಲಾ ಮಾರಾಯ. ಎಂಥಾ ನಾನ್‌ಸೆನ್ಸು ! ನೀನು ಬುದ್ಧನ ಬಗ್ಗೆ ಸಿನಿಮಾ ಮಾಡೋದಾದ್ರೆ ಅವನತ್ರ ಸ್ಕಿೃಪ್ಟ್‌ ತೋರ್ಸಿ ಸಲಹೆ ಪಡೀಬೇಕಂತೆ. ಓದಿದ್ಯಾ ಮಾರಾಯ’ ಅಂತ ಕೇಳಿದ. ‘ಇಲ್ಲಪ್ಪ ಅದಕ್ಕೆಲ್ಲ ಪುರುಸೊತ್ತೆಲ್ಲಿದೆ? ನಾನು ಬುದ್ಧನ ತಂಡೆಗೆ ಹೋದವನಲ್ಲ. ದಾವಣಗೆರೆ ಸಂವಾದದಲ್ಲಿ ಜೇಬರ್‌ ಬುದ್ಧನ ಬಗ್ಗೆ ಸಿನಿಮಾ ಮಾಡು ಅಂತ ಸಲಹೆ ಕೊಟ್ಟ. ಹಾಗೆಲ್ಲ ಪಬ್ಲಿಕ್‌ ಪಂಕ್ಷನ್‌ನಲ್ಲಿ ಉಮೇದಿನಲ್ಲಿ, ಉತ್ಸಾಹದಲ್ಲಿ ಇಂತದ್ದೇ ಸಿನಿಮಾ ಮಾಜ್ತೀನಿ ಅಂತ ಕಮಿಟ್‌ ಮಾಡಿಕೊಳ್ಳೋದು ತಪ್ಪು. ನನ್ನ ಮುಂದಿನ ಸಿನಿಮಾ ಯಾವುದು ಅಂತ ನನಗಿನ್ನೂ ಗೊತ್ತಿಲ್ಲ ಅಂದೆ. ಆದ್ರೂ ಮೀಡಿಯಾದಲ್ಲಿ ನಾನು ಬುದ್ಧನ ಸಿನಿಮಾನೇ ಮಾಡ್ತೀನಿ ಅಂತ ಸುದ್ದಿಯಾಗಿದೆ. ಏನು ಬಡಕೊಂಡು ಸಾಯೋದು ಹೇಳು? ಎಲ್ಲ ಸೇರಿ ನನ್ನೇ ಕಾಡಿಗೆ ಕಳಿಸ್ತಾರೇನೋ !’ ಎಂದೆ. ರೆಡ್ಡಿ ಮತ್ತೆ ‘ಅಲ್ಲಾ ಮಾರಾಯ’ ಅಂದ. ‘ಥ್ಯಾಂಕ್ಯೂ ! ಈ ಸಾರಿ ಬೇಡ. ಅದೆಲ್ಲ ಹಾಗಿರ್ಲಿ. ಅಮೆರಿಕಾಗೆ ವುಮೆನ್‌ ಡೈರೆಕ್ಟರ್ಸು ಬಂದ್ರೆ ನೀನ್‌ ಓಡೋಡಿ ಬಂದು ಮೀಟ್‌ ಮಾಡ್ತಿ. ನಾನು ಬಂದ್ರೆ ನಿಂಗೆ ಉತ್ಸಾಹಾನೇ ಇರಲ್ಲ. ನೀನೇ ಟೆಕ್ಸಾಸ್‌ಗೆ ಬಂದ್ಹೋಗು ಅನ್ತೀಯಲ್ಲ ಅದರ ಬದಲು ನೀನೇ ಡೆಟ್ರಾಯಿಟ್‌ಗೆ ಬರಬಹುದಿತ್ತಲ್ವ?’ ಅಂತ ರೇಗಿಸಿದೆ. ‘ಅದು ಹಂಗಲ್ಲ ಮಾರಾಯ...’ ಅಂತ ರೆಡ್ಡಿ ಜೋರಾಗಿ ನಕ್ಕ. ಒಟ್ಟಿನಲ್ಲಿ ರೆಡ್ಡಿ ಆರು ಸಾರಿ ಮಾರಾಯ ಅಂದಿದ್ದ. ಶೋ ಮುಗಿದ ಮೇಲೆ ಅವನ ಮಾತು ನಿಜ ಅನ್ನಿಸ್ತು. ಯಾರೋ ಮಹಾನುಭಾವ ‘ಇದು ಕೆಟ್ಟ ಸಿನಿಮಾ- ನೋಡಬೇಡಿ’ ಅಂತ ಮಾಸ್‌ ಈಮೈಲ್‌ ಕೊಟ್ಟಿದ್ದನಂತೆ. ‘ನಾನು ಅಳುಕಿನಿಂದಲೇ ಬಂದೆ. ಆದ್ರೆ ಸಿನಿಮಾ ಹಿಡಿಸ್ತು’ ಅಂದರು ಪ್ರೇಕ್ಷಕರೊಬ್ಬರು. ‘ಈಗ ಅಮೆರಿಕಾದಲ್ಲಿ ಸೈಬರ್‌ ಕ್ರಿಮಿನಲ್ಲುಗಳು ಜಾಸ್ತಿ. ಅಲ್ಪಮತಿಗಳಾದವರೂ ಸರ್ವಜ್ಞ ಅಂತ ಹೆಸರಿಟ್ಕೊಂಡು ಫೇಕ್‌ ಈಮೈಲ್‌ ಕಳಿಸ್ತಿರ್ತಾರೆ’ ಅಂದರು ಮತ್ತೊಬ್ಬರು. ನಾನು ಮಾತು ಮುಗಿಸುತ್ತಾ ಹೇಳಿದೆ- ‘ನನಗಿದರಲ್ಲಿ ಕೊಂಚವೂ ಆಸಕ್ತಿ ಇಲ್ಲ. ಆದರೆ ಒಳ್ಳೆಯ ಸಿನಿಮಾ ನೋಡದಿದ್ರೆ ಕೆಟ್ಟ ರೀಮೇಕುಗಳು ವಿಜೃಂಭಿಸ್ತಾವೆ ಅನ್ನೋದು ಮರೀಬೇಡಿ. ನೀವು ಉತ್ತಮ ಅಬಿರುಚಿಯ ಸಿನಿಮಾಗಳನ್ನು ನೋಡದಿದ್ರೆ ನಿರ್ಮಾಪಕ- ನಿರ್ದೇಶಕರಿಗೆ ಆಗೋ ನಷ್ಟಕ್ಕಿಂತ ನಿಮಗೇ ಆಗೋ ನಷ್ಟ ದೊಡ್ಡದು’ ಅಂದೆ. ಕೊಬ್ಬಿನ ಉತ್ತರ ಅನ್ನಿಸುತ್ತಾ?

ಹದಿಮೂರು ವರ್ಷದ ಹಿಂದೆ ಮೊದಲಿಗೆ ಈ ದೇಶಕ್ಕೆ ಬಂದ ಆ ರಾತ್ರಿ ನೆನಪಾಗತೊಡಗಿತು. ಅತಿಥೇಯನ ತಿರಸ್ಕಾರ, ರಾತ್ರಿ ಇಡೀ ಜೆಎಎಫ್‌ಕೆಯಲ್ಲಿ ಕೇಳುವವರಿಲ್ಲದೆ ಕಳೆದಿದ್ದು, ತಂದ ಹಣ ಮುಗಿದಿದ್ದು, ಅರೆ ಹೊಟ್ಟೆಯಲ್ಲಿ ಅಲೆದಾಡಿದ್ದು, ಹಟಕ್ಕೆ ಬಿದ್ದು ಇಲ್ಲೇ ಸಿನಿಮಾ ಮಾಡಿದ್ದು, ಅನೇಕ ಗೆಳೆಯರನ್ನು ಗಳಿಸಿದ್ದು, ಆತ್ಮಕ್ಕೆ ಹತ್ತಿರವಾದದ್ದನ್ನಿರಿಸಿಕೊಂಡು ಉಳಿದದ್ದನ್ನೂ ವರೆಸಿ ಹಾಕಿದ್ದು....

ಬೆಳಗ್ಗೆ ಎದ್ದು ‘ಗುಡ್‌ಮಾರ್ನಿಂಗ್‌ ಅಮೆರಿಕಾ’ ಹಾಕಿದರೆ ಟೀವಿಯಲ್ಲಿ ಮೈಕೇಲ್‌ ಜಾಕ್ಸನ್ನನದೇ ವಿವಾದ. ಅಪ್ರಾಪ್ತ ವಯಸ್ಸಿನ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಂಬ ಆರೋಪ. ಹೊಸ ಆಲ್ಬಮ್‌ ತರುತ್ತಿರುವ ಜಾಕ್ಸನ್‌ ಜನಪ್ರಿಯತೆಗಾಗಿ ತಾನೇ ವಿವಾದ ಸೃಷ್ಟಿಸಿಕೊಂಡ ಅನ್ನುವವರೂ ಇದ್ದಾರೆ. ಮೂರು ಮಿಲಿಯನ್‌ ಡಾಲರ್‌ ಕೊಟ್ಟು ಜಾಮೂನು ಪಡೆದಿರುವ ಜಾಕ್ಸನ್‌ ಆರೋಪವನ್ನು ನಿರಾಕರಿಸಿದ್ದಾನೆ. ಅವನ ವಕೀಲ ಮಾರ್ಕ್‌ ಗೆರಾಗಸ್‌ ಕೂಡಾ ಈಗ ಎಲ್ಲ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಸ್ಟಾರ್‌ ಆಗಿದ್ದಾನೆ. ಜಾಕ್ಸನ್‌ ಅಭಿಮಾನಿಗಳು ತಮ್ಮ ಆರಾಧ್ಯ ದೈವವನ್ನು ಕೈಕೋಳ ಹಾಕಿ ಕೋರ್ಟಿಗೆಳೆದಿರುವುದರ ವಿರುದ್ಧ ಮುನಿದು ಪ್ರದರ್ಶನ ನಡೆಸಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಈಗ ಅಮೆರಿಕಾದ ‘ರಾಷ್ಟ್ರೀಯ ಜ್ವಲಂತ ಸಮಸ್ಯೆ’ ಇದು ! ಫ್ರೀವಿಲ್ಲಿ ಚಿತ್ರದಲ್ಲಿ ಮೈಕೇಲ್‌ನ ಅದ್ಭುತ ಸಂಗೀತ ಸಂಯೋಜನೆ, ಆ ಚಿತ್ರದ ಗಳಿಕೆಯನ್ನು ಸಾಮಾಜಿಕ ಸದುದ್ದೇಶಕ್ಕೆ ಬಳಸಿದ ಅವನ ಸನ್ನಡತೆಯಾಂದಿಗೆ ಈ ವಿವಾದವನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಇಂಥ ವಿರೋಧಾಭಾಸಗಳೇ ಅಮೆರಿಕನ್‌ ಜೀವನ ಶೈಲಿ ಇರಬಹುದಾ? ಎಂಬತ್ತರ ದಶಕದ ಜನಪ್ರಿಯ ಪಾಪ್‌ ತಾರೆ ಉದ್ದಕ್ಕೂ ವಿವಾದಾಸ್ಪದ ವ್ಯಕ್ತಿಯೇ. ಇರಾಕಿನಲ್ಲಿ ಸಾಯುತ್ತಿರುವ ಅಮೆರಿಕನ್‌ ಯೋಧನನ್ನು ಮರೆಯಲು ಈ ಸುದ್ದಿ ನೆರವಾಗುತ್ತಿದೆಯೆ? Thats America !

(ಸ್ನೇಹಸೇತು- ಹಾಯ್‌ ಬೆಂಗಳೂರ್‌!)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more