ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಕೆ ಹೋರಾಡು ಕನ್ನಡದ ಕಂದ-ಯಾರ್ಯಾರು ಏನೇನಂತಾರೆ?

By Staff
|
Google Oneindia Kannada News
  • ದಟ್ಸ್‌ಕನ್ನಡ ಬ್ಯೂರೊ
Kannada Flagಯು.ಆರ್‌.ಅನಂತಮೂರ್ತಿ : ನಮ್ಮ ಸಂಸ್ಕೃತಿ ಮತ್ತು ಭಾಷೆ ಬದುಕುವುದು ಅಭಿವೃದ್ಧಿಯ ಬಸ್ಸನ್ನು ಮಿಸ್‌ ಮಾಡಿಕೊಳ್ಳುತ್ತಿರುವ ಜನರಿಂದ ಮಾತ್ರ.

ಚಂದ್ರಶೇಖರ ಪಾಟೀಲ : ಅಂದರೆ, ನಮ್ಮ ಸಂಸ್ಕೃತಿ ಉಳಿಯಬೇಕಾದರೆ ಜನ ಅನಕ್ಷರಸ್ಥರೂ ಹಿಂದುಳಿದವರೂ ಆಗಿ ಸದಾ ಉಳಿಯಬೇಕೆಂದು ಅರ್ಥವೇ?

(ಇದೊಂದು ಹಳೆಯ ಸಣ್ಣ ವಾದ)

ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ : ಸಾಕು ಪ್ರಾಣಿಗಳಿಗೆ ಕನ್ನಡದಲ್ಲೇ ಹೆಸರಿಡಿ. ಕನ್ನಡದಲ್ಲೇ ಪ್ರೀತಿಸಿ, ಕನ್ನಡದಲ್ಲೇ ಜಗಳವಾಡಿ. ಆಫೀಸಷ್ಟೇ ಅಲ್ಲ, ಪೊಲೀಸ್‌ ಠಾಣೆ, ಪೋಸ್ಟಾಫೀಸು, ಬ್ಯಾಂಕು, ಬಸ್‌ ಸ್ಟ್ಯಾಂಡು- ಎಲ್ಲ ಕಡೆ ಕನ್ನಡವನ್ನೇ ಮಾತನಾಡಿ. ಆಗ ಕನ್ನಡ ಉಳಿಸಿ ಅಂತ ಬೊಬ್ಬೆ ಹೊಡೆಯುವ ಪ್ರಶ್ನೆಯೇ ಇರುವುದಿಲ್ಲ.

ವಿ.ಬಿ.ತಾರಕೇಶ್ವರ್‌, ಹಂಪಿ ವಿಶ್ವವಿದ್ಯಾಲಯದ ಅನುವಾದ ವಿಭಾಗದ ಉಪನ್ಯಾಸಕ : ನಮ್ಮ ಮುಂದಿರುವುದು ಕನ್ನಡ ಉಳಿಸುವ ಪ್ರಶ್ನೆಯಲ್ಲ. ಇಂಗ್ಲಿಷ್‌ ಬಲ್ಲ ಹಾಗೂ ಇಂಗ್ಲಿಷ್‌ ಬಲ್ಲದವರ ನಡುವಿನ ಅಸಮಾನತೆಯನ್ನು ಹೋಗಲಾಡಿಸುವುದು. ಈ ಅಸಮಾನತೆಯ ಒತ್ತಡದಿಂದ ಇಂಗ್ಲಿಷ್‌ ಬಾರದವ ಕೂಡ ಅದನ್ನು ಕಲಿತು, ಕನ್ನಡದ ಹಾದಿಯಿಂದ ದೂರಾಗುತ್ತಿರುವುದು ಆತಂಕ ಪಡಬೇಕಾದ ವಿಷಯ.

ಎ.ಕೆ.ರಾಮಾನುಜನ್‌ ಹೇಳುತ್ತಿದ್ದರು- ನಾನೊಬ್ಬ ‘ಹೈಫೆನ್‌’ ಮನುಷ್ಯ. ಬಹುಭಾಷೆಗಳಲ್ಲಿ ನಾನು ಬದುಕುತ್ತೇನೆ. ಆಫೀಸಲ್ಲಿ ಇಂಗ್ಲೀಷು, ಅಡುಗೆಮನೆಯಲ್ಲಿ ಅಮ್ಮನ ಜೊತೆ ತಮಿಳು, ಬೀದಿಗಿಳಿದರೆ ಗೆಳೆಯರ ಜೊತೆ ಪ್ರೀತಿಯ ಕನ್ನಡ.

ನವ ನಾಯಕಿ ರಮ್ಯ : ಕನ್ನಡ ಬರುತ್ತೆ. ಇಂಗ್ಲಿಷ್‌ ಇರುತ್ತೆ. ಇಂಗ್ಲಿಷ್‌ ಕಂಫರ್ಟಬಲ್‌. ಒಂದೊಂದು ಸಲ ಕನ್ನಡ ಓದೋದು ಕಷ್ಟ ಕಷ್ಟ. ಕನ್ನಡ- ಇಂಗ್ಲಿಷ್‌ ಎರಡೂ ಕಲಿತು ಮುನ್ನುಗ್ಗೋಣ.

ಸುನಿಲ್‌ ರಾವ್‌, ನಟ (ಬಿ.ಕೆ.ಸುಮಿತ್ರ ಪುತ್ರ) : ಇಂಗ್ಲಿಷ್‌ ಕೂಲ್‌. ಕೆಲವರಿಗೆ ಇಂಗ್ಲೀಷೇ ಲೈಫ್‌ಸ್ಟೈಲ್‌. ನಂಗೆ ಕನ್ನಡ- ಇಂಗ್ಲಿಷ್‌ ಎರಡೂ ಸಲೀಸ್‌. ಎಲ್ಲರಿಗೂ ಹೀಗೇ ಆಗಲಿ. ಇಂಗ್ಲಿಷ್‌ ಬಿಡೋದ್‌ ಬ್ಯಾಡ, ಕನ್ನಡ ಮರೆಯೋದ್‌ ಬ್ಯಾಡ.

ಎಸ್‌.ಶ್ರೀರಂಗ, ವಕೀಲ : ಇವತ್ತು ಎರಡು ವರ್ಷದ ಮಗುವಿಗೆ ಒನ್‌, ಟೂ, ಥ್ರೀ ಕಲಿಸುವ ಬೆಂಗಳೂರಿನ ಅಮ್ಮಂದಿರು ಒಂದು ಎರಡು ಬಾಳೆಲೆ ಹರಡು ಅಂತಿದೆ ಅನ್ನೋದನ್ನ ಹೇಳೋದೇ ಇಲ್ಲ. ಇನ್ನು ಬಣ್ಣಗಳನ್ನು ಕೂಡ ಪಿಂಕ್‌, ಆರೆಂಜ್‌, ರೆಡ್‌, ಯೆಲ್ಲೋ ಅಂತಲೇ ಹೇಳಿಕೊಡುತ್ತಾರೆ. ಮೊದಲ ಪಾಠಶಾಲೆ ಮನೆಯಲ್ಲೇ ಇಂಗ್ಲಿಷ್‌ ಗೊಬ್ಬರ ಹಾಕಿದರೆ ಫಲ ಕೂಡ ಇಂಗ್ಲಿಷ್‌ದೇ ತಾನೇ ಸಿಗುತ್ತೆ ?

ಶಿವಣ್ಣ, ಕಮರ್ಷಿಯಲ್‌ ಸ್ಟ್ರೀಟ್‌ ಅಂಗಡಿಯಾಂದರ ಕೆಲಸಗಾರ : ನಾನು ಅಣ್ಣಾವ್ರ ಅಭಿಮಾನಿ. ನಾನು ಹುಟ್ಟಿದಾಗಿನಿಂದ ರಿಲೀಸ್‌ ಆದ ದಿನವೇ ಅವರ ಎಲ್ಲ ಸಿನಿಮಾ ನೋಡಿದೀನಿ. ಮನೆಯವರಿಟ್ಟ ಹೆಸರನ್ನು ಬದಲಿಸಿ, ಅವರ ಮಗನ ಹೆಸರನ್ನು ಇಟ್ಟುಕೊಂಡಿದೀನಿ. ಹೀಗೆ ಕನ್ನಡದ ವಾತಾವರಣ, ಅಭಿಮಾನದಲ್ಲೇ ಬೆಳೆದ ನಾನು ಈಗ ಹೊಟ್ಟೆ ಪಾಡಿಗೆ ಇಂಗ್ಲೀಷನ್ನೇ ಮಾತಾಡಬೇಕು. ಅಂಗಡಿಯಲ್ಲಿನ ಸಿಬ್ಬಂದಿ ಜೊತೆ ಕನ್ನಡದಲ್ಲಿ ಮಾತಾಡುವುದೂ ಕಷ್ಟ. ಮೊನ್ನೆ ಈ ಶರ್ಟಿಗೆ ಎಷ್ಟು ಗುರು ಅಂತ ಕೇಳಿದ್ದಕ್ಕೆ ಅಂಗಡಿಯವರು ವಾರ್ನ್‌ ಮಾಡಿದರು. ಈ ಅಂಗಡಿಗೆ ಬರುವ ಎಷ್ಟೋ ಗಿರಾಕಿಗಳಿಗೆ ರಾಜ್‌ಕುಮಾರೇ ಗೊತ್ತಿಲ್ಲ. ಇದು ನನ್ನ ಅರಿವಿಗೆ ಬಂದಾಗ ಆಗುವ ಸಂಕಟ ಅಷ್ಟಿಷ್ಟಲ್ಲ.

ನೀವೇನಂತೀರಿ?


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X