ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಸಾಹಿತ್ಯ ಸಮ್ಮೇಳನ 4 ದಿನ ನಡೆಸಿ : ಪುನರೂರು

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

Harikrishna Punarooruಬೆಳಗಾವಿ : ಸಾಹಿತಿಗಳು ಬ್ಯಾಗು ಹಿಡಕೊಂಡು ಹೋದರೆ ಯಾರೂ ದುಡ್ಡು ಕೊಡೋಲ್ಲ. ಹಣ ಸಂಗ್ರಹಣೆಗೆ ಸಚಿವರು, ಶಾಸಕರು ಹೊರಡಬೇಕು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹರಿಕೃಷ್ಣ ಪುನರೂರು 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ವಿ.ಎಸ್‌.ಕೌಜಲಗಿ, ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಶಾಸಕ ರಮೇಶ ಕುಡಚಿಯವರಿಗೆ ನೇರವಾಗಿ ಕರೆ ಕೊಟ್ಟರು.

ಮಾರ್ಚ್‌ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುರಿತು ಜನವರಿ 31, ಶುಕ್ರವಾರ ನಡೆದ ಸಭೆಯಲ್ಲಿ ಪುನರೂರು ಆಡಿದ ಖಡಕ್ಕು ಮಾತುಗಳ, ಕೊಟ್ಟ ಸಲಹೆಗಳ ಪಟ್ಟಿ ಮಾಡುವುದಾದರೆ-

  • ಸಮ್ಮೇಳನಕ್ಕೆ ಮುಂಚೆಯೇ ಹಣದ ಕ್ರೋಢೀಕರಣ ಬಲು ಮುಖ್ಯ ಅನ್ನುವುದನ್ನು ನಾನು ಪದೇ ಪದೇ ಹೇಳುತ್ತಲೇ ಇದ್ದೇನೆ. ಅವರು ಅಷ್ಟು ಕೊಡುತ್ತಾರೆ, ಇವರು ಅಷ್ಟು ಕೊಡುತ್ತಾರೆ ಅಂತ ಹೇಳಿದರೆ ಆಗದು. ಸರ್ಕಾರ 25 ಲಕ್ಷ ರುಪಾಯಿ ಕೊಡುವ ಭರವಸೆ ಕೊಟ್ಟಿದೆ. ಸರ್ಕಾರಿ ನೌಕರರು ಒಂದು ದಿನದ ಪಗಾರ ಕೊಡುತ್ತಾರೆ ಅಂತ ಹೇಳಿದರೆ ಪ್ರಯೋಜನವಿಲ್ಲ. ಈಗ ಎಷ್ಟು ಹಣ ಜಮೆಯಾಗಿದೆ ಅನ್ನುವುದು ನನಗೆ ಗೊತ್ತಾಗಬೇಕು.
  • ಊರಲ್ಲಿ ಒಂದೂ ಬ್ಯಾನರ್‌ ಇಲ್ಲ. ಮೊದಲು ಸಮ್ಮೇಳನಕ್ಕೆ ಸಾಕಷ್ಟು ಪ್ರಚಾರ ಕೊಡಿ.
  • ಸಮ್ಮೇಳನದ ಸ್ಥಳದಲ್ಲಿ 400 ಮಳಿಗೆಗಳು ಇರಬೇಕು.
  • ಪುಸ್ತಕಗಳ ಜೊತೆಗೆ ಕಾಫಿ, ಸಿಗರೇಟಿಗೂ ಮಳಿಗೆಗಳು ಇರಬೇಕು.
  • 70 ಪುಸ್ತಕ ಪ್ರಕಟಿಸುವ ಸಂಪ್ರದಾಯ ಕೈಬಿಡಬೇಡಿ. ಲೇಖಕರಿಗೆ ತಲಾ 5 ಸಾವಿರ ರುಪಾಯಿ ಸಹಾಯಧನ ಕೊಡುತ್ತೇವೆ. 100 ಪುಸ್ತಕ ನಮಗೆ ಕೊಡಿ ಎಂದರೆ, ಲೇಖಕರೇ ಉತ್ಸಾಹದಿಂದ ಪುಸ್ತಕಗಳನ್ನು ಪ್ರಕಟಿಸುತ್ತಾರೆ.
  • ಬಂಟ್ವಾಳ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲೇ 18 ಪುಸ್ತಕ ಪ್ರಕಟಿಸಿರುವಾಗ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ 70 ಪುಸ್ತಕ ಪ್ರಕಟಿಸುವುದು ಸಾಧ್ಯವಿಲ್ಲವೇ?
  • ಸಮ್ಮೇಳನದ ಅವಧಿಯನ್ನು ಮೂರು ದಿನಗಳಿಂದ ನಾಲ್ಕು ದಿನಗಳಿಗೆ ಮಾಡಿ. ಮೆರವಣಿಗೆ, ಉದ್ಘಾಟನೆಯಲ್ಲೇ ಕಳೆದು ಹೋಗುವ ಒಂದು ದಿನ ಸಾಹಿತ್ಯಿಕ ಚಟುವಟಿಕೆಗಳನ್ನು ಮೊಟಕುಗೊಳಿಸಲು ಕಾರಣವಾಗುತ್ತದೆ. ಹೀಗಾಗಿ ಸಮ್ಮೇಳನ ಒಂದು ದಿನ ಹೆಚ್ಚು ಅವಧಿ ನಡೆಯಲಿ.
ಹಣ ಸಂಗ್ರಹಣೆಯ ವಿಚಾರದಲ್ಲಿ ಪುನರೂರರ ಖಡಕ್ಕು ಕರೆಗೆ ವಿ.ಎಸ್‌.ಕೌಜಲಗಿ ತಿರುಗೇಟಿನ ಉತ್ತರ ಕೊಟ್ಟರು. ಮುಖ್ಯಮಂತ್ರಿಗಳು ವಿದೇಶದಿಂದ ಈಗ ತಾನೆ ಮರಳಿದ್ದಾರೆ. ಸರ್ಕಾರದಿಂದ ಬರಬೇಕಾದ ಹೆಚ್ಚುವರಿ ಹಣ ಇನ್ನು ಕೆಲವೇ ದಿನಗಳಲ್ಲಿ ಮಂಜೂರಾಗುತ್ತದೆ. ಕೇಳಿದ ತಕ್ಷಣ ಎಲ್ಲ ಹಣ ಬರುವುದಿಲ್ಲ. ನೌಕರರು ಮನೇಲಿ ಹಣ ತಂದಿಟ್ಟುಕೊಳ್ಳುವುದಿಲ್ಲ. ಸಮ್ಮೇಳನಕ್ಕೆ ಹಣದ ಕೊರತೆ ಆಗದು. ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಡ ಎಂದು ಕೌಜಲಗಿ ಹೇಳಿದರು.

ಮಾತಿನ ಚಕಮಕಿ : 70ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿರುವ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಸ್‌.ಎಂ.ಹರದಗಟ್ಟಿ ಹಾಗೂ ಹರಿಕೃಷ್ಣ ಪುನರೂರು ನಡುವೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು. ಸಭೆ ಮುಗಿದ ನಂತರ ಸುದ್ದಿಗಾರರು ಪುನರೂರನ್ನು ಪ್ರಶ್ನೆ ಕೇಳತೊಡಗಿದರು. ಹಠಾತ್ತನೆ ಮಧ್ಯೆ ನುಗ್ಗಿದ ಹರದಗಟ್ಟಿ, ‘ನೀವು ಪತ್ರಕರ್ತರಿಗೆ ಏನೂ ಹೇಳಬೇಡಿ. ಈಗಾಗಲೇ ನೀವು ಕೊಟ್ಟಿರುವ ಹೇಳಿಕೆಗಳಿಂದ ನಮಗೆ ನೋವಾಗಿದೆ. ಸಂಜೆ ಕೌಜಲಗಿ ಸುದ್ದಿಗೋಷ್ಠಿ ಕರೆದಿದ್ದಾರೆ. ಏನಿದ್ದರೂ ಅಲ್ಲಿ ಹೇಳಿ’ ಎಂದು ಗದರಿದಂತೆ ಮಾತಾಡಿದರು.

ಇದು ಸುದ್ದಿಗೋಷ್ಠಿಯಲ್ಲ. ಏನೋ ಕೇಳುತ್ತಿದ್ದಾರೆ. ನೋವಾಗುವುದು ನಿಮಗೊಬ್ಬರಿಗೇ ಅಲ್ಲ, ನಮಗೂ ಆಗುತ್ತದೆ ಎಂದು ಉತ್ತರಸಿದ ಹರಿಕೃಷ್ಣ ಪುನರೂರು ಸ್ಥಳದಿಂದ ಬಿರಬಿರನೆ ನಡೆದರು.

ಸಮ್ಮೇಳನಕ್ಕೆ ಮುನ್ನವೇ ಸ್ವಾಗತ ಸಮಿತಿ ಹಾಗೂ ಸಾಹಿತ್ಯ ಪರಿಷತ್‌ ಅಧ್ಯಕ್ಷರ ನಡುವೆ ತಾಳಮೇಳ ಸರಿಯಿಲ್ಲ. ಸ್ವಾಗತ ಸಮಿತಿ ನಿರ್ಣಯ ತೆಗೆದುಕೊಳ್ಳುವ ಮುಂಚೆ ತಮಗೆ ಹೇಳುವುದಿಲ್ಲ ಅನ್ನುವುದು ಪುನರೂರರ ದೂರು. ಪುನರೂರರೇ ಪತ್ರಿಕೆಗಳಿಗೆ ಇಲ್ಲ ಸಲ್ಲದ ಹೇಳಿಕೆ ಕೊಡುತ್ತಾರೆ ಅನ್ನುವುದು ಸ್ವಾಗತ ಸಮಿತಿಯ ಆರೋಪ.

ಸಮ್ಮೇಳನ ಶುರುವಾಗುವ ಹೊತ್ತಿಗೆ ಇನ್ನೂ ಏನೇನು ನಡೆಯುತ್ತದೋ !


ಪೂರಕ ಓದಿಗೆ-
ಬರವಣಿಗೆ ಸಾಕಾಯಿತೇನವ್ವ ?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X