ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆ ನೆನಪಲ್ಲಿ ಕಾ.ವೆಂ. ಕಣ್ಣು ತೇವವಾಯ್ತು !

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೋ

In memory of Bendre..‘ಸನ್ಮಾನ ತನ್ನ ಅಸಾಧಾರಣತೆಯ ಬೆಲೆ ಕಳಕೊಂಡಿದೆ. ಸನ್ಮಾನ ಬೇಡ ಅಂದ ಬೇಂದ್ರೆ ಇವತ್ತು ಇಲ್ಲ, ಕುವೆಂಪು ಇಲ್ಲ. ರಾಜಕೀಯದ ಜೊತೆ ತಳಕು ಹಾಕಿಕೊಂಡು ಸಾಹಿತಿಗಳು ಹಾಳಾಗಿದ್ದಾರೆ...’
ಇಷ್ಟು ಹೇಳುವಷ್ಟರಲ್ಲಿ ಸಾಹಿತಿ ಹಾಗೂ ಇವತ್ತಿಗೂ ಮೇಷ್ಟ್ರಾಗಿರುವ ಎಂಬತ್ತರ ಹರೆಯದ ಕಾ.ವೆಂ.ರಾಜಗೋಪಾಲ್‌ ಕಂಠ ಗದ್ಗದವಾಯಿತು. ಕಣ್ಣು ತುಂಬಿಬಂತು. ‘ಸಂಚಯ’ ಸಾಂಸ್ಕೃತಿಕ ಪತ್ರಿಕೆಯ ಬಳಗ ವರಕವಿ ಬೇಂದ್ರೆ ಜಯಂತಿ ದಿನ (ಜ.31) ಹಮ್ಮಿಕೊಂಡಿದ್ದ ಪುಟ್ಟ ಸಮಾರಂಭ ಅದು. ಕಾವ್ಯ, ಕಥೆ, ಲೇಖನಗಳನ್ನು ಬರೆದು ಭೇಷೆನಿಸಿಕೊಂಡ ಯುವ ಸಾಹಿತಿಗಳಿಗೆ ಬಹುಮಾನ ಕೊಡುವುದು ಈ ಸಮಾರಂಭ ಆಯೋಜಿಸಲು ಒಂದು ನೆವವಷ್ಟೆ ಆಗಿತ್ತು. ವೇದಿಕೆ ಮೇಲೆ ರಾಜಗೋಪಾಲ್‌ ಜೊತೆಗೆ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗುರುಲಿಂಗ ಕಾಪಸೆ ಹಾಗೂ ಕವಿ ಸುಬ್ರಾಯ ಚೊಕ್ಕಾಡಿ ಇದ್ದರು. ಸಹೃದಯರ ಸಾಲಿನಲ್ಲಿ ಅನೇಕರ ನೆಚ್ಚಿನ ಮೇಷ್ಟ್ರು ಸಾಹಿತ್ಯ ಪರಿಚಾರಕ ಚಿ.ಶ್ರೀನಿವಾಸ ರಾಜು ಇದ್ದರು.

ಬೇಂದ್ರೆ ಹಾಗೂ ಕುವೆಂಪು ಕಾವ್ಯದ ಸಾಲುಗಳನ್ನು ಭಾವುಕರಾಗಿ ಮೆಲುಕು ಹಾಕಿದ ಕಾ.ವೆಂ., ಪರ್ಣಕುಟಿಯ ದಿನಗಳ ನೆನಪಿಗೆ ಸರಿದರು-
‘ಸಿದ್ಧವನಹಳ್ಳಿ ಕೃಷ್ಣಶರ್ಮರ ಪರ್ಣಕುಟಿ. ಅಲ್ಲಿ ಯಾರೂ ಹಾಕಿದ ಚಪ್ಪಲಿಯನ್ನು ಒಳಕ್ಕೆ ತರುತ್ತಿರಲಿಲ್ಲ. ಬೇಂದ್ರೆ ಹಾಗೂ ಸಿದ್ಧವನಹಳ್ಳಿ- ಇಬ್ಬರ ಪೈಕಿ ಯಾರು ಮಾತಿನ ಮಲ್ಲರೋ, ಯಾರು ಹರಟೆ ಮಲ್ಲರೋ ಗೊತ್ತಿಲ್ಲ. ಆದರೆ, ಅವರಿಬ್ಬರ ನಡುವೆ ನಡೆಯುತ್ತಿದ್ದ ಆತ್ಮೀಯ ಮಾತುಕತೆ ಕಾಲವೇ ನಿಶ್ಚಲವೇನೋ ಅನ್ನುವಷ್ಟರ ಮಟ್ಟಿಗೆ ಇರುತ್ತಿತ್ತು. ಬೇಂದ್ರೆ ಕಾವ್ಯ ಶಕ್ತಿಯಾದರೆ, ಸಿದ್ಧವನಹಳ್ಳಿಯವರದ್ದು ಗದ್ಯ ಶಕ್ತಿ. ಅವರಂತೆ ಲೇಖನ ಬರೆಯುವ ತಾಕತ್ತು ನಮಗಿಲ್ಲ. ಇನ್ನೂ ಯಾಕ ಬರಲಿಲ್ಲವ ಹುಬ್ಬಳ್ಳಿಯವ.. ಎಂಬಂಥ ಹಾಡು ಯಾರಿಗೂ ಬರೆಯೋಕಾಗಲ್ಲ. ಬಡತನದ ಅನುಭವದಲ್ಲೂ ಸೌಂದರ್ಯ ದರ್ಶನ ಕಂಡವರು ಬೇಂದ್ರೆ. ’

ರಾಜಕೀಯ ಹಾಗೂ ಸಾಹಿತ್ಯವನ್ನು ತಕ್ಕಡಿಯಲ್ಲಿಟ್ಟು ಪದೇ ಪದೇ ತೂಗಿದ ಕಾ.ವೆಂ., ಪೂರ್ಣಚಂದ್ರ ತೇಜಸ್ವಿ ರಾಜಕೀಯದಿಂದ ಸಂಪೂರ್ಣವಾಗಿ ಕತ್ತರಿಸಿಕೊಂಡಿರುವುದರಿಂದಲೇ ಅವರು ಸಾಹಿತಿಯಾಗೇ ಉಳಿದಿದ್ದಾರೆ ಎಂದರು. ರಾಜಕೀಯದೊಡನೆ ಮುಖಾಮುಖಿ ಹೋರಾಟಕ್ಕೆ ನಿಂತರೂ ಹೃದಯದಾಳಕ್ಕೆ ಧೂಳು ಮುತ್ತುತ್ತದೆ. ಪ್ರಶಸ್ತಿಗಾಗಿ ಸಾಹಿತಿಗಳಾಗಬೇಡಿ. ಹಳೆಯ ಸಾಹಿತ್ಯವನ್ನು ವಿಮರ್ಶೆ ಮಾಡುವ ತಾಕತ್ತು ಬೆಳೆಸಿಕೊಳ್ಳಿ ಎಂದು ಯುವ ಸಾಹಿತಿಗಳಿಗೆ ಕರೆ ಕೊಟ್ಟರು.

ಒಬ್ಬ ಸಾಹಿತಿಯ ಸಮಾಧಿಗೆ, ಆತನ ನೆನಪಿಗೆ ಸಲ್ಲುವ ಸನ್ಮಾನವೇ ನಿಜವಾದ ಸನ್ಮಾನ ಎಂದ ಕಾ.ವೆಂ, ನನ್ನಲ್ಲಿ ಇವತ್ತಿಗೂ ಆತಂಕ ಒಂದೇನೆ ಜೀವಂತವಾಗಿರುವುದು ಎಂದು ನಿಟ್ಟುಸಿರಿಟ್ಟರು.

ಬೇಂದ್ರೆಗೆ ಸಾಧನಕೇರಿಯೇ ವಿಶ್ವ. ಕಾರಂತರಿಗೆ ವಿಶ್ವ ಪರ್ಯಟನೆಯೇ ಸಾಧನೆ. ಬೇಂದ್ರೆಯವರದ್ದು ಗಣೇಶ ಪ್ರತಿಭೆಯಾದರೆ, ಕಾರಂತರದ್ದು ಸುಬ್ರಮಣ್ಯ ಸಾಧನೆ- ಇದು ಕವಿ ಸುಬ್ರಾಯ ಚೊಕ್ಕಾಡಿಯವರು ಮಾಡಿದ ತುಲನೆ. ಕಾವ್ಯ ವಿಷಯ ಚಿಂತನೆಯಲ್ಲ, ಶಬ್ದಾರ್ಥ ದರ್ಶನ ಎಂಬ ಬೇಂದ್ರೆಯವರ ಮಾತನ್ನು ನೆನಪಿಸಿದ ಚೊಕ್ಕಾಡಿ, ‘ಹೂತುಂಬಿದ ಮರದ ನೆರಳು ಹೂವಿಗಿಂತ ಹಗುರ’ ಎಂಬ ಕಾ.ವೆಂ.ರಾಜಗೋಪಾಲರ ಕಾವ್ಯದ ಸಾಲನ್ನೇ ಅದಕ್ಕೆ ಉದಾಹರಣೆಯಾಗಿ ಹೇಳಿದರು.

ಬೇಂದ್ರೆ ಹಾಗೂ ಅವರ ಜೀವದ ಗೆಳೆಯ ಮಧುರ ಚೆನ್ನರನ್ನು ಆಳವಾಗಿ ಓದಿಕೊಂಡಿರುವ ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಗುರುಲಿಂಗ ಕಾಪಸೆ ಕೂಡ ಪರ್ಣಕುಟಿಯ ದಿನಗಳನ್ನು ಮೆಲುಕು ಹಾಕಿದರು. ಬೇಂದ್ರೆ ಕಾವ್ಯದ ಅರ್ಥವನ್ನು ಅಚ್ಚುಕಟ್ಟಾಗಿ ಹೇಳಬಲ್ಲ ಏಕೈಕ ವ್ಯಕ್ತಿ ಮಧುರ ಚೆನ್ನ ಆಗಿದ್ದರು ಎಂದರು.

ಯಾವುದೋ ಪ್ರಶಸ್ತಿ ಬಂದಾಗ, ಅದರ ಹಣದಲ್ಲಿ ಬೇಂದ್ರೆ ಚುರುಮುರಿ ಕೊಂಡರಂತೆ. ಇದೇನು ಅಂತ ಗೆಳೆಯರು ಪ್ರಶ್ನಿಸಿದರೆ, ಹಸಿವಾಗಿತ್ತು ಕಣ್ರಯ್ಯಾ ಅಂದರಂತೆ. ಅಂಥಾ ಸರಳ ಜೀವಿಯಾಗಿದ್ದ ಬೇಂದ್ರೆ ಬಡತನದಲ್ಲೂ ಒಂದು ಸುಖ ಕಂಡುಕೊಂಡಿದ್ದರು. ‘ಕನ್ನಡದ ಪದ್ಯಗಳು ಹ್ಯಾಗೆ ಹೊಳ್ಳಿಸಿದರೆ ಹಾಗೆ ಹೊಳ್ತಾವೆ’ ಅಂತ ಬೇಂದ್ರೆ ಹೇಳುತ್ತಿದ್ದರೆಂದು ಕಾಪಸೆ ನೆನಪಿಸಿಕೊಂಡರು.

ಹೀಗಿದ್ದರು ಕಾ.ವೆಂ-
ಕಾ.ವೆಂ.ರಾಜಗೋಪಾಲರನ್ನು ಪರಿಚಯಿಸಿದಾಗ ರಾಜು ಮೇಷ್ಟ್ರು (ಚಿ.ಶ್ರೀನಿವಾಸ ರಾಜು) ಹೇಳಿದ ಪುಟ್ಟ ಕತೆ ಕೇಳಿ- ‘ಕಾ.ವೆಂ. ಅವರಿಗೆ ಸಾಕಷ್ಟು ಭತ್ತದ ಗದ್ದೆ ಇತ್ತು. ಆಗ ಉಳುವವನಿಗೇ ಭೂಮಿ ಅಂತ ಸರ್ಕಾರ ಆದೇಶ ಕೊಟ್ಟಿತು. ಗದ್ದೇನೆಲ್ಲ ಕಾ.ವೆಂ. ಕಳಕೋಬೇಕಾಗಿ ಬಂತು. ಮನೆಯವರು ಕೋರ್ಟಿಗೆ ಹೋಗುವಂತೆ ಕಾ.ವೆಂ. ಅವರನ್ನು ಕಳುಹಿಸಿಕೊಟ್ಟರು. ಕೋರ್ಟಿಗೆ ಹೋದ ಕಾ.ವೆಂ. ಕಟಕಟೆಯಲ್ಲಿ ನಿಂತು, ಈ ಜಾಗವೆಲ್ಲ ಆ ರೈತನಿಗೇ ಸೇರಬೇಕು, ನನಗಲ್ಲ ಅಂತ ಹೇಳಿ ಬಂದರು.!’

ಅಂದಹಾಗೆ, ಬೇಂದ್ರೆ ಬದುಕಿದ್ದಿದ್ದರೆ, ಅವರಿಗೆ 108 ತುಂಬಿರುತ್ತಿತ್ತು.


ಪೂರಕ ಓದಿಗೆ-
ಬರವಣಿಗೆ ಸಾಕಾಯಿತೇನವ್ವ ?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X