ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುರಾಷ್ಟ್ರೀಯ ಕಂಪನಿಗಳಲ್ಲಿ ದಲಿತರಿಗೆ ಮೀಸಲಾತಿ

By Super
|
Google Oneindia Kannada News

ಬೆಂಗಳೂರು : ಖಾಸಗಿ ಕಂಪನಿಗಳು ಹಾಗೂ ರಾಜ್ಯದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವ ಬಹುರಾಷ್ಟ್ರೀಯ ಕಂಪನಿಗಳು ಮೀಸಲಾತಿ ನೀತಿಯನ್ನು ಕಡ್ಡಾಯವಾಗಿ ಅನುಸರಿಸುವ ಕಾನೂನು ಜಾರಿಗೊಳಿಸುವಂತೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರಿ ಸೇವೆಯ ಪ್ರತಿ ಹಂತದಲ್ಲೂ ಶೇ.25 ರ ಮೀಸಲಾತಿಯನ್ನು ಪರಿಶಿಷ್ಟ ಜಾತಿ ಮತ್ತು ವರ್ಗದ ಅಭ್ಯರ್ಥಿಗಳಿಗೆ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೋಮವಾರ (ಸೆ.3) ಹಮ್ಮಿಕೊಂಡಿದ್ದ ಬೃಹತ್‌ ರ್ಯಾಲಿಯನ್ನು ಉದ್ಘಾಟಿಸಿ ಅನಂತಮೂರ್ತಿ ಮಾತನಾಡುತ್ತಿದ್ದರು. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ವ್ಯವಹಾರದಲ್ಲಿ ಕನ್ನಡವನ್ನೂ ಬಳಸುವ ತಮ್ಮ ಒತ್ತಾಯ ವನ್ನು ಅವರು ಪುನರುಚ್ಛರಿಸಿದರು.

ಮೀಸಲಾತಿ ಕರುಣೆಯಿಂದ ಹುಟ್ಟಿದ್ದಲ್ಲ . ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಸಾಧಿಸುವ ಮೂಲಕ ಸುಭದ್ರ ಭಾರತವನ್ನು ರೂಪಿಸುವುದು ಮೀಸಲಾತಿಯ ಉದ್ದೇಶ. ಸಮಾನತೆಯ ಹಸಿವು ವ್ಯಾಪಕ ಹಾಗೂ ಆಳವಾಗಿ ಬೇರೂರುತ್ತಿರುವ ಈ ದಿನಗಳಲ್ಲಿ ದಲಿತ ಚಳವಳಿ ದೇಶದ ಮಹತ್ತರ ಚಳವಳಿಯಾಗಿದೆ ಎಂದು ಅನಂತಮೂರ್ತಿ ಹೇಳಿದರು.

ಸಂಸ್ಕೃತದ ಸ್ಥಾನದಲ್ಲಿರುವ ಇಂಗ್ಲೀಷ್‌ನಿಂದ ಅಸಮಾನತೆ

ಒಂದಾನೊಂದು ಕಾಲದಲ್ಲಿ ಸಂಸ್ಕೃತ ಸಮಾಜದಲ್ಲಿ ತಾರತಮ್ಯ ಉಂಟುಮಾಡುತ್ತಿತ್ತು . ಪ್ರಸ್ತುತ ಸಂಸ್ಕೃತದ ಸ್ಥಾನವನ್ನು ಇಂಗ್ಲೀಷ್‌ ಆಕ್ರಮಿಸಿದೆ ಎಂದು ಆಪಾದಿಸಿದ ಅನಂತಮೂರ್ತಿ, ಇಂಗ್ಲೀಷ್‌ನಿಂದ ಪ್ರಗತಿ ಸಾಧ್ಯ ಎನ್ನುವುದಾದರೆ ಎಲ್ಲ ವರ್ಗದ ಮಕ್ಕಳಿಗೂ ಇಂಗ್ಲೀಷ್‌ನಲ್ಲಿಯೇ ಶಿಕ್ಷಣ ನೀಡಬೇಕು ಎಂದರು. ಇದು ಸಾಧ್ಯವಾಗದಿದ್ದಲ್ಲಿ ಎಲ್ಲ ಮಕ್ಕಳಿಗೂ ಕನ್ನಡದಲ್ಲಿಯೇ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದ ಅವರು, ಶಿಕ್ಷಣ ನೀಡಿಕೆಯಲ್ಲಿ ತಾರತಮ್ಯ ಸಲ್ಲದೆಂದರು.

ಸಾಕಷ್ಟು ಬಡವರು, ಅವಮಾನಿತರು, ದುಃಖಿಗಳನ್ನು ಪಡೆದಿರುವ ಭಾರತ ದ್ವಿತೀಯ ದರ್ಜೆಯ ದೇಶವಾಗಿ ಉಳಿದಿದೆ ಎಂದು ವಿಷಾದಿಸಿದ ಅನಂತಮೂರ್ತಿ, ಮಧ್ಯಮ ವರ್ಗದವರ ಸುಖಕ್ಕೆ ಬಲಿಯಾಗದಿರಲು ದಲಿತರಿಗೆ ಕರೆ ನೀಡಿದರು. ದಲಿತರು ದ್ವೇಷವನ್ನು ಬೇಕಾದರೆ ಮರೆಯಲಿ, ಆದರೆ ತಮ್ಮ ನೋವುಗಳನ್ನು ಮರೆಯಬಾರದು ಎಂದ ಅವರು, ದಲಿತರ ನೋವುಗಳೇ ದೇಶೋದ್ಧಾರದ ತಾರಕ ಮಂತ್ರ ಎಂದರು.

ಸಮಾಜದ ವಿವಿಧ ವರ್ಗಗಳ ಮುಖಂಡರು ಭಾಗವಹಿಸಿದ್ದ ರ್ಯಾಲಿಯಲ್ಲಿ ವ್ಯಕ್ತವಾದ ಇತರ ಅಭಿಪ್ರಾಯಗಳು :

ಮೀಸಲಾತಿಯನ್ನು ಸಂವಿಧಾನದ ಪರಿಚ್ಛೇದ 9 ರಲ್ಲಿ ಸೇರಿಸಬೇಕು. ಸರ್ಕಾರ ಹಣ ಖರ್ಚು ಮಾಡುವ ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಮೀಸಲಾತಿ ಲಭ್ಯವಾಗಬೇಕು - ಪ್ರೊ.ರವಿಕುಮಾರ ವರ್ಮ, ಹಿಂದುಳಿದ ಆಯೋಗಗಳ ಮಾಜಿ ಅಧ್ಯಕ್ಷ.
ಕೇಂದ್ರ ಸರ್ಕಾರ ಪಂಚಾಂಗದ ಆಡಳಿತವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಜಾಗತೀಕರಣದ ನೆಪದಲ್ಲಿ ದಲಿತರನ್ನು ಉದ್ಯೋಗದಿಂದ ವಂಚಿಸುವ ಹುನ್ನಾರವೂ ನಡೆದಿದೆ. ಇದರ ವಿರುದ್ಧ ಹೋರಾಟ ನಡೆಯಬೇಕು- ಎಚ್‌.ಸಿ.ಮಹಾದೇವಪ್ಪ , ಮಾಜಿ ಸಚಿವ.
ದಲಿತರ ಮಕ್ಕಳಿಗೆ ಸಮರ್ಪಕ ಶಿಕ್ಷಣ ದೊರಕಲು, ದಲಿತ ಇಂಜಿನಿಯರ್‌ಗಳು ಸೇರಿದಂತೆ ಎಲ್ಲ ವಿದ್ಯಾವಂತರು ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು- ದೇವನೂರು ಮಹಾದೇವ, ಕಥೆಗಾರ.
ಕೇಂದ್ರ ಸರ್ಕಾರ ಶಿಕ್ಷಣ ಮತ್ತು ಸಂವಿಧಾನವನ್ನು ಕೇಸರೀಕರಣ ಮಾಡುತ್ತಿದೆ. ಏಕ ಸಂಸ್ಕೃತಿಯನ್ನು ಬಹುಮುಖಿ ದೇಶದ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದೆ- ಎಚ್‌.ಜಿ.ಬಾಲಕೃಷ್ಣ , ನಿವೃತ್ತ ನ್ಯಾಯಮೂರ್ತಿ.

(ಇನ್ಫೋ ಇನ್‌ಸೈಟ್‌)

English summary
Dr U.R.Ananthamurthy urges for SC/ST reservation in MNCs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X