ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊಂದಲಪುರಿ ರಂಗಾಯಣ: ಅಪ್ರಸನ್ನರ ಹತಾಶ ನುಡಿಗಳು...

By Staff
|
Google Oneindia Kannada News

ಮೈಸೂರು : ಕಲಾಮಂದಿರ- ರಂಗಾಯಣದ ನಡುವೆ ಗೋಡೆ ಕಟ್ಟುತ್ತಿದ್ದಾರೆ. ಅಡುಗೆ ಭಟ್ಟರನ್ನು ಬಲವಂತವಾಗಿ ಓಡಿಸುತ್ತಿದ್ದಾರೆ. ದಲಿತ ಕೆಲಸಗಾರರೊಬ್ಬರನ್ನು ಹೀನಾಯವಾಗಿ ಕಾಣುತ್ತಿದ್ದಾರೆ ಎಂಬಿತ್ಯಾದಿ ಗಂಭೀರ ಆರೋಪಗಳನ್ನು ಅಧಿಕಾರಿಗಳು ನನ್ನ ಮೇಲೆ ಹೊರಿಸುತ್ತಿದ್ದಾರೆ. ಉನ್ನತ ಮಟ್ಟದ ತನಿಖೆ ನಡೆಯಲಿ. ನಾನು ಖಂಡಿತ ತಪ್ಪಿತಸ್ಥನೇ ಆಗಿದ್ದರೆ ನೈತಿಕ ಹೊಣೆ ಹೊತ್ತು, ರಂಗಾಯಣಕ್ಕೆ ರಾಜೀನಾಮೆ ಕೊಡುತ್ತೇನೆ.

ನಾಟಕಕಾರ ಪ್ರಸನ್ನ ನೊಂದಿದ್ದರು. ಬರುವ ಭಾನುವಾರ ರಂಗಾಯಣದ ಆವರಣದಲ್ಲಿ ನಡೆಯಲಿರುವ ಕೈಮಗ್ಗ ಕರಕುಶಲ ವಸ್ತು ಪ್ರದರ್ಶನದ ವಿವರಣೆ ಕೊಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರಾಡಿದ ಮಾತುಗಳು ರಂಗಾಯಣದಲ್ಲಿನ ಅಪಸ್ವರಕ್ಕೆ ಕನ್ನಡಿ ಹಿಡಿದವು.

ಕಲಾರಂಗದ ಆವರಣದಲ್ಲಿ ರಂಗಾಯಣದವರು ಬಿಟ್ಟಿಯಾಗಿ ಬಿದ್ದಿದ್ದಾರೆ ಎಂಬಂಥ ಅವಹೇಳನಕಾರಿ ಪತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೈಸೂರಿಗರಿಗೆ ರಂಗಾಯಣ ಬೇಡವಾದರೆ ಅದನ್ನು ಬೇರೆಡೆಗೆ ವರ್ಗಾಯಿಸಲು ಸಿದ್ಧ.

ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು.

ರಂಗಾಯಣದಲ್ಲಿ ಕ್ಯಾಂಟೀನ್‌ ಶುರುಮಾಡುವ ಪ್ರಸ್ತಾಪ ಬಂತು. ಕಲಾಮಂದಿರದ ಆವರಣದಲ್ಲಿರುವ ಅಡುಗೆ ಭಟ್ಟರನ್ನೇ ಇಲ್ಲಿಯೂ ಅಡುಗೆ ಮಾಡುವಂತೆ ಕೇಳಿದೆ. ಅವರು ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಈ ಪ್ರಸ್ತಾಪವನ್ನು ರಂಗ ಸಮಾಜದ ಸಭೆಯ ಮುಂದಿಟ್ಟೆ. ಕಲಾವಿದರೇ ಕ್ಯಾಂಟೀನ್‌ ನಡೆಸಬೇಕೆಂದು ಅಲ್ಲಿ ತೀರ್ಮಾನವಾಯಿತು. ನಂತರ, ಕಲಾವಿದರು ನಾಟಕ ಮಾಡುವುದನ್ನು ಬಿಟ್ಟು, ಕ್ಯಾಂಟೀನ್‌ ನಡೆಸುತ್ತಾರಂತೆ ಎಂಬ ಲೇವಡಿಯ ಮಾತುಗಳು ಕೇಳಿಬಂದವು. ಪ್ರೊ.ಕೆ.ರಾಮದಾಸ್‌ ಕೂಡ ಸರಿಯಾಗಿ ವಿಷಯ ತಿಳಿದುಕೊಳ್ಳದೆ ಪತ್ರಿಕೆಯಾಂದಕ್ಕೆ ಹೇಳಿಕೆ ಕೊಟ್ಟರು. ಇದು ಸರಿಯೇ ಎಂದು ಪ್ರಶ್ನಿಸಿದರು.

ರಂಗಾಯಣಕ್ಕೆ ಸ್ವಾಯತ್ತತೆ ಕಲ್ಪಿಸುವುದು ನನ್ನಗುರಿ. ಅದು ಈಡೇರುವವರೆಗೂ ನಾನು ಹಲ್ಲು ಕಚ್ಚಿಕೊಂಡಿರುತ್ತೇನೆ. ನನ್ನ ಕನಸು ಈಡೇರಿದ ಮೇಲೆ ಒಂದು ಕ್ಷಣವೂ ಇಲ್ಲಿರುವುದಿಲ್ಲ. ರಂಗಾಯಣದ ಅಧ್ಯಕ್ಷರೆಲ್ಲಾ ನೊಂದವರೇ. ಬಿ.ವಿ.ಕಾರಂತರು, ಬಸವಲಿಂಗಯ್ಯನವರೂ ಅಧಿಕಾರಿಗಳ ಕಾಟ ತಾಳಲಾರದೆ ರಂಗಾಯಣ ಬಿಟ್ಟು ಹೋದರು. ನನಗೂ ಅಂಥದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಖೇದದಿಂದ ಹೇಳಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X