ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬಸವಣ್ಣನ ಅರಿಯಲು ಬುದ್ಧನ ವಿಚಾರಗಳ ಬುನಾದಿ ಅಗತ್ಯ’

By Staff
|
Google Oneindia Kannada News

ಬೆಂಗಳೂರು : ದಕ್ಷಿಣ ಭಾರತದ ಶೈವ ಬುದ್ಧ ಎನಿಸಿಕೊಂಡಿರುವ ಬಸವಣ್ಣನವರ ವಿಚಾರಗಳ ಆಂತರ್ಯಕ್ಕೆ ಹೋಗಬೇಕಾದಲ್ಲಿ ಭಗವಾನ್‌ ಬುದ್ಧನ ಬಗೆಗೂ ಪೂರ್ಣ ಪ್ರಮಾಣದ ಅಧ್ಯಯನ ಅಗತ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅಭಿಪ್ರಾಯ ಪಟ್ಟಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ, ಮಹಾಬೋಧಿ ಸಮಾಜ ಭಾನುವಾರ ಜಂಟಿಯಾಗಿ ಹಮ್ಮಿಕೊಂಡಿದ್ದ ವೈ.ಬಿ.ನಂದನ ವಿರಚಿತ ‘ಭಗವಾನ್‌ ಬುದ್ಧ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಅಧ್ಯಕ್ಷ ಭಾಷಣ ಮಾಡುತ್ತಿದ್ದರು. ಅಭಿಜ್ಞ ಬುದ್ಧ ಹಾಗೂ ಆತನ ಸಿದ್ಧಾಂತಗಳ ಬಗೆಗೆ ಅಧ್ಯಯನ ಮಾಡಲು ಅನುವು ಮಾಡಿಕೊಡುವ ಉದ್ದಿಶ್ಯದಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯ ಬೌದ್ಧ ಸಂಸ್ಕೃತಿ ಅಧ್ಯಯನ ಕೇಂದ್ರವನ್ನು ರಚಿಸಿದ್ದು, ಅದು ಕಳೆದ ಶನಿವಾರದಿಂದಲೇ(ಫೆ.17) ಅಸ್ತಿತ್ವಕ್ಕೆ ಬಂದಿದೆ ಎಂದರು.

ಬೌದ್ಧ ಧರ್ಮದ ಮೂಲ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿ ಗ್ರಂಥಗಳನ್ನು ಪ್ರಕಟಿಸುವುದು. ಬೌದ್ಧ ಸಂಸ್ಕೃತಿಯ ಸತ್ತ್ವ ತಿಳಿಯಲು ತಿಂಗಳಿಗೊಮ್ಮೆ ಉಪನ್ಯಾಸ, ವಿಚಾರ ಸಂಕಿರಣ ಆಯೋಜಿಸುವುದು ಹಾಗೂ ಸಂಶೋಧನೆಗೆ ಒತ್ತು ಕೊಡುವುದು ಕೇಂದ್ರದ ಉದ್ದೇಶ. ಹೊಸ ವಿಚಾರಗಳನ್ನು ಶೋಧಿಸಲು ಬೌದ್ಧ ಸಂಸ್ಕೃತಿ ಅಧ್ಯಯನ ಕೇಂದ್ರ ಶ್ರಮಿಸಲಿದೆ ಎಂದು ಕಲಬುರ್ಗಿ ಹೇಳಿದರು.

ಮಹಾಬೋಧಿ ಸೊಸೈಟಿಯ ಬೌದ್ಧ ಧರ್ಮಗುರು ಭಿಕ್ಕು ಆನಂದಜೀ ಕೃತಿ ಬಿಡುಗಡೆ ಮಾಡಿದರು. ನಂತರ ಕೃತಿ ಕರ್ತೃ ವೈ.ಬಿ.ನಂದನ ಸಂಕ್ಷಿಪ್ತ ಕೃತಿ ಪರಿಚಯ ಮಾಡಿಕೊಟ್ಟರು. ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ.ಮ.ನ.ಜವರಯ್ಯ ಕೂಡ ಬಸವಣ್ಣನವರನ್ನು ಓದಿಕೊಳ್ಳಲು ಬುದ್ಧನ ವಿಚಾರಗಳ ಗಂಧ- ಗಾಳಿಯೂ ಅತ್ಯಗತ್ಯ ಎಂದು ಹೇಳಿ ಕಲಬುರ್ಗಿ ಅವರ ವಿಚಾರವನ್ನು ಸಮರ್ಥಿಸಿದರು.

ದೆಹಲಿಯಲ್ಲಿ ಈಗಾಗಲೇ ನಮ್ಮ ರಾಷ್ಟ್ರೀಯ ಸಂಸ್ಕೃತಿ ಹದಗೆಡಿಸುವ ಕೆಲಸ ಶುರುವಾಗಿದೆ. ದೇಶೀ ಸಂಸ್ಕೃತಿಯ ಬಗೆಗೆ ಒಲವಿರುವ ಜನ ಇದನ್ನು ಮಟ್ಟ ಹಾಕಿ, ಸಂಸ್ಕೃತಿಯ ಉಳಿವಿಗೆ ಮುಂದಾಗಬೇಕು. ಬುದ್ಧನ ವಿಚಾರ, ತತ್ತ್ವಗಳು ಶಾಲಾ ಮಕ್ಕಳಿಗೂ ತಲುಪುವಂತೆ ಮಾಡಬೇಕು. ಕನ್ನಡ ವಿವಿ ಈ ದಿಸೆಯಲ್ಲಿ ಕೆಲಸ ಮಾಡಲಿದೆ ಎಂಬ ಭರವಸೆ ಇದೆ ಎಂದು ಜವರಯ್ಯ ಅಭಿಪ್ರಾಯಪಟ್ಟರು.

ಕನ್ನಡ ವಿವಿ ಪ್ರಸಾರಾಂಗದ ನಿರ್ದೇಶಕ ಎ.ವಿ.ನಾವಡ, ಕೇಂದ್ರ ಗ್ರಾಹಕ ಸೇವೆಗಳ ರಾಜ್ಯ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X