ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಕ್ಕಳಿಗೆಂದೇ ಅಕಾಡೆಮಿಯಾಂದಿರಲಿ’ -ಕವಿ ಚನ್ನವೀರ ಕಣವಿ

By Staff
|
Google Oneindia Kannada News

ಧಾರವಾಡ : ಬೇರೆ ಬೇರೆ ವಿಷಯಗಳಿಗಾಗಿ ಕೋಟಿಗಟ್ಟಲೆ ರುಪಾಯಿ ಖರ್ಚು ಮಾಡುವ ಸರ್ಕಾರ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅಕಾಡೆಮಿಯಾಂದನ್ನು ತೆರೆಯಬೇಕೆಂದು ಹಿರಿಯ ಕವಿ ಚನ್ನವೀರ ಕಣವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶಿಕ್ಷಣ, ಸಾಹಿತ್ಯ, ಸಂಗೀತ ಹಾಗೂ ಕಲೆಯೂ ಸೇರಿದಂತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ನಿಟ್ಟಿನಲ್ಲಿ ಮಕ್ಕಳಿಗೇ ಪ್ರತ್ಯೇಕವಾದ ಅಕಾಡೆಮಿಯಾಂದರ ಸ್ಥಾಪನೆಯ ಅಗತ್ಯವಿದೆ ಎಂದು ಕಣವಿ ಅಭಿಪ್ರಾಯಪಟ್ಟರು. ಚಿಲಿಪಿಲಿ ಪ್ರಕಾಶನದ ಗುಬ್ಬಚ್ಚಿಗೂಡು ಪತ್ರಿಕೆಯ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಏರ್ಪಾಡಾಗಿದ್ದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಾತೃ ಗರ್ಭದಿಂದ ಹೊರ ಬರುವ ಮುನ್ನವೇ ಕಾನ್ವೆಂಟ್‌ಗಳಲ್ಲಿ ಮಕ್ಕಳ ಹೆಸರನ್ನು ನೋಂದಾಯಿಸುವ ಶೈಕ್ಷಣಿಕ ಪದ್ಧತಿಯನ್ನಿಂದು ಕಾಣುತ್ತಿದ್ದೇವೆ ಎಂದು ವಿಷಾದಿಸಿದ ಅವರು, ಮಕ್ಕಳಿಗೆ ನೀಡುವ ಶಿಕ್ಷಣದ ಮಾಧ್ಯಮ, ಸ್ವರೂಪ ಮುಂತಾದವುಗಳ ಬಗೆಗೆ ನಾವೆಲ್ಲ ಚಿಂತಿಸಬೇಕಾಗಿದೆ ಎಂದು ಕಳಕಳಿ ವ್ಯಕ್ತಪಡಿಸಿದರು.

ಟಿವಿ, ಕಂಪ್ಯೂಟರ್‌ನಂತಹ ವಿದ್ಯುನ್ಮಾನ ಮಾಧ್ಯಮಗಳು ಮಕ್ಕಳ ಸೃಜನಶೀಲ ಶಕ್ತಿಯನ್ನು ಕಸಿಯುತ್ತಿರುವ ದುರಂತವನ್ನು ತಡೆಗಟ್ಟಬೇಕಾದ ಸಾಂಸ್ಕೃತಿಕ ಹೊಣೆಗಾರಿಕೆ ನಮ್ಮದಾಗಿದೆ. ಪಂಜೇ ಮಂಗೇಶರಾಯರು, ಕುವೆಂಪು, ರಾಜರತ್ನಂ ಅವರಂತ ದೊಡ್ಡವರು ಕೂಡ ಮಕ್ಕಳನ್ನು ಮರೆತಿರಲಿಲ್ಲ ಎಂದು ಕಣವಿ ಹೇಳಿದರು.

ದೈಹಿಕ- ಮಾನಸಿಕ ಅಸ್ವಸ್ಥತೆಗೆ ತುತ್ತಾಗಿರುವ ಮಕ್ಕಳು

ಹದಗೆಟ್ಟ ಶಿಕ್ಷಣ ಪದ್ಧತಿ ಮಕ್ಕಳನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಸ್ವಸ್ಥರನ್ನಾಗಿಸಿದೆ. ಮಕ್ಕಳ ಸಾಹಿತ್ಯ ಸೃಷ್ಟಿಯೇ ಕಡಿಮೆಯಾಗುತ್ತಿದೆ. ಮಕ್ಕಳ ಸಾಹಿತ್ಯ ಬರೆದರೂ ಓದಲಿಕ್ಕೆ ಮಕ್ಕಳೇ ಇಲ್ಲವಂತಾಗಿದೆ. ಶೇ. 95 ರಷ್ಟು ಮಕ್ಕಳು ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿಯುತ್ತಿರುವುದರಿಂದ ಭಾಷಾಂತರ ಮಾಡಿ ಹೇಳಬೇಕಾದ ಪರಿಸ್ಥಿತಿ ಬಂದಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ವಿಷಾದಿಸಿದರು.

ಮಕ್ಕಳ ಬಗ್ಗೆ ಅತಿ ಕಾಳಜಿ ಮಾಡುವ ಅಥವಾ ಪೂರ್ಣವಾಗಿ ನಿರ್ಲಕ್ಷಿಸುವ ಎರಡು ವರ್ಗಗಳನ್ನು ನಾವಿಂದು ಕಾಣುತ್ತಿದ್ದೇವೆ. ಈ ಎರಡೂ ವರ್ಗಗಳು ಅಪಾಯಕಾರಿ ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.

ಏಕತಾನತೆಯಿಂದ ಸೊರಗಿರುವ ಮಕ್ಕಳ ಕಥಾಲೋಕ

ಮಕ್ಕಳ ಸಾಹಿತ್ಯ ಏಕತಾನತೆಯಿಂದ ನರಳುತ್ತಿದೆ. ಇತ್ತೀಚೆಗೆ ಮಕ್ಕಳ ಕಥಾ ಸಾಹಿತ್ಯದಲ್ಲಿ ಕೃತಿಚೌರ್ಯದ ಹಾವಳಿಯೂ ಹೆಚ್ಚಾಗಿದೆ. ಭಾಷಾಂತರ, ರೂಪಾಂತರ, ಸಂಗ್ರಹವನ್ನು ಹೆಸರಿಸುವ ಸೌಜನ್ಯವೂ ಇಲ್ಲವಾಗಿದೆ ಎಂದು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಕ್ಕಳ ಸಾಹಿತಿ ಕಂಚ್ಯಾಣಿ ಶರಣಪ್ಪ ಹೇಳಿದರು. ಆದರೂ, ಕಥೆ, ಕಾದಂಬರಿ, ನಾಟಕ ಪ್ರಕಾರಗಳ ಮೂಲಕ ಮಕ್ಕಳ ಸಾಹಿತ್ಯ ಇತ್ತೀಚೆಗೆ ಪರಿಪೂರ್ಣ ಸಾಹಿತ್ಯವಾಗಿ ರೂಪುಗೊಳ್ಳುತ್ತಿರುವ ಬಗೆಗೆ ಅವರು ಹರ್ಷ ವ್ಯಕ್ತಪಡಿಸಿದರು. ಚಿತ್ರದುರ್ಗ ಮುರುಘಾಮಠದ ಸಿದ್ಧರಾಮ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X