• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಐಸಿಎ’- ಭಾರತೀಯ ಸಂಸ್ಕೃತಿಗೊಂದು ಚಾವಡಿ

By Staff
|

‘ನಾವೆಲ್ಲ ರು ಕೂಡಿ ಕನ್ನಡದ ಕೆಲಸ ಮಾಡೋಣ !’

‘ಇಂಡಿಯನ್‌ ಕಲ್ಚರಲ್‌ ಅಕಾಡೆಮಿ ಟ್ರಸ್ಟ್‌ ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ‘ಅಮೆರಿಕ ಕನ್ನಡ ಕೂಟಗಳ ಆಗರ’(ಅಕ್ಕ) ಅಧ್ಯಕ್ಷ ಎಂ.ಆರ್‌.ಅಮರನಾಥ ಗೌಡ ಪುಳಕಿತರಾಗಿದ್ದರು. ಟ್ರಸ್ಟ್‌ನ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು-
‘ನಾನು ಸಾಹಿತಿ ಅಲ್ಲ , ಕನ್ನಡ ಪ್ರೇಮಿ- ಸಂಘಟಕ. ಎಲ್ಲಾದರೂ ಇರು ಕನ್ನಡವಾಗಿರು ಎನ್ನುವ ಕವಿವಾಣಿಯಂತೆ ಅಮೆರಿಕದಲ್ಲಿದ್ದರೂ ನಮ್ಮ ಉಸಿರು ಕನ್ನಡ! ಟ್ರಸ್ಟ್‌ನ ಸನ್ಮಾನ, ನಿಮ್ಮ ಸ್ನೇಹ ಸದ್ಭಾವನೆಗೆ ನಾನು ಕೃತಜ್ಞ. ನಾವೆಲ್ಲ ಕೂಡಿ ಕನ್ನಡ ಕೆಲಸ ಮಾಡೋಣ’ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯ ಅಭಿವ್ಯಕ್ತಿಯಾಗುವ ಉದ್ದೇಶದಿಂದ ಶನಿವಾರ (ಆಗಸ್ಟ್‌ 10) ಹುಟ್ಟು ಪಡೆದ ‘ಇಂಡಿಯನ್‌ ಕಲ್ಚರಲ್‌ ಅಕಾಡೆಮಿ ಟ್ರಸ್ಟ್‌ ’(ಐಸಿಎ) ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಮರನಾಥಗೌಡ ದಂಪತಿಗಳು ಭಾಗವಹಿಸಿದ್ದರು. ಅದೊಂದು ಅಪ್ಪಟ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ.

ಕಾರ್ಯಕ್ರಮ ನಡೆದದ್ದು ರವೀಂದ್ರ ಕಲಾಕ್ಷೇತ್ರದಲ್ಲಿ . ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ, ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ವೇದಿಕೆಯ ಮೇಲಿದ್ದರು. ಟ್ರಸ್ಟ್‌ ಹುಟ್ಟಿನ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಟ್ರಸ್ಟ್‌ನ ಸಂಸ್ಥಾಪಕ ಜಿ.ನಾರಾಯಣ, ಹಿರಿಯ ರಂಗ ಕಲಾವಿದ ಏಣಗಿ ಬಾಳಪ್ಪ , ಜಾನಪದ ತಜ್ಞ ಮತಿಗಟ್ಟ ಕೃಷ್ಣಮೂರ್ತಿ, ಉಭಯ ವಿದುಷಿ ಶ್ಯಾಮಲಾ ಜಿ.ಭಾವೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ನಮ್ಮ ಸಂಸ್ಕೃತಿಯನ್ನು ನಾವು ಎತ್ತಿ ಹಿಡಿಯೋಣ..

‘ಕಂಪ್ಯೂಟರ್‌, ಇಂಟರ್ನೆಟ್‌ ನಡುವೆ ನಿತ್ಯಜೀವನದ ರಸ ನಿಮಿಷಗಳನ್ನು ಕಳಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗ್ತುತಿರುವಾಗ, ನಗರ ಜೀವನದ ಜಂಜಡದಲ್ಲಿ ಮನರಂಜನೆ ಮರೀಚಿಕೆಯಾಗುತ್ತಿರುವ ಸಂದರ್ಭದಲ್ಲಿ , ಭಾರತೀಯ ಸಂಸ್ಕೃತಿ ತಾವು ಕಳೆದುಕೊಳ್ಳುತ್ತಿರುವ ಸಂಧಿಕಾಲದಲ್ಲಿ - ಟೀವಿ ಮೂವಿಗಳಿಂದ ಹೊರತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುವುದು ಐಸಿಎ ಉದ್ದೇಶ’ ಎಂದು ಟ್ರಸ್ಟ್‌ನ ಅಧ್ಯಕ್ಷ ಎಂ.ಪಿ.ರವಿನಾಯ್ಡು ತಿಳಿಸಿದರು.

‘ಪ್ರತಿಭಾವಂತರಿಗೆ ಐಸಿಎ ವೇದಿಕೆಯಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ, ಕಚೇರಿ, ಕವಿಗೋಷ್ಠಿಗಳನ್ನು ಐಸಿಎ ಹಮ್ಮಿಕೊಳ್ಳುತ್ತದೆ. ಅನಿವಾಸಿ ಭಾರತೀಯರ ಬಳಿಗೆ ಭಾರತೀಯ ಸಂಸ್ಕೃತಿಯನ್ನು ಒಯ್ಯುತ್ತದೆ. ಕರ್ನಾಟಕದ ಕಲಾವಿದರನ್ನು ದೇಶದೊಳಗೆ ಮತ್ತು ಹೊರಗೆ ಹಾಗೂ ಬೇರೆ ರಾಜ್ಯಗಳ ಕಲಾವಿದರನ್ನು ಕರ್ನಾಟಕದೊಳಗೆ ಪರಿಚಯಿಸುವ ಕೆಲಸವನ್ನು ಐಸಿಎ ಮಾಡುತ್ತದೆ’ ಎಂದು ರವಿನಾಯ್ಡು ಹೇಳಿದರು.

ನಮ್ಮದು ಶ್ರೀಮಂತ ಸಂಸ್ಕೃತಿ, ನಾವು ಶ್ರೀಮಂತರು !

ಐಸಿಎ ಉದ್ಘಾಟಿಸಿದ ಸಂಸ್ಕೃತಿ ಸಚಿವ ರಾಣಿ ಸತೀಶ್‌ ಟ್ರಸ್ಟ್‌ಗೆ ಶುಭ ಹಾರೈಸಿದರು. ಶಿಕ್ಷಣ, ರಾಜಕೀಯ, ಹಣಕಾಸು.. ಮುಂತಾದ ವಿಷಯಗಳಲ್ಲಿ ಬೇರೆ ಬೇರೆ ರಾಷ್ಟ್ರಗಳು ಶ್ರೀಮಂತವಾಗಿರಬಹುದು. ಆದರೆ, ಸಂಸ್ಕೃತಿಯ ವಿಷಯದಲ್ಲಿ ಭಾರತ ಶ್ರೀಮಂತ ರಾಷ್ಟ್ರ ಎಂದು ರಾಣಿ ಸತೀಶ್‌ ಹೆಮ್ಮೆ ಪಟ್ಟುಕೊಂಡರು. ಮಾನವೀಯತೆಯನ್ನು ಕೇಂದ್ರವಾಗುಳ್ಳ ಸಂಸ್ಕೃತಿ ಆರೋಗ್ಯಕರ ಸಮಾಜವನ್ನು ಸೃಷ್ಟಿಸುತ್ತದೆ ಎಂದು ಅವರು ಆಶಿಸಿದರು.

ಕಣ್ಣಿಗೂ ಅಂಟಿಕೊಂಡಿದೆ ಕಿವಿಯ ವ್ಯಭಿಚಾರ

ಕಣ್ಣು ವ್ಯಭಿಚಾರಿ ಅಂತಾರೆ. ಆದರೆ, ಅನ್ಯದೇಶೀಗಳಿಗೆ ಕಿವಿಗಳೂ ಮಾರುಹೋಗಿವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯು.ಆರ್‌.ಅನಂತಮೂರ್ತಿ ವಿಷಾದಿಸಿದರು. ಭಾರತದಲ್ಲಿರುವಷ್ಟು ವೈವಿಧ್ಯತೆ ಇನ್ನೆಲ್ಲೂ ಇಲ್ಲ ಎಂದು ಬಣ್ಣಿಸಿದ ಅವರು, ಯುವಜನತೆಗೆ ಮೆಚ್ಚಾಗುವ ಸವಾಲು ಹೊತ್ತು ಹುಟ್ಟಿರುವ ಟ್ರಸ್ಟ್‌ ಬೆಳೆಯಲೆಂದು ಆಶಿಸಿದರು.

ಅನ್ಯ ಸಂಸ್ಕೃತಿಗೆ ಬೆಂಗಳೂರು ಸುಲಭವಾಗಿ ಒಲಿಯುತ್ತದೆ. ಆದರೆ, ಭಾರತದ ಎಲ್ಲ ಕಲೆಗಳು ಹುಟ್ಟಿದ್ದು ದೇವಸ್ಥಾನ, ಹಳ್ಳಿಗಳಲ್ಲಿ . ಭಾರತದಲ್ಲಿ ಯಾವುದನ್ನಾದರೂ ಸ್ವೀಕರಿಸುವ ಶಕ್ತಿ ಇದೆ. ಆದರೆ, ನಮ್ಮತನ ಉಳಿಸಿಕೊಂಡಲ್ಲಿ ಮಾತ್ರ ಅದು ಸಾಧ್ಯ ಎಂದು ಅನಂತಮೂರ್ತಿ ಹೇಳಿದರು.

ಜಾಗತೀಕರಣದಿಂದ ಭಾರತೀಯ ಸಂಸ್ಕೃತಿಗೆ ಅಪಾಯ

ಅನ್ಯ ಸಂಸ್ಕೃತಿಯಿಂದ ನಮ್ಮ ಸಂಸ್ಕೃತಿ ಬೆಳೆಯುತ್ತದೆಂದು ನಿರೀಕ್ಷಿಸುವುದು ತಪ್ಪು ಎಂದು ಹೇಳಿದ ಐಸಿಎ ಸಂಸ್ಥಾಪಕ ಜಿ.ನಾರಾಯಣ, ಅನ್ಯ ಸಂಸ್ಕೃತಿ ಬಗೆಗೆ ಭಾರತೀಯರ ಒಲವು ಹೆಚ್ಚುತ್ತಿರುವ ಬಗೆಗೆ ಆತಂಕ ವ್ಯಕ್ತಪಡಿಸಿದರು. ರಾಮರಾಜ್ಯದ ಕನಸ ಕಾಣಬೇಕಾದ ಭಾರತ ದಿಕ್ಕುತಪ್ಪಿದೆ. ಜಾಗತೀಕರಣ, ಉದಾರೀಕರಣಗಳು ಸಂಸ್ಕೃತಿಗೆ ಧಕ್ಕೆ ತರುತ್ತಿದ್ದು, ಈ ಹೊತ್ತಿನ ದೊಡ್ಡ ಆತಂಕ ಇದೇ ಎಂದರು.

ಸಂಸ್ಕೃತಿ ಬೆಳವಣಿಗೆಗೆ ತಂತ್ರಜ್ಞಾನದ ಬಳಕೆ

ಭಾರತೀಯ ಸಂಸ್ಕೃತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲುಪಿಸುವ ಉದ್ದೇಶದಿಂದ ಐಸಿಎ ತನ್ನದೇ ಆದ ವೈಬ್‌ಸೈಟನ್ನು ತನ್ನ ಸಂಸ್ಥಾಪನೆಯ ದಿನದಂದೇ ಪ್ರಾರಂಭಿಸಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಸಿ.ರಾಮಮೂರ್ತಿ www.icatrust.net ವೆಬ್‌ಸೈಟ್‌ ಉದ್ಘಾಟಿಸಿದರು.

ಅಂದಹಾಗೆ, ಭಾರತೀಯ ಸಂಸ್ಕೃತಿ ಯಾವುದು ?
ಇಂಥದ್ದೊಂದು ಸ್ವಾರಸ್ಯಕರ ಚರ್ಚೆ ನಡೆದದ್ದು ಪ್ರೇಕ್ಷಕರ ನಡುವೆ. ಐಸಿಎ ಟ್ರಸ್ಟ್‌ನ ಅಧ್ಯಕ್ಷ ರವಿನಾಯ್ಡು ಅವರು ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿಯಿಂದ ಎದ್ದದ್ದು ಕನ್ನಡದ ಸೊಲ್ಲು . ತಮ್ಮದು ಅಖಿಲ ಭಾರತ ಸಂಸ್ಕೃತಿ ಟ್ರಸ್ಟ್‌ , ಅಲ್ಲದೆ ತಮಗೆ ಕನ್ನಡ ಸರಿಯಾಗಿ ಗೊತ್ತಿಲ್ಲ ದ ಕಾರಣ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿರುವುದಾಗಿ ಕನ್ನಡದಲ್ಲೇ ಹೇಳಿದ ರವಿನಾಯ್ಡು ಇಂಗ್ಲೀಷ್‌ನಲ್ಲಿ ಮಾತು ಮುಂದುವರಿಸಿದರು. ಈ ಹೊತ್ತಿನಲ್ಲಿ ಉದ್ಭವಿಸಿದ್ದು- ‘ಇಂಗ್ಲೀಷ್‌ ಭಾರತೀಯ ಸಂಸ್ಕೃತಿಯಾ!’ ಎನ್ನುವ ಪ್ರಶ್ನೆ . ಯಾರೂ ಉತ್ತರಿಸಲಿಲ್ಲ . ರವಿನಾಯ್ಡು ಕನ್ನಡದಲ್ಲಿ ಮಾತನಾಡಲಿಲ್ಲ.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more