• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲೀಗ ದಶಮಾನೋತ್ಸವ ಸಂಭ್ರಮ

By Staff
|

(ವಿಶೇಷ ಲೇಖನ)

Hampi Kannada universityವಿಶ್ವವಿಖ್ಯಾತ ಹಂಪಿಗೆ ಐತಿಹಾಸಿಕ ಹಾಗೂ ಪ್ರಾಗೈತಿಹಾಸಿಕ ನೆಲೆಗಟ್ಟಿದೆ. ಹಂಪಿ ಒಂದು ಪರಂಪರೆಯ ಪ್ರತೀಕ. ಕನ್ನಡ ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣದ ನೆಲೆವೀಡು. ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಶ್ರೀವಿದ್ಯಾರಣ್ಯರ ತಪೋಭೂಮಿ, ಇತಿಹಾಸ ಕಾಲದ ನಳಂದ, ತಕ್ಷಶಿಲಾ ಸದೃಶ ವಿದ್ಯಾಕೇಂದ್ರ.

ಹೀಗಾಗೇ ಹಿಂದೆ, ಬಹು ಹಿಂದೆ ಈ ಪ್ರದೇಶ ವಿದ್ಯಾನಗರ ಎಂದೇ ಹೆಸರಾಗಿತ್ತು. ಆನಂತರ ಕನ್ನಡ ಸಿಂಹಾಸನಾಧೀಶ್ವರರು ವಿಜಯೋತ್ಸವ ಆಚರಿಸಿ, ಕನ್ನಡ ರಾಜ್ಯವನ್ನು ವಿಸ್ತರಿಸಿದ ಬಳಿಕ ಇದು ವಿಜಯನಗರವಾಯ್ತು. ಇಂದು ಕನ್ನಡ ವಿಶ್ವವಿದ್ಯಾಲಯದಿಂದಾಗಿ ಅಂದಿನ ವಿದ್ಯಾನಗರ ಎಂಬ ಹೆಸರು ಹಂಪಿಗೆ ಅನ್ವರ್ಥವಾಗಿದೆ.

ಪರಂಪರೆಯ ರಕ್ಷಣೆ : ಪರಂಪರೆಯ ನೆಲೆವೀಡಾದ ಹಂಪೆಯಲ್ಲಿ ನಿರ್ಮಿಸಲಾಗಿರುವ ಕನ್ನಡ ವಿಶ್ವವಿದ್ಯಾಲಯ ಕೂಡ ಪರಂಪರೆಗೆ ಚ್ಯುತಿ ಬಾರದ ರೀತಿಯಲ್ಲೇ ನಿರ್ಮಾಣಗೊಂಡಿದೆ. ಕರ್ನಾಟಕ ಸರಕಾರ ನೀಡಿರುವ ಸುಮಾರು 800 ಎಕರೆ ಪ್ರದೇಶದಲ್ಲಿರುವ ಈ ವಿವಿ ಕಮಲಾಪುರ (ಕಮಲಮಹಲ್‌ ಬಳಿ)ದಿಂದ ಮೂರು ಕಿಲೋ ಮೀಟರ್‌ ದೂರದಲ್ಲಿರುವ ಹಳ್ಳಿಕೆರೆ ಬಳಿಯ ಬೆಟ್ಟಗುಡ್ಡಗಳ ನಡುವೆ ರಾರಾಜಿಸುತ್ತಿದೆ.

ವಿಶ್ವಕನ್ನಡ ಸಮ್ಮೇಳನದ ಫಲಶ್ರುತಿಯೆಂಬಂತೆ ತಲೆಎತ್ತಿದ ಕನ್ನಡ ನಾಡಿನ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯಕ್ಕೀಗ ಹತ್ತು ವರ್ಷ. ಅತ್ತ ಬೆಟ್ಟ, ಇತ್ತ ಗುಡ್ಡ, ಕಲ್ಲು ಮುಳ್ಳುಗಳ ಗಿಡಗಂಟೆ, ದಟ್ಟವಾದ ಪೊದೆ, ಬೆಟ್ಟವೇರಿ ನೋಡಿದರೆ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ರಸ್ತೆಯಲ್ಲಿ ರಾಶಿಹಾಕಿ ಮಾರುತ್ತಿದ್ದ ವಿಜಯನಗರದ ಗತವೈಭವ ಸಾರುವ ಪಳೆಯುಳಿಕೆಗಳು.

ಈ ಎಲ್ಲದರ ಮಧ್ಯೆ ಪ್ರಾಕೃತಿಕವಾಗಿ ಶ್ರೀಮಂತವಾದ ಕನ್ನಡ ಮಣ್ಣಿನಲ್ಲಿ ಸಾಕಾರಗೊಂಡಿರುವ ಕನ್ನಡ ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಕಲೆ ಎಲ್ಲವನ್ನೂ ಮೈಗೂಡಿಸಿಕೊಂಡು, ಕನ್ನಡ ಸಾಹಿತ್ಯ ಸೀಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಗಿಡಗಂಟೆಗಳ ಮಧ್ಯೆ ಕಲ್ಲು, ಹೆಂಚಿನ ಕುಟೀರಗಳು, ಗಿರಿಸೀಮೆಯಲ್ಲಿನ ‘ಚೋಮ’, ‘ನವರಂಗ’ ಬಯಲು ರಂಗಮಂದಿರ, ‘ಕಾಯಕಮನೆ’, ‘ಅಕ್ಷರ’ ಗ್ರಂಥಾಲಯ, ‘ಭುವನ ವಿಜಯ’ ಎಂಬ ಹೆಸರಿನ ಸಭಾಂಗಣ, ‘ಚೆಲುವ ಕನ್ನಡ’ ಎಂಬ ನಾಮಧೇಯದ ವಸ್ತು ಸಂಗ್ರಹಾಲಯ, ‘ಮಾನಸೋಲ್ಲಾಸ’ ಹೆಸರಿನ ಕುಲಪತಿಗಳ ಬಿಡಾರ, ‘ಜಕ್ಕಣ ಮಂಟಪ’, ‘ತ್ರಿಪದಿ’ ‘ಕ್ರಿಯಾಶಕ್ತಿ’, ‘ಚಾವಡಿ’, ‘ತುಂಗಭದ್ರಾ’, ‘ಘಟಿಕಾಲಯ’, ‘ಶ್ರೀಶೈಲ’ ಎಂಬ ಹೆಸರಿನ ಅತಿಥಿಗೃಹ ಈ ಎಲ್ಲವೂ ವಿಜಯನಗರ ಪರಂಪರೆಯ ದ್ಯೋತಕದಂತಿವೆ.

ಕನ್ನಡಮಯ: ಕನ್ನಡ ನಾಡಿನ ಕವಿ, ಸಾಹಿತಿ, ಲೇಖಕರ ಮಿಗಿಲಾಗಿ ಸಮಸ್ತ ಕನ್ನಡಿಗರ ಒಕ್ಕೊರಲಿನ ಬೇಡಿಕೆಯಿಂದ ತಲೆಎತ್ತಿದ ಈ ಚೆಲುವ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುವ ಅಧ್ಯಯನಗಳು, ಸಂಶೋಧನೆಗಳು, ಪುಸ್ತಕ ಪ್ರಕಟಣೆ ಹಾಗೂ ಆಡಳಿತಾತ್ಮಕ ವ್ಯವಹಾರಗಳೆಲ್ಲವೂ ಕನ್ನಡದಲ್ಲೇ ಇರುತ್ತದೆ ಎಂಬುದು ಕನ್ನಡಿಗರೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ.

ನುಡಿಹಬ್ಬ : ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ, ರಾಜಕಾರಣ, ಸಂಗೀತ, ನೃತ್ಯ, ಪತ್ರಿಕೋದ್ಯಮ ಹೀಗೆ ಹತ್ತು ಹಲವೊಂದು ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರಿಗೆ ‘ನಾಡೋಜ’ ಎಂಬ ಗೌರವ ಡಿಲಿಟ್‌ ಪದವಿ ಪ್ರದಾನ ಮಾಡುವ ಸತ್ಸಂಪ್ರದಾಯವೂ ಪ್ರತಿವರ್ಷ ನಡೆಯುವ ನುಡಿಹಬ್ಬದ ಒಂದು ಅಂಗವಾಗಿದೆ.

ಮಾಹಿತಿ ಕೇಂದ್ರ : ವಿಶ್ವದ ಜ್ಞಾನ ವಿಜ್ಞಾನ ವಿಶೇಷಗಳನ್ನು ಒಂದೆಡೆ ಕಲೆಹಾಕುವ ಪ್ರಯತ್ನದ ಪ್ರತೀಕವಾದ ಮಾಹಿತಿ ಕೇಂದ್ರ ಇಲ್ಲಿದೆ. ಇಲ್ಲಿ ಕರ್ನಾಟಕದ ಬೆಳೆ, ಮಳೆ, ಸಾಮಾಜಿಕ, ಆರ್ಥಿಕ, ಜನಸಂಖ್ಯೆ, ಹವಾಮಾನ, ಸಂಸ್ಕೃತಿ, ಕಲೆಯೇ ಮೊದಲಾದ ಎಲ್ಲ ವಿಭಾಗಗಳ ಮಾಹಿತಿಯನ್ನೂ ಕ್ರೋಡೀಕರಿಸಿ ಇಡುವ ಮಹತ್ವದ ಉದ್ದೇಶವಿದೆ. ಶಾಲಾ ಶಿಕ್ಷಕರಿಗೆ ಕಮ್ಮಟ ನಡೆಸಿ, ಅವರ ಭೋದನಾ ಮಟ್ಟ ಹೆಚ್ಚಿಸುವ ಪ್ರಯತ್ನವನ್ನೂ ವಿವಿ ಮಾಡುತ್ತಿದೆ.

ದಶಮಾನೋತ್ಸವ : 2001ರ ಡಿಸೆಂಬರ್‌ 26ರಿಂದ 29ರವರೆಗೆ ವಿಶ್ವಪಾರಂಪರಿಕ ಕೇಂದ್ರವಾದ ಹಂಪೆಯಲ್ಲಿನ ಕನ್ನಡ ವಿಶ್ವವಿದ್ಯಾಲಯದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಜರುಗುತ್ತಿದೆ. ದಶಮಾನೋತ್ಸವದ ಅಂಗವಾಗಿ ಹಾಲಿ ಕುಲಪತಿಗಳಾದ ಡಾ. ಎಚ್‌.ಜೆ. ಲಕ್ಕಪ್ಪ ಗೌಡರು, ಹಲವು ಹೊಸ ಯೋಜನೆಗಳನ್ನೂ ಪ್ರಕಟಿಸಿದ್ದಾರೆ.

ಕರ್ನಾಟಕದ ವಿಶಿಷ್ಟ ಸಾಧನೆಗಳನ್ನು ಕನ್ನಡೇತರರಿಗೂ ತಲುಪಿಸುವ ಸಲುವಾಗಿ ‘ಕರ್ನಾಟಕ ಸ್ಟಡೀಸ್‌’ ಎಂಬ ಅರ್ಧ ವಾರ್ಷಿಕ ಆಂಗ್ಲ ಪತ್ರಿಕೆಯನ್ನು ಹೊರತರುವುದೂ ಸೇರಿದಂತೆ, ನುಡಿ ಹಬ್ಬ, ನಮ್ಮ ಹಬ್ಬ ಎಂಬ ವಿಶಿಷ್ಟ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದಾರೆ.

ವಿಶ್ವವಿದ್ಯಾಲಯಕ್ಕೆ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾಟಕ, ಕಲೆ, ಜಾನಪದ ಸಂಗೀತ, ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಯನ, ದೂರಸಂಪರ್ಕ ಶಿಕ್ಷಣದ ಕೋರ್ಸ್‌ಗಳನ್ನು ತೆರೆಯಲಾಗುವುದು ಎಂದು ಲಕ್ಕಪ್ಪಗೌಡರು ತಿಳಿಸಿದ್ದಾರೆ.

ದಶಮಾನೋತ್ಸವದ ಸವಿ ನೆನಪಿನಲ್ಲಿ ದಶಮಾನೋತ್ಸವ ಭವನ ನಿರ್ಮಾಣ, ಇಂಟಿಗ್ರೇಟೆಡ್‌ ಎಂಎ, ಪಿಎಚ್‌ಡಿ ಪದವಿ ತರಗತಿಗಳನ್ನು ಆರಂಭಿಸುವ ಯೋಜನೆಯ ಬಗ್ಗೆಯೂ ಕುಲಪತಿಗಳು ಸೂಚನೆ ನೀಡಿದ್ದಾರೆ. ಈ ಶುಭ ಸಂದರ್ಭದಲ್ಲಿ ಹಲವು ಪುಸ್ತಕಗಳ ಬಿಡುಗಡೆ ಸಮಾರಂಭವೂ ನಡೆಯುತ್ತಿದೆ.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more