ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾ.ಮಾ.ನಾ. ತೋರಿದ ಹೆದ್ದಾರಿಯಲ್ಲಿ ಗುಲಬರ್ಗಾ ವಿವಿ

By Staff
|
Google Oneindia Kannada News

ನಮ್ಮ ವರದಿಗಾರರಿಂದ

ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಎಂದರೆ ಹೇಗಿರುತ್ತದೆ?

ವಾಟಾಳ್‌ ಅವರನ್ನು ಕೇಳಿದರೆ- ಭುವನೇಶ್ವರಿ ಮೆರವಣಿಗೆ, ನವಂಬರ್‌ ಪೂರಾ ನಾಟಕ- ಆರ್ಕೇಸ್ಟ್ರಾ ಅಂದಾರು. ಗಂಟಲು ಸಂಪತ್ತುಳ್ಳ ಸಾಹಿತಿಗಳು ಕನ್ನಡಾಭಿಮಾನದ ಭಾಷಣ ಎಂದಾರು. ಈ ಸಂಘ ಸಂಸ್ಥೆಗಳ ಮಾತಿರಲಿ; ನೆಲದ ಸೊಗಡಿನ ಪ್ರತೀಕ ಹಾಗೂ ಜ್ಞಾನದ ಸಂಕೇತವಾದ ವಿಶ್ವ ವಿದ್ಯಾಲಯಗಳು ರಾಜ್ಯೋತ್ಸವವನ್ನು ಆಚರಿಸುವ ಬಗೆ ಎಂಥಾದ್ದು?

ಬೆಂಗಳೂರು ಹಾಗೂ ಮೈಸೂರು ವಿಶ್ವ ವಿದ್ಯಾಲಯಗಳು ರಾಜ್ಯೋತ್ಸವ ಆಚರಿಸಿದ ಸುದ್ದಿ ನಮಗೆ ಸಿಗುವುದಿಲ್ಲ . ಮಂಗಳೂರು, ಧಾರವಾಡ ವಿವಿಗಳ ಅಂಗಳದಿಂದಲೂ ಅಂಥ ಸದ್ದೇನೂ ಇಲ್ಲ . ಪ್ರತಿದಿನವೂ ಹಬ್ಬವೇ ಎನ್ನುವ ಹಂಪಿ ವಿವಿಗೆ ನವಂಬರ್‌ ಅಂಥ ವಿಶೇಷವೇನೂ ಅಲ್ಲ . ಉಳಿದಿರುವುದು ಗುಲಬರ್ಗಾ ವಿವಿ ; ತೆಲುಗು, ಉರ್ದುಗಳ ಅಬ್ಬರದ ಪ್ರದೇಶವಿದು. ಇಲ್ಲಿ ನ ಕನ್ನಡ ರಾಜ್ಯೋತ್ಸವ ಆಚರಣೆ ಹೇಗಿರುತ್ತದೆ! ವರದಿ ಇಲ್ಲಿದೆ-

ಮೊನ್ನೆ , ನವಂಬರ್‌ 28 ರ ಬುಧವಾರ ಗುಲಬರ್ಗಾ ವಿಶ್ವ ವಿದ್ಯಾಲಯ ಕನ್ನಡ ರಾಜ್ಯೋತ್ಸವ ಆಚರಿಸಿತು. ಕಾರ್ಯಕ್ರಮ ನಡೆದದ್ದು ವಿವಿಯ ಸೆನೆಟ್‌ಹಾಲ್‌ನಲ್ಲಿ . ಅಲ್ಲಿ ಕನ್ನಡ ಬಾವುಟದ ಅಥವಾ ಕನ್ನಡ ಭಾಷಣಗಳ ಅಬ್ಬರವಿರಲಿಲ್ಲ . ಬದಲಾಗಿ ಸಾಹಿತಿ- ಕಲಾವಿದರ ಸಂಭ್ರಮವಿತ್ತು . ನಾಡಹಬ್ಬದ ಅಂಗವಾಗಿ ವಾರಕಾಲದ ಚಿತ್ರಕಲಾ ಪ್ರದರ್ಶನ ಆರಂಭವಾದದ್ದು ಅಂದೇ. ಉಳಿದಂತೆ ಪ್ರಶಸ್ತಿ - ಪುರಸ್ಕಾರದ ಸಂಭ್ರಮ. ಹೈದ್ರಾಬಾದ್‌ ಕರ್ನಾಟಕ ಪ್ರಾಂತ್ಯದಲ್ಲಿ ನ ಲೇಖಕರ ವಿವಿಧ ಪ್ರಕಾರಗಳ ಅತ್ಯುತ್ತಮ ಪುಸ್ತಕಗಳಿಗೆ ವಿಶ್ವ ವಿದ್ಯಾಲಯ ಪ್ರಶಸ್ತಿ ನೀಡಿತು. ರಾಜ್ಯೋತ್ಸವದ ಅಂಗವಾಗಿ ವಿಶ್ವ ವಿದ್ಯಾಲಯ ಇಂಥ ಪ್ರಶಸ್ತಿಗಳನ್ನು ಕಳೆದ 12 ವರ್ಷಗಳಿಂದಲೂ ನೀಡುತ್ತಿದೆ.

ಕನ್ನಡ ವಿವಿಯಲ್ಲಿ ತಮಿಳು, ತೆಲುಗು, ಮಲಯಾಳಿ ಪೀಠ

ಕನ್ನಡ- ತೆಲುಗು ತೌಲನಿಕ ಅಧ್ಯಯನ ಪೀಠ, ಕನ್ನಡ- ತಮಿಳು ತೌಲನಿಕ ಅಧ್ಯಯನ ಪೀಠ, ಕನ್ನಡ- ಹಿಂದಿ ತೌಲನಿಕ ಅಧ್ಯಯನ ಪೀಠ ಹಾಗೂ ಕನ್ನಡ- ಮಲಯಾಳಿ ತೌಲನಿಕ ಅಧ್ಯಯನ ಪೀಠಗಳನ್ನು ಒಳಗೊಳ್ಳುವ ದಿಕ್ಕಿನತ್ತ ಹಂಪೆ ಕನ್ನಡ ವಿಶ್ವ ವಿದ್ಯಾಲಯ ಸಾಗಿದೆ. ಸೋದರ ಭಾಷಾ ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯದ ಸಾಮ್ಯತೆ ಭಿನ್ನತೆಗಳ ಸಾಂಸ್ಕೃತಿಕ ಅಧ್ಯಯನಕ್ಕಾಗಿ ಈ ಪೀಠಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಜೆ.ಲಕ್ಕಪ್ಪಗೌಡ ಹೇಳಿದರು. ಅವರು ನಾಡಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿ. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಹಾಜರಿದ್ದ ಇನ್ನೊಬ್ಬರು- ಗುಲಬರ್ಗಾದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಡಾ. ಶರಣಬಸವಪ್ಪ ಅಪ್ಪ.

ಭಾಷಾ ಸೌಹಾರ್ದತೆ ಬಗೆಗೆ ಗುಲಬರ್ಗಾ ವಿಶ್ವ ವಿದ್ಯಾಲಯ ತೋರುತ್ತಿರುವ ಕಾಳಜಿಯನ್ನು ಪ್ರಶಂಸಿದ ಲಕ್ಕಪ್ಪಗೌಡರು, ಉರ್ದು, ಹಿಂದಿ, ಮರಾಠಿ ಹಾಗೂ ತೆಲುಗು ಕೃತಿಗಳಿಗೆ ಪ್ರಶಸ್ತಿ ನೀಡುವ ಮೂಲಕ ವಿಶ್ವ ವಿದ್ಯಾಲಯ ಸತ್ಸಂಪ್ರದಾಯ ರೂಪಿಸಿದೆ. ಬೆಂಗಳೂರು, ಮೈಸೂರು ವಿಶ್ವ ವಿದ್ಯಾಲಯಗಳಿಗಿಂತ ಗುಲಬರ್ಗಾ ವಿಶ್ವ ವಿದ್ಯಾಲಯ ಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಕನ್ನಡ ಮಾಡುತ್ತಿದೆ ಎಂದರು.

ಹಾ.ಮಾ.ನಾಯಕರು ತೋರಿದ ಕನ್ನಡದ ಹೆದ್ದಾರಿ

ದಿವಂಗತ ಹಾ.ಮಾ.ನಾಯಕ ಅವರು ಕುಲಪತಿಗಳಾಗಿದ್ದಾಗ ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಚಟುವಟಿಕೆಗೆ ಹೊಸರೂಪು ನೀಡಿದರು. ಬೆಂಗಳೂರು- ಮೈಸೂರು ಪ್ರಾಂತ್ಯದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪರಿಧಿ ಸೀಮಿತವಾಗಿದ್ದಾಗ, ಹೈದ್ರಾಬಾದ್‌ ಕರ್ನಾಟಕ ಪ್ರಾಂತ್ಯದ ಲೇಖಕ- ಕಲಾವಿದರಿಗೆ ಹಾ.ಮಾ.ನಾ. ವೇದಿಕೆ ಕಲ್ಪಿಸಿದರು. ಅವರು ಪ್ರಾರಂಭಿಸಿದ ದಿ।ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿನಿಧಿ ಕಥಾಸ್ಪರ್ಧೆ ರಾಜ್ಯದ ಮಹತ್ವದ ಸ್ಪರ್ಧೆಯಾಗಿ ರೂಪುಗೊಂಡಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಲಬರ್ಗಾ ವಿವಿ ಕುಲಪತಿ ಪ್ರೊ.ಎಂ.ವಿ. ನಾಡಕರ್ಣಿ ಹೇಳಿದರು.

ಹಾ.ಮಾ.ನಾ. ನಂತರ ಸಾಹಿತ್ಯೇತರ ಮಂದಿ ವಿಶ್ವ ವಿದ್ಯಾಲಯದ ಕುಲಪತಿಗಳಾದರೂ, ಹಾ.ಮಾ.ನಾ. ತೋರಿದ ಹೆದ್ದಾರಿಯಲ್ಲಿ ವಿವಿಯನ್ನು ಅವರು ಮುಂದುವರಿಸಿದ್ದಾರೆ. ಈ ಪರಂಪರೆ ವಿಶ್ವ ವಿದ್ಯಾಲಯದ ಹೆಮ್ಮೆ ಎಂದು ನಾಡಕರ್ಣಿ ಹರ್ಷಿಸಿದರು. ಇದೇ ಸಂದರ್ಭದಲ್ಲಿ ಪುಸ್ತಕ/ಕಲಾಕೃತಿಗಳ ಲೇಖಕ/ಕಲಾವಿದರಿಗೆ ಹಾಗೂ ಕಥಾಸ್ಪರ್ಧೆಯ ಬಹುಮಾನಿತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X