ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೋದಯದ ನಿರೀಕ್ಷೆಯಲ್ಲಿ ಸಿಐಐಎಲ್‌

By Staff
|
Google Oneindia Kannada News

* ಎಸ್ಕೆ. ಶಾಮಸುಂದರ, ಚ.ಹ. ರಘುನಾಥ

ಹೆಚ್ಚೂ ಕಡಿಮೆ ಹನ್ನೆರಡು ವರ್ಷಗಳಿಂದ ನಿಂತ ನೀರಿನಂತಿದ್ದ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ (Central Institute of Indian Languages)ಈಗ ಗರಿ ಕೆದರಿದೆ. ಈ ಹುಮ್ಮಸ್ಸಿಗೆ ಕಾರಣ, ಸಂಸ್ಥೆಗೆ ನೂತನ ನಿರ್ದೇಶಕ ಉದಯ್‌ ನಾರಾಯಣ್‌ ಸಿಂಗ್‌ರ ಆಗಮನ.

ಏಳೂವರೆ ವರ್ಷಗಳಿಂದ ಖಾಯಂ ನಿರ್ದೇಶಕರನ್ನೇ ಕಾಣದೆ, ನಿಂತಲ್ಲೇ ಕುಂಟುತ್ತಿದ್ದ ಕೇಂದ್ರಕ್ಕೆ ಕಾಲಿಟ್ಟಿರುವ ಉದಯ್‌ ಮುಂದಿರುವುದು ಸವಾಲಲ್ಲ , ಸವಾಲುಗಳ ಮೊತ್ತ . ಹಿಂದೊಮ್ಮೆ, ಕೇಂದ್ರ ಪ್ರಾರಂಭಗೊಂಡ ದಿನಗಳಲ್ಲಿ ಹೊಂದಿದ್ದ ಪ್ರಸಿದ್ಧಿಯನ್ನು , ಕ್ರಿಯಾಶೀಲತೆಯನ್ನು ಮರಳಿ ತರುವ ಗುರಿ ಅವರ ಮುಂದಿದೆ. ನಾನಂತೂ ಹಿಂಜರಿಯುವುದಿಲ್ಲ . ಸವಾಲಿಗೆ ಸಿದ್ಧವಾಗಿಯೇ ಇದ್ದೇನೆ. ಸಂಸ್ಥೆಯನ್ನು ಉಚ್ಛ್ರಾಯ ಸ್ಥಿತಿಗೂ ಒಯ್ಯುತ್ತೇನೆ ಎನ್ನುತ್ತಾರೆ ಉದಯ್‌, ಅವರ ಕಣ್ಣುಗಳಲ್ಲಿ ಮಿಂಚುಗೊಂಚಲು.

ಇಷ್ಟಕ್ಕೂ ಸಿಐಐಎಲ್‌ ಎಂದರೇನು ? ಅದರ ಮಹತ್ವವೇನು ?

ದೇಶದ ವಿವಿಧ ಭಾಗಗಳಲ್ಲಿ ಸಿಐಐಎಲ್‌ ಹೊಂದಿರುವ ಸಪ್ತ ಶಾಖೆಗಳಲ್ಲಿ ದಕ್ಷಿಣದ ಕೇಂದ್ರ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿದೆ ಎಂದರೆ, ಹೌದಾ ! ಎಂದು ಕಣ್ಣರಳಿಸುವವರೇ ಬಹಳ. ಸೀಮಿತ ಶೈಕ್ಷಣಿಕ ವಲಯಗಳನ್ನು ಹೊರತುಪಡಿಸಿದರೆ, ಉಳಿದಂತೆ ಸಿಐಐಎಲ್‌ ಸಂಪೂರ್ಣ ಎಲೆ ಮರೆಯ ಮರ. ಅಂದ ಮೇಲೆ ಅದರ ಪ್ರಾಮುಖ್ಯ ಜನಮನಕ್ಕೆ ಮುಟ್ಟುವುದಂತೂ ದೂರದ ಮಾತು.

ಸಿಐಐಎಲ್‌ನ ಪ್ರಾಮುಖ್ಯತೆಯನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, ಅದು ಭಾಷೆ ಕಲಿಸುವ ಹಾಗೂ ಭಾಷೆಯ ಆಗು ಹೋಗುಗಳನ್ನು ಅರ್ಥೈಸುವ ಕೆಲಸದಲ್ಲಿ ತೊಡಗಿದೆ. ಹೆಚ್ಚು ಭಾಷೆಗಳ ಕಲಿಯಿರಿ ಹೆಚ್ಚು ಗೆಳೆಯರ ಗಳಿಸಿರಿ ಅನ್ನುವುದು ಸಂಸ್ಥೆ ಬಿಂಬಿಸುವ ಧ್ಯೇಯವಾಕ್ಯ. ಅಂದಹಾಗೆ, ಮೈಸೂರಿನಲ್ಲಿನ ಕೇಂದ್ರ- ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅದರ ಪ್ರಮುಖ ಚಟುವಟಿಕೆಗಳಲ್ಲಿ -

  • ಭಾರತೀಯ ಭಾಷೆಗಳ ಅಭಿವೃದ್ಧಿ . ಈ ನಿಟ್ಟಿನಲ್ಲಿ ಸಂಶೋಧನೆ, ಮಾಹಿತಿ ಸಂಗ್ರಹ, ಮಾಹಿತಿ ಉತ್ಪಾದನೆ, ತರಬೇತಿ, ಆಡಳಿತ ಹಾಗೂ ಇನ್ನಿತರೆ ಸಾರ್ವಜನಿಕ ಕ್ಷೇತ್ರಗಳಲ್ಲಿ ಭಾಷೆಯ ಬಳಕೆಯ ಬಗ್ಗೆ ತರಬೇತಿ
  • ಭಾರತ ಸರ್ಕಾರದ ಭಾಷಾ ನೀತಿಯನ್ನು ಗೈಡ್‌ ಮಾಡುವುದು. ಉದಾಹರಣೆ- ಸಂವಿಧಾನಕ್ಕೆ ಯಾವುದಾದರೂ ಹೊಸ ಭಾಷೆ ಸೇರ್ಪಡೆಗೊಂಡರೆ, ಆ ಭಾಷೆಯ ವ್ಯಾಕರಣ, ಲಿಪಿ ನಿರ್ಧರಿಸುವುದು
  • ವಿವಿಧ ಭಾಷೆಗಳ ಅನನುಭವಿ ಶಿಕ್ಷಕರನ್ನು ಅವರು ಬಯಸುವ ಭಾಷೆಯಲ್ಲಿ ಪರಿಣತಗೊಳಿಸುವುದು. ಈ ಮೂಲಕ ಭಾಷಾ ಬೆಳವಣಿಗೆ
  • ಭಾಷಾ ಬೆಳವಣಿಗೆಗಳ ಬಗ್ಗೆ ತೀವ್ರ ನಿಗಾ ವಹಿಸುವುದು
- ಸೇರಿದೆ. ಇಷ್ಟು ಮಾತ್ರವಲ್ಲದೆ, ಭಾಷೆಯ ಬಗೆಗಿನ ವಿಚಾರ ಸಂಕಿರಣಗಳು, ಅಲ್ಪಾವಧಿ ಹಾಗೂ ದೀರ್ಘಾವಧಿ ತರಬೇತಿ ಕೋರ್ಸ್‌ಗಳು ಮತ್ತು ವಿವಿಧ ಸ್ವರೂಪದ ಭಾಷಾ ಚಟುವಟಿಕೆ- ಅಧಯಯನಗಳಲ್ಲೂ ಸಿಐಐಎಲ್‌ ತೊಡಗಿದೆ.

ಸಿಐಐಎಲ್‌ ಇದು ಪಾಟ್ನಾಯಿಕರ ಸಂಸ್ಥೆ

ಸಿಐಐಎಲ್‌ ಸ್ಥಾಪನೆಯಾಗಿದ್ದು 1969, ಜುಲೈ 17 ರಂದು. ಭಾರತ ಸರ್ಕಾರದ 1968 ರ ಭಾಷಾ ಸಂಕಲ್ಪದ ಅನುಸಾರ ರೂಪುಗೊಂಡ ಸಂಸ್ಥೆ - ಭಾರತೀಯ ಭಾಷೆಗಳನ್ನು ಅಭಿವೃದ್ಧಿಪಡಿಸುವುದು, ಆ ನಿಟ್ಟಿನಲ್ಲಿ ದೇಶವನ್ನು ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಮುನ್ನಡೆಸುವ ಸದಾಶಯ ಹೊಂದಿತ್ತು . ಕೇಂದ್ರದ ಸ್ಥಾಪನಾ ನಿರ್ದೇಶಕರು ಡಿ.ಪಿ. ಪಾಟ್ನಾಯಿಕ್‌. ಆಡಳಿತಾತ್ಮಕವಾಗಿ ಮುನ್ನುಗ್ಗುವ ಮನೋಭಾವದ ಪಾಟ್ನಾಯಿಕ್‌ ಅವರ ದಿನಗಳಲ್ಲಿ ಎಲ್ಲಾ ನೇರವಾಗಿಯೇ ಇತ್ತು . ಕೇಂದ್ರದ ಚಟುವಟಿಕೆಗಳು ಎಷ್ಟು ಬಿರುಸಾಗಿದ್ದವೆಂದರೆ, ಜನಮನದಲ್ಲಿ ಸಂಸ್ಥೆ ಸಿಐಐಎಲ್‌ ಎನ್ನುವುದಕ್ಕಿಂಥಾ ಪಾಟ್ನಾಯಿಕ್‌ ಸಂಸ್ಥೆ ಎಂದೇ ಹೆಸರಾಗಿತ್ತು . ಅವರ ನಿರ್ಗಮನದ ನಂತರ ಕೇಂದ್ರಕ್ಕೆ ಅಜ್ಞಾತವಾಸದ ದಿನಗಳು ಪ್ರಾರಂಭವಾದವು.

ಪಾಟ್ನಾಯಿಕ್‌ ನಂತರ ನಿರ್ದೇಶಕರ ಕುರ್ಚಿಗೆ ಬಂದ ಪ್ರೊ. ಅಣ್ಣಾಮಲೈ ಅತ್ಯುತ್ತಮ ಸ್ಕಾಲರ್‌. ಆದರೆ, ಸಂಸ್ಥೆಯ ಪ್ರಗತಿಗೆ ಅದಷ್ಟೇ ಸಾಕಾಗುವಂತಿರಲಿಲ್ಲ . ಅಲ್ಲದೆ, ಒಳ ಹಾಗೂ ಹೊರ ಬಿಗುವುಗಳನ್ನು ಎದುರಿಸುತ್ತಿದ್ದ ಕೇಂದ್ರಕ್ಕೆ ಆ ಹೊತ್ತಿನಲ್ಲಿ ಬೇಕಾದದ್ದು ಡೈನಾಮಿಕ್‌ ಪ್ರವೃತ್ತಿಯ ನಿರ್ದೇಶಕರು. ಅದು ಅಣ್ಣಾಮಲೈ ಅವರಿಂದ ನಿರೀಕ್ಷಿಸುವಂತಿರಲಿಲ್ಲ . ಈ ಕಾಲದಲ್ಲಿ ಸಂಸ್ಥೆಯ ಚಟುವಟಿಕೆಗಳು ಸಾಕಷ್ಟು ನಿರ್ಜೀವಗೊಂಡವು.

ಆದರೆ, ಅಣ್ಣಾಮಲೈ ನಂತರ ಏಳೆಂಟು ವರ್ಷಗಳ ಕಾಲ, ಸಿಐಐಎಲ್‌ ಪೂರ್ಣಾವಧಿ ನಿರ್ದೇಶಕರನ್ನು ಕಾಣದೆ, ಹಂಗಾಮಿ ನಿರ್ದೇಶಕರ ಮಾರ್ಗದಲ್ಲಿಯೇ ಸಾಗಬೇಕಾಯಿತು. ಈ ಅವಧಿಯಲ್ಲಿ ಕೇಂದ್ರದಲ್ಲಿನ ಅಭದ್ರ ಸರ್ಕಾರ ಕ್ಕೂ, ಸಿಐಐಎಲ್‌ ಆಡಳಿತಕ್ಕೂ ಅಷ್ಟೇನೂ ವ್ಯತ್ಯಾಸವಿರಲಿಲ್ಲ .

ಪಾಟ್ನಾಯಿಕರ ಮೀರಿಸಿ ಉದಯ್‌ಸಿಂಗ್‌ ಸಂಸ್ಥೆಯಾಗಿಸುವ ಆಸೆ

ಉತ್ಸಾಹಿ ಪ್ರತಿಭೆಗಳಿಂದ ಯಶಸ್ಸನ್ನು ನಿರೀಕ್ಷಿಸುವಷ್ಟು ಯೌವ್ವನ ದಾಟಿದವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ . ನಮ್ಮ ಕೇಂದ್ರದ ದೊಡ್ಡ ಸಮಸ್ಯೆಯೆಂದರೆ, ನೌಕರ ವರ್ಗದ್ದು . ಬಹುತೇಕ ನೌಕರರು ಯೌವ್ವನ ದಾಟಿದವರು. ನಮ್ಮ ಋಣಾತ್ಮಕ ಅಂಶಗಳು, ಧನಾತ್ಮಕ ಅಂಶಗಳು ಎಲ್ಲವನ್ನೂ ತಿಳಿದಿದ್ದೇನೆ. ಇನ್ನುಳಿದಿರುವುದು ಸಂಸ್ಥೆಯ ಚಟುವಟಿಕೆಗಳಿಗೆ ವೇಗ ಕಲ್ಪಿಸುವುದು ಮಾತ್ರ. ಬಹಳಷ್ಟು ಜನಕ್ಕೆ ಪಾಟ್ನಾಯಿಕ್‌ ಸಂಸ್ಥೆಯೆಂದೇ ಸಿಐಐಎಲ್‌ ಗೊತ್ತು . ಅವರು ಸ್ಥಾಪಕ ನಿರ್ದೇಶಕರಾದ್ದರಿಂದ ಅದು ಸಹಜವೂ ಹೌದು. ಆದರೆ, ಮುಂದಿನ ದಿನಗಳಲ್ಲಿ ಉದಯ್‌ ಸಂಸ್ಥೆಯಾಗಿಸುವ ಸವಾಲನ್ನು ಹೊತ್ತಿದ್ದೇನೆ - ಮೊನ್ನೆ ಮೊನ್ನೆ ತಾನೆ ಅಧಿಕಾರ ವಹಿಸಿಕೊಂಡ ಯುವ ನಿರ್ದೇಶಕರ ಮಾತುಗಳಲ್ಲಿ ಆಪಾರ ಆತ್ಮ ವಿಶ್ವಾಸ. ಅವರ ಅಜೆಂಡಾದಲ್ಲಿರುವ ಆದ್ಯತೆಗಳನ್ನು ಪಟ್ಟಿ ಮಾಡುವುದಾದರೆ-

  • ಮೂವತ್ತು ವರ್ಷಗಳು ಕಳೆದರೂ ಸಂಸ್ಥೆಗೆ ಲಭ್ಯವಾಗದ ಪ್ರೌಢತೆಯನ್ನು ದಕ್ಕಿಸುವುದು
  • ಈವರೆಗೆ ಯೋಜನಾ ರೂಪದಲ್ಲೇ ಉಳಿದ ಗುರಿಗಳನ್ನು ಕಾರ್ಯರೂಪಕ್ಕಿಳಿಸುವುದು
  • ವಿದೇಶಗಳಲ್ಲಿ ದ್ರಾವಿಡ ಭಾಷೆಗಳ ಅಧ್ಯಯನದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಸುಮಾರು 77 ದೇಶಗಳಲ್ಲಿ ಸಿಐಐಎಲ್‌ ಚಟುವಟಿಕೆಗಳಿವೆ. ಅವುಗಳನ್ನೆಲ್ಲಾ ಸಮರ್ಪಕಗೊಳಿಸುವುದು
  • ಅನುವಾದಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ , ಶಿಸ್ತುಬದ್ಧ ಅನುವಾದ ಕಲೆಯ ತರಬೇತಿ ನೀಡುವುದು. ಆ ಮೂಲಕ, ಯುವ ಪ್ರತಿಭೆಗಳ ಸಾಹಿತ್ಯವನ್ನು ಎಲ್ಲ ಭಾರತೀಯ ಭಾಷೆಗಳಿಗೆ ಪರಿಚಯಿಸುವುದು
ಕನಸುಗಳು ನೂರಿವೆ, ಎಲ್ಲದಕ್ಕೂ ಸ್ವಾಯತ್ತತೆ ಬೇಕು

ಯೋಜನೆ- ಉತ್ಸಾಹ ನಮ್ಮಲ್ಲಿ ಸಾಕಷ್ಟಿದೆ. ಆದರೆ, ಈ ಎಲ್ಲವನ್ನೂ ವೇಗವಾಗಿ ಕಾರ್ಯರೂಪಕ್ಕಿಳಿಸಲು ಸಂಸ್ಥೆಗೆ ಸ್ವಾಯತ್ತತೆ ಅತ್ಯಗತ್ಯ. ಪ್ರಸ್ತುತ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗೆ ಸ್ವಾಯತ್ತತೆ ನೀಡುವ ಪ್ರಸ್ತಾವನೆಯೂ ಈಗ ಚಾಲ್ತಿಯಲ್ಲಿದ್ದು , ಚರ್ಚೆಯ ಹಂತದಲ್ಲಿದೆ ಎನ್ನುತ್ತಾರೆ ಉದಯ್‌.

ಸಿಐಐಎಲ್‌ ಸಾಗಬೇಕಾದ ದಿಕ್ಕು ದೂರದಲ್ಲಿದೆ. ಆದರೆ, ಆ ದೂರವನ್ನು ಲಂಘಿಸಿ ಎಟುಕಿಸಿಕೊಳ್ಳುವ ಉತ್ಸಾಹಿ ನಿರ್ದೇಶಕ ಸಂಸ್ಥೆಗೆ ದಕ್ಕಿದ್ದಾರೆ. ಸಿಐಐಎಲ್‌ಗೆ ಸ್ವಾಯತ್ತತೆ ದಕ್ಕಲಿ, ಉದಯ್‌ರ ಯೋಜನೆಗಳು ಫಲಗೊಳ್ಳಲಿ ಅನ್ನುವುದು ಪ್ರತಿಯಾಬ್ಬ ಭಾಷಾಪ್ರಿಯನ ಹಾರೈಕೆ.

ವಾರ್ತಾಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X