ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಂತ್ರ ಸ್ಥಿತಿಯಲ್ಲಿ ಕನ್ನಡ ಕಟ್ಟಾಳು ಮ.ರಾಮಮೂರ್ತಿ ಪತ್ನಿ

By Staff
|
Google Oneindia Kannada News

(ಇನ್ಫೋ ವಿಶೇಷ ವಾರ್ತೆ)

ಬೆಂಗಳೂರು : ನಮ್ಮ ನೆಲಕ್ಕಾಗಿ, ಜನರಿಗಾಗಿ ಬದುಕನ್ನೆ ತ್ಯಾಗ ಮಾಡಿದವರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ವಿಷಾದಿಸಿದ್ದಾರೆ.

ನಾಡು ನುಡಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಕನ್ನಡ ಹೋರಾಟಗಾರ ಮ.ರಾಮಮೂರ್ತಿಯವರ ಪತ್ನಿ ಕಮಲಮ್ಮನವರನ್ನು ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ . ರಾಮಮೂರ್ತಿಯವರ ಕುಟುಂಬ ಇಂದು ಆರ್ಥಿಕವಾಗಿ ದುಸ್ಥಿತಿಯಲ್ಲಿದೆ. ಇದು ನಾಚಿಕೆಗೇಡಿನ ಸಂಗತಿ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಮೊಯಿಲಿ ಹೇಳಿದರು. ಕಮಲಮ್ಮನವರಿಗೆ 250 ರುಪಾಯಿ ಮಾಶಾಸನ ನೀಡಲು ಮುಂದಾಗಿರುವ ಅತ್ತಿಮಬ್ಬೆ ಪ್ರತಿಷ್ಠಾನವನ್ನು ಅವರು ಶ್ಲಾಘಿಸಿದರು.

ಅತ್ತಿಮಬ್ಬೆ ಪ್ರತಿಷ್ಠಾನ ಹಾಗೂ ಕನ್ನಡ ಲೇಖಕಿಯರ ಸಂಘ ಭಾನುವಾರ ಜಂಟಿಯಾಗಿ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮೊಯಿಲಿ ಮಾತನಾಡುತ್ತಿದ್ದರು. ಮನುಷ್ಯರನ್ನು ಒಗ್ಗೂಡಿಸುವ ಶಕ್ತಿ ರಾಜಕಾರಣಿಗಳು ಅಥವಾ ವಿಜ್ಞಾನಿಗಳಿಗೆ ಇಲ್ಲ . ಸಾಹಿತಿಗಳು ಮತ್ತು ಕಲಾವಿದರಿಂದ ಮಾತ್ರ ಮನುಷ್ಯ ಸಂಬಂಧಗಳನ್ನು ಬೆಸೆಯಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅಭಿಪ್ರಾಯ ಪಟ್ಟಿದ್ದಾರೆ.

ಜಗತ್ತು ಕಿರಿದಾಗುತ್ತಿರುವ ದಿನಗಳಲ್ಲಿ ಮನಸ್ಸುಗಳು ದೂರವಾಗುತ್ತಿವೆ. ಮನುಷ್ಯ ಸಂಬಂಧಗಳನ್ನು ಬೆಸೆಯುವ, ಸಹ್ಯವಾಗಿಸುವ ಕೃತಿಗಳು ಸಾಹಿತಿ- ಕಲಾವಿದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಅವರು ಆಶಿಸಿದರು.

ಸ್ಮರಣೆ ಸೊಗಸು- ಪುಸ್ತಕ ವಿಮಾನ : ಇದೇ ಸಂದರ್ಭದಲ್ಲಿ ಡಾ. ವರದಾ ಶ್ರೀನಿವಾಸ್‌ ಅವರ ಸ್ಮರಣೆ ಸೊಗಸು (ಪ್ರಬಂಧಗಳು) ಹಾಗೂ ಪುಷ್ಪಕ ವಿಮಾನ(ಮಕ್ಕಳ ಕಥೆಗಳು) ಕೃತಿಗಳನ್ನು ಮೊಯಿಲಿ ಬಿಡುಗಡೆ ಮಾಡಿದರು. ಕೃತಿಗಳ ಬಗ್ಗೆ ಮಾತನಾಡಿದ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌, ಕಾನ್ವೆಂಟ್‌ ಸಂಸ್ಕೃತಿಯಿಂದಾಗಿ ಮಕ್ಕಳಲ್ಲಿ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಆಶಿಸಿದರು.

ಕಮಲಮ್ಮ ಮ.ರಾಮಮೂರ್ತಿ, ಲೇಖಕಿ ಸೀತಮ್ಮ ಬೇಲಿ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ರಾಮಣ್ಣ ಕೋಡಿ ಹೊಸಳ್ಳಿ ಹಾಗೂ ಬೆಂಗಳೂರು ವಿವಿ ಕನ್ನಡ ಎಂಎಯಲ್ಲಿ ಪ್ರಥಮ ರ್ಯಾಂಕ್‌ ಗಳಿಸಿದ ಬಿ.ಎಸ್‌. ಅಶೋಕ್‌ಕುಮಾರ್‌ ಅವರನ್ನು ಶಿಕ್ಷಣ ತಜ್ಞ ಡಾ. ಎಚ್‌. ನರಸಿಂಹಯ್ಯ ಸನ್ಮಾನಿಸಿದರು. ಅನಾರೋಗ್ಯ ನಿಮಿತ್ತ ಅವರು ಮಾತನಾಡಲಿಲ್ಲ . ಲೇಖಕಿ ಡಾ. ವರದಾ ಶ್ರೀನಿವಾಸ್‌, ಅತ್ತಿಮಬ್ಬೆ ಪ್ರತಿಷ್ಠಾನದ ಮನೋಹರಿ ಪಾರ್ಥಸಾರಥಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಜರಗನಹಳ್ಳಿ ಶಿವಶಂಕರ್‌ರ ‘ಮಳೆ’ ಗೆ ಮೋಕ್ಷ

ಭಾನುವಾರ (ಜ.7) ಬೆಂಗಳೂರಿನ ಯವನಿಕಾದಲ್ಲಿ ಶುಭದಾ ಪ್ರಕಾಶನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕವಿ ಜರಗನಹಳ್ಳಿ ಶಿವಶಂಕರ್‌ ಅವರ ಕೃತಿ ಮಳೆ, ಪ್ರೊ.ಎಸ್‌.ಜಿ.ಸಿದ್ಧರಾಮಯ್ಯನವರ ಮರು ಜೇವಣಿ ಹಾಗೂ ಲತಾ ಗುತ್ತಿಯವರ ಬೆಳ್ಳಿ ಹೂವು ಕೃತಿಗಳನ್ನು ಮಾಜಿ ಸಚಿವ ಎಂ.ಪಿ. ಪ್ರಕಾಶ್‌ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಹೃದ್ರೋಗ ತಜ್ಞ ಡಾ.ಪ್ರಭುದೇವ, ಪರಿಸರ ವಾದಿ ಎಲ್ಲಪ್ಪ ರೆಡ್ಡಿ ಮತ್ತು ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿಯವರನ್ನು ಸನ್ಮಾನಿಸಲಾಯಿತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ನಿತ್ಯೋತ್ಸವ ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X