ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಯಾಂಬ ಪಟ್ಟಾಭಿ, ಶಂಕರಭಟ್‌ ಸೇರಿ ಐವರಿಗೆ ಅಕಾಡಮಿ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಖ್ಯಾತ ಕಾದಂಬರಿಗಾರ್ತಿ ಆರ್ಯಾಂಬ ಪಟ್ಟಾಭಿ, ಡಾ. ಶಂಕರಭಟ್‌ ಸೇರಿದಂತೆ ನಾಡಿನ ಐವರು ಸಾಹಿತಿಗಳಿಗೆ 2001ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಲಾಗಿದೆ. ಇದಲ್ಲದೆ 17 ಪ್ರಕಾರದ ಕೃತಿಗಳಿಗೆ 2000 ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಪ್ರಕಟಿಸಲಾಗಿದೆ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಅನನ್ಯ ಸೇವೆಯನ್ನು ಪರಿಗಣಿಸಿ ಖ್ಯಾತ ಕಾದಂಬರಿಗಾರ್ತಿ ಆರ್ಯಾಂಬ ಪಟ್ಟಾಭಿ, ಡಾ. ಡಿ.ಎನ್‌. ಶಂಕರಭಟ್‌, ರಂ.ಶಾ. ಲೋಕಾಪುರ, ಡಾ. ರಾಜಶೇಖರ್‌ ನೀರಮಾನ್ವಿ ಮತ್ತು ಮ.ನ. ಜವರಯ್ಯ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹಾವೇರಿಯಲ್ಲಿ ಫೆಬ್ರವರಿ 2ನೇ ವಾರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ವಿತರಿಸಲಾಗುವುದು. ಪ್ರಶಸ್ತಿಯು 10 ಸಾವಿರ ರುಪಾಯಿ ನಗದು, ನಟರಾಜನ ವಿಗ್ರಹ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಈ ವಿಷಯವನ್ನು ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ. ಗುರುಲಿಂಗ ಕಾಪಸೆ ಅವರು ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆ ಆಗಿರುವ ಕೃತಿಗಳು : 2000 ಸಾಲಿನಲ್ಲಿ ಪ್ರಕಟವಾದ 17 ಪ್ರಕಾರಗಳ ಕೃತಿಗಳಿಗೆ ಅತ್ಯುತ್ತಮ ಕೃತಿ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ವಿಜೇತರು ತಲಾ 5 ಸಾವಿರ ರುಪಾಯಿ ನಗದು ಹಾಗೂ ಪ್ರಮಾಣ ಪತ್ರ ಪಡೆಯಲಿದ್ದಾರೆ. ಕೃತಿಯ ಹೆಸರು, ಪ್ರಕಾರ ಹಾಗೂ ಲೇಖಕರ ವಿವರ ಕೆಳಕಂಡಂತಿದೆ.

ಕಾವ್ಯ - ಎಸ್‌.ಜಿ. ಸಿದ್ಧರಾಮಯ್ಯ (ಮರುಜೇವಣಿ), ಸಣ್ಣಕಥೆ - ಬಿದರಹಳ್ಳಿ ನರಸಿಂಹಮೂರ್ತಿ (ಹಂಸೆ ಹಾರಿತ್ತು), ನಾಟಕ - ಪ್ರಸನ್ನ (ಜಂಗಮದ ಬದುಕು), ಲಲಿತ ಪ್ರಬಂಧ - ವೈ.ಆರ್‌. ಮೋಹನ್‌ (ನೆನಪುಗಳು), ಪ್ರವಾಸ ಸಾಹಿತ್ಯ - ಜಿ.ಎನ್‌. ಮೋಹನ್‌ (ನನ್ನೊಳಗಿನ ಹಾಡು ಕ್ಯೂಬಾ), ಜೀವನ ಚರಿತ್ರೆ - ಡಾ. ಎಚ್‌.ಡಿ. ಚಂದ್ರಪ್ಪ ಗೌಡ (ಡಾ. ವ್ಲಾದಿಮಿರ್‌ ಹಾಫ್‌ಕಿನ್‌), ಸಾಹಿತ್ಯ ವಿಮರ್ಶೆ - ಡಾ. ಕರೀಗೌಡ ಬೀಚನಹಳ್ಳಿ - (ಸಂಕಲನ), ಗ್ರಂಥ ಸಂಪಾದನೆ - ಬಿ. ಸಿದ್ಧಗಂಗಯ್ಯ ಕಂಬಾಲು ಮತ್ತು ಲಿಂಗರಾಜು (ಮತುಕೂರು ನಂಜುಂಡ ಶಿವಯೋಗಿ ಕೃತಿಗಳು), ಮಕ್ಕಳ ಸಾಹಿತ್ಯ - ಆರ್‌.ಕೆ. ಶಾನುಭೋಗ್‌ (ಅಪೂರ್ವ), ವಿಜ್ಞಾನ ಸಾಹಿತ್ಯ - ಮಂಜುನಾಥ ಹೆಗಡೆ ಹೊಸಬಾಳೆ (ಪಶ್ಚಿಮ ಘಟ್ಟದ ಜೀವ ವೈವಿಧ್ಯ).

ಸಂಶೋಧನೆ - ಡಿ.ಎನ್‌. ಶಂಕರಭಟ್‌ (ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ), ಮಾನಸಿಕ - ಡಾ. ಕೆ. ರವೀಂದ್ರನಾಥ (ಕನ್ನಡ ದಾಖಲು ಸಾಹಿತ್ಯ). ಅನುವಾದ -1 ಡಾ. ನಾ. ದಾಮೋದರ ಶೆಟ್ಟಿ (ದೇವರ ವಿಕರಾಳಗಳು), ಅನುವಾದ -2 - ಡಾ. ಟಿ.ಆರ್‌. ಚಂದ್ರಶೇಖರ್‌ (ಅನುಭಾವಿಗಳ ಕ್ರಾಂತಿ), ಸಂಕೀರ್ಣ - ಎಸ್‌.ಜಿ. ಮೈಸೂರುಮಠ (ಶಿವನಡಂಗುರ), ಲೇಖಕರ ಮೊದಲ ಕೃತಿ - ವಡ್ಡಗೆರೆ ನಾಗರಾಜಯ್ಯ (ಅಸಾದಿ), ಅಮೆರಿಕ ಕನ್ನಡಿಗರ ಬಹುಮಾನ - ಜಿ.ಬಿ. ಸಜ್ಜನ (Reflections on the Divine).

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X