• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಸ್ತಿಕ ಮೂರ್ತಿರಾಯರು

By Staff
|

ತಮ್ಮ 100ನೇ ಹುಟ್ಟುಹಬ್ಬದ ಅವಧಿಯ ನಂತರ ಎ.ಎನ್‌.ಮೂರ್ತಿರಾಯರನ್ನು ಎಲ್ಲರೂ ಕೇಳುತ್ತಲೇ ಇರುವುದು ದೇವರು ಇದ್ದಾನಾ, ಎಲ್ಲಿದ್ದಾನೆ ಎಂಬುದು. ಇತ್ತೀಚೆಗೆ ನೆಲಮಂಗಲದ ಗೆಳೆಯರ ಬಳಗ ಅವರ ಮನೆಗೇ ಹೋಗಿ ಪುಟ್ಟ ಸನ್ಮಾನ ಮಾಡಿದಾಗಲೂ ರಾಯರು ಇದೇ ಮಾತನ್ನು ಹೇಳಿದ್ದರು. ಬೇರೆ ಏನಾದರೂ ಕೇಳಿರಪ್ಪಾ, ಮಾನವತೆಯ ಬಗ್ಗೆ ಕೇಳಿ, ಸಾಹಿತ್ಯ- ಸಂಸ್ಕೃತಿಯ ಬಗ್ಗೆ ಕೇಳಿ ಅನ್ನುತ್ತಾರವರು. ಆದರೂ ಮೂರ್ತಿರಾಯರ ಕಂಡೊಡನೆ ಸಹೃದಯರಿಗೆ ನೆನಪಾಗುವುದು ದೇವರೇ.

ಅಕ್ಕಿ ಹೆಬ್ಬಾಳು ಮೂರ್ತಿರಾಯರು ದೇವರಿಲ್ಲ, ಆದರೂ ಇದ್ದಾನೆ ಎನ್ನುತ್ತಲೇ ನಾಸ್ತಿಕ ಪಟ್ಟಿಯನ್ನು ಕಳಚಿಕೊಂಡಿದ್ದಾರಾ? ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಈ ಪ್ರಶ್ನೆ ಗೆ ಉತ್ತರ ಸಿಕ್ಕಿತು.

ಬುಧವಾರ ಸಂಜೆ ಉಡುಪಿಯ ಕೃಷ್ಣ ಮಠದಲ್ಲಿ ರಾಯರಿಗೆ ಪರ್ಯಾಯ ಪೀಠದ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನವಾಯಿತು. ಪೇಜಾವರ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ, 1952ರಲ್ಲಿ ಇದೇ ಮೂರ್ತಿರಾಯರು ರಾಳ್ಲಪಳ್ಳಿ ಅನಂತಕೃಷ್ಣ ಶರ್ಮ ಜೊತೆ ಉಡುಪಿಗೆ ಬಂದು ಉಪನ್ಯಾಸ ನೀಡಿದ್ದನ್ನು ಸ್ಮರಿಸಿಕೊಂಡರು. ಜಾಬಾಲಿ, ದ್ರೌಪದಿ ಕೂಡ ಕಷ್ಟ ಕಾಲದಲ್ಲಿ ದೇವರ ಇರುವಿಕೆಯನ್ನು ಪ್ರಶ್ನಿಸಿದ್ದಾರೆ. ಮೂರ್ತಿರಾಯರೂ ಅಷ್ಟೆ, ಕಷ್ಟಗಳನ್ನು ಕಂಡೇ ದೇವರ ಅಸ್ತಿತ್ವದ ಬಗ್ಗೆ ಸಂದೇಹ ಬಂದಿರಬಹುದು. ನೈತಿಕ ಮೌಲ್ಯ ಪ್ರತಿಪಾದಿಸುವ ಮೂರ್ತಿರಾಯರು ನಾಸ್ತಿಕರಲ್ಲ, ಆಸ್ತಿಕರು ಎಂದು ಶ್ರೀಪಾದರು ಹೇಳಿದಾಗ ಸಭೆಯಲ್ಲಿ ಕರತಾಡನ.

ರಾಯರಿಂದ ಮತ್ತದೇ ದೇವರ ಮಾತು. ನಾವೇ ದೇವರಾಗಬೇಕು ಎನ್ನುವುದರ ಮೂಲಕ ಅವರ ದೇವರ ವ್ಯಾಖ್ಯೆ ಮತ್ತೊಂದು ಮಜಲನ್ನು ಪಡೆದುಕೊಂಡಿತು. ರಾಯರ ಬದಲಾಗುತ್ತಿರುವ ದೇವರ ಬಗೆಗಿನ ವರಸೆ ಅವರನ್ನು ನಾಸ್ತಿಕ ದಡದಿಂದ ಆಸ್ತಿಕ ದಡಕ್ಕೆ ತಂದು ನಿಲ್ಲಿಸಿದೆ. ನೂರು ತುಂಬಿದಾಗ ಪೂಜೆಗೈದರು. ಇದೀಗ ‘ಸರ್ವ ದೇವ ನಮಸ್ಕಾರಂ ಕೇಶವಂ ಪ್ರಗತಿಚ್ಛತಿ’ ಎನ್ನುತ್ತಾರೆ. ಅವನನ್ನು ಧ್ಯಾನಿಸಿದರೂ ಸರಿಯೇ, ಆರಾಧಿಸಿದರೂ ಸರಿಯೇ ಅಂತ ಅಪ್ಪಣೆ ಕೊಡಿಸುತ್ತಾರೆ.

ದೇವರು ಪುಸ್ತಕದ ಬಗೆಗೇ ಸಭಿಕರಿಂದ ಪ್ರಶ್ನೆಗಳೆರಗಿದವು. ಪುಸ್ತಕದಲ್ಲಿ ಇನ್ನಷ್ಟು ವಿಷಯಗಳನ್ನು ಬರೆಯಬೇಕಿತ್ತು ಎಂದ ಅವರು, ಆಪತ್ತಿಗಾದವನೇ ದೇವರು. ಅದು ನಾವೇ ಯಾಕಾಗಬಾರದು ಎಂದರು.

ಮೂರ್ತಿರಾಯರಿಗೆ ಇನ್ನಷ್ಟು ಹೇಳುವಾಸೆ....

ದೇವರಿದ್ದಿದ್ದರೆ ಇಷ್ಟೊಂದು ಕಷ್ಟ ಇರುತ್ತಿರಲಿಲ್ಲವೆನೋ ಎಂಬ ಸಂದೇಹ ನನ್ನದು. ಅದಕ್ಕೇ ಮಾನವ ಸೇವೆಯೇ ದೇವರು. ಮೊದಲು ಮನೆ, ಆಮೇಲೆ ಶಾಲೆ, ನಂತರ ಸಮಾಜ ಮನುಷ್ಯರ ಚಾರಿತ್ರ್ಯ ರೂಪಿಸುತ್ತದೆ. ಒಂದು ಶತಮಾನ ನೋಡಿದ್ದೇನೆ. ಬದಲಾವಣೆ, ವ್ಯತ್ಯಾಸಗಳಿಲ್ಲದೆ ಇರುವುದು ಅಸಾಧ್ಯ. ನಮ್ಮ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಹೇರಿಕೆಯಾಯಿತು. ಅದರಿಂದ ಒಳಿತೂ ಆಗಿದೆ, ಕೆಡಕೂ ಆಗಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಕುಡಿತದ ಚಟಕ್ಕೆ ಸಿಲುಕಿದ ಗೆಳೆಯರಿದ್ದರು. ಆದರೂ ನಾನದಕ್ಕೆ ಸಿಲುಕಲಿಲ್ಲ .

ಸಮಾಜ ಮತ್ತು ಮಠಗಳ ನಡುವೆ ಉತ್ತಮ ಸಂಬಂಧ ಬೆಳೆಯುತ್ತಿರುವುದನ್ನು ಕಂಡರೆ ಸಂತೋಷವಾಗುತ್ತದೆ. ಈ ಸಮಯದಲ್ಲಿ ನನಗೆ ಅಪ್ಪನ ನೆನಪು ಬರುತ್ತದೆ. ಒಮ್ಮೆ ನಮ್ಮೂರಲ್ಲಿ ಕಾಲರಾ ಬಂದಿತ್ತು. ಅನೇಕರು ಸತ್ತು ಹೋಗಿದ್ದರು. ಅಂಥಾ ವೇಳೆಯಲ್ಲಿ ತನಗೂ ರೋಗ ಬರುತ್ತದೆಂದು ಹಿಂಜರಿಯದೆ, ಅಪ್ಪ ಒಂದು ಒಂಟಿ ಜೀವದ ಶುಶ್ರೂಷೆ ಮಾಡಿದರು. ಅದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಅಪ್ಪನ ಪ್ರಭಾವ ಮನಸ್ಸನ್ನು ಆವರಿಸಿದ್ದು ಅಂದೇ .

ಮೂರ್ತಿರಾಯರ ಚಿಂತನೆಗಳು ಈಗಲೂ ಸಾಣೆಗೆ ಸಿಕ್ಕುತ್ತಿವೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅವರ ತಿಳಿವಳಿಕೆಯೇ ಇದಕ್ಕೆ ಸಾಕ್ಷಿ. ಪೂಜೆ ಮಾಡಿ, ಭಜನೆ ಮಾಡಿ ಏನಾದರೂ ಮಾಡಿ. ಆದರೆ ಎಲ್ಲಕ್ಕೂ ಮೊದಲು ಕಷ್ಟದಲ್ಲಿರುವವರುಗೆ ಸೇವೆ ಮಾಡಿ ಅನ್ನುವುದೇ ಅವರ ಸಂದೇಶ. ಆ ಸೇವೆಯೇ ದೈವಾರಾಧನೆ ಅನ್ನೋದು ಅವರ ನಂಬುಗೆ. ಅಂದಮೇಲೆ, ಮೂರ್ತಿರಾಯರ ಪ್ರಕಾರ ದೇವರಿದ್ದಾನೆ !

ವಾರ್ತಾ ಸಂಚಯ

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X