• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಡಲೀಚೆಯ ದನಿ, ಕರಾವಳಿಯ ಮಾರ್ದನಿ

By Staff
|

*ಕೆ. ರಾಜಲಕ್ಷ್ಮಿ ರಾವ್‌

ಮಂಗಳೂರು : ಬೆಳಗಾದರೆ ವಂದನದ ಭಕ್ತಿ ಗೀತೆ, ಸಂಜೆಯಾದರೆ ಪಾಡ್ದನ, ರಾತ್ರಿಯಾದರೆ ಯಕ್ಷಗಾನ... ಹೀಗೆ ಅಲ್ಲಿ ರೇಡಿಯೋದ ಪ್ಲಗ್‌ ಗೋಡೆಯಿಂದ ಕಿತ್ತು ಬರುವುದೇ ಇಲ್ಲ. ದಕ್ಷಿಣ ಕನ್ನಡದ ಹಳ್ಳಿಗಳಲ್ಲಿ ಮನೆಯ ಚಾವಡಿಗೆ ಕಾಲಿಟ್ಟರೆ, ಸೋಫಾ,ಫೋನು ಫ್ಯಾನುಗಳ ಜೊತೆಗೆ ಟೀವಿ ಕಾಣಿಸುತ್ತದೆ. ಟೀವಿ ಪಕ್ಕದಲ್ಲಿಯೇ ರೇಡಿಯೋ! ಟೀವಿ ಇಲ್ಲದಿದ್ದರೂ ನಡೆದೀತು. ರೇಡಿಯೋ ಇರಲೇಬೇಕು ಅನ್ನುವ ವರಸೆ ಇಲ್ಲಿನವರದ್ದು.

ತುಳು ಭಾಷೆ , ಯಕ್ಷಗಾನ, ಪಾಡ್ದನದಂತಹ ಪ್ರಾದೇಶಿಕ ಸಂಸ್ಕೃತಿಯಿಂದಾಗಿ ಮಂಗಳೂರು ಆಕಾಶವಾಣಿ ಮತ್ತು ಕೇಳುಗರ ನಡುವಿನ ಸಂಬಂಧವನ್ನು ಮುರಿದು ಹಾಕಲು ಟೀವಿ, ಇಂಟರ್‌ನೆಟ್‌ಗಳಿಗೆ ಸಾಧ್ಯವಾಗಿಲ್ಲ. ಮೊನ್ನೆ ಡಿಸೆಂಬರ್‌ 11ಕ್ಕೆ ಮಂಗಳೂರು ಆಕಾಶವಾಣಿಗೆ 25 ವರ್ಷ ತುಂಬಿತು. ಈ ಖುಷಿಗೆ ಆಕಾಶವಾಣಿ ಬರ್ತ್‌ಡೇ ಆಚರಿಸಿತು. ಅಂದು ಆಕಾಶವಾಣಿಯಲ್ಲಿದ್ದ ಎಲ್ಲ ಫೋನುಗಳೂ ಕಂಡಾವಟ್ಟೆ ವ್ಯಸ್ತವಾಗಿದ್ದವು. ರಿಂಗುಣಿಸಿದ ತಕ್ಷಣ ಫೋನೆತ್ತಿದರೆ ಶುಭಾಶಯಗಳ ಸುರಿಮಳೆ. ಫೋನಿಟ್ಟರೆ ಮತ್ತೆ ಟ್ರಿಣ್‌..ಟ್ರಿಣ್‌. ಅದು ಆಕಾಶವಾಣಿಯ ಜನಪ್ರಿಯತೆಗೆ ಸಾಕ್ಷಿ.

ಮಂಗಳೂರು ಆಕಾಶವಾಣಿಯ ಜನಪ್ರಿಯತೆಯ ಹಿಂದಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಗಳಲ್ಲಿರುವ ವಿಭಿನ್ನ ಪ್ರಾದೇಶಿಕ ಸಂಸ್ಕೃತಿ. ಆಕಾಶವಾಣಿ ಎರಡೂ ಸಂಸ್ಕೃತಿಗಳನ್ನು ಚೆನ್ನಾಗಿ ದುಡಿಸಿಕೊಂಡಿದೆ. ಮಂಗಳೂರಿನ ರೇಡಿಯೋದಲ್ಲಿ ವಾರಕ್ಕೆ ಮೂರು ದಿನ ಸಂಜೆ 25 ನಿಮಿಷಗಳ ತುಳು ಕಾರ್ಯಕ್ರಮವಿರುತ್ತದೆ. ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಚರ್ಚೆ, ತುಳು ಸಾಹಿತ್ಯ ಕೃಷಿಯಲ್ಲಿ ಉಳುಮೆ ಮಾಡುತ್ತಿರುವ ಹಿರಿಯರ ಸಂದರ್ಶನ, ಯುವ ಮತ್ತು ಮಹಿಳಾ ಸಂಘಟನೆಗಳ ಪ್ರತಿಭೆಗಳಿಗೆ ವೇದಿಕೆಯಾಗಿ ಆಕಾಶವಾಣಿಯ ತುಳು ಕಾರ್ಯಕ್ರಮಗಳು ತುಳುವರ ಮನ ಗೆದ್ದಿದೆ.

ಕೆಕೆಬಿ,ಫಾಲ್ಗುಣ ಬಿತ್ತನೆ ಬೀಜ ಅಷ್ಟೇ ಅಲ್ಲ...

ಕೃಷಿರಂಗ ಕಾರ್ಯಕ್ರಮ, ಪೋಟಾಷಿಯಂ, ಸುಫಲಾ ಗೊಬ್ಬರ, ಫಾಲ್ಗುಣ, ಕೆಕೆಬಿ ಬಿತ್ತನೆ ಬೀಜದ ಮಾಹಿತಿಗೆ ಮಾತ್ರ ಸೀಮಿತವಾಗಿರದೆ, ಅಡಿಕೆ ಕೃಷಿಯಲ್ಲಿ ಹೊಸ ಪದ್ಧತಿ ಅನುಸರಿಸಿದವರ, ಭತ್ತದ ಕೃಷಿಯಲ್ಲಿ ಕೆಲಸದವರಿಲ್ಲದೆ ಪರದಾಡುವವರ, ವೆನಿಲ್ಲಾ ಕೃಷಿಯನ್ನು ನಂಬಿದವರ ಪರಿಚಯಮಾಡಿಕೊಡುವ, ಅವರ ಅನುಭವಗಳನ್ನು ಹಂಚಿಕೊಳ್ಳುವ ಅರಳಿಕಟ್ಟೆಯಾಗಿದೆ.

25 ವರ್ಷಗಳ ಹಿಂದೆ ಆಕಾಶವಾಣಿ ಆರಂಭವಾದಾಗ ಸಲಹಾ ಮಂಡಳಿಯ ಸದಸ್ಯರಾಗಿದ್ದ, ಸಾಹಿತಿ ಅಮೃತ ಸೋಮೇಶ್ವರ ಹೇಳುವಂತೆ, ತುಳು ಭಾಷೆ, ಯಕ್ಷಗಾನ ಮತ್ತು ಕೃಷಿ ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡುತ್ತಿರುವುದರಿಂದಲೇ ಮಂಗಳೂರು ಆಕಾಶವಾಣಿಗೆ ಅಷ್ಟೊಂದು ಫ್ಯಾನ್‌ಗಳಿರುವುದು. ‘ಆ ಕಾಲದಲ್ಲಿ ನಾವು ಬೆಂಗಳೂರಿಗೆ ಹೋಗಿ ಭಾಷಣವೋ, ಕತೆಯೋ ಕವನವೋ ಓದಬೇಕಿತ್ತು. ಅಲ್ಲದೆ ನಮ್ಮೂರಿನ ಪಾಡ್ದನ ಹೇಳುವ ಡಂಗು ಪಾಣಾರ ಅಂತಹವರನ್ನು ಬೆಂಗಳೂರು ಆಕಾಶವಾಣಿ ಕರೆಸುವುದು ಸಾಧ್ಯವೇ ಇರಲಿಲ್ಲ. ಮಂಗಳೂರು ಆಕಾಶವಾಣಿ ಆ ಸಮಸ್ಯೆಗೆ ಉತ್ತರವಾಗಿದೆ’ ಎಂದು ಗಡಿಪ್ರದೇಶದ ಹಿರಿಯ ಕನ್ನಡ ಕವಿ, ಸ್ವಾತಂತ್ರ್ಯ ಹೋರಾಟಗಾರ ಕಯ್ಯಾರ ಕಿಞಣ್ಣ ರೈ ಹೇಳುತ್ತಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಅಸೈನ್‌ಮಂಟ್‌ಗಳನ್ನು ಕೊಟ್ಟು ಬೆಳಕಿಗೆ ತಂದ ಕೀರ್ತಿ ಇದೇ ಬಾನುಲಿ ಕೇಂದ್ರಕ್ಕೆ ಸಲ್ಲುತ್ತದೆ. ಲೇಖಕಿ ಸಾರಾ ಅಬೂಬಕ್ಕರ್‌ ತಾನು ನಾಟಕ ಬರೆಯಲು ಪ್ರೋತ್ಸಾಹಿಸಿದ ಆಕಾಶವಾಣಿ ನೂರು ಕಾಲ ಬಾಳಲಿ ಎನ್ನುತ್ತಾರೆ. ಕದ್ರಿ ಗೋಪಾಲ್‌ನಾಥರ ಸ್ಯಾಕ್ಸೋಫೋನ್‌ವಾದ್ಯ ಮತ್ತು ವಾದನವನ್ನು ಪ್ರಥಮ ಬಾರಿಗೆ ಪರಿಚಯಿಸಿದ್ದು ನಮ್ಮದೇ ಆಕಾಶವಾಣಿ ಅಂತ ಆಕಾಶವಾಣಿ ಆರಂಭವಾದ ಸಂದರ್ಭದಲ್ಲಿ ಸಿಬ್ಬಂದಿ ವರ್ಗದಲ್ಲಿದ್ದುಕೊಂಡು ದುಡಿದ ಎಂ.ವಿ. ವಸಂತ ಕುಮಾರಿ ಹೇಳುತ್ತಾರೆ.

ತುಳುವಿನೊಂದಿಗೆ ಕೊಂಕಣಿ ಭಾಷೆ-ಯಕ್ಷಗಾನಕ್ಕೂ ಮಣೆ

ವಾರಕ್ಕೆರಡು ಬಾರಿ ಕೊಂಕಣಿ ಹಾಡುಗಳಿಗೆ, ಕಥೆಗಳಿಗೆ ರೇಡಿಯೋದ ಸ್ಪೀಕರ್‌ ತೆರೆದುಕೊಳ್ಳುತ್ತದೆ. ಪುತ್ತೂರು ನರಸಿಂಹ ನಾಯಕ್‌ರಂತಹ ಹಾಡುಗಾರರಿಂದ ಹಿಡಿದು ಆಶಾ ಸುಜಾತ ರೇಗೋವರೆಗೆ ಕೊಂಕಣಿ ಸಾಹಿತ್ಯ ಹಾಡಿನ ರೂಪದಲ್ಲಿ ಕರಾವಳಿ ಕೊಂಕಣಿ ಮನೆಗಳನ್ನು ತಲುಪುತ್ತದೆ. ವಾರಕ್ಕೊಮ್ಮೆ ಕೊಂಕಣಿ ಭಾಷೆಯಲ್ಲಿ ನಡೆಸುವ ಮಾತುಕತೆ ಕೊಂಕಣಿ ಮನೆಗಳ ಟೀವಿಯನ್ನು ಪಕ್ಕಕ್ಕಿರಿಸುತ್ತದೆ. ಲಿಪಿಯಿಲ್ಲದಿದ್ದರೂ ತುಳುವಿನಂತೆಯೇ ಉತ್ತಮ ಸಾಹಿತ್ಯ ಸೊಗಡಿರುವ ಕೊಂಕಣಿ ಕಥೆ ಕವನಗಳಿಗೆ ಮಂಗಳೂರು ಬಾನುಲಿ ಯಂತಹ ರಂಗಸ್ಥಳ ಮತ್ತೊಂದು ಕಾಣುವುದಿಲ್ಲ. ತೆಂಕು ತಿಟ್ಟು, ಬಡಗು ತಿಟ್ಟು, ತುಳು ಯಕ್ಷಗಾನಗಳಿಗೆ ಒಂದೇ ವೇದಿಕೆಯಾಗಿರುವ ಮಂಗಳೂರು ಆಕಾಶವಾಣಿ ಉತ್ತರ ಕನ್ನಡದವರನ್ನೂ ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಅಗರಿ, ಕಾಳಿಂಗ ನಾವಡ, ಪದ್ಯಾಣರ ಜಾಗಟೆ ಎಲ್ಲ ಮನೆಗಳಲ್ಲಿ ಪ್ರತಿಧ್ವನಿಸಿದರೆ ಅದು ಮಂಗಳೂರು ರೇಡಿಯೋದಿಂದ ಮಾತ್ರ ಸಾಧ್ಯ. ತುಳು ನಾಡಿನ ಆಕಾಶವಾಣಿ ಎಂಬ ಹಣೆಪಟ್ಟೆಗೆ ಸೀಮಿತವಾಗಿರದೇ, ಬಡಗುತಿಟ್ಟಿನ ಯಕ್ಷಗಾನದ ಚೆಂಡೆ ಸದ್ದಿಗೆ ಗಡಿಭಾಗದ ಬಳಿಯಿರುವ ಸಂಪಾಜೆಯ ತುಳುವ ಅಭಿಮಾನಿಗಳನ್ನೂ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. ಸುದ್ದಿ ವಿಷಯಕ್ಕೆ ಬಂದರೆ ಕೊಂಕಣಿ , ತುಳು, ಇಂಗ್ಲಿಷ್‌, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸುದ್ದಿಗಳನ್ನು ಮಾಹಿತಿಗಳನ್ನು ಪ್ರಸಾರ ಮಾಡುವುದು ಮಂಗಳೂರು ಆಕಾಶವಾಣಿ ಮಾತ್ರ. ಈಗ ರಜತೋತ್ಸವದ ಸಂಭ್ರಮದಲ್ಲಿರುವ ಆಕಾಶವಾಣಿಯವರು ನಾವು ಏಪ್ರಿಲ್‌ನಿಂದ ಎಫ್‌ಎಂ ಸರಣಿಗೆ ಸೇರಲಿದ್ದೇವೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಆಲ್‌ ದ ಬೆಸ್ಟ್‌.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more