ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುದ್ರಣ ಮಾಧ್ಯಮಕ್ಕೆ ವಿದೇಶೀ ಹಣ ಬೇಡಪ್ಪಾ ಬೇಡ : ಅನಂತ ಮೂರ್ತಿ

By Oneindia Staff
|
Google Oneindia Kannada News

*ಇನ್ಫೋಸೈಟ್‌

I am scared of Foreign Direct Investment in Print Media : URAಈಸ್ಟ್‌ ಇಂಡಿಯಾ ಕಂಪೆನಿಯವರು ತಕ್ಕಡಿ ಹಿಡಿದುಕೊಂಡು ಈ ದೇಶಕ್ಕೆ ಬಂದರು. ವ್ಯಾಪಾರಕ್ಕೆ ಅಡ್ಡಿ ಬರುವವರ ವಿರುದ್ಧ ಹೋರಾಡುತ್ತೇವೆ ಎಂದರು. ಕೊನೆಗೆ ದೇಶವನ್ನೇ ಕಬಳಿಸಿದರು. ಹಾಗೆಯೇ ಈಗ ಮುದ್ರಣ ಮಾಧ್ಯಮದಲ್ಲೂ ವಿದೇಶೀ ನೇರ ಬಂಡವಾಳವನ್ನು ನಾವು ಆಹ್ವಾನಿಸುತ್ತಿದ್ದೇವೆ. ಇದು ನಮಗೆ ಒಳಿತನ್ನು ಮಾಡುವುದಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್‌. ಅನಂತ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಶನಿವಾರ ದೇಶದ ನಂಬರ್‌ ಒನ್‌ ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕ ಮತ್ತು ಅಂಕಿತ ಪುಸ್ತಕ ಪ್ರಕಾಶನ ಆಯೋಜಿಸಿದ್ದ ಯುಗಾದಿ ಕಥಾ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು. ಅದೊಂದು ಚೊಕ್ಕ ಸಮಾರಂಭ. ಯವನಿಕಾ ಸಭಾಂಗಣದ ತುಂಬ ಬರಹಗಾರರ ದಂಡು. ಪತ್ರಕರ್ತರು, ಸಾಹಿತಿಗಳ ಸಮ್ಮಿಲನ. ದಟ್ಸ್‌ಕನ್ನಡ.ಕಾಮ್‌ನ ಹಿರಿಯ ಉಪ ಸಂಪಾದಕ ರಘುನಾಥ ಚ.ಹ. ಸೇರಿದಂತೆ 12 ಮಂದಿ ಕಥೆಗಾರರು ಬಹುಮಾನ ಪಡೆದರು.

ಕಾರ್ಯಕ್ರಮದಲ್ಲಿ ವಿಜಯಕರ್ನಾಟಕ ಪತ್ರಿಕೆಯ ಪ್ರಕಾಶಕ, ಸಂಸದ ವಿಜಯ ಸಂಕೇಶ್ವರ ಅವರು ವಿದೇಶೀ ಬಂಡವಾಳವನ್ನು ಸ್ವಾಗತಿಸುವುದಾಗಿ ಹೇಳಿದರೆ, ಅನಂತ ಮುೂರ್ತಿಯವರು ‘ನಮಗಿದು ಒಳಿತು ಮಾಡುತ್ತದೆ ಅಂತ ನನಗೆ ಅನಿಸುವುದಿಲ್ಲ’ ಎಂದರು.

ಹಂಗಿನರಮನೆಗಿಂತ...

ವಿದೇಶೀ ಬಂಡವಾಳದ ಹಂಗಿಲ್ಲದೆಯೇ ರಾಜ್ಯದಲ್ಲಿ ವಿಜಯ ಕರ್ನಾಟಕ ಪತ್ರಿಕೆ ಎರಡೂವರೆ ವರ್ಷದಲ್ಲೇ ಇಷ್ಟೊಂದು ಅಭಿವೃದ್ಧಿ ಹೊಂದಲಿಲ್ಲವೇ.. ಮತ್ತೇಕೆ ವಿದೇಶೀಯರ ಹಂಗು...? ಈ ಉದಾರೀಕರಣದಲ್ಲಿ ನನಗೆ ನಂಬಿಕೆ ಇಲ್ಲಪ್ಪಾ... ಎಂದ ಅನಂತ ಮೂರ್ತಿಯವರ ಮಾತು ನಂತರ ತಿರುಗಿದ್ದು ಸಾಹಿತ್ಯದತ್ತ...

‘ಜೀವನವನ್ನು ನೋಡುತ್ತಾ ಮತ್ತು ತತ್ವಗಳನ್ನು ಅನುಮಾನಿಸುತ್ತಲೇ ನನ್ನೊಳಗಿನ ಕಥೆಗಾರ ಬೆಳೆದ. ಮನುಷ್ಯನ ಕುರೂಪ, ಕ್ರೌರ್ಯ, ಜೊತೆಗೆ ಸೌಂದರ್ಯ ಮತ್ತು ದೈವತ್ವದ ಸಾಧ್ಯತೆಗಳನ್ನು ಅವಲೋಕಿಸಿ ಬರೆಯಬೇಕು. ಯಾವುದೇ ಬೂಟಾಟಿಕೆಯಿಲ್ಲದೆಯೇ ಗಳಿಸಿದ ಉದಾತ್ತತೆಯಿಂದ ಬರೆದರೆ ಅದು ಒಂದು ಉತ್ತಮ ಕಲಾಕೃತಿಯಾಗುವುದು ಸಾಧ್ಯ.

Chowkattininda Horabanda Chitragalu : The Collection of Award Winning Storisಸಾಹಿತ್ಯ ಬೆಳೆಯುವುದು ಪರಸ್ಪರ ದೂಷಣೆಯಿಂದಲ್ಲ. ಬರಹಗಾರ ಅವಲೋಕನದ ಮೂಲಕ ಒಳಗಿನಿಂದ ಶುಚಿಯಾಗಬೇಕು. ಕಥಾ ಸ್ಪರ್ಧೆಯ ಬಹುಮಾನ ಮುಖ್ಯವಲ್ಲ .ಬದಲಾಗಿ ಹೊಸ ಕಥೆಗಾರನೊಬ್ಬ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ್ದಾನೆ ಎಂಬುದೇ ಮುಖ್ಯ !’

ಸಂಕೇಶ್ವರರ ಸವಾಲು !

ನಂಬರ್‌ ಒನ್‌ ದಿನಪತ್ರಿಕೆಯ ಪ್ರಕಾಶ ವಿಜಯ ಸಂಕೇಶ್ವರ ಮಾತನಾಡಿ, ಪತ್ರಿಕೆಯ ಯಶಸ್ಸಿನ ಬಗ್ಗೆ ಕಟಕಿಯಾಡುವ ಸ್ಪರ್ಧಿಗಳಿಗೆ ಬಹಿರಂಗ ಸವಾಲೆಸೆದರು. ನಮ್ಮ ಯಶಸ್ಸಿನ ಬಗ್ಗೆ ಶಂಕೆಯಿರುವವರು ಕಚೇರಿಗೆ ಬಂದು ಎಲ್ಲ ದಾಖಲೆ ಪತ್ರಗಳನ್ನು ಅವಲೋಕಿಸಬಹುದು. ನ್ಯೂನತೆಗಳು ಕಂಡಲ್ಲಿ ಅವುಗಳ ಬಗ್ಗೆ ಬರೆಯಬಹುದು. ಸ್ಪರ್ಧಿಗಳೂ ತಮ್ಮ ದಾಖಲೆ ಪತ್ರಗಳನ್ನು ಮುಚ್ಚುಮರೆಯಿಲ್ಲದೇ ಬಹಿರಂಗ ಪಡಿಸಬೇಕು ಎಂದ ಅವರು, ಸ್ಪರ್ಧಿ ಬಲಿಷ್ಠನಾಗಿದ್ದಷ್ಟೂ ನಮ್ಮ ಯಶಸ್ಸಿನ ಬೆಲೆ ಹೆಚ್ಚಾಗುತ್ತದೆ. ವಿಚಾರಗಳು ಹೆಚ್ಚಿದಂತೆಲ್ಲ ಲಾಭ ಹೆಚ್ಚು ಎಂದು ಅಭಿಪ್ರಾಯಪಟ್ಟರು.

ಬಹುಮಾನಿತ ಕಥೆಗಳ ಕಥಾ ಸಂಕಲನ ‘ಚೌಕಟ್ಟಿನಿಂದ ಹೊರ ಬಂದ ಚಿತ್ರಗಳು’ ಪುಸ್ತಕವನ್ನು ವಿಜಯ ಸಂಕೇಶ್ವರ ಅನಾವರಣಗೊಳಿಸಿದರು. ತೀರ್ಪುಗಾರ ಮೂರ್ತಿ ದ್ವಯರಾದ ಅಗ್ರಹಾರ ಕೃಷ್ಣ ಮೂರ್ತಿ ಮತ್ತು ಎಚ್‌. ಎಸ್‌. ವೆಂಕಟೇಶ್‌ ಮೂರ್ತಿ, ಪ್ರೊ. ಚಿ. ಶ್ರೀನಿವಾಸ ರಾಜು, ಎನ್‌. ಎಸ್‌. ಲಕ್ಷ್ಮೀನಾರಾಯಣ ಭಟ್‌, ಅಂಕಿತ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ, ಚಿತ್ರನಿರ್ದೇಶ ಟಿ.ಎಸ್‌. ನಾಗಾಭರಣ- ಹೀಗೆ ಕಾರ್ಯಕ್ರಮದಲ್ಲಿ ಸಾಹಿತಿ, ದಿಗ್ಗಜರ ದಂಡೇ ಇತ್ತು.

ಪ್ರಶಸ್ತಿ ವಿಜೇತರು: ಸುಮಂಗಲಾ ಬಾದರ ದಿನ್ನಿ(ಪ್ರಥಮ), ರಘುನಾಥ ಚ. ಹ.(ದ್ವಿತೀಯ), ಮೊಗಳ್ಳಿ ಗಣೇಶ್‌(ತೃತೀಯ). ಮೆಚ್ಚುಗೆ ಪಡೆದವರು : ಗಂಗಾಧರ ಬೀಚನ ಹಳ್ಳಿ, ಗಣೇಶ್‌ ಯಲ್ಲಾಪುರ, ಶಾಂತಾ ನಾಗರಾಜ್‌, ಕೃಷ್ಣ ಮೂರ್ತಿ ಹನೂರು, ಉಮಾರಾವ್‌, ಟಿ. ಗೋವಿಂದ ರಾಜ್‌, ಜಯಶ್ರೀ ಕಾಸರವಳ್ಳಿ, ವಿನಾಯಕ ಭಟ್‌ ತದ್ದಲಸೆ, ಎಸ್‌. ದಿವಾಕರ್‌.

ಸ್ಫೂರ್ತಿ ಮಾತು : ‘ದೀಪಾವಳಿ ಯುವಕಾವ್ಯ ಸ್ಪರ್ಧೆಯನ್ನೂ ಆಯೋಜಿಸುತ್ತೇವೆ. 20, 15 ಮತ್ತು 10 ಸಾವಿರ ರೂಪಾಯಿ ಪ್ರೆೃಸ್‌ ಇಡಬೇಕೆಂದು ನಿರ್ಧರಿಸಿದ್ದೀವಿ’ ಅಂತ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ವಿಶ್ವೇಶ್ವರ ಭಟ್ಟರು ಹೇಳಿದರು. ಸೋ, ಗೆಟ್‌ ರೆಡಿ..ವನ್‌ ಟೂ ತ್ರೀ...!!

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X